ವೀಸಾ ಉಚಿತ ಹಿಡನ್ ಚಾರ್ಜ್ ಖಚಿತ!
ಶ್ರೀಲಂಕಾ ಪ್ರವೇಶಿಸುವುದಕ್ಕೆ ಅನೇಕ ದೇಶಗಳಿಗೆ ವೀಸಾ ಫ್ರೀ ಇದೆ. ಇದರಲ್ಲಿ ಭಾರತ ಕೂಡ ಸೇರಿದೆ. ಆದರೆ, ಶ್ರೀಲಂಕಾ ಎಲೆಕ್ಟ್ರಾನಿಕ್ ಟ್ರಾವೆಲ್ ಅಥರೈಸೇಶನ್ ಜಾರಿಗೆ ತಂದಿದೆ. ಇದರ ಅಡಿಯಲ್ಲಿ 30 ದಿನಗಳಿಗೆ ಸುಮಾರು 2,000 ರೂಪಾಯಿ ಹಣವನ್ನು ಪಾವತಿಸಬೇಕು.
- ಗುಪ್ತಗಾಮಿನಿ
ನೀವು ಶಾಪಿಂಗ್ಗೆ ಹೊಗುತ್ತೀರಿ. ಅಲ್ಲಿ ನಿಮಗೊಂದು ಬಟ್ಟೆ ಇಷ್ಟ ಆಗುತ್ತದೆ. ಅದನ್ನು ಖರೀದಿ ಕೂಡ ಮಾಡುತ್ತೀರಿ. ಅದಕ್ಕೊಂದು ಬೆಲೆ ಕೂಡ ನಿಗದಿ ಆಗಿರುತ್ತದೆ. ಆದರೆ, ನೀವು ಖರೀದಿ ಮಾಡುವಾಗ ಹಿಡನ್ ಚಾರ್ಜ್ಗಳ ಬಗ್ಗೆ ಅವರು ವಿವರ ಹೇಳಿದಾಗ ನಿಮಗೆ ಸಿಟ್ಟು ಬಂದೇ ಬರುತ್ತದೆ ತಾನೇ? ಕೆಲ ದೇಶಗಳಿಗೆ ಎಂಟ್ರಿ ಕೊಡುವಾಗಲೂ ಹೀಗೆಯೇ ಆಗಬಹುದು ಎಚ್ಚರ.
ನೀವು ಪ್ರವಾಸ ಮಾಡಬೇಕು ಎಂದುಕೊಂಡಿರೋ ದೇಶ ‘ವೀಸಾ ಫ್ರೀ’ ಎಂದಾಗ ಒಂದು ನಿಟ್ಟುಸಿರು ಬರುತ್ತದೆ ಅಲ್ಲವೇ? ಏಕೆಂದರೆ ವೀಸಾಗೆ ಕೊಡೋ ಹಣವನ್ನು ನೀವು ಪ್ರವಾಸದ ಮೇಲೆ ಹಾಕಬಹುದು. ಆದರೆ, ವೀಸಾ ಫ್ರೀ ಎಂದ ಮಾತ್ರಕ್ಕೆ ನೀವು ಆ ದೇಶಕ್ಕೆ ಉಚಿತವಾಗಿ ಪ್ರವೇಶಿಸಬಹುದು ಎಂಬರ್ಥವಲ್ಲ. ಕೆಲ ದೇಶಗಳು ಪ್ರವಾಸಿಗರ ಬಳಿ ಬೇರೆಯದೇ ರೀತಿಯಲ್ಲಿ ಕಪ್ಪ ಕೇಳುತ್ತವೆ. ಅಂದರೆ ಪ್ರವಾಸಿ ತೆರಿಗೆ ವಿಧಿಸುತ್ತವೆ. ಹೀಗಾಗಿ, ಆ ರೀತಿಯ ವಿಚಾರ ತಿಳಿದುಕೊಳ್ಳುವುದು ಅಗತ್ಯ.
ಇದನ್ನೂ ಓದಿ: ಅನಾರೋಗ್ಯಕ್ಕೆ ಪ್ರವಾಸವೇ ಮದ್ದು!
ಅಮೆರಿಕ ಕೇಳುತ್ತೆ ಕಪ್ಪ!
ಅಮೆರಿಕಗೆ ನೀವು ವೀಸಾ ಪಡೆದು ಹೋಗುತ್ತಿದ್ದೀರಿ ಎಂದರೆ ಅದಕ್ಕೆ ಒಂದಷ್ಟು ಹಣ ಪಾವತಿ ಮಾಡಲೇಬೇಕು. ಆದರೆ, ವೀಸಾ ವೇವರ್ ಪ್ರೋಗ್ರಾಂ (VWP) ಅಡಿಯಲ್ಲಿ ನೀವು ಅಮೆರಿಕ ತೆರಳುತ್ತೀರಿ ಎಂದರೆ ಅದಕ್ಕೆ ಒಂದಷ್ಟು ಹಣ ನೀಡಬೇಕು. VWP ಅಡಿಯಲ್ಲಿ ಅಮೆರಿಕ ಪ್ರವೇಶಿಸುವರರು ‘ಎಲೆಕ್ಟ್ರಾನಿಕ್ ಸಿಸ್ಟಮ್ ಫಾರ್ ಟ್ರಾವೆಲ್ ಅಥರೈಸೇಶನ್’ ಮಾಡಿಸಲೇಬೇಕು. ಇದಕ್ಕೆ ಕೆಲವು ಸಾವಿರಗಳ ಬೆಲೆ ತೆರಬೇಕಾಗುತ್ತದೆ.
ಯುರೋಪ್ ದೇಶಗಳಿಗೂ ಇದೇ ವ್ಯವಸ್ಥೆ
ಇತ್ತೀಚಿನ ಬೆಳವಣಿಗೆಯ ಪ್ರಕಾರ, ಯುರೋಪ್ ರಾಷ್ಟ್ರಗಳು ‘ಯುರೋಪಿಯನ್ ಪ್ರಯಾಣ ಮಾಹಿತಿ ಮತ್ತು ಅಧಿಕಾರ ವ್ಯವಸ್ಥೆ’ (ETIAS) ಜಾರಿಗೆ ತರಲಿದೆ. ವೀಸಾ-ಮುಕ್ತ ದೇಶಗಳ ನಾಗರಿಕರು, ಅಂದರೆ ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ ಮುಂತಾದ ದೇಶಗಳ ನಾಗರಿಕರು, ಯುರೋಪಿಯನ್ ಯೂನಿಯನ್‌ನ 30 ದೇಶಗಳಿಗೆ ಪ್ರಯಾಣಿಸಲು ETIAS ಪಡೆಯಬೇಕು. ಗಮನಿಸಿ ಇದನ್ನು ಪಡೆಯಲು ಶುಲ್ಕ ಕೊಡಬೇಕಾಗುತ್ತದೆ.

ಶ್ರೀಲಂಕಾ ಏನೂ ಕಮ್ಮಿ ಇಲ್ಲ
ಶ್ರೀಲಂಕಾ ಪ್ರವೇಶಿಸುವುದಕ್ಕೆ ಅನೇಕ ದೇಶಗಳಿಗೆ ವೀಸಾ ಫ್ರೀ ಇದೆ. ಇದರಲ್ಲಿ ಭಾರತ ಕೂಡ ಸೇರಿದೆ. ಆದರೆ, ಶ್ರೀಲಂಕಾ ಎಲೆಕ್ಟ್ರಾನಿಕ್ ಟ್ರಾವೆಲ್ ಅಥರೈಸೇಶನ್ ಜಾರಿಗೆ ತಂದಿದೆ. ಇದರ ಅಡಿಯಲ್ಲಿ 30 ದಿನಗಳಿಗೆ ಸುಮಾರು 2,000 ರೂಪಾಯಿ ಹಣವನ್ನು ಪಾವತಿಸಬೇಕು.
ಇಂಡೋನೇಷ್ಯಾ ಎಂಟ್ರಿ ಟ್ಯಾಕ್ಸ್
ಬಾಲಿಗೆ ಭಾರತದವರು ವೀಸಾ ಫ್ರೀ ಆಗಿ ತೆರಳಬಹುದು. ಆದರೆ, ನೆನಪಿನಲ್ಲಿ ಇಡಿ, ನೀವು ಬಾಲಿಗೆ ತೆರಳಬೇಕು ಎಂದರೆ 816 ರೂಪಾಯಿ ಪಾವತಿಸಬೇಕು. ಆನ್ಲೈನ್ ಮೂಲಕ ಅಥವಾ ಏರ್ಪೋರ್ಟ್ನಲ್ಲಿ ನೀವು ಈ ಫೀ ಕೊಡಬೇಕು. ಆದರೆ, ಈ ಹಣ ಪಾವತಿಸೋದು ಕಡ್ಡಾಯ. ಥೈಲ್ಯಾಂಡ್ ಕೂಡ ಇದೇ ರೀತಿಯ ಯೋಜನೆ ಜಾರಿ ತರುತ್ತಿದೆ.
ಡೊನೇಷನ್ ಕೇಳತ್ತೆ ಭೂತಾನ್
ಭಾರತೀಯರ ಫೇವರಿಟ್ ಡೆಸ್ಟಿನೇಷನ್ಗಳಲ್ಲಿ ಭೂತಾನ್ ಕೂಡ ಒಂದು. ಆದರೆ, ಇದು ಬಜೆಟ್ ಫ್ರೆಂಡ್ಲಿ ಅಲ್ಲ. ಏಕೆಂದರೆ ಭೂತಾನ್ಗ ತೆರಳೋ ಭಾರತ, ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್ ದೇಶದವರು ಪ್ರತಿ ರಾತ್ರಿಗೆ 1200 ರೂಪಾಯಿ ಪಾವತಿಸಬೇಕು. ಸುಸ್ಥಿರ ಅಭಿವೃದ್ಧಿ ಶುಲ್ಕ ಎಂದು ಈ ಶುಲ್ಕಕ್ಕೆ ಹೆಸರಿಡಲಾಗಿದೆ.
ಡಾಲರಲ್ಲಿ ಕೇಳುತ್ತೆ ಕೀನ್ಯಾ
ಕೀನ್ಯಾ ಪ್ರವಾಸ ಮಾಡಲು ಎಲೆಕ್ಟ್ರಾನಿಕ್ ಟ್ರಾವೆಲ್ ಅಥರೈಸೇಶನ್ ಬೇಕು. ಇದಕ್ಕೆ ನೀವು 30 ಡಾಲರ್ ಪಾವತಿಸಬೇಕು. ಅಂದರೆ ಸರಿ ಸುಮಾರು ಎರಡೂವರೆ ಸಾವಿರ ರೂಪಾಯಿ. ಇದನ್ನು 2024ರಲ್ಲಿ ಜಾರಿಗೆ ತರಲಾಗಿದೆ.