ವಿವಿಧತೆಯಲ್ಲೂ ಏಕತೆ ಇದು ಯೂರೋಪಿನ ಮೇ ಪೋಲ್ ಕಥೆ
ಸುಂದರ ಅಲಂಕೃತ ಈ ಕಂಬದ ಸುತ್ತ ಎಲ್ಲಾ ವಯೋಮಾನದ ಹೆಣ್ಣು-ಗಂಡು, ಮಕ್ಕಳು ಜಾನಪದ ಹಾಡುಗಳಿಗೆ ನರ್ತಿಸುವುದು ಈ ಆಚರಣೆಯ ವಿಶೇಷತೆ. ಕಂಬದ ಒಳಹೊರಗೆ ಟೇಪುಗಳನ್ನು ಹೆಣೆಯುವಂತೆ ನರ್ತಿಸುವಾಗ ಮೂಡುವ ಸುಂದರವಾದ ಚಿತ್ರಾಕೃತಿಗಳನ್ನು ನೋಡುವುದು ರೋಚಕವಾಗಿರುತ್ತದೆ. ಈ ಕಂಬವನ್ನು ನಿಲ್ಲಿಸಿದ ಮೇಲೆ ಸಂಗೀತ-ನೃತ್ಯ, ತಿಂದು-ಕುಡಿದು ಸಂಭ್ರಮಿಸುತ್ತಾರೆ. ಮೇಳಗಳು, ಕಲಾತ್ಮಕ ವಸ್ತುಗಳ ಮಾರುಕಟ್ಟೆಯೂ ಆಯೋಜನೆಗೊಂಡಿರುತ್ತವೆ.
- ಎಸ್.ಪಿ.ವಿಜಯಲಕ್ಷ್ಮಿ
ಕಳೆದ ಬಾರಿ ಮ್ಯೂನಿಕ್ ಹೋಗಿದ್ದು ಜುಲೈ ತಿಂಗಳಿನಲ್ಲಿ. ಈಗಾಗಲೇ ಏಳೆಂಟು ಬಾರಿ ಮ್ಯೂನಿಕ್ ವಾಸ್ತವ್ಯ ಅನುಭವಿಸಿದ್ದೇನೆ. ಕೆಲವು ಬಾರಿ ಮ್ಯೂನಿಕ್ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಮುಗಿಲೆತ್ತರಕ್ಕೆ ನಿಂತ ಆಕರ್ಷಕವಾಗಿ ಅಲಂಕೃತಗೊಂಡ ಕಂಬವೊಂದನ್ನು ನೋಡುತಿದ್ದೆ. ಅದರ ಕುರಿತು ತಿಳಿದುಕೊಳ್ಳುವ ಕುತೂಹಲವಿತ್ತು ತಿಳಿದುಕೊಳ್ಳುವ ಓಡಾಟದಲ್ಲಿ ಅರಿತುಕೊಂಡದ್ದು ಇಷ್ಟು.
ʻಮೇ ಪೋಲ್ʼ ಅಥವಾ ಜರ್ಮನ್ ಭಾಷೆಯಲ್ಲಿ ʻಮೈ ಬೌಮ್ʼ ಎನ್ನುವುದು ಜರ್ಮನಿಯ ಭಾಗದಲ್ಲಿನ ಒಂದು ಆಚರಣೆ. ಯೂರೋಪ್‌ನ ಇಂಗ್ಲೆಂಡ್, ಸ್ಕಾಟ್ಲೆಂಡ್, ಆಸ್ಟ್ರಿಯಾ ಸೇರಿ ಹಲವೆಡೆ ಇರುವ ಒಂದು ಪುರಾತನ ಆಚರಣೆ. ಪ್ರತಿವರ್ಷ ಮೇ 1ಕ್ಕೆ ದೇಶಾದಾದ್ಯಂತ ಇರುವ ಸಮುದಾಯಗಳು ತಮ್ಮ ಪ್ರಾಂತ್ಯ, ಮುಖ್ಯ ಬಡಾವಣೆ, ಗೊತ್ತುಪಡಿಸಿದ ಪ್ರಸಿದ್ಧ ತಾಣಗಳಲ್ಲಿ, ಈಗಾಗಲೇ ಅಲಂಕಾರಗೊಂಡ ʻಮೇ ಪೋಲ್ʼ ಎನ್ನುವ ಕಂಬವೊಂದನ್ನು ಪ್ರತಿಷ್ಠಾಪಿಸುತ್ತಾರೆ. ಇದರ ಹಿಂದಿನ ರಾತ್ರಿಗೆ ʻವಾಲ್ಪರ್ಗೀಸ್ ನೈಟ್ʼ ಎನ್ನುವ ಹೆಸರೂ ಉಂಟು. ಈ ʻಮೇ ಪೋಲ್ʼ ಎನ್ನುವ ಕಂಬ ಈ ಜನಗಳ ಬದುಕಿನ ಸಮೃದ್ಧಿ, ವಸಂತಕಾಲದ ಆಗಮನ ಮತ್ತು ಒಗ್ಗಟ್ಟನ್ನು ಪ್ರತಿಬಿಂಬಿಸುವ ದ್ಯೋತಕವಾಗಿರುತ್ತದೆ.
ಇದನ್ನೂ ಓದಿ: ವಿಯೆಟ್ನಾಂನಲ್ಲಿ ನಮ್ಮವರನ್ನು ಹುಡುಕುವ ಸಾಹಸ
ಆಚರಣೆ ಹುಟ್ಟಿದ್ದು ಹೀಗೆ
ಈ ಆಚರಣೆಯ ಹುಟ್ಟಿನ ನಿಖರ ಮೂಲ ನಮ್ಮನ್ನು ಸುಮಾರು 2000 ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಅಂದಿನ ʻಪೇಗನ್ʼ ಎಂಬ ಜನರು ಈ ಆಚರಣೆಯನ್ನು ಶುರುಮಾಡಿದರು ಎನ್ನಲಾಗಿದೆ. ಪೆಗನ್ ಎಂದರೆ ಭೂಮಿ ಮತ್ತು ನಿಸರ್ಗದ ಆರಾಧಕ ಜನಾಂಗ. ಅವರು ಪ್ರತಿವರ್ಷವೂ ನೂತನ ಹುಟ್ಟು ಪಡೆಯುವ ಪ್ರಕೃತಿಯನ್ನು ಪ್ರತಿನಿಧಿಸುವುದರ ದ್ಯೋತಕವಾಗಿ ಈ ʻಮೇಪೋಲ್ʼ ಆಚರಣೆಯನ್ನು ಶುರುಮಾಡಿದರು.

ಚೈತ್ರಮಾಸದ ಆದಿಯನ್ನು ನಾವು ʼಯುಗಾದಿʼ ಎಂದು ಆಚರಿಸುವಂತೆ. ಇದು ಆ ಕಾಲದ ಜನರ ಹೊಸವರ್ಷ ಎನ್ನಬಹುದು. ಜರ್ಮನಿಯಲ್ಲಿ ಉಗಮವಾಗಿ ನಂತರ ಯೂರೋಪಿಗೂ ಹಬ್ಬಿದ ಈ ಆಚರಣೆಯಲ್ಲಿ ʻಮೇ ಪೋಲ್ʼ ಸುತ್ತ ನರ್ತಿಸುವ ಪ್ರಮುಖ ಉದ್ದೇಶ ಅಂದಿನವರ ಕಾಲಕಾಲದ ವಿಜಯದ ಸಂಕೇತವಾಗಿತ್ತು. ಈ ಆಚರಣೆಯಿಂದ ಮುಂದಿನ ಮಳೆ-ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆ ಇತ್ತು.
ಕಂಬ ತಯಾರಿಯ ಕಥೆ
ಈ ಆಚರಣೆಯಲ್ಲಿ ಮುಖ್ಯ ಪಾತ್ರವಹಿಸುವುದು ʻಮೇ ಪೋಲ್ʼ ಎನ್ನುವ ಕಂಬ. ಪೈನ್ ಅಥವಾ ಕೋನಿಫೆರಸ್ ಜಾತಿಯ ಉದ್ದದ ಮರಗಳನ್ನು ಆರಿಸಿ, ಅದರ ರೆಂಬೆಕೊಂಬೆ, ಎಲೆಗಳನ್ನು ಸವರಿ ನಯವಾದ ದಪ್ಪದ ಕಂಬವನ್ನು ತಯಾರಿಸಲಾಗುತ್ತದೆ. ನಂತರ ವಸಂತಮಾಸದ ಸಮೃದ್ಧಿಯ ಪ್ರಾತಿನಿಧಿಕವಾಗಿ ವೈವಿಧ್ಯಮಯ ಬಣ್ಣ ಮತ್ತು ಆಕಾರಗಳ ರಿಬ್ಬನ್, ಹೂಗಳಿಂದ ಆ ಕಂಬವನ್ನು ಅಲಂಕರಿಸುತ್ತಾರೆ. ಇಲ್ಲಿ ನಿತ್ಯಹರಿದ್ವರ್ಣ ಮರದ ಕಂಬ ಪುರುಷನ ಸಂಕೇತವಾದರೆ, ರಿಬ್ಬನ್ ಮತ್ತು ಹೂಗಳು ಸ್ತ್ರೀ ಸಂಕೇತವಾಗಿವೆ. ಕೆಲವು ಕಂಬಗಳಿಗೆ ಅಲ್ಲಿನ ಸಂಪ್ರದಾಯ, ರಾಜಕೀಯ, ಸಾಮಾಜಿಕ, ಪ್ರಾಕೃತಿಕ ಚಿತ್ರಗಳ ಪೈಂಟಿಂಗ್ ಸಹ ಮಾಡಲಾಗುತ್ತದೆ. ತುದಿಯಲ್ಲಿ ಸರಕಾರಿ ಲಾಂಛನದ ಆಕೃತಿ ಮತ್ತು ಹಸಿರುಬಣ್ಣದ ಹೂದಂಡೆಯೂ ಇರುವುದುಂಟು. ಹೀಗೆ ಆಚರಣೆಯ ಮುಖ್ಯ ಕಂಬ ಸಿದ್ಧವಾಗುತ್ತದೆ.

ವಾಲ್ಪುರ್ಗಿಸ್ ನೈಟ್
ಸಾಕಷ್ಟು ಎತ್ತರ ಮತ್ತು ತೂಕವಿರುವ ಈ ಕಂಬವನ್ನು ಮೇ 1ರಂದು ನಿಗದಿತ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಲಾಗುತ್ತದೆ. ಮ್ಯೂನಿಕ್ ನಗರದಲ್ಲಿ ಪ್ರತಿಷ್ಠಿತ ʻಮರಿಯನ್ ಪ್ಲಾಟ್ಝ್ʼನಲ್ಲಿನ ʻವಿಕ್ಟುಆಲಿಯನ್ ಮಾರ್ಕೆಟ್ʼನಲ್ಲಿ ನಿಲ್ಲಿಸುವುದು ವಿಶೇಷ. ಕೆಲವು ಕಡೆಗಳಲ್ಲಿ ʻವಾಲ್ಪುರ್ಗಿಸ್ ನೈಟ್ʼ ಎಂದು ಕರೆಯಲ್ಪಡುವ ಹಿಂದಿನ ರಾತ್ರಿಯೇ (ಏಪ್ರಿಲ್ 3೦) ನಿಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಪರೇಡ್ ಸಹ ಆಯೋಜಿಸಲಾಗುತ್ತದೆ. ಇದೇನೂ ಸರಳವಾದ ಕಾರ್ಯವಲ್ಲ; ಟ್ರಕ್, ರೋಪ್‌ಗಳ ಸಹಾಯದಿಂದ ಆಗಬೇಕಾದ ವ್ಯವಸ್ಥಿತ ಟೀಮ್ ವರ್ಕ್. ಇಷ್ಟು ದಿನಗಳ ಶ್ರಮದಲ್ಲಿ ನಿರ್ಮಾಣವಾದ ಅಲಂಕೃತ ಕಂಬ ಊರ್ದ್ವಮುಖಿಯಾಗಿ ನಿಂತಾಗ ಆ ತಂಡದವರ ಸಂತಸ ನೋಡಬೇಕು.
ಆಚರಣೆ ಹೇಗಿರುತ್ತದೆ?
ಸುಂದರ ಅಲಂಕೃತ ಈ ಕಂಬದ ಸುತ್ತ ಎಲ್ಲಾ ವಯೋಮಾನದ ಹೆಣ್ಣು-ಗಂಡು, ಮಕ್ಕಳು ಜಾನಪದ ಹಾಡುಗಳಿಗೆ ನರ್ತಿಸುವುದು ಈ ಆಚರಣೆಯ ವಿಶೇಷತೆ. ಕಂಬದ ಒಳಹೊರಗೆ ಟೇಪುಗಳನ್ನು ಹೆಣೆಯುವಂತೆ ನರ್ತಿಸುವಾಗ ಮೂಡುವ ಸುಂದರವಾದ ಚಿತ್ರಾಕೃತಿಗಳನ್ನು ನೋಡುವುದು ರೋಚಕವಾಗಿರುತ್ತದೆ. ಈ ಕಂಬವನ್ನು ನಿಲ್ಲಿಸಿದ ಮೇಲೆ ಸಂಗೀತ-ನೃತ್ಯ, ತಿಂದು-ಕುಡಿದು ಸಂಭ್ರಮಿಸುತ್ತಾರೆ. ಮೇಳಗಳು, ಕಲಾತ್ಮಕ ವಸ್ತುಗಳ ಮಾರುಕಟ್ಟೆಯೂ ಆಯೋಜನೆಗೊಂಡಿರುತ್ತವೆ. ಈ ʻಪೋಲ್ʼಗಳನ್ನು ಒಂದು ತಿಂಗಳಿನಿಂದ ಒಂದು ವರ್ಷದವರೆಗೂ ಅಂದರೆ ಮುಂದಿನ ʻಪೋಲ್ʼ ನೆಡುವವರೆಗೂ ಉಳಿಸಿಕೊಳ್ಳುವುದುಂಟು. ಹಾಗಾಗಿ ಜರ್ಮನಿ, ಆಸ್ಟ್ರಿಯಾಗಳ ಹಳ್ಳಿಗಳಲ್ಲಿ ಸುತ್ತುವಾಗ ಸಾಕಷ್ಟು ಬಾರಿ ಈ ಕಂಬಗಳು ಕಾಣಿಸಿಕೊಳ್ಳುತ್ತವೆ.
ವಿವಿಧತೆಯಲ್ಲೂ ಏಕತೆಯ ಸಂದೇಶ
ಜರ್ಮನಿಯ ಪ್ರತಿ ಭಾಗ, ಊರು, ಸಮುದಾಯಗಳಲ್ಲಿ ವಿಭಿನ್ನ ರೀತಿಯಲ್ಲಿ ಅಲಂಕೃತಗೊಂಡ ಕಂಬಗಳನ್ನು ನೆಡುವುದು ಸಾಮಾನ್ಯ. ಸಂಪ್ರದಾಯ ಒಂದೇ ಆದರೂ ಪ್ರತಿ ಭಾಗದಲ್ಲೂ ನೆಡುವ ಕಂಬಕ್ಕೆ ಒಂದು ವಿಶೇಷತೆ ಇದ್ದೇ ಇರುತ್ತದೆ. ಪ್ರತಿ ಕಂಬವೂ ವಿಭಿನ್ನ ಅಲಂಕಾರ, ಚಿತ್ರ, ಬರಹ, ಮರದ ಕೆತ್ತನೆ, ಮನರಂಜನಾತ್ಮಕ ರೂಪದಲ್ಲಿರುತ್ತವೆ. ಇದಕ್ಕೂ ಪೈಪೋಟಿ ಇದೆ. ಪ್ರತಿ ಹಳ್ಳಿಗಳಲ್ಲೂ ಈ ಆಚರಣೆ ನಡೆಯುತ್ತದೆ.
ಎಲ್ಲ ವೈವಿಧ್ಯಗಳಾಚೆಗೆ ಜರ್ಮನಿಯ ಬವೇರಿಯಾ ರಾಜ್ಯದಲ್ಲಿ ಮಾತ್ರ ಬವೇರಿಯನ್ ಸಂಸ್ಕೃತಿ ಎಲ್ಲ ಕಂಬಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿರುತ್ತದೆ. ಹಾಗಾಗಿಯೇ ಇಲ್ಲಿ ಬಿಳಿ ಮತ್ತು ನೀಲಿ ಬಣ್ಣಗಳ ಬಳಕೆ ಸಾಮಾನ್ಯವಾಗಿರುತ್ತದೆ. ತುದಿಯಲ್ಲಿ ಬವೇರಿಯನ್ ʻಕೋಟ್ ಆಫ್ ಆರ್ಮ್ಸ್ʼ ಮತ್ತು ಹಸಿರು ಬಣ್ಣದ ʻರೆತ್ʼ ಕಂಡುಬರುತ್ತದೆ. ಹೀಗೆ ಎಲ್ಲ ಭಾಗದ ಇತಿಹಾಸ, ಜಾನಪದ, ವೈವಿಧ್ಯಮಯ ನಂಬಿಕೆಗಳನ್ನು ಗೌರವಿಸುವುದು, ಒಗ್ಗೂಸುವುದು, ಆಧುನಿಕತೆಯಲ್ಲೂ ಸಂಭ್ರಮಿಸುವುದನ್ನು ಸಾರುವುದೇ ಈ ʻಮೇ ಪೋಲ್ʼ ಆಚರಣೆಯ ಸಂದೇಶ. ಈ ಆಚರಣೆಯಿಂದ ಜರ್ಮನ್ನರು ಮತ್ತು ಯೂರೋಪಿಯನ್ನರು ನಾವು ಒಂದು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರುತ್ತಿದ್ದಾರೆ.
ಕಂಬ ಕದ್ದರೆ ಕಾಂಚಾಣ
ನಮ್ಮಲ್ಲಿ ಕಾಮನ ಹಬ್ಬದಲ್ಲಿ ಕಾಮನ ಸುಡಲು ಯುವಕರು ಇನ್ನೊಬ್ಬರ ಸೌದೆ, ಬೆರಣಿ ಕದಿಯುವಂತೆ, ದೀಪಾವಳಿಯಲ್ಲಿ ಹಸುವಿನ ಅಲಂಕಾರದ ಹಾರಗಳನ್ನು ಕದಿಯುವಂತೆ, ಇಲ್ಲೂ ʻಮೇ ಪೋಲ್ʼಗಳನ್ನು ಕದಿಯುವ ಪದ್ಧತಿಯಿದೆ. ಇದೂ ಆಚರಣೆಯ ಒಂದು ಮುಖ್ಯ ಭಾಗ. ಆದರೆ ಇದಕ್ಕೆ ಕೆಲವು ನಿಯಮಗಳಿವೆ. ʻವಾಲ್ಪರ್ಗೀಸ್ ನೈಟ್ʼನಂದು ಸ್ಥಾಪಿಸಿದ ಹೆಚ್ಚು ಎತ್ತರ-ಭಾರವಿಲ್ಲದ ಕಂಬವನ್ನು ಅಂದು ಮಾತ್ರ ಕದಿಯಬಹುದು. ಒಂದು ಹಳ್ಳಿಯವರು ಸ್ಥಾಪಿಸಿದ ಕಂಬವನ್ನು ಇನ್ನೊಂದು ಹಳ್ಳಿಯವರು ಕದಿಯಬಹುದು. ತಮ್ಮ ಹಳ್ಳಿಯದನ್ನೇ ಕದಿಯುವಂತಿಲ್ಲ. ಎಲ್ಲರೂ ಕಾವಲುಗಾರರನ್ನು ನೇಮಿಸಿರುತ್ತಾರೆ. ಜಾಗರೂಕರಾಗಿರುತ್ತಾರೆ. ಹಾಗಿದ್ದರೂ ಈ ಹುಡುಗಾಟಿಕೆಯ ಕಳ್ಳತನ ನಡೆಯುವುದಿದೆ. ಆಗ ಅದನ್ನು ವಾಪಸ್ ಪಡೆಯಲು ಕದ್ದವರಿಗೆ ಶುಲ್ಕ ತೆರಬೇಕಾಗುತ್ತದೆ. ಆದರೆ, ಯಾವ ಗಲಾಟೆಯನ್ನೂ ಮಾಡುವಂತಿಲ್ಲ.

ಲವರ್‌ಗಳನ್ನು ಮೆಚ್ಚಿಸಲೂ ಹೀಗೆ ಮಾಡುತ್ತಾರೆ
ಪ್ರೇಮಿಯೊಬ್ಬನು ತಾನು ಇಷ್ಟಪಟ್ಟ ಹುಡುಗಿಯ ಮನೆಯ ಮುಂದಿನ ಅಂಗಳದ ಗೇಟ್ ಬಳಿ ಈ ಕಂಬವನ್ನು ನಿಲ್ಲಿಸಬಹುದು. ಇವು ಹೆಚ್ಚು ಎತ್ತರ ಇರುವುದಿಲ್ಲ. ಹುಡುಗಿಗೆ ಆ ಹುಡುಗ ಮೆಚ್ಚುಗೆಯಾದರೆ, ಆಕೆ ಆತನನ್ನು ಡಿನ್ನರ್‌ಗೆ ಆಹ್ವಾನಿಸುತ್ತಾಳೆ. ಇಲ್ಲದಿದ್ದರೆ ಆ ಕಂಬ ತೆರವು ಮಾಡಬಹುದು.
ಗಟ್ಟಿಯಾದ ಎತ್ತರದ ಕಂಬಗಳನ್ನು ನಿರ್ದಿಷ್ಟ ಎತ್ತರದವರೆಗೆ ಹತ್ತುವ ಸ್ಪರ್ಧೆಯೂ ಇರುತ್ತದೆ. ಯಾರು ಕಡಿಮೆ ಸಮಯದಲ್ಲಿ ಏರುವರೋ ಅವರು ಅಲ್ಲಿ ಒಂದಷ್ಟು ಲಾಗಾ-ಪಲ್ಟಿಗಳಂಥ ಚಮತ್ಕಾರ ತೋರಿಸುತ್ತಾ ನೆರೆದವರನ್ನು ರಂಜಿಸುತ್ತಾರೆ. ಜರ್ಮನ್ನರು ಇಂಥ ಮನರಂಜನೆಯ ಪದ್ಧತಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಆಚರಣೆ, ಮನರಂಜನೆ, ನಂಬಿಕೆ ಜತೆಗೆ ಒಗ್ಗಟ್ಟು ಎಲ್ಲವನ್ನು ಒಟ್ಟುಮಾಡುವ ಮೇ ಪೋಲ್ ಒಂದು ಆಚರಣೆಗಿಂತೆ ಹೆಚ್ಚು…
ಅಡ್ಡಡ್ಡ ಹಲಿಗೆಗಳ ಮೇಲಿದೆ ಅಲ್ಲಲ್ಲಿನ ವಿಶೇಷತೆ
ಈ ಕಂಬಗಳ ಕೆಲವು ಹಂತದ ಅಡ್ಡ ಹಲಗೆಗಳ ಮೇಲೆ ಇರುವ ಕೆಲವು ಚಿತ್ರಗಳು ಆಯಾ ದಿಕ್ಕಿನಲ್ಲಿನ ವಿಶೇಷಗಳನ್ನು ಸೂಚಿಸುವ ಸೂಚನಾ ಫಲಕ ಎಂದರೆ ತಪ್ಪಾಗದು. ಉದಾಹರಣೆಗೆ ಲೈಬ್ರರಿ, ಆಹಾರ ಮಳಿಗೆ, ಮ್ಯೂಸಿಯಂ, ಪಾರ್ಕ್ ಇತ್ಯಾದಿಗಳು ಅತ್ತಕಡೆಗೆ ಇರಬಹುದು.