ಇದು ಗಮ್‌ವಾಲಾಗಳು ಕಟ್ಟುವ ಕಮಾಲ್ ಮಹಲ್
ಈ ಐತಿಹಾಸಿಕ ಕಟ್ಟಡವನ್ನು ಶುಚಿಗೊಳಿಸಿ ಎಂಬ ವಾದ ಒಂದೆಡೆಯಾದರೆ, ಈ ಗಮ್‌ಗಳನ್ನು ಕಿತ್ತುಹಾಕಿದರೆ ಅವುಗಳ ಹಿಂದೆ ಅಡಗಿರುವ ಒಟ್ಟಾರೆ ಇತಿಹಾಸ ಹಾಗೂ ಭಾವನಾತ್ಮಕತೆಯನ್ನು ಹೊಸಕಿಹಾಕಿದಂತೆ ಎಂಬ ವಾದ ಮತ್ತೊಂದು ಕಡೆ. ಪ್ರಪಂಚದಾದ್ಯಂತ ಅನೇಕ ಪ್ರವಾಸಿಗರಿಗೆ ಈ ಗಮ್ ವಾಲ್ ಸ್ಮರಣೀಯ ಸ್ಥಳ. ಇದರೊಂದಿಗೆ ಅವರ ಭಾವನಾತ್ಮಕತೆ ಬೆಸೆದುಕೊಂಡಿದೆ. ಇದರ ಮುಂದೆ ನಿಂತು ಹುಡುಗ-ಹುಡುಗಿ ಮದುವೆ ಪ್ರಸ್ತಾವನೆ ಕೂಡ ಮಾಡಿದ್ದಾರೆ.
- ಧಾರಿಣಿ ಮಾಯಾ
ಲೇಖಕಿ, ರಂಗಕರ್ಮಿ ಹಾಗೂ ಪ್ರವಾಸಿ
ನಾವೆಲ್ಲಾ ಸಣ್ಣವರಿದ್ದಾಗ ಬಬಲ್ ಗಮ್ ಅನ್ನು ಚೆನ್ನಾಗಿ ಅಗಿದ ಮೇಲೆ ಶಾಲೆಯಲ್ಲಿ ಬೆಂಚಿನಡಿ, ಬಸ್‌ನ ಸೀಟಿನಡಿ ಹೀಗೆ ಎಲ್ಲೆಂದರಲ್ಲಿ ಅಂಟಿಸುತ್ತಿದ್ದುದ್ದು ಗೊತ್ತೇ ಇದೆ. ಆದರೆ, ಈ ಪುಟ್ಟ ಬಬಲ್ ಗಮ್ ಒಂದು ಗೋಡೆ ತುಂಬೆಲ್ಲಾ ರಾರಾಜಿಸುತ್ತ ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿದೆ ಎಂಬುದು ನಿಮಗೆ ಗೊತ್ತೇ?
ಅಮೆರಿಕದ ಸ್ಟೇಟ್ ಆಫ್ ವಾಷಿಂಗ್ಟನ್‌ನ ಸಿಯಾಟಲ್ ನಗರದ ಪೈಕ್ ಮಾರ್ಕೆಟ್‌ನ ಬದಿಯಲ್ಲಿದೆ ‘ಗಮ್ ವಾಲ್ʼ. ಅರೆ ಇದೇನಿದು ಗಮ್ ವಾಲ್ ಎಂದು ಆಶ್ಚರ್ಯವಾಯಿತೇ? ಹೌದು, ಈ ಗೋಡೆಯನ್ನು ನೋಡಿದಾಗ ಮೊದಲಿಗೆ ನನಗೂ ಸೋಜಿಗವೆನಿಸಿತ್ತು. ನನ್ನಂತೆ ಇನ್ನೂ ಅನೇಕ ಪ್ರವಾಸಿಗರು ಇಲ್ಲಿ ನೆರೆದಿದ್ದರು. ಕೆಲವರು ತಾವೂ ಬಬ್ಬಲ್ ಗಮ್ ಅಗಿದು ಚಿತ್ತಾಕಾರವಾಗಿ ಗೋಡೆಗೆ ಅಂಟಿಸುತ್ತಿದ್ದರು. ಮತ್ತೂ ಕೆಲವರು ಈ ಗೋಡೆಯ ಮುಂದೆ ನಿಂತು ಫೊಟೋ ತೆಗೆಸಿಕೊಳ್ಳುತ್ತಿದ್ದರು.
ಇದನ್ನೂ ಓದಿ: ಅಮೆರಿಕಾ ಅಮೆರಿಕಾ
ಗಮ್ ವಾಲ್ ಒಂದು ವಿಚಿತ್ರ ಆಕರ್ಷಣೀಯ ಸ್ಥಳ. ಪ್ರವಾಸಿಗರನ್ನು ಆಕರ್ಷಿಸಿ ಅಂತಾರಾಷ್ಟ್ರೀಯ ಆಕರ್ಷಣೆಯಾಗಿ ಅಸಾಂಪ್ರದಾಯಿಕ ಕಲಾ ಸ್ಥಾಪನೆಯಾಗಿದೆ. 15 ಅಡಿ ಎತ್ತರ ಹಾಗೂ 50 ಅಡಿ ಉದ್ದದ ಈ ಗೋಡೆಯ ತುಂಬಾ ಬಣ್ಣಬಣ್ಣದ ಬಬಲ್ ಗಮ್‌ಗಳು ಮೆತ್ತಿಕೊಂಡಿವೆ. ಮುದ್ದೆಯಂತೆ, ಲಂಬವಾಗಿ, ವೃತ್ತಾಕಾರವಾಗಿ ಹೀಗೆ ವೈವಿಧ್ಯಮಯ ವಿನ್ಯಾಸಗಳಿಂದ ಅಲಂಕೃತವಾಗಿದೆ. ಇದೆಲ್ಲಾ ಯಾಕೆ, ಏನು ಎಂಬೆಲ್ಲಾ ನನ್ನ ಕುತೂಹಲದ ಪ್ರಶ್ನೆಗಳಿಗೆ ಒಂದಷ್ಟು ವಿವರಗಳೂ ಸಿಕ್ಕವು.

ಗಮ್ ವಾಲ್‌ನ ಹಿನ್ನೆಲೆ
1990ರಲ್ಲಿ ಜನ ಸಿನಿಮಾ ಟಿಕೆಟ್ ಕೊಂಡುಕೊಳ್ಳುವ ಸಲುವಾಗಿ ಮಾರ್ಕೆಟ್‌ನ ಥಿಯೇಟರ್‌ನಲ್ಲಿ ಸಾಲಾಗಟ್ಟಿ ನಿಲ್ಲುತ್ತಿದ್ದರು. ಹೀಗೆ ನಿಂತಾಗ ತಮ್ಮ ಬಾಯಲ್ಲಿ ಜಗಿಯುತ್ತಿದ್ದ ಬಬಲ್ ಗಮ್ ಅನ್ನು ಥಿಯೇಟರ್‌ನ ಗೋಡೆಗೆ ಅಂಟಿಸಲು ಶುರುಮಾಡಿದರು. ಈ ಚಟ ಒಬ್ಬರಿಂದೊಬ್ಬರಿಗೆ ಹಬ್ಬಿತು. ಸಾಲಾಗಿ ಅಲ್ಲಿ ನಿಲ್ಲುತ್ತಿದ್ದ ಪ್ರತಿಯೊಬ್ಬರೂ ತಾವು ಅಗಿದ ಬಬಲ್ ಗಮ್ ಅನ್ನು ಗೋಡೆಗೆ ಅಂಟಿಸುತ್ತಾ ಹೋದರು. ಇದು ಎಷ್ಟರ ಮಟ್ಟಿಗೆ ಆಯಿತೆಂದರೆ, ಆ ಥಿಯೇಟರಿನ ಇಟ್ಟಿಗೆ ಗೋಡೆ ತುಂಬೆಲ್ಲಾ ಬಬಲ್‌ಗಮ್‌ಮಯವಾಯಿತು. ಇದು ಆಕರ್ಷಣೀಯವೆನಿಸಿದರೂ ಯಾರೋ ಅಗಿದು ಅಂಟಿಸಿದ ಗಮ್‌ಗಳನ್ನು ಮುಟ್ಟಿ ನೋಡುವ ಸಾಹಸಕ್ಕೆ ಮಾತ್ರ ನಾ ಹೋಗಲಿಲ್ಲ. ಈ ಬಬಲ್ ಗಮ್ ಗೋಡೆಯನ್ನು ನೋಡಲು ಹೋಗುವ ಪ್ರವಾಸಿಗರು ಗಮ್‌ಗಳನ್ನು ಎಳೆದು ತಮಗೆ ಬೇಕಾದ ಆಕಾರ ಮಾಡಿ, ತಮ್ಮ ಹೆಸರು ಮೂಡಿಸುವುದು, ಆಕೃತಿಗಳನ್ನು ಮೂಡಿಸುವುದಲ್ಲದೇ ಅದನ್ನು ಬಲವಂತವಾಗಿ ಕಿತ್ತು ತಮ್ಮ ಬಾಯೊಳಗೆ ಹಾಕಿಕೊಂಡು ಜಗಿದು ಫೊಟೋಗಾಗಿ ಫೋಸ್ ಕೊಡುವ ಹುಚ್ಚುಮಂದಿಯೂ ಇದ್ದಾರೆಂದರೆ ನಂಬಲೇಬೇಕು.
ಗಮ್ ವಾಲ್‌ಗೂ ವಿವಾದ
ಈ ಗಮ್ ವಾಲ್‌ಗೆ ತನ್ನದೇ ಆದ ವಿವಾದಗಳೂ ಇವೆ. ಈ ಐತಿಹಾಸಿಕ ಕಟ್ಟಡವನ್ನು ಶುಚಿಗೊಳಿಸಿ ಎಂಬ ವಾದ ಒಂದೆಡೆಯಾದರೆ, ಈ ಗಮ್‌ಗಳನ್ನು ಕಿತ್ತುಹಾಕಿದರೆ ಅವುಗಳ ಹಿಂದೆ ಅಡಗಿರುವ ಒಟ್ಟಾರೆ ಇತಿಹಾಸ ಹಾಗೂ ಭಾವನಾತ್ಮಕತೆಯನ್ನು ಹೊಸಕಿಹಾಕಿದಂತೆ ಎಂಬ ವಾದ ಮತ್ತೊಂದು ಕಡೆ.
ಮತ್ತೆ ಮತ್ತೆ ವಾಲ್ ಕಟ್ಟುವ ಗಮ್‌ವಾಲಾಗಳು
ಗಮ್ ವಾಲ್ ರಚನೆಯಾದ 20 ವರ್ಷದ ನಂತರ ಮೊದಲ ಬಾರಿಗೆ 2015ರಲ್ಲಿ ಈ ಗೋಡೆಯನ್ನು ನೀರಿನ ಪವರ್ ಜೆಟ್‌ನಿಂದ ಶುಚಿಗೊಳಿಸಲಾಗಿತ್ತು. ಆಗ ಸುಮಾರು ಒಂದು ಟನ್‌ನಷ್ಟು ಗಮ್ ಹಾಗೂ ಅದಕ್ಕಂಟ್ಟಿದ್ದ ಭಗ್ನರಾಶಿಯನ್ನು ಕಿತ್ತು ತೆಗೆಯಲಾಗಿತ್ತು. ಅದಾದ ನಂತರ 2019 ರಲ್ಲಿ ಎರಡನೆಯ ಬಾರಿಯೂ ಪುನಃ ಸಂಪೂರ್ಣ ಗೋಡೆಯನ್ನು ಶುಚಿಗೊಳಿಸಲಾಗಿತ್ತು. ಪ್ರತಿಬಾರಿ ಶುಚಿಗೊಳಿಸಿದ ಕೆಲವು ದಿನಗಳಲ್ಲೇ ಗೋಡೆ ಮತ್ತೆ ರಂಗೇರುತ್ತಿತ್ತು. ಅದಾಗಿ ಐದು ವರ್ಷಗಳ ನಂತರ ಇದೀಗ ನವೆಂಬರ್ 2024ರಲ್ಲಿ ಅದರ ಮೂರನೇ ಶುಚಿತ್ವ ಕಾರ್ಯ ಭರದಿಂದ ಸಾಗಿ ಗಮ್ ವಾಲ್ ಬಿಕೋ ಎನ್ನುತ್ತಿದೆ. ಈ ಖಾಲಿ ಗೋಡೆಯನ್ನು ನೋಡಿದ ಒಬ್ಬಾಕೆ, ʻನಾನು ನನ್ನ ಗೆಳತಿಯೊಂದಿಗೆ ಆರಿಜೋನಾದಿಂದ ಗಮ್ ವಾಲ್ ನೋಡಲೆಂದೇ ಬಂದೆ. ಈ ಖಾಲಿ ಗೋಡೆ ನೋಡಿ ನನಗೆ ಬಹಳ ಬೇಸರವಾಗಿದೆʼ ಎಂದು ನೊಂದುಕೊಂಡಿದ್ದಳು.

ಈ ಗಮ್ ವಾಲ್ ಕೆಲವರಿಗೆ ವಾಕರಿಕೆ ತರಿಸಿದರೆ ಹಲವರಿಗೆ ಮೋಜೆನಿಸುತ್ತದೆ. ಪ್ರಪಂಚದಾದ್ಯಂತ ಅನೇಕ ಪ್ರವಾಸಿಗರಿಗೆ ಗಮ್ ವಾಲ್ ಸ್ಮರಣೀಯ ಸ್ಥಳ. ಅದರೊಂದಿಗೆ ಅವರ ಭಾವನಾತ್ಮಕತೆ ಬೆಸೆದಿದೆ. ಇದರ ಮುಂದೆ ನಿಂತು ಹುಡುಗ-ಹುಡುಗಿ ಮದುವೆ ಪ್ರಸ್ತಾವನೆ ಕೂಡ ಮಾಡಿದ್ದಾರೆ. ಗಮ್ ವಾಲ್‌ಗೆ ಜನರು ಅದೆಷ್ಟು ಆಕರ್ಷಿತರಾಗಿದ್ದಾರೆಂದರೆ ಬಣಗುಟ್ಟುವ ಗೋಡೆಯನ್ನು ಅವರು ಖಾಲಿ ಬಿಡಲು ಸಿದ್ಧರಿಲ್ಲ. ಹಾಗಾಗಿ ಕೆಲವು ದಿನಗಳಲ್ಲೇ ಗೋಡೆಯ ಮೇಲೆ ಒಂದು ಪದರ ಗಮ್ ಮೆತ್ತಿಕೊಂಡು ರಂಗೇರಿ, ಜಗತ್ತಿನ ಮೂಲೆಗಳಿಂದ ಪ್ರವಾಸಿಗರನ್ನು ಪುನಃ ಕೈ ಬೀಸಿ ಕರೆಯುತ್ತದೆ.
ಥಿಯೇಟರ್‌ಗೆ ಹೋಗುವ ಮಂದಿಯಿಂದ ತಮಾಷೆಗಾಗಿ ಶುರುವಾದ ಈ ಕ್ರಿಯೆ ಸಿಯಾಟಲ್‌ನ ಅಸಂಪ್ರಾದಾಯಿಕ ಆಚರಣೆಯಾಗಿ ಈ ನಗರದ ರೋಮಾಂಚಕತೆಗೆ ಹಾಗೂ ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ರಂಗುರಂಗಿನ ಬಣ್ಣದ ಅಂಟುಗಳನ್ನು ಮೆತ್ತಿಕೊಂಡಿರುವ ಈ ಗಮ್ ವಾಲ್ ನಮಗೆ ನೆನಪಿಸುವುದೇನೆಂದರೆ ಕಲೆ ಎಂಬುದು ಅನಿರೀಕ್ಷಿತ ಸ್ಥಳಗಳಲ್ಲಿ ಯಾವ ರೂಪದಲ್ಲಾದರೂ ಹುಟ್ಟಬಹುದು. ಅಂದ ಹಾಗೆ ಇಲ್ಲಿನ ಥಿಯೇಟರ್ ಇನ್ನೂ ಚಾಲನೆಯಲ್ಲಿದೆ. ಆದರೆ, ಇದನ್ನು ನೋಡಲು ಥಿಯೇಟರ್‌ಗೆ ಹೋಗಬೇಕೆಂದಿಲ್ಲ. ಅದರ ಹೊರಗೆ ನಿಂತರೆ ಸಾಕು ಈ ಬಬಲ್ ಗಮ್ ವಾಲ್ ನೋಡಬಹುದು.