• ಪ್ರವೀಣ್ ಪೈಲೂರ್

ನಾಗರೀಕತೆಯ ಹೆಸರಿನಲ್ಲಿ ನಾವೆಲ್ಲರೂ ಎತ್ತ ಸಾಗುತ್ತಿದ್ದೇವೆ? ನಮ್ಮ ಅರಿವಿಗೆ ಬಾರದೆ ಒಂದು ದೊಡ್ಡ ಭ್ರಮೆಯ ಲೋಕದಲ್ಲಿ ಜೀವಿಸುತ್ತಿದ್ದೇವೆ. ಮಹಾನಗರಗಳ ಗಗನಚುಂಬಿ ಸೌಧಗಳು, ಕಾಂಕ್ರೀಟಿನ ಕಾಡುಗಳು ಮತ್ತು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಭೋಗದ ಆಸೆಗಳೇ ಪ್ರಗತಿ ಎಂದು ನಂಬಲಾಗಿದೆ. ಆದರೆ, ಭೂತಾನ್ ದೇಶದ ಕಿರಿದಾದ ದಾರಿಯಲ್ಲಿ ಹೆಜ್ಜೆಹಾಕುತ್ತಾ ಹೋದಂತೆ, ಹುಟ್ಟಿನಿಂದ ಆಳವಾಗಿ ಬೇರೂರಿದ್ದ ಅನೇಕ ಪ್ರಶ್ನೆಗಳಿಗೆ ಅನಿರೀಕ್ಷಿತ ಉತ್ತರಗಳು ದೊರೆಯಲಾರಂಭಿಸುತ್ತವೆ. ಮನುಷ್ಯನ ಅಸ್ತಿತ್ವಕ್ಕೆ ಅತಿಮುಖ್ಯವಾದದ್ದು ಯಾವುದು ಎಂಬ ಕಟು ಹಾಗೂ ಪರಮ ಸತ್ಯದ ದರ್ಶನವಾಗುತ್ತದೆ.

ಇದನ್ನೂ ಓದಿ: ಭೂತಾನ್‌: ಹೋಮ್‌ಸ್ಟೇ, ಕ್ಯಾಂಪಿಂಗ್‌ಗೂ ನಿರ್ಬಂಧ

ಪ್ರಪಂಚದ ಬಹುತೇಕ ರಾಷ್ಟ್ರಗಳು ಆರ್ಥಿಕ ಬೆಳವಣಿಗೆಯ ಮಾನದಂಡಗಳಾದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮತ್ತು ತಲಾ ಆದಾಯದ ಏರಿಕೆಗಳನ್ನೇ ಪ್ರಗತಿಯೆಂದು ಭ್ರಮಿಸಿವೆ. ಉತ್ಪಾದನೆ ಹೆಚ್ಚಾಯಿತು ಎಂದಮಾತ್ರಕ್ಕೆ ಜನಸಾಮಾನ್ಯರು ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದಾರೆ ಎಂದು ಹೇಳಲಾಗದು. ಆದರೆ, ಭೂತಾನ್ ದೇಶದ ಆಡಳಿತ ವ್ಯವಸ್ಥೆ ಮತ್ತು ಅಲ್ಲಿನ ಜನರ ಜೀವನ ಸಂಪೂರ್ಣ ಭಿನ್ನ. ಅಲ್ಲಿ ಜಿಡಿಪಿ ಬದಲಿಗೆ ‘ರಾಷ್ಟ್ರೀಯ ಸಂತಸ ಸೂಚ್ಯಂಕ’ (Gross National Happiness - GNH) ಕ್ಕೆ ಅಧಿಕೃತ ಮನ್ನಣೆಯಿದೆ. ಭೌತವಾದದ ಬೆನ್ನೇರಿ ಹೊರಟಿರುವ ಆಧುನಿಕ ಮನುಷ್ಯನಿಗೆ, ʼಸಂತೋಷವೆನ್ನುವುದು ಹಣದಿಂದ ಕೊಳ್ಳುವ ವಸ್ತುವಲ್ಲ, ಅದೊಂದು ಶುದ್ಧ ಅಂತಃಕರಣದ ಸ್ಥಿತಿʼ ಎಂಬ ಸತ್ಯವನ್ನು ಈ ದೇಶವು ಕನ್ನಡಿ ಹಿಡಿದಂತೆ ಮನವರಿಕೆ ಮಾಡಿಕೊಡುತ್ತದೆ. ಅಲ್ಲಿನ ಪ್ರಕೃತಿಯನ್ನು ನೋಡಿದಾಗ ಮನುಷ್ಯನಿಗೂ ಧರೆಗೂ ಇರುವ ಸಂಬಂಧದ ಆಳ ತಿಳಿಯುತ್ತದೆ.

ಹಸಿರೇ ಭೂತಾನ್‌ನ ನಿಜವಾದ ಸಂಪತ್ತು

ಜಗತ್ತು ಹಸಿರುಮನೆ ಅನಿಲಗಳ ಬಿಡುಗಡೆಯಿಂದ ಕಂಗೆಟ್ಟಿದ್ದರೆ, ಭೂತಾನ್ ಮಾತ್ರ ಜಗತ್ತಿನ ಏಕೈಕ ಕಾರ್ಬನ್- ಋಣಾತ್ಮಕ ದೇಶವಾಗಿ ಉಳಿದಿದೆ. ಅಲ್ಲಿನ ಸಂವಿಧಾನದ ಪ್ರಕಾರ, ದೇಶದ ಕನಿಷ್ಠ ಶೇಕಡಾ 60ರಷ್ಟು ಭೂಭಾಗವು ಸದಾ ಕಾಡಿನಿಂದ ಕೂಡಿರಬೇಕು. ಪ್ರಸ್ತುತ ಶೇಕಡಾ 70ಕ್ಕೂ ಹೆಚ್ಚಿನ ಪ್ರದೇಶವು ದಟ್ಟವಾದ ಅರಣ್ಯದಿಂದ ಕೂಡಿದೆ. ಮರಗಳನ್ನು ಪೂಜಿಸುವ, ಪ್ರಾಣಿ ಪಕ್ಷಿಗಳನ್ನು ಕರುಣೆಯಿಂದ ಕಾಣುವ ಸಂಸ್ಕೃತಿ ಅಲ್ಲಿ ಜೀವಂತವಾಗಿದೆ. ಆಧುನಿಕತೆಯ ಹೆಸರಿನಲ್ಲಿ ನಾವು ಪ್ರಕೃತಿಯನ್ನು ಶೋಷಿಸುತ್ತಾ ಸಾಗಿದರೆ, ನಮ್ಮದೇ ವಿನಾಶಕ್ಕೆ ನಾವೇ ಮುನ್ನುಡಿ ಬರೆಯುತ್ತಿದ್ದೇವೆ ಎಂಬ ಸತ್ಯ ಅಲ್ಲಿನ ಹಸಿರು ಕಾಡುಗಳ ನಡುವೆ ನಿಂತಾಗ ಮನದಟ್ಟಾಗುತ್ತದೆ.

Untitled Design (1)

ಸುಸ್ಥಿರ ಪ್ರವಾಸೋದ್ಯಮ, ಶಾಂತ ಬದುಕಿನ ದಾರಿ

ಪ್ರವಾಸೋದ್ಯಮದಿಂದ ಅತಿ ಹೆಚ್ಚು ಹಣ ಸಂಪಾದಿಸುವುದು ಭೂತಾನ್ ಸರಕಾರದ ಉದ್ದೇಶವಲ್ಲ. ಪರಿಸರ ಮತ್ತು ಸಂಸ್ಕೃತಿಗೆ ಹಾನಿಯಾಗದಂತೆ ತಡೆಯಲು ಅದು ʼಉನ್ನತ ಮೌಲ್ಯ, ಕಡಿಮೆ ಪರಿಮಾಣʼ ಎಂಬ ಪ್ರವಾಸೋದ್ಯಮ ನೀತಿಯನ್ನು ಅನುಸರಿಸುತ್ತದೆ. ದೇಶಕ್ಕೆ ಬರುವ ಪ್ರವಾಸಿಗರು ಸುಸ್ಥಿರ ಅಭಿವೃದ್ಧಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಅಲ್ಲಿನ ಹೆದ್ದಾರಿಗಳಲ್ಲಿ ಸಾಗುವಾಗ, ಕಿವಿಗೆ ಅಪ್ಪಳಿಸುವುದು ವಾಹನಗಳ ಕರ್ಕಶ ಹಾರ್ನ್ ಸದ್ದಲ್ಲ, ಬದಲಿಗೆ ತಂಗಾಳಿ ಮತ್ತು ಹಕ್ಕಿಗಳ ನಿನಾದ. ಆಧುನಿಕತೆಯ ಈ ಯುಗದಲ್ಲಿ ವಾಹನಗಳ ಕಿರಿಕಿರಿ ಇಲ್ಲದೆ ರಸ್ತೆಗಳು ಹೇಗೆ ಶಾಂತವಾಗಿರಲು ಸಾಧ್ಯ ಎಂಬ ವಿಸ್ಮಯ ಮೂಡುತ್ತದೆ.

ಸಿಗ್ನಲ್‌ಗಳಿಲ್ಲ, ಶಿಸ್ತಿನ ಸಂಚಾರ

ಘಾಟ್ ರಸ್ತೆಗಳಲ್ಲಿ ಸಾಗುವಾಗ ಕಡಿದಾದ ಕಣಿವೆಗಳು ಮತ್ತು ಆಳವಾದ ಕಂದಕಗಳ ನಡುವೆ ಎಲ್ಲೂ ಒಂದೇ ಒಂದು ಕಾಗದದ ತುಣುಕು ಅಥವಾ ಪ್ಲಾಸ್ಟಿಕ್ ಕಸ ಕಾಣಸಿಗುವುದಿಲ್ಲ. ಪ್ರತಿದಿನ ಮುಂಜಾನೆ ಆ ದುರ್ಗಮ ರಸ್ತೆಗಳನ್ನೂ, ವಿಸ್ತಾರವಾದ ಕಾಡು ದಾರಿಗಳನ್ನೂ ಸ್ವಚ್ಛಗೊಳಿಸುವ ಪ್ರಾಮಾಣಿಕ ಕೈಗಳು ಅಲ್ಲಿವೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದಂತೆ ಅತ್ಯಂತ ಸುಂದರವಾದ, ಕಲಾತ್ಮಕವಾದ ಕಸದ ತೊಟ್ಟಿಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಸ್ವಚ್ಛತೆ ಎನ್ನುವುದು ಅಲ್ಲಿನ ಬರಿಯ ನಿಯಮಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬ ನಾಗರಿಕನ ಸಂಸ್ಕಾರವಾಗಿ ಬೇರೂರಿದೆ. ಪರಮ ಆಶ್ಚರ್ಯವೆಂದರೆ, ಇಡೀ ರಾಜಧಾನಿಯಲ್ಲಿ ಅಥವಾ ಪ್ರಮುಖ ನಗರಗಳಲ್ಲಿ ಎಲ್ಲೂ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲದಿರುವುದು. ಸಿಗ್ನಲ್ ಲೈಟ್‌ಗಳ ಕೆಂಪು- ಹಳದಿ ವರ್ಣಗಳ ಯಾಂತ್ರಿಕ ನಿಯಂತ್ರಣದ ಬದಲು, ಅಲ್ಲಿ ಕೆಲಸ ಮಾಡುವುದು ಪರಸ್ಪರ ನಂಬಿಕೆ, ಸಂಚಾರ ನಿಯಮಗಳ ಮೇಲಿನ ಗೌರವ ಮತ್ತು ಸಹನೆ. ಜಂಕ್ಷನ್‌ಗಳಲ್ಲಿ ಎಲ್ಲರೂ ಶಿಸ್ತಿನಿಂದ ‘ರೌಂಡ್‌ಅಬೌಟ್’ ನಿಯಮಗಳನ್ನು ಪಾಲಿಸುತ್ತಾ, ಒಬ್ಬರಿಗೊಬ್ಬರು ದಾರಿ ಬಿಟ್ಟುಕೊಡುತ್ತಾ ಸಾಗುತ್ತಾರೆ.

Untitled Design (2)

ಸಂಪ್ರದಾಯವೇ ಅವರ ಅಸ್ತಿತ್ವದ ಹೆಮ್ಮೆ

ಅಲ್ಲಿನ ಜನರ ಜೀವನಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಅತಿಯಾದ ಆಸೆಗಳ ಸ್ವಾರ್ಥ ಅರ್ಥವಾಗುತ್ತದೆ. ಬಟ್ಟೆಬರೆಗಳಲ್ಲಿ, ಮನೆಗಳಲ್ಲಿ, ಆಹಾರದಲ್ಲಿ ಅದೆಂಥ ದಿವ್ಯ ಸರಳತೆ! ಹಿರಿಯರು ಹಾಕಿಕೊಟ್ಟ ದಾರಿಯನ್ನು, ತಮ್ಮದೇ ಆದ ಸಾಂಪ್ರದಾಯಿಕ ಉಡುಪುಗಳಾದ 'ಘೋ' ಮತ್ತು 'ಕೀರ' ಧರಿಸುವುದನ್ನು ಇಂದಿಗೂ ಹೆಮ್ಮೆಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಇಲ್ಲಿನ ಸರಕಾರಿ ಕಚೇರಿಗಳು, ಶಾಲೆಗಳು ಮತ್ತು ಅಧಿಕೃತ ಸಮಾರಂಭಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಪನ್ನೇ ಧರಿಸಬೇಕು. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಬೇರುಗಳನ್ನು ಮರೆಯುತ್ತಿರುವ ನಮಗೆ, ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಪಾಠವನ್ನು ಈ ಸರಳ ಜೀವನಶೈಲಿ ಕಲಿಸುತ್ತದೆ. ಭೂತಾನಿನ ಜನ ತಮ್ಮ ಸಂಸ್ಕೃತಿಯನ್ನು ಮುಡಿಗೇರಿಸಿಕೊಂಡು ಆಧುನಿಕತೆಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಂಪ್ರದಾಯವೆಂದರೆ ಮೂಢನಂಬಿಕೆಯಲ್ಲ, ಅದು ನಮ್ಮ ಅಸ್ತಿತ್ವದ ಭದ್ರವಾದ ಬೇರು ಎಂಬ ಸತ್ಯ ಅಲ್ಲಿ ಗೋಚರಿಸುತ್ತದೆ.

ಶೌಚಾಲಯ ಹೇಳುವ ಸಂಸ್ಕೃತಿಯ ಕಥೆ

ಅಲ್ಲಿನ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆಯನ್ನು ನೋಡಿದಾಗ ಭೂತಾನ್ ಜನರ ಪ್ರಾಮಾಣಿಕತೆ ಮತ್ತು ನಂಬಿಕೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಸಾರ್ವಜನಿಕ ಶೌಚಾಲಯ ಸ್ಥಳಗಳಲ್ಲಿ ಹಣ ವಸೂಲಿ ಮಾಡಲು ಅಥವಾ ಕಾವಲು ಕಾಯಲು ಯಾವೊಬ್ಬ ವ್ಯಕ್ತಿಯೂ ಅಲ್ಲಿರುವುದಿಲ್ಲ. ಬದಲಿಗೆ, ಶೌಚಾಲಯದ ಬಾಗಿಲಿನ ಬಳಿ ಅಥವಾ ಒಳಗೆ ಒಂದು ಸಣ್ಣ ಹಣದ ಪೆಟ್ಟಿಗೆಯಿರುತ್ತದೆ ಅಥವಾ ಇಂದಿನ ಆಧುನಿಕತೆಗೆ ತಕ್ಕಂತೆ ಡಿಜಿಟಲ್ ಪಾವತಿಗಾಗಿ ಕ್ಯೂಆರ್‌ಕೋಡ್ ಸ್ಕ್ಯಾನರ್ ಇರುತ್ತದೆ. ಯಾರೂ ನಮ್ಮನ್ನು ಕಣ್ಣಿಟ್ಟು ನೋಡುತ್ತಿಲ್ಲ, ಹಣ ನೀಡದೆಯೂ ಹೋಗಬಹುದು ಎಂಬ ದುರ್ಬುದ್ಧಿ ಅಲ್ಲಿನ ನಾಗರಿಕರಲ್ಲಿ ಸುಳಿಯುವುದಿಲ್ಲ. ಬಳಕೆದಾರರು ತಮಗೆ ನಿಗದಿಪಡಿಸಿದ ಅತ್ಯಲ್ಪ ಮೊತ್ತವನ್ನು ಸ್ವಯಂಪ್ರೇರಿತರಾಗಿ ಆ ಪೆಟ್ಟಿಗೆಗೆ ಹಾಕಿ, ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಮುಂದೆ ಸಾಗುತ್ತಾರೆ. ಯಾವುದೇ ಕಾವಲುಗಾರನಿಲ್ಲದೆ, ಕಣ್ಗಾವಲು ಕ್ಯಾಮೆರಾಗಳ ಒತ್ತಡವಿಲ್ಲದೆ, ಕೇವಲ ನೈತಿಕತೆ ಮತ್ತು ಪರಸ್ಪರ ನಂಬಿಕೆಯ ಮೇಲೆ ಒಂದು ಇಡೀ ಸಮಾಜ ಎಷ್ಟು ಸುಂದರವಾಗಿ, ಪವಿತ್ರವಾಗಿ ಕಾರ್ಯನಿರ್ವಹಿಸಬಲ್ಲುದು ಎಂಬುದಕ್ಕೆ ಈ ಶೌಚಾಲಯಗಳ ವ್ಯವಸ್ಥೆಯೇ ಮಾದರಿ.

ಇದನ್ನೂ ಓದಿ: ಭೂತಾನ್ ಎಂಬ ಬ್ಯೂಟಿ.. ಇದಕ್ಕಿಲ್ಲ ಸಾಟಿ!

ಬದುಕಿನ ನಿಜಾರ್ಥ ಕಲಿಸಿದ ನೆಲ

ಭೂತಾನ್ ಪ್ರವಾಸ ನನಗೆ ಕೇವಲ ಭೌಗೋಳಿಕ ಗಡಿ ದಾಟಿದ ಯಾನವಾಗದೇ ಅದು ನನ್ನೊಳಗಿನ ಮೌಲ್ಯಗಳ ಪುನರಾವಲೋಕನಕ್ಕೆ ತೆರೆದುಕೊಂಡ ಹೆಬ್ಬಾಗಿಲು. ಯಂತ್ರದಂತೆ ಓಡುವ ಇಂದಿನ ಜಗತ್ತಿನಲ್ಲಿ ಮನುಷ್ಯ ಮನುಷ್ಯನಾಗಿ ಬದುಕಲು ಶಿಸ್ತು ಮತ್ತು ಮೌಲ್ಯಗಳು ಎಷ್ಟು ಅನಿವಾರ್ಯ ಎಂಬುದನ್ನು ಈ ದೇಶ ಸಾಕ್ಷೀಕರಿಸುತ್ತದೆ. ಬಾಹ್ಯ ಪ್ರಪಂಚವನ್ನು ಗೆಲ್ಲುವ ಭರದಲ್ಲಿ ನಾವು ಕಳೆದುಕೊಳ್ಳುತ್ತಿರುವ ನಮ್ಮ ಮನುಷ್ಯತ್ವವನ್ನು ಮರಳಿ ನೆನಪಿಸುತ್ತ, ಬದುಕಿನ ನಿಜವಾದ ಸೌಂದರ್ಯ ಇರುವುದು ಸರಳತೆಯಲ್ಲಿ, ಪ್ರಕೃತಿಯೊಂದಿಗಿನ ಸಹಬಾಳ್ವೆಯಲ್ಲಿ ಹಾಗೂ ಆಂತರಿಕ ಶಾಂತಿಯಲ್ಲಿ ಎಂಬ ಅಮೂಲ್ಯ ಸತ್ಯವನ್ನು ಭೂತಾನ್ ಭೂಮಿ ಕಲಿಸಿಕೊಡುತ್ತದೆ.