ಹೊಟ್ಟೆ ತುಂಬ್ಸಿ ಸಾಯಿಸೋ ಸೀರಿಯಲ್ ಕಿಲ್ಲರ್ ಕೆಫೆ
ಅಮೆರಿಕ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ಯುರೋಪ್‌ನ ವಿವಿಧ ದೇಶಗಳ ಸುಮಾರು 100ಕ್ಕೂ ಹೆಚ್ಚು ರೀತಿಯ ಸೀರಿಯಲ್‌ಗಳು ಇಲ್ಲಿ ಲಭ್ಯವಿತ್ತು. ಸಾಮಾನ್ಯ ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗದ ಲಕ್ಕಿ ಚಾರ್ಮ್ಸ್, ಫ್ರೂಟಿ ಪೆಬಲ್ಸ್, ಓರಿಯೊ ಓಸ್‌ನಂಥ ಅಪರೂಪದ ಬ್ರ್ಯಾಂಡ್‌ಗಳನ್ನು ಸವಿಯಲು ಪ್ರವಾಸಿಗರು ಮತ್ತು ಸೀರಿಯಲ್ ಪ್ರಿಯರು ಇಲ್ಲಿಗೆ ತಂಡೋಪತಂಡವಾಗಿ ಬರುತ್ತಿದ್ದರು.
ಈ ಕೆಫೆ ಹೆಸರು ಕೇಳಿ ಬೆಚ್ಚಿಬಿದ್ದು ಹೋಗುವುದೇ ಬೇಡ ಎಂಬ ಭಾವನೆ ಬಂದರೆ ಆಶ್ಚರ್ಯವೇನಿಲ್ಲ. ಈ ಕೆಫೆ ಹೆಸರೇ ಹಾಗಿದೆ. ʼಸೀರಿಯಲ್ ಕಿಲ್ಲರ್ ಕೆಫೆʼ. ಆದರೆ ಹೆದರುವ ಅವಶ್ಯಕತೆ ಅಲ್ಲ. ಇದು ಆ ಸೀರಿಯಲ್ ಕಿಲ್ಲರ್ ಅಲ್ಲ. ಇದು ಈ ಸೀರಿಯಲ್ ಕಿಲ್ಲರ್ ಕೂಡ ಅಲ್ಲ. ಇದು ಬ್ರೇಕ್‌ಫಾಸ್ಟ್ ಸೀರಿಯಲ್. ಈ ಇಡೀ ಕೆಫೆಯಲ್ಲಿ ಬೆಳಗ್ಗೆ ಉಪಾಹಾರಕ್ಕೆ ತಿನ್ನುವ ಸೀರಿಯಲ್‌ಗಳೇ ಹೈಲೈಟ್. ಯುನೈಟೆಡ್ ಕಿಂಗ್‌ಡಮ್‌ನ ಅತ್ಯಂತ ವಿಶಿಷ್ಟ ಮತ್ತು ಜನಪ್ರಿಯ ಕೆಫೆಗಳಲ್ಲಿ ಒಂದಾದ ಇದು, ಬೆಳಗಿನ ಉಪಾಹಾರವನ್ನು ಒಂದು ಅದ್ಭುತ ಅನುಭವವನ್ನಾಗಿಸಿದೆ. 2014ರಲ್ಲಿ ಅವಳಿ ಸಹೋದರರಾದ ಅಲನ್ ಮತ್ತು ಗ್ಯಾರಿ ಕೀರಿ ಇದನ್ನು ಪ್ರಾರಂಭಿಸಿದರು. ಲಂಡನ್‌ನ ಪ್ರಸಿದ್ಧ 'ಬ್ರಿಕ್ ಲೇನ್'ನಲ್ಲಿ ಆರಂಭವಾದ ಈ ಕೆಫೆ, ತನ್ನ ಕ್ರಿಯೇಟಿವ್ ಕಾನ್ಸೆಪ್ಟ್, ರೆಟ್ರೋ ವಿನ್ಯಾಸ ಮತ್ತು ಪ್ರಪಂಚದಾದ್ಯಂತದ ಸೀರಿಯಲ್‌ಗಳ ಸಂಗ್ರಹದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಬಾಲ್ಯದ ಸುಂದರ ನೆನಪುಗಳಿಗೆ ಜೀವ ತುಂಬುವ ಟೈಮ್ ಮಷಿನ್ ಇದಾಗಬೇಕು ಎನ್ನುವ ಉದ್ದೇಶದಿಂದ ಶುರುವಾದ ಕೆಫೆಯಿದು.
ಇದನ್ನೂ ಓದಿ: ಸಿಲಾ ಯುಗದ ಗಾರ್ಡನ್ ಕೆಫೆಯಲ್ಲಿ
ಬಾಲ್ಯಕ್ಕೆ ಕರೆದೊಯ್ಯುವ ವಾತಾವರಣ
ಈ ಕೆಫೆಯ ವಿಶೇಷತೆಯೇ ಅಲ್ಲಿಗೆ ಬರುವ ಜನರ ಜತೆ ಅದು ಬೆಳೆಸಿಕೊಳ್ಳುವ ಭಾವನಾತ್ಮಕ ಸಂಬಂಧ. ಒಳಗಡೆ ಕಾಲಿಡುತ್ತಿದ್ದಂತೆ ನೀವು 1980 ಮತ್ತು 90ರ ದಶಕಕ್ಕೆ ಹೋದಂತೆ ಭಾಸವಾಗುತ್ತದೆ. ಗೋಡೆಗಳ ಮೇಲೆ ಹಳೆಯ ಸೀರಿಯಲ್ ಡಬ್ಬಗಳು, ವಿಂಟೇಜ್ ಆಟಿಕೆಗಳು, ಹಳೆಯ ಕಾಲದ ವಿಎಚ್‌ಎಸ್ ಟೇಪ್‌ಗಳು, ನಿಯಾನ್ ಲೈಟ್‌ಗಳು ಮತ್ತು ಕಾರ್ಟೂನ್ ಚಿತ್ರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅಲ್ಲಿನ ಆಸನಗಳು ಹೇಗಿರುತ್ತಿದ್ದವು ಗೊತ್ತಾ? ಅಕ್ಷರಶಃ ನಮ್ಮ ಬಾಲ್ಯದ ಬೆಡ್‌ರೂಮ್‌ಗಳಂತೆಯೇ ಇರುತ್ತಿದ್ದವು! ಶನಿವಾರ ಬೆಳಗ್ಗೆ ಎದ್ದ ಕೂಡಲೇ ಟಿವಿ ಮುಂದೆ ಕುಳಿತು ಕಾರ್ಟೂನ್ ನೋಡುತ್ತಾ ಸೀರಿಯಲ್ ತಿನ್ನುತ್ತಿದ್ದ ಆ ಖುಷಿಯನ್ನು ಈ ಕೆಫೆ ಮರುಸೃಷ್ಟಿಸಿತು. ಈ ಕಾರಣಕ್ಕಾಗಿಯೇ ಜನರು ಇಲ್ಲಿ ಫೊಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದರು.

ಸೀರಿಯಲ್ ಪ್ರೇಮಿಗಳಿಗೆ ಇದು ಸ್ವರ್ಗ!
ಇಲ್ಲಿನ ಅತಿ ದೊಡ್ಡ ಆಕರ್ಷಣೆ ಅಂದರೆ ಅದು 'ಸೀರಿಯಲ್ ಕಲೆಕ್ಷನ್'. ಅಮೆರಿಕ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ಯುರೋಪ್‌ನ ವಿವಿಧ ದೇಶಗಳ ಸುಮಾರು 100ಕ್ಕೂ ಹೆಚ್ಚು ರೀತಿಯ ಸೀರಿಯಲ್‌ಗಳು ಇಲ್ಲಿ ಲಭ್ಯವಿತ್ತು. ಸಾಮಾನ್ಯ ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗದ ಲಕ್ಕಿ ಚಾರ್ಮ್ಸ್, ಫ್ರೂಟಿ ಪೆಬಲ್ಸ್, ಓರಿಯೊ ಓಸ್‌ನಂಥ ಅಪರೂಪದ ಬ್ರ್ಯಾಂಡ್‌ಗಳನ್ನು ಸವಿಯಲು ಪ್ರವಾಸಿಗರು ಮತ್ತು ಸೀರಿಯಲ್ ಪ್ರಿಯರು ಇಲ್ಲಿಗೆ ತಂಡೋಪತಂಡವಾಗಿ ಬರುತ್ತಿದ್ದರು.
ನಿಮ್ಮ ಬೌಲ್, ನಿಮ್ಮ ಇಷ್ಟ!
ಇಲ್ಲಿ ನೀವು ನಿಮ್ಮ ತಿಂಡಿಯನ್ನು ನಿಮಗೆ ಬೇಕಾದಂತೆ ಕಸ್ಟಮೈಸ್ ಮಾಡಿಕೊಳ್ಳಬಹುದಿತ್ತು. ಬೇರೆ ಬೇರೆ ಸೀರಿಯಲ್‌ಗಳನ್ನು ಮಿಕ್ಸ್ ಮಾಡುವುದು, ವೆನಿಲ್ಲಾ ಅಥವಾ ಚಾಕೊಲೆಟ್ ಫ್ಲೇವರ್ ಹಾಲು ಆರಿಸುವುದು ಮತ್ತು ಅದರ ಮೇಲೆ ಮಾರ್ಷ್‌ಮ್ಯಾಲೋಗಳು, ಕ್ಯಾಂಡಿಗಳು, ಸಿರಪ್‌ಗಳು ಅಥವಾ ಐಸ್‌ಕ್ರೀಮ್‌ಗಳನ್ನು ಹಾಕಿಸಿಕೊಳ್ಳುವ ಸ್ವಾತಂತ್ರ್ಯವಿದೆ.
ಇಲ್ಲಿನ ಕೆಲವು ಫೇಮಸ್ ಐಟಂಗಳೆಂದರೆ:
- ಯುನಿಕಾರ್ನ್ ಪೂಪ್: ಕಲರ್‌ಫುಲ್ ಸೀರಿಯಲ್, ಮಳೆಬಿಲ್ಲು ಬಣ್ಣದ ಟಾಪಿಂಗ್ಸ್ ಮತ್ತು ಸಿಹಿಯಾದ ಕ್ಯಾಂಡಿಗಳ ಮಿಶ್ರಣ.
- ಚಾಕೊ-ಪೋಟೋಮಸ್: ಚಾಕೊಲೇಟ್ ಪ್ರಿಯರಿಗಾಗಿಯೇ ಮಾಡಿದ ಕೋಕೋ ಪಾಪ್ಸ್ ಮತ್ತು ಕ್ರೇವ್ ಸೀರಿಯಲ್‌ಗಳ ಭರ್ಜರಿ ಕಾಂಬಿನೇಷನ್.
ಈ ತಿಂಡಿಗಳು ನೋಡುವುದಕ್ಕೆ ಎಷ್ಟು ಚೆನ್ನಾಗಿರುತ್ತಿದ್ದವು ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಇವು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದವು.
ಇನ್ನೂ ಇದೆ!
ಕಾಲಕ್ರಮೇಣ ಈ ಕೆಫೆ ತನ್ನ ಮೆನುವನ್ನು ವಿಸ್ತರಿಸಿತು. ಸೀರಿಯಲ್ ಜತೆಗೆ ಕಾಫಿ, ಮಿಲ್ಕ್‌ಶೇಕ್‌ಗಳು, ಡೆಸರ್ಟ್‌ಗಳು ಮತ್ತು ಗ gourmet ಬ್ರೇಕ್‌ಫಾಸ್ಟ್ ಆಯ್ಕೆಗಳನ್ನು ನೀಡಲು ಪ್ರಾರಂಭಿಸಿತು. ಬ್ರ್ಯಾಂಡ್ ಬೆಳೆದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಶಾಖೆಗಳನ್ನು ತೆರೆದು, ಸಂಜೆ ವೇಳೆಗೆ ಕಾಕ್ಟೈಲ್ ಮತ್ತು ಡಿನ್ನರ್ ಅನುಭವವನ್ನೂ ನೀಡಲಾರಂಭಿಸಿತು. ಆದರೆ ಏನೇ ಆದರೂ 'ಸೀರಿಯಲ್' ಮಾತ್ರ ಈ ಕೆಫೆಯ ಜೀವಾಳವಾಗಿ ಉಳಿಯಿತು.

ಇನ್‌ಸ್ಟಾಗ್ರಾಮ್ ಪ್ರಿಯರ ಫೇವರಿಟ್!
ಸೋಶಿಯಲ್ ಮೀಡಿಯಾ ಕ್ರೇಜ್ ಶುರುವಾಗುವ ಮೊದಲೇ ʼಇನ್‌ಸ್ಟಾಗ್ರಾಮಬಲ್ʼ ಕೆಫೆ ಹೇಗಿರಬೇಕು ಎಂಬುದಕ್ಕೆ ಇದು ಮಾದರಿಯಾಗಿತ್ತು. ಪ್ರತಿಯೊಂದು ಮೂಲೆಯೂ ಫೊಟೋ ತೆಗೆಯಲು ಸೂಕ್ತವಾಗಿತ್ತು. ಜನರು ಇಲ್ಲಿನ ಅನುಭವವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರಿಂದ ಈ ಕೆಫೆಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಸಿಕ್ಕಿತು. ಲಂಡನ್‌ನಂಥ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇದು ವಿಭಿನ್ನವಾಗಿ ಗುರುತಿಸಿಕೊಳ್ಳಲು ಇಲ್ಲಿನ ವಿನ್ಯಾಸವೇ ಕಾರಣ. ಸೀರಿಯಲ್ ಕಿಲ್ಲರ್ ಕೆಫೆ ಆಧುನಿಕ ಡೈನಿಂಗ್ ಸಂಸ್ಕೃತಿಯಲ್ಲಿ ಒಂದು ದೊಡ್ಡ ಬದಲಾವಣೆ ತಂದಿತು. ಗ್ರಾಹಕರು ಬರೀ ಹೊಟ್ಟೆ ತುಂಬಿಸಿಕೊಳ್ಳಲು ಹೋಟೆಲ್‌ಗೆ ಹೋಗುವುದಿಲ್ಲ, ಬದಲಾಗಿ ಒಂದು ನೆನಪಿಡುವಂತಹ ಅನುಭವಕ್ಕಾಗಿ ಹೋಗುತ್ತಾರೆ ಎಂಬುದನ್ನು ಇದು ಸಾಬೀತುಪಡಿಸಿತು. ಮನೆಯಲ್ಲಿ ದಿನಾ ತಿನ್ನುವ ಸಾಮಾನ್ಯ ಸೀರಿಯಲ್ ಅನ್ನು ಒಂದು ಮನರಂಜನೆಯಾಗಿ ಬದಲಿಸಿದ ಕ್ರೆಡಿಟ್ ಈ ಸಹೋದರರಿಗೆ ಸಲ್ಲಬೇಕು.
ಮುಗಿಯದ ಪಯಣ
ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಲಂಡನ್‌ನ ಮೂಲ ಕೆಫೆಗಳು ಮುಚ್ಚಲ್ಪಟ್ಟರೂ, ಈ ಬ್ರ್ಯಾಂಡ್‌ನ ಪ್ರಭಾವ ಮಾತ್ರ ಹಾಗೆಯೇ ಇದೆ. ಇದರ ಅಂತಾರಾಷ್ಟ್ರೀಯ ಶಾಖೆಗಳು ಇಂದಿಗೂ ಸಕ್ರಿಯವಾಗಿವೆ. ಸೀರಿಯಲ್ ಕಿಲ್ಲರ್ ಕೆಫೆಯ ಅಧಿಕೃತ ವೆಬ್‌ಸೈಟ್ ಮೂಲಕ ಈ ಬ್ರ್ಯಾಂಡ್ ಇಂದಿಗೂ ತನ್ನ ಹೊಸತನವನ್ನು ಪ್ರದರ್ಶಿಸುತ್ತಿದೆ. ಸೀರಿಯಲ್ ಕಿಲ್ಲರ್ ಕೆಫೆ ಬಾಲ್ಯದ ನೆನಪುಗಳ, ಸೃಜನಶೀಲತೆಯ ಮತ್ತು ಅಪ್ಪಟ ಮೋಜಿನ ಸಂಕೇತವಾಗಿತ್ತು. ಬ್ರಿಟಿಷ್ ಡೈನಿಂಗ್ ಇತಿಹಾಸದಲ್ಲಿ ಇದೊಂದು ಮರೆಯಲಾಗದ ಅಧ್ಯಾಯ!