- ಸರಸ್ವತಿ ವಿಶ್ವನಾಥ್ ಪಾಟೀಲ್

ಆನೆಗುಂದಿ ಪ್ರದೇಶದ ಪವಿತ್ರತೆ, ತುಂಗಭದ್ರೆಯ ತೀರದ ಮೃದು ಗಾಳಿ, ಹಂಪಿಯ ಕಲ್ಲು, ಗುಡ್ಡಗಳು ಇವೆಲ್ಲದರ ಮಧ್ಯೆ ನೆಲೆಸಿರುವ ಒಂದು ವಿಶಿಷ್ಟ ತಂಗುದಾಣವೇ ಹಂಪಿ ಬೋಲ್ಡರ್ಸ್ ರೆಸಾರ್ಟ್. ಪ್ರಕೃತಿಯ ಮಡಿಲಿನಲ್ಲಿ ವಿಶ್ರಾಂತಿ ನೀಡುವ ಈ ರೆಸಾರ್ಟ್ ಪ್ರವಾಸಿಗರಿಗೆ ಕೇವಲ ವಾಸಸ್ಥಾನವನ್ನಷ್ಟೇ ನೀಡುವುದಿಲ್ಲ ಅದು ಇತಿಹಾಸ, ನೈಸರ್ಗಿಕ ಅದ್ಭುತ ಮತ್ತು ಆಂತರಿಕ ಶಾಂತಿಯ ಸಂಯೋಗವನ್ನು ಅನುಭವಿಸಲು ಅವಕಾಶ ನೀಡುತ್ತದೆ.

ಹಂಪಿಯ ಕಲ್ಲುಗುಡ್ಡಗಳು ಸಾವಿರಾರು ವರ್ಷಗಳ ಕಾಲ ಮೌನದ ಸಾಕ್ಷಿಗಳಂತೆ ಇಲ್ಲಿ ನಿಂತಿವೆ. ಆನೆಗುಂದಿಯ ಪುರಾತನತೆಯ ಸ್ಪರ್ಶ ಈ ಪ್ರದೇಶಕ್ಕೆ ಮತ್ತೊಂದು ಮಿಡಿತ ನೀಡುತ್ತದೆ. ಈ ರೆಸಾರ್ಟ್‌ಗೆ ಕಾಲಿಟ್ಟ ಕ್ಷಣದಿಂದಲೇ ಪ್ರವಾಸಿಗರು ಒಂದು ವಿಭಿನ್ನ ಲೋಕಕ್ಕೆ ಪ್ರವೇಶಿಸಿದಂತೆ ಅನಿಸುತ್ತದೆ. ಒಂದೆಡೆ ಅಸಾಧಾರಣ ಬಂಡೆಗಳ ರಾಶಿಗಳು, ಮತ್ತೊಂದೆಡೆ ಹಸಿರು ವನಸೌಂದರ್ಯ, ಮಧ್ಯದಲ್ಲಿ ಪಕ್ಷಿಗಳು ಹಾರಾಟದ ನಿಶ್ಶಬ್ದ.

ರೆಸಾರ್ಟ್‌ ತನ್ನ ಸುತ್ತಲು ಸಂಪೂರ್ಣವಾಗಿ ವಿಶಿಷ್ಟ ಕಲ್ಲುಗುಡ್ಡಗಳಿಂದ ಆವರಿಸಲ್ಪಟ್ಟಿದೆ. ಬೆಳಗಿನ ಜಾವ ಸೂರ್ಯೋದಯದ ಮೊದಲ ಕಿರಣಗಳು ಈ ಬಂಡೆಗಳಿಗೆ ತಾಕಿ ಹೊಳೆಯುವ ರಂಗಿನ ಕಲೆಯಂತೆ ಕಾಣುತ್ತದೆ. ರೆಸಾರ್ಟ್‌ನ ಕೊಠಡಿಗಳು ಕೂಡಾ ಪ್ರಕೃತಿಯ ಭಾಗವಾಗಿರುವಂತೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಮರದ, ಕಲ್ಲಿನ ಮತ್ತು ಸ್ಥಳೀಯ ವಾಸ್ತುಶಿಲ್ಪದ ಸ್ಪರ್ಶವನ್ನು ಹೊಂದಿವೆ.

Hampi boulders resort

ಗಾಳಿಯ ಸವಿನುಡಿ, ದೂರದಲ್ಲಿ ಹರಿಯುವ ತುಂಗಭದ್ರೆಯ ಶಬ್ದ ಮತ್ತು ಪಕ್ಷಿಗಳ ಕೂಗು ಇವುಗಳಲ್ಲೇ ಪ್ರವಾಸಿಗರಿಗೆ ಪ್ರಕೃತಿ ಸಮೀಪಿಸುತ್ತಿರುವ ಅನುಭವ.

ಶಾಂತಿ ಹುಡುಕುವವರಿಗೆ ಪರಿಪೂರ್ಣ ಸ್ಥಳ

ಹಂಪಿ ಬೋಲ್ಡರ್ಸ್ ರೆಸಾರ್ಟ್‌ನ ಪ್ರಮುಖ ವಿಶೇಷತೆ ಎಂದರೆ ಇದು ಹೊಂದಿರುವ ನಿಶ್ಯಬ್ದ. ನಗರಗಳ ಒತ್ತಡ, ಗದ್ದಲ ಮತ್ತು ವೇಗದ ಜೀವನದಿಂದ ದೂರವಾಗಿ ಮನಸ್ಸಿಗೆ ವಿಶ್ರಾಂತಿ ಬೇಕಾದವರಿಗೆ ಇದು ದೇವರ ಕೊಡುಗೆ. ಇಲ್ಲಿ ಕೂತು ಪುಸ್ತಕ ಓದುವುದು, ಯೋಗ, ಧ್ಯಾನ ಮಾಡುವುದು ಅಥವಾ ನದಿತೀರದಲ್ಲಿ ನಡೆದು ಬರೋದು ಪ್ರತಿ ಕ್ಷಣವೂ ಮನಸ್ಸಿಗೆ ಹೊಸ ಉಸಿರು ತುಂಬುತ್ತದೆ.

ಈ ರೆಸಾರ್ಟ್‌ಗೆ ಹತ್ತಿರದಲ್ಲೇ ಇರುವ ಆನೆಗುಂದಿ ಪುರಾತನ ಕಿಷ್ಕಿಂಧಾ ರಾಜ್ಯದ ಕೇಂದ್ರ. ಆನೆಗುಂದಿಯ ಈ ಸಾಂಸ್ಕೃತಿಕ ಸ್ಪರ್ಶ ರೆಸಾರ್ಟ್‌ನ ವಾತಾವರಣಕ್ಕೂ ವಿಶೇಷ ಆಕರ್ಷಣೆ ಕೊಡುತ್ತದೆ. ರೆಸಾರ್ಟ್‌ನಲ್ಲಿ ಟ್ರೆಕ್ಕಿಂಗ್, ನೈಸರ್ಗಿಕ ನಡಿಗೆ, ಬಂಡೆಗಳ ಮೇಲೆ ಹತ್ತುವ ಸಾಹಸ, ಮತ್ತು ಸೈಕ್ಲಿಂಗ್ ಮಾಡುವ ಸೌಲಭ್ಯವೂ ಇದೆ. ಹಂಪಿಗೂ ಇದು ಹತ್ತಿರವಾಗಿರುವುದರಿಂದ ಪ್ರವಾಸಿಗರು ಬೆಳಗ್ಗೆ ಇತಿಹಾಸದ ಜಗತ್ತನ್ನು ನೋಡಬಹುದು. ಸಂಜೆ ಸುಮ್ಮನೆ ರೆಸಾರ್ಟ್‌ನ ನೀರಿನ ಹೊಂಡದ ಬಳಿ ಕುಳಿತು ಸೂರ್ಯಾಸ್ತದ ಸೌಂದರ್ಯವನ್ನು ಸವಿಯಬಹುದು.

Hampi resort

ಹಂಪಿ ಬೋಲ್ಡರ್ಸ್ ರೆಸಾರ್ಟ್ ಕೇವಲ ತಂಗಲು ಜಾಗವಲ್ಲ. ಅದು ಒಂದು ಅನುಭವ, ಒಂದು ನೆನಪು, ಒಂದು ಚಿಕ್ಕ ಯಾನ. ಇಲ್ಲಿ ಕಳೆಯುವ ಪ್ರತಿಯೊಂದು ಕ್ಷಣವು ಹಂಪಿಯ ಪುರಾತನ ಜಗತ್ತನ್ನು ಪ್ರಕೃತಿಯ ಶಾಂತತೆಯೊಂದಿಗೆ ಜೋಡಿಸುತ್ತದೆ. ಆನೆಗುಂದಿ ಮತ್ತು ಅಂಜನಾದ್ರಿಯ ಪುರಾಣದ ಗಾಂಭೀರ್ಯ, ತುಂಗಭದ್ರೆಯ ತೀರದ ಶಾಂತಿ ಮತ್ತು ಬಂಡೆಗಳ ನೈಜ ಕಲೆ ಇವುಗಳೆಲ್ಲ ಸೇರಿ ಈ ರೆಸಾರ್ಟ್ ಭೇಟಿ ನೀಡಲು ಅನನ್ಯವಾದ ಸ್ಥಳವಾಗಿಸುತ್ತದೆ.

ರಾತ್ರಿ ಹಂಪಿ ಬೋಲ್ಡರ್ಸ್ ರೆಸಾರ್ಟ್‌ಗೆ ಇಳಿಯುವಾಗ ಪ್ರಕೃತಿಯು ತನ್ನ ಮತ್ತೊಂದು ಮುಖವನ್ನು ನಿಧಾನವಾಗಿ ತೆರೆದುಕೊಳ್ಳುತ್ತದೆ. ಹಗಲಿನ ತಾಪ ಮತ್ತು ಚಲನವಲನದ ಹಿಂದೆ ಇಲ್ಲಿ ರಾತ್ರಿ ಎಂದರೆ ನಿಶ್ಯಬ್ದದ ಮಂತ್ರ. ತುಂಗಭದ್ರೆಯ ಮೃದುವಾದ ನಿನಾದ, ದೂರದಲ್ಲಿ ಕೇಳಿಬರುವ ಗಾಳಿಯ ಸೌಂಡು, ಬಂಡೆಗಳ ನಡುವೆ ಪ್ರತಿಧ್ವನಿಸುವ ಮೌನ ಇವೆಲ್ಲ ಸೇರಿ ಒಂದು ಅಪೂರ್ವ ರಾತ್ರಿಯ ಸಂಗೀತವನ್ನು ರಚಿಸುತ್ತವೆ.

ರೆಸಾರ್ಟ್‌ನ ಅಲ್ಲಿ ಕೂತು ಬಿಸಿ ಚಹಾ, ಕಾಫಿ ಕುಡಿಯುತ್ತಿದ್ದರೆ ಎದುರಿನ ಕಲ್ಲುಗುಡ್ಡಗಳ ನಡುವಿನ ಮೌನವೇ ನಿಮ್ಮನ್ನು ಆವರಿಸುತ್ತದೆ. ಕೆಲವೊಮ್ಮೆ ಕಲ್ಲುಗಳ ಮೇಲೆ ಚಂದ್ರನ ಬೆಳಕು ಸುರಿದು ಅವುಗಳನ್ನು ಬೆಳ್ಳಿಯ ಗಾತ್ರಗಳಂತೆ ಮಿನುಗಿಸುತ್ತದೆ. ಚಂದ್ರಜ್ಯೋತಿಯ ಅಡಿಯಲ್ಲಿ ಹಂಪಿಯ ಬಂಡೆಗಳು ಅತೀತಕಾಲದ ಪುರಾಣದ ಯೋಧರಂತೆ ಕಾಣುತ್ತವೆ. ಎಲ್ಲಕ್ಕಿಂತ ವಿಶೇಷವಾದುದು ರಾತ್ರಿಯ ಶಾಂತಿ. ಇಲ್ಲಿ ತಮ್ಮ ಮನಸ್ಸಿನ ಆಳ ಕೇಳಿಸಿಕೊಳ್ಳುವಷ್ಟು ಮೌನವಿದೆ.

ಹಂಪಿ ಬೋಲ್ಡರ್ಸ್ ರೆಸಾರ್ಟ್‌ನ ರಾತ್ರಿ ಎಂದರೆ ಕೇವಲ ಒಂದು ರಾತ್ರಿ ಅಲ್ಲ ಅದು ಒಂದು ಧ್ಯಾನದ ಕ್ಷಣ. ಪ್ರಕೃತಿಯ ಮಡಿಲಿನಲ್ಲಿ ಮಲಗಿದಂತೆ, ನಕ್ಷತ್ರಗಳಡಿ ವಿಶ್ರಾಂತಿಯಾಗಿ, ಮನಸ್ಸಿನ ಭಾರಗಳನ್ನು ಬಿಟ್ಟು ಹೊಸ ಉಸಿರು ತುಂಬಿಕೊಳ್ಳುವ ಸಮಯ. ಇಲ್ಲಿ ರಾತ್ರಿಯನ್ನು ನೋಡಿದವನು ಬೆಳಗಿನ ಜಾವ ಎದ್ದಾಗ ತನ್ನೊಳಗೆ ಒಂದು ಹೊಸ ಶಾಂತಿ, ಹೊಸ ಪ್ರಕೃತಿ, ಹೊಸ ಜೀವಂತಿಕೆ ಹುಟ್ಟಿಕೊಂಡಂತೆ ಕಾಣುತ್ತಾನೆ.

ಉಪಚಾರ ಸೌಲಭ್ಯ ಬೆಸ್ಟು

ಹಂಪಿ ಬೋಲ್ಡರ್ಸ್ ರೆಸಾರ್ಟ್‌ಗೆ ಕಾಲಿಡುವ ಕ್ಷಣದಿಂದಲೇ ಇಲ್ಲಿ ಸಿಗುವ ಸೇವೆ, ಸೌಕರ್ಯ ಮತ್ತು ಆತಿಥ್ಯವೇ ರೆಸಾರ್ಟ್‌ನ ನಿಜವಾದ ಸೌಂದರ್ಯ. ಪ್ರಕೃತಿಯ ಮಡಿಲಿನಲ್ಲಿ ಬೆಳೆದಿರುವ ಈ ತಂಗುದಾಣವು ಕೇವಲ ಬಂಡೆಗಳ ಮಧ್ಯೆ ನಿರ್ಮಿತ ಕಟ್ಟಡವಲ್ಲ ಅದು ಒಂದು ಹೃದಯಸ್ಪರ್ಶಿ ಅನುಭವ. ಆ ಅನುಭವವನ್ನು ಸಂಪೂರ್ಣಗೊಳಿಸುವ ಪ್ರಮುಖ ಕಾರಣವೇ ಇಲ್ಲಿ ಸಿಗುವ ಉತ್ತಮ ಹೃದಯಪೂರ್ವಕ ಸೇವೆ.

ರೆಸಾರ್ಟ್‌ಗೆ ತಲುಪಿದಕ್ಷಣ ಸಿಬ್ಬಂದಿಯು ನಗುಮುಖದಿಂದ ಬರಮಾಡಿಕೊಂಡು ವೆಲ್ಕಮ್ ಡ್ರಿಂಕ್ಸ್ ಕೊಡುತ್ತಾರೆ. ಅವರ ಮೃದು ವರ್ತನೆ ಮತ್ತು ತಕ್ಷಣದ ಸಹಾಯದಿಂದ ಅತಿಥಿಗಳ ಪ್ರಯಾಣವೇ ವಿಭಿನ್ನವಾಗುತ್ತದೆ. ನಿಮ್ಮ ಪ್ರಯಾಣದ ದಣಿವು, ಬಿಸಿಲಿನ ಒತ್ತಡ ಮತ್ತು ಬ್ಯಾಗ್‌ಗಳ ತೂಕವನ್ನೇ ಮರೆಸುವಷ್ಟು ಸ್ನೇಹಮಯವಾಗಿ ಅವರು ವರ್ತಿಸುತ್ತಾರೆ. ಪ್ರವಾಸಿಗರ ಅಗತ್ಯವನ್ನು ತಿಳಿದುಕೊಳ್ಳುವ ಅವರ ಕಾಳಜಿ ನಿಜವಾಗಿಯೂ ಮನಮುಟ್ಟುತ್ತದೆ.

ಇಲ್ಲಿನ ರೂಮ್‌ಗಳು ಪ್ರಕೃತಿಯೊಂದಿಗೆ ಹೊಂದಿಕೊಳ್ಳುವ ಶೈಲಿಯಲ್ಲಿ ನಿರ್ಮಿತವಾಗಿವೆ. ಆದರೆ ಅವುಗಳ ನಿರ್ವಹಣೆ, ಸ್ವಚ್ಛತೆ ಮತ್ತು ಹೈಜಿನ್ ಕ್ರಮಗಳು ರೆಸಾರ್ಟ್‌ಗೆ ಇನ್ನೊಂದು ಮಟ್ಟದ ಗೌರವ ತರಿಸುತ್ತವೆ. ಹಾಸಿಗೆಗಳು ಶುಚಿಯಾದವು, ಸುಗಂಧಭರಿತವಾದವು. ಶೌಚಾಲಯಗಳು ಹೊಸದಾಗಿ ಕಟ್ಟಿದಂತಿರುತ್ತವೆ. ಬಿಸಿ ನೀರು, ಶುಚಿಯಾದ ಟವಲ್, ಎಲ್ಲವೂ ಯಾವಾಗಲೂ ಲಭ್ಯ.

ಅತಿಥಿಗಳು ಕೇಳುವ ಮುನ್ನವೇ ಅವರ ಅಗತ್ಯಗಳನ್ನು ಪೂರೈಸುತ್ತಾರೆ. ಹಂಪಿ ಬೋಲ್ಡರ್ಸ್ ರೆಸಾರ್ಟ್‌ನ ಡೈನಿಂಗ್ ಪ್ರದೇಶದಲ್ಲಿ ಸಿಗುವ ಸೇವೆ ಮತ್ತೊಂದು ಅದ್ಭುತ ಅನುಭವ.

resorts in Hampi

ಫುಡ್ಡು ಸೂಪರ್!

ಬೆಳಗಿನ ಉಪಾಹಾರದಿಂದ ರಾತ್ರಿ ಊಟದವರೆಗೆ ಶುಚಿರುಚಿ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಬಿಸಿ ಬಿಸಿ ಆರೋಗ್ಯಕರ ಅಡುಗೆ ರೆಡಿಯಾಗಿರುತ್ತೆ. ಹಾಗೂ ತಕ್ಷಣ ತಯಾರಿಸುವ ಬಿಸಿ ಸ್ಟಾರ್ಟರ್. ಊಟವನ್ನು ಕೇವಲ ತಂದಿಡುವುದಲ್ಲ ಅತಿಥಿಯ ರುಚಿ, ಮತ್ತು ಇಷ್ಟದ ತಕ್ಕಂತೆ ಸರ್ವ್ ಕೂಡ ಮಾಡ್ತಾರೆ.

ದಾರಿ ಹೇಗೆ?

ರೆಸಾರ್ಟ್‌ಗೆ ಅತ್ಯಂತ ಹತ್ತಿರದ ನಗರ ಗಂಗಾವತಿ. ಗಂಗಾವತಿಯಿಂದ ಕೇವಲ 12–15 ಕಿಮೀ ದೂರ, 30 ನಿಮಿಷ ಸಮಯ. ಗಂಗಾವತಿಯಿಂದ ಆನೆಗುಂದಿ ರಸ್ತೆ ಹಿಡಿದು ಹೋದರೆ ಆನೆಗುಂದಿಗೆ ತಲುಪುವ ಮೊದಲು “ಹಂಪಿ ಬೋಲ್ಡರ್ಸ್” ಸೂಚನಾ ಫಲಕಗಳು ಹಲವು ಕಡೆ ಕಾಣುತ್ತವೆ. ಆನೆಗುಂದಿ ಮುಖ್ಯ ರಸ್ತೆಯಿಂದ 2–3 ಕಿಮೀ ಒಳಗೆ ರೆಸಾರ್ಟ್ ಇದೆ. ತುಂಗಭದ್ರೆಯ ಬಂಡೆಗಳ ನಡುವೆ ಸಾಗುವ ಚಿಕ್ಕ ರಸ್ತೆ ನಿಮಗೆ ನೇರವಾಗಿ ರೆಸಾರ್ಟ್ ಗೇಟ್‌ವರೆಗೆ ಕರೆದೊಯ್ಯುತ್ತದೆ. ಇದು ರೆಸಾರ್ಟ್‌ಗೆ ತಲುಪಲು ಅತ್ಯಂತ ಸುಲಭ ಮಾರ್ಗ.

ಇತಿಹಾಸ ಮತ್ತು ಪ್ರಕೃತಿ ಎರಡನ್ನೂ ಪ್ರೀತಿಸುವ ಪ್ರತಿಯೊಬ್ಬರಿಗೂ ಇದು ಪರಿಪೂರ್ಣ ಗಮ್ಯಸ್ಥಾನ.