ಹೋಂ ಸ್ಟೇ ಎಂದರೆ ಹೀಗಿರಬೇಕು!
ಕೆಲಸ, ಟ್ರಾಫಿಕ್, ಕಿರಿಕಿರಿ, ಹೀಗೆ ಎಲ್ಲ ಒತ್ತಡಗಳಿಂದ ಹೊರಬಂದು ಒಂದು ಬ್ರೇಕ್ ತೆಗೆದುಕೊಳ್ಳಬೇಕು ಅನಿಸಿದ್ಯಾ? ಗೆಳೆಯರೆಲ್ಲ ಜತೆಗೂಡಿ, ಕೆಲವು ದಿನಗಳ ಕಾಲ ಹಾಯಾಗಿ ಕಳೆಯುವ ಬಯಕೆಯೇ? ನಗರ ಜೀವನದಿಂದ ಹೊರಬಂದು ಪ್ರಕೃತಿಯ ನಡುವಿನ ಪ್ರಶಾಂತ ವಾತಾವರಣದಲ್ಲಿ ಹಾಯಾಗಿ, ಎಲ್ಲವನ್ನೂ ಮರೆತು ಕಾಲ ಕಳೆಯುವ ಆಸೆಯೇ? ಹಾಗಾದರೆ ಬನ್ನಿ, ಒಂದೊಳ್ಳೆ ಹೋಮ್ ಸ್ಟೇ ಪರಿಚಯ ಮಾಡಿಕೊಡ್ತೀನಿ.
- ಸಹನಾ ಪ್ರಸಾದ್
ಬೆಂಗಳೂರಿನ ಜೀವನಕ್ಕೆ ಒಂದೆರಡು ದಿನ ವಿರಾಮ ಕೊಟ್ಟು ಸುಂದರವಾದ ಪ್ರಕೃತಿಯೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದೀರಾ? ಬೆಂಗಳೂರಿನಿಂದ 250ಕಿಲೋಮೀಟರ್, ಮಡಿಕೇರಿಯಿಂದ ಕೇವಲ 45 ಕಿಲೋಮೀಟರ್, ಕುಶಾಲನಗರದಿಂದ 30 ಹಾಗೂ ಸೋಮವಾರಪೇಟೆಯಿಂದ ಕೇವಲ 13 ಕಿಲೋಮೀಟರ್ ದೂರದಲ್ಲಿರುವ ಡ್ರೀಮ್ ಏಕರ್ಸ್ ಎಂಬ ಈ ಹೋಂ ಸ್ಟೇ ನಿಮಗೆ ಉತ್ತಮ ಆಯ್ಕೆಯಾಗಲಿದೆ. ಹೆಸರಾಂತ ಐಟಿ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸಿರುವ ಅಭಿರಾಮ್ ಕೂಡುವಳ್ಳಿಯವರು, ಪ್ರಪಂಚ ಪರ್ಯಟನೆ ಮಾಡಿ, ಕಾರ್ಪೊರೇಟ್ ಬದುಕನ್ನು ಅನುಭವಿಸಿದ ಮೇಲೆ ಇವೆಲ್ಲವೂ ಸಾಕೆನಿಸಿ ನಿಸರ್ಗದ ಮಡಿಲಲ್ಲಿ ಕಾಲಕಳೆಯುವ ಈ ಹೋಂ ಸ್ಟೇ ಹುಟ್ಟುಹಾಕಿದರು. ತನ್ನಂತೆಯೇ ಪ್ರಕೃತಿಯನ್ನು ಬಯಸುವ ಮಂದಿಗಾಗಿ ಡ್ರೀಮ್ ಏಕರ್ಸ್ ಹೋಂ ಸ್ಟೇನಲ್ಲಿ ಅನೇಕ ಅವಕಾಶಗಳನ್ನೂ ನೀಡಿದ್ದಾರೆ.

ತಾಕೇರಿ ಹಳ್ಳಿ, ಸೋಮವಾರಪೇಟ್ ಬಳಿ ಇರುವ ಈ ಹೋಂ ಸ್ಟೇಗೆ ನೀವು ನಿಮ್ಮ ಸ್ವಂತ ವಾಹನದಲ್ಲಿ ಬರಬಹುದು. ಕಷ್ಟವಾದರೆ , ಕುಶಾಲನಗರಕ್ಕೆ ಬಸ್ಸಿನಲ್ಲಿ ಬಂದರೆ, ಇವರೇ ನಿಮ್ಮನ್ನು ಅಲ್ಲಿಂದ ಪಿಕ್ ಮಾಡುತ್ತಾರೆ. ಹೋಂ ಸ್ಟೇ ತಲುಪುವ ದಾರಿ ಅತಿ ಮನೋಹರವಾಗಿದೆ. ಕಾಫಿ ತೋಟಗಳು, ಸಮೃದ್ಧವಾಗಿ ಬೆಳೆದಿರುವ ಸಿಲ್ವರ್ ಓಕ್ ಮರಗಳು, ಹುಲುಸಾಗಿ ಬೆಳೆದ ಹಸಿರು ಗಿಡ ಮರಗಳು, ಏಲಕ್ಕಿ ಗಿಡಗಳು, ನಗರದ ಕುಲುಷಿತ ಹವೆ ಕುಡಿದ ನಿಮಗೆ ಹೊಸ ಉಲ್ಲಾಸ-ಉತ್ಸಾಹ ನೀಡುತ್ತದೆ. ಗೇಟಿನೊಳಗೆ ಬಂದಾಗ ಸುಂದರವಾದ ಮನೆಯೊಂದು ನಿಮ್ಮನ್ನು ಸ್ವಾಗತಿಸುತ್ತದೆ. ಮುಗುಳುನಗುತ್ತಾ ಕುಳಿತಿರುವ ಬುದ್ಧನ ಪ್ರತಿಮೆಯಂತೂ ಅತ್ಯಾಕರ್ಷಕವಾಗಿದೆ. ಗ್ರಾಮೀಣ ಬದುಕನ್ನು ಪರಿಚಯಿಸುವಂಥ ಹಳೆಯ ಒರಳುಕಲ್ಲು, ರುಬ್ಬುವ ಕಲ್ಲುಗಳನ್ನು ನೋಡಿದರಂತೂ ಬೆರಗಾಗಿಬಿಡುತ್ತೀರಿ. ಇವೆಲ್ಲವನ್ನೂ ನೋಡುವಷ್ಟರಲ್ಲಿ ವೆಲ್ಕಮ್ ಡ್ರಿಂಕ್ ನಿಮ್ಮ ಕೈಯಲ್ಲಿರುತ್ತದೆ. ಬಿಸಿ ಚಹಾ, ಕಾಫಿ ಅಥವಾ ತಂಪು ಪಾನಿಯ ಹೀರುವಷ್ಟರಲ್ಲಿ, ಫೊಟೋ ಶೂಟ್ ಶುರು ಮಾಡಿರುತ್ತೀರಿ.
ಮನೆಯೊಳಗೆ ನಡೆದಾಗ, ದೊಡ್ಡದಾದ ಬೆಡ್ರೂಮ್, ಕೋಣೆಯೊಳಗೆ ಮೆತ್ತನೆಯ ಹಾಸಿಗೆಯಿರುವ ಮಂಚ, ಹತ್ತಲು ಅಲಂಕಾರಿಕ ಮೆಟ್ಟಲುಗಳನ್ನು ನೋಡಿವುದೇ ಮಕ್ಕಳಿಗೆ ಸುಗ್ಗಿ. ನಮ್ಮ ಪಾಡಿಗೆ ಪುಸ್ತಕ ಓದುತ್ತ , ಮೊಬೈಲ್ ನೋಡುತ್ತಾ ಮಲಗುವ ಆಸೆಯಾಗುವುದಂತೂ ಖಂಡಿತ.
ಹಿತವಾದ ಭೋಜನ, ಜಾಸ್ತಿ ಮಸಾಲೆ, ಖಾರ ಹಾಕದ, ನಿಮ್ಮ ರುಚಿಗೆ ತಕ್ಕಂತೆ ಮಾಡಿಕೊಡುವ ಬಾಣಸಿಗರು. ಮಾಂಸಾಹಾರಿಗಳಿಗೆ ಹೊರಗಡೆಯಿಂದ ತರಿಸಿಕೊಡುವ ವ್ಯವಸ್ಥೆಯೂ ಇದೆ. ಸುತ್ತಮುತ್ತಲಿನ ಆಕರ್ಷಣೆಗಳಾದ ಕೋಟೆ ಬೆಟ್ಟ, ಮಲ್ಲಳ್ಳಿ ಜಲಪಾತ, ಮಂಡಳಪಟ್ಟಿ ಶಿಖರ, ಹಾರಂಗಿ ಆಣೆಕಟ್ಟು, ನಮ್ಡ್ರೋಲಿಂಗ್ ಮೊನಾಸ್ಟ್ರಿ, ಮಡಿಕೇರಿ ನಗರ, ಅಬ್ಬಿ ಜಲಪಾತ, ತಲಕಾವೇರಿ , ನಾಲ್ಕನಾಡ್ ಅರಮನೆ ಇತ್ಯಾದಿ ಸ್ಥಳಗಳನ್ನು ಸುತ್ತಿ ಬರಬಹುದು. ಸುತ್ತಡಿಬರಲು ನಿಮಗೆ ವಾಹನದ ಅಗತ್ಯವಿದ್ದರೆ ಇವರೇ ಎಲ್ಲ ವ್ಯವಸ್ಥೆಯನ್ನೂ ಮಾಡುತ್ತಾರೆ. ಜೀಪ್ ಸಫಾರಿ, ಪಕ್ಷಿಗಳ ವೀಕ್ಷಣೆ, ಕುಮಾರಧಾರ ನದಿಯಲ್ಲಿ ರಾಫ್ಟಿಂಗ್, ಕಾಫಿ ತೋಟದ ಟೂರ್, ಹೀಗೆ ಅನೇಕ ಚಟುವಟಿಕೆಗಳ ನಡುವೆ ಸಮಯ ಸರಿದದ್ದೇ ಗೊತ್ತಾಗುವುದಿಲ್ಲ.

ಹಾಯಾಗಿ ಕತೆ ಪುಸ್ತಕ ಓದುತ್ತಾ ನಿಮ್ಮ ರೂಮಿನಲ್ಲಿ, ಹಾಲ್, ಟೆರೇಸ್ ಅಥವಾ ಸುತ್ತಲಿನ ಜಾಗದಲ್ಲಿ ಆರಾಮಾಗಿ ಇರಬೇಕೆಂದರೆ ಅದಕ್ಕೂ ಸೈ ಎನ್ನುತ್ತಾರೆ. ಹಸಿರು ಕಾಡಿನ ಮಧ್ಯೆದಲ್ಲಿರುವ ಕಾಫಿ ತೋಟದಲ್ಲಿ ಸುತ್ತಾಡಿ, ಕೊಂಚ ದೂರದಲ್ಲಿ ಹರಿಯುವ ಝರಿಗೆ ಹೋಗಿಬರಬಹುದು.
ತಂಪಾದ ಗಾಳಿ ಮತ್ತು ನಿಶ್ಶಬ್ದ ವಾತಾವರಣ – ಇವೆಲ್ಲವೂ ‘ಡ್ರೀಮ್ ಏಕರ್ಸ್’ನ ಆತ್ಮ. ಇದು ಕೇವಲ ವಾಸದ ಸ್ಥಳವಲ್ಲ; ಇದು ಪ್ರಕೃತಿಯ ಜತೆ ಬದುಕುವ ಅನುಭವ. ಕುಟುಂಬಗಳು, ಸ್ನೇಹಿತರ ಗುಂಪುಗಳು ಇಲ್ಲಿ ನೆಮ್ಮದಿಯಿಂದ ಕಾಲ ಕಳೆಯಬಹುದು. ವಿಶಾಲ ಕೊಠಡಿಗಳು, ಸ್ವಚ್ಛ ಪರಿಸರ, ಮನೆಯಂತೆಯೇ ಅನ್ನಿಸುವ ಆತಿಥ್ಯ ಈ ಹೋಂ ಸ್ಟೇಯ ವಿಶೇಷ.
ಇಲ್ಲಿ ಅತಿಥಿಗಳಿಗೆ ಸ್ಥಳೀಯ ಪದಾರ್ಥಗಳಿಂದ ತಯಾರಿಸಲಾದ ಮನೆ ಊಟ, ತೋಟದೊಳಗಿನ ನಡಿಗೆ, ಸಂಜೆ ಬೆಂಕಿಯ ಸುತ್ತ ಮಾತುಕತೆ, ಮಕ್ಕಳಿಗೆ ತೆರೆಯಾದ ಆಟದ ಜಾಗಗಳೂ ಇವೆ. ಮೊಬೈಲ್, ಲ್ಯಾಪ್‌ಟಾಪ್‌ಗಳಿಂದ ದೂರ ಸರಿದು, ನಿಜವಾದ ಜೀವನವನ್ನು ಅನುಭವಿಸಲು ಇದು ಸೂಕ್ತ ಸ್ಥಳ. ಹಾಗೆಂದು ವೈಫೈ ಸೌಲಭ್ಯವೂ ಇದೆ.
ಮುಖ್ಯವಾಗಿ, ಈ ಹೋಂ ಸ್ಟೇ ಸುಸ್ಥಿರ ಜೀವನಶೈಲಿಯನ್ನು ಪ್ರೋತ್ಸಾಹಿಸುತ್ತದೆ. ನೀರಿನ ಸಂರಕ್ಷಣೆ, ಪ್ರಕೃತಿಗೆ ಹಾನಿಯಿಲ್ಲದ ನಿರ್ವಹಣೆ, ಸ್ಥಳೀಯ ಜನರಿಗೆ ಉದ್ಯೋಗ – ಇವೆಲ್ಲವೂ ಇದರ ತತ್ವಗಳು. ಲಾಭಕ್ಕಿಂತ ಜೀವನಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಗಮನಾರ್ಹ. ನಗರ ಜೀವನ ಬೇಸರವೆನಿಸಿದಾಗ ಹೀಗೊಂದು ಪ್ರಯಾಣ ಮಾಡಿ ಇಲ್ಲಿಗೆ ಬಂದು ಉಳಿದು ನೋಡಿ, ಸಂದೇಹ ಬೇಕಿಲ್ಲ, ನಿಮಗೂ ಈ ವಿಶೇಷ ಅನುಭವ ಸಿಗಲಿದೆ.
ಡ್ರೀಮ್ ಏಕರ್ಸ್ - ಕೊಡಗು , ಇಲ್ಲಿ ನಿಮಗೆ ಪ್ರಕೃತಿಯ ಮಾಂತ್ರಿಕ ಅಪ್ಪುಗೆಯಲ್ಲಿ ತನು-ಮನಗಳಿಗೆ ಹೊಸ ಚೈತನ್ಯದ ಸ್ಪರ್ಶ! ನೀವು ಸಾಹಸದ ಹಂಬಲದಲ್ಲೇ ಇರಲಿ ಅಥವಾ ಏಕಾಂತದ ಹುಡುಕಾಟದಲ್ಲೇ ಇರಲಿ, ಇಲ್ಲಿನ ನಯನಮನೋಹರ ಪರಿಸರವು ಶಾಂತಿ, ಸೌಂದರ್ಯ ಮತ್ತು ಸೃಜನಶೀಲತೆಯ ಸಮ್ಮಿಲನದೊಂದಿಗೆ ಒಂದು ಅವಿಸ್ಮರಣೀಯ ಪಯಣದ ಭರವಸೆ ನೀಡುತ್ತದೆ.
ಅಭಿರಾಮ್ ಕೂಡುವಳ್ಳಿ, ಡ್ರೀಮ್ ಏಕರ್ಸ್ ಹೋಂ ಸ್ಟೇ ಮಾಲೀಕ
ವಿಳಾಸ:
ಗರ್ವಾಲೆ ರಸ್ತೆ, ಸೋಮವಾರಪೇಟೆ, ಕೊಡಗು 571236
ಸಂಪರ್ಕ ವಾಣಿ: 9900466335