ʼGeo Politics Tourismʼ ಬಗ್ಗೆ ಕೇಳಿದ್ದೀರಾ? ಊಹುಂ, ನನಗಂತೂ ತಿಳಿದಿರಲಿಲ್ಲ. ಆ ಪ್ರವಾಸವನ್ನು ಹಾಗೆನ್ನುತ್ತಾರೆಂದು ತಿಳಿಯದೆಯೇ ಭಾರತದ ಎಲ್ಲಾ ಗಡಿಗಳನ್ನು ಕಂಡುಬಂದಿದ್ದೇನೆ. ಯುರೋಪಿನ ದೇಶಗಳು ಕಣ್ಣಿಗೆ ಕಾಣದ ಗಡಿರೇಖೆಗಳಿಂದ ಬೇರ್ಪಟ್ಟಿರುವುದನ್ನು ನೋಡಿದ್ದೇನೆ. ಈಗ ತಿಳಿದಿದೆ ಗಡಿ ಎಂದರೆ ಎರಡು ದೇಶಗಳನ್ನು ಬೇರ್ಪಡಿಸಿ ದೂರ ನಿಲ್ಲಿಸುವ ಗೋಡೆಯಲ್ಲ; ಇಂದು ಅದು ಕೂಡ ಪ್ರವಾಸಿ ತಾಣ ಅಂತ. ಈಗ ನಾವು ವಿಮಾನದ ಟಿಕೆಟ್ ಬುಕ್ ಮಾಡುತ್ತೇವೆ, ಸಾಲಿನಲ್ಲಿ ನಿಲ್ಲುತ್ತೇವೆ, ರಜೆಗಳನ್ನು ಯೋಜಿಸುತ್ತೇವೆ, ಕೇವಲ ಒಂದು ಕಾಲನ್ನು ಒಂದು ದೇಶದಲ್ಲಿ ಮತ್ತು ಇನ್ನೊಂದು ಕಾಲನ್ನು ಇನ್ನೊಂದು ದೇಶದಲ್ಲಿ ಇಡುವುದಕ್ಕಾಗಿ, Geo Politics Tour ಮಾಡುವುದಕ್ಕಾಗಿ. ಹೌದು, ಒಂದು ದೇಶದ ಗಡಿತಾಣಗಳಿಗೆ ಭೇಟಿ ಕೊಡುವುದೂ ಈಗ ಪ್ರವಾಸೋದ್ಯಮವಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಹೊಡಿ ಗೋಲಿ… ಸುತ್ತಾಡು ಜಾಲಿ ಜಾಲಿ.. ಇದು ಜೆನ್‌Z ಮಂತ್ರ

ಎರಡ್ಮೂರು ರಾಷ್ಟ್ರಗಳು ಸಂಧಿಸುವ ಸ್ಥಳವನ್ನು, ಒಂದೇ ಬೀದಿಯಲ್ಲಿ ಭಾಷೆ ಬದಲಾಗುವುದನ್ನು, ಕಾಂಕ್ರೀಟ್‌ನಲ್ಲಿ, ಗೇಟ್‌ಗಳಲ್ಲಿ, ಧ್ವಜಗಳಲ್ಲಿ ಇತಿಹಾಸ ಬರೆಯಲ್ಪಟ್ಟ ಸ್ಥಳವನ್ನು ನೋಡುವುದು ’ಗಡಿ ಪ್ರವಾಸೋದ್ಯಮ’ದ ಭಾಗವಾಗುತ್ತಿದೆ. ಇದೊಂದು ರಾಜಕೀಯ, ಭೂಗೋಳ ಮತ್ತು ನಕ್ಷೆಯ ಮೇಲಿನ ಗೆರೆಗಳ ಹಿಂದಿರುವ ಮಾನವಗಾಥೆಗಳಿಂದ ಪ್ರೇರಿತ ಪ್ರಯಾಣ. ದೇಶಭಕ್ತಿಯ ಉನ್ಮಾದ, ಮತ್ತೊಬ್ಬರ ಒಳಿತಿಗೆ ಮನಸೋಲುವ, ನಮ್ಮ ಕೆಡಕುಗಳಿಗೆ ಕಣ್ಣಾಗುವ ಪರದೆ ಈ ಪ್ರವಾಸ. ಸಾಗರದೊಳಗೆ ಮುಳುಗಲಾಗದಿದ್ದರೂ, ಪರ್ವತ ಶ್ರೇಣಿಯನ್ನು ಮುಟ್ಟಲಾಗದಿದ್ದರೂ ಗಡಿಯ ಮೇಲೆ ನಿಲ್ಲಬಹುದು. ಅದನ್ನು ದಾಟಬಹುದು. ಈ ರೋಚಕತೆಯನ್ನು ಅನುಭವಿಸಲು ಈಗ ಲಕ್ಷಾಂತರ ಜನರು ದೇಶಗಳ ಅಂಚಿಗೆ ಪ್ರಯಾಣಿಸುತ್ತಿದ್ದಾರೆ.

Untitled design - 2026-08-04T104747.684

ಕೆಲವು ಗಡಿಗಳಿಗೆ ನಾವು ಶಾಂತಿ-ಸಂತೋಷಕ್ಕಾಗಿ ಹೋಗುತ್ತೇವೆ. ಇದಕ್ಕೆ ಜೀವಂತ ಸಾಕ್ಷಿ ಅಮೆರಿಕ ಮತ್ತು ಕೆನಡಾ ನಡುವಿನ ಪೀಸ್ ಆರ್ಚ್ ಪಾರ್ಕ್. ವಿಶಾಲವಾದ ಹಸಿರು ಹುಲ್ಲುಗಾವಲು, ಎತ್ತರದ ಬಿಳಿ ಕಮಾನು ಮತ್ತು ನೆಲದ ಮೇಲೆ ತೆಳುವಾದ ಬಣ್ಣದ ಗೆರೆಯಷ್ಟೇ. ಸದ್ದಿಲ್ಲ ಗದ್ದಲವಿಲ್ಲ. ವಾಷಿಂಗ್ಟನ್‌ನಲ್ಲಿ ಒಂದು ಕಾಲು ಮತ್ತು ಬ್ರಿಟಿಷ್ ಕೊಲಂಬಿಯಾದಲ್ಲಿ ಇನ್ನೊಂದು ಕಾಲು ಇಟ್ಟು ಪಿಕ್ನಿಕ್ ಮಾಡಬಹುದು. ಇದನ್ನು ಜಗತ್ತಿನ ಅತಿ ಉದ್ದದ ರಕ್ಷಣೆಯಿಲ್ಲದ ಗಡಿ ಎಂದು ಕರೆಯುತ್ತಾರೆ. ಪ್ರವಾಸಿಯು ಇಲ್ಲಿಗೆ ಬರುವುದೇ ಫೊಟೋ ತೆಗೆಯಲು, ಎರಡು ದೇಶಗಳ ಮುದ್ರೆಯಿರುವ ಪೋಸ್ಟ್‌ಕಾರ್ಡ್ ಪಡೆಯಲು ಮತ್ತು ಕೆಲವು ಕಾಲ ನೆರೆಹೊರೆಯವರ ನಡುವೆ ಬೇಲಿ ಬೇಡ ಎಂಬ ನಂಬಿಕೆಯನ್ನು ಆನಂದಿಸಲು.

ಷೆಂಜೆನ್ ಪ್ರದೇಶ ಎಂದು ಗುರುತಿಸಿಕೊಂಡಿರುವ ಯುರೋಪಿನ ಇಪ್ಪತ್ತೇಳು ದೇಶಗಳು ತಮ್ಮ ನಡುವಿನ ಗಡಿ ತಪಾಸಣೆಯನ್ನು ತೆಗೆದುಹಾಕಿವೆ. ಫ್ರಾನ್ಸ್‌ನಿಂದ ಜರ್ಮನಿಗೆ ಕಾರಿನಲ್ಲಿ ಹೋದರೆ ಗಡಿ ದಾಟಿದ್ದೀವಿ ಎಂದು ಹೇಳುವ ಏಕೈಕ ಸಂಕೇತವೆಂದರೆ ಒಂದು ಸಣ್ಣ ನೀಲಿ ಫಲಕ. ಜರ್ಮನಿ, ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ ಸೇರುವ ’ತ್ರೀ ಪಾಯಿಂಟ್’ನಲ್ಲಿ ನೆಲದ ಮೇಲೆ ಒಂದು ವೃತ್ತವಿದೆ. ಪ್ರವಾಸಿಗರು ಪ್ರತಿ ದೇಶದಲ್ಲೂ ಒಂದು ಕಾಲು ಇಟ್ಟು ತಿರುಗುತ್ತಾರೆ. ಬಾರ್ಲೆ ಪಟ್ಟಣದ ಗಡಿ ಮನೆಗಳು, ಕೆಫೆಗಳು ಮತ್ತು ಅಂಗಡಿಗಳ ಮಧ್ಯದಿಂದ ಹಾದುಹೋಗುತ್ತದೆ. ಊಟದ ಮೇಜು ಬೆಲ್ಜಿಯಂನಲ್ಲಿರಬಹುದು ಆದರ ಅಡುಗೆಮನೆ ನೆದರ್‌ಲ್ಯಾಂಡ್ಸ್‌ನಲ್ಲಿರಬಹುದು. ಅಲ್ಲಿನ ವೇಟರ್ ಯಾವ ದೇಶದ ಕರೆನ್ಸಿಯಲ್ಲಿ ಟಿಪ್ ಕೊಡಬೇಕು ಎಂದು ಹೇಳುತ್ತಾನೆ.

ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವಿನ ಗಡಿಗೆರೆಯು ಶತಮಾನಗಳಿಂದ ಒಕ್ಕೂಟ ಮತ್ತು ಪೈಪೋಟಿ ಎರಡೂ ಒಟ್ಟಿಗೆ ಇರಬಹುದು ಎನ್ನುವುದಕ್ಕೆ ಪುರಾವೆ ಕೊಡುತ್ತಿದೆ. ಇದು ಯುರೋಪಿನ ಹೆಚ್ಚು ಛಾಯಾಚಿತ್ರ ತೆಗೆಯುವ ಗಡಿ ಎನ್ನುವ ಪ್ರಸಿದ್ಧಿ ಪಡೆದಿದೆ. ಚೆವಿಯಟ್ ಹಿಲ್ಸ್‌ಲ್ಲಿರುವ ಕಾರ್ಟರ್ ಬಾರ್ ಬಳಿ, ರಸ್ತೆಯ ಬದಿಯಲ್ಲಿ ಒಂದು ದೊಡ್ಡ ಕೋನಾಕೃತಿಯ ಕಲ್ಲಿನ ಮೇಲೆ ಒಂದು ಬದಿಯಲ್ಲಿ ಇಂಗ್ಲೆಂಡ್ ಮತ್ತು ಇನ್ನೊಂದು ಬದಿಯಲ್ಲಿ ಸ್ಕಾಟ್ಲೆಂಡ್ ಎಂದು ಬರೆಯಲಾಗಿದೆ. ಪ್ರವಾಸಿಗರು ಕಾರಿನಿಂದಿಳಿದು ಪ್ರತಿ ಬದಿಯಲ್ಲೂ ಒಂದು ಕಾಲು ಇಡುತ್ತಾರೆ. ಕಾವಲುಗಾರರಿಲ್ಲ, ಚೆಕ್‌ಪೋಸ್ಟ್‌ಗಳಿಲ್ಲ, ಕೇವಲ ಗಾಳಿ, ಬೆಟ್ಟಗಳು, ಮತ್ತು ಪೀಳಿಗೆಗಳಿಂದ ಪ್ರಯಾಣಿಕರನ್ನು ನೋಡುತ್ತಿರುವ ಆ ದೊಡ್ಡ ಕಲ್ಲು. ಈ ಗಡಿಯು ರಾಜಕೀಯ ಪ್ರವಾಸೋದ್ಯಮವು ಯಾವಾಗಲೂ ಉದ್ವಿಗ್ನತೆಯ ಬಗ್ಗೆ ಅಲ್ಲ ಎಂಬುದನ್ನು ನೆನಪಿಸುತ್ತದೆ. ಒಟ್ಟಿಗೆ ಇರಲು ಆಯ್ಕೆ ಮಾಡಿದ ಎರಡು ರಾಷ್ಟ್ರಗಳ ಹಾಡನ್ನು ಸದ್ದಿಲ್ಲದೆ ಗುನುಗುತ್ತಿದೆ ಗಡಿಕಲ್ಲು.

ಬರ್ಲಿನ್‍ನಲ್ಲಂತೂ ಗಡಿಗೋಡೆ ನೋಡಲು ನೂರಾರು ಜನರ ಸಾಲು ಇರುತ್ತದೆ. 28 ವರ್ಷಗಳ ಕಾಲ ಪೂರ್ವ ಮತ್ತು ಪಶ್ಚಿಮ ಜರ್ಮನಿಯನ್ನು ಬೇರ್ಪಡಿಸಿ ನಿಂತಿದ್ದ ಗೋಡೆಯನ್ನು ಈಗ ಉರುಳಿಸಲಾಗಿದೆ. ಆದರೆ ಎರಡು ದಶಕಗಳಲ್ಲಿ ಬೇರ್ಪಟ್ಟ ಕುಟುಂಬಗಳ ಕಣ್ಣಹನಿಗಳನ್ನು ಪ್ರವಾಸಿಗರಿಗೆ ತೋರಲು ಈ ಗೋಡೆಯ ತುಣುಕುಗಳನ್ನು ಜೀವಂತವಾಗಿರಿಸಲಾಗಿದೆ. ಆಡಿಯೋ ಮಾರ್ಗದರ್ಶಿ ನಮ್ಮನ್ನು ಗಡಿಯಾಚೆಯವರನ್ನಾಗಿಸಿ ಬಿಡುತ್ತದೆ. ಜನರು ಇಲ್ಲಿಗೆ ಮನೋರಂಜನೆಗಾಗಿ ಬರುವುದಿಲ್ಲ; ಉಸಿರಾಡುತ್ತಿರುವ ಇತಿಹಾಸವನ್ನು ಮುಟ್ಟಲು ಬರುತ್ತಾರೆ. ವಿಭಜಿಸಲು ನಿರ್ಮಿಸಲಾದ ಸ್ಥಳವು ಈಗ ಲಕ್ಷಾಂತರ ಜನರನ್ನು ಒಗ್ಗೂಡಿಸುವ ಸ್ಥಳವಾಗಿದೆ. ಇದೇ ʻGeo Politics Tourismʼ ಉದ್ದೇಶ.

Untitled design - 2026-08-04T105027.598

ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಘಾ ಗಡಿಯಲ್ಲಿ ವಾತಾವರಣ ಸಂಪೂರ್ಣವಾಗಿ ಭಿನ್ನವಾಗಿದೆ. ಇದೊಂದು ರಂಗಭೂಮಿಯಂತೆ ಇರುವ ಗಡಿ ಪ್ರವಾಸ. ಪ್ರತಿ ಸಂಜೆಯೂ ಇಲ್ಲಿ ಗೌರವಯುತವಾಗಿರುತ್ತದೆ. ಜನರು ಅಳುತ್ತಾರೆ, ಕರತಾಡನ ಮಾಡುತ್ತಾರೆ, ಹಿಂದಿರುಗುತ್ತಾರೆ. ಭಾರಾತದ ಪ್ರವಾಸಿಗಳಿಗೆ ಇದು ಗಡಿ ಪ್ರವಾಸೋದ್ಯಮದ ಸುಲಭವಾಗಿ ತಲುಪಬಹುದಾದ ಮತ್ತು ರಂಜನಾತ್ಮಕವಾದ ಸ್ಥಳವಾಗಿದೆ. ಸೌಂದರ್ಯ ಮತ್ತು ವ್ಯಾಪಾರವನ್ನು ಒಟ್ಟಿಗೆ ತೋರಿಸುವ ಗಡಿಯೆಂದರೆ ಸಿಕ್ಕಿಂನ ʻನಾಥು ಲಾ ಪಾಸ್ʻ. ಭಾರತ-ಚೀನಾ ಗಡಿಯಲ್ಲಿ ನಿಲ್ಲಬಹುದು. ಹಿಮಾಲಯದ ಗಾಳಿಯನ್ನು ಮೈದುಂಬಿಕೊಳ್ಳಬಹುದು. ದಶಕಗಳಿಂದ ಮುಚ್ಚಲ್ಪಟ್ಟು ಈಗ ಮತ್ತೆ ತೆರೆದಿರುವ ವ್ಯಾಪಾರ ಮಾರುಕಟ್ಟೆಯನ್ನು ನೋಡಬಹುದು. ಅಲ್ಲಿಗೆ ಹೋಗಲು ಅನುಮತಿ ಬೇಕು. ಬೆಚ್ಚಗಿನ ಬಟ್ಟೆ ಬೇಕು. ಆದರೆ ಪ್ರತಿಫಲವಾಗಿ ಹಿಮಾಲಯ ದರ್ಶನ ಮತ್ತು ಎರಡು ದೈತ್ಯ ದೇಶಗಳ ಛಾವಣಿಯ ಮೇಲೆ ನಿಂತಿರುವ ಅಪರೂಪದ ಅನುಭವ ಪಡೆಯಬಹುದು.

ರೋಮಾಂಚನ ನೀಡುವ ಗಡಿಯೆಂದರೆ ಉತ್ತರ ಮತ್ತು ದಕ್ಷಿಣ ಕೊರಿಯಾದ ನಡುವಿನ ’ಡಿಮಿಲಿಟರೈಸ್ಡ್ ಜೋ಼ನ್’. ಇಲ್ಲಿಗೆ ಶಸ್ತ್ರಸಜ್ಜಿತ ಮಾರ್ಗದರ್ಶಿಗಳೊಂದಿಗೆ ಮಾತ್ರ ಭೇಟಿ ನೀಡಲು ಸಾಧ್ಯ. ಸಮಾವೇಶ ಕೊಠಡಿಯ ಮೇಜಿನ ಮಧ್ಯದಲ್ಲಿ ಗೆರೆ ನೇರವಾಗಿ ಹಾದುಹೋಗುತ್ತದೆ. ಪ್ರವೇಶಿಸಲು ಸಾಧ್ಯವೇಯಿಲ್ಲದ ಉತ್ತರ ಕೊರಿಯಾವನ್ನು ದುರ್ಬೀನಿನ ಮೂಲಕ ನೋಡಬಹುದಷ್ಟೇ. ಅಲ್ಲಿ ಬೀಸುವ ಗಾಳಿಯೂ ಸಂಘರ್ಷದಲ್ಲಿ ಇರುವಂತೆ ತೋರುತ್ತದೆ. ಶಾಂತಿ ಮತ್ತು ಸಂಘರ್ಷ ಎಷ್ಟು ಹತ್ತಿರದಲ್ಲಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಇಲ್ಲಿಗೆ ಹೋಗಬೇಕು.

Untitled design - 2026-08-04T105242.674

ಯೂರೋ ಕೊಟ್ಟು ಕಾಫಿ ಕುಡಿದು ಪೌಂಡ್ಸ್‌ನಲ್ಲಿ ಊಟ ಮಾಡಬೇಕೆಂದರೆ ಸ್ಪೇನ್ ಮತ್ತು ಬ್ರಿಟಿಷ್ ಪ್ರದೇಶದ ನಡುವೆ ಇರುವ ಜಿಬ್ರಾಲ್ಟರ್ ಗಡಿಗೆ ಹೋಗಬೇಕು. ಇದು ಬ್ರಿಟೀಷರಿಗೆ ಸೇರಿದ ಸ್ಥಳ ಆದರೆ ಸ್ಪೇನ್ ದೇಶಕ್ಕೆ ಅಂಟಿಕೊಂಡಿದೆ. ಅಲ್ಲಿಂದ ಯುನೈಟೆಡ್ ಕಿಂಗ್‍ಡಂಗೆ ಕಾಲ್ನಡಿಗೆಯಲ್ಲಿ ಬರಲು ಐದು ನಿಮಿಷ. ಇಲ್ಲಿ ಒಂದೇ ವಾಕ್ಯದಲ್ಲಿ ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಮಾತುಗಳನ್ನು ಕೇಳಬಹುದು. ಈ ಗಡಿಯನ್ನು ಹದಿನಾರು ವರ್ಷಗಳ ಕಾಲ ಮುಚ್ಚಲಾಗಿತ್ತು 1985ರಿಂದ ಅದು ಪ್ರತಿದಿನ ತೆರೆದಿರುತ್ತದೆ. ರಾಜಕೀಯವು ದೈನಂದಿನ ಜೀವನವನ್ನು ಹೇಗೆ ರೂಪಿಸುತ್ತದೆ ಎಂದು ನೋಡಲು ಈ ಗಡಿಗೆ ಒಮ್ಮೆ ಭೇಟಿ ನೀಡಬೇಕು.

ಭೂಗೋಳ ಮತ್ತು ಚರಿತ್ರೆಯನ್ನು ಅಂಗೈಯಲ್ಲಿ ಅನುಭವಿಸಬೇಕು ಎನ್ನುವವರು ಮನುಕುಲದ ಆರ್ದ್ರತೆಯನ್ನು ಪುಪ್ಪಸಗಳಲ್ಲಿ ತುಂಬಿಕೊಳ್ಳಬೇಕು ಎಂದು ಬಯಸುವವರು ಗಡಿ ಪ್ರವಾಸವನ್ನು ಮಾಡುತ್ತಾರೆ. ಅದಕ್ಕಾಗಿ ಹಣ ಖರ್ಚು ಮಾಡುವವರು ಲಕ್ಷಾಂತರ ಸಂಖ್ಯೆಯಲ್ಲಿ ಇದ್ದಾರೆ. ದೇಶದ ಸಾರ್ವಭೌಮತೆಗಾಗಿ ಗಡಿಗಳು ಅಗತ್ಯ. ಆದರೆ ಅವುಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವುದಕ್ಕೆ ಆಯ್ಕೆಗಳನ್ನು ತೆರೆದಿಡುತ್ತವೆ ಸ್ವತಃ ಗಡಿಗಳು. ಬೇರ್ಪಡುವಿಕೆಯ ನೋವಿಗೂ ಪುನರ್‌ಮಿಲನದ ನಲಿವಿಗೂ ಎಚ್ಚರಿಕೆ ಇರಬೇಕು ಎನ್ನುವ ಪಾಠದ ಪ್ರವಾಸವಿದು. ಒಮ್ಮೆ ʻನೀನು ಬರಬಾರದುʻ ಎಂದು ಹಾಕಿದ ಗೆರೆಯನ್ನು ʻದೂರ ಸ್ವಲ್ಪ ದೂರ ಬಂದು ನೋಡು ನನ್ನ ಕಡೆಗೆʻ ಎಂದು ಆಹ್ವಾನಿಸುವಂತಿದೆ Geo Politics Tourism.