ಅಮೆರಿಕದಲ್ಲಿ ಅತಿದೊಡ್ಡ ಹಿಂದೂ ದೇವಾಲಯ!
ಅಕ್ಷರಧಾಮ ಅಂದರೆ ʻದೇವರ ದೈವಿಕ ವಾಸಸ್ಥಾನʼ. BAPS ಎಂದರೆ ʻಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆʼಯ ಸಂಕ್ಷಿಪ್ತ ರೂಪ. ಇದು ಪಶ್ಚಿಮ ಗೋಳಾರ್ಧದಲ್ಲಿನ ಅತಿದೊಡ್ಡ ಹಿಂದೂ ಮಂದಿರ. ವಿಶ್ವದ ಮೂರನೆಯ ಅತಿದೊಡ್ಡ ಸ್ವಾಮಿನಾರಾಯಣ ದೇವಾಲಯವಾಗಿದೆ. ಈ ಅಕ್ಷರಧಾಮ ದೇವಾಲಯವು ಇಲ್ಲಿ ಹಿಂದೂ ತೀರ್ಥಯಾತ್ರಾ ಸ್ಥಳವಾಗಿ ವಿಕಸನಗೊಳ್ಳುತ್ತಿದೆ.
- ವೀಣಾ ಭಟ್
ನಾನು ಗುಜರಾತಿಗೆ ಪ್ರವಾಸ ಹೋಗಿದ್ದಾಗ ಅಲ್ಲಿನ ಸ್ವಾಮಿನಾರಾಯಣ ದೇವಾಲಯಗಳಿಗೆ ಭೇಟಿ ನೀಡಿದ್ದೆ. ಈ ದೇವಾಲಯಗಳ ವಾಸ್ತುಶಿಲ್ಪ ನೋಡಿ ಬೆರಗಾಗಿದ್ದೆ. ಅಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಸ್ವಾಮಿನಾರಾಯಣ ದೇವಾಲಯಗಳು ಪ್ರಾಚೀನ ಭಾರತೀಯ ವಾಸ್ತುಶಿಲ್ಪದ ಭವ್ಯತೆಯನ್ನು ಪರಿಚಯಿಸುತ್ತಿವೆ. ಇದು ಭಗವಾನ್ ಸ್ವಾಮಿನಾರಾಯಣ ಅವರ ಬೋಧನೆಗಳನ್ನು ಅನುಸರಿಸುವ ಜಾಗತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಹಿಂದೂ ಸಂಘಟನೆಯ ಕಾರ್ಯ.
ಇದನ್ನೂ ಓದಿ:ಅಚಲೇಶ್ವರ ದೇವಾಲಯ ವಿಜ್ಞಾನಲೋಕಕ್ಕೆ ಸವಾಲು
ಅಮೆರಿಕದಲ್ಲಿ ಅಕ್ಷರಧಾಮ
ಈ ಸಂಘಟನೆಯ ದೇವಾಲಯಗಳು ನಮ್ಮ ದೇಶದಲ್ಲಿ ಸಾವಿರಕ್ಕೂ ಹೆಚ್ಚಿವೆ. ಅಮೆರಿಕ, ಇಂಗ್ಲೆಂಡ್, ಆಫ್ರಿಕಾ ಹೀಗೆ ವಿಶ್ವದಾದ್ಯಂತ ಈ ದೇವಾಲಯಗಳು ಧಾರ್ಮಿಕತೆ ಮತ್ತು ಶಾಂತಿಯ ಸಂದೇಶವನ್ನು ಹರಡುತ್ತಿವೆ. ಇದೇ ರೀತಿಯ ದೇವಾಲಯ ಅಮೆರಿಕದ ನ್ಯೂಜೆರ್ಸಿಯಲ್ಲಿ ಈಗಾಗಲೇ ಪ್ರಸಿದ್ಧಿಗೊಂಡಿದೆ. ಅಮೆರಿಕದಲ್ಲಿ 500ಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ಇತ್ತೀಚೆಗೆ ಪೂರ್ಣಗೊಂಡ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿನ BAPS ಸ್ವಾಮಿನಾರಾಯಣ ಅಕ್ಷರಧಾಮವು 2015-2023ರ ನಡುವೆ ಸ್ವಾಮಿನಾರಾಯಣ ಸಂಸ್ಥೆಯಿಂದ ನಿರ್ಮಿತ ದೊಡ್ಡ ದೇವಾಲಯ. ಇದು ಸುಮಾರು 183 - 185 ಎಕರೆಯಷ್ಟು ವಿಸ್ತಾರವಾಗಿ ಮತ್ತು ಭವ್ಯವಾಗಿದೆ.

ದೇಣಿಗೆಯಿಂದ ದೇವಾಲಯಗಳು
ಅಕ್ಷರಧಾಮ ಅಂದರೆ ʻದೇವರ ದೈವಿಕ ವಾಸಸ್ಥಾನʼ. BAPS ಎಂದರೆ ʻಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆʼಯ ಸಂಕ್ಷಿಪ್ತ ರೂಪ. ಇದು ಪಶ್ಚಿಮ ಗೋಳಾರ್ಧದಲ್ಲಿನ ಅತಿದೊಡ್ಡ ಹಿಂದೂ ಮಂದಿರ. ವಿಶ್ವದ ಮೂರನೆಯ ಅತಿದೊಡ್ಡ ಸ್ವಾಮಿನಾರಾಯಣ ದೇವಾಲಯವಾಗಿದೆ. ಈ ಅಕ್ಷರಧಾಮ ದೇವಾಲಯವು ಇಲ್ಲಿ ಹಿಂದೂ ತೀರ್ಥಯಾತ್ರಾ ಸ್ಥಳವಾಗಿ ವಿಕಸನಗೊಳ್ಳುತ್ತಿದೆ. ಈ ಸಂಘಟನೆಯ ಐದನೆಯ ಮುಖ್ಯಸ್ಥರಾಗಿದ್ದ ದಿವಂಗತ ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಪ್ರಪಂಚದಾದ್ಯಂತ 1300ಕ್ಕೂ ಹೆಚ್ಚುಸ್ವಾಮಿನಾರಾಯಣ ಮಂದಿರಗಳನ್ನು ನಿರ್ಮಿಸಿದ್ದಾರೆ. ಇಂಥ ಸುಂದರ ದೇವಾಲಯಗಳನ್ನು ನಿರ್ಮಿಸುವ ಖರ್ಚನ್ನು ಪೂರ್ತಿಯಾಗಿ ಇದು ತನ್ನ ಅನುನಾಯಿಗಳ ದೇಣಿಗೆಯಿಂದಲೇ ನಿರ್ವಹಿಸುತ್ತಿದೆ. ಇಂಥ ಧರ್ಮನಿಷ್ಠ ಅನುನಾಯಿಗಳು ದೇವಾಲಯಗಳು, ಸಾಮಾಜಿಕ ಕಾರಣಗಳು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗೆ ದೊಡ್ಡ ಮೊತ್ತವನ್ನು ಉದಾರವಾಗಿ ನೀಡುತ್ತಾರೆ. ದೇವಾಲಯಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಪರಿಹಾರ ಪ್ರಯತ್ನಗಳಂಥ ಪ್ರಮುಖ ಯೋಜನೆಗಳಿಗೆ ನಿಧಿಗಳು ಬೆಂಬಲ ನೀಡುತ್ತವೆ. ಇದು ಅನುಯಾಯಿಗಳ ಬದ್ಧತೆಯಿಂದಲೇ ನಡೆಯುತ್ತಿರುವ ಸಂಸ್ಥೆ.
ದೇವಾಲಯದ ವಾಸ್ತುಶಿಲ್ಪ
ಇದು ಒಂದು ಮುಖ್ಯ ದೇವಾಲಯ ಮತ್ತು 12 ಉಪ-ದೇವಾಲಯಗಳನ್ನು ಒಳಗೊಂಡಿದೆ. ಇವಲ್ಲದೆ ದೇವಾಲಯದ ಸರ್ವೋಚ್ಚ ದೇವರು ಭಗವಾನ್ ಸ್ವಾಮಿನಾರಾಯಣ ಅವರ 49 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಹೊಂದಿರುವ ಕ್ಯಾನೊಪಿ ಪ್ಲಾಜಾ, ಸ್ವಾಗತ ಕೇಂದ್ರ, ಸಸ್ಯಾಹಾರಿ ಕೆಫೆ, ಮೆಟ್ಟಿಲುಗಳಿರುವ ಕಲ್ಯಾಣಿ, ಅಂಗಣಗಳು, ಕಾರಂಜಿ ಮತ್ತು ಉದ್ಯಾನಗಳಿವೆ. ಇಲ್ಲಿನ ಸುಮಾರು ಹತ್ತು ಸಾವಿರ ಕೆತ್ತನೆಗಳು ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ.

ಹಿಂದೂ ಧರ್ಮಗ್ರಂಥಗಳಿಗೆ ಅನುಗುಣವಾಗಿ
ಈ ಅಕ್ಷರಧಾಮವು ಸ್ವಾಮಿನಾರಾಯಣ ಸಂಸ್ಥೆಯಿಂದ ನಿರ್ಮಿಸಲಾದ ಮೂರು ಅಕ್ಷರಧಾಮ ಮಂದಿರಗಳಲ್ಲಿ ಒಂದು. ಇನ್ನೆರಡು ಭಾರತದ ನವದೆಹಲಿ ಮತ್ತು ಗುಜರಾತಿನ ಗಾಂಧಿನಗರದಲ್ಲಿವೆ. ಅಕ್ಷರಧಾಮ ಮಂದಿರವನ್ನು ಪ್ರಾಚೀನ ಹಿಂದೂ ಧರ್ಮಗ್ರಂಥಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿರುವುದು ವಿಶೇಷ. ಅಡಿಪಾಯವು 13 ಹಂತದ ಸುಣ್ಣದ ಕಲ್ಲಿನಿಂದ ಮಾಡಲ್ಪಟ್ಟಿದೆ. ಇದಕ್ಕೆ ಜ್ಜಾನ ಸ್ತಂಭ ಎಂದೂ ಕರೆಯಲಾಗುತ್ತದೆ. ವಿವಿಧ ಉದ್ದೇಶಗಳಿಗಾಗಿ ದೇವಾಲಯದ ಆವರಣದಲ್ಲಿ ವಿವಿಧ ರೀತಿಯ ಕಲ್ಲುಗಳನ್ನು ಬಳಸಲಾಗಿದೆ. ಈ ಮಂದಿರದ ನಿರ್ಮಾಣಕ್ಕೆ ಗ್ರೀಸ್, ಟರ್ಕಿ ಮತ್ತು ಇಟಲಿಯ ಅಮೃತಶಿಲೆ, ರಾಜಸ್ಥಾನದ ಗುಲಾಬಿ ಮರಳುಗಲ್ಲು, ಗ್ರಾನೈಟ್ ಮತ್ತು ಬಲ್ಗೇರಿಯಾದ ಸುಣ್ಣದ ಕಲ್ಲುಗಳನ್ನು ತರಿಸಲಾಗಿದೆ. ಗ್ರಾನೈಟ್‌ನ ಬಾಳಿಕೆ, ಸಹಿಷ್ಣುತೆ ಮತ್ತು ವೈವಿಧ್ಯಮಯ ಬಣ್ಣಗಳ ಕಾರಣದಿಂದಾಗಿ ಇದನ್ನು ಕ್ಯಾಂಪಸ್‌ನ ವಾಕಿಂಗ್ ಪಥಗಳಾದ ನೀಲಕಂಠ ಪ್ಲಾಜಾ, ಪರಿಕ್ರಮದ ಜಾಗದಲ್ಲಿ ಬಳಸಲಾಗಿದೆ.
ಮಂದಿರದೊಳಗೆ 13 ಮಂದಿರಗಳು
ಈ ಮಂದಿರವು ವಿವಿಧ ಹಿಂದೂ ದೇವತೆಗಳಿಗೆ ಮೀಸಲಾಗಿರುವ 13 ದೇವಾಲಯಗಳನ್ನು ಹೊಂದಿದೆ. ಕೇಂದ್ರ ದೇವಾಲಯ ಸ್ವಾಮಿನಾರಾಯಣ ಮತ್ತು ಗುಣತೀತನಂದ ಸ್ವಾಮಿಗಳಿಗೆ ಸಮರ್ಪಿತವಾಗಿದೆ. ಸ್ವಾಮಿನಾರಾಯಣನ ಪವಿತ್ರ ಚಿತ್ರವು 15.5 ಅಡಿ ಎತ್ತರವಾಗಿದ್ದು, ಪಂಚಧಾತುಗಳಿಂದ ರಚಿಸಲಾಗಿದೆ. ಇದರ ಸಿಂಹಾಸನ ಹಂಸಗಳು ಮತ್ತು ಆನೆಗಳನ್ನು ಒಳಗೊಂಡಂತೆ ಸಂಕೀರ್ಣ ವಿನ್ಯಾಸಗಳಿಂದ ಅಲಂಕೃತವಾಗಿದೆ. ಇತರ 12 ದೇವಾಲಯಗಳು ರಾಧಾ-ಕೃಷ್ಣ, ವೆಂಕಟೇಶ್ವರ-ಪದ್ಮಾವತಿ, ರಾಮ- ಸೀತಾ, ಲಕ್ಷ್ಮಣ, ಹನುಮಾನ್, ಶಿವ-ಪಾರ್ವತಿ, ಗಣೇಶ ಮತ್ತು ಕಾರ್ತಿಕೇಯ ಸೇರಿದಂತೆ ಪವಿತ್ರ ಹಿಂದೂ ದೇವತೆಗಳನ್ನು ಹಾಗೂ ಸ್ವಾಮಿನಾರಾಯಣನ ಆಧ್ಯಾತ್ಮಿಕ ಉತ್ತರಾಧಿಕಾರಿಗಳನ್ನು ಪ್ರದರ್ಶಿಸುತ್ತವೆ.
ನಾಲ್ಕು ದೇವಾಲಯಗಳಲ್ಲಿ
ನಾಲ್ಕು ದೇವಾಲಯಗಳಲ್ಲಿ ಸ್ವಾಮಿನಾರಾಯಣನ ಜೀವನದ ಪ್ರಮುಖ ಘಟನೆಗಳ ಚಿತ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ, ಘನಶ್ಯಾಮ ತನ್ನ ಹೆತ್ತವರು ಮತ್ತು ಸ್ನೇಹಿತರೊಂದಿಗೆ, ನೀಲಕಂಠ ವರ್ಣಿ ಹಿಮಾಲಯದಲ್ಲಿ ಕಠಿಣ ಪರಿಶ್ರಮದಲ್ಲಿ ತೊಡಗಿರುವುದು, ಸಹಜಾನಂದ ಸ್ವಾಮಿ ರಮಾನಂದ ಸ್ವಾಮಿಯಿಂದ ವರ ಬೇಡುತ್ತಿರುವುದು ಮತ್ತು ಸ್ವಾಮಿನಾರಾಯಣನು ಗುಣತೀತನಂದ ಸ್ವಾಮಿಗೆ ತಿಲಕವನ್ನು ಹಚ್ಚುವುದು, ಅವರನ್ನು ತನ್ನ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿ ಸಂಕೇತಿಸುವುದು ಸೇರಿವೆ.

ನೀಲಕಂಠ ಪ್ಲಾಜಾ
ಅಕ್ಷರಧಾಮ ಆವರಣದ ಪ್ರವೇಶ ನೀಲಕಂಠ ಪ್ಲಾಜಾದಿಂದ ಪ್ರಾರಂಭವಾಗುತ್ತದೆ. ಇದು ನೀಲಕಂಠ ವರ್ಣಿಯ 49 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಹೊಂದಿದೆ. ಈ ಎತ್ತರವು ಭೂಮಿಯ ಮೇಲೆ ಸ್ವಾಮಿನಾರಾಯಣನ 49 ವರ್ಷಗಳನ್ನು ಸ್ಮರಿಸುತ್ತದೆ. ನೀಲಕಂಠ ವರ್ಣಿ ಹನ್ನೊಂದನೆಯ ವಯಸ್ಸಿನಲ್ಲಿ ಭಾರತಾದ್ಯಂತ ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸಿದರು. ಇವರು 7 ವರ್ಷಗಳ ಕಾಲ ಪಯಣಿಸಿದರು. ಹಿಮಾಲಯದಲ್ಲಿ ಅವರ ಪ್ರಯಾಣದ ಸಮಯದಲ್ಲಿ, ಅವರು ಯೋಗದಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಆರು ತಿಂಗಳ ಕಾಲ ಕಠಿಣ ತಪಸ್ಸನ್ನು ಅಭ್ಯಾಸಿಸಿದರು. ಈ ಪ್ರದೇಶದಲ್ಲಿ ಹತ್ತು ಗುಲಾಬಿ ಕಲ್ಲಿನ ದೇವಾಲಯಗಳು, ನೀಲಕಂಠನ ಏಳು ವರ್ಷಗಳ ಪ್ರಯಾಣವನ್ನು ವಿವರಿಸುವ ನಕ್ಷೆ ಮತ್ತು ಅವರ ವ್ಯಕ್ತಿತ್ವ, ನಂಬಿಕೆ, ಸೇವೆ, ಕ್ಷಮಾಗುಣ, ಕರುಣೆಯ ಬೋಧನೆಗಳ ಅಂಶಗಳನ್ನು ಎತ್ತಿ ತೋರಿಸುವ ಹದಿನಾಲ್ಕು ಕಲ್ಲಿನ ಫಲಕಗಳು ಸೇರಿವೆ.

ಬ್ರಹ್ಮ ಕುಂಡ
ಬ್ರಹ್ಮ ಕುಂಡ ಎಂಬುದು ಇಲ್ಲಿನ ಸಾಂಪ್ರದಾಯಿಕ ಮೆಟ್ಟಿಲುಬಾವಿ. ಇದು ಭಾರತದ 108 ಪವಿತ್ರ ನದಿಗಳು ಮತ್ತು ಯುಎಸ್‌ಎ ಸೇರಿದಂತೆ 300ಕ್ಕೂ ಹೆಚ್ಚು ಮೂಲಗಳಿಂದ ತಂದ ಪವಿತ್ರ ನೀರನ್ನು ಹೊಂದಿದೆ. ಕೊಳದ ನಾಲ್ಕು ಬದಿಗಳಲ್ಲಿ ಗಂಗಾ, ಯಮುನಾ, ಸರಸ್ವತಿ ಮತ್ತು ಸರಯು ಮೂರ್ತಿಗಳಿವೆ. ಬ್ರಹ್ಮ ಕುಂಡದ ಸುತ್ತಲೂ 48 ಕಲ್ಲಿನ ಶಿಖರಗಳು ಮತ್ತು 24 ದೇವಾಲಯಗಳಿವೆ.
ಪ್ರಶಾಂತತೆಯ ಸ್ಥಳ - ಹಳೆಯ ಚಿಕ್ಕ ಮಂದಿರ
ಇದು ಶ್ರೀ ಸ್ವಾಮಿನಾರಾಯಣ ಮಂದಿರ ಅಕ್ಷರಧಾಮ ಕ್ಯಾಂಪಸ್‌ನಲ್ಲಿರುವ ಹಳೆಯ ಮತ್ತು ಚಿಕ್ಕ ಮಂದಿರ. ಇದನ್ನು 2010 -2014ರ ನಡುವೆ ನಿರ್ಮಿಸಲಾಗಿದೆ. ಈ ಮಂದಿರವನ್ನು ನಗರಾಡಿ ಶೈಲಿಯಲ್ಲಿ 68,000 ಘನ ಅಡಿ ಇಟಾಲಿಯನ್ ಕ್ಯಾರಾರಾ ಅಮೃತಶಿಲೆಯನ್ನು ಬಳಸಿ ನಿರ್ಮಿಸಿದ್ದಾರೆ. ಪ್ರಮುಖ್ ಸ್ವಾಮಿ ಮಹಾರಾಜರ ಸಮ್ಮುಖದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ನಂತರ, ಆಗಸ್ಟ್ 10, 2014ರಂದು ಮಂದಿರವನ್ನು ಅಧಿಕೃತವಾಗಿ ಸಾರ್ವಜನಿಕರಿಗೆ ತೆರೆಯಲಾಯಿತು. ನಂತರ ಅದೇ ಜಾಗದಲ್ಲಿ ದೊಡ್ಡದಾಗಿ ಅಕ್ಷರಧಾಮವನ್ನು ನಿರ್ಮಿಸಲಾಯಿತು. ಇದೊಂದು ಸುಂದರ ಮತ್ತು ಶಾಂತಿಯುತ ಸ್ಥಳ.
ಮಾಹಿತಿಗಾಗಿ
ಈ ದೇವಸ್ಥಾನದಲ್ಲಿ ಗೈಡೆಡ್ ಟೂರ್ ಸೌಲಭ್ಯವಿದ್ದು, ಸುಮಾರು 1-2 ಗಂಟೆಗಳಿರುತ್ತದೆ.
ಗೈಡ್ ದೇವಾಲಯದ ನಿರ್ಮಾಣ ಇತಿಹಾಸವನ್ನೂ ಸೇರಿ ಪ್ರಾಮುಖ್ಯತೆ, ವಾಸತುಶಿಲ್ಪವನ್ನು ವಿವರಿಸುತ್ತಾರೆ. ಪ್ರವಾಸದ ನಂತರನೀವು ರೆಸ್ಟೋರೆಂಟ್‌ನಲ್ಲಿ ಅಧಿಕೃತ ಭಾರತೀಯ ಆಹಾರವನ್ನು ಆನಂದಿಸಬಹುದು.
ಅಲ್ಲೇ ಅಂಗಡಿಗಳಿದ್ದು ಮೊಮೆಂಟೋಗಳನ್ನು ಖರೀದಿಸಬಹುದು.
ರಾತ್ರಿ ದೀಪಗಳ ಬೆಳಕಿನಲ್ಲಿ ಮತ್ತು ಸೂರ್ಯಾಸ್ತದ ಹೊಂಬೆಳಕಿನಲ್ಲಿ ಮಂದಿರದ ಸೌಂದರ್ಯ ದ್ವಿಗುಣಗೊಳ್ಳುತ್ತದೆ.
ನಿಮಗಿದು ತಿಳಿದಿರಲಿ:
ವಸ್ತ್ರ ಸಂಹಿತೆ ಜಾರಿಯಲ್ಲಿದ್ದು, ಶಾರ್ಟ್ಸ್ ಅಥವಾ ತೋಳಿಲ್ಲದ ಟಾಪ್ಸ್ ಧರಿಸಬಾರದು.
ಮುಖ್ಯ ದೇವಾಲಯದ ಒಳಗೆ ಛಾಯಾಗ್ರಹಣಕ್ಕೆ ಅವಕಾಶವಿಲ್ಲ.
ವಾರಾಂತ್ಯದಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ.
ವಾರಾಂತ್ಯದಲ್ಲಿ ಗೈಡೆಡ್ ಟೂರ್ ಲಭ್ಯವಿರುವುದಿಲ್ಲ.