ಬೆಂಗಳೂರು ಎಂದರೆ ಉದ್ಯಾನಗಳ ನಗರ, ಐಟಿ ಹಬ್‌ ಎಂಬ ಹಿರಿಮೆಯ ಜತೆಗೆ ಕಾಫಿಯ ಪರಿಮಳದೊಂದಿಗೆ ಬದುಕುವ ಜನರ ನಗರವೂ ಹೌದು. ಬೆಳಗಿನ ದಿನಚರಿಯಿಂದ ಹಿಡಿದು ಸಂಜೆಯ ಸ್ನೇಹಿತರ ಭೇಟಿಯವರೆಗೆ ಕಾಫಿ ಬೆಂಗಳೂರಿಗರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಾಂಪ್ರದಾಯಿಕ ಫಿಲ್ಟರ್‌ ಕಾಫಿಯ ಘಮದಿಂದ ಹಿಡಿದು ಆಧುನಿಕ ಕೆಫೆಗಳಲ್ಲಿ ಸಿಗುವ ಕೋಲ್ಡ್‌ ಬ್ರೂ, ಕ್ಯಾಪುಚಿನೊ ಮತ್ತು ಲ್ಯಾಟೆಯವರೆಗೆ ನಗರದ ಕಾಫಿ ಸಂಸ್ಕೃತಿ ಕಾಲಕ್ಕೆ ತಕ್ಕಂತೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಹೀಗೆ ಬೆಂಗಳೂರಿನ ಕಾಫಿ ಸಂಸ್ಕೃತಿಗೆ ಹೊಸ ಆಯಾಮ ನೀಡುತ್ತಿರುವ ಕೆಫೆಗಳಲ್ಲಿ ಬೀನ್ಲೋರ್‌ ಕಾಫಿ ರೋಸ್ಟೆರ್‌ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಟಿಕೆಎಸ್ ಐಯ್ಯಂಗಾರ್ ಹೊಟೇಲ್‌

ಉತ್ತಮ ಗುಣಮಟ್ಟದ ಕಾಫಿ, ತಾಜಾ ಬೇಕರಿ ಉತ್ಪನ್ನಗಳು, ವಿಭಿನ್ನ ರುಚಿಯ ಸ್ಯಾಂಡ್‌ವಿಚ್‌ಗಳು ಮತ್ತು ಆರೋಗ್ಯಕರ ಆಹಾರದ ಆಯ್ಕೆಗಳೊಂದಿಗೆ ಕಾಫಿಪ್ರಿಯರನ್ನು ಆಕರ್ಷಿಸುತ್ತಿರುವ ಈ ಕೆಫೆ ಇದೀಗ ಕೋರಮಂಗಲದಲ್ಲಿಯೂ ತನ್ನ ಹೊಸ ಮಳಿಗೆಯನ್ನು ಆರಂಭಿಸಿದೆ. ವರ್ಷಗಳ ಹಿಂದಿನ ಮನೆಯೊಂದರಲ್ಲಿ ರೂಪುಗೊಂಡಿರುವ ಈ ಕೆಫೆ, ಆಧುನಿಕ ಕೆಫೆ ಸಂಸ್ಕೃತಿಯ ಜತೆಗೆ ಹಸಿರು ಪರಿಸರದ ಮೂಲಕ ಕಾಫಿ ಪ್ರಿಯರಿಗೆ ಹೊಸ ಅನುಭವ ನೀಡುತ್ತದೆ.

Untitled Design - 2026-11-03T143415.373

ಕಾಫಿ ಮತ್ತು ಖಾದ್ಯಗಳಿಗೆ ಸಮಾನ ಆದ್ಯತೆ

ಬೀನ್ಲೋರ್‌ನ ವಿಶೇಷತೆ ಎಂದರೆ ಕಾಫಿಯಷ್ಟೇ ಅಲ್ಲದೆ ಆಹಾರ ತಯಾರಿಕೆಯಲ್ಲಿಯೂ ತಾಜಾತನಕ್ಕೆ ನೀಡುವ ಆದ್ಯತೆ. ಕರ್ನಾಟಕದ ಚಿಕ್ಕಮಗಳೂರು ತೋಟಗಳಿಂದ ಸಂಗ್ರಹಿಸಿದ ಕಾಫಿ ಬೀಜಗಳನ್ನು ಬಳಸಿ ಇಲ್ಲಿಯೇ ಕಾಫಿ ಹುರಿದು ತಯಾರಿಸಲಾಗುತ್ತದೆ. ಇದರಿಂದ ಕಾಫಿಯ ಪರಿಮಳ ಮತ್ತು ರುಚಿಗೆ ವಿಶೇಷ ಮಹತ್ವ ನೀಡಿದಂತಾಗುತ್ತದೆ.

ಇಲ್ಲಿನ ಮತ್ತೊಂದು ಆಕರ್ಷಣೆ ತಾಜಾ ಬ್ರೆಡ್‌ಗಳು. ಸವರ್‌ಡೋ, ಸಿಯಾಬಟ್ಟಾ ಮತ್ತು ಬ್ರಿಯೋಷ್‌ ಬ್ರೆಡ್‌ಗಳನ್ನು ಪ್ರತಿದಿನ ತಯಾರಿಸಿ ಸ್ಯಾಂಡ್‌ವಿಚ್‌ಗಳು ಹಾಗೂ ಇತರ ಖಾದ್ಯಗಳಿಗೆ ಬಳಸಲಾಗುತ್ತದೆ. ಸಾಸ್‌ಗಳು, ಕೋಲ್ಡ್‌ ಬ್ರೂ ಮತ್ತು ಇತರ ಕೆಲವು ಆಹಾರ ಉತ್ಪನ್ನಗಳನ್ನೂ ಇಲ್ಲಿನ ಅಡುಗೆಮನೆಯಲ್ಲಿಯೇ ತಯಾರಿಸುವುದು ಕೆಫೆಯ ವಿಶೇಷತೆ.

ಜಾಗತಿಕ ರುಚಿಗಳ ಪರಿಚಯ

ಸ್ಯಾಂಡ್‌ವಿಚ್‌ಗಳು, ಪಾಸ್ತಾ, ಸಲಾಡ್ಸ್, ರೈಸ್‌ ಬೌಲ್‌ಗಳು ಮತ್ತು ಬೇಕರಿ ಉತ್ಪನ್ನಗಳು ಇಲ್ಲಿನ ಮೆನುವಿನ ಪ್ರಮುಖ ಆಕರ್ಷಣೆಗಳು. ಹ್ಯಾರಿಸಾ ಗ್ರಿಲ್ಡ್‌ ಚೀಸ್‌ ಸವರ್‌ಡೋ ಸ್ಯಾಂಡ್‌ವಿಚ್‌, ಸ್ಮೋಕ್ಡ್‌ ಚಿಕನ್‌ ಬಗೆಗಳು ಮತ್ತು ವಿಯೆಟ್ನಾಮೀಸ್‌ ಶೈಲಿಯಿಂದ ಪ್ರೇರಿತವಾದ ಬಹ್ನ್‌ ಮಿ ರೈಸ್‌ ಬೌಲ್‌ ಮುಂತಾದ ಖಾದ್ಯಗಳು ವಿಭಿನ್ನ ಆಹಾರ ಅನುಭವವನ್ನು ನೀಡುತ್ತವೆ. ಸಸ್ಯಾಹಾರಿ ಆಯ್ಕೆಗಳನ್ನು ಬಯಸುವವರಿಗೂ ಮೆನುವಿನಲ್ಲಿ ವಿವಿಧ ಖಾದ್ಯಗಳಿವೆ.

ಕಾಫಿಯ ಜತೆಗೆ ವಿಭಿನ್ನ ರುಚಿಯ ಪಾನೀಯಗಳು ಮತ್ತು ಸಿಹಿತಿನಿಸುಗಳನ್ನೂ ಸವಿಯಬಹುದು. ಕೋರಮಂಗಲದ ಮಳಿಗೆಯಲ್ಲಿ ವಿಶೇಷವಾಗಿ ಆರಂಭಿಸಿರುವ ಸಾಫ್ಟ್‌ ಸರ್ವ್‌ ಐಸ್‌ಕ್ರೀಮ್‌ ಕೌಂಟರ್‌ ಮತ್ತೊಂದು ಆಕರ್ಷಣೆಯಾಗಿದೆ. ಇಲ್ಲಿ ವಾರವಿಡೀ ವಿಭಿನ್ನ ರುಚಿಯ ಸಾಫ್ಟ್‌ ಸರ್ವ್‌ ಲಭ್ಯವಿರುತ್ತದೆ.

Untitled Design - 2026-11-03T143253.417

ಕೆಲಸಕ್ಕೂ ಸ್ನೇಹಿತರ ಭೇಟಿಗೂ ಸೂಕ್ತ ತಾಣ

ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರಿನ ಕಾಫಿ ಸಂಸ್ಕೃತಿಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಇಂದಿನ ಕೆಫೆಗಳು ಕೇವಲ ಕಾಫಿ ಕುಡಿಯುವ ಸ್ಥಳಗಳಾಗಿ ಉಳಿದಿಲ್ಲ. ಅವು ಕೆಲಸ ಮಾಡುವ ಸ್ಥಳ, ಸ್ನೇಹಿತರ ಭೇಟಿಯ ತಾಣ, ಪುಸ್ತಕ ಓದುವ ಮೂಲೆ, ಸೃಜನಶೀಲ ಚಟುವಟಿಕೆಗಳ ಕೇಂದ್ರ ಮತ್ತು ಸಾಮಾಜಿಕ ಸಂಪರ್ಕದ ವೇದಿಕೆಗಳಾಗಿಯೂ ರೂಪುಗೊಂಡಿವೆ.

ಕೋರಮಂಗಲದ ಬೀನ್ಲೋರ್‌ ಎರಡು ಮಹಡಿಗಳಲ್ಲಿ ವಿಭಿನ್ನ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಕೆಳಮಹಡಿಯು ಉದ್ಯಾನ ಮತ್ತು ಹೊರಾಂಗಣ ಆಸನ ವ್ಯವಸ್ಥೆಯೊಂದಿಗೆ ಆಹಾರ, ಕಾಫಿ ಹಾಗೂ ಸ್ನೇಹಿತರೊಂದಿಗಿನ ಮಾತುಕತೆಗೆ ಮೀಸಲಾಗಿದೆ. ಇಲ್ಲಿ ಲ್ಯಾಪ್‌ಟಾಪ್‌ ಬಳಸಿ ಕೆಲಸ ಮಾಡುವುದಕ್ಕೆ ಅವಕಾಶವಿಲ್ಲ. ಮೇಲ್ಮಹಡಿಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಸೂಕ್ತ ಆಸನಗಳು ಮತ್ತು ಖಾಸಗಿ ಸಭೆಗಳಿಗೆ ಅನುಕೂಲವಾಗುವ ವ್ಯವಸ್ಥೆಗಳಿವೆ.

ಹೀಗಾಗಿ ಬೆಳಗಿನ ಕಾಫಿಯಿಂದ ಹಿಡಿದು ಸ್ನೇಹಿತರೊಂದಿಗೆ ಮಧ್ಯಾಹ್ನದ ಊಟ, ಅಥವಾ ಮೇಲ್ಮಹಡಿಯಲ್ಲಿ ಕುಳಿತು ಕೆಲಸ ಮಾಡುವವರೆಗೆ ವಿಭಿನ್ನ ಅಗತ್ಯಗಳಿಗೆ ಈ ಕೆಫೆ ಹೊಂದಿಕೊಳ್ಳುತ್ತದೆ. ಹಳೆಯ ಮನೆಯ ವಾತಾವರಣ, ಹಸಿರು ಪರಿಸರ, ತಾಜಾ ಆಹಾರ ಮತ್ತು ವಿಶೇಷ ಕಾಫಿಯ ಸಂಯೋಜನೆಯೊಂದಿಗೆ ಬೀನ್ಲೋರ್‌ ಕೋರಮಂಗಲದ ಕೆಫೆ ಸಂಸ್ಕೃತಿಗೆ ಹೊಸ ಮೆರುಗು ನೀಡುತ್ತಿದೆ.

ಮಾಹಿತಿಗಾಗಿ

ಪ್ರತಿ ಬಾರಿ ಝೊಮೆಟೊ ನೀಡುವ ಬೆಸ್ಟ್‌ ರೆಸ್ಟೋರೆಂಟ್‌ ಅವಾರ್ಡ್‌ ಪೈಕಿ 2025ರ ಸಾಲಿನಲ್ಲಿ ಬೀನ್ಲೋರ್‌ ಕಾಫಿ ರೋಸ್ಟೆರ್‌ ಸ್ಥಾನ ಗಿಟ್ಟಿಸಿಕೊಂಡಿದೆ. ಬೆಂಗಳೂರಿನ ಪ್ರಮುಖ 51 ಕಾಫಿ ಸ್ಪಾಟ್‌ಗಳಲ್ಲಿ ಪೈಕಿ ಪ್ರಮುಖ ಸಾಲಿನಲ್ಲಿ ಬೀನ್ಲೋರ್‌ ಗುರುತಿಸಿಕೊಂಡಿದೆ.

ವಿಳಾಸ:

544, 8ನೇ ಮುಖ್ಯ ರಸ್ತೆ, 8ನೇ ಬ್ಲಾಕ್‌, ಕೋರಮಂಗಲ, ಬೆಂಗಳೂರು – 560034.

ಸಂಪರ್ಕ ಸಂಖ್ಯೆ: 080 6945 1516