ಹಿಮದಿಂದ ಇತಿಹಾಸದವರೆಗೆ - ಸ್ವಿಟ್ಜರ್‌ಲ್ಯಾಂಡ್ ಯಾತ್ರೆ
ಎಂಜೆಲ್ ಬರ್ಗ್, ಇದು ಮೌಂಟ್ ಟಿಟ್ಲಿಸ್‌ಗೆ ಹೋಗಲು ಇರುವ ಬೇಸ್ ಪಾಯಿಂಟ್. ಇಲ್ಲಿ ದನಕರುಗಳನ್ನು ಕಟ್ಟಿ ಹಾಕಿರುವುದಿಲ್ಲ. ರೈತರ ಮನೆ ಮುಂದೆ ಹುಲ್ಲಿನ ಉಂಡೆ, ಕಟ್ಟಿಗೆಯನ್ನೂ ರಾಶಿಮಾಡಿ ಸಂಗ್ರಹಿಸಿ ಇಟ್ಟಿರುತ್ತಾರೆ. ಬಹುಶಃ ಇದು ಚಳಿಗಾಲಕ್ಕೆ ಇರಬಹುದು. ವಿಶೇಷವೆಂದರೆ ಇಲ್ಲಿನ ಎಲ್ಲಾ ರೈತರ ಮನೆ ಮುಂದೆಯೂ ಒಂದು ಮರ್ಸಿಡಿಸ್ ಕಾರು ಇದ್ದೇ ಇರುತ್ತದೆ. ನಮ್ಮಲ್ಲಿನ ರೈತರಂತೆ ಯಾರು ಬಡವರಂತೆ ಕಾಣುವುದೇ ಇಲ್ಲ.
- ಅಶ್ಚಿತಾ ಶೆಟ್ಟಿ ಇನೋಳಿ
ಜೀವನದ ಮೊದಲ ಅನುಭವಗಳು ಯಾವಾಗಲೂ ವಿಶೇಷವಾಗಿರುತ್ತವೆ. ಮನಸನ್ನು ಶಾಶ್ವತವಾಗಿ ಆವರಿಸುತ್ತವೆ. ಸ್ವಿಟ್ಜರ್‌ಲ್ಯಾಂಡ್‌ನ ಪರ್ವತ ಶ್ರೇಣಿಗಳ ನಡುವೆ ಮೊದಲ ಬಾರಿಗೆ ಮೌಂಟ್ ಟಿಟ್ಲಿಸ್ ಎಂಬ ಹಿಮಪರ್ವತವನ್ನು ಕಣ್ಣಾರೆ ಕಂಡ ಆ ಕ್ಷಣ ನನಗೆ ಹೃದಯಸ್ಪರ್ಶಿಯಾಗಿತ್ತು.
ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಕ್‌ನಲ್ಲಿ ತಂಗಿದ್ದ ನಾವು ನಮ್ಮ ನಾಲ್ಕನೆಯ ದಿನದಂದು(ಜೂನ್ 4, 2025ರ) ಬೆಳಗ್ಗೆ ನಮ್ಮ ವ್ಯಾನ್‌ನಲ್ಲಿ ಏಂಜೆಲ್ ಬರ್ಗ್ ಕಡೆ ಹೊರಟೆವು. ಇಲ್ಲಿ ರೈತರ ಮನೆ ಮುಂದೆಯೂ ಮರ್ಸಿಡಿಸ್ ಕಾರುಗಳದ್ದೇ ದರ್ಬಾರು!
ಇದನ್ನೂ ಓದಿ: ಸಫಾರಿಯ ಪ್ರತ್ಯಕ್ಷ ವರದಿ
ಎಂಜೆಲ್ ಬರ್ಗ್
ಎಂಜೆಲ್ ಬರ್ಗ್, ಇದು ಮೌಂಟ್ ಟಿಟ್ಲಿಸ್‌ಗೆ ಹೋಗಲು ಇರುವ ಬೇಸ್ ಪಾಯಿಂಟ್. ಜ್ಯೂರಿಕ್‌ನಿಂದ ಮೂರುವರೆ ಗಂಟೆ ಪ್ರಯಾಣದ ದೃಶ್ಯವೇ ಕಾವ್ಯಮಯವಾಗಿತ್ತು. ಹಚ್ಚಹಸಿರಿನ ಕಾನನದ ಮಧ್ಯೆ ಪೈನ್ ಮರಗಳು, ಸುಂದರವಾದ ಬಣ್ಣ ಬಣ್ಣಗಳ ಹೂವಿನ ಹೊಲಗಳು, ಪ್ರಶಾಂತ ಹಳ್ಳಿಗಳು, ರಸ್ತೆಯ ಇಕ್ಕೆಲಗಳಲ್ಲಿ ಹಸಿರು ನೆಲಹೊದಿಕೆ ಹಾಸಿದಂತೆ ಕಾಣುವ ಹೊಲದಲ್ಲಿ ಮೇಯುವ ದನ-ಕರುಗಳು, ದೂರದಲ್ಲಿ ಹಿಮಾವೃತ ಪರ್ವತಗಳು ಅಲ್ಲಲ್ಲಿ ದೊಡ್ಡ ಚಿಮಿಣಿ ಇರುವ ಮರದ ಮನೆಗಳು, ಮಧ್ಯೆ ಸ್ಪಟಿಕ ಶುದ್ಧ ನೀರಿನ ಹಳ್ಳ- ಕೊಳ್ಳ- ನದಿಗಳು ವ್ಹಾ! ನೋಡಿದೆಲ್ಲ ಸುಂದರವಾಗಿವೆ. ಇಲ್ಲಿ ದನಕರುಗಳನ್ನು ಕಟ್ಟಿ ಹಾಕಿರುವುದಿಲ್ಲ. ರೈತರ ಮನೆ ಮುಂದೆ ಹುಲ್ಲಿನ ಉಂಡೆ, ಕಟ್ಟಿಗೆಯನ್ನೂ ರಾಶಿಮಾಡಿ ಸಂಗ್ರಹಿಸಿ ಇಟ್ಟಿರುತ್ತಾರೆ. ಬಹುಶಃ ಇದು ಚಳಿಗಾಲಕ್ಕೆ ಇರಬಹುದು. ವಿಶೇಷವೆಂದರೆ ಇಲ್ಲಿನ ಎಲ್ಲಾ ರೈತರ ಮನೆ ಮುಂದೆಯೂ ಒಂದು ಮರ್ಸಿಡಿಸ್ ಕಾರು ಇದ್ದೇ ಇರುತ್ತದೆ. ನಮ್ಮಲ್ಲಿನ ರೈತರಂತೆ ಯಾರು ಬಡವರಂತೆ ಕಾಣುವುದಿಲ್ಲ.
ಪುಸ್ತಕ, ಚಿತ್ರ, ಮಾಲ್‌ಗಳ ಕೃತಕ ಸ್ನೋ ವರ್ಲ್ಡ್‌ಗಳಲ್ಲಿ ಮಾತ್ರ ನೋಡಿದ ಮಂಜು ಈಗ ನನ್ನ ಕಣ್ಣುಗಳ ಮುಂದೆ ಜೀವಂತವಾಗಿತ್ತು. ಸುತ್ತಲೂ ಮಂಜಿನಿಂದ ಆವೃತವಾದ ಪರ್ವತಗಳ ಕೆಳಗೆ ನಿಂತಿದ್ದೆವು. ಏಂಜಲ್ಬರ್ಗ್ ತಲುಪಿದ ಮೇಲೆ ಮಂಜುಪರ್ವತದ ಮೇಲೇರಲು ಕೇಬಲ್ ಕಾರ್ ಪ್ರಯಾಣ ಆರಂಭವಾಯಿತು. ನಾವು ಕೇಬಲ್ ಕಾರ್ ಹತ್ತುವ ಮೊದಲು ಹಿಮದ ಮೇಲೆ ಹಾಕುವ ಶೂಗಳನ್ನು ಬಾಡಿಗೆಗೆ ತೆಗೆದುಕೊಂಡೆವು. ಅದಕ್ಕೆ ಬೇಕಾದ ಜಾಕೆಟ್ ಮತ್ತು ಗ್ಲೌಸ್‌ಗಳನ್ನು ನಾವು ಮೊದಲೇ ಹಾಕಿಕೊಂಡಿದ್ದೆವು. ಈ ಕೇಬಲ್ ಕಾರಿಗೆ ಎರಡು ಸ್ಟಾಪ್. ಆರು ಜನರು ಕುಳಿತುಕೊಳ್ಳಬಹುದಾದ ಕೇಬಲ್ ಕಾರ್‌ನಲ್ಲಿ ನಮ್ಮ ಪ್ರಯಾಣ ಮೌಂಟ್ ಟಿಟ್ಲಿಸ್‌ನ ಹಿಮ ಪರ್ವತದ ಕಡೆ ಸಾಗಿತು. ಹಂತ ಹಂತವಾಗಿ ಏರುತ್ತಾ ಹೋಗುತ್ತಿದ್ದಂತೆ ಭೂಮಿಯ ಬಣ್ಣ ಹಸಿರಿನಿಂದ ಬಿಳಿಗೆ ಬದಲಾಗುತ್ತಿತ್ತು.

ಅತ್ಯಂತ ವಿಶೇಷ ಅನುಭವ ಎಂದರೆ ಈ ಕೇಬಲ್ ಕಾರಿನ ಎರಡನೇ ಸ್ಟಾಪ್‌ನಿಂದ ರೋಟೈರ್ ಎಂಬ 360 ಡಿಗ್ರಿ ತಿರುಗುವ ಕೇಬಲ್ ಕಾರ್‌ನಲ್ಲಿ ಪ್ರಯಾಣ. ಇದು 360 ಡಿಗ್ರಿ ತಿರುಗುವಾಗ ಸುತ್ತಲೂ ಹಿಮ ಪರ್ವತಗಳ ಭವ್ಯತೆಯೇ ಕಣ್ಣ ಮುಂದೆ ಹರಡುತ್ತಿತ್ತು. ಎಲ್ಲಿ ನೋಡಿದರೂ ಹಿಮ ಪರ್ವತಗಳು. ಪರ್ವತದ ತುತ್ತತುದಿ ತಲುಪುತ್ತಿದ್ದಂತೆ ಹಿಮದ ಲೋಕವೇ ಎದುರಾಯಿತು. ಬೆಳ್ಳಿ ಬಣ್ಣದ ಹಿಮ ಕಂಡಂತೆ ನನ್ನ ಮಗಳಂತು ಜಿಗಿದು ಅದರಲ್ಲಿ ಹೊರಳಾಡಿದಳು. ಅದಲ್ಲದೆ ರುಯ್ಯನೆ ಬೀಸುವ ತಂಪಾದ ಗಾಳಿ. ಮುಖಕ್ಕೆ ತಾಕುವ ಹಿಮದ ಕಣಗಳು, ನಾನು ಜೀವನದಲ್ಲಿ ಮೊದಲ ಬಾರಿಗೆ ಹಿಮಪರ್ವತವನ್ನು ನೋಡಿ ಮುಟ್ಟಿದ ಕ್ಷಣದ ಅನುಭವವನ್ನು ಆನಂದಿಸುತಿದ್ದೆ.
ಕ್ಲಿಫ್ ವಾಕ್ ಮೇಲೆ ನಿಂತು ಕೆಳಗಡೆ ನೋಡಿದಾಗ ಆಳವಾದ ಕಣಿವೆ, ಸುತ್ತಲಿನ ಪರ್ವತ ಶ್ರೇಣಿಗಳನ್ನು ಕಂಡಾಗ ಮೈ ಜುಮ್ಮೆಂದು ಅನ್ನಿಸಿತ್ತು! ಭಯ, ವಿಸ್ಮಯಗಳಿಂದ ಆ ದೃಶ್ಯಗಳನ್ನು ಕಣ್ಣಲ್ಲಿ ಮತ್ತು ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದೆ. ತಂಪಾದ ವಾತಾವರಣದಲ್ಲಿ ನಮ್ಮೆಲ್ಲರ ನಾಲಗೆಗಳು ಹೆಪ್ಪುಗಟ್ಟಲು ಶುರುವಾದವು. ಒಬ್ಬರಿಗೊಬ್ಬರು ಹಿಮವನ್ನು ಉಂಡೆ ಮಾಡಿ ಎಸೆದು ಮಕ್ಕಳಂತೆ ಆಟ ಆಡಿದೆವು. ಆ ತಂಪಿನಲ್ಲೂ ಸ್ವಿಟ್ಜರ್‌ಲ್ಯಾಂಡ್‌ನ ಜನಪ್ರಿಯ ಚಾಕ್ಲೆಟ್ ಐಸ್ ಕ್ರೀಮ್ ಅನ್ನು ಸವಿದ ನೆನಪು ಎಂದಿಗೂ ಮರೆಯಲಾಗದು.
ಸ್ವಿಟ್ಜರ್‌ಲ್ಯಾಂಡ್‌ನ ರೊಮ್ಯಾಂಟಿಕ್ ನಗರ - ಲ್ಯೂಸರ್ನ್
ಲ್ಯೂಸರ್ನ್ ಸ್ವಿಟ್ಜರ್‌ಲ್ಯಾಂಡ್‌ನ ಮಧ್ಯ ಭಾಗದಲ್ಲಿದೆ. ಸರೋವರ ಮತ್ತು ಪರ್ವತಗಳ ನಡುವೆ ಈ ಸುಂದರವಾದ ನಗರ ನೆಲೆಗೊಂಡಿದೆ. ಐತಿಹಾಸಿಕ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಿಟ್ಜರ್‌ಲ್ಯಾಂಡ್‌ಗೆ ಬಹಳಷ್ಟು ಕೊಡುಗೆಯನ್ನು ಕೊಟ್ಟಿದೆ. ನಾವು ಏಂಜೆಲ್ಬರ್ಗ್‌ನಿಂದ ಅರ್ಧ ಗಂಟೆಯ ಪ್ರಯಾಣದ ಮೂಲಕ ಈ ರೋಮಾಂಚಕ ನಗರ ಮತ್ತು ಸರೋವರದ ಶಾಂತತೆಯ ಲ್ಯೂಸರ್ನ್‌ನ ಸೌಂದರ್ಯವನ್ನು ಸವಿಯಲು ಬಂದು ಮುಟ್ಟಿದೆವು.
ಚಾಪೆಲ್ ಬ್ರಿಡ್ಜ್
ಚಾಪೆಲ್ ಬ್ರಿಡ್ಜ್ ಎಂಬ ಮರದ ಸೇತುವೆ ಸ್ವಿಟ್ಜರ್ಲ್ಯಾಂಡ್‌ನ ರಾಯ್ಸ್ ನದಿ ಮೇಲೆ 1333ರಲ್ಲಿ ನಿರ್ಮಿಸಲಾಯಿತು. ನೀರಿನ ಮೇಲೆ ತೇಲುವಂಥ ಹೂವಿನ ಹೊದಿಕೆಗಳಿಂದ ಅಲಂಕರಿಸಿರುವ ಈ ಸೇತುವೆ ಇಲ್ಲಿನ ಪ್ರಸಿದ್ಧ ಮತ್ತು ಐತಿಹಾಸಿಕ ಆಕರ್ಷಣೆಯಾಗಿದೆ. ಈ ಸೇತುವೆಯ ಒಳಗೆ ಸ್ವಿಸ್ ಇತಿಹಾಸವನ್ನು ಚಿತ್ರಿಸುವ ವರ್ಣಚಿತ್ರವಿದೆ.
ಹಸಿರು ಬಣ್ಣದ ನದಿಯ ಮೇಲೆ ಹರಡಿರುವ ಈ ಮರದ ಸೇತುವೆ ಕೇವಲ ದಾರಿಯಲ್ಲ, ಸೇತುವೆಯ ಮೇಲೆ ನಿಂತು ನೋಡಿದಾಗ ಆ ನೀರಿನಲ್ಲಿ ಕಾಣುವ ಪ್ರತಿಬಿಂಬ, ನೀರಿನ ಮೌನ, ಮರದ ಸೇತುವೆಯ ಸುಗಂಧ, ವಾಟರ್ ಟವರ್, ಸುತ್ತಲೂ ಇರುವ ಹಳೆಯ ನಗರ ಪ್ರದೇಶ, ಕಾಂಕ್ರಿಟ್ ಕಟ್ಟಡಗಳು, ಗೀಗಿ ಹಣ್ಣುಗಳಿಂದ ಅಲಂಕರಿಸಿದ ಬೀದಿಗಳು, ಸುತ್ತಲಿನ ಪರ್ವತಗಳ ಛಾಯೆ ಎಲ್ಲವೂ ಮನಸಿಗೆ ಅಪೂರ್ವ ಆನಂದವನ್ನು ತುಂಬುವ ತಾಣವಾಗಿಸಿವೆ.

ಲಯನ್ ಮೋನಿಮೆಂಟ್ ಆಫ್ ಸ್ವಿಟ್ಜರ್‌ಲ್ಯಾಂಡ್ (ಸಿಂಹ ಸ್ಮಾರಕ)
ಲ್ಯೂಸರ್ನ್ ಬಳಿಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಇರುವ ಇದು ನಗರದ ಹೃದಯ ಭಾಗದಲ್ಲಿದೆ. ವಿಶ್ವದ ಅತ್ಯಂತ ಭಾವನಾತ್ಮಕ ಸ್ಮಾರಕಗಳಲ್ಲಿ ಒಂದಾಗಿದೆ. ನಮ್ಮ ಟೂರ್ ಗೈಡ್ ಪ್ರಾಂಜಲ್ ಇದನ್ನು ತೋರಿಸುತ್ತಾ ಇದರ ಕಥೆಯನ್ನು ವಿವರಿಸಿದ.
ಈ ಸ್ಮಾರಕವನ್ನು 1792ರಲ್ಲಿ ಫ್ರೆಂಚ್ ಕ್ರಾಂತಿಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಸ್ವಿಸ್ ಸೈನಿಕರ ಸ್ಮರಣಾರ್ಥಕವಾಗಿ ನಿರ್ಮಿಸಲಾಗಿದೆ. ಇಲ್ಲಿ ಶಿಲೆಯಲ್ಲಿ ಕೆತ್ತಲಾದ ಸಿಂಹವು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಬಂಡೆಯ ಮೇಲೆ ಮಲಗಿದೆ. ಅದರ ಮುಖದಲ್ಲಿ ನೋವು, ಕಣ್ಣಲ್ಲಿದ್ದ ಮಂಕನ್ನು ಗಮನವಿಟ್ಟು ವೀಕ್ಷಿಸಿ ಎಂದು ಪ್ರಂಜಲ್ ನಮಗೆ ವಿವರಿಸಿದ. ಇದು ಕೇವಲ ಶಿಲ್ಪವಲ್ಲ ತ್ಯಾಗ, ನಿಷ್ಠೆ ಮತ್ತು ಮಾನವೀಯ ವೇದನೆಯ ಮೌನಸಾಕ್ಷಿಯಾಗಿದೆ.
ಇಲ್ಲಿ ಸ್ವಲ್ಪ ದುಬಾರಿಯಾದರೂ ಸ್ವಿಸ್ ಚಾಕ್ಲೆಟ್ ಖರೀದಿಯನ್ನು ನಾವು ಬಿಡಲಿಲ್ಲ. ನಮಗಾಗಿ ಕಾದಿದ್ದ ವ್ಯಾನ್‌ನಲ್ಲಿ ರಾತ್ರಿಯ ಊಟಕ್ಕಾಗಿ ಜ್ಯೂರಿಕ್‌ನಲ್ಲಿನ ಇಂಡಿಯನ್ ರೆಸ್ಟೋರೆಂಟ್‌ಗೆ ಮರಳಿದೆವು.