ಫ್ರೆಮಾಂಟ್‌ನಲ್ಲಿ ಲೆನಿನ್ ಪ್ರತಿಮೆ
ನಾವು ಹೋದಾಗ ಹಾಲೋವೀನ್ ಸಮೀಪಿಸುತ್ತಿದ್ದುದರಿಂದ ಲೆನಿನ್ ಪ್ರತಿಮೆಯ ಶಿರಭಾಗವನ್ನು ಕುಂಬಳಕಾಯಿಯ ಪ್ರತಿಕೃತಿಯಿಂದ ಮುಚ್ಚಿದ್ದರು. ಇದೂ ಸಾಕಷ್ಟು ಮನೋರಂಜನೆ ನೀಡಿತು.
- ಡಾ. ಉಮಾಮಹೇಶ್ವರಿ ಎನ್
ವ್ಲಾದಿಮೀರ್ ಲೆನಿನ್ ಒಬ್ಬ ಮಹಾನ್ ರಷ್ಯನ್ ಕಮ್ಯುನಿಸ್ಟ್ ಕ್ರಾಂತಿಕಾರಿ. ಎಮಿಲ್ ವೆಂಕಾವ್ ಎಂಬ ಕಲಾಕಾರನೊಬ್ಬ ಲೆನಿನ್ ಪ್ರತಿಮೆಯನ್ನು ನಿರ್ಮಿಸಿದ. 1988ರಲ್ಲಿ ಈ ಕಂಚಿನ ಪ್ರತಿಮೆಯನ್ನು ಪೂರ್ಣಗೊಳಿಸಲು ಸುಮಾರು ಹತ್ತು ವರ್ಷಗಳನ್ನು ಕಳೆದಿದ್ದ. ಆದರೆ, 1989ರಲ್ಲಿ ಕಮ್ಯುನಿಸಂನ ಪತನವಾದ ಬಳಿಕ ಈ ಪ್ರತಿಯನ್ನು ಕೆಳಗೆ ಬೀಳಿಸಲಾಯಿತು. ಈ ಪ್ರತಿಮೆಯನ್ನು ಪೋಲೆಂಡ್‌ನಲ್ಲಿ ಶಿಕ್ಷಕನಾಗಿದ್ದ ಅಮೆರಿಕ ಮೂಲದ ಲೆವಿಸ್ ಕಾರ್ಪೆಂಟರ್ ಗುರುತಿಸಿ ಇದನ್ನು ಅಮೆರಿಕಕ್ಕೆ ಸಾಗಿಸುವ ಯೋಚನೆ ಮಾಡಿದ.
ಕಾರ್ಪೆಂಟರ್ ಈ ಕಲಾಕೃತಿಯ ಮಹತ್ವವನ್ನು ಅರಿತವನಾಗಿದ್ದ. ಈ ಪ್ರತಿಮೆಯ ನಿರ್ಮಾತೃ ವೆಂಕೋವ್ ಕೂಡ ಆತನಿಗೆ ಪರಿಚಿತನಾಗಿದ್ದ. 7 ಟನ್ ತೂಕವಿರುವ ಕಂಚಿನಿಂದ ನಿರ್ಮಿಸಲಾದ ಪ್ರತಿಮೆ ಇದಾಗಿತ್ತು. ಲೆನಿನ್‌ನ ಹೆಚ್ಚಿನ ಪ್ರತಿಮೆಗಳು ಕೈಯಲ್ಲಿ ಪುಸ್ತಕ ಹಿಡಿದು, ತಲೆಯ ಮೇಲೆ ಒಂದು ಟೋಪಿ ಧರಿಸಿರುತ್ತವೆ. ಆದರೆ, ವೆಂಕೋವ್‌ನ ಕಲಾಕೃತಿಯ ವಿಶೇಷ ಎಂದರೆ, ಲೆನಿನ್‌ನನ್ನು ಗನ್‌ಗಳ ಜತೆಗೆ ಇರುವಂತೆ ನಿರ್ಮಿಸಿದೆ.
ಲಂಡನ್‌ನಲ್ಲಿ ‘ಡಿಡಿಎಲ್‌ಜೆʼಯ ರಾಜ್ ಮತ್ತು ಸಿಮ್ರನ್ ಕಂಚಿನ ಪ್ರತಿಮೆ ಅನಾವರಣ
ಈ ವಿಶೇಷ ಪ್ರತಿಮೆಯನ್ನು ಅಮೆರಿಕಕ್ಕೆ ಸಾಗಿಸಿ ತಾನು ನಡೆಸುವ ರೆಸ್ಟೋರೆಂಟ್ ನಲ್ಲಿ ಇರಿಸಿ ಜನರನ್ನು ಆಕರ್ಷಿಸುವ ಆಲೋಚನೆ ಹೊಂದಿದ್ದ ಕಾರ್ಪೆಂಟರ್. ಹೀಗಾಗಿ, 40,000 ಡಾಲರ್ ಖರ್ಚಿನಲ್ಲಿ ಅಮೆರಿಕಕ್ಕೆ ಸಾಗಿಸಲು ಮುಂದಾದ. ಆದರೆ, 1994ರಲ್ಲಿ ಕಾರ್ಪೆಂಟರ್ ಒಂದು ಕಾರ್ ಅಪಘಾತದಲ್ಲಿ ಮರಣ ಹೊಂದಿದ. ಪ್ರತಿಮೆ ಮತ್ತೆ ಅನಾಥವಾಯಿತು. ಬಳಿಕ ಅವನ ಕುಟುಂಬವು ಹೇಗೋ ಪ್ರಯತ್ನಿಸಿ ಫ್ರೆಮಾಂಟ್‌ನಲ್ಲಿ ಆ ಪ್ರತಿಮೆಯನ್ನು ಸ್ಥಾಪಿಸಿತು.

ರಾಕೆಟ್ ಫ್ಯೂಸ್‌ಲೇಜ್‌ನ ಹತ್ತಿರವಿರುವ ಈ ಕೋಪಗೊಂಡ, ಕೈಯಲ್ಲಿ ಗನ್ ಹಿಡಿದಿರುವ ಲೆನಿನ್ ಪ್ರತಿಮೆಯು, 'ಫ್ರೆಮಾಂಟ್ ಟ್ರೋಲ್'ಗೆ ಹತ್ತಿರದಲ್ಲಿದೆ. ಅಂದರೆ, ಕಾರನ್ನು ನಜ್ಜುಗುಜ್ಜು ಮಾಡುತ್ತಿರುವ ದೈತ್ಯ ಕಾಂಕ್ರೀಟ್ ರಾಕ್ಷಸನ ಪ್ರತಿಮೆಯೊಂದಿದೆ. ಅದಕ್ಕೆ ಬಹಳ ಹತ್ತಿರದಲ್ಲಿದೆ. ಅಲ್ಲದೆ, ಇಲ್ಲಿ ʼನಿಮ್ಮ ಗಡಿಯಾರವನ್ನು ಎಸೆದುಬಿಡಿʼ ಎಂಬಂಥ ಸಲಹೆಗಳನ್ನು ನೀಡುವ ಫಲಕಗಳನ್ನೂ ಕಾಣಬಹುದು. ಸ್ವತಃ ಲೆನಿನ್ ಪ್ರತಿಮೆಯೇ ಇಲ್ಲಿನ ಕಲಾವಿದರ ಅತಿರೇಕದ ಕಲಾ ಪ್ರದರ್ಶನಕ್ಕೆ ಹಲವು ಬಾರಿ ತುತ್ತಾಗಿದೆ. ಈ ಪ್ರತಿಮೆಗೆ ಜಾನ್ ಲೆನನ್‌ನಂತೆ ವೇಷ ಹಾಕುವುದು, ಕ್ರಿಸ್‌ಮಸ್ ಸಮಯದಲ್ಲಿ ಕೆಂಪು ನಕ್ಷತ್ರದಿಂದ ಅಲಂಕರಿಸುವುದು, 'ಗೇ ಪ್ರೈಡ್' ವಾರದಲ್ಲಿ ಸ್ತ್ರೀ ವೇಷ ಧರಿಸುವುದು ಮತ್ತು ಜೋಕರ್‌ನಂತೆ ಬಣ್ಣ ಹಚ್ಚುವಂಥ ಪ್ರಯೋಗಗಳನ್ನು ಮಾಡಲಾಗಿದೆ. ವಿಶೇಷವೆಂದರೆ, ಮೆರವಣಿಗೆಗಳ ಸಮಯದಲ್ಲಿ ಈ ಪ್ರತಿಮೆಯ ತಲೆ ಮೇಲೆ ಜನ ಕುಳಿತುಕೊಂಡು ಮೆರವಣಿಗೆ ನೋಡುತ್ತಾರೆ. ನಾವು ಹೋದಾಗ ಹಾಲೋವೀನ್ ಸಮೀಪಿಸುತ್ತಿದ್ದುದರಿಂದ ಲೆನಿನ್ ಪ್ರತಿಮೆಯ ಶಿರಭಾಗವನ್ನು ಕುಂಬಳಕಾಯಿಯ ಪ್ರತಿಕೃತಿಯಿಂದ ಮುಚ್ಚಿದ್ದರು. ಇದೂ ಸಾಕಷ್ಟು ಮನೋರಂಜನೆ ನೀಡಿತು.
ಇದು ಈಗ ಖಾಸಗಿ ಜಾಗದಲ್ಲಿದ್ದು, ಒಂದು ಟ್ರಸ್ಟ್‌ನ ಅಧೀನಕ್ಕೆ ಒಳಪಟ್ಟಿದೆ. ಲೆನಿನ್‌ನ ಪ್ರತಿಮೆ ಅಮೆರಿಕದ ನೆಲದಲ್ಲಿ ಸ್ಥಾಪನೆಯಾದಾಗ ಜನರಿಂದ ಹಾಗೂ ಮಾಧ್ಯಮಗಳಿಂದ ಸಾಕಷ್ಟು ವಿರೋಧ ಉಂಟಾಯಿತು. ಪ್ರತಿಮೆಯು ಖಾಸಗಿ ಜಾಗದಲ್ಲಿ ಸ್ಥಾಪಿಸಲಾಗಿದೆ ಎಂಬುದನ್ನು ಮರೆತು ವಿರೋಧಿಸಿದರು. ಅಷ್ಟೇ ಅಲ್ಲ ಪ್ರತಿಮೆಯ ಕಲಾತ್ಮಕತೆಯ ಬಗೆಗೆ ಯಾರಬ್ಬರೂ ಗೌರವವನ್ನೂ ತೋರಲಿಲ್ಲ. ಆದರೆ, ಕಾಲ ಸರಿದಂತೆ ಈ ವಿರೋಧಗಳಿಂದಲೇ ಈ ಜಾಗ ಪ್ರವಾಸಿಗರ ಆಕರ್ಷಣೆಯಾಗಿ ಬದಲಾಯಿತು. 2006ರಲ್ಲೇ ಈ ಪ್ರತಿಮೆಯ ಬೆಲೆ ಸುಮಾರು 2,50,000 ಡಾಲರ್ ಎಂದು ಹೇಳಲಾಗಿತ್ತು. ಈಗ ಊಹೆಗೂ ಸಿಗುವುದು ಕಷ್ಟ! ಫ್ರೆಮಾಂಟ್ ಈ ಪ್ರತಿಮೆಗೆ ಸೂಕ್ತವಲ್ಲ ಅಥವಾ ವಿಚಿತ್ರವಾದ ಜಾಗ ಅಂತನಿಸಬಹುದು. ಆದರೆ, ಹಾಗಿಲ್ಲ. ಈ ಪ್ರತಿಮೆಗೆ ಅತಿ ಹೆಚ್ಚು ಸೂಕ್ತವಾದ ಜಾಗವಿದು. ಏಕೆಂದರೆ, ಫ್ರೆಮಾಂಟ್ ಅನ್ನು ʼದಿ ಪೀಪಲ್ಸ್ ರಿಪಬ್ಲಿಕ್ ಆಫ್ ಫ್ರೆಮಾಂಟ್ʼ ಹಾಗೂ ʼಆರ್ಟಿಸ್ಟ್ಸ್ ರಿಪಬ್ಲಿಕ್ ಆಫ್ ಫ್ರೆಮಾಂಟ್ʼ ಎಂದೇ ಕರೆಯಲಾಗುತ್ತದೆ. ಒಂದು ಕಾಲದಲ್ಲಿ ತೀವ್ರಗಾಮಿ ರಾಜಕೀಯ ಮತ್ತು ಕೌಂಟರ್ ಕಲ್ಚರ್‌ನ ಕೇಂದ್ರಬಿಂದುವಾಗಿತ್ತು ಈ ಜಾಗ. ಕಾಲಾನಂತರದಲ್ಲಿ ಇದು ಸ್ವಲ್ಪಮಟ್ಟಿಗೆ ಆಧುನೀಕರಣಗೊಂಡಿದ್ದರೂ, ಇಂದಿಗೂ ಇಲ್ಲಿ ರೋಮಾಂಚಕ ಕಲಾ ಸಮುದಾಯವು ನೆಲೆಸಿದೆ.