ಭೂಗರ್ಭದ ಅರಮನೆಗಳ ಪಯಣ
ರಷ್ಯಾದ ಮೆಟ್ರೋ ರೈಲು ಎಂದರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಸಾರಿಗೆ ವ್ಯವಸ್ಥೆಯಲ್ಲ, ಭೂಗರ್ಭದಲ್ಲಿ ಅರಳಿರುವ ಕಲೆ, ವಾಸ್ತುಶಿಲ್ಪ, ಇತಿಹಾಸ ಮತ್ತು ಎಂಜಿನಿಯರಿಂಗ್ನ ಅದ್ಭುತ ಲೋಕ. ಮಾಸ್ಕೋ ಮತ್ತು ಸೇಂಟ್ ಪೀಟರ್ಸ್‌ಬರ್ಗ್‌ನ ಮೆಟ್ರೋ ನಿಲ್ದಾಣಗಳಲ್ಲಿ ಸಂಚರಿಸಿದಾಗ, ಪ್ರತಿಯೊಂದು ನಿಲ್ದಾಣವೂ ತನ್ನದೇ ಕಥೆ ಹೇಳುವ ಭೂಗರ್ಭದ ಅರಮನೆಯಂತೆ ಭಾಸವಾಗುತ್ತದೆ. ಕೆಲವೇ ನಿಲ್ದಾಣಗಳ ಈ ಪಯಣ ರಷ್ಯಾದ ವೈಭವ, ತಂತ್ರಜ್ಞಾನ ಮತ್ತು ಇತಿಹಾಸವನ್ನು ಹೊಸ ದೃಷ್ಟಿಯಿಂದ ಪರಿಚಯಿಸಿದ ಮರೆಯಲಾಗದ ಅನುಭವವಾಯಿತು.
- ಪ್ರಕಾಶ ಹೆಗಡೆ
ರಷ್ಯಾದ ಮೆಟ್ರೋ ರೈಲು ವ್ಯವಸ್ಥೆ ಸಾರಿಗೆ, ಎಂಜಿನಿಯರಿಂಗ್, ಸುರಕ್ಷತೆ, ಭದ್ರತೆ, ಕಲೆ ಮತ್ತು ಇತಿಹಾಸ, ಇವೆಲ್ಲವನ್ನೂ ಒಂದೇ ಭೂಗರ್ಭ ಜಗತ್ತಿನಲ್ಲಿ ಒಗ್ಗೂಡಿಸಿರುವ ಅಪರೂಪದ ನಗರ ವ್ಯವಸ್ಥೆಯೆಂಬ ಜಗತ್ಪ್ರಸಿದ್ಧ ಹೆಗ್ಗಳಿಕೆಯಿದೆ. ಮಾಸ್ಕೋ ಮತ್ತು ಸೇಂಟ್ ಪೀಟರ್ಸ್‌ಬರ್ಗ್ ನಗರಗಳ ಮೆಟ್ರೋ ಅತ್ಯಾಕರ್ಷಕ ಹಾಗೂ ಕುತೂಹಲದಾಯಕ ಪ್ರವಾಸಿ ತಾಣಗಳೆಂದರೆ ನೋಡದ ಹೊರತು ಒಪ್ಪಿಕೊಳ್ಳಲಾಗುವುದಿಲ್ಲ. ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಭೇಟಿಯಿತ್ತ ಅನುಭವ ಭೂಗರ್ಭದ ಅದ್ಭುತ ಅನ್ವೇಷಣೆಯಾಗಿತ್ತು. ಇದೊಂದು ರಷ್ಯಾದ ಅದ್ಭುತ ‘ಭೂಗರ್ಭ ಅರಮನೆಗಳ’ ವೈಭವದ ಅನಾವರಣ.
ಇದನ್ನೂ ಓದಿ: ಕಾವ್ಯದ ಗರ್ಭದಿಂದ ಎದ್ದುಬಂದ ಇತಿಹಾಸ ಮತ್ತು ಪಳೆಯುಳಿಕೆ
ಸಾರಿಗೆ ವ್ಯವಸ್ಥೆಯಿಂದ ಭೂಗರ್ಭದ ಮಹಾಜಾಲದವರೆಗೆ
ಆರಂಭದಲ್ಲಿ ಸಾರಿಗೆ ಸಮಸ್ಯೆಗೆ ಪರಿಹಾರವಾಗಿ ರೂಪುಗೊಂಡ ರಷ್ಯಾದ ಮೆಟ್ರೋ ರೈಲು ವ್ಯವಸ್ಥೆ, ಕ್ರಮೇಣ ಎಂಜಿನಿಯರಿಂಗ್, ವಾಸ್ತುಶಿಲ್ಪ, ಕಲೆ ಮತ್ತು ಸಾರ್ವಜನಿಕ ಮೂಲಸೌಕರ್ಯಗಳ ಮಹತ್ವಾಕಾಂಕ್ಷೆಯ ಸಂಗಮವಾಗಿ ಬೆಳೆದಿತು. ಮಾಸ್ಕೋದ ಮೊದಲ ಮೆಟ್ರೋ ಮಾರ್ಗ 1935ರ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾಯೋಗಿಕವಾಗಿ ಆರಂಭವಾಯಿತು. 91 ವರ್ಷಗಳ ಬಳಿಕ, ಇಂದು ಮಾಸ್ಕೋ ಮೆಟ್ರೋ 300ಕ್ಕೂ ಅಧಿಕ ನಿಲ್ದಾಣಗಳನ್ನು ಹೊಂದಿರುವ ವಿಶ್ವದ ಪ್ರಮುಖ ನಗರ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಮಾಸ್ಕೋ ಮೆಟ್ರೋದಲ್ಲೀಗ 16 ಭೂಗರ್ಭದ ಮೆಟ್ರೋ ಮಾರ್ಗಗಳಿವೆ. ಭೂಗರ್ಭದೊಟ್ಟಿಗೆ, ಪೂರಕವಾಗಿ ಮೇಲ್ಮೈಯಲ್ಲಿ ಸಂಚರಿಸುವ ವಲಯಾಕಾರದ ಮಾಸ್ಕೋ ಸೆಂಟ್ರಲ್ ಸರ್ಕಲ್ ರೈಲು ಹಾಗೂ ನಗರವನ್ನು ಅಡ್ಡಲಾಗಿ ಸಂಪರ್ಕಿಸುವ ರೈಲು ಮಾರ್ಗಗಳೂ ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನವೂ ಸುಮಾರು 10ಲಕ್ಷ ಪ್ರಯಾಣಿಗರು ಮೋಸ್ಕೋ ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಾರೆ.

‘ಜನರಿಗಾಗಿ ಅರಮನೆ’ಗಳಾದ ಮೆಟ್ರೋ ನಿಲ್ದಾಣಗಳು
1963ರಲ್ಲಿ ಲಂಡನ್ ವಿಶ್ವದ ಮೊದಲ ಭೂಗರ್ಭ ಮೆಟ್ರೋ ರೈಲನ್ನು ಆರಂಭಿಸಿತು. ನಂತರ ಬುಡಾಪೆಸ್ಟ್, ಪ್ಯಾರಿಸ್, ಬರ್ಲಿನ್ ಮತ್ತು ನ್ಯೂಯಾರ್ಕ್ ನಗರಗಳು ಈ ಸಾಲಿಗೆ ಸೇರಿಕೊಂಡವು. ಮಾಸ್ಕೋ ತನ್ನ ಮೆಟ್ರೋ ನಿರ್ಮಾಣ ಆರಂಭಿಸುವ ವೇಳೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅನುಭವದ ಭಂಡಾರವೇ ಲಭ್ಯವಿತ್ತು. ಸೋವಿಯತ್ ಎಂಜಿನಿಯರ್‌ಗಳು ಈ ಅನುಭವಗಳನ್ನು ಅಧ್ಯಯಿಸಿ ತಮ್ಮಲ್ಲಿದ್ದ ಎಂಜಿನಿಯರಿಂಗ್ ಮತ್ತು ನಿರ್ಮಾಣ ತಂತ್ರಗಳೊಂದಿಗೆ ಮೇಳೈಸಿ ವಿಶಿಷ್ಟ ಮತ್ತು ಉತ್ಕೃಷ್ಟ ಮೆಟ್ರೋ ಸೌಲಭ್ಯವನ್ನು ಜನರಿಗೆ ಅರ್ಪಿಸಿದರು. ಈ ಅರ್ಪಣೆ ದೇಶ ಕಟ್ಟುವವರ ಅಗಾಧ ದೂರದೃಷ್ಟಿ ಮತ್ತು ಜನಸೇವೆಯ ಮನೋಭಾವವನ್ನು ದೃಢೀಕರಿಸಿತು. ಇದರೊಟ್ಟಿಗೆ ಭವ್ಯ ರಾಜಕೀಯ ದೃಷ್ಟಿಕೋನವೂ ಜತೆಯಾಯಿತು. ಸಮಾಜವಾದಿ ರಾಷ್ಟ್ರದ ಸಾಧನೆಗಳನ್ನು ಪ್ರತಿನಿಧಿಸುವಂತಿರಬೇಕೆಂದು ಸೋವಿಯತ್ ನಾಯಕರ ಆಶಯವಾಗಿತ್ತು. ಹೀಗಾಗಿ ಮೆಟ್ರೋ ನಿಲ್ದಾಣಗಳನ್ನು ‘ಜನರಿಗಾಗಿ ಅರಮನೆಗಳು’ ಎಂಬ ಕಲ್ಪನೆಯೊಂದಿಗೆ ರೂಪಿಸಲಾಯಿತು. ಸಾಮಾನ್ಯ ನಾಗರಿಕರೂ ಅಮೃತಶಿಲೆ, ಭವ್ಯ ದೀಪಸ್ತಂಭಗಳು, ಮೊಸಾಯಿಕ್ ಕಲಾಕೃತಿಗಳು, ಶಿಲ್ಪಗಳು, ಕಂಚಿನ ಅಲಂಕಾರ, ಬಣ್ಣದ ಗಾಜು ಮತ್ತು ಸ್ಮಾರಕಪ್ರಾಯ ಕಲಾಕೃತಿಗಳನ್ನು ಅನುಭವಿಸಬಹುದಾದ ಭವ್ಯ ಸಾರ್ವಜನಿಕ ಸ್ಥಳಗಳಾಗಿ ನಿಲ್ದಾಣಗಳ ವೇದಿಕೆ ಕಲ್ಪಿಸಲಾಯಿತು. ಪ್ರತಿಯೊಂದು ಮೆಟ್ರೋ ನಿಲ್ದಾಣವೂ ತನ್ನದೇ ಆದ ವಾಸ್ತುಶೈಲಿಯ ಭಾಷೆಯೊಂದಿಗೆ, ನಿಲ್ದಾಣ ಸುತ್ತಲಿನ ಪ್ರದೇಶದ ಪರಂಪರೆ, ಸ್ವಭಾವ ಮತ್ತು ಕಥೆಯನ್ನು ಪ್ರತಿಬಿಂಬಿಸುವ ಇತಿಹಾಸದ ಒಂದು ಅಧ್ಯಾಯದಂತೆ ರೂಪುಗೊಂಡಿತು.
ಭದ್ರತೆಗಾಗಿ ಆಳಕ್ಕಿಳಿದ ಮೆಟ್ರೋ ಲೋಕ
ಮಾಸ್ಕೋ ಮೆಟ್ರೋ ಮಾರ್ಗಗಳ ಅಸಾಧಾರಣ ಆಳ ಮತ್ತು ಬಲಿಷ್ಠ ನಿರ್ಮಾಣದ ಹಿಂದೆ ಭದ್ರತೆಯೂ ಪ್ರಮುಖ ಉದ್ದೇಶವಿದೆ. ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ಈ ಭೂಗರ್ಭ ಜಾಲಕ್ಕೆ ಅತ್ಯಂತ ಮಹತ್ವದ ಜನಸಾಮಾನ್ಯರ ಸೇವೆ ಸಲ್ಲಿಸುವ ಪಾತ್ರ ದೊರಕಿತು. ಜರ್ಮನಿಯ ವಾಯುದಾಳಿಗೆ ಮಾಸ್ಕೋ ಒಳಗಾದಾಗ, ಮೆಟ್ರೋ ನಿಲ್ದಾಣಗಳು ಲಕ್ಷಾಂತರ ನಾಗರಿಕರಿಗೆ ಬಾಂಬ್ ಆಶ್ರಯಗಳಾದವು. ಈಗಲೂ ಮೆಟ್ರೋ ನಿಲ್ದಾಣಗಳು ತುರ್ತು ಪರಿಸ್ಥಿತಿಯ ಅವಶ್ಯಕತೆಗೆ ಸಜ್ಜಾಗಿವೆ. ಜನಜೀವನವೇ ಭೂಗರ್ಭಕ್ಕೆ ಇಳಿದಂತಾಗಿ ನಿಲ್ದಾಣದಾಳದಲ್ಲಿ ಮಕ್ಕಳು ಜನಿಸಿದರು, ವೈದ್ಯಕೀಯ ಸೇವೆಗಳು ನಡೆದವು ಮತ್ತು ಬಾಂಬ್ ದಾಳಿಯಿಂದ ಆಶ್ರಯ ಪಡೆದ ಜನರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜಿಸಲ್ಪಟ್ಟವು. ಮೆಟ್ರೋಗೆ ಈ ದ್ವಂದ್ವಪಾತ್ರ ಇದ್ದದ್ದೇ ಅದರ ಕೆಲವು ಭಾಗಗಳ ಅಸಾಧಾರಣ ಬಲ ಮತ್ತು ಆಳದ ಮಹತ್ವ. ಪಾರ್ಕ್ ಪೊಬೆಡಿ ನಿಲ್ದಾಣವು ಭೂಮಿಯ ಸುಮಾರು 84ಮೀಟರ್ ಆಳದಲ್ಲಿದ್ದು, ವಿಶ್ವದ ಅತ್ಯಂತ ಆಳವಾದ ನಿಲ್ದಾಣಗಳ ಪೈಕಿ ಒಂದಾಗಿದೆ. ಮೆಟ್ರೋ ನಿಲ್ದಾಣಗಳನ್ನು ಇಷ್ಟು ಆಳದಲ್ಲಿ ನಿರ್ಮಿಸಲು ಮತ್ತೊಂದು ವೈಜ್ಞಾನಿಕ ಕಾರಣವೂ ಇದೆ. ಇಲ್ಲಿನ ನಗರಗಳ ಭೌಗೋಳಿಕ ಪರಿಸ್ಥಿತಿ (ಸಮುದ್ರ, ನದಿಗಳು ಮತ್ತು ಸರೋವರಗಳ ಸಮೀಪದ ಜಲಭರಿತ ಪ್ರದೇಶಗಳು) ಸುರಂಗ ನಿರ್ಮಾಣಕ್ಕೆ ಸವಾಲಾಗಿದ್ದವು. ಆದ್ದರಿಂದ ನೀರಿನ ಮಟ್ಟಕ್ಕಿಂತಲೂ ಕೆಳಗೆ, ಗಟ್ಟಿಯಾದ ಬಂಡೆಯ ಪದರವನ್ನು ತಲುಪಿ ಅದರೊಳಗೆ ಸುರಂಗಗಳನ್ನು ನಿರ್ಮಿಸಬೇಕಾಗಿತ್ತು.

ಸೇಂಟ್ ಪೀಟರ್ಸ್‌ಬರ್ಗ್‌ನ ಮೆಟ್ರೋ ವ್ಯವಸ್ಥೆ ಕೆಲವು ಕಡೆ ಇನ್ನೂ ಆಳಕ್ಕೆ ಇಳಿಯುತ್ತದೆ. ಇಲ್ಲಿನ ನಿಲ್ದಾಣಗಳು ಆಳವಾದ ನಿರ್ಮಾಣ ಮತ್ತು ಉದ್ದನೆಯ ಎಸ್ಕಲೇಟರ್‌ಗಳಿಗೆ ಪ್ರಸಿದ್ಧವಾಗಿವೆ. ಮಾಸ್ಕೋದ ಎರಡು ದಶಕಗಳ ನಂತರ, 1955ರಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಮೆಟ್ರೋ ಆರಂಭವಾಯಿತು. ಇಲ್ಲಿನ ಮೊದಲ ನಿಲ್ದಾಣಗಳು ಸ್ಟಾಲಿನ್ ಯುಗದ ಭವ್ಯ ವಾಸ್ತುಶೈಲಿಯ ಪರಂಪರೆಯಲ್ಲಿ ನಿರ್ಮಿಸಲ್ಪಟ್ಟವು. ಇಂದು ಸೇಂಟ್ ಪೀಟರ್ಸ್‌ಬರ್ಗ್ ಮೆಟ್ರೋದಲ್ಲಿ ಆರು ಮಾರ್ಗಗಳು, 75 ನಿಲ್ದಾಣಗಳು ಮತ್ತು ಸುಮಾರು 131ಕಿಲೋಮೀಟರ್‌ಗಳ ಕಾರ್ಯಾಚರಣೆಯ ಮಾರ್ಗವಿದೆ.
ಸೇಂಟ್ ಪೀಟರ್ಸ್‌ಬರ್ಗ್ ಮೆಟ್ರೋದಲ್ಲಿ ಕಲಾ ವೈಭವ
ಮಾಸ್ಕೋದ ಭೂಗರ್ಭ ಲೋಕವು ಸೋವಿಯತ್ ಶಕ್ತಿ ಮತ್ತು ರಷ್ಯಾದ ಇತಿಹಾಸದ ಸಂಭ್ರಮಾಚರಣೆಯನ್ನು ತೋರಿದರೆ, ಸೇಂಟ್ ಪೀಟರ್ಸ್‌ಬರ್ಗ್‌ನ ನಿಲ್ದಾಣಗಳು ನಗರದ ಸಾಮ್ರಾಜ್ಯಶಾಹಿ ಮತ್ತು ಕಲಾತ್ಮಕ ವ್ಯಕ್ತಿತ್ವದೊಂದಿಗೆ ಇನ್ನಷ್ಟು ಆತ್ಮೀಯವಾಗಿ ಬೆಸೆದುಕೊಂಡಂತೆ ಭಾಸವಾಗುತ್ತವೆ. ಅದ್ಭುತ ಗಾಜಿನ ಕಂಬಗಳು ಮತ್ತು ಅಲಂಕಾರಿಕ ವಿನ್ಯಾಸಗಳಿಂದ ಕಂಗೊಳಿಸುವ ಅವ್ಟೊವೊ ನಿಲ್ದಾಣ, ಹಾಗೂ ಸ್ಮಾರಕಪ್ರಾಯ ಶಿಲ್ಪಸಂಯೋಜನೆಗಳಿಂದ ಪ್ರಸಿದ್ಧವಾದ ನಾರ್ವ್ಸಸ್ಕಾಯಾ ನಿಲ್ದಾಣಗಳು ವಾಸ್ತುಶಿಲ್ಪಕ್ಕೆ ನೀಡಿದ ಮಹತ್ವದ ಭವ್ಯತೆಯನ್ನು ಮೆರೆಯುತ್ತವೆ.
ಭೂಗರ್ಭದ ಮಹಲುಗಳು ಮೇಲಿನ ನಗರದೊಂದಿಗೆ ಹೊಂದಿಕೊಳ್ಳುವ ರೀತಿಯೂ ಮತ್ತೊಂದು ಕುತೂಹಲಕಾರಿ ಅಂಶ. ನಿಲ್ದಾಣಗಳ ಪ್ರವೇಶದ್ವಾರಗಳು, ಸಭಾಂಗಣಗಳು ಮತ್ತು ಅಲಂಕಾರಿಕ ವಿನ್ಯಾಸಗಳೂ ಸಹ ಆ ಪ್ರದೇಶದ ಇತಿಹಾಸ, ಭೌಗೋಳಿಕತೆ ಅಥವಾ ಸಾಂಸ್ಕೃತಿಕ ಗುರುತಿನೊಂದಿಗೆ ಸಂಬಂಧ ಹೊಂದಿವೆ.
ಮೆಟ್ರೋ ವ್ಯವಸ್ಥೆಗಳಲ್ಲಿ ಸುರಕ್ಷತೆಯೂ ಪ್ರಾಮುಖ್ಯತೆ ಪಡೆದಿದೆ. ನಿಲ್ದಾಣಗಳಲ್ಲಿ ಅತ್ಯಾಧುನಿಕ ನಿಗಾವ್ಯವಸ್ಥೆ, ಭದ್ರತಾ ತಪಾಸಣೆ ಮತ್ತು ತುರ್ತು ಪ್ರತಿಕ್ರಿಯಾ ಮೂಲಸೌಕರ್ಯಗಳಿವೆ. ಭೂಗರ್ಭ ಪ್ರದೇಶಗಳಲ್ಲಿ ಪತ್ತೆಯಾಗುವ ಸ್ಫೋಟಕ ಸಾಧನಗಳನ್ನು ವಿಶೇಷ ಬಾಂಬ್ ನಿಷ್ಕ್ರಿಯಗೊಳಿಸುವ ಕ್ರಮಗಳು ಮತ್ತು ಉಪಕರಣಗಳ ಮೂಲಕ ನಿರ್ವಹಿಸಲಾಗುತ್ತದೆ. ಪ್ರತಿಯೊಂದು ಮೆಟ್ರೋ ನಿಲ್ದಾಣದಲ್ಲೂ ಶಂಕಾಸ್ಪದ ವಸ್ತುಗಳನ್ನು ಸುರಕ್ಷಿತವಾಗಿ ಪ್ರತ್ಯೇಕಿಸಿ ಮುಚ್ಚಿಡಲು ಬಲಿಷ್ಠ ಲೋಹದ ರಕ್ಷಣಾತ್ಮಕ ಪೆಟ್ಟಿಗೆಗಳಂಥ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಈ ಪೆಟ್ಟಿಗೆಗಳು ಅತ್ಯಂತ ಗಟ್ಟಿಮುಟ್ಟಾಗಿದ್ದು, ಶಂಕಿತ ಸ್ಫೋಟಕವಿರುವ ಚೀಲವನ್ನು ಅದರೊಳಗೆ ಸುರಕ್ಷಿತವಾಗಿ ಇರಿಸಿ, ನಿಯಂತ್ರಿತ ಸ್ಫೋಟ ಸಂಭವಿಸಿದರೂ ಅದರ ಪರಿಣಾಮವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಇಂಥ ಮುನ್ನೆಚ್ಚರಿಕಾ ವ್ಯವಸ್ಥೆಗಳು ಮೆಟ್ರೋ ನಿಲ್ದಾಣಗಳ ಭದ್ರತೆಗೆ ಹೆಚ್ಚಿನ ಒತ್ತು ನೀಡಿರುವುದನ್ನು ತೋರಿಸುತ್ತವೆ.
ಹಳೆಯ ಅನೇಕ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಹಳಿಗಳಿಂದ ಬೇರ್ಪಡಿಸುವ ರಕ್ಷಣಾತ್ಮಕ ಪರದೆ ಬಾಗಿಲುಗಳಿಲ್ಲದ ತೆರೆದ ಪ್ಲಾಟ್‌ಫಾರ್ಮ್‌ಗಳಿವೆ. ಕುತೂಹಲಕಾರಿ ಸಂಗತಿಯೆಂದರೆ, ಹಳಿಗಳ ಮಧ್ಯೆ, ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಹಳಿಗೆ ಬಿದ್ದರೆ ತುರ್ತು ಸಂದರ್ಭದಲ್ಲಿ ಕುಳಿತುಕೊಳ್ಳಲು ಅಥವಾ ಮಲಗಲು ಸಾಕಾಗುವಷ್ಟು ಆಳವಿರುವ ಸಣ್ಣ ತಗ್ಗು ಜಾಗವಿರುತ್ತದೆ. ಸಮೀಪಿಸುತ್ತಿರುವ ರೈಲಿನಿಂದ ತುರ್ತು ರಕ್ಷಣೆ ಪಡೆಯಲು ಇದು ನೆರವಾಗುತ್ತದೆ.
ಮಾಸ್ಕೋ ಮೆಟ್ರೋ ರೈಲುಗಳು ಚಲಿಸುವ ಅಂತರ ಪ್ರಯಾಣಿಕರ ಆತಂಕವನ್ನು ಬಹಳಷ್ಟು ದೂರಮಾಡುತ್ತದೆ. ಜನಸಂದಣಿ ಹೆಚ್ಚಿರುವ ಸಮಯದಲ್ಲಿ ಬಹಳಷ್ಟು ಮಾರ್ಗಗಳಲ್ಲಿ ರೈಲುಗಳು 90 ಸೆಕೆಂಡ್‌ಗಳ ಅಂತರದಲ್ಲಿ ಬರುತ್ತಿರುತ್ತವೆ. ಹೀಗಾಗಿ ಹೊರಡುತ್ತಿರುವ ರೈಲಿಗಾಗಿ ಆತುರಪಡುವ ಅಗತ್ಯವಿಲ್ಲ. ಎಲೆಕ್ಟ್ರಾನಿಕ್ ಡಿಸ್‌ಪ್ಲೇಗಳಲ್ಲಿ ಕೌಂಟ್‌ಡೌನ್ ರೂಪದಲ್ಲಿ ಮುಂದಿನ ರೈಲು ಆಗಮಿಸಲು ಉಳಿದಿರುವ ಸಮಯವನ್ನು ನಿರಂತರವಾಗಿ ತೋರಿಸಲಾಗುತ್ತದೆ. ಮೆಟ್ರೋ ಪ್ರಯಾಣಿಕರಲ್ಲಿ ಪಯಣ ಒಂದು ಸಹಜ, ನಿರಾಳ ಲಯದಲ್ಲಿ ಸಾಗುವಂತನಿಸುತ್ತದೆ.
ಭೂಗರ್ಭ ಮೆಟ್ರೋದಲ್ಲಿ ಪ್ರಯಾಣಿಸುವಾಗ ದರ ವ್ಯವಸ್ಥೆಯಲ್ಲೂ ಒಂದು ಅನುಕೂಲಕರ ವೈಶಿಷ್ಟ್ಯವಿದೆ. ಪ್ರಯಾಣಿಕರು ಪ್ರತಿ ನಿಲ್ದಾಣದ ಆಧಾರದ ಮೇಲೆ ಪ್ರತ್ಯೇಕ ದರ ಪಾವತಿಸುವ ಅಗತ್ಯವಿಲ್ಲ. ಒಂದು ಬಾರಿ ಪ್ರವೇಶಿಸಿ, ಮತ್ತೊಂದು ನಿಲ್ದಾಣದಲ್ಲಿ ನಿರ್ಗಮಿಸಲು 90 ರೂಬಲ್‌ಗಳ ನಿಗದಿತ ದರದ ಒಂದೇ ಟಿಕೆಟ್ ಖರೀದಿಸಿದರೆ ಸಾಕು. ಇದರಿಂದ ಎಷ್ಟೇ ನಿಲ್ದಾಣಗಳು ಅಥವಾ ಎಷ್ಟೇ ಮಾರ್ಗ ಬದಲಾವಣೆಗಳನ್ನು ಮಾಡಿದರೂ, ಒಂದು ಪ್ರವೇಶ ಮತ್ತು ಒಂದು ನಿರ್ಗಮನಕ್ಕೆ ಅನ್ವಯವಾಗುತ್ತದೆ. ಆದ್ದರಿಂದಲೇ ಸರಳ ಮತ್ತು ಪ್ರಯಾಣಿಕ ಸ್ನೇಹಿ ದರ ವ್ಯವಸ್ಥೆಯ ರೂವಾರಿಯೆಂದು ರಷ್ಯಾದ ಮೆಟ್ರೋ ಹೆಸರುವಾಸಿಯಾಗಿದೆ.

ಮೆಟ್ರೋದಲ್ಲಿ ಸಂಚರಿಸಿದ ಅನುಭವ ನನಗೆ ರಷ್ಯಾದ ವೈವಿಧ್ಯತೆಯನ್ನು ಪರಿಚಯಿಸಿತು. ಮೇಲ್ಮೈಯಲ್ಲಿ ವಿಶಾಲ ರಸ್ತೆಗಳು, ಭವ್ಯ ಕಟ್ಟಡಗಳು ಮತ್ತು ಆಧುನಿಕ ನಗರಜೀವನ ಕಂಡರೆ, ಭೂಗರ್ಭದಲ್ಲಿ ಕಲೆ, ವಾಸ್ತುಶಿಲ್ಪ, ಇತಿಹಾಸ ಮತ್ತು ಎಂಜಿನಿಯರಿಂಗ್‌ಗಳ ಅದ್ಭುತ ಸಂಗಮ ಕಾಣಿಸಿತು. ಕೆಲವು ನಿಲ್ದಾಣಗಳು ಸೋವಿಯತ್ ಯುಗದ ವೈಭವ ಮತ್ತು ಚಿಂತನೆಗಳನ್ನು ಪ್ರತಿಬಿಂಬಿಸಿದರೆ, ಹೊಸ ನಿಲ್ದಾಣಗಳು ತಂತ್ರಜ್ಞಾನ ಮತ್ತು ಆಧುನಿಕತೆಯತ್ತ ಸಾಗುತ್ತಿರುವ ರಷ್ಯಾದ ಹೆಜ್ಜೆಗಳನ್ನು ತೋರಿಸಿದವು. ಅತ್ಯಂತ ಆಳದಲ್ಲಿ ನಿರ್ಮಿಸಲಾದ ಸುರಂಗಗಳು, ಸಮಯಪಾಲನೆಯ ರೈಲುಗಳು, ಪ್ರಯಾಣಿಕ ಸ್ನೇಹಿ ವ್ಯವಸ್ಥೆಗಳು ಹಾಗೂ ಭದ್ರತೆಗೆ ನೀಡಿರುವ ಆದ್ಯತೆ, ಇವೆಲ್ಲವೂ ಮೆಟ್ರೋವನ್ನು ಕೇವಲ ಪ್ರಯಾಣದ ಸಾಧನವನ್ನಾಗಿ ಉಳಿಸಿಲ್ಲ. ಈ ವ್ಯವಸ್ಥೆ ನಗರದ ಅಭಿವೃದ್ಧಿ ಮತ್ತು ರಾಷ್ಟ್ರದ ಮನೋಭಾವವನ್ನು ಅರ್ಥಮಾಡಿಕೊಳ್ಳುವ ಒಂದು ಮಾಸ್ಟರ್‌ಪೀಸ್ ಎನ್ನಬಹುದು. ನನ್ನ ರಷ್ಯಾ ಪ್ರವಾಸದಲ್ಲಿ ಮೆಟ್ರೋ ಪ್ರಯಾಣ ಕೆಲವೇ ನಿಲ್ದಾಣಗಳ ಸಂಚಾರವಾಗಿದ್ದರೂ, ಅದು ರಷ್ಯಾದ ಭೂಗರ್ಭದ ವೈಭವವನ್ನು ಪರಿಚಯಿಸಿದ ಮರೆಯಲಾಗದ ಚಿರ ಅನುಭವವಾಯಿತು.
--
ಭೂಗರ್ಭದ ಕಲಾ ಅರಮನೆಗಳು
ಮಯಕೋವ್‌ಸ್ಕಾಯಾ: ಆರ್ಟ್‌ಡೆಕೊ ವಿನ್ಯಾಸ ಹಾಗೂ ಅದ್ಭುತ ಮೇಲ್ಚಾವಣಿ ಮೊಸಾಯಿಕ್‌ಗಳ ಸೊಬಗು.
ಕೊಮ್ಸೊಮೊಲ್ಸ್ಕಾಯಾ: ಹಳದಿ-ಚಿನ್ನದ ಅಲಂಕಾರದಲ್ಲಿ ರಷ್ಯಾದ ಸೈನಿಕ ಇತಿಹಾಸದ ಅನಾವರಣ.
ಪ್ಲೋಶ್ಚಾದ್ ರೆವಲ್ಯೂತ್ಸೀ: ಸೋವಿಯತ್ ನಾಗರಿಕರು ಮತ್ತು ವಿವಿಧ ವೃತ್ತಿಗಳನ್ನು ಬಿಂಬಿಸುವ ಕಂಚಿನ ಶಿಲ್ಪಗಳು.
ಕಿಯೆವ್‌ಸ್ಕಾಯಾ: ರಷ್ಯಾದ ಇತಿಹಾಸ ಸಾರುವ ಭವ್ಯ ಮೊಸಾಯಿಕ್‌ಗಳಿಂದ ಕಂಗೊಳಿಸುವ ನಿಲ್ದಾಣ.
ನೊವೊಸ್ಲೊಬೊಡ್‌ಸ್ಕಾಯಾ: ಹೊಳೆಯುವ ಬಣ್ಣದ ಗಾಜಿನ ಫಲಕಗಳಿಂದ ಕಣ್ಮನ ಸೆಳೆಯುವ ಕಲಾ ಲೋಕ.