• ಮುರಳಿ

ಎಂದಿನಂತೆ ಸಂಜೆ ಪುಸ್ತಕ ಓದಿ, ಮಲಗುವ ಮುನ್ನ ನನ್ನ ಇತ್ತೀಚಿನ ಚಾರಣದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ಸ್ನೇಹಿತರು ಕರೆಮಾಡಿ ದೀಪಾವಳಿ ರಜಾದಿನಗಳಲ್ಲಿ ಶ್ರೀಲಂಕಾಗೆ ಹೋಗಿಬರೋಣ, ಒಂದು ಅಡ್ವೆಂಚರ್‌ ಟ್ರಿಪ್‌ ಆಗುತ್ತದೆ ಎಂದರು. ನಾನೂ ಸಂತೋಷದಿಂದ ಆಗಲಿ ಎಂದೆ. ಮರುದಿನ ಫ್ಲೈಟ್‌ ಬುಕ್‌ ಆಯಿತು. ಆಫಿಸ್‌ ಕೆಲಸ ಮುಗಿಸಿ, ಬಟ್ಟೆ-ಬರೆ ಪ್ಯಾಕ್‌ ಮಾಡಿಕೊಂಡು ಏರ್‌ಪೋರ್ಟ್‌ ಕಡೆಗೆ ಹೊರಟೆ.

ಮೊದಲ ದಿನ

ಪಿನ್ನಾವಾಲ ಆನೆ ಶಿಬಿರ

ಬೆಳಗಿನ ಜಾವ 2:30ಕ್ಕೆ ಫ್ಲೈಟ್‌ ಹತ್ತಿದ ನಾವು 4:00 ಗಂಟೆಗೆ ಕೊಲಂಬೋ ತಲುಪಿದೆವು. ಅಲ್ಲಿಂದ ಲೋಕಲ್‌ ಬಸ್‌ ಹತ್ತಿ ಮೊದಲು ತಲುಪಿದ್ದು ಪಿನ್ನಾವಾಲ ಆನೆ ಶಿಬಿರಕ್ಕೆ. ಶ್ರೀಲಂಕಾ ಬಸ್ ಪ್ರಯಾಣವೇ ಒಂದು ಅಡ್ವೆಂಚರಸ್‌. ಕೂರಲು ಜಾಗವೂ ಇಲ್ಲ. ಜೋತಾಡಿಕೊಂಡೇ ಓಡಾಡಿದೆವು. ಲಂಕಾದ ಜನರು ಟ್ರಾಫಿಕ್‌ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಜೀಬ್ರಾ ಪಟ್ಟಿಯಲ್ಲಿ ಪಾದಾಚಾರಿಗಳಿದ್ದರೆ ಅವರಿಗೆ ಹೋಗಲು ಮೊದಲು ಅನುವು ಮಾಡಿಕೊಡುತ್ತಾರೆ.

ಪಿನ್ನಾವಾಲದಿಂದ ಕ್ಯಾಂಡಿ ಕಡೆಗೆ ನಮ್ಮ ಪ್ರಯಾಣ ಶುರುಮಾಡಿದೆವು. ಮಧ್ಯದಲ್ಲಿ ಬುದ್ಧನ ದೇವಸ್ಥಾನ, ಪರ್ವತಶ್ರೇಣಿಯ ಸೊಬಗನ್ನು ಸವಿಯುತ್ತಾ ಕ್ಯಾಂಡಿ ತಲುಪಿದೆವು. ಸಂಜೆ ಬುದ್ಧನ ದೇವಾಲಯ, ಶಾಂತ ಕ್ಯಾಂಡಿ ಸರೋವರ ಎಲ್ಲವೂ ಗಮನ ಸೆಳೆಯುವಂತಿದ್ದವು. ಕ್ಯಾಂಡಿಯ ಒಂದು ವ್ಯೂ ಪಾಯಿಂಟ್‌ ನಮಗೆ ಥೇಟ್‌ ಆಗುಂಬೆಯನ್ನು ನೆನಪಿಸಿತು.

ಇದನ್ನೂ ಓದಿ: ಹಳೆಯದೆಲ್ಲ ತ್ಯಾಜ್ಯವಲ್ಲ...ಅವಕ್ಕೂ ಅವುಗಳದ್ದೇ ಬೆಲೆ ಇದೆ

ಎರಡನೆಯ ದಿನ

ಹಂತಾನ ಚಾರಣ

ಎಲ್ಲಿಗೆ ಹೋದರೂ ಗುಡ್ಡ ಹತ್ತುವುದು ನಮ್ಮ ಗುಂಪಿನ ಚಾಳಿ. ಹಾಗಾಗಿ ಇಲ್ಲಿ ‘ಹಂತಾನʼ ಪರ್ವತ ಚಾರಣಕ್ಕೆ ಮುಂದಾಗಿದ್ದೆವು. ಇದು ನಮ್ಮ ಮೊದಲ ಅಂತಾರಾಷ್ಟ್ರೀಯ ಪರ್ವತ ಚಾರಣ. ಎಂಟ್ರಿ ಟಿಕೆಟ್‌ ತೆಗೆದುಕೊಂಡೆವು. ಈ ಚಾರಣದ ದೂರ ಕಮ್ಮಿಯಾದರೂ ಕಠಿಣದ ಹಾದಿ. ಥೇಟ್‌ ಕುಮಾರ ಪರ್ವತದ ಚಾರಣ ನೆನಪಿಸುತ್ತದೆ. ಸುತ್ತಲು ಮನಮೋಹಕ ಹಚ್ಚಹಸುರಿನ ದೃಶ್ಯ. ಅದರ ನಡುವೆ ಬುದ್ಧನ ದೇವಾಲಯವನ್ನು ಕಾಣಬಹುದು. ಮೈ ನಡುಗಿಸುವ ಗಾಳಿ, ಕಾಲಿಗೆ ಬಿಡದೆ ಚುಂಬಿಸುತ್ತಿದ್ದ ಜಿಗಣೆಗಳು ಮಾತ್ರ ಇದ್ದೇ ಇರುತ್ತವೆ. ಎಲ್ಲವನ್ನೂ ನೋಡಿ ತುದಿ ತಲುಪಿದ ನಾವು ಅಲ್ಲಿಂದ ಇಡೀ ಕ್ಯಾಂಡಿಯ ಅಷ್ಟ ದಿಕ್ಕಿನಲ್ಲೂ ಹಬ್ಬಿದ ಪರ್ವತಗಳ ಸಾಲು ನೋಡಿ ಕಂಡೆವು. ಕೆಲಕಾಲ ಮೌನವಾಗಿ ಆ ಸೌಂದರ್ಯ ಸವೆದೆವು.

ಹಂತಾನದಲ್ಲಿ ಸಾಕಷ್ಟು ಕಾಲಕಳೆದು ಹಿಂತಿರುಗಿದೆವು. ನಂತರ ಅಲ್ಲೇ ಇದ್ದ ರಿಕ್ಷಾದಲ್ಲಿ ಪಕ್ಷಿಧಾಮ ಹಾಗೂ ಟೀ ಪ್ಲಾಂಟೇಷನ್‌ಗೆ ಭೇಟಿನೀಡಿ, ರೂಮ್‌ಗೆ ಮರಳಿ ಅಲ್ಲಿ ಅಲ್ಲಿನ ಸ್ಪೆಷಲ್‌ ಡಿಶ್‌ ‘ತೆಂಗಿನಕಾಯಿ ರೊಟ್ಟಿ’ ತಿಂದೆವು. ನಮ್ಮ ರೊಟ್ಟಿ ಮತ್ತು ಅಲ್ಲಿನದಕ್ಕೂ ಅಜಗಜಾಂತರ. ತಿಂದ ನಂತರ ಸ್ವಲ್ಪ ಮಲಗೆದ್ದು ಮತ್ತೆ ಹೊರಟಿದ್ದು ಕ್ಯಾಂಡಿ ರೌಂಡ್ಸ್‌ಗೆ. ಮೊದಲು ಭೈರವಕಂಡ ದೇವಾಲಯ ನಂತರ ಲಂಕಾದ ಸಾಂಸ್ಕೃತಿಕ ನೃತ್ಯ ನೋಡಲು ಹೋದೆವು. ಒಂದು ಗಂಟೆ ಕಾಲ ಈ ನೃತ್ಯ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿನ ಸಂಗೀತ, ನೃತ್ಯ, ವಸ್ತ್ರ ವಿನ್ಯಾಸ ಬಹಳ ಮೆಚ್ಚುಗೆ ಆಗುತ್ತದೆ. ಕೊನೆಗೆ ಬೆಂಕಿಯೊಡನೆ ನಡೆದ ಒಂದು ಪ್ರದರ್ಶನ ನಮ್ಮನ್ನು ರೋಮಾಂಚನವಾಗಿತ್ತು. ಅವುಗಳನ್ನು ಕಂಡು ನಾವು ಹೋಗಿದ್ದು ಟೆಂಪಲ್‌ ಆಫ್‌ ದಿ ಟೂತ್‌ಗೆ. ನಂತರ ಕ್ಯಾಂಡಿ ಸರೋವರದ ಸುತ್ತಲೂ ವಿಹಾರ ಮಾಡಿ, ಮಾಲ್‌ನಲ್ಲಿ ಶಾಪಿಂಗ್‌ ಮಾಡಿಕೊಂಡು ಪ್ರಯಾಣ ಮುಂದುವರೆಸಿದೆವು.

Untitled design (73)

ಮೂರನೆಯ ದಿನದ ಪ್ರಯಾಣ

ಅಂಬುಲುವಾವ ಟವರ್‌

ಇಂದಿನ ಪ್ಲಾನ್‌ ಅಂಬುಲುವಾವ ಟವರ್‌ಗೆ ಹೋಗುವುದಾಗಿತ್ತು. ಬೆಳಗ್ಗೆ ತಿಂಡಿ ಮುಗಿಸಿ, ರೈಲು ಪ್ರಯಾಣ ಆರಂಭಿಸಿದ್ದು ಗಾಂಪೋಲಾ ಕಡೆಗೆ. 30 ನಿಮಿಷದಲ್ಲಿ ಗಾಂಪೋಲ ತಲುಪಿ, ಅಲ್ಲಿಂದ ಟವರ್‌ಗೆ ಹೋದೆವು. ಈ ದಾರಿ ಆಗುಂಬೆಯ ಘಾಟನ್ನು ನೆನಪಿಸುತ್ತದೆ. ತಂಪಿನ ವಾತಾವರಣ, ಎಲ್ಲೆಲ್ಲೂ ಮಂಜು ತುಂಬಿತ್ತು. ಟವರ್‌ ಹತ್ತಲು ಶುರು ಮಾಡಿದೆವು. ಪ್ರದಕ್ಷಿಣೆ ಹಾಕುತ್ತಾ ತುದಿ ತಲುಪಿದೆವು. ಸುತ್ತಲೂ ಮೋಡ, ಮೋಡದ ಮೇಲೆ ನಾವು. ಅಲ್ಲಿಂದ ಸುತ್ತಲಿನ ನೋಟ ರಮಣೀಯವಾಗಿರುತ್ತದೆ.

‘ನುವಾರ ಎಲಿಯʼ

ನುವಾರ ಎಲಿಯಕ್ಕೆ ರೈಲು ಪ್ರಯಾಣ ರಮಣೀಯವಾಗಿರುತ್ತದೆ. 10-12 ಟನಲ್‌ಗಳ ಮೂಲಕ ರೈಲು ಸಾಗುತ್ತದೆ. ಸುಮಾರು ಜಲಪಾತಗಳನ್ನೂ ಕಣ್ತುಂಬಿಕೊಳ್ಳಬಹುದು. ವಿಶೇಷವೆಂದರೆ ಇಲ್ಲಿನ ಎಲ್ಲಾ ರೈಲುಗಳು ಪ್ರತಿ ಗಂಟೆಗೆ 35-40 ಕಿಮೀ ವೇಗದಲ್ಲಿ ಚಲಿಸುತ್ತವೆ. ಇದೇ ಮಾರ್ಗದ ಮೂಲಕ ನಾವು ನುವಾರ ಎಲಿಯಾದ ಲಿಟಲ್‌ ಇಂಗ್ಲೆಂಡ್‌ ತಲುಪಿದೆವು.

ನಿಲ್ದಾಣದಿಂದ ಒಬ್ಬ ಭಾರತೀಯರದ್ದೇ ಟ್ಯಾಕ್ಸಿಯಲ್ಲಿ ನಾವು ಉಳಿದುಕೊಳ್ಳಲಿದ್ದ ರೂಮ್‌ಗೆ ಹೊರಟೆವು. ದಾರಿ ಮಧ್ಯೆ ಅವನು ನಾನು ಒಯಾ ಫಾಲ್ಸ್‌ ತೋರಿಸಿದ್ದು ವಿಶೇಷ. ಮರುದಿನ ಪ್ರಯಾಣಕ್ಕೂ ಅವನನ್ನೇ ಕೇಳಿದೆವು. ಅವನೂ ಒಪ್ಪಿಕೊಂಡ.

ನುವಾರ ಬಹಳ ಚಳಿ ಪ್ರದೇಶ. ಇಲ್ಲಿ ಕತ್ತಲು ಬಹುಬೇಗ ಆವರಿಸಿರುತ್ತದೆ. ಅಂದು ನಾವು ಕ್ವೀನ್‌ ವಿಕ್ಟೋರಿಯಾ ಪಾರ್ಕ್‌ ಬಳಿ, ಹೆಸರಿಗೆ ತಕ್ಕಂತೆ ಇದ್ದ ‘ಗ್ರಾಂಡ್‌ ಇಂಡಿಯನ್‌’ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಬೆಚ್ಚಗೆ ಮಲಗಿದೆವು.

ನಾಲ್ಕನೆಯ ದಿನ

ಸೀತಾದೇವಿ ದೇವಾಲಯ

ನಾಲ್ಕನೆಯ ದಿನದ ಪ್ರಯಾಣದಲ್ಲಿ ನಾವು ಮೊದಲು ಭೇಟಿ ನೀಡಿದ್ದು ಗ್ರೇಗರಿ ಸರೋವರದ ಮುಂದಿನ ಸ್ಟ್ರಾಬೆರಿ ಫಾರ್ಮ್‌ಗೆ. ಅಲ್ಲೇ ಸ್ಟ್ರಾಬೆರಿಯ ವಿವಿಧ ತಿನಿಸುಗಳನ್ನು ಸವಿದೆವು. ಅಲ್ಲಿಂದ ಸೀತಾದೇವಿ ದೇವಸ್ಥಾನಕ್ಕೆ ಹೊರಟೆವು. ಇದು ಸೀತೆಯನ್ನು ರಾವಣ ಅಪಹರಿಸಿಟ್ಟಿದ್ದ ಸ್ಥಳ. ಇಲ್ಲಿ ಆಂಜನೇಯನ ಹೆಜ್ಜೆ ಗುರುತು, ಅಶೋಕವಾಟಿಕವೂ ಇದೆ. ದೇವಸ್ಥಾನದ ಹಿಂದೆ ಸೀತಾ ನದಿ ಹರಿಯುತ್ತದೆ. ಈ ದೇವಾಲಯದ ಜೀರ್ಣೋದ್ಧಾರಕ್ಕೆ ಭಾರತವೂ ಕೊಡುಗೆ ನೀಡಿದೆ.

ಮೂನ್‌ ಪ್ಲೇನ್ಸ್‌

ಇದೊಂದು ಸಫಾರಿ. ಇಡೀ ನುವಾರದ ಒಟ್ಟು ನೋಟವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಂದ ಸಂಜೀವಿನಿ ಪರ್ವತವನ್ನೂ ನೋಡಬಹುದು. ಟಿಕೆಟ್ ಪಡೆದು ಜೀಪ್‌ನಲ್ಲಿ ಕುಳಿತ ನಮಗೆ, ಕುಳಿತುಕೊಳ್ಳಲೂ ನಿಲ್ಲಲೂ ಕಷ್ಟವಾಗಿತ್ತು. ಹೇಗೋ ಫಜೀತಿ ಪಟ್ಟು ವ್ಯೂ ಪಾಯಿಂಟ್‌ ತಲುಪಿದೆವು. ಅಲ್ಲಿಂದ ಸ್ವಲ್ಪ ದೂರ ನಡೆಯಬೇಕು. ಅಲ್ಲಿಂದ ಕಂಡ ನೋಟ ಮಾತ್ರ ಪದಗಳಲ್ಲಿ ಹೇಳಲಾಗದು. ಕಣ್ಣಿಗೆ ಕಾಣುವಷ್ಟೂ ಪರ್ವತಗಳು, ಅವುಗಳಿಗೆ ಮುತ್ತಿಡುವ ಮೋಡಗಳೇ ಕಣ್ಣಿಗೆ ರಾಚುತ್ತವೆ.

ರಾಂಬೋಡಾ ಜಲಪಾತ

ಈ ಜಲಪಾತಕ್ಕೆ ಹೋಗುವ ದಾರಿ ಬಹಳ ವಿಶೇಷವಾಗಿದೆ. ಮೊದಲಿಗೆ ಒಂದು ಹೊಟೇಲ್‌ನ ಒಳನಡೆದು, ಲಿಫ್ಟ್‌ ಬಳಸಿ, ಬೇಸ್‌ಮೆಂಟ್‌ನ ಹೊರಬಂದು, ಅಲ್ಲಿರು ಒಂದು ಚಿಕ್ಕದಾರಿಯಲ್ಲಿ ಸಾಗಿದರೆ ಜಲಪಾತ ಕಾಣುತ್ತದೆ. ಆಹ್ಲಾದಕರ ಅನುಭವ. ಅಲ್ಲಿಯೇ ಮನಸಿನ ಜತೆಗೆ ಹೊಟ್ಟೆಯನ್ನೂ ತುಂಬಿಸಿಕೊಂಡು, ಹತ್ತಿರವೇ ಇದ್ದ ಮತ್ತೊಂದು ಜಲಪಾತ ನೋಡಿಕೊಂಡು ನುವಾರದ ಓಲ್ಡ್‌ ಪೋಸ್ಟ್‌ ಆಫಿಸ್‌ ಕಡೆಗೆ ಹೊರಟೆವು.

ನುವಾರದ ಓಲ್ಡ್‌ ಪೋಸ್ಟ್‌ ಆಫಿಸ್‌

ಇದು ಲಂಕಾದ ಅತ್ಯಂತ ಹಳೆಯ, ಇಂದಿಗೂ ಚಾಲ್ತಿಯಲ್ಲಿರುವ ಪೋಸ್ಟ್‌ ಆಫಿಸ್‌. 1894ರಲ್ಲಿ ನಿರ್ಮಾಣವಾದ ಬ್ರಿಟಿಷ್‌ ಶೈಲಿಯ ಕಟ್ಟಡ. ಅಲ್ಲಿಂದ ಹಾಗೇ ಬರಲು ಸಾಧ್ಯವೇ? ಅಲ್ಲಿಂದ ನಮ್ಮ ಮನೆಗೆ ಪೋಸ್ಟ್‌ ಕಾರ್ಡ್‌ನಲ್ಲಿ ಪ್ರಯಾಣದ ಅನುಭವವನ್ನು ಬರೆದು, ಸ್ಟ್ಯಾಂಪ್‌ ಹಚ್ಚಿ ಪೋಸ್ಟ್‌ ಬಾಕ್ಸ್‌ಗೆ ಹಾಕಿದೆ.

Untitled design (71)

ಅಂದು ರಾತ್ರಿಯೇ ಕೊಲಂಬೋಗೆ ರೈಲು ಇತ್ತು. ರಾತ್ರಿ ಊಟ ಮುಗಿಸಿ ರೈಲು ನಿಲ್ದಾಣಕ್ಕೆ ಹೋದೆವು. ರೈಲು ಇನ್ನೂ 3-4 ದಿನ ಸಂಚರಿಸುವುದಿಲ್ಲ, ಹವಾಮಾನ ಹದಗೆಟ್ಟಿದೆ, ರೈಲು ಸುರಕ್ಷಿತವಲ್ಲವೆಂದು ಶ್ರೀಲಂಕಾ ರೈಲ್ವೇ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ವಿಷಯ ತಿಳಿದು ಅಚ್ಚರಿಯಾಯಿತು.

ಮರುದಿನ ಸಂಜೆ ನಮಗೆ ಫ್ಲೈಟ್‌ ಇತ್ತು. ಹಾಗಾಗಿ ಸಂಜೆವರೆಗೂ ಕೊಲಂಬೋ ಸುತ್ತಾಡಿ ನಂತರ ವಿಮಾನ ಹತ್ತುವ ಯೋಚನೆ ನಮ್ಮದಾಗಿತ್ತು. ನುವಾರದಿಂದ ರಾತ್ರಿ ಬಸ್‌ ಇರುವುದಿಲ್ಲ. ಬೆಳಗ್ಗೆ ಹೊರಟರೆ 7-8 ತಾಸು ಬೇಕು ಎಂಬುದು ನಮಗೆ ತಿಳಿಯಿತು. ಕೊನೆಗೆ ನಮಗೆ ರಕ್ಷಕನಂತೆ ಬಂದದ್ದು, ಇಡೀ ದಿನ ನಮ್ಮನ್ನು ಅತೀ ತಾಳ್ಮೆಯಿಂದ ಸುತ್ತಿಸಿದ ಅದೇ ಭಾರತ ಮೂಲದ ಡ್ರೈವರ್. ಲಂಕಾದಲ್ಲಿ ಟ್ರಾಫಿಕ್‌ ನಿಯಮಗಳನ್ನು ಎಲ್ಲರೂ ಪಾಲಿಸುತ್ತಾರೆ. ಅದಲ್ಲದೆ ರಾತ್ರಿವೇಳೆ ಬಹಳ ಚೆಕ್‌ಪೋಸ್ಟ್‌ಗಳೂ ಇರುತ್ತವೆಂದು ತಿಳಿದಿದ್ದ ನಮಗೆ, ಟ್ಯಾಕ್ಸಿಯಲ್ಲೇ ಕೊಲಂಬೋ ತಲುಪುವುದು ಉತ್ತಮ ಅನ್ನಿಸಿ ಹೊರಟೆವು. ಬೆಳಗಿನ ಜಾವ ಕೊಲಂಬೋಗೆ ಸುರಕ್ಷಿತವಾಗಿ ತಲುಪಿಸಿದ ನಮ್ಮ ರಕ್ಷಕನಿಗೆ ಥ್ಯಾಂಕ್ಸ್‌ ಹೇಳಿ, ಹಾಸ್ಟೆಲ್‌ನ ಕೋಣೆಯಲ್ಲಿ ಬೆಚ್ಚಗೆ ಮಲಗಿದೆವು.

ಐದನೆಯ ದಿನ

ಗಂಗಾರಾಮಾಯ ಬೌದ್ಧ ದೇವಾಲಯ

ಬೆಳಗ್ಗೆ ಪ್ರಯಾಣ ಆರಂಭಿಸಿದ ನಾವು ಮೊದಲು ತಲುಪಿದ್ದು ಗಂಗಾರಾಮಾಯ ಎಂಬ ಬುದ್ಧನ ದೇವಾಲಯಕ್ಕೆ. ಇಲ್ಲಿಗೆ ಭಾರತದ ಅನೇಕ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರೂ ಭೇಟಿ ನೀಡಿರುತ್ತಾರೆ. ಇದನ್ನು ಕಣ್ತುಂಬಿಕೊಂಡು ಕೊಲಂಬೋದ ಸರೋವರ, ಅದರ ಪಕ್ಕದಲ್ಲಿದ್ದ ಬೌದ್ದ ದೇವಾಲಯ, ಸೆಂಟ್ರಲ್‌ ಶಾಪಿಂಗ್‌ ಮಾಲ್‌, ಕೊಲಂಬೋದಾ ಹಾಟ್‌ಸ್ಪಾಟ್‌ ʻಲೋಟಸ್‌ ಟವರ್‌ʼ ಸಹ ತಿರುಗಾಡಿ ನೋಡಿದೆವು.

ಅಲ್ಲಿಂದ ಏರ್‌ಪೋರ್ಟ್‌ಗೆ ಹೊರಟು ಶ್ರೀಲಂಕಾಕ್ಕೆ ಬಾಯ್‌ ಹೇಳಿ ಭಾರತಕ್ಕೆ ಬಂದು ತಲುಪಿದೆವು.

ಇದು ನನ್ನ ಮೊದಲ ಅಂತಾರಾಷ್ಟ್ರೀಯ ಪ್ರವಾಸವಾಗಿತ್ತು. ಮನಸಿಗೆ ಹತ್ತಿರವಾದ ಬಹಳಷ್ಟು ಪ್ರವಾಸಗಳಲ್ಲಿ ಇದು ಅಗ್ರಸ್ಥಾನದಲ್ಲಿದೆ. ಅಲ್ಲಿನ ಜನ-ಮನ, ಸಂಸ್ಕೃತಿ, ಪ್ರಕೃತಿ ಸುಂದರವಾಗಿದೆ. ಈ ಪ್ರವಾಸದಲ್ಲಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇವೆ. ಭಾಷೆ ಬಾರದವರ ಜತೆಗೂ ನಗು ಹಂಚಿಕೊಂಡಿದ್ದೇವೆ. ವೈವಿಧ್ಯಮಯ ತಿಂಡಿಗಳನ್ನು ಸವಿದಿದ್ದೇವೆ. ಬೆಟ್ಟ-ಗುಡ್ಡಗಳನ್ನು ಏರಿ ಇಳಿದಿದ್ದೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಯಾಣ ಮತ್ತು ಪ್ರವಾಸವನ್ನು ಆನಂದಿಸಿದ್ದೇವೆ.

ಮೊದಲು ಪ್ಲಾನ್ ಮಾಡಿ, ಜಾಗಗಳ ಪಟ್ಟಿ ನೋಡಿದ ನಮಗೆ, ಇಷ್ಟನ್ನು ನೋಡಬಹುದಾ? ಎಂಬ ಸಂದೇಹವಿತು. ಆದರೆ, ಅದಕ್ಕಿಂತ ಹೆಚ್ಚು ಸ್ಥಳಗಳನ್ನು ನೋಡಿ ಬಂದಿದ್ದೇವೆ. ಅದನ್ನು ನೆನಪಾಗಿಸಲು ಒಂದು ಪುಟ್ಟ ಬರಹವನ್ನು ಬರೆದಿದ್ದೇನೆ.