• ವಿದ್ಯಾ ವಿ. ಹಾಲಭಾವಿ

ಥೇಟ್ ಬೋರಲಾಗಿರುವ ಆಕ್ಟೋಪಸ್‌ನಂತಿದ್ದು ಅದರ ಸ್ಪರ್ಶಾಂಗಗಳ ರೀತಿಯಲ್ಲಿಯೇ ಮೇಲಕ್ಕೆ ದೊಡ್ಡ ದೊಡ್ಡ ಕೊಂಬೆಗಳನ್ನು ಚಾಚಿಕೊಂಡಿರುವ ವಿಚಿತ್ರ ಮರವೊಂದು ಯುನೈಟೆಡ್‌ ಸ್ಟೇಟ್ಸ್‌ನ ಒರೆಗಾನ್ನ ಟಿಲ್ಲಮೂಕ್‌ ಕೌಂಟಿಯ ತೀರದಲ್ಲಿದೆ. ನೈಸರ್ಗಿಕ ಅದ್ಭುತವೆಂದೇ ಬಣ್ಣಿಸುವ ಈ ವೃಕ್ಷವು ಕೇಪ್ ಮೀರಸ್ ಲೈಟ್‌ಹೌಸ್‌ನಿಂದ ಕೆಲವು ನೂರು ಅಡಿಗಳಷ್ಟು ದೂರದಲ್ಲಿದೆ. ಈ ಮರದ ಹೆಸರು ʼಸಿಟ್ಕಾ ಸ್ಪ್ರೂಸ್ʼ. ಇದರ ವೈಜ್ಞಾನಿಕ ಹೆಸರು ʼಪಿಸಿಯಾ ಸಿಚೆನ್ಸಿಸ್ʼ. ʼಕ್ಯಾಂಡೆಲಾಬ್ರಾ ಮರʼ ಎಂದು ಕರೆಯುವ ಇದರ ಸುತ್ತಳತೆಯು 30 ಮೀಟರ್‌ಗಳಿಗಿಂತ ತುಸು ಜಾಸ್ತಿಯೇ ಇದೆ. ಆದರೆ ಈ ಮರಕ್ಕೆ ಬೊಡ್ಡೆಯೇ ಇಲ್ಲ! ಈ ಮರವು ಮೇಲ್ಮುಖವಾಗಿ ಬೆಳೆಯುವುದಕ್ಕಿಂತ ಮುಂಚೆಯೇ ಅಚ್ಚರಿಗೊಳಿಸುವಂತೆ 16 ಅಡಿಗಳಷ್ಟು ಸಮಾನಾಂತರವಾಗಿ ಬೆಳೆದು 6 ಟಿಸಿಲುಗಳನ್ನು ಹೊಂದಿದೆ! ಒಟ್ಟಾರೆಯಾಗಿ ವಿಲಕ್ಷಣವಾದ ಈ ವೃಕ್ಷವು ಬಹಳ ಹಿಂದಿನಿಂದಲೂ ಆಕರ್ಷಣೆಯ ಕೇಂದ್ರವಾಗಿದೆ.

ಇದನ್ನೂ ಓದಿ:ವಿಶ್ವದಲ್ಲಿ ಅತ್ಯಂತ ಕಡಿಮೆ ಮರಗಳಿರುವ ದೇಶವಿದ್ದರೆ ಅದು ಕತಾರ್!

ಸುಮಾರು 105 ಅಡಿಗಳಷ್ಟು ಎತ್ತರವಿರುವ ಈ ಬೃಹತ್ ಸಿಟ್ಕಾ ಸ್ಪ್ರೂಸ್ ಮರವು ಹವಾಮಾನ ವೈಪರೀತ್ಯದಂಥ ನೈಸರ್ಗಿಕ ಪರಿಸ್ಥಿತಿಗಳಿಂದ ಈ ರೀತಿ ರೂಪುಗೊಂಡಿದೆ ಎಂದು ಕೆಲವರು ನಂಬುತ್ತಾರೆ. ಇದು ಸ್ವಾಭಾವಿಕವಾಗಿಯೇ ಹೀಗೆ ಬೆಳೆದಿದೆಯೋ ಅಥವಾ ಇಲ್ಲಿದ್ದ ಮೂಲನಿವಾಸಿಗಳಿಂದ ಈ ರೀತಿ ಆಗಿದೆಯೋ ಎಂಬ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ! ಈ ಆಕ್ಟೋಪಸ್ ಮರವು ಸ್ಥಳೀಯ ಬುಡಕಟ್ಟು ಜನಾಂಗದವರು ಆ ಸ್ಥಳದಲ್ಲಿ ವಾಸಮಾಡುತ್ತಿದ್ದಾಗ ನೆಟ್ಟರು, ಅಂದರೆ 200 ರಿಂದ 300 ವರ್ಷ ಹಳೆಯದು ಎಂದು ಅಂದಾಜಿಸಲಾಗಿದೆ. ಆದರೆ ಹೆಣವಿರುವ ದೋಣಿಗಳನ್ನು ಹಾಗೂ ಸತ್ತ ನಂತರ ಮಾಡುವ ಕರ್ಮಾಚರಣೆಯ ವಸ್ತುಗಳನ್ನು ಮರದ ಮೇಲಿರಿಸುವ ಸಲುವಾಗಿ ಆ ಮರವನ್ನು ಆಕ್ಟೋಪಸ್‌ನಂತೆ ಆಕಾರ ಮಾಡಿದ್ದು ಭಾರತೀಯರು ಎಂಬ ಥಿಯರಿಯೂ ಅಲ್ಲಿದೆ.

Untitled design (67)

ಯಾವಾಗ ಈ ಆಕ್ಟೋಪಸ್ ಮರವು ‘ರಿಪ್ಲಿಸ್ ಬಿಲಿವ್ ಇಟ್ ನಾಟ್’ ಪುಸ್ತಕದಲ್ಲಿ ಕಾಣಿಸಿಕೊಂಡಿತೋ ಆವಾಗಿನಿಂದ ಇದನ್ನು ಆಧುನಿಕ ವಿಶ್ವದ ಅದ್ಭುತಗಳಲ್ಲಿ ಒಂದು ಎಂದೇ ವರ್ಣಿಸಲಾಗುತ್ತಿದೆ. ದೈತ್ಯ ಗಾತ್ರದಲ್ಲಿದ್ದು, ವಿಲಕ್ಷಣವಾಗಿ ಕಾಣುವುದರಿಂದ ‘ರಾಕ್ಷಸಿ ಮರ’ ಎಂದು, ಪವಿತ್ರ ಮರವೆಂದು ಭಾವಿಸಿದ್ದ ಹಿಂದಿನ ತಲೆಮಾರಿನ ಹಿರಿಯರು ಇದರ ಮೇಲೆ ಕುಳಿತು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದುದ್ದರಿಂದ ʼಕೌನ್ಸಿಲ್ ಟ್ರೀʼ ಎಂದೂ ಇದನ್ನು ಕರೆಯಲಾಗುತ್ತಿದೆ. ಇದು ಚಾರಿತ್ರಿಕವಾಗಿ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಅಚ್ಚರಿ ಮೂಡಿಸುತ್ತಿರುವ ಮರ!

ಈ ವಿಶಿಷ್ಟ ಮರವನ್ನು ವೀಕ್ಷಿಸಲೆಂದೇ ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಮರವನ್ನು ಸಣ್ಣ ಬೇಲಿಯಿಂದ ರಕ್ಷಿಸಲಾಗಿದೆ. ಅದರ ಮಹತ್ವವನ್ನು ಮಾಹಿತಿ ಫಲಕದ ಮೂಲಕ ವಿವರಿಸಲಾಗಿದೆ.