• ವಿದ್ಯಾ ವಿ. ಹಾಲಭಾವಿ

ನಮ್ಮಲ್ಲಿಯ ಯುಗಾದಿ ಹಬ್ಬದ ದಿನದಂದೇ ಇಂಡೋನೇಷಿಯಾದ ಬಾಲಿ ಮತ್ತು ಅದರ ನೆರೆಯ ನುಸಾ ಲೆಂಬೋಗನ್ ಮತ್ತು ‘ನುಸಾ ಪೆನಿಡಾ’ ದ್ವೀಪಗಳಲ್ಲಿ ಹೊಸವರ್ಷ ಪ್ರಾರಂಭವಾಗುತ್ತದೆ. ಬಾಲಿನೀಸ್ ಜನಾಂಗದಲ್ಲಿ ಹೊಸವರ್ಷದ ಹಿಂದಿನ ದಿನವನ್ನು ‘ನೈಪಿ’ ಅಥವಾ ‘ಮೌನದ ದಿನ’ (ಡೇ ಆಫ್ ಸೈಲೆನ್ಸ್) ಎಂದು ಕರೆಯಲಾಗುತ್ತದೆ. ಈ ನೈಪಿ ದಿನವನ್ನು ಬಾಲಿನೀಸ್ ಕ್ಯಾಲೆಂಡರ್ (ಚಕಾ ಅಥವಾ ಸಕಾ) ಪ್ರಕಾರ ನಿರ್ಧರಿಸಲಾಗುತ್ತದೆ.

ನೈಪಿಗೆ ಮೂರ್ನಾಲ್ಕು ದಿನಗಳ ಮೊದಲು

ಅಬುಧಾಬಿಯಲ್ಲಿ ಉದಯಿಸಿದ ಭಾರತೀಯ ಆತ್ಮ — ಅಕ್ಷರಧಾಮ ದೇವಸ್ಥಾನ

ಸಮುದ್ರದ ಬಳಿ ಇರುವ ಪುರ (ಬಾಲಿನೀಸ್ ದೇವಸ್ಥಾನ)ದಲ್ಲಿ ‘ಮೆಲೆಸ್ಟಿ’ ಎಂಬ ಶಾಸ್ತ್ರವಿಧಿಯನ್ನು ನಡೆಸಲಾಗುತ್ತದೆ. ಈ ಆಚರಣೆಯಲ್ಲಿ ಹಲವು ದೇವಾಲಯಗಳ ಆರ್ಕಾ, ಪ್ರತಿಮಾ ಮತ್ತು ಪ್ರಾಲಿಂಗಾ(ಪವಿತ್ರ ವಸ್ತುಗಳು)ಗಳನ್ನು ಶುದ್ಧೀಕರಣ ಮಾಡಲಾಗುತ್ತದೆ. ನಕಾರಾತ್ಮಕ ಅಂಶಗಳನ್ನು ನಿವಾರಿಸಲು, ದೇವರು-ಮಾನವ ಮತ್ತು ಪ್ರಕೃತಿಯೊಂದಿಗೆ ಸಮನ್ವಯ ಸಾಧಿಸಲು, ಭೂತ ಯಜ್ಞವನ್ನು ನಡೆಸಲಾಗುತ್ತದೆ. ಈ ಆಚರಣೆಯಲ್ಲಿ ‘ಬಾತಾರಾ ಕಾಳಾ’ ದೇವರನ್ನು ಶಾಂತಗೊಳಿಸಲು ಪ್ರಾಣಿಬಲಿ ನೀಡಲಾಗುತ್ತದೆ. ಇದಕ್ಕೆ ‘ಪೆಕರುವಾನ್’ ಎನ್ನಲಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ ‘ಪೆಂಗ್ರುಪೂಕನ್’ ಶಾಸ್ತ್ರವಿಧಾನಗಳು ನಡೆಯುತ್ತವೆ. ಇಲ್ಲಿನ ನಿವಾಸಿಗಳು ತಮ್ಮ ತಮ್ಮ ಮನೆಯ ಕಾಂಪೌಂಡ್ ಹತ್ತಿರ ನಿಂತು, ರಾಕ್ಷಸರನ್ನು ಓಡಿಸಲು ಪಾತ್ರೆ-ಪಗಡೆಗಳನ್ನು ಜೋರಾಗಿ ಬಡಿದು ಗದ್ದಲ ಮಾಡುತ್ತಾರೆ. ಒಣಗಿದ ತೆಂಗಿನ ಗರಿಗಳನ್ನು ಸುಡುತ್ತಾರೆ.

ನೈಪಿಗೆ ಕೆಲವು ವಾರಗಳ ಮೊದಲು ಒಗೋ-ಒಗೋ

New Project (10)

ಬಾಲಿಯ ಹಳ್ಳಿಗಳಲ್ಲಿ ಕೆಲವು ಸಮುದಾಯದ ಯುವ ಜನರು ದೈತ್ಯಾಕಾರದ ಪ್ರತಿಮೆಗಳ ನಿರ್ಮಾಣದಲ್ಲಿ ನಿರತರಾಗುತ್ತಾರೆ. ಈ ಪ್ರತಿಮೆಗಳು ಸಾಮಾನ್ಯವಾಗಿ ರಾಕ್ಷಸರು, ದುಷ್ಟಶಕ್ತಿಗಳ ರೂಪದಲ್ಲಿರುತ್ತವೆ. ಕೆಲವು ಪ್ರತಿಮೆಗಳು ಪ್ರಸ್ತುತ ಸಮಸ್ಯೆಗಳನ್ನು ಉಲ್ಲೇಖಿಸಿದರೆ ಮತ್ತೆ ಕೆಲವು ಕ್ರೌರ್ಯ, ದುರಾಸೆ ಅಥವಾ ಅನ್ಯಾಯಕ್ಕೆ ಹೆಸರುವಾಸಿಯಾದ ನಿಜವಾದ ಜನರನ್ನು ಹೋಲುತ್ತವೆ! ಇವುಗಳನ್ನು ‘ಒಗೋ-ಒಗೋ’ ಎಂದು ಕರೆಯುತ್ತಾರೆ. ಬಿದಿರು, ಬಟ್ಟೆ, ಸ್ಟೈರೋಫೋಮ್‌ನಿಂದಲೂ ಈ ಪ್ರತಿಮೆಗಳನ್ನು ತಯಾರಿಸುತ್ತಾರೆ. ಅವುಗಳಿಗೆ ಗಾಢವಾದ ಬಣ್ಣಗಳಿಂದ ಚಿತ್ರಿಸುತ್ತಾರೆ. ಕೆಲವೊಂದು ರಾಕ್ಷಸ ಪ್ರತಿಮೆಗಳಂತೂ 25 ಅಡಿಗಳಿಗಿಂತ ಹೆಚ್ಚು ಎತ್ತರವಿರುತ್ತವೆ! ಇವುಗಳನ್ನು ನೈಪಿಯ ಹಿಂದಿನ ದಿನ(ನೈಪಿ ಈವ್) ಸಂಜೆಯ ಹೊತ್ತಿನಲ್ಲಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆಯ ನಂತರ ಒಗೋ-ಒಗೋಗಳನ್ನು ಸ್ಮಶಾನದಲ್ಲಿ ಅಥವಾ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಸುಡಲಾಗುತ್ತದೆ. ಈ ಆಚರಣೆಯನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಮತ್ತು ಭೌತಿಕತೆಯ ಮೇಲೆ ಆಧ್ಯಾತ್ಮಿಕ ಮೌಲ್ಯಗಳ ವಿಜಯವನ್ನು ಪ್ರತಿನಿಧಿಸುತ್ತದೆ.

ನೈಪಿ ದಿನಕ್ಕೆ ಸಂಪೂರ್ಣ ಸ್ಥಬ್ದ

New Project (11)

ನೈಪಿ ದಿನದಂದು ದ್ವೀಪಗಳಲ್ಲಿ ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಬಾಲಿ ದ್ವೀಪವಂತೂ ಅಕ್ಷರಶಃ ಸ್ತಬ್ಧವಾಗಿರುತ್ತದೆ. ವಿಮಾನಗಳು ಹಾರಾಟ ನಿಲ್ಲಿಸುತ್ತವೆ. ಅಂಗಡಿ, ರೆಸ್ಟೋರೆಂಟ್‌ಗಳೂ ಬಂದ್‌ ಆಗಿರುತ್ತವೆ. ರಸ್ತೆಗಳಲ್ಲಿ ವಾಹನ ಸಂಚಾರವಿರುವುದಿಲ್ಲ. ಬೀದಿಗಳೆಲ್ಲಾ ಜನರಿಲ್ಲದೆ ಬಿಕೋ ಎನ್ನುತ್ತಿರುತ್ತವೆ. ಜನರು ತಮ್ಮ ಮನೆಯಲ್ಲಿನ ದೀಪಗಳನ್ನು ಆರಿಸಿ, ಮನೆಯನ್ನು ಲಾಕ್ ಮಾಡಿಕೊಂಡು ಒಳಗೇ ಇರುತ್ತಾರೆ. ವಿದ್ಯುತ್ ಸೇರಿದಂತೆ ಯಾವುದೇ ಬೆಳಕು ಅಥವಾ ಬೆಂಕಿ ಇರುವುದಿಲ್ಲ. ಸಂಗೀತ, ರೇಡಿಯೋ, ಟಿವಿಗಳ ಮನರಂಜನೆಯೂ ಇರುವುದಿಲ್ಲ! ಕೆಲವರು ಉಪವಾಸವಿರುತ್ತಾರೆ! ಧ್ಯಾನ ಮಾಡುವವರೂ ಇದ್ದಾರೆ. ಯಾವುದೇ ಕಾರ್ಯಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಇದು ಬೆಳಗ್ಗೆ 6 ಗಂಟೆಯಿಂದ ಮುಂದಿನ 24 ಗಂಟೆಯವರೆಗೂ ಜಾರಿಯಲ್ಲಿರುತ್ತದೆ. ಮರುದಿನ ಹಬ್ಬದ ಸಡಗರ ಸಂಭ್ರಮದ ಚಟುವಟಿಕೆಗಳು ಗರಿಗೆದರುತ್ತವೆ. ಏಕೆಂದರೆ ಇದು ಬಾಲಿನೀಸ್ ಹೊಸವರ್ಷ. ಈ ದಿನದಂದು ಕುಟುಂಬದವರು ಹಾಗೂ ಸ್ನೇಹಿತರೆಲ್ಲಾ ಪರಸ್ಪರ ಕ್ಷಮೆ ಕೇಳಲು ಮತ್ತು ಮುಂಬರುವ ಹೊಸ ದಿನಗಳನ್ನು ಸ್ವಾಗತಿಸಲು ‘ಲಾಬು ಬ್ರಾತಾ’ ಧರ್ಮಾಚರಣೆಯನ್ನು ನಡೆಸುತ್ತಾರೆ. ನೈಪಿಯ ಎಲ್ಲಾ ಶಾಸ್ತ್ರೋಕ್ತ ಪದ್ಧತಿಗಳು ಮುಗಿದ ನಂತರ ಕೊನೆಯದಾಗಿ ಧರ್ಮ ಶಾಂತಿ ಆಚರಣೆಯನ್ನು ಮಾಡಲಾಗುತ್ತದೆ.

ನೈಪಿ ನಿಜಕ್ಕೂ ಪ್ರಶಾಂತತೆಯ ದಿವ್ಯ ಅನುಭೂತಿ ಅನುಭವಿಸಲು ಅದ್ಭುತ ಸಮಯ. ಬಾಲಿಗೆ ಹೋದರೆ ನೈಪಿಯ ದಿನಗಳಲ್ಲಿ ಹೋಗಿ. ನೈಪಿಯನ್ನೂ ಅನುಭವಿಸಿ, ನಂತರದ ದಿನಗಳನ್ನೂ ಆನಂದಿಸಿ.