ದುಬೈ ಫ್ರೇಮ್ : ಆಕಾಶಕ್ಕೊಂದು ಬಾಗಿಲು
ದುಬೈ ಫ್ರೇಮ್ನ ಪ್ರವೇಶದ ಭಾಗದಲ್ಲಿರುವ ಸಂಗ್ರಹಾಲಯದಲ್ಲಿ ಮುತ್ತು ಸಂಗ್ರಹ, ಅರಬ್ ಮಾರುಕಟ್ಟೆ, ಸಂಸ್ಕೃತಿ ಹಾಗೂ ಮರುಭೂಮಿ ಜೀವನಶೈಲಿಯ ಚಿತ್ರಣವನ್ನು ಆಧುನಿಕ ತಂತ್ರಜ್ಞಾನದ ಮೂಲಕ ತೋರಿಸಲಾಗುತ್ತದೆ. ನಂತರ ಲಿಫ್ಟ್ ಮೂಲಕ ಕೇವಲ ಕೆಲವೇ ಕ್ಷಣಗಳಲ್ಲಿ ಮೇಲ್ಭಾಗದ ವೀಕ್ಷಣಾ ವೇದಿಕೆಗೆ ತಲುಪಬಹುದು. ಆ ಲಿಫ್ಟಿನಲ್ಲಿ ಮೇಲೆ ಮೇಲೆ ಹೋದಂತೆಲ್ಲಾ ದುಬೈ ತನ್ನನ್ನು ತಾನು ವಿಸ್ತರಿಸಿಕೊಂಡಂತೆ ದರ್ಶನ ನೀಡುತ್ತಾ ಹೋಗುತ್ತದೆ.
ಮರುಭೂಮಿಯ ಮಧ್ಯದಲ್ಲಿದ್ದ ಮೀನುಗಾರರ ಸಣ್ಣ ಗ್ರಾಮದಿಂದ, ಜಾಗತಿಕ ವ್ಯಾಪಾರ ಮತ್ತು ಪ್ರವಾಸೋದ್ಯಮದ ಕೇಂದ್ರವಾಗುವ ತನಕದ ದುಬೈ ಪಯಣವನ್ನು ಒಂದೇ ದೃಶ್ಯದಲ್ಲಿ ತೋರಿಸುವ ಪ್ರವಾಸಿ ಸ್ಥಳವೇ ‘ದುಬೈ ಫ್ರೇಮ್. ಜಬೀಲ್ ಪಾರ್ಕ್ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ವೈಶಿಷ್ಟ ಫ್ರೇಮ್ ದುಬೈನ ಭೂತಕಾಲ ಹಾಗೂ ಭವಿಷ್ಯವನ್ನು ಒಂದೇ ಚೌಕಟ್ಟಿನಲ್ಲಿ ತೋರಿಸುವ ಸಂಕೇತಾತ್ಮಕ ವಾಸ್ತುಶಿಲ್ಪವಾಗಿ ಪ್ರಸಿದ್ಧಿ ಪಡೆದಿದೆ. 2018ರಲ್ಲಿ ಸಾರ್ವಜನಿಕರಿಗೆ ತೆರೆಯಲಾದ ದುಬೈ ಫ್ರೇಮ್ ಸುಮಾರು 150 ಮೀಟರ್ ಎತ್ತರ ಹಾಗೂ 93 ಮೀಟರ್ ಅಗಲ ಹೊಂದಿದ್ದು, ‘ವಿಶ್ವದ ಅತಿದೊಡ್ಡ ಫ್ರೇಮ್ ಆಕಾರದ ಕಟ್ಟಡ’ವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿನ್ನದ ಬಣ್ಣದ ಈ ಫ್ರೇಮ್ ಅನ್ನು ದೂರದಿಂದ ನೋಡಿದಾಗ ಇದು ಆಕಾಶಕ್ಕೆ ನಿರ್ಮಿಸಿದ ಬಾಗಿಲಿನಂತೆ ಕಂಡುಬರುತ್ತದೆ.
ಇದನ್ನೂ ಓದಿ: ಪ್ರವಾಸವನ್ನು ಕನ್ನಡೀಕರಿಸುವ ಶಪಥ ಕೈಗೊಳ್ಳೋಣ!
ಹತ್ತಿರ ಹೋದಂತೆಲ್ಲಾ ನಮ್ಮನ್ನು ವಿಸ್ಮಯಗೊಳಿಸುತ್ತಲೇ ಹೋಗುವ ಈ ಫ್ರೇಮ್, ಮನಸಿಗೂ ವಾಹ್ ಫ್ರೇಮ್ ಹಾಕಿಬಿಡುತ್ತದೆ. ತುಸು ದುಬಾರಿಯೆನಿಸುವ ಪ್ರವೇಶ ದರವಿದ್ದರೂ, ಅದರೊಳಗಿನ ಅನುಭವ ನಾವು ಕೊಡುವ ದುಡ್ಡಿಗೂ ಮೀರಿದ್ದು. ಹಾಗಂತ ಇದು ಬಹುಮಹಡಿಗಳ ಕಟ್ಟಡವಲ್ಲ. ಎರಡು ಬೃಹತ್ತಾದ ಎತ್ತರದ ಕಂಬಗಳು ಮತ್ತು ಅವುಗಳನ್ನು ಮೇಲ್ಭಾಗದಲ್ಲಿ ಸೇರಿಸುವ ಒಂದು ಸ್ಕೈಡೆಕ್ ಇರುವ ಫೊಟೋ ಫ್ರೇಮ್‌ನಂಥ ಕಟ್ಟಡವಿದು. ಮುಖ್ಯವಾಗಿ ಈ ಕಟ್ಟಡದ ವಿಶೇಷತೆ ಅದರ ಸ್ಥಳ ಆಯ್ಕೆ. ಉತ್ತರ ದಿಕ್ಕಿನಲ್ಲಿ ಕಾಣುವ ದೇರಾ, ಅಲ್ ಫಹಿದಿ, ಕರಾಮಾ ಭಾಗಗಳು ಹಳೆಯ ದುಬೈ ಅನ್ನು ತೋರಿಸಿದರೆ, ದಕ್ಷಿಣ ದಿಕ್ಕಿನಲ್ಲಿ ಕಾಣುವ ಶೇಖ್ ಜಾಯೆದ್ ರಸ್ತೆ, ಗಗನಚುಂಬಿ ಕಟ್ಟಡಗಳು ಹಾಗೂ ಬುರ್ಜ್ ಖಲೀಫಾ ಭಾಗಗಳು ಹೊಸ ದುಬೈನ ದರ್ಶನ ಮಾಡಿಸುತ್ತವೆ. ಹೀಗಾಗಿ ಒಂದೇ ಸ್ಥಳದಲ್ಲಿ ನಿಂತು ಹೊಸ ದುಬೈ ಮತ್ತು ಹಳೆ ದುಬೈಯನ್ನು ನೋಡುವ ಅಪರೂಪದ ಅನುಭವ ಇಲ್ಲಿ ನಮ್ಮದಾಗುತ್ತದೆ.

ನಮ್ಮಂಥ ಪ್ರವಾಸಿಗರನ್ನು ಕೇವಲ ಇದರ ವೀಕ್ಷಣೆಗೆ ಮಾತ್ರ ಸೀಮಿತಗೊಳಿಸದೇ, ದುಬೈ ಬೆಳೆದು ಬಂದ ಹಾದಿಯನ್ನು ಪರಿಚಯಿಸುವ ವ್ಯವಸ್ಥೆಯೂ ಇಲ್ಲಿದೆ. ಪ್ರವೇಶದ ಭಾಗದಲ್ಲಿರುವ ಸಂಗ್ರಹಾಲಯದಲ್ಲಿ ಮುತ್ತು ಸಂಗ್ರಹ, ಅರಬ್ ಮಾರುಕಟ್ಟೆ, ಸಂಸ್ಕೃತಿ ಹಾಗೂ ಮರುಭೂಮಿ ಜೀವನಶೈಲಿಯ ಚಿತ್ರಣವನ್ನು ಆಧುನಿಕ ತಂತ್ರಜ್ಞಾನದ ಮೂಲಕ ತೋರಿಸಲಾಗುತ್ತದೆ. ನಂತರ ಲಿಫ್ಟ್ ಮೂಲಕ ಕೇವಲ ಕೆಲವೇ ಕ್ಷಣಗಳಲ್ಲಿ ಮೇಲ್ಭಾಗದ ವೀಕ್ಷಣಾ ವೇದಿಕೆಗೆ ತಲುಪಬಹುದು. ಆ ಲಿಫ್ಟಿನಲ್ಲಿ ಮೇಲೆ ಮೇಲೆ ಹೋದಂತೆಲ್ಲಾ ದುಬೈ ತನ್ನನ್ನು ತಾನು ವಿಸ್ತರಿಸಿಕೊಂಡಂತೆ ದರ್ಶನ ನೀಡುತ್ತಾ ಹೋಗುತ್ತದೆ. ತುತ್ತ ತುದಿ ತಲುಪುವಷ್ಟರಲ್ಲಿ ರೋಮಾಂಚನವೆಂಬುದು ರೋಮ ರೋಮದಲ್ಲೂ ರೂಮು ಮಾಡಿಕೊಂಡಿರುತ್ತದೆ. ಮೇಲ್ಭಾಗದಲ್ಲಿ ಈ ಎರಡು ಎತ್ತರದ ಕಂಬಗಳನ್ನು ಬೆಸೆಯುವ ಒಂದು ಸ್ಕೈ ಬ್ರಿಡ್ಜ್ ಇದೆ. ಅದು ಕಬ್ಬಿಣ, ಸಿಮೆಂಟಿನದ್ದಲ್ಲ. ಅಪ್ಪಟ ಗಾಜಿನದ್ದು. ಅಷ್ಟು ಎತ್ತರದಲ್ಲಿ ನಿಂತು ಆ ಗಾಜಿನ ಮೇಲೆ ನಡೆಯುವಾಗ ಜೀವ ಜಾಮೂನಾಗಿರುತ್ತೆ!

ಎಷ್ಟೋ ಜನ, ಅಲ್ಲಿ ನಡೆಯಲು ಹಿಂಜರಿಯುವುದು, ನಡೆಯುವವರು ಹೆದರುವುದು, ನಡೆಯುತ್ತಿದ್ದವರು ನೆಗೆದು ಹೊರ ಬರುವುದು… ಇವೆಲ್ಲಾ ತುಂಬಾ ಸಹಜ ದೃಶ್ಯಗಳಲ್ಲಿ. ಆ ಪಾರದರ್ಶಕ ಗಾಜಿನ ಮೇಲೆ ನಿಂತು ಸುಮಾರು 150 ಮೀಟರ್ ಕೆಳಗಿನ ದೃಶ್ಯ ನೋಡುವಾಗ ವಿಮಾನದಿಂದ ಕೆಳಗಡೆ ನೋಡಿದ್ದಕ್ಕಿಂತ ಹೆಚ್ಚು ಖುಷಿಯಾಗುತ್ತದೆ. ಒಂದರ್ಧ ಗಂಟೆಯ ನಂತರ, ನಾವು ಮತ್ತೆ ಕೆಳಗಿಳಿದು ಹೊರಬರುವಾಗ ‘ಭವಿಷ್ಯದ ದುಬೈ’ ಎಂಬ ಡಿಜಿಟಲ್ ದಾರಿಯ ಮೂಲಕ ಸಾಗಬೇಕಾಗುತ್ತದೆ. ಅಲ್ಲಿ ಕೃತಕ ಬುದ್ಧಿಮತ್ತೆ, ಸ್ಮಾರ್ಟ್ ನಗರಗಳು, ಹಾರುವ ವಾಹನಗಳು ಮೊದಲಾದ ಕಲ್ಪಿತ ಭವಿಷ್ಯವನ್ನು ನಮ್ಮೆದುರು ಈ ದುಬೈನವರು ತೆರೆದಿಟ್ಟು ಅಚ್ಚರಿ ಮೂಡಿಸುತ್ತಾರೆ. ಇನ್ನೂ ಏನೆಲ್ಲಾ ಅವರ ಬತ್ತಳಿಕೆಯಲ್ಲಿವೆಯೋ ಅಂತ ವಿಸ್ಮಯಗೊಳ್ಳುತ್ತಲೇ ನಾವು ಅಲ್ಲಿಂದ ಹೊರಬರುವಂತೆ ಮಾಡಿರುವ ಅವರ ಬುದ್ಧಿವಂತಿಕೆಗೆ ಬೆರಗಾಗದೇ ಇರಲು ಸಾಧ್ಯವಿಲ್ಲ
ಒಟ್ಟಿನಲ್ಲಿ ದುಬೈ ಫ್ರೇಮ್ ಕೇವಲ ಕಟ್ಟಡವಲ್ಲ. ಪರಂಪರೆ ಮತ್ತು ಪ್ರಗತಿ ಎರಡನ್ನೂ ಒಂದೇ ಚೌಕಟ್ಟಿನಲ್ಲಿ ತಂದಿಟ್ಟಿರುವ ಕಾವ್ಯಾತ್ಮಕ ಶೈಲಿ. ಅದು ದುಬೈನವರಿಗೆ ಮಾತ್ರ ಸಾಧ‌್ಯ!