• ಎಸ್.ಶಿವಲಿಂಗಯ್ಯ

ಲಂಡನ್ನಿನ ಪ್ರಸಿದ್ಧ ಕ್ರಿಸ್ಟಲ್ ಪ್ಯಾಲೇಸ್ ನಿಂದ ಸ್ಫೂರ್ತಿಗೊಂಡು ನಿರ್ಮಾಣಗೊಂಡದ್ದು ಈ ಕಿಬ್ಬಲ್ ಪ್ಯಾಲೇಸ್ . 1873ರಲ್ಲಿ ಗ್ಲಾಸ್ಗೊ ಧನಿಕ ಥಾಮಸ್ ಹಾಪ್ಕಿರ್ಕ್ ಗಾಗಿ ನಿರ್ಮಿಸಲಾದ ಈ ಗಾಜಿನ ಮನೆ ಸುಮಾರು 2200 ಚ.ಮೀ. ನಷ್ಟು ವಿಸ್ತಾರವಾಗಿದೆ. ಇದಕ್ಕೆ ಅಗತ್ಯ ಕಲಾತ್ಮಕ ಕಬ್ಬಿಣದ ಕಂಬಗಳು, ಎರಕಹೊಯ್ದ ಕಮಾನುಗಳನ್ನು ಒದಗಿಸಿದ್ದು ಅದೇ ಗ್ಲಾಸ್ಗೊ ನಗರದಲ್ಲಿದ್ದ ವಾಲ್ಟರ್ ಮೆಕ್ಫರ್ಲೇನ್ ಕಂಪನಿಯ ಸಾರಸನ್ ಫೌಂಡ್ರಿ. ಕ್ರಿಸ್ಟಲ್ ಪ್ಯಾಲೇಸ್ ರೀತಿಯಲ್ಲೇ ಮೆದು ಕಬ್ಬಿಣದ ಕಮಾನುಗಳು ಹಾಗೂ ವಿಶೇಷ ಗಾಜಿನ ಹಾಳೆಗಳಿಂದ ನಿರ್ಮಿಸಲಾಗಿರುವ ಈ ಗಾಜಿನ ಮನೆ ಪ್ರಾರಂಭದಲ್ಲಿ ವಸ್ತುಪ್ರದರ್ಶನ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮೀಸಲಾಗಿತ್ತು. ಆದರೆ ಈಗ ಗ್ಲಾಸ್ಗೊ ಬಟಾನಿಕಲ್ ಗಾರ್ಡನ್‌ನ ಮುಖ್ಯ ಭಾಗವಾಗಿದೆ.

ಇದನ್ನೂ ಓದಿ: ಠೀವಿಯಿಂದ ಇವಿ ಟ್ರಾವೆಲ್‌ ಮಾಡೋದು ಹೇಗೆ?

ಈ ಕ್ರಿಸ್ಟಲ್ ಪ್ಯಾಲೇಸ್ ಹಾಗೂ ಕಿಬ್ಬಲ್ ಪ್ಯಾಲೇಸ್ ಗಳಿಂದ ಪ್ರೇರಣೆಗೊಂಡು, ಮೈಸೂರು ಬಟಾನಿಕಲ್ ಗಾರ್ಡನ್ ಸೂಪರಿಂಟೆಂಡೆಂಟ್ ಆಗಿದ್ದ ಜಾನ್ ಕ್ಯಾಮರೂನ್ ಬೆಂಗಳೂರಿನ ಲಾಲ್ ಬಾಗ್ ಗಾಜಿನ ಮನೆ ನಿರ್ಮಾಣಕ್ಕೆ ಮುಂದಾದರು. ಶ್ರೀ ಚಾಮರಾಜ ಒಡೆಯರ್ (1874-1907) ಅವರ ಸಹಕಾರದಿಂದ ವಿಕ್ಟೋರಿಯ ರಾಣಿಯ ಮೊಮ್ಮಗ ರಾಜಕುಮಾರ ಆಲ್ಬರ್ಟ್ ವಿಕ್ಟರ್ ಬೆಂಗಳೂರು ಭೇಟಿಯ ಸವಿನೆನಪಾಗಿ 30.11.1889ರಂದು ಇದಕ್ಕೆ ಅಸ್ಥಿಭಾರ ಹಾಕಲಾಯಿತು. ಇದರ ನಿರ್ಮಾಣಕ್ಕೂ ಗ್ಲಾಸ್ಗೊನ ವಾಲ್ಟರ್ ಮೆಕ್ಫರ್ಲೇನ್ ಕಂಪನಿಯಿಂದಲೇ ಕಂಬಗಳು, ಕಮಾನುಗಳು ಎರಕಹೊಯ್ದ ಕಾರಂಜಿಗಳು, ದೀಪದ ಕಂಬಗಳನ್ನು ತರಿಸಿಕೊಳ್ಳಲಾಯಿತು.

New Project (2)

ಸದ್ಯ ಕಿಬ್ಬಲ್ ಪ್ಯಾಲೇಸ್ ಯುಕೆಯ ರಾಷ್ಟ್ರೀಯ ಜರೀ ಗಿಡದ ಸಂಗ್ರಹಾಗಾರವಾಗಿದೆ. ತಾಪಮಾನ ನಿಯಂತ್ರಿತ ಈ ಗಾಜಿನ ಮನೆಯಲ್ಲಿ ದೂರದ ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್ ಮೂಲದ ಬಹುತೇಕ ಜರೀ ವರ್ಗದ ಗಿಡಗಳನ್ನು ಇಲ್ಲಿ ಕಾಣಬಹುದು. 120 ವರ್ಷಗಳ ಹಳೆಯ ಕೆಲವು ಜರೀ ಗಿಡಗಳಲ್ಲದೆ, ಅನೇಕ ಬಗೆಯ ಆರ್ಕಿಡ್ ಗಳು ಹಾಗೂ ಕೀಟಭಕ್ಷಕ ಸಸ್ಯಗಳ ಸಂಗ್ರಹವಿದೆ. ಇದನ್ನು ಕೇವಲ ಸಸ್ಯಸಂಗ್ರಹಾಲಯ ಮಾತ್ರವಲ್ಲ, ಅನೇಕ ಖ್ಯಾತ ಕಲಾವಿದರಿಂದ ನಿರ್ಮಾಣಗೊಂಡಿರುವ ಶಿಲ್ಪಗಳು ಒಳಗೊಂಡು, ವೀಕ್ಷಕರಿಗೆ ಕುತೂಹಲಕಾರಿಯಾಗಿರುವಂತೆ ರೂಪಿಸಲಾಗಿದೆ.

New Project (6)

ಕೆಲ್ವಿನ್ ನದಿಯ ಪಕ್ಕದಲ್ಲಿರುವ ಸುಮಾರು 8 ಎಕರೆ ವಿಸ್ತೀರ್ಣದ ಈ ಗ್ಲಾಸ್ಗೊ ಬಟಾನಿಕಲ್ ಗಾರ್ಡನ್ ನಲ್ಲಿ ಕಿಬ್ಬಲ್ ಪ್ಯಾಲೇಸ್ ಅಲ್ಲದೆ ಗಾಜಿನ ಆವರಣ ಹಾಗೂ ಮೇಲ್ಚಾವಣಿ ಹೊಂದಿರುವ ಇನ್ನೂ ಒಂದು ತಾಪಮಾನ ನಿಯಂತ್ರಿತ ಸಸ್ಯಸಂಗ್ರಹಾಗಾರವಿದೆ. ಎಲ್ಲ ವಯೋಮಾನದವರಿಗೂ ಆಸಕ್ತಿದಾಯಕವಾಗಿರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶಗಳಿವೆ. ಸಸ್ಯೋದ್ಯಾನದ ಗೆಳೆಯರು ಎಂಬ ಸಂಘಟನೆಯಿಂದ ಕಿರಿಯರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ವ್ಯವಸ್ಥೆಯೂ ಇದ್ದು ಒಟ್ಟಿನಲ್ಲಿ ಸಸ್ಯಾಸಕ್ತರು ಭೇಟಿನೀಡಲು ಸೂಕ್ತ ತಾಣವಾಗಿದೆ.