ಸಿಯಾಟಲ್‌ನ ಹೆಗ್ಗುರುತುಗಳು
ಓಪನ್ ಏರ್ ಅಬ್ಸರ್ವೇಷನ್ ಡೆಕ್‌ನಿಂದ ಒಂದು ಹಂತ ಕೆಳಗಿಳಿದರೆ, ʻಸ್ಪೇಸ್ ನೀಡಲ್ʼನ ಅತ್ಯಂತ ವಿಶಿಷ್ಟವಾದ, ವಿಶ್ವದ ಮೊದಲ ʻತಿರುಗುವ ಗಾಜಿನ ನೆಲ - ʻದಿ ಲೌಪ್ʼ ಅನ್ನು ಪ್ರವೇಶಿಸುತ್ತೇವೆ. ಇದು ಸುಮಾರು 500 ಅಡಿ ಎತ್ತರದಲ್ಲಿರುವ ಈ ಪಾರದರ್ಶಕ ಗಾಜಿನ ತಟ್ಟೆ. ಇದರ ಮೇಲಿನಿಂದ ಇಡೀ ನಗರವೇ ನಮ್ಮ ಪಾದದಡಿಯಲ್ಲಿರುವಂತೆ ಭಾಸವಾಗುತ್ತದೆ. ನಿಧಾನವಾಗಿ 45 ನಿಮಿಷದಲ್ಲಿ ಒಂದು ಸುತ್ತು ತಿರುಗುವ ಈ ಪಾರದರ್ಶಕ ಗಾಜಿನ ತಟ್ಟೆಯಮೇಲೆ ನಿಂತೋ, ಕುಳಿತೋ 500 ಅಡಿ ಕೆಳಗೆ ನಗರದ ಮಿನುಗುವ ಲೇಕ್ ಯೂನಿಯನ್‌ನಿಂದ ಹಿಡಿದು ಕ್ಯಾಸ್ಕೇಡ್ ಪರ್ವತಗಳವರೆಗೆ ಸಿಯಾಟಲ್‌ನ ಸೌಂದರ್ಯವನ್ನು ಆನಂದಿಸಬಹುದು.
- ಜ್ಯೋತಿ ಪ್ರಸಾದ್
ಅಮೆರಿಕದ ಸಿಯಾಟಲ್ ನಗರಕ್ಕೆ ಭೇಟಿನೀಡುವ ಪ್ರವಾಸಿಗರು ನೋಡಲೇಬೇಕಾದ ಎರಡು ಮುಖ್ಯ ತಾಣಗಳು ಅಲ್ಲಿನ ‘ಸ್ಪೇಸ್ ನೀಡಲ್’ ಮತ್ತು ಹತ್ತಿರದಲ್ಲಿಯೇ ಇರುವ ‘ಚಿಹೂಲಿ ಗಾರ್ಡನ್ ಅಂಡ್ ಗ್ಲಾಸ್’.
ಸ್ಪೇಸ್ ನೀಡಲ್
1962ರ ‘ವಿಶ್ವ ಮೇಳ’ದ ವೇಳೆ ನಿರ್ಮಿಸಲಾದ ‘ಸ್ಪೇಸ್ ನೀಡಲ್’ ಇಂದು ಸಿಯಾಟಲ್ ನಗರದ ಹೆಗ್ಗುರುತು. 605 ಅಡಿ ಎತ್ತರವಿರುವ ಈ ಗೋಪುರ ಸಿಯಾಟಲ್ ನಗರದ ಸ್ಕೈ ಲೈನ್ ಕಟ್ಟಡಗಳ ನಡುವೆ ಎದ್ದುಕಾಣುವ ಕಟ್ಟಡ. ಸುಮಾರು 850 ಮೆಟ್ಟಿಲುಗಳನ್ನು ಹೊಂದಿದ್ದು, ತುತ್ತ ತುದಿಯ ‘ಓಪನ್ ಏರ್ ಅಬ್ಸರ್ವೇಷನ್ ಡೆಕ್’ ತಲುಪಲು ಅತಿ ವೇಗದ ಎಲಿವೇಟರ್‌ಗಳು ಕೇವಲ 43 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತವೆ! ಗೋಪುರದ ಮೇಲ್ಭಾಗವು ನೋಡಲು ಹಾರುವ ತಟ್ಟೆಯಂತೆ ಕಾಣುತ್ತದೆ. ‘ಓಪನ್ ಏರ್ ಅಬ್ಸರ್ವೇಷನ್ ಡೆಕ್ʼನ ಸುತ್ತಲೂ ಓಡಾಡುತ್ತಾ, ಸಿಯಾಟಲ್ ನಗರದ 360 ಡಿಗ್ರಿ ವಿಹಂಗಮ ನೋಟವನ್ನು ಸವಿಯಬಹುದು. ಇಲ್ಲಿ ಸುತ್ತಲೂ ಹೊರಕ್ಕೆ ವಾಲಿರುವ ಗಾಜಿನ ಗೋಡೆಗಳಿವೆ. ಇಳಿಜಾರಾದ ‘ಸ್ಕೈ ರೈಸರ್ʼ ಗಾಜಿನ ಬೆಂಚಿನ ಮೇಲೆ ಹಿಂದಕ್ಕೆ ವಾಲಿ ಕುಳಿತಾಗ, ನಾವೇ ಆಕಾಶದಲ್ಲಿ ಹಾರುತ್ತಿರುವಂತೆ ಭಾಸವಾಗುತ್ತದೆ. ಎಲಿಯಟ್ ಬೇ, ಹಿಮಚ್ಛಾದಿತ ಮೌಂಟ್ ರೈನಿಯರ್ ಮತ್ತು ಒಲಿಂಪಿಕ್ ಪರ್ವತ ಶ್ರೇಣಿಗಳ ಅಪೂರ್ವ ದೃಶ್ಯಗಳು ಇಲ್ಲಿಂದ ನೋಡುವಾಗ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ.
ಇದನ್ನೂ ಓದಿ: ಖಾರ್ದುಂಗ್ ಲಾ : ಸುರಕ್ಷತೆ ಮೊದಲು, ಸಾಹಸ ನಂತರ
ದಿ ಲೌಪ್
ಓಪನ್ ಏರ್ ಅಬ್ಸರ್ವೇಷನ್ ಡೆಕ್‌ನಿಂದ ಒಂದು ಹಂತ ಕೆಳಗಿಳಿದರೆ, ʻಸ್ಪೇಸ್ ನೀಡಲ್ʼನ ಅತ್ಯಂತ ವಿಶಿಷ್ಟವಾದ, ವಿಶ್ವದ ಮೊದಲ ʻತಿರುಗುವ ಗಾಜಿನ ನೆಲ - ʻದಿ ಲೌಪ್ʼ ಅನ್ನು ಪ್ರವೇಶಿಸುತ್ತೇವೆ. ಇದು ಸುಮಾರು 500 ಅಡಿ ಎತ್ತರದಲ್ಲಿರುವ ಈ ಪಾರದರ್ಶಕ ಗಾಜಿನ ತಟ್ಟೆ. ಇದರ ಮೇಲಿನಿಂದ ಇಡೀ ನಗರವೇ ನಮ್ಮ ಪಾದದಡಿಯಲ್ಲಿರುವಂತೆ ಭಾಸವಾಗುತ್ತದೆ. ನಿಧಾನವಾಗಿ 45 ನಿಮಿಷದಲ್ಲಿ ಒಂದು ಸುತ್ತು ತಿರುಗುವ ಈ ಪಾರದರ್ಶಕ ಗಾಜಿನ ತಟ್ಟೆಯಮೇಲೆ ನಿಂತೋ, ಕುಳಿತೋ 500 ಅಡಿ ಕೆಳಗೆ ನಗರದ ಮಿನುಗುವ ಲೇಕ್ ಯೂನಿಯನ್‌ನಿಂದ ಹಿಡಿದು ಕ್ಯಾಸ್ಕೇಡ್ ಪರ್ವತಗಳವರೆಗೆ ಸಿಯಾಟಲ್‌ನ ಸೌಂದರ್ಯವನ್ನು ಆನಂದಿಸಬಹುದು. ಪ್ರತಿ ಸುತ್ತಿನಲ್ಲೂ ಕಾಣಸಿಗುವ ನದಿಯ ದಂಡೆಯ ಮೇಲಿನ ಫೆರಿಸ್ ವೀಲ್, ಎಲಿಯಟ್ ಕೊಲ್ಲಿಯನ್ನು ದಾಟುತ್ತಿರುವ ದೋಣಿಗಳು ಅಥವಾ ಕೆಳಗೆ ಬೆಳಕಿನ ಎಳೆಗಳಂತೆ ಕಾಣುವ ಪುಟ್ಟ ಕಾರುಗಳ ಸಾಲು - ಈ ದೃಶ್ಯಗಳು ನಿಧಾನವಾಗಿ ತಿರುಗುತ್ತಾ, ಚಲನಚಿತ್ರದಂತೆ ಭಾಸವಾಗುವುದು ಪ್ರವಾಸಿಗರಿಗೆ ಒಂದು ವಿಶೇಷ ಅನುಭವ.

ʻಲೂಪ್ ಲೌಂಜ್ʼನ ಕೆಫೆಗಳಲ್ಲಿ ಸ್ನಾಕ್ಸ್ ಮತ್ತು ಪಾನಿಯಗಳನ್ನು ಸವಿಯುತ್ತಾ ಈ ಸುಂದರ ದೃಶ್ಯಗಳನ್ನೂ, ಸಂಜೆಯ ವೇಳೆಯಾದರೆ ಮನಮೋಹಕ ಸೂರ್ಯಾಸ್ತವನ್ನೂ ಆನಂದಿಸಬಹುದು. ಸೂರ್ಯಾಸ್ತದ ಸಮಯದಲ್ಲಿ ಇಡೀ ನಗರವು ಕೆಂಬಣ್ಣಕ್ಕೆ ತಿರುಗುವುದು ಹಾಗೂ ರಾತ್ರಿಯಾಗುತ್ತಿದ್ದಂತೆ ನಗರವು ದೀಪಾಲಂಕಾರದಿಂದ ಕಂಗೊಳಿಸುವುದನ್ನು ಇಲ್ಲಿಂದ ಕಾಣುವುದು ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುತ್ತದೆ.
ಚಿಹೂಲಿ ಗಾರ್ಡನ್ ಅಂಡ್ ಗ್ಲಾಸ್ ಹೌಸ್
ಇದು ಬಣ್ಣ, ಬೆಳಕು ಮತ್ತು ಗಾಜಿನ ಅದ್ಭುತ ಲೋಕ. ವಿಶ್ವವಿಖ್ಯಾತ ಗಾಜಿನ ಶಿಲ್ಪಿ ಡೇಲ್ ಚಿಹೂಲಿ ಅವರ ಅಸಾಧಾರಣ ಸರ್ಜನಶೀಲತೆಯ ಈ ಕಲಾಲೋಕಕ್ಕೆ ಕಾಲಿಡುತ್ತಿದ್ದಂತೆ, ಗಾಜು ಇಷ್ಟೊಂದು ಮೃದುವಾಗಿ ಮತ್ತು ಜೀವಂತವಾಗಿರಲು ಸಾಧ್ಯವೇ, ಗಾಜಿನಂಥ ನಾಜೂಕಾದ ವಸ್ತುವಿನಿಂದ ಇಷ್ಟೊಂದು ಬೃಹತ್ ಮತ್ತು ಸುಂದರ ಜಗತ್ತನ್ನು ನಿರ್ಮಿಸಬಹುದೇ ಎಂದು ಆಶ್ಚರ್ಯಚಕಿತರಾಗುತ್ತೇವೆ. ಗಾಜಿನ ಕಲಾಲೋಕದಲ್ಲಿ ಇಂಟೀರಿಯರ್ ಎಕ್ಸಿಬಿಟ್, ಗ್ಲಾಸ್‌ಹೌಸ್ ಮತ್ತು ಗಾರ್ಡನ್ ಎಂಬ ಮೂರು ವಿಭಾಗಗಳಿವೆ.
ಇಂಟೀರಿಯರ್ ಎಕ್ಸಿಬಿಟ್
ಈ ಒಳಾಂಗಣ ಪ್ರದರ್ಶನ ವಿಭಾಗದಲ್ಲಿ ಎಂಟು ಗ್ಯಾಲರಿಗಳಿವೆ. ಇಲ್ಲಿ ಚಿಹೂಲಿ ಅವರ ವೃತ್ತಿಜೀವನದ ವಿವಿಧ ಹಂತದ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಕತ್ತಲೆಯ ಕೋಣೆಗಳಲ್ಲಿ ಗಾಜಿನ ಕಲಾಕೃತಿಗಳ ಮೇಲೆ ಬೀಳುವ ವರ್ಣರಂಜಿತ ಬೆಳಕು ಒಂದು ಮಾಂತ್ರಿಕ ವಾತಾವರಣವನ್ನು ಸೃಷ್ಟಿಸುತ್ತದೆ. ಇಲ್ಲಿನ 'ಸೀ ಫಾರ್ಮ್'ನಲ್ಲಿ ಸಮುದ್ರದೊಳಗಿನ ಜಗತ್ತನ್ನು ಗಾಜಿನ ಮೂಲಕ ಸೃಷ್ಟಿಸಲಾಗಿದ್ದು, ಗಾಜಿನಿಂದ ಮಾಡಿದ ಶಂಖಗಳು, ಸಮುದ್ರದ ಹೂವುಗಳು ಮತ್ತು ವಿವಿಧ ಜಲಚರಗಳ ಆಕಾರದ ಕಲಾಕೃತಿಗಳನ್ನು ನೋಡುತ್ತಿದ್ದರೆ ನೋಡುಗರಿಗೆ ಸಮುದ್ರದಾಳದಲ್ಲಿರುವ ಅನುಭವವಾಗುತ್ತದೆ. ಇದಲ್ಲದೇ ಪರ್ಷಿಯನ್ ಕಲೆಯ ಪ್ರಭಾವವಿರುವ ರಂಗು ರಂಗಿನ ʻಪರ್ಷಿಯನ್ ಸೀಲಿಂಗ್ʼ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಬಣ್ಣಬಣ್ಣದ ಗಾಜಿನ ಹೂವುಗಳು ಚಾವಣಿಯಿಂದ ನೇತಾಡುತ್ತಿದ್ದರೆ, ಅದರ ಕೆಳಗೆ ನಿಂತು ನೋಡುವ ಅನುಭವವೇ ಅನನ್ಯ.
ಗ್ಲಾಸ್ ಹೌಸ್
ಇದು 40ಅಡಿ ಎತ್ತರದ ಗಾಜಿನಮನೆ. ಒಳಗೆ 100 ಅಡಿ ಉದ್ದದ ಬೃಹತ್ ಗಾಜಿನ ಶಿಲ್ಪವನ್ನು ಅಳವಡಿಸಲಾಗಿದೆ. ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣದ ಹೂವುಗಳ ಮಾಲೆಯಂತೆ ಕಾಣುವ ಈ ಕಲಾಕೃತಿಯು ಮೇಲ್ಚಾವಣಿಯಿಂದ ಕೆಳಕ್ಕೆ ಹರಿದು ಬಂದಂತೆ ಭಾಸವಾಗುತ್ತದೆ. ಹಗಲಿನ ಬೆಳಕು ಬದಲಾದಂತೆ ಈ ಗಾಜಿನ ಕಲಾಕೃತಿಯ ಬಣ್ಣಗಳು ಮತ್ತು ನೆರಳುಗಳು ಕೂಡ ಬದಲಾಗುತ್ತವೆ. ಇದು ನೋಡುಗರಿಗೆ ಹೊಸ ಅನುಭವ ನೀಡುತ್ತವೆ. ಗ್ಲಾಸ್‌ಹೌಸ್‌ನಿಂದ ಮೇಲಕ್ಕೆ ನೋಡಿದಾಗ ಸಿಯಾಟಲ್‌ನ ಹೆಮ್ಮೆಯ 'ಸ್ಪೇಸ್ ನೀಡಲ್' ಗೋಪುರವು ಸುಂದರವಾಗಿ ಕಾಣಿಸುತ್ತದೆ.
ಗಾರ್ಡನ್
ʻಗಾರ್ಡನ್ʼನಲ್ಲಿ ನೈಸರ್ಗಿಕ ಗಿಡಮರಗಳ ನಡುವೆ ಗಾಜಿನ ಕಲಾಕೃತಿಗಳನ್ನು ಜೋಡಿಸಿಡಲಾಗಿದೆ. ಗಿಡಗಳ ನಡುವೆ ಬೆಳೆದಿರುವಂತೆ ಕಾಣುವ ಗಾಜಿನ ಬಿದಿರುಗಳು, ಬಣ್ಣದ ಚೆಂಡುಗಳು ಮತ್ತು ವಿಚಿತ್ರಾಕಾರದ ಹೂವುಗಳು ಇಲ್ಲಿನ ಆಕರ್ಷಣೆಗಳು. ಇವು ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಚಿಹೂಲಿಯ ಈ ಎಲ್ಲ ಪ್ರದರ್ಶನಗಳ ಫೊಟೋಗಳನ್ನು ಫ್ಲಾಶ್ ಬಳಸದೆ ತೆಗೆಯಲು ಅವಕಾಶವಿದೆ. ಈ ಪ್ರದರ್ಶನಗಳ ಕೊನೆಯಲ್ಲಿ ಒಂದು ಚಿಕ್ಕ ಚಿತ್ರಮಂದಿರವಿದೆ. ಅಲ್ಲಿ ಡೇಲ್ ಚಿಹೂಲಿ ಅವರು ಈ ಗಾಜಿನ ಕಲಾಕೃತಿಗಳನ್ನು ತಯಾರಿಸುವ ವಿಡಿಯೋವನ್ನು ತೋರಿಸಲಾಗುತ್ತದೆ. ಸಾವಿರಾರು ಡಿಗ್ರಿ ತಾಪಮಾನದಲ್ಲಿ ಗಾಜನ್ನು ಕರಗಿಸಿ, ಊದಿ ಆಕಾರ ಕೊಡುವ, ಗಾಜು ತಯಾರಿಕೆಯ ಪ್ರಾತ್ಯಕ್ಷಿಕೆಯನ್ನೂ ನೋಡಬಹುದು.
ಮಾಹಿತಿ ಪೆಟ್ಟಿಗೆ:
ಸ್ಪೇಸ್ ನೀಡಲ್ ಮತ್ತು ಚಿಹೂಲಿ ಗಾರ್ಡನ್ ಎರಡೂ ಹತ್ತಿರದಲ್ಲೇ ಇರುವುದರಿಂದ, ಒಂದೇ ದಿನದಲ್ಲಿ ಈ ಎರಡೂ ತಾಣಗಳನ್ನು ನೋಡಬಹುದು. ಆದ್ದರಿಂದ ಎರಡಕ್ಕೂ ಸೇರಿ 'ಕಾಂಬೋ ಟಿಕೆಟ್' ಖರೀದಿಸುವುದು ಉತ್ತಮ. ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್ ಖರೀದಿಸುವುದು ಒಳ್ಳೆಯದು. ವಾರಾಂತ್ಯದಲ್ಲಿ ಜನಸಂದಣಿ ಹೆಚ್ಚು. ಸಂಜೆಯ ವೇಳೆ ಸೂರ್ಯಾಸ್ತ ಹಾಗೂ ನೈಸರ್ಗಿಕ ಬೆಳಕು ಮತ್ತು ಕೃತಕ ದೀಪಗಳ ಸಂಗಮದಲ್ಲಿ ಗಾಜಿನ ಕಲಾಕೃತಿಗಳ ಸೌಂದರ್ಯ ರಮಣೀಯವಾಗಿರುತ್ತದೆ.