ಊಟ ಮುಗಿಯಿತು. ಕೈ ತೊಳೆದಾಯಿತು. ಬಿಲ್ ಪಾವತಿಯೂ ಆಯಿತು. ಇನ್ನು ಹೊಟೇಲ್‌ನಿಂದ ಹೊರಡುವುದಷ್ಟೇ ಬಾಕಿ. ಆದರೆ ಕೆಲವರ ಊಟದ ಆಟ ಅಲ್ಲಿಗೆ ಮುಗಿಯುವುದಿಲ್ಲ. ಅವರದೊಂದು ಕೊನೆಯ ಕಾರ್ಯಕ್ರಮವಿರುತ್ತದೆ. ಅದೇ ಸೋಂಫ್ ಸಂಗ್ರಹ!

ಹೊಟೇಲ್‌ಗಳ ಬಿಲ್ಲಿಂಗ್ ಕೌಂಟರ್ ಬಳಿ ಒಂದು ಪುಟ್ಟ ಡಬ್ಬಿ ಇರುತ್ತದೆ. ಅದರೊಳಗೆ ಸೋಂಫ್, ಸಕ್ಕರೆ ಮಿಠಾಯಿ, ಕೆಲವೊಮ್ಮೆ ಲವಂಗ, ಏಲಕ್ಕಿ ಹೀಗೆ ಬಾಯಿಗೆ ಹಾಕಿಕೊಳ್ಳಲು ಒಂದಷ್ಟು ಸಾಮಗ್ರಿಗಳಿರುತ್ತವೆ. ಊಟದ ನಂತರ ಬಾಯಿಯ ರುಚಿ ಬದಲಿಸಿಕೊಳ್ಳಲು ಇಟ್ಟಿರುವ ಈ ಪುಟ್ಟ ವ್ಯವಸ್ಥೆ ಕೆಲವರಿಗೆ ದೊಡ್ಡ ಆಕರ್ಷಣೆ. ಊಟದ ರುಚಿಗಿಂತಲೂ ಕೊನೆಯಲ್ಲಿ ಸಿಗುವ ಈ ಉಚಿತ ಸೋಂಫ್ ಮೇಲೆಯೇ ಅವರ ಕಣ್ಣು!

ಇದನ್ನೂ ಓದಿ: ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳದಿರಿ!

ಒಂದು ಚಿಟಿಕೆ ತೆಗೆದುಕೊಂಡು ಬಾಯಿಗೆ ಹಾಕಿಕೊಂಡರೆ ಮುಗಿಯಿತು. ಆದರೆ ಕೆಲವರಿಗದು ಸಾಕಾಗುವುದಿಲ್ಲ. ಅಂಗೈ ತುಂಬಾ ತುಂಬಿಕೊಳ್ಳುತ್ತಾರೆ. ಮತ್ತೊಂದು ಕೈಯನ್ನೂ ಮುಂದೆ ಮಾಡುತ್ತಾರೆ. ಅಷ್ಟಕ್ಕೂ ಸಮಾಧಾನವಾಗದಿದ್ದರೆ, ಯಾರೂ ನೋಡುತ್ತಿಲ್ಲ ಎಂಬ ಭಾವನೆಯೊಂದಿಗೆ ಜೇಬಿಗೂ ಒಂದಷ್ಟು ವರ್ಗಾಯಿಸುತ್ತಾರೆ. ಕೆಲವರಂತೂ ಮನೆಯಲ್ಲಿರುವ ಮಕ್ಕಳಿಗೂ, ಹೆಂಡತಿಗೂ, ಮೊಮ್ಮಕ್ಕಳಿಗೂ ಎಂದು ಸಣ್ಣ ಪ್ರಮಾಣದ ಪಾರ್ಸೆಲ್ ಮಾಡಿಕೊಂಡೇ ಹೊರಡುತ್ತಾರೆ. ಹೊಟೇಲ್‌ಗೆ ಬಂದದ್ದು ಊಟಕ್ಕೋ ಅಥವಾ ಕಿರಾಣಿ ಅಂಗಡಿಯಿಂದ ದಿನಸಿ ತರಲೋ ಎಂಬ ಅನುಮಾನ ಬರುವಂತಿರುತ್ತದೆ.

Untitled Design (39)

ಇದರಲ್ಲಿ ಇನ್ನೊಂದು ವಿಶೇಷ ವರ್ಗವಿದೆ. ಇವರು ಸೋಂಫ್ ತೆಗೆದುಕೊಳ್ಳುವಾಗ ಬಹಳ ಸಹಜವಾಗಿ ವರ್ತಿಸುತ್ತಾರೆ. ಮೊದಲು ಒಂದೆರಡು ಕಾಳುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ನಂತರ ಸುತ್ತಮುತ್ತ ಒಮ್ಮೆ ಕಣ್ಣಾಡಿಸುತ್ತಾರೆ. ಯಾರೂ ಗಮನಿಸುತ್ತಿಲ್ಲವೆಂದು ಖಚಿತವಾದ ಮೇಲೆ ಮತ್ತೆ ಕೈ ಹಾಕುತ್ತಾರೆ. ಅಂದರೆ ಸೋಂಫ್ ತಿನ್ನುವುದಕ್ಕೂ ಇವರಿಗೆ ಒಂದು ಗುಪ್ತಚರ ಕಾರ್ಯಾಚರಣೆಯ ಅನುಭವ ಬೇಕು! ಒಂದು ಹೊಟೇಲ್‌ನಲ್ಲಿ ಊಟಕ್ಕೆ ಸಾವಿರ ರೂಪಾಯಿ ಖರ್ಚು ಮಾಡುವ ವ್ಯಕ್ತಿಗೆ ಇಂಥ ಉಚಿತ ಸೋಂಫ್‌ಗಾಗಿ ಇಷ್ಟೊಂದು ಆಸೆ ಏಕೆ? ಉಚಿತವಾಗಿ ಸಿಗುವ ವಸ್ತುವನ್ನು ಬಿಡಬಾರದು ಎಂಬ ಮನಸ್ಥಿತಿಯೇ?

ಕೆಲವು ಹೊಟೇಲ್‌ಗಳು ಗ್ರಾಹಕರಿಗೆ ಸೋಂಫ್ ಮತ್ತು ಸಿಹಿ ನೀಡುವುದು ಆತಿಥ್ಯದ ಒಂದು ಭಾಗ. ಅದನ್ನು ಯಾರೂ ನಿರಾಕರಿಸುವುದಿಲ್ಲ. ಗ್ರಾಹಕರಿಗೆ ಖುಷಿ ಕೊಡುವ ಉದ್ದೇಶದಿಂದಲೇ ಈ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಆ ಆತಿಥ್ಯವನ್ನು ದುರುಪಯೋಗಪಡಿಸಿಕೊಳ್ಳುವುದು ಎಷ್ಟು ಸರಿ?

ನಿಜ ಹೇಳಬೇಕೆಂದರೆ, ಸೋಂಫ್ ಕಿಸೆಗೆ ತುಂಬಿಸಿಕೊಳ್ಳುವ ವ್ಯಕ್ತಿಯಿಂದ ಹೊಟೇಲ್‌ಗೆ ದೊಡ್ಡ ನಷ್ಟವಾಗುವುದಿಲ್ಲ. ಆದರೆ ಆ ದೃಶ್ಯ ನೋಡುವವರಿಗೆ ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಒಂದು ಸಣ್ಣ ಅಭಿಪ್ರಾಯ ಮೂಡುತ್ತದೆ. ಕೆಲವೊಮ್ಮೆ ನಮ್ಮ ವ್ಯಕ್ತಿತ್ವವನ್ನು ತೋರಿಸಲು ದೊಡ್ಡ ವೇದಿಕೆ ಬೇಕಾಗಿಲ್ಲ. ಹೊಟೇಲ್ ಕೌಂಟರ್ ಮೇಲಿರುವ ಒಂದು ಪುಟ್ಟ ಸೋಂಫ್ ಡಬ್ಬಿಯೇ ಸಾಕು!