• ಸಂತೋಷ್ ರಾವ್ ಪೆರ್ಮುಡ

ಜಗತ್ತಿನ ಅತ್ಯಂತ ಸಣ್ಣ ವಿಮಾನ ನಿಲ್ದಾಣ ಯಾವುದು ಗೊತ್ತಾ? ಇಲ್ಲಿ ಐಷಾರಾಮಿ ಮತ್ತು ರೋಮಾಂಚಕ ಪ್ರಯಾಣವನ್ನು ಒದಗಿಸುವ ವಿಮಾನವೇನೋ ಇದೆ, ಆದರೆ ಈ ವಿಮಾನ ನಿಲ್ದಾಣದಲ್ಲಿ ಯಾವ ಮೂಲಭೂತ ಸೌಕರ್ಯಗಳೂ ಇಲ್ಲ. ಹೌದು, ಇದು ಕೊಲಂಬಿಯಾ ದೇಶದ ಅಗುವಾಚಿಕಾ ಎಂಬ ಸ್ಥಳದಲ್ಲಿ ಇರುವ ಹಕಾರಿಟಾಮಾ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ಜಾಗತಿಕವಾಗಿ ಚಿಕ್ಕದು. ಇಲ್ಲಿನ ಕಾಯುವ ಪ್ರದೇಶವು ಮಾವಿನ ಮರದ ಕೆಳಗೆ ಇದೆ. ಕೊಲಂಬಿಯಾ ದೇಶದ ಅಗುವಾಚಿಕಾದ ಹಕಾರಿಟಾಮಾ ವಿಮಾನ ನಿಲ್ದಾಣವು ಸಣ್ಣ, ಪರಿಸರಸ್ನೇಹಿ ಸ್ಥಳವಾಗಿ ಮತ್ತು ಸರಳತೆಯ ಕಾರಣಕ್ಕೆ ಜಗತ್ತಿನ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಮೊದಲ ವಿಮಾನಯಾನಕ್ಕೆ ಸರ್ಟಿಫಿಕೇಟ್‌ ಸಂಭ್ರಮ!

ಕೊಲಂಬಿಯಾ ದೇಶದ ಹಕಾರಿಟಾಮಾದಲ್ಲಿ ಇರುವ ಈ ವಿಮಾನ ನಿಲ್ದಾಣವು ಅದರ ಸಣ್ಣ ಗಾತ್ರದಿಂದಾಗಿ ಹೆಚ್ಚು ಪ್ರಸಿದ್ಧವಾಗಿದೆ. ಇಲ್ಲಿ ವಿಮಾನವು ಟೇಕ್ ಆಫ್ ಆಗಲು ಇಪ್ಪತ್ತು ನಿಮಿಷಗಳು ಬಾಕಿ ಉಳಿದಿವೆ ಎನ್ನುವಾಗ ಪ್ರಯಾಣಿಕರ ಬೋರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ವಿಮಾನ ನಿಲ್ದಾಣವೆಂದರೆ ಎಲ್ಲರ ಮನಸಿನಲ್ಲೂ ಪ್ರಯಾಣಿಕರು ವಿಶ್ರಮಿಸುವ ಸ್ಥಳ, ದೊಡ್ಡ ಶಾಪಿಂಗ್ ಮಾಲ್‌ಗಳು, ದೊಡ್ಡ ಹೊಟೇಲ್‌ಗಳು, ಐಷಾರಾಮಿ ವಿಮಾನಗಳು ಮತ್ತು ವಿವಿಧ ರೀತಿಯ ಅಂಗಡಿಗಳ ಸಾಲುಗಳು ಇರುತ್ತವೆ ಎಂಬ ಕಲ್ಪನೆ ಬರುತ್ತದೆ. ಆದರೆ ಈ ವಿಮಾನ ನಿಲ್ದಾಣದಲ್ಲಿ ಹಾಗಿಲ್ಲ. ಈ ವಿಮಾನ ನಿಲ್ದಾಣವು ಕೊಲಂಬಿಯಾದ ಅಗುವಾಚಿಕ ನಗರದಿಂದ ದಕ್ಷಿಣಕ್ಕೆ ಸುಮಾರು 7 ಕಿಮೀ ದೂರದಲ್ಲಿದೆ.

Untitled design (59)

ಹಕಾರಿಟಾಮಾ ವಿಮಾನ ನಿಲ್ದಾಣದಿಂದ ಬೋಗೋಟಾದ ಎಲ್ ಡೊರಾಡೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 42 ಆಸನ ಸಾಮರ್ಥ್ಯವಿರುವ ಕೇವಲ ಒಂದು ವಿಮಾನವು ಹಾರಾಟ ನಡೆಸುತ್ತದೆ. ಹಕಾರಿಟಾಮಾ ವಿಮಾನ ನಿಲ್ದಾಣದ ಬೋರ್ಡಿಂಗ್ ಸ್ಥಳ ಮಾವಿನ ಮರದ ಕೆಳಗೆ ಇರುವುದು ಈ ವಿಮಾನ ನಿಲ್ದಾಣದ ವಿಶೆಷತೆಗಳಲ್ಲೊಂದು. ಪೂರ್ತಿ ವಿಮಾನ ನಿಲ್ದಾಣದಲ್ಲಿ ಕೇವಲ ಎರಡು ಕಾಯುವ ಪ್ರದೇಶಗಳಿದ್ದು, ಒಂದು ಆಗಮನ ಕೊಠಡಿ, ಮತ್ತೊಂದು ಲಗೇಜು ತಪಾಸಣೆ ಕೊಠಡಿ. ಇಲ್ಲಿ ಸಿಬ್ಬಂದಿಗಳಿಗೆ, ಪ್ರಯಾಣಿಕರಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಎಲ್ಲರಿಗೂ ಕೇವಲ ಒಂದೇ ಶೌಚಾಲಯ! ಇದು ಸಾಕಷ್ಟು ವಿಶಾಲ ಮತ್ತು ಸ್ವಚ್ಛವಾಗಿದೆ. ಇಲ್ಲಿನ ವಿಮಾನಗಳು ಕೇವಲ 48 ಪ್ರಯಾಣಿಕರನ್ನಷ್ಟೇ ಸಾಗಿಸುವುದರಿಂದ ಒಂದೇ ಶೌಚಾಲಯ ಸಾಕಾಗುತ್ತದೆ. ಇಲ್ಲಿ ಪ್ರಯಾಣಿಕರ ಲಗೇಜ್ ಪರಿಶೀಲಿಸಲು ಯಂತ್ರವಿಲ್ಲ, ಬದಲಿಗೆ ಕೈಯಿಂದಲೇ ಬ್ಯಾಗ್ ತೆರೆದು ಪರಿಶೀಲಿಸಲಾಗುತ್ತದೆ. ಜನರು ವಿಮಾನ ನಿಲ್ದಾಣಕ್ಕೆ ಬಂದರೆ ಬಿಸಿಲಿನಲ್ಲಿ ಸರದಿ ಸಾಲಿನಲ್ಲಿ ನಿಲ್ಲಬೇಕು. ಈ ವಿಮಾನ ನಿಲ್ದಾಣವು ವಿಶಾಲವಾದ ಮತ್ತು ಸ್ವಚ್ಛ ಪರಿಸರವನ್ನು ಹೊಂದಿದೆ. ಪ್ರಯಾಣಿಕರು ಇಲ್ಲಿಂದ ವಿಮಾನದಲ್ಲಿ ಹಾರಾಟ ಆರಂಭಿಸುವ ಮೊದಲು ಪ್ರಕೃತಿಯ ತಾಜಾ ಗಾಳಿಯ ಅನುಭವವನ್ನು ಪಡೆಯಬಹುದು. ಇಲ್ಲಿದ ಹೊರಡುವ ವಿಮಾನವು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಆಸನಗಳು ಸಾಕಷ್ಟು ಆರಾಮದಾಯಕವಾಗಿವೆ. ಇಲ್ಲಿ ಪ್ರಯಾಣಿಕರ ಲಗೇಜನ್ನು ಸಣ್ಣ ಒಳಾಂಗಣ ಕಾಯುವ ಕೋಣೆಯಲ್ಲಿ ಪರಿಶೀಲಿಸಲಾಗುತ್ತದೆ. ಬೋರ್ಡಿಂಗ್ ಪಾಸ್ ಸ್ವೀಕರಿಸಿದ ನಂತರ, ಪ್ರಯಾಣಿಕರು ಎರಡನೆಯ ಕಾಯುವ ಪ್ರದೇಶವನ್ನು ಪ್ರವೇಶಿಸಬಹುದು. ಅದಕ್ಕೂ ಮೊದಲು ನಿಲ್ದಾಣದ ಹೊರಭಾಗದಲ್ಲೇ ಸಣ್ಣದಾದ ಕಾಲು ದಾರಿಯ ಸಮೀಪ ಬಿಸಿಲಿನಲ್ಲಿ ನಿಂತಿರಬೇಕು. ಈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ತಮ್ಮ ಲಗೇಜುಗಳನ್ನು ಮರಳಿ ಪಡೆಯಲು ತಮ್ಮ ಪ್ರಯಾಣದ ಟಿಕೆಟ್‌ ಅನ್ನು ತೋರಿಸುವುದು ಕಡ್ಡಾಯವಾಗಿದೆ.

Untitled design (58)

ಬೋರ್ಡಿಂಗ್ ಪ್ರಕ್ರಿಯೆ

ಬೋರ್ಡಿಂಗ್ ಸಮಯ ಸಮೀಪಿಸುತ್ತಿದ್ದಂತೆ, ಪ್ರಯಾಣಿಕರು ಎರಡನೆಯ ಒಳಾಂಗಣ ಕಾಯುವ ಪ್ರದೇಶಕ್ಕೆ ತೆರಳುತ್ತಾರೆ. ಅಲ್ಲಿನ ಅಧಿಕಾರಿಗಳು ಕೈಗಳಿಂದಲೇ ಲಗೇಜ್ ಪರಿಶೀಲನೆ ಮಾಡುತ್ತಾರೆ. ನಿಲ್ದಾಣವು ಸಣ್ಣದಾಗಿ ಇದ್ದರೂ ಸರಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಏರ್‌ಸ್ಟ್ರಿಪ್ ಸಣ್ಣ ATR ವಿಮಾನಗಳಿಗೆ ಮಾತ್ರ ಹಾರಾಟಕ್ಕೆ ಅವಕಾಶ ಕಲ್ಪಿಸುತ್ತದೆ. ಇಂಥ ವಿಮಾನ ನಿಲ್ದಾಣ ಇಂದಿಗೂ ಕಾರ್ಯನಿರ್ವಹಿಸುತ್ತಿರುವುದು ಒಂದು ಅಚ್ಚರಿಯೇ ಸರಿ.