• ಜಯಂತ್‌ ಸಜ್ಜನ್‌

ಬ್ಯುಸಿ ಸಿಟಿ ಬೆಂಗಳೂರು ಎಂದರೆ ದುಬಾರಿ ದುನಿಯಾ, ದಾಂಗುಡಿ ಜೀವನ, ಟ್ರಾಫಿಕ್ ಮತ್ತು ಕೆಲಸದ ಒತ್ತಡ. ಇದು ಎಲ್ಲರ ಸಹಜ ಕಲ್ಪನೆ. ಬಾಗಶಃ ಸರಿಯೂ ಹೌದು. ಹಾಗಾಗಿ ಇಲ್ಲಿನ ಜನ ವಾರಾಂತ್ಯಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಔಟಿಂಗ್‌ ಹೋಗುವುದು ಹೆಚ್ಚು. ಇದು ನಾನು ಹೊಸತರಲ್ಲಿ ಬೆಂಗಳೂರಿಗೆ ಬಂದಾಗ ನನ್ನ ಗೆಳೆಯರು ನನಗೆ ಹೇಳಿದ ಮಾತು. ಅವರೂ ಒಂದು ಔಟಿಂಗ್‌ ತಯಾರಿಯಲ್ಲಿದ್ದರು. ನಾನೂ ಆ ಟೀಮ್‌ನಲ್ಲಿ ಸೇರಿಕೊಂಡೆ.

ಜಾಲಿ ಬೈಕ್‌ ರೈಡ್‌ನೊಂದಿಗೆ ನಾವು ಹೋಗಿದ್ದು ʻಅವರ್ ನೇಟಿವ್ ವಿಲೇಜ್ ರೆಸಾರ್ಟ್ʼಗೆ. ಇದು ಬೆಂಗಳೂರಿನ ಸಮೀಪ ಹೆಸರಘಟ್ಟದಲ್ಲಿದೆ. ಎಂಜಿ ರೋಡ್‌ನಿಂದ ಅಬ್ಬಬ್ಬಾ ಎಂದರೆ ಎರಡು ಗಂಟೆ ಜರ್ನಿ. ಬೆಂಗಳೂರಿನಿಂದ ಇಲ್ಲಿಗೆ ಬರುವ ಹೊತ್ತಿಗೆ ಬ್ಯುಸಿ ಮತ್ತು ಬ್ಯೂಟಿ ನಡುವಿನ ಅಂತರ ಗೊತ್ತಾಗುತ್ತದೆ. ಈ ರೆಸಾರ್ಟ್‌ ಇರುವ ತಾಣ ಅಷ್ಟು ಪ್ರಶಾಂತ ಮತ್ತು ಸ್ವಚ್ಛಸುಂದರವಾಗಿದೆ. ಮೇಲಾಗಿ ಇದು ಪರಿಸರಸ್ನೇಹಿ ರೆಸಾರ್ಟ್. ಪಕ್ಕಾ ಗ್ರಾಮೀಣ ಸೊಗಡು. ಸುತ್ತಲಿನ ಪ್ರಕೃತಿಯೂ ಹಳ್ಳಿಯ ಸೊಗಡನ್ನೇ ಮೈತಳೆದಿದೆ.

ಇದನ್ನೂ ಓದಿ:ಟಿಕೆಎಸ್ ಐಯ್ಯಂಗಾರ್ ಹೊಟೇಲ್‌

ಪ್ರಕೃತಿಗೆ ಗೌರವದ ಪರಿಕಲ್ಪನೆ

ಅವರ್ ನೇಟಿವ್ ವಿಲೇಜ್ ಕೇವಲ ವಾಸ್ತವ್ಯಕ್ಕಾಗಿ ನಿರ್ಮಿಸಲಾದ ರೆಸಾರ್ಟ್ ಅಲ್ಲ. ಬದಲಿಗೆ ಪರಿಸರ ಸಂರಕ್ಷಣೆ ಜೀವನಶೈಲಿಯನ್ನು ರೂಢಿಸಿಕೊಳ್ಳುವ ತಾಣ. ಇಲ್ಲಿ ನೀವು ಇದ್ದಷ್ಟು ಹೊತ್ತು ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳುತ್ತೀರಿ. ಆರೋಗ್ಯಕರ ಆಹಾರ ಸೇವಿಸುತ್ತೀರಿ. ಈ ರೆಸಾರ್ಟ್‌ ಇಂಧನ ಮತ್ತು ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ನೀಡಿರುವ ಆದ್ಯತೆ ನಿಜಕ್ಕೂ ಅನುಕರಣೆಗೆ ಯೋಗ್ಯವಾದುದು. ಅಷ್ಟೇಕೆ ಪ್ರಕೃತಿಗೆ ಹಾನಿಯಾಗದಂತೆ ರೆಸಾರ್ಟ್‌ ಹೇಗೆ ನಿರ್ಮಿಸಬೇಕು ಮತ್ತು ನಡೆಸಬೇಕು ಎನ್ನುವುದಕ್ಕೆ ಈ ರೆಸಾರ್ಟ್‌ ಅತ್ಯುತ್ತಮ ಉದಾಹರಣೆ ಎಂದರೆ ತಪ್ಪಾಗದು.

Untitled design - 2026-09-17T154350.418

ಇಲ್ಲಿನ ಹಸಿರು ವಾತಾವರಣ, ಕೃಷಿಭೂಮಿಯ ನಡುವೆ ಸಾಗುವ ಹಾದಿ, ಶುದ್ಧ ಗಾಳಿ ಮತ್ತು ಪ್ರಶಾಂತ ಪರಿಸರವು ಮನಸಿಗೆ ಚೈತನ್ಯ ನೀಡುತ್ತದೆ. ಕುಟುಂಬದೊಂದಿಗೆ ವಾರಾಂತ್ಯದ ರಜೆಯನ್ನು ಕಳೆಯಲು, ಸ್ನೇಹಿತರೊಂದಿಗೆ ಸಮಯ ಕಳೆಯಲು ಅಥವಾ ಕಾರ್ಪೊರೇಟ್ ತಂಡಗಳ ಔಟ್‌ಸೈಟ್ ಮತ್ತಿತರ ಕಾರ್ಯಕ್ರಮಗಳಿಗೆ ಇದು ಅತ್ಯುತ್ತಮ ತಾಣ. ನಗರದಲ್ಲಿ ಅಪರೂಪವಾಗುತ್ತಿರುವ ಹಳ್ಳಿಯ ಬದುಕಿನ ಸೊಗಡನ್ನು ಇಲ್ಲಿ ಮತ್ತೊಮ್ಮೆ ಅನುಭವಿಸಬಹುದು.

ಇದನ್ನೂ ಓದಿ:ಬೆಳ್ಳೆ ಹೆರಿಟೇಜ್ ಫಾರ್ಮ್ಸ್ ಅಂಡ್ ರೆಸಾರ್ಟ್

ವಾಸ್ತವ್ಯದ ಆಯ್ಕೆಗಳು

ಈ ರೆಸಾರ್ಟ್‌ನಲ್ಲಿ ಪರಿಸರಸ್ನೇಹಿ ಡಿಲಕ್ಸ್, ಟ್ವಿನ್ ಹಾಗೂ ಫ್ಯಾಮಿಲಿ ರೂಮ್‌ಗಳಿವೆ. ಎಲ್ಲದರಲ್ಲೂ ಹಳ್ಳಿಯ ಮನೆಯ ಆತ್ಮೀಯತೆಯನ್ನು ಅನುಭವಿಸಬಹುದು. ಇಂದಿನ ಅಗತ್ಯಕ್ಕೆ ತಕ್ಕಂತೆ ಸೌಲಭ್ಯಗಳನ್ನೂ ಒದಗಿಸಿದ್ದಾರೆ. ವಾರ್ಲಿ, ಮಧುಬನಿ ಮುಂತಾದ ಸಾಂಪ್ರದಾಯಿಕ ಭಾರತೀಯ ಕಲಾಕೃತಿಗಳಿಂದ ಕೊಠಡಿಗಳನ್ನು ಅಲಂಕರಿಸಿದ್ದಾರೆ. ಎಸಿ, ಟಿವಿ, ಮಿನಿ ಲೈಬ್ರರಿ ಮತ್ತು ಸೋಲಾರ್‌ ವಾಟರ್‌ ಹೀಟರ್‌ ವ್ಯವಸ್ಥೆ ನೀಡಿದ್ದಾರೆ. ಸ್ನೇಹಿತರೊಂದಿಗೆ ಬಂದರೆ ಟ್ವಿನ್ ರೂಮ್‌ಗಳು ಮತ್ತು ಕುಟುಂಬಸಮೇತ ಬಂದರೆ ಆರಾಮವಾಗಿ ಕಾಲ ಕಳೆಯಲು ಖಾಸಗಿ ಬಾಲ್ಕನಿ ಹೊಂದಿರುವ ವಿಶಾಲವಾದ ಫ್ಯಾಮಿಲಿ ರೂಮ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿನ ಸಿಬ್ಬಂದಿ ತುಂಬಾ ಆತ್ಮೀಯರು. ಅತಿಥಿಗಳನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.

ಮನೋರಂಜನೆ ಮತ್ತು ವಿಶ್ರಾಂತಿಗೆ

ನೇಟಿವ್‌ ವಿಲೇಜ್‌ ರೆಸಾರ್ಟ್‌ನಲ್ಲಿ ಮನೋರಂಜನೆಗೆ ಬಲು ಮಹತ್ವ. ಹೊರಾಂಗಣ ಈಜುಕೊಳ, ಮಕ್ಕಳಿಗಾಗಿ ಪ್ರತ್ಯೇಕ ಕಿಡ್ಸ್ ಪೂಲ್, ಆಟದ ಮೈದಾನವಿದೆ. ಚೆಸ್‌, ಕೇರಮ್‌, ಹಾವು-ಏಣಿ, ಅಳಗುಳಿಮನೆ ಹೀಗೆ ಹಲವು ಆಟಗಳ ಇಂಡೋರ್‌ ಗೇಮ್ಸ್ ರೂಮ್ ಸೌಲಭ್ಯವಿದೆ. ಸ್ಪಾ ಹಾಗೂ ಹಾಟ್ ಟಬ್ ವ್ಯವಸ್ಥೆಯೂ ಇದ್ದು ಮಸ್ತ್‌ ವಿಶ್ರಾಂತಿ ಪಡೆಯಬಹುದು.

Untitled design - 2026-09-17T154038.524

ವಿಲೇಜ್‌ನಂಥ ರೆಸಾರ್ಟ್‌ನಲ್ಲಿ ನಾಟಿ ಸ್ಟೈಲ್‌ ಆಟಗಳಿಲ್ಲದಿದ್ದರೆ ಹೇಗೆ? ಹಾಗಾಗಿಯೇ ಗಿಲ್ಲಿ-ದಾಂಡು, ಲಗೋರಿ, ಬುಗುರಿ ಮತ್ತಿತರ ಆಟಗಳನ್ನೂ ಆಡಬಹುದು. ಸೂತ್ರ ಹಿಡಿದು ಗಾಳಿಪಟವನ್ನೂ ಹಾರಿಸಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಎನ್ನುವಂತೆ ಎತ್ತಿನ ಬಂಡಿ ಸವಾರಿ ಮಾಡಿ, ಸೈಕಲ್‌ ಸವಾರಿ ಮಾಡಿ, ಜಮೀನಿನಲ್ಲಿ ಅಡ್ಡಾಡಿ, ಸಾಕುಪ್ರಾಣಿಗಳ ಜತೆಗೆ ಆಟವಾಡಿ-ಆಹಾರ ನೀಡಿ ಗ್ರಾಮೀಣ ಬದುಕನ್ನು ಸ್ವತಃ ಅನುಭವಿಸಬಹುದು. ಹಳ್ಳಿಗರಿಗೆ ಇದೇನು ಹೊಸತಲ್ಲ. ದಿನವೂ ಇದೇ ಅವರ ಕೆಲಸ. ಆದರೆ ಆಫೀಸ್‌ ಕೆಲಸಗಳಿಗೆ ಅಂಟಿಕೊಂಡವರ ಪಾಲಿಗೆ ಈ ಅನುಭವ ಮನಸನ್ನು ಉಲ್ಲಾಸಗೊಳಿಸುವಂಥದ್ದು.

ಸಾಂಪ್ರದಾಯಿಕ ಕರ್ನಾಟಕದ ರುಚಿ

ರೆಸಾರ್ಟ್‌ನ ಆವರಣದಲ್ಲಿ ಒಂದು ರೆಸ್ಟೋರೆಂಟ್‌ ಇದೆ. ನಾಟಿ ಕರ್ನಾಟಕ ಶೈಲಿಯ ಹಲವು ಬಗೆಯ ಖಾದ್ಯಗಳನ್ನು ಸವಿಯಬಹುದು. ನಾವು ಇಲ್ಲಿ ಆಯ್ಕೆ ಮಾಡಿಕೊಂಡಿದ್ದು ಜೋಳದ ರೊಟ್ಟಿ- ಮುಳುಗಾಯಿ ಪಲ್ಯ. ಬೆಂಗಳೂರಲ್ಲೂ ಇದನ್ನೇ ಆರ್ಡರ್‌ ಮಾಡಿ ಸವಿದಿದ್ದೆ. ಅದಕ್ಕೂ ಇದಕ್ಕೂ ರುಚಿಯಲ್ಲಿ ಅಜಗಜಾಂತರ.

Untitled design - 2026-09-17T154535.144

ಅತಿಥಿಗಳ ಅನುಕೂಲಕ್ಕಾಗಿ

ರೆಸಾರ್ಟ್‌ಗೆ ಬರುವ ಅತಿಥಿಗಳ ಬಗ್ಗೆ ಸಿಬ್ಬಂದಿ ತುಂಬಾ ಕಾಳಜಿವಹಿಸುತ್ತಾರೆ. ಎಲ್ಲಾ ರೆಸಾರ್ಟ್‌ಗಳಲ್ಲೂ ಫ್ರಂಟ್ ಡೆಸ್ಕ್, ಲಗೇಜ್ ಸ್ಟೋರೇಜ್, ಲಾಂಡ್ರಿ ಸೇವೆ, ರೂಮ್ ಸರ್ವಿಸ್, ಪಾರ್ಕಿಂಗ್ ವ್ಯವಸ್ಥೆಗಳಿರುವುದು ಸಹಜ. ಇಲ್ಲೂ ಇದೆ. ವಿಶೇಷವೆಂದರೆ ಇಲ್ಲಿಗೆ ನೀವು ನಿಮ್ಮ ಸಾಕುಪ್ರಾಣಿಗಳನ್ನೂ ತರಬಹುದು. ಹಾಗಾಗಿ ಕುಟುಂಬಸಮೇತ ಎನ್ನುವ ಪದಕ್ಕೆ ಇದು ಪರಿಪೂರ್ಣ ಅರ್ಥ ಸಿಕ್ಕಂತಾಗುತ್ತದೆ.

ಪ್ರಕೃತಿಯ ಮಡಿಲಿನಲ್ಲಿ ನೆಮ್ಮದಿಯ ವಾಸ್ತವ್ಯ, ಪರಿಸರಸ್ನೇಹಿ ಜೀವನಶೈಲಿಯ ಅನುಭವ, ಹಳ್ಳಿಯ ಸೊಗಡು, ಸಾಂಪ್ರದಾಯಿಕ ಆಟಗಳು ಎಲ್ಲವೂ ಒಂದೇ ಸೂರಿನಲ್ಲಿನ, ಬೆಂಗಳೂರಿಗೆ ಹತ್ತಿರದ ತಾಣ ಅವರ್ ನೇಟಿವ್ ವಿಲೇಜ್. ವಾರಾಂತ್ಯಕ್ಕೆ ಯೋಜಿಸಿ ಒಮ್ಮೆ ಹೋಗಿಬನ್ನಿ.

ವಿಳಾಸ:

ಸರ್ವೆ ನಂ. 72, ಜುನ್ನಸಂದ್ರ, ಹೆಸರಘಟ್ಟ, ಕೊಡಿಹಳ್ಳಿ ಗ್ರಾಮ, ಬೆಂಗಳೂರು, ಕರ್ನಾಟಕ -560088