ಉಡುಪಿಯ ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಲೇಬೇಕೆಂಬುದು ಬಹು ದಿನಗಳ ಕನಸಾಗಿತ್ತು. ಆದರೆ ಅದಕ್ಕೆ ಮಕ್ಕಳಿಗೆ ಕ್ರಿಸ್‌ಮಸ್‌ ರಜೆಯ ವರೆಗೂ ಕಾಯಲೇಬೇಕಾಗಿತ್ತು. ರಜೆ ಸಿಕ್ಕಿದ್ದೇ ಕೃಷ್ಣ ದೇವಾಲಯಕ್ಕೆ ಭೇಟಿ ನೀಡುವುದರ ಜತೆಗೆ ಉಡುಪಿಯನ್ನು ಸುತ್ತಾಡಿಬರಬೇಕೆಂದುಕೊಂಡು ಬ್ಯಾಗ್‌ ಪಾಕ್‌ ಮಾಡಿ ಹೊರಟೇಬಿಟ್ಟೆವು.

ಸಾಲು ಸಾಲು ರಜೆಗಳ ಸಂದರ್ಭವಾದ್ದರಿಂದ ಉಡುಪಿ ಪ್ರವಾಸಿಗರಿಂದ ತುಂಬಿಕೊಂಡಿತ್ತಾದ್ದರಿಂದ ಬೇಗನೆ ದೇವಾಲಯದಲ್ಲಿ ದರ್ಶನ ಮುಗಿಸಿ, ಸುತ್ತಮುತ್ತಲ ಒಂದಷ್ಟು ದೇವಾಲಯಗಳು, ಪ್ರವಾಸಿ ಸ್ಥಳಗಳನ್ನು ನೋಡಿ, ಉಳಿದುಕೊಳ್ಳಲು ಮೊದಲೇ ಬುಕಿಂಗ್‌ ಮಾಡಿಕೊಂಡಿದ್ದ ಮಟ್ಟು ಬೀಚ್‌ ಬ್ಯಾಕ್‌ ವಾಟರ್‌ ಪಕ್ಕದಲ್ಲಿ ಹಾಗೂ ಕಟಪಾಡಿ ಹೈವೇ ಯಿಂದ ಕೆಲವೇ ನಿಮಿಷಗಳ ಅಂತರದಲ್ಲಿರುವ ಉದ್ಭವ್‌ ವಿಂಟೇಜ್‌ ರೆಸಾರ್ಟ್‌ ಸಂಜೆಯ ವೇಳೆಗೆ ತಲುಪಿದೆವು.

UDUPI (3)

ಮೊದಲ ನೋಟಕ್ಕೆ ವಿಂಟೇಜ್‌ ಅನುಭವ ನೀಡುವ ಈ ರೆಸಾರ್ಟ್‌ ಸಂಜೆಯ ವೇಳೆಗಂತೂ ಇನ್ನೂ ಅದ್ಭುತವೆನಿಸಿತು. ಎತ್ತಿನ ಗಾಡಿಗಳು, ಮಣ್ಣಿನಿಂದ ನಿರ್ಮಿಸಲಾಗಿದ್ದ ಪುಟ್ಟ ಕುಟೀರಗಳೆಲ್ಲವೂ ಕರಾವಳಿ ಭಾಗದ ‌80-90ರ ದಶಕದ ಗ್ರಾಮೀಣ ಜೀವನವನ್ನು ನೆನಪಿಸುವಂತಿತ್ತು. ಈ ರೆಸಾರ್ಟ್‌ ನಲ್ಲಿ ವಿಂಟೇಜ್‌ ಇಂಟೀರಿಯರ್‌ ಇರುವ 10 ಎಸಿ ಹೆರಿಟೇಜ್‌ ರೂಮ್‌ಗಳಿವೆ. ಕಾಟೇಜ್‌ ಗಳು, ಡಾರ್ಮೆಟ್ರಿಗಳೂ ಇಲ್ಲಿವೆ. ಪಾರಂಪರಿಕ ಮನೆಯೇ ಸುಂದರವಾದ ರೆಸಾರ್ಟ್‌ ಆಗಿ ಬದಲಾಗಿರುವುದರಿಂದ ತವರಲ್ಲೇ ಇದ್ದೇನೆಂಬ ಭಾವ ಮೂಡಿಸಿದ್ದಂತೂ ಸುಳ್ಳಲ್ಲ.

ಸಿನಿಮಾ ಶೂಟ್‌ ಮಾಡಬೇಕಾ!

UDUPI (2)

ಸಿನಿಮಾ ಚಿತ್ರೀಕರಣಕ್ಕೆ, ಪ್ರಿ ವೆಡ್ಡಿಂಗ್‌ ಶೂಟ್‌ ಮಾಡಿಕೊಳ್ಳುವುದಕ್ಕೆ ಯಾವುದೇ ಫೊಟೋ ಶೂಟ್‌ ಮಾಡಿಸುವುದಕ್ಕೂ ಹೇಳಿ ಮಾಡಿಸಿದಂತಿತ್ತು ಆ ಜಾಗ. ವಿಶಾಲವಾಗಿ ಹರಡಿಕೊಂಡಿರುವ ಲಾನ್‌ನಲ್ಲಿ 500ಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಲು ಯೋಗ್ಯವಾಗುವಂಥ ಜಾಗವಿತ್ತು. ಗೆಟ್‌ ಟುಗೆದರ್‌, ಕಾರ್ಪೊರೇಟ್‌ ಇವೆಂಟ್ಸ್‌, ಡೆಸ್ಟಿನೇಷನ್‌ ವೆಡ್ಡಿಂಗ್‌, ಬರ್ತ್‌ ಡೇ ಪಾರ್ಟಿ ಹೀಗೆ ತಿಂಗಳಲ್ಲಿ ಇಲ್ಲಿ ಅನೇಕ ಕಾರ್ಯಕ್ರಮಗಳೂ ನಡೆಯುತ್ತಿರುತ್ತವಂತೆ. ಆದರೆ ನಾವು ಹೋದ ಸಂದರ್ಭದಲ್ಲಿ ಇಲ್ಲಿ ಯಾರ ಕಾಟವೂ ಇರದೇ ನಾವಾಯ್ತು, ನಮ್ಮ ಕುಟುಂಬವಾಯ್ತು ಎಂದು ಸುಂದರ ಕ್ಷಣಗಳನ್ನು ಕಟ್ಟಿಕೊಂಡೆವು.

ಮಕ್ಕಳಿಗಾಗಿ ಒಂದಷ್ಟು ಸಮಯ

UDUPI (5)

ಮಕ್ಕಳು ಎಲ್ಲೇ ಹೋದರೂ ಸುಮ್ಮನೇ ಇರಲು ಸಾಧ್ಯವೇ ಇಲ್ಲ. ಅವರಿಗೆ ಹೊಂದುವಂಥ ಪರಿಸರವನ್ನು ಆಯ್ಕೆ ಮಾಡಿಕೊಂಡರಷ್ಟೇ ನಮ್ಮ ಪ್ರಯಾಣ ಸುಖಕರವಾಗಿರುತ್ತದೆ. ಇದನ್ನು ಮುಂಚಿತವಾಗಿಯೇ ಅರಿತಿದ್ದರಿಂದ ಮಕ್ಕಳಿಗೆ ಆಡುವುದಕ್ಕೆ ಜಾಗವಿದೆಯೇ ಎಂಬುದರ ಬಗ್ಗೆ ಖಚಿತಪಡಿಸಿಕೊಂಡಿದ್ದೆ. ಚಿಕ್ಕದಾದರೂ ಚೊಕ್ಕವೆಂಬಂತಿದ್ದ ಪ್ಲೇ ಏರಿಯಾದಲ್ಲಿ ಮಕ್ಕಳಿಬ್ಬರೂ ಸಾಕಷ್ಟು ಸಮಯವನ್ನು ಕಳೆದಿದ್ದರು.

ಹಿನ್ನೀರಿನಲ್ಲೊಂದು ಸುಂದರ ಕುಟೀರ

UDUPI (4)

ಉಡುಪಿಯಲ್ಲಿ ರೆಸಾರ್ಟ್‌ಗಳಾಗಿ ಗೂಗಲ್‌ನಲ್ಲಿ ಹುಡುಕಾಡಿದಾಗ ಆಯ್ಕೆಗಳು ಹಲವು ನನ್ನೆದುರಿಗಿತ್ತಾದರೂ ಮಟ್ಟು ಕಡಲತೀರದ ಹಿನ್ನೀರಿನ ಭಾಗದಲ್ಲಿದ್ದ ಈ ರೆಸಾರ್ಟ್‌ ಬೇಗನೆ ಆಕರ್ಷಿಸಿತ್ತು. ಮುಂಜಾನೆಯ ಬೆಳಕು, ಸಂಜೆಯ ಇಳಿ ಕತ್ತಲೆಲ್ಲವನ್ನೂ ತೀರದಲ್ಲಿ ಕುಳಿತು ಅನುಭವಿಸಿಯೇ ತಿಳಿದುಕೊಂಡೆ. ಇನ್ನು ಈ ಹಿನ್ನೀರಿನಲ್ಲಿ ಬೋಟಿಂಗ್‌ ಹೋಗುವ ಮನಸಾದರೆ ಈ ರೆಸಾರ್ಟ್‌ ಸಿಬ್ಬಂದಿಗೆ ತಿಳಿಸಿದರೆ ಸಾಕು. ಹೆಚ್ಚಿನ ಮೊತ್ತವನ್ನು ಭರಿಸಿ, ಬೋಟ್‌ನಲ್ಲಿ ಸುತ್ತಾಡಿಬರಬಹುದು. ಇಷ್ಟು ದೂರವೇ ಬಂದಿರುವಾಗ ಬೋಟ್‌ನಲ್ಲಿ ಕೂರದೇ ಹೋಗುವುದು ಹೇಗೆ ಅಂತ ಚಿಕ್ಕದಾಗಿ ಒಂದು ರೌಂಡ್ಸ್‌ ಹೋಗಿಬಂದಿದ್ದೆ.

ಉಡುಪಿಯ ರುಚಿ!

ಮನೆಯ ಅಡುಗೆಯನ್ನು ಉಂಡು ಬೇಸರವಾಗಿಬಿಟ್ಟಿತ್ತು. ಇಲ್ಲಿಗೆ ಬಂದಮೇಲಂತೂ ಅದ್ಭುತವಾದ ಆಹಾರಗಳ ರುಚಿಯನ್ನು ತಿಳಿದೆ. ಉಡುಪಿಯ ಪ್ರಮುಖ ಡಿಶ್‌ಗಳನ್ನು ಮೊದಲೇ ಹೇಳಿ ಮಾಡಿಸಿಕೊಂಡು ತಿಂದೆ, ನಾನ್ಯಾವಾಗ ಇಂಥ ರುಚಿಕರ ಆಹಾರ ಮಾಡುತ್ತೇನೋ ಅನಿಸಿಬಿಟ್ಟಿತ್ತು. ಮಕ್ಕಳಿಗೂ ಹಿಡಿಸುವಂತೆ ನಸು ಖಾರದ, ಹಿತಮಿತವಾದ ಮಸಾಲೆ ಹಾಕಿದ ಆಹಾರಗಳನ್ನೂ ತಯಾರಿಸಿಕೊಟ್ಟಿದ್ದರಿಂದ ಆಹಾರದ ವಿಚಾರದಲ್ಲೂ ಇಲ್ಲಿ ನಮಗೆ ಯಾವುದೇ ಸಮಸ್ಯೆಯೆನಿಸಿಲ್ಲ.

ಒಟ್ಟಿನಲ್ಲಿ ದಿನಕ್ಕೆ ಮೂರೂವರೆ ಸಾವಿರ ರುಪಾಯಿ ಕೊಟ್ಟು ರೆಸಾರ್ಟ್‌ನಲ್ಲಿ ರೂಮು ಕಾಯ್ದಿರಿಸಿದರೂ, ಉಡುಪಿಯನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಡುವಲ್ಲಿ ಉದ್ಭವ್‌ ವಿಂಟೇಜ್‌ ರೆಸಾರ್ಟ್‌ ಯಶಸ್ವಿಯಾಗಿತ್ತು. ಪೈಸಾ ವಸೂಲ್‌ ಅಂತಾರಲ್ಲ, ಹಾಗೆ ಕೊಟ್ಟ ದುಡ್ಡಿಗೆ ಸಕತ್ತಾಗಿರುವ ರೆಸಾರ್ಟ್‌ನಲ್ಲಿ ಕುಟುಂಬದ ಜತೆಗೆ ಸುಂದರ ಕ್ಷಣಗಳನ್ನು ಕಳೆದೆನೆಂಬ ಖುಷಿಯಂತೂ ನನ್ನ ಜತೆಗೇ ಇದೆ.

ಉದ್ಭವ್‌ ವಿಂಟೇಜ್‌ ರೆಸಾರ್ಟ್‌, ಉಡುಪಿ, ಕರ್ನಾಟಕ

ಮೊ: 090199 42499