ಪರದೇಶದಲ್ಲಿ ಪರದೇಸಿಯಾಗದಿರಿ
Keep these things in mind when traveling abroad.
- ಭಾರತಿ,ಹೊಸಕೊಪ್ಪ
ಅದು ಸಂಪೂರ್ಣ ಹೊಸ ದೇಶ. ನಿಮ್ಮ ಊರಿಗೂ ಅಲ್ಲಿಗೂ ಅಜಗಜಾಂತರ. ಬಸ್ ಹತ್ತಿ ಹೋಗೋಣ ಎಂದರೆ ಅಲ್ಲಿ ಬರೆದಿರುವ ವಿದೇಶಿ ಭಾಷೆಯ ಬೋರ್ಡ್ ನಿಮಗೆ ಅರ್ಥವಾಗದಿರಬಹುದು. ಟ್ಯಾಕ್ಸಿ ಏರೋಣ ಎಂದರೆ ಎಲ್ಲಿಯೋ ಕರೆದುಕೊಂಡು ಹೋಗಿ ಬಿಟ್ಟರೆ ಎನ್ನುವ ಸಣ್ಣ ಅಳುಕು. ಇನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದರೂ ಈ ರೀತಿಯ ಕೆಲವು ಸಮಸ್ಯೆಗಳು ಇದ್ದೇ ಇರುತ್ತವೆ. ಇವುಗಳ ಮಧ್ಯೆ ಹೊಸಬರನ್ನು ಕಂಡರೆ ಎಷ್ಟು ಸಿಗುತ್ತದೆಯೋ ಅಷ್ಟನ್ನು ಬಾಚಿಕೊಂಡು ಬಿಡೋಣ ಎಂದು ಹೊಂಚು ಹಾಕುತ್ತಿರುವವರೂ ಇರುತ್ತಾರೆ. ಟೂರಿಸ್ಟ್ ಸ್ಪಾಟ್ಗಳಲ್ಲಿ ನಿಮ್ಮನ್ನು ಖುಷಿಯಿಂದ ಸ್ವಾಗತಿಸುವವರು ಒಂದು ಕಡೆಯಾದರೆ, ಇಲ್ಲಿ ಟ್ರ್ಯಾಪ್ ಮಾಡಿ ನಿಮ್ಮನ್ನು ಆ ಜಾಲದಲ್ಲಿ ಬೀಳಿಸುವವರು ಮತ್ತೊಂದಷ್ಟು ಮಂದಿ. ಈ ರೀತಿಯ ಟ್ರ್ಯಾಪ್ನಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್.
ಇದನ್ನೂ ಓದಿ: ಓಮೈಕಾನ್! ಇಲ್ಲಿನ ತಾಪಮಾನ... ಓಮೈಗಾಡ್!
ಗೂಗಲ್ ಮಾಡಿ
ಯಾವುದೇ ನಗರಕ್ಕೆ ತೆರಳಿದರೂ ಅಲ್ಲಿ ನೋಡೋಕೆ ಒಂದಷ್ಟು ಜಾಗಗಳು ಇರುತ್ತವೆ. ನೀವು ಇನ್ಸ್ಟಾಗ್ರಾಮ್ನಲ್ಲಿ ನೋಡಿದ ಜಾಗಕ್ಕೂ ಅಲ್ಲಿನ ರಿಯಾಲಿಟಿಗೂ ಸಾಕಷ್ಟು ವ್ಯತ್ಯಾಸ ಇರಬಹುದು. ಹೀಗಾಗಿ, ಆ ಜಾಗಕ್ಕೆ ತೆರಳೋ ಮೊದಲು ಗೂಗಲ್ ಆಳಕ್ಕೆ ಇಳಿದು ಒಂದಷ್ಟು ಅಧ್ಯಯನ ಮಾಡಿ. ಈಗಾಗಲೇ ಅಲ್ಲಿಗೆ ತೆರಳಿದವರು ತಮ್ಮ ಅನುಭವಗಳನ್ನು ಎಲ್ಲಾದರೂ ಒಂದು ಕಡೆ ಬರೆದುಕೊಂಡವರು ಇದ್ದೇ ಇರುತ್ತಾರೆ. ಅದನ್ನು ವಿಮರ್ಶಿಸಿ ಒಂದು ನಿರ್ಧಾರಕ್ಕೆ ಬನ್ನಿ. ಆ ಜಾಗಕ್ಕೆ ಹೋಗಬೇಕೋ ಅಥವಾ ಬೇಡವೋ ಎಂಬ ಅಂತಿಮ ನಿರ್ಧಾರ ನಿಮ್ಮದೇ ಆಗಿರಲಿ.
ರೀಲ್ಸ್ ಮಂದಿಯ ರೀಲು

ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡುವವರು ಕೊಡೋ ಸಲಹೆ ಮತ್ತು ಶಿಫಾರಸು ನಂಬಿ ಯಾವುದೇ ಅಂಗಡಿ ಅಥವಾ ಹೊಟೇಲ್ ಹೋಗುವ ಸಾಹಸ ಮಾತ್ರ ಮಾಡಬೇಡಿ. ಕೆಲವೊಮ್ಮೆ ಇದು ‘ನಿರೀಕ್ಷೆ vs ವಾಸ್ತವ’ ಆಗಬಹುದು. ನೀವು ಅಂದುಕೊಳ್ಳೋದು ಒಂದು, ಅಲ್ಲಿ ಆಗೋದೇ ಇನ್ನೊಂದು ಎಂದಾದಾಗ ಬೇಸರ ಆಗುತ್ತದೆ. ಹೀಗಾಗಿ, ಸ್ಥಳೀಯರನ್ನು ಪರಿಚಯ ಮಾಡಿಕೊಂಡು ಅವರಿಂದ ಒಂದಷ್ಟು ಮಾಹಿತಿ ಪಡೆದರೆ ಉತ್ತಮ.
ನೀವು ಸರ್ವಜ್ಞರಲ್ಲ
ಹೊಸ ಜಾಗವನ್ನು ನೋಡಿವಾಗ ಅದು ಹೇಗೋ, ಏನೋ ಎಂಬ ಅಳುಕು ಇರಬಹುದು. ಅಂಥ ಸಂದರ್ಭದಲ್ಲಿ ನೀವೇ ಎಲ್ಲವನ್ನೂ ಅನ್ವೇಷಿಸಿಲು ಸಾಧ್ಯವಿಲ್ಲ. ಹಾಗೆ ಹೋದಾಗ ನೀವು ಮೋಸ ಹೋಗುವ ಸಾಧ್ಯತೆಯೂ ಇರುತ್ತದೆ. ಅಂಥ ಸಂದರ್ಭದಲ್ಲಿ ಸ್ಥಳೀಯರನ್ನು ಪರಿಚಯಿಸಿಕೊಂಡು, ಅವರ ಸಹಾಯದಿಂದ ಪ್ಲ್ಯಾನ್ ರೆಡಿ ಮಾಡಿ.
ಜೇಬು ಜೋಪಾನ

ಪ್ರವಾಸಿ ಸ್ಥಳದ ಪಕ್ಕದಲ್ಲೇ ಇರುವ ಹೊಟೇಲ್ ಅಥವಾ ಹ್ಯಾಂಡ್ಮೇಡ್ ಶಾಪ್ಗಳಿಗೆ ತೆರಳಬೇಡಿ. ಇದು ನಿಮ್ಮ ಜೇಬಿಗೆ ಭಾರ ಆಗಬಹುದು. ಆ ಜಾಗಕ್ಕಿಂತ ನಗರದ ಒಳ ಭಾಗದ ಕೆಲವು ಕಡೆಗಳಲ್ಲಿ ಓಡಾಡಿ ಬೆಲೆಯನ್ನು ಅಳೆದು ತೂಗಿ ಆ ಬಳಿಕವೇ ಖರೀದಿ ಮಾಡಿ. ಅಂದಾಗ ಮಾತ್ರ ನೀವು ಹಣ ಉಳಿಸಬಹುದು.
ಕೆಲವು ಹೊಟೇಲ್ಗಳಲ್ಲಿ ಟೂರಿಸ್ಟ್ಗಳು ತುಂಬಿ ಹೋಗಿರುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ಲೋಕಲ್ ಜನರು ಮಾತ್ರ ನೆರೆದಿರುತ್ತಾರೆ. ಸ್ಥಳೀಯರು ಯಾವ ಹೊಟೇಲ್ಗೆ ಹೆಚ್ಚು ಆದ್ಯತೆ ನೀಡುತ್ತಾರೋ ಅಂಥ ಸ್ಥಳಗಳನ್ನು ನೀವು ಆಯ್ಕೆ ಮಾಡಿಕೊಂಡರೆ ಒಂದು ಹಂತಕ್ಕೆ ಗೆದ್ದಂತೆ. ಟೀ ಶಾಪ್, ಬೇಕರಿ, ಬಾರ್, ಸ್ಟ್ರೀಟ್ ಫುಡ್ ಎಲ್ಲದಕ್ಕೂ ಈ ತಂತ್ರ ಸಹಕಾರಿ ಆಗುತ್ತದೆ.