- ಶಂಕರ್‌ ಅಜ್ಜಂಪುರ

ಯುನೈಟೆಡ್ ಸ್ಟೇಟ್ಸ್‌ನ ನೆಬ್ರಸ್ಕಾದ ಡೌನ್‌ ಟೌನ್‌ ಒಮಾಹಾ ನಗರದ ಸುತ್ತಮುತ್ತಲೂ ರೈತ ಸಂತೆ ನಡೆಯುತ್ತದೆ. ಇಲ್ಲಿನ ಸ್ಥಳೀಯ ರೈತರು ತಮ್ಮ ಉತ್ಪನ್ನಗಳನ್ನು ಚಿಕ್ಕ ಪ್ರಮಾಣದಲ್ಲಿ, ಬಡ ಹಾಗೂ ಮಧ್ಯಮ ವರ್ಗದವರಿಗೆ ತಲುಪಿಸಲು ಮಾಡಿಕೊಂಡಿರುವ ವ್ಯವಸ್ಥೆ ಇದು. ನೂರು ವರ್ಷಗಳ ಇತಿಹಾಸವಿರುವ ಈ ಮಾರುಕಟ್ಟೆ ಮೇ ತಿಂಗಳಿನಿಂದ ಅಕ್ಟೋಬರ್ ಮಧ್ಯದ ವರೆಗೆ ಪ್ರತಿ ಶನಿವಾರ ಬೆಳಗ್ಗೆ 8 ರಿಂದ 12-30ರ ವರೆಗೆ ನಡೆಯುತ್ತದೆ. ಎಲ್ಲದರಲ್ಲೂ ವ್ಯವಹಾರ ಮತ್ತು ಲಾಭವನ್ನು ಅರಸುವ ಅಮೆರಿಕನ್ ಮಂದಿಗೆ, ಈ ಮಾರುಕಟ್ಟೆಯನ್ನು ಸುಸ್ಥಿತಿಗೆ ತಂದು ಲಾಭದಾಯಕ ಮಾಡುವ ಆಲೋಚನೆ ಹೊಳೆದದ್ದು 1994ರ ನಂತರವಂತೆ. ಏಕೆಂದರೆ ಅಲ್ಲಿಯವರೆಗೆ ಮಾರುತ್ತಿದ್ದ ರೈತರು ಸಾಂಪ್ರದಾಯಿಕವಾಗಿ ಮಾರಾಟದಲ್ಲಿ ತೊಡಗಿದ್ದರೇ ಹೊರತು ಅವರನ್ನು ಪ್ರೋತ್ಸಾಹಿಸುವವರು ಯಾರೂ ಇರಲಿಲ್ಲ. ಈಗ ಇಲ್ಲಿನ ಮುಖ್ಯಬೀದಿಗಳಲ್ಲಿರುವ ಬ್ಯಾಂಕ್‌ಗಳು, ವಾಣಿಜ್ಯ ಸಂಸ್ಥೆಗಳು ವರ್ತಕರಿಗೆ ಹೆಚ್ಚಿನ ಸ್ಥಳಾವಕಾಶ, ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವುದರಿಂದ, ವಿವಿಧ ವಸ್ತುಗಳು, ತರಕಾರಿ, ಹಣ್ಣು, ಸಸ್ಯಗಳ ಮಾರಾಟ ಮೊದಲಿಗಿಂತಲೂ ಹೆಚ್ಚಿಗೆ ವ್ಯವಸ್ಥಿತವಾಗಿ ನಡೆಯುತ್ತಿದೆ.

ಇದನ್ನೂ ಓದಿ: ವಿಶ್ವ ಸಂತೋಷ ವರದಿ ಪ್ರಕಟ :ಎಷ್ಟನೆಯ ಸ್ಥಾನದಲ್ಲಿದೆ ಭಾರತ?

ನಮ್ಮ ಮಾರುಕಟ್ಟೆ ನೋಡಲು ಚೆನ್ನಾಗಿ ಕಾಣದಿರಬಹುದು. ಗಲೀಜಾಗಿರಬಹುದು. ಆದರೆ ತೀರ ಇತ್ತೀಚಿನವರೆಗೂ ಸಾವಯವ ಪದ್ಧತಿಯಿಂದ ಬೆಳೆಯುತ್ತಿದ್ದ ನಮ್ಮ ತರಕಾರಿಗಳು ಸತ್ವಯುತವೇ ಆಗಿರುತ್ತಿದ್ದವು. ಇಲ್ಲಿನ ಟೊಮ್ಯಾಟೊ, ಆಲೂಗಡ್ಡೆ, ಈರುಳ್ಳಿ, ಮೂಲಂಗಿ, ನವಿಲುಕೋಸು ಮುಂತಾದ ತರಕಾರಿಗಳು ಗಾತ್ರದಿಂದ ನಮ್ಮನ್ನು ಆಕರ್ಷಿಸಬಹುದೆ ಹೊರತು ರುಚಿಯಲ್ಲಿ ಅಲ್ಲವೆನ್ನುವುದು, ನನ್ನ ನಾಲಗೆಗೆ ಮನದಟ್ಟಾಗಿದೆ!

New Project (23)

ನಮ್ಮ ಕೊತ್ತಂಬರಿಯನ್ನು ಹೋಲುವ ಪಾರ್ಸ್ಲೀ ಸೊಪ್ಪುಗಳು, ಅಮೆರಿಕನ್ನರ ಅಡುಗೆಗಿಂತ ಹೆಚ್ಚಾಗಿ ಮೆಕ್ಸಿಕನ್ ಪದಾರ್ಥಗಳಲ್ಲಿ ಬಳಕೆಯಾಗುತ್ತದೆ. ಸಿಲಾಂಟ್ರಾ ಎನ್ನುವ ಸೊಪ್ಪು ನಮ್ಮದೇ ಕೊತ್ತಂಬರಿಯ ವಿಶ್ವಾಮಿತ್ರ ಸೃಷ್ಟಿಯೆನ್ನಬಹುದು. ಈರುಳ್ಳಿಕಾವು, ಕೆಂಪು ಮೂಲಂಗಿ, ಗಜ್ಜರಿ, ಸೀಮೆಬದನೆಗಳನ್ನು ನಮ್ಮದೆಂದು ಹೇಳಿಕೊಳ್ಳುವಂತೇನಿಲ್ಲ. ಪ್ರೊ. ಬಿ.ಜಿ.ಎಲ್. ಸ್ವಾಮಿಯವರು ಈ ತರಕಾರಿಗಳ ಜಾತಕವನ್ನು ʼನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾʼ ಪುಸ್ತಕದಲ್ಲಿ ವಿವರಿಸಿದ್ದಾರೆ. ಒಂದು ತುಳಸಿ ಸಸಿಗೆ 3 ಡಾಲರುಗಳು. ನಮ್ಮಲ್ಲಿ ಹೇರಳವಾಗಿ ಬೆಳೆಯುವ ನಾಯಿತುಳಸಿ ಎಂದು ಕರೆಯಲಾಗುವ ತುಳಸಿ ಪ್ರಬೇಧದ ಸಸ್ಯಕ್ಕೂ ಅದೇ ಬೆಲೆಯಿದೆಯಾದರೂ, ಬಿಳಿ ಮತ್ತು ಕಪ್ಪು ತುಳಸಿ ಗಿಡಗಳನ್ನು ಅಮೆರಿಕನ್ನರೂ ಸೇರಿದಂತೆ ಎಲ್ಲರೂ ಕೊಂಡು ಮನೆಯಂಗಳದಲ್ಲಿ ನೆಟ್ಟಿದ್ದಾರೆ. ಅದು ವಾತಾವರಣವನ್ನು ಶುದ್ಧಗೊಳಿಸಬಲ್ಲದೆಂಬ ಅಂಶ ಅವರಿಗೀಗ ಮನವರಿಕೆಯಾದಂತಾಗಿದೆ. ಸೊಪ್ಪುಗಳನ್ನು ಕಟ್ಟುಗಳನ್ನಾಗಿಯೂ, ಬೀನ್ಸ್, ಮೂಲಂಗಿ, ಗಜ್ಜರಿಗಳನ್ನು ಗುಡ್ಡೆಯ ಲೆಕ್ಕದಲ್ಲೂ ಮಾರಾಟ ಮಾಡುತ್ತಾರೆ.

ಸಂತೆಯ ಆಕರ್ಷಣೆಗಳು:

ಸಂತೆಯ ಇತರ ಆಕರ್ಷಣೆಯಾಗಿ ಕಿಂದರಿಜೋಗಿಯೊಬ್ಬ ಪೀಪಿ ಊದುತ್ತ ಬೀದಿಬದಿಯಲ್ಲಿ ನಿಂತಿದ್ದ. ಅವಿರತವಾಗಿ ಅವನು ನುಡಿಸುತ್ತಿದ್ದ ಶಬ್ದವನ್ನು ತಾಳಲಾರದೆಯೂ ಇರಬಹುದು, ಅಥವಾ ಸಂಗೀತವನ್ನು ಆಲಿಸಿ ಮೆಚ್ಚಲೂಬಹುದು, ಜನರು ಪುಡಿಗಾಸುಗಳನ್ನು ಅವನ ಟೋಪಿಯಲ್ಲಿ ಹಾಕುತ್ತಿದ್ದರು. ಒಬ್ಬನು ಮರದ ಚಕ್ಕೆಯನ್ನು ಜಕಣಾಚಾರಿಗಿಂತ ಹೆಚ್ಚಿನ ಶ್ರದ್ಧೆಯಿಂದ ಕೆತ್ತುತ್ತ ಕುಳಿತಿದ್ದ. ಅದೇನೆಂದು ಕೇಳಿದ್ದಕ್ಕೆ, ಆತ್ಯಂತ ಹಗುರವಾದ ಆ ಮರದಲ್ಲಿ ಕೆತ್ತುವುದು ಸುಲಭವೆಂದೂ, ತನಗರಿವಿಲ್ಲದಂತೆ ಹೊಸ ನಮೂನೆಗಳನ್ನು ಸೃಷ್ಟಿಸುತ್ತಿದ್ದೇನೆಂದೂ ಹೇಳಿಕೊಂಡ. ಅದೇನು ಚಿತ್ರವೆಂದು ನನಗೂ ಸ್ಪಷ್ಟವಾಗಲಿಲ್ಲ. ಇನ್ನೊಬ್ಬಾಕೆ ಪುರಾತನ ಪಳೆಯುಳಿಕೆಯ ಕಲ್ಲಿನ ಚೂರುಗಳಿಂದ ಮಣಿಗಳನ್ನು ತಯಾರಿಸಿ, ತಾಮ್ರದ ಕೊಳವೆಗಳಿಂದ ಜಪಮಣಿಗಳಂತೆ ಜೋಡಿಸಿಟ್ಟಿದ್ದಳು. ಅದು ಜಪಸರವೇ ಹೌದಂತೆ. ತುಂಬ ಪರಿಣಾಮಕಾರಿಯೆಂದು ಭಕ್ತಿಭಾವವನ್ನು ಪ್ರದರ್ಶಿಸಿದಳು. ಇಂಥ ವಿಚಾರಗಳ ಕುರಿತಂತೆ ಮೌಢ್ಯವೆಂದೆಲ್ಲ ನಾವು ಸಾಮಾನ್ಯವಾಗಿ ಮಾತನಾಡುತ್ತೇವೆ. ಅದು ತಪ್ಪು, ಜಗತ್ತು ಗುಂಡಾಗಿರುವುದರಿಂದ ಹೀಗಾಗುತ್ತದೆ ಎನ್ನಿಸಿತು!

New Project (24)

ಹಳೆಯ ಮರದ ತುಂಡುಗಳನ್ನು ಜೋಡಿಸಿ ತಯಾರಿಸಿದ ಟ್ರೇ ಅಂಥ ಪದಾರ್ಥಗಳನ್ನು ಒಬ್ಬಾತ ಹರಡಿಕೊಂಡಿದ್ದ. ಅದು 1800ನೇ ಇಸವಿಯಲ್ಲಿದ್ದ ಮನೆಯ ಮರದಿಂದ ಮಾಡಿದ್ದಂತೆ ! ಅದು ಅಮೆರಿಕ ಪುರಾತನತ್ವವನ್ನು ಪ್ರದರ್ಶಿಸುವುದರಿಂದ ಅದಕ್ಕೆ ತುಂಬ ಮಹತ್ವವಿದೆಯೆಂದೂ, ಅದನ್ನು ಮನೆಯಲ್ಲಿ ಇರಿಸಿಕೊಳ್ಳುವುದು ದೇಶಾಭಿಮಾನದ ಸಂಕೇತವೆಂದು ಅದರ ಕೆಳಗೆ ಬರೆದಿದ್ದರು. ಇನ್ನೂರು ವರ್ಷದ ಮರದ ತುಂಡಿಗೇ ಇಷ್ಟು ದೇಶಾಭಿಮಾನದ ಮಹತ್ವ ಬರಬಹುದಾದರೆ, ನಾವೆಷ್ಟು ಅದೃಷ್ಟಶಾಲಿಗಳಿರಬಹುದು ಎಂದು ಎನ್ನಿಸಿದ ಮರುಗಳಿಗೆ ಈ ವ್ಯಾಪಾರದ ದೃಷ್ಟಿ ನಮಗೇಕೆ ಬರಲಿಲ್ಲ ಎನ್ನಿಸಿತು. ಮಾರುವವನು ಹೆಡ್ಡನಿರಬಹುದು, ಕೊಳ್ಳುವವನಲ್ಲ, ಅಮೆರಿಕದವರೆಂದೂ ಚಿಕ್ಕ ಪುಟ್ಟ ವಸ್ತುಗಳ ಉತ್ಪಾದನೆಯ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಹಾಗಾಗಿಯೇ ಮೇಡ್ ಇನ್ ಚೀನಾದ ಅನೇಕ ಸರಕುಗಳು ಅಮೆರಿಕದ ಹೆಸರಿನಲ್ಲಿ ಬಿಕರಿಯಾಗುತ್ತವೆ.

ಲೇಖಕರು: ಹವ್ಯಾಸಿ ಬರಹಗಾರರು