Thursday, April 16, 2026
Thursday, April 16, 2026

1959ರಲ್ಲಿ ಶುರುವಾದರೂ ಇದು ʻನ್ಯೂ ಮಾಡರ್ನ್‌ ಹೊಟೇಲ್‌ʼ

ಡಿವಿಜಿ, ವಿ ಸೀತಾರಾಮಯ್ಯ, ಅಂಬಳೆ ರಾಮಕೃಷ್ಣ ಶಾಸ್ತ್ರಿಯವರಂಥ ಬರಹಗಾರರು, ಮಧುರೈ ಮಣಿ ಅಯ್ಯರ್‌ರಂಥ ಸಂಗೀತಗಾರರು, ಗಿರೀಶ್ ಕಾಸರವಳ್ಳಿ ಮತ್ತು ಬಿವಿ ಕಾಮತ್ ಅವರಂಥ ಸಿನಿಮಾ ಮತ್ತು ರಂಗಕರ್ಮಿಗಳು ಆಗಾಗ್ಗೆ ಈ ಹೊಟೇಲ್‌ನಲ್ಲಿ ಇರುತ್ತಿದ್ದರು. ಇಷ್ಟು ಜನರು ಸೇರುವಾಗ ಚರ್ಚೆ, ಸಂಗೀತ, ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳೂ ಇಲ್ಲಿ ಆಗುತ್ತಿದ್ದವು ಎಂದು ಸಪರೇಟ್‌ ಆಗಿ ಹೇಳುವ ಅವಶ್ಯಕತೆಯೇ ಇಲ್ಲ ಅಲ್ವಾ?

ಅರವತ್ತು ವರ್ಷ ದಾಟಿದವರು ಅಂದ ಕೂಡಲೇ ಹಿರಿತಲೆ, ಅನುಭವಿ ಅನ್ನೋದು ಕಾಮನ್‌. ಆದರೆ 1959ರಲ್ಲೇ ಹುಟ್ಟಿಕೊಂಡು, ಬರೋಬ್ಬರಿ 67 ವರ್ಷ ತುಂಬಿರುವ ಈ ಅನುಭವಿ ಐತಿಹಾಸಿಕ ಹೊಟೇಲ್‌ನ ಹೆಸರು ಮಾತ್ರ ʻನ್ಯೂ ಮಾಡರ್ನ್‌ ಹೊಟೇಲ್‌ʼ!

ಓಲ್ಡ್‌ ಮೆಮೋರೀಸ್‌

ನ್ಯೂ ಮಾಡರ್ನ್‌ ಹೊಟೇಲ್‌ 1959ರಲ್ಲಿ ಸಾಹಿತಿ ಹಾಗೂ ಉದ್ಯಮಿ ಲಕ್ಷ್ಮೀನಾರಾಯಣ ರಾವ್ ಅವರಿಂದ ಆರಂಭವಾಯಿತು. ಕಾಲಾನಂತರದಲ್ಲಿ ಅಲ್ಲಿ ಅಂದು ಕ್ಯಾಷಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ನರಸಿಂಹ ಅಡಿಗರು ಈ ಹೊಟೇಲ್‌ ಅನ್ನು ಖರೀದಿಸಿದರು. ಈ ಸಮಯದಲ್ಲಿ ಇಲ್ಲಿದ್ದ ವಾತಾವರಣ ಹೇಗಿತ್ತು ಗೊತ್ತಾ? ರಾಜಕೀಯ ಮತ್ತು ರಂಗಕಲೆಗಳ ತವರಾಗಿತ್ತು. ಡಿವಿಜಿ, ವಿ ಸೀತಾರಾಮಯ್ಯ, ಅಂಬಳೆ ರಾಮಕೃಷ್ಣ ಶಾಸ್ತ್ರಿಯವರಂಥ ಬರಹಗಾರರು, ಮಧುರೈ ಮಣಿ ಅಯ್ಯರ್‌ರಂಥ ಸಂಗೀತಗಾರರು, ಗಿರೀಶ್ ಕಾಸರವಳ್ಳಿ ಮತ್ತು ಬಿವಿ ಕಾಮತ್ ಅವರಂಥ ಸಿನಿಮಾ ಮತ್ತು ರಂಗಕರ್ಮಿಗಳು ಆಗಾಗ್ಗೆ ಈ ಹೊಟೇಲ್‌ನಲ್ಲಿ ಇರುತ್ತಿದ್ದರು. ಇಷ್ಟು ಜನರು ಸೇರುವಾಗ ಚರ್ಚೆ, ಸಂಗೀತ, ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳೂ ಇಲ್ಲಿ ಆಗುತ್ತಿದ್ದವು ಎಂದು ಸಪರೇಟ್‌ ಆಗಿ ಹೇಳುವ ಅವಶ್ಯಕತೆಯೇ ಇಲ್ಲ ಅಲ್ವಾ?

ಇದನ್ನೂ ಓದಿ: ವಿದ್ಯಾರ್ಥಿ ಭವನ, ಇಲ್ಲಿ ಪ್ರತಿ ದಿನವೂ ಅಲುಮ್ನಿಯೇ!

ಈಗಲೂ ಇಲ್ಲಿಗೆ ಅವಕಾಶ ಸಿಕ್ಕಾಗಲೆಲ್ಲ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರು ಸ್ಕ್ರಿಪ್ಟ್ ಬರೆಯಲು ಮತ್ತಿತರ ಕೆಲಸಗಳಿಗೆ ಒಂದೆರಡು ತಿಂಗಳುಗಳ ಕಾಲ ವಾಸ್ತವ್ಯ ಹೂಡುತ್ತಾರಂತೆ. ಹೀಗೆ ಯಾವುದೇ ಸಮಯದಲ್ಲಿ ಉಳಿದುಕೊಳ್ಳಲು ಅವರು ಇಲ್ಲಿಗೆ ಬಂದರೂ ಬಳಸುವುದು ಮಾತ್ರ ಅವರ ನೆಚ್ಚಿನ ಒಂದೇ ಕೊಠಡಿಯನ್ನು. ಇನ್ನೂ ರಂಗಾಯಣದ ಮಾಜಿ ನಿರ್ದೇಶಕ ಮತ್ತು ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರೂ ಆಗಾಗ್ಗೆ ಈ ಹೊಟೇಲ್‌ನಲ್ಲಿ ಉಳಿದುಕೊಳ್ಳುತ್ತಾರೆ.

New Project (17)

ಸಂಗೀತ-ಸಾಹಿತ್ಯ-ಸಿನಿಮಾ-ರಾಜಕೀಯ ಕ್ಷೇತ್ರದ ದಿಗ್ಗಜರು ಇಲ್ಲಿಗೆ ಭೇಟಿ ನಿಡಿದ್ದಾರೆ ಎಂದಾಗ ಮೊದಲಿಗೆ ನಮ್ಮ ಆಲೋಚನೆ ಹೊರಳುವುದು ಇಲ್ಲಿನ ಆಂಬಿಯನ್ಸ್‌ ಕುರಿತು. ಇಲ್ಲಿ ಕವಿತ್ವಕ್ಕೆ ಇಂಧನ ತುಂಬುವಷ್ಟು ಸುಂದರ ಆಂಬಿಯನ್ಸ್‌ ಇದೆ. ಅಲ್ಲಿ ಮಹಾನ್‌ ಸಾಹಿತಿಗಳು, ಸಂಗೀತಗಾರರು ಸೇರಿ ಚರ್ಚೆಗಳನ್ನು ನಡೆಸಿದ್ದಾರೆ, ಹಲವಾರು ಸಿನಿಮಾಗಳಿಗೆ ಅಲ್ಲಿಂದಲೇ ಸ್ಕ್ರಿಪ್ಟ್‌ ಬರೆದಿದ್ದಾರೆ, ವೀಣೆ ನುಡಿಸಿದ್ದಾರೆ, ಹಾಡೂ ಹಾಡಿದ್ದಾರೆ. ಅಲ್ಲೇ ಕೆಲವು ಧಾರಾವಾಹಿ-ಸಿನಿಮಾಗಳೂ ಶೂಟ್‌ ಆಗಿವೆ. ಇಷ್ಟು ತಿಳಿದು ನೀವು ಅಲ್ಲಿಗೆ ಹೋದರೆ, ಹಿಂದೆ ಆ ಮಹನೀಯರು ಊಟಕ್ಕೆ ಕುಳಿತಿದ್ದ ಕುರ್ಚಿ, ಟೇಬಲ್‌ಗಳಲ್ಲೇ ನೀವೂ ಕೂಡುತ್ತೀರಿ, ಅಲ್ಲಿನ ಪೀಠೋಪಕರಣಗಳು, ಒಳಾಂಗಣ, ಬಿಸಿಬಿಸಿ ಆಹಾರ ಅಲ್ಲಿ ನಿಮ್ಮೊಳಗಿನ ಕವಿಯನ್ನೂ ಹೊರಗೆಳೆಯುತ್ತದೆ. ಏನಿಲ್ಲದಿದ್ದರೂ ಒಂದು ಅದ್ಭುತ ಬರಹಕ್ಕಂತೂ ವಿಷಯಗಳನ್ನು ನೀಡುತ್ತವೆ.

ಒಂದು ಹೊಟೇಲ್‌ಗೆ ಇದಕ್ಕಿಂತ ದೊಡ್ಡ ವಿಶೇಷತೆ ಬೇಕೇ? ಹೊಟೇಲ್‌ನ ಹೊರಗೆ ವಾಹನ ನಿಲುಗಡೆಗೆ ಸ್ಥಳಾವಕಾಶ, ಒಳಗೆ ಕೈಗೆಟುಕುವ ದರಗಳಲ್ಲಿ ವೆರೈಟಿ ಅಡುಗೆ, ಬೆಂಗಳೂರಿನಂಥ ಬ್ಯುಸಿ ಸಿಟಿಯಲ್ಲಿ ಇಷ್ಟು ಅವಕಾಶ ಇರುವುದು ಕೆಲವೇ ಹೊಟೇಲ್‌ಗಳಲ್ಲಿ. ಅವುಗಳಲ್ಲಿ ಇದೂ ಒಂದು. ಕೆಲವರು ಹೊಟೇಲ್‌ನ ಇತಿಹಾಸದಿಂದ ಇನ್ನೂ ಕೆಲವರು ಆಹಾರದ ರುಚಿಗೆ ಮನಸೋತು ಮತ್ತೂ ಕೆಲವರು ಹೆಸರು ಕೇಳಿಯೇ ಬರುತ್ತಾರೆ.

New Project (19)

ಮೆನು ಏನು?

ಈ ಹೊಟೇಲ್‌ನಲ್ಲಿ ಉತ್ತರ ಕರ್ನಾಟಕ ಸ್ಪೆಷಲ್‌ ತಾಲಿ, ಬಾದಾಮಿ ಕೋಲ್ಡ್‌, ಬಾದಾಮಿ ಹಲ್ವಾ, ಚಿರೋಟಿ ಮಿಲ್ಕ್‌, ಮೈಸೂರು ಪಾಕ್‌, ಗೀ ಮಸಾಲಾ ದೋಸೆ, ಮೊಸರು ವಡೆ, ಪುರಿ-ಚಟ್ನಿ, ಇಡ್ಲಿ-ಚಟ್ನಿ, ಬ್ರೆಡ್‌ ರೋಸ್ಟ್‌ ಸೇರಿ ಸಾಕಷ್ಟು ಆಯ್ಕೆಗಳಿವೆ. ನಮಗೆ ಅಲ್ಲಿ ಖುಷಿ ನೀಡಿದ್ದು ಮಾತ್ರ ಅಲ್ಲಿದ್ದ ಕನ್ನಡದ ಮೆನು ಬೋರ್ಡ್‌. ಹಾಂ, ಇಲ್ಲಿ ನೀವು ಸೆಲ್ಫ್‌ ಸರ್ವಿಸ್‌ ಸಹ ಮಾಡಿಕೊಳ್ಳಬಹುದು. ಇಲ್ಲಿ ಇಡ್ಲಿಗಿಂತ ಸಾಂಬಾರ್‌ ತುಂಬಾ ಟೇಸ್ಟಿ ಅನ್ನೋದು ಇಡ್ಲಿ ಪ್ರಿಯರ ಮಾತು.

ದಾರಿ ಹೇಗೆ?

ವಿಧಾನ ಸೌಧಕ್ಕೆ 3.5 ಕಿಮೀ, ಹೈ ಕೋರ್ಟ್‌ ಮತ್ತು ಕಬ್ಬನ್‌ ಪಾರ್ಕ್‌ಗೆ 3 ಕಿಮೀ, ಲಾಲ್‌ಬಾಗ್‌ಗೆ ಕೇವಲ 600 ಮೀ ದೂರದಲ್ಲೇ ಈ ಹೊಟೇಲ್‌ ಇದೆ. ಈ ಎಲ್ಲಾ ಸ್ಥಳಗಳಿಗೂ ಮೆಟ್ರೋ ಸರ್ವಿಸ್‌ ಇದೆ. ಅಲ್ಲಿಂದ ನಡಿಗೆಯಲ್ಲೇ ಈ ಹೊಟೇಲ್‌ ತಲುಪಬಹುದು.

ಸಂಪರ್ಕ:
#143, ಡಾ.ಎ.ಎನ್. ಕೃಷ್ಣರಾವ್ ರಸ್ತೆ,

ಮಿನರ್ವಾ ವೃತ್ತದ ಹತ್ತಿರ, ವಿಶ್ವೇಶ್ವರಪುರಂ,

ಬೆಂಗಳೂರು - 560 004

ದೂರವಾಣಿ: +91 99720 21048 / 080 2661 2625
ಇ-ಮೇಲ್:
enquiry@newmodernhotel.com

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..