ದುಬೈನವರ ಬುದ್ಧಿವಂತಿಕೆಗೆ ಬೆಸ್ಟ್ ಉದಾಹರಣೆ ಎಂದರೆ ಗ್ಲೋಬಲ್ ವಿಲೇಜ್. ದುಬೈನಲ್ಲಿ ದುಬೈ ಮಾತ್ರವಲ್ಲ ಇಡೀ ಜಗತ್ತನೇ ತೋರಿಸ್ತೀವಿ ಅಂತ ಹೊರಟ ಅವರ ಬುದ್ಧಿವಂತಿಕೆ ಸಾಧಾರಣವಾದುದಲ್ಲ. ಬಹುಶಃ ಮಾಲ್ ಸಂಸ್ಕೃತಿ ಹುಟ್ಟಿದ್ದು ಇಲ್ಲಿಂದಲೇ ಇರಬೇಕು ಅನ್ನೋದು ನನ್ನ ಊಹೆ. ಗ್ಲೋಬಲ್ ವಿಲೇಜ್ ಮೂಲಕ ಜಗತ್ತಿನ ಅಷ್ಟೂ ಸಂಸ್ಕೃತಿ ಮತ್ತು ಸ್ಮೃತಿಯನ್ನು ಒಂದೇ ಕಡೆ ತಂದಿರುವ ಇವರ ಬಿಸಿನೆಸ್ ಸ್ಕಿಲ್ ಬಗ್ಗೆ ಅಚ್ಚರಿಪಡದೇ ವಿಧಿ ಇಲ್ಲ. ಅತ್ಯಂತ ಕಡಿಮೆ ದರದಲ್ಲಿ ದೊಡ್ಡ ಅನುಭವ ಕೊಡುವ ಪ್ರವಾಸಿ ಸ್ಥಳವನ್ನಾಗಿ ಇದನ್ನು ರೂಪಿಸಲಾಗಿದೆ. 25-30 ಹೆಜ್ಜೆಗೆ ಒಂದು ದೇಶವನ್ನು ನೀವು ನೋಡಬಹುದು. ನೋಡಿ, ವಿದೇಶ ಯಾತ್ರೆಯನ್ನು ದುಬೈನವರು ಎಷ್ಟು ಸರಳವಾಗಿಸಿದ್ದಾರೆ.

ಇದನ್ನೂ ಓದಿ: ದುಬೈ ಫ್ರೇಮ್ : ಆಕಾಶಕ್ಕೊಂದು ಬಾಗಿಲು

ಇಂಡಿಯಾ ಮಾರುಕಟ್ಟೆಗೆ ಹೆಜ್ಜೆ ಇಟ್ಟರೆ, ನಮ್ಮ ಉಡುಪು, ಜ್ಯುವೆಲ್ಲರಿ, ಆಯುರ್ವೇದ ವಸ್ತುಗಳು, ಪಾನಿಪೂರಿ, ಮಾವಿನ ರಸ ಸಿಗುತ್ತದೆ. ಪಾಕಿಸ್ತಾನ, ಆಫ್ಘಾನಿಸ್ತಾನದಲ್ಲಿ ಕಾರ್ಪೆಟ್, ಡ್ರೈಪೂಟ್ಸ್, ಶಾಲು, ಸುಗಂಧ ದ್ರವ್ಯಗಳನ್ನು ನೋಡಬಹುದು. ಟರ್ಕಿಯಲ್ಲಿ ಲ್ಯಾಂಪುಗಳು, ಸಿಹಿ ಪದಾರ್ಥಗಳು, ಆಫ್ರಿಕಾದಲ್ಲಿ ಕೈಗಾರಿಕಾ ವಸ್ತುಗಳು, ಮರದ ಕಲಾಕೃತಿಗಳು, ಚೀನಾ, ಥಾಯ್ಲೆಂಡಿನಲ್ಲಿ ಗ್ಯಾಜೆಟ್, ಆಟಿಕೆ, ಬೀದಿ ಆಹಾರ… ಹೀಗೆ ಒಂದೊಂದು ಇನ್ನೊಂದಕ್ಕೆ ಭಿನ್ನವಾಗಿ ರೂಪಿಸಿದ್ದಾರೆ. ಅಮೇರಿಕಾದಲ್ಲಿ ಏನು ಪ್ರಸಿದ್ಧ? ಆಫ್ರಿಕಾದ ಕರಕುಶಲ ಯಾವುದು? ಬ್ಯಾಂಕಾಕಿನ ಫ್ಲೋಟಿಂಗ್ ಮಾರ್ಕೆಟ್ ಹೇಗಿರುತ್ತದೆ? ಚೀನಾದ ಆಹಾರ ಪದ್ಧತಿ ಹೇಗೆ? ಪಾಕಿಸ್ತಾನದ ಮಾರುಕಟ್ಟೆ ನಮ್ಮಂತೆಯೇನಾ? ಇಂಥಾ ಎಲ್ಲಾ ಪ್ರಶ್ನೆಗಳಿಗೆ ಸಿಂಗಲ್ ವಿಂಡೋ ಉತ್ತರವೇ ಗ್ಲೋಬಲ್ ವಿಲೇಜ್.

ಇಲ್ಲಿ 25ಕ್ಕೂ ಹೆಚ್ಚು ದೇಶಗಳ ಮಾರುಕಟ್ಟೆಗಳನ್ನು ನಾವು ನೋಡಬಹುದು. ಗ್ಲೋಬಲ್ ವಿಲೇಜ್‌ನ ಬಹುದೊಡ್ಡ ಸಂಗತಿಯೆಂದರೆ, ಇದು ಕೇವಲ ಮಾರುಕಟ್ಟೆ ಅಲ್ಲ. ಇದು ಸಂಸ್ಕೃತಿಗಳ ಸೇತುವೆ. ದೇಶಗಳು ರಾಜಕೀಯವಾಗಿ ಬೇರೆಬೇರೆ ಇದ್ದರೂ ಜನರು ಇಲ್ಲಿ ವ್ಯಾಪಾರ ಮಾಡುತ್ತಾರೆ, ಊಟ ಹಂಚಿಕೊಳ್ಳುತ್ತಾರೆ. ಹಾಡು ನೃತ್ಯಗಳನ್ನು ಆಸ್ವಾದಿಸುತ್ತಾರೆ. ಒಂದು ನಗರದಲ್ಲಿ ಮಾನವ ಸಂಸ್ಕೃತಿಯ ಏಕತೆಯನ್ನು ಜೀವಂತವಾಗಿ ತೋರಿಸುವ ಜಾಗವಾಗಿಯೂ ಈ ಗ್ಲೋಬಲ್ ವಿಲೇಜ್ ಗಮನ ಸೆಳೆಯುತ್ತದೆ.

Untitled design - 2026-03-10T113901.554

ಪ್ರತಿ ವರ್ಷ ಅಕ್ಟೋಬರ್‌ನಿಂದ ಮೇ ತನಕ ಮಾತ್ರ ತೆರೆದಿರುವ ಈ ಮಾರುಕಟ್ಟೆ ಸಂಜೆ 4ರಿಂದ ರಾತ್ರಿ 2ರವರೆಗೆ ಕಂಗೊಳಿಸುತ್ತದೆ. ಮಂಗಳವಾರ ಕುಟುಂಬಗಳಿಗೆ ಮಾತ್ರ ಪ್ರವೇಶ ಎನ್ನುವುದು ವಿಶೇಷ ನಿಯಮ. ಮಹಿಳೆಯರಿಗೆ ಅವರೆಷ್ಟು ಗೌರವ ಕೊಡುತ್ತಾರೆ ಅಂತ ನಮಗನ್ನಿಸಬಹುದು. ಆದ್ರೆ ನಂಬಿ ಅದೊಂದೇ ಕಾರಣವಲ್ಲ. ಮಹಿಳೆಯರು ಜೊತೆಗಿದ್ದರೆ ವ್ಯಾಪಾರ, ವಹಿವಾಟು ದುಪ್ಪಟ್ಟಾಗುತ್ತದೆ ಅನ್ನೋ ಸತ್ಯ ಅವರಿಗೆ ಗೊತ್ತಿದೆ. ಮತ್ತವರು ಶುದ್ಧ ವ್ಯಾಪಾರಿಗಳು! ಈ ಗ್ಲೋಬಲ್ ವಿಲೇಜಿನಲ್ಲಿ ಉಡುಪು, ಸುಗಂಧ ದ್ರವ್ಯಗಳು, ಕೈಗಾರಿಕಾ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳು, ಚಿತ್ರಗಳು, ಔಷಧೀಯ ಉತ್ಪನ್ನಗಳು—ಎಲ್ಲವೂ ಲಭ್ಯ. ಆಹಾರ ವಿಭಾಗವೇ ಒಂದು ಪ್ರಪಂಚ. ಅರೇಬಿಯನ್ ಮಂಧಿ, ಟರ್ಕಿಶ್ ಕಬಾಬ್, ಇರಾನಿಯನ್ ಐಸ್‌ಕ್ರೀಮ್, ಚೈನೀಸ್ ಸ್ನ್ಯಾಕ್ಸ್—ಎಲ್ಲವೂ ಒಂದೇ ರಸ್ತೆ. ವಿಶೇಷವಾಗಿ ಕುನಾಫ ಸಿಹಿಗೆ ಇಲ್ಲಿ ಪ್ರತ್ಯೇಕ ರುಚಿ ಇದೆ.

ಇನ್ನು ಇದರ ವಹಿವಾಟಂತೂ ನಮ್ಮ ಕಣ್ಣು ತಿರುಗುವಂತೆ ಮಾಡಬಲ್ಲದು. ನೂರಾರು ಎಕರೆಯಲ್ಲಿ ಹರಡಿಕೊಂಡಿರುವ ಈ ಗ್ಲೋಬಲ್ ವಿಲೇಜ್ಗೆ ಪ್ರತಿ ವರ್ಷ ಸರಾಸರಿ 80 ರಿಂದ 90 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರಂತೆ. ವಾರಾಂತ್ಯ ದಿನಗಳಾದ ಶನಿವಾರ, ಭಾನುವಾರದಂದು ಒಂದು ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಭೇಟಿಕೊಡುತ್ತಾರೆಂದರೆ ಅದರ ಪ್ರಸಿದ್ಧಿಯನ್ನು ಊಹಿಸಿಕೊಳ್ಳಿ. ಅಂದಾಜು ಐನೂರು ರುಪಾಯಿ ಪ್ರವೇಶ ದರವಿರುವ ಈ ವಿಲೇಜಿಗೆ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ಪ್ರವೇಶ ಉಚಿತವಾಗಿರುತ್ತದೆ. ಕೇವಲ ಪ್ರವೇಶ ದರದಿಂದಲೇ ಅವರು ವಾರ್ಷಿಕ ನಾನೂರು ಕೋಟಿ ಸಂಪಾದಿಸಿದರೆ, ಒಂದು ಸೀಸನ್‌ನಲ್ಲಿ ಸುಮಾರು 2200 ಕೋಟಿ ವಹಿವಾಟು ನಡೆಯುತ್ತದೆ ಎಂದು ಅಂದಾಜಿಸಲಾಗಿದೆ. 1997ರಲ್ಲಿ ಶುರುವಾದ ಈ ಗ್ಲೋಬಲ್ ವಿಲೇಜ್ ಇದೀಗ 29ನೇ ಆವೃತ್ತಿಯ ಸಂಭ್ರಮದಲ್ಲಿದೆ. ಈ ಜಗತ್ತನ್ನು ಸುಮ್ಮನೆ ಸುತ್ತಾಡಿ ಬರಬೇಕೆಂದರೂ ಒಂದು ಗಂಟೆ ಬೇಕು; ಪ್ರತಿಯೊಂದು ದೇಶ ನೋಡಿ ಬರುತ್ತೇವೆಂದು ಹೊರಟರೆ ಮಾತ್ರ ಕನಿಷ್ಠ ಐದು ಗಂಟೆಯಾದರೂ ಬೇಕು. ಅಷ್ಟು ಹೊತ್ತಿಗೆ ಕೈಕಾಲುಗಳು ಹಿಂದೂಸ್ತಾನಿ ರಾಗದಲ್ಲಿ ಹಾಡುತ್ತಿರುತ್ತವೆ.

ದುಬೈನಲ್ಲಿ ನೋಡಬೇಕಾದ ಜಾಗಗಳಲ್ಲಿ ಇದು ಪ್ರಮುಖವಾದುದು.