Sunday, January 11, 2026
Sunday, January 11, 2026

ಲಕ್ಕಹಳ್ಳಿಯಲ್ಲಿ ಹಕ್ಕಿಗಳ ಲಕಲಕ! ದಿ ರಿವರ್‌ ಟರ್ನ್‌ ಲಾಡ್ಜ್‌

ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಸಮೂಹದ ರಿವರ್ ಟರ್ನ್ ಲಾಡ್ಜ್ ಒಂದರ್ಥದಲ್ಲಿ ದೇವಲೋಕ. ಪಕ್ಷಿಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಸಾವಿರಾರು ರಿವರ್‌ ಟರ್ನ್‌ಗಳನ್ನು ಈ ಜಾಗ ಆಕರ್ಷಿಸುತ್ತದೆ. ಹೀಗಾಗಿಯೇ ಜಂಗಲ್‌ ಲಾಡ್ಜ್ ಅವರ ಈ ರೆಸಾರ್ಟ್‌ಗೆ ರಿವರ್ ಟರ್ನ್ ಎಂಬ ಹೆಸರು ಬಂದಿರುವುದು.

ಈ ಸೀಸನ್‌ನಲ್ಲಿ ದೇಶದ ಪ್ರತಿಯೊಂದು ನೀರಿನ ಸೆಲೆ, ಕೆರೆ, ನದಿ ದಂಡೆಗಳೆಲ್ಲ ಪಕ್ಷಿಗಳಿಂದ ತುಂಬಿರುತ್ತದೆ. ಯಾವುದೋ ದೇಶದಿಂದ, ಯಾವುದೋ ಖಂಡದಿಂದ, ಎಷ್ಟೋ ಕಿಲೋಮೀಟರ್‌ ದೂರದಿಂದ ಬಂದ ಪಕ್ಷಿಗಳು ಊರಿನ ಸುತ್ತಮುತ್ತಲ ನದಿ, ಹೊಂಡಗಳ ಕಡೆಯಲ್ಲಿ ಹಲವಾರು ದಿನ ಠಿಕಾಣಿ ಹೂಡುತ್ತವೆ. ಪಕ್ಷಿಗಳ ಬಗ್ಗೆ ಹೇಳಬೇಕೆಂದರೆ, ಅವು ಎಂದಿಗೂ ಸ್ವತಂತ್ರ ಜೀವಿಗಳು. ಅವು ಯಾವುದೇ ವೀಸಾ, ಪಾಸ್‌ಪೋರ್ಟ್‌ ಇಲ್ಲದೇ ಖಂಡಾಂತರ ಹೋಗುತ್ತವೆ. ಅಲ್ಲಿ ಹಲವಾರು ದಿನಗಳವರೆಗೂ ಇರುತ್ತವೆ. ಅಡ್ರೆಸ್ ತಪ್ಪದೇ ವಾಪಸ್‌ ತಮ್ಮ ವಾಸಸ್ಥಳಕ್ಕೆ ಹೋಗುತ್ತವೆ. ಇದು ಬರೀ ಒಂದು ಸಲ ಅಲ್ಲ. ಪ್ರತಿ ವರ್ಷವೂ ಪಕ್ಷಿಗಳು ಒಂದಲ್ಲ ಒಂದು ಸ್ಥಳಕ್ಕೆ ಹೋಗುತ್ತಲೇ ಇರುತ್ತವೆ. ಹೊಸ ಹೊಸ ಪಕ್ಷಿಗಳು ನಾವಿರುವ ಸ್ಥಳದ ಸಮೀಪಕ್ಕೋ, ಹಳ್ಳಕ್ಕೋ, ನದಿಗೋ ಬರುತ್ತವೆ ಎಂದರೆ, ಆ ಹಳ್ಳ ಅಥವಾ ನದಿ ಪಕ್ಷಿಗಳ ಫೇವರಿಟ್ ಟೂರಿಸ್ಟ್‌ ಡೆಸ್ಟಿನೇಷನ್‌ ಆಗಿರಲೇಬೇಕು. ನಾವಿರುವ ಆ ಸ್ಥಳ ನಮಗೆ ಮಾಮೂಲಿ ಸ್ಥಳವಾಗಿದ್ದರೂ ಪಕ್ಷಿಗಳಿಗೆ ಅದೂ ಒಂಥರ ಬಾಲಿ ಅಥವಾ ಲಾಸ್‌ ವೇಗಾಸ್‌ ಇದ್ದ ಹಾಗೆ. ನಮ್ಮೂರಿನ ಪಕ್ಕದಲ್ಲಿರುವ ಹಳ್ಳಕ್ಕೆ ವಿದೇಶದ ಹಕ್ಕಿ ಬರಲು ಶುರುಮಾಡಿದರೆ, ತಿಳಿದುಕೊಳ್ಳಿ; ಆ ಹಳ್ಳ, ಕೆರೆ ಅಥವಾ ನದಿ ವಿಶ್ವಾದ್ಯಂತ ಪ್ರವಾಸಿಗರನ್ನು ಹೊಂದಿದೆ. ಆದರೆ, ಆ ಪ್ರವಾಸಿಗರು ಮನುಷ್ಯರಲ್ಲ.. ಪಕ್ಷಿಗಳು!

ನಮಗೆಲ್ಲ ಒಂದು ವಿದೇಶ ಪ್ರವಾಸಕ್ಕೆ ಹೋಗಬೇಕಾದರೆ, ನೂರಾರು ಅಡೆತಡೆಗಳು. ಪಾಸ್‌ಪೋರ್ಟ್‌ ಮಾಡಿಸಿಕೊಳ್ಳಬೇಕು. ವೀಸಾ ಮಾಡಿಸಿಕೊಳ್ಳಬೇಕು, ಟಿಕೆಟ್‌ ಖರೀದಿಸಬೇಕು, ಏರ್‌ಪೋರ್ಟ್‌ಗೆ ಹೋಗಿ ಇಮಿಗ್ರೇಷನ್‌ ಚೆಕ್‌ ಮಾಡಿಸಿಕೊಂಡು ಆ ಸ್ಥಳಕ್ಕೆ ಹೋಗಬೇಕು. ಅಲ್ಲಿ ಕೆಲವೇ ದಿನಗಳ ಕಾಲ ಇರಬಹುದು. ಆಮೇಲೆ ವಾಪಸ್‌ ತವರಿಗೆ ಮರಳಲೇಬೇಕು. ಆದರೆ, ಪಕ್ಷಿಗಳು ಹಾಗಲ್ಲ. ಯಾವುದೋ ದೇಶದ ಯಾವುದೋ ಮೂಲೆಯಿಂದ ರಾಜನ ಹಾಗೆ ಗುಂಪುಕಟ್ಟಿಕೊಂಡು ಬಂದು, ಇಲ್ಲಿದ್ದು ಸಂಸಾರ ನಡೆಸಿ, ತನ್ನ ಮಕ್ಕಳನ್ನೂ ತನ್ನ ಜತೆಗೆ ಕರೆದುಕೊಂಡು ಹೋಗುತ್ತವೆ. ಬೇಕೆನಿಸಿದರೆ ತವರಿಗೆ ಹೋಗುತ್ತವೆ. ಇಲ್ಲವಾದರೆ ಬೇರೆ ಇನ್ಯಾವುದೋ ದೇಶಕ್ಕೆ ಹಾರುತ್ತವೆ.

ಇಂಥ ಪಕ್ಷಿಗಳು ಬರುವ ಸ್ಥಳ ಹೆಚ್ಚೂಕಡಿಮೆ ಹಚ್ಚ ಹಸಿರಿನ ಹೊದಿಕೆಯಲ್ಲೇ ಇರುತ್ತವೆ. ಆ ಸ್ಥಳ ಫೊಟೋ ತೆಗೆಯುವವರಿಗೂ ಹೇಳಿಮಾಡಿಸಿದಂತೆ ಇರುತ್ತದೆ. ಏಕೆಂದರೆ ನಾವು ಎಲ್ಲೂ ಕೇಳರಿಯದ ಪಕ್ಷಿಗಳು ಅಲ್ಲಿ ಬಂದಿರುತ್ತವೆ. ಹಾಗೆ ನೋಡಿದ್ರೆ ಅಂಥ ಸ್ಥಳಗಳು ನಮ್ಮೂರ ಸುತ್ತಮುತ್ತಲೇ ಇರುತ್ತವೆ. ಆದರೆ, ನಾವು ಅದನ್ನು ಗಮನಿಸಿರೋದಿಲ್ಲ. ಈಗ ಮಳೆಗಾಲ ಮುಗಿದಿದೆ. ನಿಮ್ಮೂರಿನ ಯಾವುದಾದರೂ ನೀರಿನ ಮೂಲಕ್ಕೆ ಪಕ್ಷಿಗಳು ಬಂದರೆ, ಅವುಗಳನ್ನು ನೋಡಿ ಹಲ್ಲು ಕಿರಿಯಿರಿ. ಏಕೆಂದರೆ, ಅವುಗಳು ವಿದೇಶಿ ಪಕ್ಷಿಗಳು.

ನಮ್ಮ ರಾಜ್ಯದಲ್ಲೂ ಅಂಥ ಪಕ್ಷಿಗಳಿಗೆ ಇಷ್ಟವಾಗುವ ಸ್ಥಳಗಳಿಗೆ ಕಮ್ಮಿಯೇನಿಲ್ಲ. ರಂಗನತಿಟ್ಟು, ಗುಡವಿ, ಅತ್ತೀವೇರಿ, ಘಟಪ್ರಭಾ, ಮಂಡಗದ್ದೆ ಇವೆಲ್ಲ ರಾಜ್ಯದಲ್ಲೇ ಅತಿ ಫೇಮಸ್‌ ಪಕ್ಷಿಧಾಮಗಳು. ಈಗ ಮಳೆಗಾಲ ಬೇರೆ, ಹಲವಾರು ಪ್ರಭೇದದ ಹಕ್ಕಿಗಳು ಈಗಾಗಲೇ ಅಲ್ಲಿಗೆ ಬಂದಿರುತ್ತವೆ.

ನಿಸರ್ಗ, ನದಿಗಳು, ಒಳ್ಳೆಯ ಪರಿಸರ ಇವುಗಳ ಪ್ರಸ್ತಾಪ ಆದರೆ ಶಿವಮೊಗ್ಗ ಜಿಲ್ಲೆಗೆ ಅಲ್ಲಿ ಸ್ಥಾನವಿರುತ್ತದೆ. ಮಲೆನಾಡು ಎಂದ ತಕ್ಷಣ ನಮಗೆಲ್ಲ ನೆನಪಿಗೆ ಬರೋದು ಚಿಕ್ಕಮಗಳೂರು. ಕುವೆಂಪು ಹೇಳಿರುವ ಮಾತಲ್ಲಿ ಸುಳ್ಳಿಲ್ಲ.

‘ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ

ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ

ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು

ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ

jlr1

ಎಂದು. ಅವರ ಕವನದಲ್ಲೂ ಪಕ್ಷಿಗಳ ಬಗ್ಗೆ ಹೇಳಿದ್ದಾರೆ. ಕುವೆಂಪು ಹುಟ್ಟಿದ ಜಿಲ್ಲೆಯ ಪಕ್ಕದಲ್ಲಿರುವ ಚಿಕ್ಕಮಗಳೂರಿನ ಬನಗಳಲ್ಲಿ ಒಂದು ಪಕ್ಷಿಧಾಮವಿದೆ. ಭದ್ರಾ ತೀರದಲ್ಲಿರುವ ಲಕ್ಕವಳ್ಳಿ ಎಂಬ ಊರಿನ ಸಮೀಪವೇ ಇರುವ ರಿವರ್‌ ಟರ್ನ್‌, ಹಕ್ಕಿಗಳ ಔಟ್ ಡೋರ್ ಲಾಡ್ಜ್‌ ಎನ್ನಬಹುದು.

ರಿವರ್ ಟರ್ನ್ ಹಕ್ಕಿಗಳನ್ನು ನೋಡಲೆಂದೇ ಸೃಷ್ಟಿಯಾದ ಲಾಡ್ಜ್ ಗೆ ಅದೇ ಹೆಸರನ್ನಿಡಲಾಗಿದೆ. ಅಲ್ಲಿ ಮಳೆಗಾಲದಲ್ಲಿ ಲಕ್ಷಾಂತರ ರಿವರ್‌ ಟರ್ನ್‌ ಹಕ್ಕಿಗಳು ಬರುತ್ತವೆ. ಅವುಗಳ ಚಿಲಿಪಿಲಿ ಇರಬಹುದು. ಅಂದಚೆಂದ, ಹಾರಾಟಗಳೇ ಇರಬಹುದು; ನೋಡುಗರಿಗೆ ಮೋಡಿಮಾಡುತ್ತದೆ. ಲಕ್ಕವಳ್ಳಿಗೆ ಒಮ್ಮೆಯಾದರೂ ಹೋಗಿಬರುವ ಆಸೆ ಹುಟ್ಟೇ ಹುಟ್ಟುತ್ತದೆ. ಆದರೆ, ಅಲ್ಲಿಗೆ ಹೋದಾಗ ನಮ್ಮನ್ನು ನೋಡಿಕೊಳ್ಳುವವರಾರು? ಪಕ್ಷಿಗಳೇನೋ ಮೀನು, ಹುಳಹುಪ್ಪಟೆಗಳನ್ನು ತಿಂದು ಬದುಕಬಹುದು ಆದರೆ ಮನುಷ್ಯರಿಗೆ? ಸ್ನೇಹಿತರೆಲ್ಲ ಸೇರಿ ಹೋದಾಗ ಅಲ್ಲಿ ಕಾಲ ಕಳೆಯುವುದಕ್ಕೆ, ಉಳಿಯುವುದಕ್ಕೆ ಒಂದು ಪ್ರಶಾಂತವಾದ ಸ್ಥಳ ಬೇಕಲ್ಲ. ಚಿಂತೆ ಬೇಕಿಲ್ಲ. ಈ ವಾರ ನಾವು ಪರಿಚಯಿಸುತ್ತಿರುವ ರೆಸಾರ್ಟ್ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿದೆ. ಯಾವ ರೆಸಾರ್ಟ್?

ದಿ ರಿವರ್‌ ಟರ್ನ್‌ ಲಾಡ್ಜ್‌!

jlr

ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಸಮೂಹದ ರಿವರ್ ಟರ್ನ್ ಲಾಡ್ಜ್ ಒಂದರ್ಥದಲ್ಲಿ ದೇವಲೋಕ. ಪಕ್ಷಿಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಸಾವಿರಾರು ರಿವರ್‌ ಟರ್ನ್‌ಗಳನ್ನು ಈ ಜಾಗ ಆಕರ್ಷಿಸುತ್ತದೆ. ಹೀಗಾಗಿಯೇ ಜಂಗಲ್‌ ಲಾಡ್ಜ್ ಅವರ ಈ ರೆಸಾರ್ಟ್‌ಗೆ ರಿವರ್ ಟರ್ನ್ ಎಂಬ ಹೆಸರು ಬಂದಿರುವುದು.

ಭದ್ರಾ ಹುಲಿ ಅಭಯಾರಣ್ಯದ ಉತ್ತರದ ಗಡಿಯಿಂದ ಸ್ವಲ್ಪ ದೂರದಲ್ಲಿ, ಲಕ್ಕವಳ್ಳಿಯ ಬಳಿಯ ಭದ್ರಾ ಜಲಾಶಯದ ಅಂಚಿನಲ್ಲಿರುವ ಗುಡ್ಡದ ಮೇಲೆ ಈ ರೆಸಾರ್ಟ್‌ ಇದೆ. ಇದು ರಿವರ್‌ ಟರ್ನ್‌ ಹಕ್ಕಿಗಳು ವಾಸಿಸುವ ಸ್ಥಳದಿಂದ ಸ್ವಲ್ಪವೇ ದೂರ. ಅಂದರೆ, ನೀವು ರೆಸಾರ್ಟ್‌ನ ರೂಮ್‌ನಲ್ಲಿದ್ದರೂ ಅಲ್ಲಿನ ಹಕ್ಕಿಗಳ ಚಿಲಿಪಿಲಿ ಕೇಳುತ್ತದೆ. ಕಿಟಕಿಯಿಂದ ಹೊರಗೆ ನೋಡಿದರೆ, ಪಕ್ಷಿಗಳ ವಾಸಸ್ಥಾನ

ರಿವರ್ ಟರ್ನ್ ಲಾಡ್ಜ್ ಮೊದಲಿನಿಂದಲೂ ಆಹ್ಲಾದಕರ ಅನುಭವ ನೀಡುತ್ತಲೇ ಇದೆ.! ಭದ್ರಾ ಟೈಗರ್ ರಿಸರ್ವ್ ಲಾಡ್ಜ್‌ನಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಈ ರೆಸಾರ್ಟ್‌ನವರು ಅತಿಥಿಗಳನ್ನು ಸಫಾರಿಗೂ ಕರೆದುಕೊಂಡು ಹೋಗುತ್ತಾರೆ. ನೀವು ಸ್ಟೇ ಆದ ದಿನದ ಸಂಜೆ ಜೀಪ್ ಸಫಾರಿಯಲ್ಲಿ ಕರೆದುಕೊಂಡು ಹೋಗಿ, ಕಾಡಿನಲ್ಲಿ ಸುತ್ತಿಸುವುದರ ಜತೆಗೆ ಚಿರತೆ, ಹುಲಿ, ಗೌರ್‌, ಆನೆ, ಮೊಸಳೆ, ಜಿಂಕೆ, ಕಾಡುಹಂದಿ, ಉಡ ಮತ್ತಿತರ ರೀತಿಯ ಸರೀಸೃಪಗಳ ದರ್ಶನ ಮಾಡಿಸುತ್ತಾರೆ.

ಇಲ್ಲಿ ಪಕ್ಷಿ ಪ್ರಿಯರಿಗಂತೂ ಫುಲ್‌ ಲಾಟರಿ, ಏಕೆಂದರೆ ಇಲ್ಲಿ ರಿವರ್‌ ಟರ್ನ್‌ ಹಕ್ಕಿಗಳ ಜತೆಗೆ ಜಂಗಲ್‌ಫೌಲ್, ವೈಟ್ ರಂಪ್ಡ್ ಶಾಮಾ, ರಾಕೆಟ್ ಟೇಲ್ಡ್ ಡ್ರೊಂಗೊ, ಮಲಬಾರ್ ಪೈಡ್ ಹಾರ್ನ್‌ಬಿಲ್, ಬ್ರೌನ್‌ ಫಿಶ್‌ ಓಲ್‌, ಗ್ರೇ ಹೆಡೆಡ್‌ ಫಿಶ್‌ ಈಗಲ್‌, ಓಸ್ಪ್ರೇ, ಬಿಳಿ ಹೊಟ್ಟೆಯ ಸಮುದ್ರ ಹದ್ದು, ರಿವರ್‌ ಟರ್ನ್‌ಗಳು (ಜನವರಿಯಿಂದ ಜೂನ್ ವರೆಗೆ), ಸರ್ಪೆಂಟ್ ಹದ್ದು, ಕ್ರೆಸ್ಟೆಡ್ ಹಾಕ್ ಹದ್ದುಗಳಂಥ ಹಲವಾರು ಪಕ್ಷಿಗಳ ಹೋಲ್‌ಸೇಲ್‌ ಬಳಗಗಳನ್ನು ತೋರಿಸುತ್ತಾರೆ. ಇಲ್ಲಿ ಬರೀ ಒಂದೆರಡು ರೀತಿಯ ಪಕ್ಷಿಗಳಿಲ್ಲ, ಸುಮಾರು 200ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ನಿಮ್ಮ ಸತ್ಕಾರಕ್ಕಾಗಿ, ನಿಮಗೆ ದರ್ಶನ ನೀಡಲು ಕಾಯುತ್ತಿರುತ್ತವೆ. ನಿಮಗೇನಾದರೂ ಫೊಟೋ ತೆಗೆಯುವ ಹುಚ್ಚಿದ್ದರೆ, ಜಾಸ್ತಿ ಮೆಮೊರಿ ಕಾರ್ಡ್‌ಗಳನ್ನಿಟ್ಟುಕೊಂಡು ಹೋಗಿ. ಏಕೆಂದರೆ ಇಲ್ಲಿರುವ ಪಕ್ಷಿ ಪ್ರಭೇದದ ಫೊಟೋ ತೆಗೀತಾ ಬೇಗನೇ ಮೆಮೋರಿ ಫುಲ್‌ ಆಗಬಹುದು.

ಬರೀ ಪಕ್ಷಿಗಳನ್ನು ನೋಡುವುದಷ್ಟೇ ಅಲ್ಲ, ತ್ಯಾವರೆಕೊಪ್ಪ ವನ್ಯಧಾಮದಲ್ಲಿ ಸಿಂಹ ಮತ್ತು ಹುಲಿ ಸಫಾರಿಗೆ ಮತ್ತು ಸಕ್ರೆಬೈಲ್ ಆನೆ ಶಿಬಿರಕ್ಕೆ ಸಹ ಜಂಗಲ್‌ ಲಾಡ್ಜಸ್‌ನ ರಿವರ್‌ ಟರ್ನ್‌ ಅವರು ಕರೆದುಕೊಂಡು ಹೋಗುತ್ತಾರೆ. ಬರೀ ನೋಡುವುದಷ್ಟೇ ಅಲ್ಲ ಸ್ವಾಮಿ, ನೀರಿನಲ್ಲಿ ಆಟವಾಡಲು ಮನಸ್ಸಿದ್ದರೆ, ಮಸ್ತ್‌ ಈಜಾಡಬೇಕೆನಿಸರೆ, ಶಿಬಿರದಲ್ಲಿ ಕಯಾಕಿಂಗ್, ಈಜು ಜತೆಗೆ ದೋಣಿ ವಿಹಾರಕ್ಕೂ ಸೌಲಭ್ಯಗಳಿವೆ. ನಮಗೆ ಈಜಾಡಲು ಬರಲ್ಲ ಎಂದು ಗೋಗರೆಯುವುದೂ ಬೇಡ ಏಕೆಂದರೆ ನೀರಿನ ಚಟುವಟಿಕೆಗಳನ್ನು ಮಾಡುವಾಗ ಉತ್ತಮ ತರಬೇತಿ ಪಡೆದ ತಜ್ಞರು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುತ್ತಾರೆ. ಚೆನ್ನಾಗಿ ಕಳೆದ ದಿನದ ನಂತರ, ಶಿಬಿರದ ಊಟದ ಹಾಲ್ ಆಗಿರುವ ಗೋಲ್ ಘರ್‌ಗೆ ಬಂದು ಭೋಜನ ಮಾಡಿ, ಒಂದೊಳ್ಳೆ ಸತ್ಕಾರವನ್ನೂ ಅನುಭವಿಸಬಹುದು. ಗೋಲ್‌ಘರ್‌ನಲ್ಲಿನ ಊಟದಲ್ಲಿ ಎಂದಿಗೂ ಯೋಚಿಸಬೇಡಿ, ಏಕೆಂದರೆ, ರುಚಿ ಶುಚಿಯಿರುವ ಊಟವನ್ನು ಮಾಡುತ್ತಾ ಹೋದರೆ, ಹೊಟ್ಟೆ ತುಂಬಿದ್ದೇ ಗೊತ್ತಾಗಲ್ಲ. ಹೀಗೆ ರಿವರ್‌ ಟರ್ನ್‌ ರೆಸಾರ್ಟ್‌ನಲ್ಲಿ ನಿಮ್ಮ ದಿನವನ್ನು ಕಳೆಯಬಹುದು.

ರಿವರ್‌ ಟರ್ನ್‌ ರೆಸಾರ್ಟ್‌ನ ಮತ್ತೊಂದು ಮಜವೆಂದರೆ, ಇಲ್ಲಿ ದೋಣಿ ಸಫಾರಿ ಮತ್ತು ಜೀಪಿನ ಸಫಾರಿ ಎರಡೂ ಚೆನ್ನಾಗಿರುತ್ತದೆ. ಕಾಡಿನ ಮಧ್ಯ ಹೆಚ್ಚು ಕಡಿಮೆ ಕಾಡಿನಲ್ಲೇ ಸುತ್ತಾಡಿದ ಹಾಗೆ ಆಗುವ ಅನುಭವವನ್ನು ಕೊಡುವ ಈ ರೆಸಾರ್ಟ್‌ಗೆ ಭೇಟಿ ನೀಡಿ, ನಿಮ್ಮ ಜತೆಗೆ ಅನುಭವದ ಬುತ್ತಿಯನ್ನು ಹೊತ್ತು ತನ್ನಿ.

ಸೀಸನ್‌

ರಿವರ್ ಟರ್ನ್ ಲಾಡ್ಜ್ ವರ್ಷಪೂರ್ತಿ ಭೇಟಿ ನೀಡಲು ಆಹ್ಲಾದಕರ ಸ್ಥಳವಾಗಿದೆ. ಜೂನ್‌ನಿಂದ ಸೆಪ್ಟಂಬರ್‌ವರೆಗೆ ಮಳೆಗಾಲದಲ್ಲಿ ಇಡೀ ಅಭಯಾರಣ್ಯವು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಬೇಸಗೆಯ ತಿಂಗಳುಗಳು (ಮಾರ್ಚ್ - ಮೇ) ಸ್ವಲ್ಪ ಬೆಚ್ಚಗಿರುತ್ತದೆ.

ಪ್ಯಾಕೇಜ್‌ ಗಳು

ಲಾಗ್‌ಹಟ್‌ ಪ್ಯಾಕೇಜ್

ಪ್ಯಾಕೇಜ್ ನಲ್ಲಿ:

ಆಯ್ದ ವಸತಿ ಸ್ಥಳ, ವಾಸ್ತವ್ಯ, ಮಧ್ಯಾಹ್ನ ಊಟ, ಸಂಜೆ ಚಹಾ/ಕಾಫಿ ಮತ್ತು ತಿಂಡಿಗಳು, ವನ್ಯಜೀವಿ ಚಲನಚಿತ್ರ ಪ್ರದರ್ಶನ, ಭೋಜನ, ಉಪಾಹಾರ, ಜೀಪ್ ಸಫಾರಿ, ಭದ್ರಾ ಹುಲಿ ಅಭಯಾರಣ್ಯಕ್ಕೆ ದೋಣಿ ಸಫಾರಿ.

ಡಿಲಕ್ಸ್‌ ಪ್ಯಾಕೇಜ್‌

ಪ್ಯಾಕೇಜ್ ನಲ್ಲಿ:

ಆಯ್ದ ವಸತಿ ಸ್ಥಳ, ವಾಸ್ತವ್ಯ, ಮಧ್ಯಾಹ್ನ ಊಟ, ಸಂಜೆ ಚಹಾ/ಕಾಫಿ ಮತ್ತು ತಿಂಡಿಗಳು, ವನ್ಯಜೀವಿ ಚಲನಚಿತ್ರ ಪ್ರದರ್ಶನ, ಭೋಜನ, ಉಪಾಹಾರ, ಜೀಪ್ ಸಫಾರಿ, ಭದ್ರಾ ಹುಲಿ ಅಭಯಾರಣ್ಯಕ್ಕೆ ದೋಣಿ ಸಫಾರಿ.

ರಿವರ್‌ ಟರ್ನ್‌ ರೆಸಾರ್ಟ್‌ ದಿನಚರಿ

ದಿನ 1

ಮಧ್ಯಾಹ್ನ 1:00

ಚೆಕ್ ಇನ್ ಮಾಡಿ. ಆರಾಮವಾಗಿ ಫ್ರೆಶ್ ಅಪ್ ಆಗಿ

ಮಧ್ಯಾಹ್ನ 1:30 - 2:30

ಗೋಲ್ ಘರ್‌ನಲ್ಲಿ ಭರ್ಜರಿ ಊಟವನ್ನು ಸವಿಯಿರಿ

ಮಧ್ಯಾಹ್ನ 3:15 - 3:30

ರಿಸೆಪ್ಷನ್‌ನಲ್ಲಿ ಚಹಾ/ಕಾಫಿ ಸವಿದು ಉದ್ಯಾನವನಕ್ಕೆ ಸವಾರಿ ಮಾಡಲು ಸಿದ್ಧರಾಗಿ

ಮಧ್ಯಾಹ್ನ 3:30 - 6:30

ಇಲ್ಲಿನ ಪ್ರಕೃತಿಶಾಸ್ತ್ರಜ್ಞರು ನಿಮ್ಮನ್ನು ಜೀಪ್ ಅಥವಾ ದೋಣಿಯಲ್ಲಿ ವನ್ಯಜೀವಿ ಸಫಾರಿಯಲ್ಲಿ ಭದ್ರಾ ಹುಲಿ ಅಭಯಾರಣ್ಯಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅವರು ತಮ್ಮ ಅನುಭವಗಳು ಮತ್ತು ಕಾಡಿನ ಬಗ್ಗೆ ಮತ್ತು ಅಲ್ಲಿ ವಾಸಿಸುವ ಎಲ್ಲ ಪ್ರಾಣಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ವಿವಿಧ ರೀತಿಯ ಪ್ರಾಣಿ ಪಕ್ಷಿಗಳನ್ನೂ ತೋರಿಸುತ್ತಾರೆ.

ಸಂಜೆ 6:30 - 7:15

ಗೋಲ್ ಘರ್‌ನಲ್ಲಿ ಚಹಾ/ಕಾಫಿ

ಸಂಜೆ 7:30 - 8:00

ಗೋಲ್ ಘರ್‌ನಲ್ಲಿ ವನ್ಯಜೀವಿ ಚಲನಚಿತ್ರವನ್ನು ವೀಕ್ಷಿಸಿ

ರಾತ್ರಿ 8:30 - 9:30

ಗೋಲ್ ಘರ್‌ನಲ್ಲಿ ಊಟ ಮಾಡುತ್ತ, ಕ್ಯಾಂಪ್‌ಫೈರ್‌ನ ಬಿಸಿಗೆ ಮೈಯೊಡ್ಡಿ. ಇತರ ಅತಿಥಿಗಳು ಮತ್ತು ಅಲ್ಲಿನ ಸಿಬ್ಬಂದಿಯೊಂದಿಗೆ ಕಾಡಿನ ಕಥೆಗಳನ್ನು ವಿನಿಮಯ ಮಾಡಿಕೊಳ್ಳಿ.

ದಿನ 2

ಬೆಳಗ್ಗೆ 6:00 -

ಮತ್ತೊಂದು ದಿನದ ವಿಸ್ಮಯಕ್ಕಾಗಿ ಎದ್ದೇಳಿ

ಬೆಳಗ್ಗೆ 6:30 - 8:30

ಜೀಪ್/ಬೋಟ್ ಸಫಾರಿ.

ಬೆಳಗ್ಗೆ 8:30 - 9:30

ಗೋಲ್ ಘರ್‌ನಲ್ಲಿ ಉಪಾಹಾರ.

ಬೆಳಗ್ಗೆ 9:30 - 10:15

ತರಬೇತಿ ಪಡೆದ ತಜ್ಞರ ಮೇಲ್ವಿಚಾರಣೆಯಲ್ಲಿ ಜಲ ಕ್ರೀಡೆ ಪ್ರದೇಶದಲ್ಲಿ ಕಯಾಕಿಂಗ್ ಮತ್ತು ಈಜು

ಬೆಳಗ್ಗೆ 10:30

ನೆನಪಿನ ಬುತ್ತಿಯೊಡನೆ ಚೆಕ್‌ಔಟ್‌ ಆಗಿ.

ಹೋಗುವುದು ಹೇಗೆ?

ರಸ್ತೆಯ ಮೂಲಕ

ರೆಸಾರ್ಟ್ ಬೆಂಗಳೂರಿನಿಂದ ಸುಮಾರು 283 ಕಿಮೀ ದೂರದಲ್ಲಿದೆ.

ರೈಲು ಮೂಲಕ

ಹತ್ತಿರದ ರೈಲು ನಿಲ್ದಾಣ ತರೀಕೆರೆ ಮತ್ತು ಶಿವಮೊಗ್ಗದಲ್ಲಿದ್ದು, ಇದು ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.

ವಿಮಾನದ ಮೂಲಕ

ಹತ್ತಿರದ ವಿಮಾನ ನಿಲ್ದಾಣವೆಂದರೆ ಶಿವಮೊಗ್ಗ ದೇಶೀಯ ವಿಮಾನ ನಿಲ್ದಾಣ, ಇದು ರೆಸಾರ್ಟ್‌ನಿಂದ ಸುಮಾರು 24 ಕಿಮೀ ದೂರದಲ್ಲಿದೆ.

ಸಂಪರ್ಕ

ರಂಗನಾಥಸ್ವಾಮಿ ದೇವಸ್ಥಾನ ಹಿಂದೆ, ಭದ್ರಾ ಪ್ರಾಜೆಕ್ಟ್, ಲಕ್ಕವಳ್ಳಿ.

ಚಿಕ್ಕಮಗಳೂರು - 577 115 ಕರ್ನಾಟಕ, ಭಾರತ

ವ್ಯವಸ್ಥಾಪಕರು: ಕಿರಣ್ ಎ.ಪಿ.

ಸಂಪರ್ಕ ಸಂಖ್ಯೆ: 9449599780

ಬುಕಿಂಗ್‌ಗಾಗಿ: 080 40554055

ವಿಚಾರಣೆ : 9449599769

ಇಮೇಲ್ ಐಡಿ: info@junglelodges.com

Vinay Khan

Vinay Khan

Travel blogger and adventurer passionate about exploring new cultures and sharing travel experiences.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..