Monday, February 23, 2026
Monday, February 23, 2026

ಕನಸಿನಿಂದ ಸಾಧನೆಯವರೆಗಿನ ಅಸಾಮಾನ್ಯ ಪಯಣ.. ಸಾಧನಾ ಪಬ್ಲಿಕ್ ಸ್ಕೂಲ್

ವಿಜಯನಗರ ಜಿಲ್ಲೆಯ ಹೃದಯ ಭಾಗದಲ್ಲಿ ನೆಲೆಗೊಂಡಿರುವ ಹೊಳಲು ಎಂಬ ಶಾಂತ, ಸರಳ ಗ್ರಾಮ ಇಂದು ಶಿಕ್ಷಣದ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಕಾರಣ – ’ಸಾಧನಾ ಶಾಲೆ’ ಅಥವಾ ಸಾಧನಾ ಪಬ್ಲಿಕ್ ಸ್ಕೂಲ್. ಗ್ರಾಮೀಣ ಹಿನ್ನೆಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಕನಸಿನಿಂದ ಆರಂಭವಾದ ಈ ಶಾಲೆ, ಇಂದು ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿದ್ಯಾಮಂದಿರವಾಗಿ ಬೆಳೆದಿದೆ. ಪ್ರವಾಸಿ ಪ್ರಪಂಚದ ಎಜುಕೇಶನಲ್ ಟೂರಿಸಂ ಪರಿಕಲ್ಪನೆಗೆ ತಕ್ಕಂಥ ಪ್ರೇರಣಾದಾಯಕ ಕಥೆ ಇದಾಗಿದೆ.

ಹೊಳಲು ಗ್ರಾಮದಲ್ಲಿ ಶಿಕ್ಷಣದ ಸೌಲಭ್ಯಗಳು ಕೆಲವರ್ಷಗಳ ಹಿಂದೆ ಬಹಳ ಅಲ್ಪವಾಗಿದ್ದವು. ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ದೂರದ ಪಟ್ಟಣಗಳಿಗೆ ತೆರಳಬೇಕಾಗುತ್ತಿತ್ತು. ಉನ್ನತ ಶಿಕ್ಷಣ ಮಾತ್ರವಲ್ಲ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯಲು ಕೂಡ ಪರ ಊರಿಗೆ ಹೋಗಬೇಕಿತ್ತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇದು ದೊಡ್ಡ ಸವಾಲಾಗಿತ್ತು. ಇದೇ ಊರಿನಲ್ಲಿ ಒಂದು ಗುಣಮಟ್ಟದ ಶಾಲೆ ಇರಬೇಕು ಎಂಬುದು ಇಡೀ ಊರಿನ ಕನಸಾಗಿತ್ತು.

ಈ ದೀರ್ಘ ಕಾಲದ ಕನಸನ್ನು ನನಸು ಮಾಡುವ ಸಲುವಾಗಿ 2010ರಲ್ಲಿ ಕೆಲವೇ ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಶೈಕ್ಷಣಿಕ ಸಂಸ್ಥೆಯೇ ಸಾಧನಾ ಶಾಲೆ. ಊರಿನ ಕನಸನ್ನು ನನಸು ಮಾಡಿದ ಧೀಮಂತ ವ್ಯಕ್ತಿಯ ಹೆಸರು ಅಜಯ್ ಪೂಜಾರ್.

ಹುಟ್ಟೂರಿನಲ್ಲಿ ತಾವು ಪಟ್ಟ ಬವಣೆ ತಮ್ಮ ಮುಂದಿನ ತಲೆಮಾರು ಅನುಭವಿಸಬಾರದೆಂದು ಹಟಹೊತ್ತು ಪ್ರಾರಂಭಿಸಿದ ಶಾಲೆ ಈಗಾಗಲೇ ಹದಿನಾರು ವರ್ಷಗಳನ್ನು ಪೂರೈಸಿ ಹೆಮ್ಮರವಾಗಿ ಬೆಳೆದಿದೆ. ಸಹಸ್ರಾರು ವಿದ್ಯಾರ್ಥಿಗಳನ್ನು ಈ ರಾಜ್ಯಕ್ಕೆ ಮತ್ತು ದೇಶಕ್ಕೆ ಕೊಡುಗೆಯನ್ನಾಗಿ ನೀಡಿದೆ. ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ತಲೆ ಎತ್ತಿ ನಿಂತಿರುವ ಸಾಧನಾ ಪಬ್ಲಿಕ್‌ ಸ್ಕೂಲ್‌ ಹೊಳಲು ಗ್ರಾಮಕ್ಕೆ ಮಾತ್ರವಲ್ಲ ವಿಜಯನಗರ ಜಿಲ್ಲೆಗೇ ಹೆಮ್ಮೆ ಎನಿಸಿಕೊಂಡಿದೆ.

ಇದನ್ನೂ ಓದಿ: ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆ

ಹೊಳಲು ಭಾಗದ ಜನರು ಉತ್ತಮ ಶಿಕ್ಷಣಕ್ಕಾಗಿ ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಭಾಗಗಳಿಗೆ ಪ್ರತಿದಿನವೂ ಹೋಗಿ ಬರಬೇಕಿತ್ತು. ಅಂದಿಗೆ 40ಕಿಮೀ ವ್ಯಾಪ್ತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಯಾವುದೇ ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ಆಗ ಮಕ್ಕಳ ಶಿಕ್ಷಣಕ್ಕೆ ಆಗುತ್ತಿದ್ದ ತೊಂದರೆಗಳನ್ನು ಅರಿತು, ಅನುಭವಿಸಿದ್ದ ಅಜಯ್‌ ಇವುಗಳಿಗೆಲ್ಲ ಉತ್ತರವಾಗಿ ಆರಂಭಿಸಿದ್ದು ʻಸಾಧನಾ ಪಬ್ಲಿಕ್‌ ಸ್ಕೂಲ್‌ʼ. ತಮ್ಮೂರಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಕನಸಿನೊಂದಿಗೆ ಆರಂಭಿಸಿದ್ದ ಶಾಲೆ ಈಗ ಹೊಳಲು ಸೇರಿ ಸುತ್ತಲಿನ 45-50 ಹಳ್ಳಿಯ ಮಕ್ಕಳೂ, ಹಾವೇರಿ, ದಾವಣಗೆರೆ, ಹುಬ್ಬಳ್ಳಿಯ ಮಕ್ಕಳಿಗೂ ಶಿಕ್ಷಣ ನೀಡುತ್ತಿದೆ.

Untitled design (32)

ಶಿಕ್ಷಣ ಸಂಸ್ಥೆ ಆರಂಭದಿಂದ ಇಂದಿನವರೆಗೆ

ಮೊದಲ ವರ್ಷದಲ್ಲಿ ಕೇವಲ ಮೂರು ತರಗತಿಗಳೊಂದಿಗೆ ಪ್ರಾರಂಭವಾದ ಈ ಶಾಲೆ, ಬಾಡಿಗೆ ಕಟ್ಟಡದಲ್ಲೇ ತನ್ನ ಪಯಣ ಆರಂಭಿಸಿತ್ತು. ಆದರೆ ಆ ಕಟ್ಟಡದ ಗೋಡೆಗಳಿಗಿಂತ ಅಲ್ಲಿ ಚಿಗುರಿದ್ದ ಕನಸುಗಳು ದೊಡ್ಡವು. ಅಜಯ್ ಪೂಜಾರ್ ಅವರ ಅವಿರತ ಶ್ರಮ ಮತ್ತು ದೂರದೃಷ್ಟಿಯ ಫಲವಾಗಿ ಸಾವಿರಾರು ವಿದ್ಯಾರ್ಥಿಗಳಿರುವ ಪ್ರೌಢಶಾಲೆ ಮಟ್ಟದ ಶಿಕ್ಷಣ ಕೊಡುವ ವಿದ್ಯಾಸಂಸ್ಥೆಯಾಗಿ ಬೆಳೆದು ನಿಂತಿದೆ ಸಾಧನಾ ಶಾಲೆ. ಇಡೀ ಜಿಲ್ಲೆಗೆ ಮಾದರಿಯಾಗಿ ಕಂಗೊಳಿಸುತ್ತಿದೆ. ಹೌದು, ಅಜಯ್‌ ಪೂಜಾರ್‌ ಅವರು 2009-10ರಲ್ಲಿ ತಮ್ಮ ಶಾಲೆಯ ಕನಸಿಗೆ ಅಡಿಗಲ್ಲು ಹಾಕಿದ್ದರು. ಸಾಧನಾ ಪಬ್ಲಿಕ್‌ ಸ್ಕೂಲ್‌ ಹೆಸರಿನ ಮೂಲಕ ಈ ಕನಸು ಚಿಗುರೊಡೆಯಿತು. ಆಗ ಇದ್ದದ್ದು ಸ್ವಂತ ಬಿಲ್ಡಿಂಗ್‌ನಲ್ಲಿ ಪುಟ್ಟ ಶಾಲೆ ಮತ್ತು ದೊಡ್ಡ ಸಂಕಲ್ಪ ಮಾತ್ರ. ನೇಮು ಫೇಮುಗಳೆರಡೂ ಇಲ್ಲದೆ ಆರಂಭವಾದ ಶಾಲೆಯದು. ಸ್ಟೇಟ್‌ ಬೋರ್ಡ್‌ನಡಿಯಲ್ಲಿ ಶಿಕ್ಷಣ ನೀಡಲು ಆರಂಭಿಸಿತ್ತು. ಎರಡಂಕಿಯಷ್ಟೇ ಮಕ್ಕಳ ಸಂಖ್ಯೆ ಇದ್ದರೂ ಅಜಯ್‌ ತಮ್ಮ ಕನಸಿನ ಶಾಲೆಯನ್ನು ಮುನ್ನಡೆಸಿದ್ದರು. ನಂತರ 2013ರಲ್ಲಿ ಸಿಕ್ಕ ಸಿಬಿಎಸ್‌ಸಿ ಪರ್ಮಿಷನ್‌ ಮತ್ತು ಶಿಕ್ಷಣದ ಕುರಿತು ಮಕ್ಕಳು ಮತ್ತು ಪೋಷಕರ ಮೌತ್‌ ಟು ಮೌತ್‌ ಪ್ರಚಾರ ಸಂಸ್ಥೆಯನ್ನು ಸುತ್ತಲಿನ ಹಳ್ಳಿ ಮತ್ತು ನಗರಗಳ ಜನರಿಗೆ ಪರಿಚಯಿಸಿತು. ಎರಡಂಕಿಯಲ್ಲಿದ್ದ ಮಕ್ಕಳ ಸಂಖ್ಯೆ ಈಗ ನಾಲ್ಕು ಅಂಕಿಗೇರಿದೆ. ವಾಹನ ಸೌಲಭ್ಯವನ್ನು ನೀಡಿದ್ದು ಸುತ್ತಲಿನ ಹಳ್ಳಿಗಳ ಮಕ್ಕಳು ಓಡಾಡಲು ಸಹಾಯಕವಾಗಿದೆ. ಪ್ರೀ-ಪ್ರೈಮರಿ ಇಂದ ಹಿಡಿದು ಪ್ರೌಢಶಾಲೆಯವರೆಗಿನ ತರಗತಿಗಳನ್ನು ಹೊಂದಿರುವ ಈ ಸಂಸ್ಥೆ, ಕ್ರಮೇಣ ಈಗ ತನ್ನದೇ ಆದ ವಿಶಾಲ ಕಟ್ಟಡ, ಆಧುನಿಕ ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಮತ್ತು ಗ್ರಂಥಾಲಯವನ್ನು ಹೊಂದಿದೆ. ಎಕರೆಗಟ್ಟಲೆ ವಿಸ್ತೀರ್ಣದ ಆಟದ ಮೈದಾನವನ್ನೇ ಹೊಂದಿದೆ ಎಂದರೆ ಶಾಲೆಯ ಗಾತ್ರವನ್ನು ಓದುಗರೇ ಅಂದಾಜಿಸಲಿ. ಹೊಳಲು ಎಂಬ ಚಿಕ್ಕ ಊರಿನಲ್ಲಿ ಇಂಥ ಸುವ್ಯವಸ್ಥಿತ ವಿಶಾಲವಾದ ಶಾಲೆಯನ್ನು ತೆರೆಯಲು ಕೇವಲ ಹಣಬಲ ಅಥವಾ ಹಂಬಲ ಇದ್ದರೆ ಸಾಲದು.. ದೂರದೃಷ್ಟಿ ಮತ್ತು ಯೋಜನಾಶಕ್ತಿಯೂ ಬೇಕು. ಅದು ಅಜಯ್ ಅವರಲ್ಲಿ ಇರುವುದರಿಂದಲೇ ಇಂಥ ಶಾಲೆಯ ನಿರ್ಮಾಣವಾಗಿದೆ.

‘ಸಾಧನೆ’ ಎಂಬ ಹೆಸರಿನ ಹಿಂದಿನ ಅರ್ಥ

“ಸಾಧನಾ” ಎಂಬ ಹೆಸರು ಯಾದೃಚ್ಛಿಕವಲ್ಲ. ಇದು ಸಾಧನೆಗೆ ದಾರಿ ತೋರಿಸುವ ಸಂಸ್ಥೆಯಾಗಬೇಕು ಎಂಬ ಆಶಯದಿಂದ ಇಡಲಾದ ಹೆಸರು. ಶಿಕ್ಷಣವು ಕೇವಲ ಪಾಠಪುಸ್ತಕಗಳಲ್ಲ, ಬದುಕಿನ ಮೌಲ್ಯಗಳನ್ನು ಕಲಿಸಬೇಕು ಎಂಬ ಧ್ಯೇಯದಿಂದ ಸಾಧನಾ ಶಾಲೆ ತನ್ನ ಪಠ್ಯಕ್ರಮ ಮತ್ತು ಚಟುವಟಿಕೆಗಳನ್ನು ರೂಪಿಸಿಕೊಂಡಿದೆ. ವಿದ್ಯಾಸಂಸ್ಥೆಯ ಮುಖ್ಯಸ್ಥರೂ ಮತ್ತು ಸ್ಥಾಪಕರೂ ಆಗಿರುವ ಅಜಯ್ ಪೂಜಾರ್ ಹೇಳುವುದೂ ಒಂದೇ ಮಾತು.- “ಗ್ರಾಮೀಣ ಮಕ್ಕಳಿಗೆ ನಗರ ಮಟ್ಟದ ಶಿಕ್ಷಣ ಕೊಡಬೇಕು. ಅವರಲ್ಲಿರುವ ಸಾಮರ್ಥ್ಯ ಹೊರತೆಗೆದು ಸಮಾಜಕ್ಕೆ ಒಳ್ಳೆಯ ನಾಗರಿಕರನ್ನಾಗಿಸಬೇಕು” ಎಂಬುದು ನಮ್ಮ ಗುರಿ.”

Untitled design (35)

ಬಟ್ಟೆ-ಪುಸ್ತಕದ ಹೆಸರಿನಲ್ಲಿ ಇಲ್ಲಿ ಸುಲಿಗೆ ಇಲ್ಲ

ಸಾಮಾನ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಯೂನಿಫಾರ್ಮ್ ಮತ್ತು ಪುಸ್ತಕಗಳನ್ನು ಶಾಲೆಯಲ್ಲಿಯೇ ಕೊಳ್ಳಬೇಕು. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ. ಸಾಧನಾ ಪಬ್ಲಿಕ್‌ ಸ್ಕೂಲ್‌ನಲ್ಲಿ ಈ ಕಟ್ಟಳೆಗಳಿಲ್ಲ. ನಿಮಗೆ ಉಚಿತವೆನಿಸಿದಲ್ಲಿ ಬಟ್ಟೆ-ಪುಸ್ತಕಗಳನ್ನು ಕೊಂಡುಕೊಳ್ಳಲು ಅವಕಾಶವಿದೆ. ಆಯಾ ತರಗತಿಯ ಪಠ್ಯಗಳನ್ನೂ ಮಕ್ಕಳು ಹೊರಗಿನಿಂದ ಕೊಂಡುಕೊಳ್ಳಬಹುದು ಅಥವಾ ಪೋಷಕರ ಇಷ್ಟವಿದ್ದರೆ ಸಂಸ್ಥೆಯಿಂದಲೇ ಅವುಗಳನ್ನು ಕೊಂಡುಕೊಳ್ಳಬಹುದು. ಈ ಕುರಿತು ಅಜಯ್‌ ಪೂಜಾರ್‌ ಪೋಷಕರಿಗೆ ತಮ್ಮ ಹಣ ಎಲ್ಲಿ ವ್ಯಯಿಸಬೇಕು ಎನ್ನುವುದು ಅವರವರ ಇಚ್ಛೆ ಎನುತ್ತಾರೆ.

ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ

ಸ್ವತಃ ಬಿಎಸ್‌ಸಿ ಮತ್ತು ಎಂಬಿಎ ಪದವಿಧರರಾಗಿರುವ ಅಜಯ್‌ ಪೂಜಾರ್‌ ಶಾಲೆಯಲ್ಲಿನ ದಿನನಿತ್ಯದ ತರಗತಿಗಳ ಬಗ್ಗೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಸುತ್ತಲೂ 45-50ಹಳ್ಳಿಗಳಿಂದ ಮಕ್ಕಳು ಬರುವುದರಿಂದ ಓಡಾಟಕ್ಕೆ 11 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸ್ಮಾರ್ಟ್‌ ಬೋರ್ಡ್‌, ತರಭೇತಿ ಪಡೆದ ಶಿಕ್ಷಕರ ವರ್ಗ, ಸುಂದರ ಮತ್ತು ಪ್ರಶಾಂತ ಕ್ಯಾಂಪಸ್‌, ಮೂಲ ಸೌಕರ್ಯಗಳು ಇಷ್ಟಿದ್ದರೂ ಈ ಶಾಲೆಯಲ್ಲಿ ನಗರಗಳ ಶಾಲೆಗಳಿಗೆ ಹೋಲಿಸಿದರೆ ಹೆಚ್ಚೂಕಮ್ಮಿ ಅರ್ಧದಷ್ಟು ಮಾತ್ರ ಶುಲ್ಕ! ಇದು ಸಂಸ್ಥೆಯ ಮೇಲೆ ಪೋಷಕರ ಅಭಿಮಾನಕ್ಕೆ ಕಾರಣವಾಗಿದೆ.

ಡೆಡಿಕೇಟೆಡ್ ಇಂಟರ್ ನೆಟ್!

ಕೇವಲ 49 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಸಾಧನಾ ಪಬ್ಲಿಕ್‌ ಸ್ಕೂಲ್‌ ಇಂದು 1100 ವಿದ್ಯಾರ್ಥಿಗಳ ಶಿಕ್ಷಣಧಾಮವಾಗಿದೆ. 20 ಎಕರೆ ವ್ಯಾಪ್ತಿಗೆ ಹಬ್ಬಿಕೊಂಡಿದ್ದು, ಮೂರು ಎಕರೆಯಷ್ಟು ಪ್ರದೇಶ ಮೈದಾನಕ್ಕಾಗಿ ಮೀಸಲಾಗಿದೆ. 35 ಕ್ಲಾಸ್‌ ರೂಮ್‌ಗಳಿವೆ. ಫಿಸಿಕ್ಸ್‌ ಲ್ಯಾಬ್‌, ಕೆಮಿಸ್ಟ್ರಿ ಲ್ಯಾಬ್‌ಗಳಿವೆ. ಇಂಟರ್‌ನೆಟ್‌ ವ್ಯವಸ್ಥೆ ಇಲ್ಲದ ಸ್ಥಳವಾದರೂ ಡೆಡಿಕೇಟೆಡ್‌ ಲೈನ್‌ಗಳನ್ನು ಅಳವಡಿಸುವ ಮೂಲಕ ಕಂಪ್ಯೂಟರ್‌ ಲ್ಯಾಬ್‌ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ. ಶಾಲೆಯಲ್ಲಿ ಒಟ್ಟು 65 ಜನರ ಶಿಕ್ಷಕ ಸಿಬ್ಬಂದಿ ಇದೆ. ಉಳಿದಂರೆ ಸ್ವಚ್ಚತಾ ಸಿಬ್ಬಂದಿ, ಚಾಲಕರು ಸೇರಿ 50 ಜನರ ನಾನ್‌ ಟೀಚಿಂಗ್‌ ಸಿಬ್ಬಂದಿ ಇಲ್ಲಿದೆ. ಹಾಗಾಗಿ ಎಲ್ಲಾ ವಿಭಾಗದ ನಿರ್ವಹಣೆಯೂ ಇಲ್ಲಿ ಸುಸಜ್ಜಿತವಾಗಿರುತ್ತದೆ. ಶಾಲೆಯ ಸುತ್ತಲೂ ಮರಗಿಡಗಳೇ ಕಣ್ಣಿಗೆ ತಂಪೆರೆಯುತ್ತವೆ. ವಾಹನಗಳ ಸದ್ದು ಹತ್ತಿರಕ್ಕೂ ಸುಳಿಯುವುದಿಲ್ಲ. ಪ್ರಶಾಂತ ವಾತಾವರಣ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ಶಕ್ಯಸ್ಥಳ ಇಲ್ಲಿ ಆವರಿಸಿದೆ.

Untitled design (33)

ಹಾಸ್ಟೆಲ್‌ ಸೌಲಭ್ಯ

ಕ್ಯಾಂಪಸ್‌ನಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ವ್ಯವಸ್ಥೆ ಇದೆ. ಈಗಾಗಲೇ ಪ್ರತಿ ಹಾಸ್ಟೆಲ್‌ಗಳಲ್ಲೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರಿಗೂ ಮನೆಯ ಅಡುಗೆ ರುಚಿ ನೆನೆಸುವ ಆಹಾರ ಮೆನು ಇದ್ದು, ಇಲ್ಲಿನ ಸಿಬ್ಬಂದಿಯೂ ಆತ್ಮೀಯವಾಗಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಇಲ್ಲಿಯೂ ಮಕ್ಕಳಿಗೆ ಟ್ಯೂಟರ್‌ಗಳು ತರಬೇತಿ ನೀಡುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೂ ಇದು ಉತ್ತಮ ಆಯ್ಕೆಯಾಗಿದೆ. ಮಕ್ಕಳು ಹಾಸ್ಟೆಲ್‌ನಲ್ಲಿಯೇ ಇರಬೇಕು ಎನ್ನುವ ಒತ್ತಡಗಳು ಇಲ್ಲಿಲ್ಲ. ಆದರೂ ಪೋಷಕರೇ ಸ್ವ ಇಚ್ಛೆಯಿಂದ ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸುತ್ತಿರುವುದು ವಿಶೇಷ.

ಪಾಠಕ್ಕಿಂತ ಹೆಚ್ಚು – ವ್ಯಕ್ತಿತ್ವ ನಿರ್ಮಾಣ

ಸಾಧನಾ ಶಾಲೆಯ ವಿಶೇಷತೆ ಎಂದರೆ, ಇಲ್ಲಿ ಶಿಕ್ಷಣವು ಅಂಕಗಳಿಗಷ್ಟೇ ಸೀಮಿತವಲ್ಲ. ಕ್ರೀಡೆ, ಸಂಗೀತ, ನಾಟಕ, ಯೋಗ, ಭಾಷಣ ಸ್ಪರ್ಧೆಗಳು, ವಿಜ್ಞಾನ ಪ್ರದರ್ಶನಗಳು – ಹೀಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಳಿಸುವ ಅನೇಕ ವೇದಿಕೆಗಳನ್ನು ಶಾಲೆ ಒದಗಿಸಿದೆ. ವಾರ್ಷಿಕೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ವಿಜ್ಞಾನ ದಿನ ಇತ್ಯಾದಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ಸಕ್ರಿಯವಾಗಿ ನಿರ್ವಹಿಸುತ್ತಾರೆ. ಇದರಿಂದ ನಾಯಕತ್ವ ಗುಣ, ಆತ್ಮವಿಶ್ವಾಸ ಮತ್ತು ತಂಡದ ಮನೋಭಾವ ಬೆಳೆಯುತ್ತದೆ.

ಸಮಾಜಮುಖಿ ಕಾರ್ಯಗಳು

ಶಾಲೆ ಕೇವಲ ಶಿಕ್ಷಣ ನೀಡುವುದಲ್ಲ; ಸಮಾಜದ ಜೊತೆ ನಂಟು ಬೆಳೆಸಿದೆ. ಪರಿಸರ ಸಂರಕ್ಷಣೆ, ಸ್ವಚ್ಛತಾ ಅಭಿಯಾನ, ವೃಕ್ಷಗಳನ್ನು ಬೆಳೆಸುವ ಅಭಿಯಾನ ಮುಂತಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಲಾಗಿದೆ. ವನ ಮಹೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಎರಡು ವರ್ಷಗಳಿಗೊಮ್ಮೆ ವಾರ್ಷಿಕೋತ್ಸವ ಆಚರಣೆ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕವೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.

ಕಂಪ್ಯೂಟರ್‌ ತರಬೇತಿ

ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡುವ ನಿಟ್ಟಿನಲ್ಲಿಯೂ ಸಂಸ್ಥೆ ಹಿಂದುಳಿದಿಲ್ಲ. 40 ಕಂಪ್ಯೂಟರ್‌ಗಳನ್ನು ಒಳಗೊಂಡ ಸುಸಜ್ಜಿತ ಕಂಪ್ಯೂಟರ್‌ ಲ್ಯಾಬ್‌ ಇಲ್ಲಿದೆ. ಒಂದು ಬ್ಯಾಚ್‌ಗೆ 40 ಮಕ್ಕಳಂತೆ ಪ್ರತಿದಿನ ಒಟ್ಟು ಆರು ಬ್ಯಾಚ್‌ಗಳಿಗೆ ಇಲ್ಲಿ ಕಂಪ್ಯೂಟರ್‌ ತರಬೇತಿ ನೀಡಲಾಗುತ್ತಿದೆ. ನುರಿತ ಕಂಪ್ಯೂಟರ್‌ ತರಬೇತುದಾರರ ಮೂಲಕ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತಿದೆ.

Untitled design (34)

ಕೆರಿಯರ್‌ ಕಟ್ಟಿಕೊಡುವ ಕಾರ್ಯ

ಶಾಲೆಯಲ್ಲಿ ದೊಡ್ಡ ಆಡಿಟೋರಿಯಂ ಇದ್ದು, ಮಕ್ಕಳಿಗೆ ಗೆಸ್ಟ್‌ ಲೆಕ್ಚರ್‌ಗಳ ಮೂಲಕ ಕೆರಿಯರ್‌ ಗೈಡೆನ್ಸ್‌ ಮಾಡಲಾಗುತ್ತದೆ. ಸಿಬಿಎಸ್‌ಸಿ ಶಿಕ್ಷಣದಲ್ಲಿ ಅವರ ಅಯ್ಕೆಯಲ್ಲಿನ ಗೊಂದಲಗಳನ್ನು ನಿವಾರಿಸಲು ತರಗತಿಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳ ಮನೋಬಲ ಗಟ್ಟಿಯಾಗಿಸಲು ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವುದು, ತಜ್ಞರ ಮಾರ್ಗದರ್ಶನದಲ್ಲಿ ಯೋಗ ಮತ್ತು ಧ್ಯಾನಗಳನ್ನು ಮಾಡಿಸುವುದು ಹೀಗೆ ವೈವಿಧ್ಯಮಯ ಕಾರ್ಯಗಳನ್ನು ನಿಯಮಿತವಾಗಿ ಆಯೋಜಿಸುವುದು ವಿಶೇಷ.

ಶಿಕ್ಷಕರ ಪಾತ್ರ

ಒಂದು ಶಾಲೆಯ ಯಶಸ್ಸಿನ ಹಿಂದಿನ ಶಕ್ತಿ – ಅದರ ಶಿಕ್ಷಕರು. ಸಾಧನಾ ಶಾಲೆಯ ಶಿಕ್ಷಕ ವೃಂದವು ಅನುಭವ ಮತ್ತು ಉತ್ಸಾಹದ ಸಮನ್ವಯವಾಗಿದೆ. ಪ್ರತಿಯೊಬ್ಬ ಶಿಕ್ಷಕರೂ ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಗಮನ ಹರಿಸುತ್ತಾರೆ.

ಮಕ್ಕಳಲ್ಲಿ ಇರುವ ವಿಭಿನ್ನ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸುವ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತದೆ. ಪೋಷಕರೊಂದಿಗೆ ನಿಯಮಿತ ಸಭೆಗಳು ನಡೆಸಿ, ವಿದ್ಯಾರ್ಥಿಗಳ ಪ್ರಗತಿ ಬಗ್ಗೆ ಚರ್ಚಿಸಲಾಗುತ್ತದೆ.

ಸಾಧನೆಗಳ ಮುತ್ತುಗಳು

ಶಾಲೆಯ ವಿದ್ಯಾರ್ಥಿಗಳು ಹಲವಾರು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ, ವಿಜ್ಞಾನ ಸ್ಪರ್ಧೆಗಳಲ್ಲಿ ಮತ್ತು ಭಾಷಣ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದು ಕೇವಲ ಬಹುಮಾನಗಳ ಕಥೆಯಲ್ಲ; ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಅಪಾರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಆರ್ಥಿಕವಾಗಿ ‌ಹಿಂದುಳಿದವರು ವಿದ್ಯಾವಂತರಾದರೆ ಮಾತ್ರ ಆ ಮನೆ ಸಮೃದ್ಧಿ ಹೊಂದುತ್ತದೆ: ಸುಕುಮಾರ್‌ ಶೆಟ್ಟಿ

ಸವಾಲುಗಳನ್ನು ಗೆದ್ದ ಸಾಧನೆ

ಗ್ರಾಮೀಣ ಶಾಲೆಯಾಗಿ ಆರಂಭವಾದಾಗ ಹಲವು ಸವಾಲುಗಳನ್ನು ಎದುರಿಸಬೇಕಾಯಿತು – ಆರ್ಥಿಕ ಕೊರತೆ, ಮೂಲಸೌಕರ್ಯದ ಅಭಾವ, ಪೋಷಕರ ವಿಶ್ವಾಸ ಗಳಿಸುವ ಅಗತ್ಯ. ಆದರೆ ನಿರಂತರ ಪರಿಶ್ರಮ ಮತ್ತು ನಿಷ್ಠೆಯಿಂದ ಆ ಸವಾಲುಗಳನ್ನು ಮೀರಿ ಮುಂದೆ ಸಾಗಿತು ಸಾಧನಾ ಶಾಲೆ. ಕೋವಿಡ್ ಮಹಾಮಾರಿಯ ಅವಧಿಯಲ್ಲಿ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿ ಮಕ್ಕಳ ಶಿಕ್ಷಣ ನಿರಂತರವಾಗಿರಲು ಕ್ರಮ ಕೈಗೊಳ್ಳಲಾಯಿತು. ಇದು ಶಾಲೆಯ ಮನೋಬಲ ಹಾಗೂ ಕಾಳಜಿಗೆ ಉದಾಹರಣೆ.

ಮುಂದಿನ ಕನಸುಗಳು

ಸಾಧನಾ ಶಾಲೆಯ ಮುಂದಿನ ಗುರಿ – ಪಿಯು ಕಾಲೇಜು ಪ್ರಾರಂಭಿಸುವುದು ಮತ್ತು ವೃತ್ತಿಪರ ತರಬೇತಿ ಕೇಂದ್ರವನ್ನು ಸ್ಥಾಪಿಸುವುದು. ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ಕೌಶಲ್ಯಗಳನ್ನು ಕಲಿಸಲು ಯೋಜನೆ ರೂಪಿಸಲಾಗಿದೆ. ಡಿಜಿಟಲ್ ಲ್ಯಾಬ್‌ಗಳನ್ನು ವಿಸ್ತರಿಸಿ, ರೋಬೋಟಿಕ್ಸ್ ಮತ್ತು ಕೋಡಿಂಗ್ ತರಗತಿಗಳನ್ನು ಆರಂಭಿಸುವ ಉದ್ದೇಶವೂ ಇದೆ. ಹೀಗಾಗಿ ಗ್ರಾಮದಲ್ಲೇ ಭವಿಷ್ಯದ ತಂತ್ರಜ್ಞಾನ ಶಿಕ್ಷಣ ಲಭ್ಯವಾಗಲಿದೆ.

ಒಟ್ಟಾರೆ ಪಯಣ – ಪ್ರೇರಣೆಯ ದಾರಿ

ಹೊಳಲು ಗ್ರಾಮದ ಸಾಧನಾ ಶಾಲೆಯ ಪಯಣವು ಕೇವಲ ಒಂದು ಶಿಕ್ಷಣ ಸಂಸ್ಥೆಯ ಕಥೆಯಲ್ಲ; ಅದು ಕನಸು, ಪರಿಶ್ರಮ ಮತ್ತು ಸಮರ್ಪಣೆಯ ಕಥೆ. ಸಣ್ಣ ಗ್ರಾಮದಲ್ಲಿ ಹುಟ್ಟಿದ ಈ ವಿದ್ಯಾಮಂದಿರ ಇಂದು ಅನೇಕ ಕುಟುಂಬಗಳ ಭವಿಷ್ಯವನ್ನು ರೂಪಿಸುತ್ತಿದೆ. ಗ್ರಾಮೀಣ ಭಾರತದಲ್ಲಿ ಶಿಕ್ಷಣದ ಮಹತ್ವವನ್ನು ಸಾಬೀತುಪಡಿಸುವ ಜೀವಂತ ಉದಾಹರಣೆ ಸಾಧನಾ ಶಾಲೆ. “ಸಾಧನೆ” ಎಂಬ ಪದಕ್ಕೆ ನಿಜವಾದ ಅರ್ಥ ನೀಡಿದ ಈ ಶಾಲೆ, ವಿಜಯನಗರದ ಹೆಮ್ಮೆಯ ಬೆಳಕಾಗಿ ಬೆಳಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ

ಫೇಸ್‌ಬುಕ್‌ : https://www.facebook.com/share/17c1QCjWMw/

ಯೂಟ್ಯೂಬ್‌ : https://youtube.com/@sadhanaenglishmediumschool9317?si=xdy4SuGzQawNC12g

ದೂರವಾಣಿ ಸಂಖ್ಯೆ : 8050900922

ವಿಳಾಸ

ಸಾಧನ ಶಾಲೆ

ಹೊಳಲು- 583217

ಹೂವಿನ ಹಡಗಲಿ ತಾಲೂಕು, ವಿಜಯನಗರ ಜಿಲ್ಲೆ, ಕರ್ನಾಟಕ

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

Read Previous

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ: ಪ್ರವಾಸೋದ್ಯಮ ಇಲಾಖೆಯಿಂದ ಗೈಡೆಡ್ ಟೂರ್

Read Next

ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ: ಪ್ರವಾಸೋದ್ಯಮ ಇಲಾಖೆಯಿಂದ ಗೈಡೆಡ್ ಟೂರ್