• ಡಾ ಲತಾ ದಾಮ್ಲೆ

ಚೀನಾ ಬಹಳ ದೊಡ್ಡ ದೇಶ ಹಾಗೂ ಅದರ ಭೂಗೋಳವು ಭಾರತದಂತೆ ವೈವಿಧ್ಯಮಯ. ಉದಾಹರಣೆಗೆ ಹಿಮಾಲಯದಂಥ ಪರ್ವತಗಳು, ಕಣಿವೆಗಳು, ಸರೋವರಗಳು, ಕಾನನಗಳು, ಮರುಭೂಮಿ, ಸಮುದ್ರ ತಟಗಳು ಹೀಗೆ ಅನೇಕ ಜಾಗಗಳಿವೆ. ಎಲ್ಲ ಪ್ರಕಾರದ ಪ್ರವಾಸಿ ತಾಣಗಳನ್ನು ಹೊಂದಿದ ಸಮೃದ್ಧ ದೇಶವಿದು. ಅಲ್ಲದೇ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು, ಯುರೋಪ್ ಅಮೆರಿಕಗೂ ಪೈಪೋಟಿ ನೀಡುವಂತೆ ಬೆಳೆದಿರುವ ಆಧುನಿಕ ಭಾಗಗಳಾದ ಬೀಜಿಂಗ್, ಶಾಂಘೈ ಮುಂತಾದ ನಗರಗಳು ಇನ್ನೊಂದು ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಭಾರತಕ್ಕಿಂತ ಮೂರುವರೆ ಪಟ್ಟು ದೊಡ್ಡದಿರುವ, ವಿಭಿನ್ನ ಸ್ಥಳಗಳನ್ನು ಹೊಂದಿರುವ ಚೀನಾ ದೇಶವನ್ನು ಒಂದೇ ಪ್ರವಾಸದಲ್ಲಿ ಪೂರ್ತಿ ನೋಡುವುದು ಆಗದ ಮಾತು. ಹಾಗಾಗಿ ನಮ್ಮ ಮೊದಲ ಪ್ರವಾಸಕ್ಕೆ ಪರ್ವತದ ಭಾಗವನ್ನು ಆರಿಸಿಕೊಂಡೆವು. ಪರ್ವತಗಳಲ್ಲೂ ಒಂದು ರೀತಿಯ 'dramatic mountain landscape' ಹೊಂದಿದೆ ಅಂದರೆ ಅತಿಶಯೋಕ್ತಿಯಲ್ಲ. 'ಅವತಾರ್', ಶಾಂಘರಿಲಾ, ಕುಂಗ್ಫು ಪಾಂಡ ಮುಂತಾದ ಅನೇಕ ಪ್ರಖ್ಯಾತ ಸಿನಿಮಾಗಳಲ್ಲಿರುವ ಬೆಟ್ಟ ಗುಡ್ಡಗಳಿಗೆ ಇಲ್ಲಿನ ಉದ್ದ ಅಗಲ, ಚೂಪಾಗಿರುವ ಮುಂತಾದ ಪರ್ವತ ಶ್ರೇಣಿಗಳೇ ಸ್ಫೂರ್ತಿ. ಇವುಗಳಲ್ಲಿ ನಮ್ಮ ವೀಕ್ಷಣೆಗೆ ಆಯ್ಕೆ ಮಾಡಿಕೊಂಡದ್ದು 'ಸಿಚುವಾನ್' ಪ್ರಾವಿನ್ಸ್‌ನಲ್ಲಿರುವ 'ಹುವಾಂಗ್ ಲಾಂಗ್' ಮತ್ತು ಜಿಯುಝೈಗೋ ಎಂಬ ಎರಡು ಸ್ಥಳಗಳು. ಇವೆರಡೂ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು. ಯೂಟ್ಯೂಬ್‌ನಲ್ಲಿ ಇವುಗಳ ಕುರಿತಾದ, ಯಾವ ಋತುಗಳಲ್ಲಿ ಏನು ಕಾಣಿಸುತ್ತವೆ ಎಂಬ ಅನೇಕ ವಿಡಿಯೋಗಳಿವೆ. ಹಾಗಾಗಿ ನಮಗೆ ನಾವು ಹೋಗುವ ಜಾಗಗಳ ಬಗ್ಗೆ ಒಂದು ಅಂದಾಜಿತ್ತು. ಆದರೆ, ಎದುರಿನಲ್ಲಿ ನೋಡಿದಾಗ ಆಗುವ ಆನಂದ, ಅನುಭೂತಿ ಬೇರೆಯೇ ಸ್ತರದ್ದು.

ಇದನ್ನೂ ಓದಿ:ಪ್ರವಾಸಿಗರ ಬೇಜವಾಬ್ದಾರಿಗೆ ಸುಟ್ಟು ಕರಕಲಾಯ್ತು ಚೀನಾದ ಪುರಾತನ ದೇಗುಲ!

ಬೆಂಗಳೂರು ಟು ಚೆಂಗ್ಡು

ನಾವು ಬೆಂಗಳೂರಿಂದ ಬ್ಯಾಂಕಾಕ್ ಮೂಲಕ ಚೆಂಗ್ಡು ಎಂಬ ನಗರಕ್ಕೆ ಹೋದೆವು. ಹುವಾಂಗ್ ಲಾಂಗ್ ಮತ್ತು ಜಿಯುಝೈಗೋ ಸಾಮಾನ್ಯವಾಗಿ ಒಟ್ಟಿಗೆ ನೋಡಬೇಕಾದ ಸ್ಥಳಗಳು. ಇಲ್ಲಿಗೆ ಅನೇಕ ಕಡೆಯಿಂದ ವಿಮಾನ ಸಂಪರ್ಕಗಳಿವೆ. ಆದರೆ ನಾವು ಆರಿಸಿಕೊಂಡದ್ದು ಇಲ್ಲಿನ ಅತಿವೇಗದ ರೈಲು ಪ್ರಯಾಣ. ಈ ಹೈ ಸ್ಪೀಡ್ ರೈಲುಗಳು 250-350 ಕಿಮೀ ವೇಗದಲ್ಲಿ ಚಲಿಸುತ್ತವೆ. ಹಾಗಾಗಿ ಚೆಂಗ್ಡುವಿನಿಂದ ಇಲ್ಲಿಗಿರುವ ಅಂದಾಜು 350 ಕಿಮೀಗಳನ್ನು ಒಂದು ಗಂಟೆ ಹದಿಮೂರು ನಿಮಿಷಗಳಲ್ಲಿ ಸುಗಮವಾಗಿ ತಲುಪಿದೆವು!

Untitled design (48)

ಇವುಗಳ ಬಗ್ಗೆ ಗಮನವಿರಲಿ

ಚೀನಾದಲ್ಲಿ ಪ್ರವಾಸ ಮಾಡುವಾಗ ಕೆಲವು ವಿಷಯಗಳನ್ನು ಗಮದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಎಲ್ಲ ಜಾಗದಲ್ಲೂ ಜನರು ಹೆಚ್ಚಾಗಿರುವುದರಿಂದ, ಬೇಗ ಹೊರಡುವುದು ಉತ್ತಮ. ಸ್ವಲ್ಪ ಕ್ಯೂಗಳಲ್ಲಿ ನೂಕಾಟವಿರುತ್ತದೆ. ಹಾಗೆಯೇ ನಾವು ಹೋದಲ್ಲೆಲ್ಲಾ ಬರೀ ಇಂಡಿಯನ್ ಟಾಯ್ಲೆಟ್ ಮಾತ್ರವಿರುತ್ತದೆ. ವೆಸ್ಟೆರ್ನ್ ಕಮೋಡ್ ಕಾಣಸಿಗುವುದು ಬಹಳ ವಿರಳ. ಮೊದಲ ದಿನ 'ಹುವಾಂಗ್ ಲಾಂಗ್' ನೋಡಿ ಜಿಯುಜೈಗೋನಲ್ಲಿ ಉಳಿದುಕೊಂಡು ಮರುದಿನ ಆ ಜಾಗವನ್ನು ನೋಡಿದೆವು. 'ಹುವಾಂಗ್ ಲಾಂಗ್' ಸಮುದ್ರಮಟ್ಟದಿಂದ 3500 ಮೀ ಎತ್ತರದಲ್ಲಿರುವುದರಿಂದ ಆಮ್ಲಜನಕದ ಕೊರತೆ ಇರುತ್ತದೆ. ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸುವುದು ಒಳ್ಳೆಯದು. ಹಾಗೆಯೇ ಚಳಿಗಾಲದಲ್ಲಿ (ಸೆಪ್ಟೆಂಬರ್ ನಂತರ ಫೆಬ್ರವರಿವರೆಗೆ) ಹಿಮದಿಂದ ತುಂಬಿರುತ್ತದೆ. ತದನಂತರ 10-15 ಡಿಗ್ರಿವರೆಗೆ ಏರುತ್ತದೆ. ಜುಲೈ-ಆಗಸ್ಟ್‌ನಲ್ಲಿ ಬೆಳಗ್ಗೆ 20ರವರೆಗೆ ಇರಬಹುದು. ನಾವು ಹೋದ ಸಮಯದಲ್ಲಿ (ಮೇ) 5-10 ಡಿಗ್ರಿ ಇತ್ತು. ಆದರೂ ಹಿಮಾಚ್ಛಾದಿತ ಶಿಖರಗಳು ಕಣ್ಣು ಸೆಳೆಯುತ್ತಿದ್ದವು. ಈ ಪರ್ವತದ ಬೇಸ್‌ನಿಂದ ಕೇಬಲ್ ಕಾರ್‌ನಲ್ಲಿ ಮೇಲೆ ಹೋಗಿ ಬಳಿಕ ಇಳಿಮುಖವಾಗಿ ನಡೆದುಕೊಂಡು ಬರುವಾಗ ನೀಲಿ, ಹಸಿರು, ಹಳದಿ ಬಣ್ಣದ ಸರೋವರಗಳು ಹಾಗೂ ಟ್ರಾವೆರ್ಟೈನ್‌ ಕಲ್ಲುಗಳಿಂದ ಉಂಟಾದ ಮೆಟ್ಟಿಲುಗಳು ಕಾಣಿಸುತ್ತವೆ. ಒಂದು ಹಂತದ ನಂತರ ಕೇಬಲ್ ಕಾರ್‌ ಬಳಸಿಕೊಂಡು ಬರಬಹುದು. ಅಥವಾ ಪೂರ್ತಿ ನಡೆದುಕೊಂಡೂ ಬರಬಹುದು. ನಡೆಯಲು ಮರದ ಹಾದಿಯಿದೆ. ಅದು ಮಳೆ ಅಥವಾ ಹಿಮದ ಸಮಯದಲ್ಲಿ ಜಾರಬಹುದು. ಹಾಗೆಯೇ ಆಕ್ಸಿಜನ್ ಕೊರತೆಯಿಂದ ನಿಧಾನವಾಗಿ ನಡೆಯುವುದು ಕ್ಷೇಮಕರ. ಮುಖ್ಯವಾಗಿರುವ 5 ಬಣ್ಣದ (ಹೆಚ್ಚಾಗಿ, ನೀಲಿ ಹಸಿರು, ಹಳದಿ) ಸರೋವರಗಳು, ಮೆಟ್ಟಿಲುಗಳು, ಸುತ್ತಲಿನ ಪರ್ವತ, ಆಳ ಕಣಿವೆಗಳು ಕಂಡರೂ ಹಲವು ಕಡೆಗಳಲ್ಲಿ ‘Observation Deck’ ಮಾಡಿದ್ದಾರೆ. ಟೆಲಿಸ್ಕೋಪ್ ಮೂಲಕ ದೂರದ ಪರ್ವತ, ಕಣಿವೆಗಳನ್ನು ನೋಡಿ ಆನಂದಿಸಬಹುದು. 'ಹುವಾಂಗ್ ಲಾಂಗ್' ಎಂದರೆ ಅರ್ಥ 'ಹಳದಿ ಡ್ರ್ಯಾಗನ್'. ಮೇಲಿಂದ ಈ ಮೆಟ್ಟಿಲುಗಳು, ನೀರಿನ ಕೊಳಗಳು ಡ್ರ್ಯಾಗನ್ ಮೈ ಆಕಾರದಲ್ಲಿದ್ದಂತೆ ಭಾಸವಾಗುವುದರಿಂದ ಇದಕ್ಕೆ ಈ ಹೆಸರು ಎನ್ನಲಾಗಿದೆ. 5 ಬಣ್ಣಗಳ ಸರೋವರ, ನಾನು ಈ ತನಕ ನೋಡಿದ ಸ್ಥಳಗಳಿಗಿಂತ ವಿಭಿನ್ನ ಅನುಭೂತಿ ನೀಡಿತ್ತು. ಮಧ್ಯದಲ್ಲಿ ಒಂದು ಟಿಬೆಟ್ಟಿಗರ ದೇವಸ್ಥಾನವೂ ಇತ್ತು. ಅದರ ಎದುರು ಪಹಾಡಿ ರಾಗದ ಹಾಡಿಗೆ ನಡೆಯುತ್ತಿದ್ದ ನೃತ್ಯ ಸ್ಥಳದ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ತಂದಿತ್ತು.

Untitled design (47)

ಮಾಯಾಲೋಕ ಜಿಯುಝೈಗೋ

ಅಲ್ಲಿಂದ 2 ಗಂಟೆ ಕ್ರಮಿಸಿ ಜಿಯುಝೈಗೋಗೆ ಬಂದು ಅಲ್ಲಿಯೇ ಉಳಿದುಕೊಂಡೆವು. ಮರುದಿನ ಜಿಯುಝೈಗೋನಲ್ಲಿ ಸುತ್ತಾಡಿದೆವು. ಹುವಾಂಗ್‌ ಲಾಂಗ್ ತನ್ನ ಖನಿಜಯುತ ಬಣ್ಣದ ಮೆಟ್ಟಿಲುಗಳು, ನೀಲಿ, ಹಸಿರು ಕೊಳಗಳು ಮತ್ತು ಪರ್ವತ ಸೌಂದರ್ಯದಿಂದ ಮನಸೆಳೆಯುತ್ತಿದ್ದರೆ, ಜಿಯುಝೈಗೋವು ಬೇರೆ ರೀತಿಯ ಮಾಯಾಲೋಕವನ್ನು ತೆರೆದಿಡುತ್ತದೆ. ʼಒಂಬತ್ತು ಗ್ರಾಮಗಳ ಕಣಿವೆʼ ಎಂಬ ಅರ್ಥ ಹೊಂದಿರುವ ಜಿಯುಝೈಗೋವು ತನ್ನ ಸ್ಫಟಿಕದಂತೆ ಪಾರದರ್ಶಕವಾದ ಸರೋವರಗಳು, ಕಾಡುಗಳು ಮತ್ತು ಭವ್ಯ ಜಲಪಾತಗಳಿಗೆ ಪ್ರಸಿದ್ಧ.

ಚಳಿಯಿದ್ದರೂ ಆಕ್ಸಿಜನ್ ಸಮಸ್ಯೆ ಅಷ್ಟಾಗಿ ಇಲ್ಲ. ಕಾಡಿನ ಮಧ್ಯೆ ಸಾಗುವ ದಾರಿಯಲ್ಲಿ ನಿಧಾನವಾಗಿ ಮೇಲೆ ಹೋದಂತೆ ತಂಪಾದ ಪರ್ವತ ಗಾಳಿ ಮನಸಿಗೆ ಹೊಸತನ ನೀಡುತ್ತದೆ. ಮೋಡಗಳಿಂದ ತುಂಬಿರುವ ಪರ್ವತಗಳು, ಹಸಿರು ವನ, ದೊಡ್ಡ ದೊಡ್ಡ ಸರೋವರಗಳು, ತಂಪಾದ ಗಾಳಿ, ಜಲಪಾತ, ಹಕ್ಕಿಯ ಚಿಲಿಪಿಲಿ, ಎಲ್ಲವೂ ನಮ್ಮನ್ನು ಗಂಧರ್ವ ಲೋಕಕ್ಕೆ ಒಯ್ದಿದ್ದವು. ಇಲ್ಲಿ ಪಾಂಡ ಲೇಕ್, ಟೈಗರ್ ಲೇಕ್, ಇತ್ಯಾದಿ ಹೆಸರಿನಿಂದ ನೂರಕ್ಕೂ ಹೆಚ್ಚು ಇಂಥ ಸುಂದರ ಸರೋವರಗಳಿವೆ. ಇಲ್ಲಿಯೂ ಅಷ್ಟೇ, ಬಸ್ಸಿನಲ್ಲಿ ಮೇಲಿನವರೆಗೆ ಹೋಗಿ, ಬೇಕಾದ ಸ್ಥಳಗಳನ್ನು ನೋಡಿ ಇನ್ನೊಂದು ಜಾಗಕ್ಕೆ ಮತ್ತೆ ಬಸ್ಸಿನಲ್ಲಿ ಬರಬಹುದು. ಸಾರಿಗೆ ವ್ಯವಸ್ಥೆ ಬಹಳ ಚೆನ್ನಾಗಿದೆ.

ಮಾಹಿತಿ ಪೆಟ್ಟಿಗೆ:

ಭಾರತೀಯರಿಗೆ ಭಾಷೆ ಮತ್ತು ಆಹಾರದ ತೊಡಕು ಉಂಟಾಗಬಹುದು. ತಕ್ಕ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. ಆದರೆ, ಖಂಡಿತ ಜೀವನದಲ್ಲೊಮ್ಮೆ ನೋಡಬೇಕಾದ ಸ್ಥಳಗಳಿವು. ತನ್ನ ಆಧುನಿಕ ಪ್ರಗತಿಯ ಜತೆಯಲ್ಲಿ ಪ್ರಕೃತಿಯನ್ನು ಉತ್ಕೃಷ್ಟ ರೀತಿಯಲ್ಲಿ ಕಾಪಾಡಿಕೊಂಡ ದೇಶ ಚೀನಾ.

ಲೇಖಕರು: ಹವ್ಯಾಸಿ ಬರಹಗಾರರು