Friday, July 10, 2026
Friday, July 10, 2026

ಟೂರ್ ಇನ್ ಇಂಡಿಯಾ ಘೋಷಣೆಯಾಗಲಿ

ಭಾರತದ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದ ಬೆಳವಣಿಗೆಯನ್ನು ಅಳೆಯುವ ಮಾನದಂಡ ವಿದೇಶಿ ಪ್ರವಾಸಿಗರ ಸಂಖ್ಯೆ ಯಾಕಾಗಬೇಕು? ಎಷ್ಟು ವಿದೇಶಿಗರು ಬಂದರು, ಎಷ್ಟು ಡಾಲರ್‌ ಗಳನ್ನು ಖರ್ಚು ಮಾಡಿದರು ಎಂಬುದರ ಮೇಲೆ ನಮ್ಮ ರೆಸಾರ್ಟ್ ಮತ್ತು ಹೊಟೇಲ್ ಉದ್ಯಮದ ಆರೋಗ್ಯ ಯಾಕೆ ನಿರ್ಧಾರವಾಗಬೇಕು?

ಕೆಲವರ್ಷಗಳಿಂದ ಮೇಕ್ ಇನ್ ಇಂಡಿಯಾದ ಯಶಸ್ಸು ಅಪಯಶಸ್ಸಿನ ಕುರಿತು ಸಾಕಷ್ಟು ಪರವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಆತ್ಮನಿರ್ಭರ ಭಾರತ ಎಂಬುದು ಒಂದು ಸುಂದರ ಪರಿಕಲ್ಪನೆ. ತೀರಾ ಅನಿವಾರ್ಯ ವಿಷಯಗಳ ಹೊರತಾಗಿ ಮತ್ತ್ಯಾವುದಕ್ಕೂ ವಿದೇಶವನ್ನು ಅವಲಂಬಿಸಬಾರದು ಎಂಬುದು ಮೇಕ್ ಇನ್ ಇಂಡಿಯಾದ ಪರಮೋದ್ದೇಶ. ಉದ್ಯೋಗ ಉದ್ಯಮ ಕೌಶಲ ಎಲ್ಲವೂ ನಮ್ಮ ದೇಶದಲ್ಲಿಯೇ ಹುಟ್ಟಿ ನಮ್ಮ ದೇಶದ ಉದ್ಧಾರಕ್ಕೆ ಬಳಕೆ ಆಗಬೇಕು ಎಂಬುದು ಆಶಯ. ನಮ್ಮ ಮೇಲೆ ಇತರ ದೇಶಗಳು ಅವಲಂಬಿಸಬೇಕೇ ಹೊರತು ನಾವು ಅವರ ಮೇಲೆ ಡಿಪೆಂಡ್ ಆಗಕೂಡದು ಎಂಬುದು ಮೇಕ್ ಇನ್ ಇಂಡಿಯಾದ ಧ್ಯೇಯ. ಆಶಯ ಅರ್ಥಮಾಡಿಕೊಳ್ಳದೇ ಅಣಕವಾಡುವವರ ನಡುವೆಯೂ ಮೇಕ್ ಇನ್ ಇಂಡಿಯಾ ಒಂದು ಮಟ್ಟಿಗಿನ ಯಶಸ್ಸು ಕಂಡಿರುವುದು ಸಾಧನೆಯೇ. ಈಗ ಮೇಕ್ ಇನ್ ಇಂಡಿಯಾ ರೀತಿಯಲ್ಲೇ ಟೂರ್ ಇನ್ ಇಂಡಿಯಾ ಎಂಬ ಪರಿಕಲ್ಪನೆ ತರುವ ಅಗತ್ಯ ಕಾಣುತ್ತಿದೆ. ಭಾರತದ ಟೂರಿಸಂ ವಿದೇಶಿ ಪ್ರವಾಸಿಗರ ಮೇಲೆ ಡಿಪೆಂಡ್ ಆಗಕೂಡದು, ನಮ್ಮ ದೇಶದ ಪ್ರಜೆಗಳು ದೇಶದೊಳಗಿನ ಪ್ರವಾಸಕ್ಕೆ ಹೆಚ್ಚು ಆಸಕ್ತಿ ತೋರಬೇಕು ಎಂಬುದು ಇದರ ಸಾರಾಂಶ. ಭಾರತೀಯರು ವಿದೇಶ ಪ್ರವಾಸದ ಬದಲು ಸ್ವದೇಶ ಪ್ರವಾಸ ಮಾಡಬೇಕು. ಆ ಮೂಲಕ ಪ್ರವಾಸೋದ್ಯಮ ವಿದೇಶಿಗರ ಮೇಲೆ ನಿಂತಿಲ್ಲ ಎಂಬುದನ್ನು ತೋರಿಸಬೇಕು. ದಟ್ ಈಸ್ ಟೂರ್ ಇನ್ ಇಂಡಿಯಾ.

ಇದನ್ನೂ ಓದಿ:ನೂತನ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌ಗೆ ಸವಿನಯ ಪತ್ರ

ಹೌದು. ಭಾರತದ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದ ಬೆಳವಣಿಗೆಯನ್ನು ಅಳೆಯುವ ಮಾನದಂಡ ವಿದೇಶಿ ಪ್ರವಾಸಿಗರ ಸಂಖ್ಯೆ ಯಾಕಾಗಬೇಕು? ಎಷ್ಟು ವಿದೇಶಿಗರು ಬಂದರು, ಎಷ್ಟು ಡಾಲರ್‌ ಗಳನ್ನು ಖರ್ಚು ಮಾಡಿದರು ಎಂಬುದರ ಮೇಲೆ ನಮ್ಮ ರೆಸಾರ್ಟ್ ಮತ್ತು ಹೊಟೇಲ್ ಉದ್ಯಮದ ಆರೋಗ್ಯ ಯಾಕೆ ನಿರ್ಧಾರವಾಗಬೇಕು?

Untitled design (42)

ಭಾರತೀಯ ಪ್ರವಾಸಿಗರು ಭಾರತದಾದ್ಯಂತ ಇರುವ ಪ್ರವಾಸಿ ತಾಣಗಳನ್ನು ನೋಡಲು ಮನಸು ಮಾಡಿದರೆ ಸಾಕು, ಆರ್ಥಿಕತೆಗೆ ಅತ್ಯಂತ ದೊಡ್ಡ ಬಲ ಸಿಕ್ಕುಬಿಡುತ್ತದೆ. ಪ್ರಸ್ತುತ ಭಾರತೀಯರು ತಮಗೇ ಗೊತ್ತಿಲ್ಲದೆ ಆ ಕೆಲಸವನ್ನು ಮಾಡುತ್ತಿದ್ದಾರೆ. ಪಶ್ಚಿಮ ಏಷ್ಯಾದ ಸಂಘರ್ಷ, ಅಂತಾರಾಷ್ಟ್ರೀಯ ವಿಮಾನ ದರಗಳ ಏರಿಕೆ ಮತ್ತು ಜಾಗತಿಕ ಅನಿಶ್ಚಿತತೆ ಇವೆಲ್ಲವೂ ವಿದೇಶ ಪ್ರವಾಸದ ವೆಚ್ಚವನ್ನು ಹೆಚ್ಚಿಸಿರುವುದರಿಂದ ಹೆಚ್ಚಿನ ಭಾರತೀಯರು ವಿದೇಶಕ್ಕೆ ಹೋಗುವ ಬದಲು ದೇಶದೊಳಗಿನ ಪ್ರವಾಸಿ ತಾಣಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇದರ ನೇರ ಲಾಭ ಹೋಟೆಲ್ ಮತ್ತು ರೆಸಾರ್ಟ್ ಉದ್ಯಮಕ್ಕೆ ಸಿಗುತ್ತಿದೆ. ಭಾರತದ ಪ್ರವಾಸಿ ತಾಣಗಳಿಗೆ ಏಕಾಏಕಿ ಬೇಡಿಕೆ ಹೆಚ್ಚಾಗಿದೆ. ಅಧಿಕೃತವಾಗಿ ಟೂರ್ ಇನ್ ಇಂಡಿಯಾ ಎಂಬ ಘೋಷಣೆಯೋ, ಆದೇಶವೋ ಮನವಿಯೋ ಬಂದಿಲ್ಲದಿದ್ದರೂ, ವಿದೇಶ ಪ್ರವಾಸ ಕಡಿಮೆ ಮಾಡಿ ಎಂದು ಪ್ರಧಾನಿ ಹೇಳಿದ ಮಾತು ಸ್ವದೇಶ ಪ್ರವಾಸಕ್ಕೆ ಇಂಬು ಕೊಟ್ಟಿದೆ. ಈ ಬೆಳವಣಿಗೆ ಈಗ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಟಯರ್-2 ಮತ್ತು ಟಯರ್-3 ನಗರಗಳು ಹೊಸ ಪ್ರವಾಸೋದ್ಯಮ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ವಾರಾಣಸಿ, ಅಮೃತಸರ, ಉಜ್ಜಯಿನಿ, ಅಯೋಧ್ಯೆ ಮೊದಲಾದ ಧಾರ್ಮಿಕ ಕ್ಷೇತ್ರಗಳಲ್ಲೂ, ಗೋವಾ, ಕೂರ್ಗ್‌, ಹಂಪಿ, ಮಡಿಕೇರಿ ಮೊದಲಾದ ವಿರಾಮ ಪ್ರವಾಸಿ ತಾಣಗಳಲ್ಲೂ ಹೋಟೆಲ್‌ಗಳ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಬದಲಾವಣೆಯನ್ನು ಹೊಟೇಲ್ ಉದ್ಯಮವೂ ಅರ್ಥಮಾಡಿಕೊಂಡಿದೆ. ಐಷಾರಾಮಿ ವಿದೇಶಿ ಅತಿಥಿಗಳಿಗಿಂತ ಮಧ್ಯಮವರ್ಗದ ಭಾರತೀಯ ಕುಟುಂಬಗಳು, ವಾರಾಂತ್ಯದ ಪ್ರವಾಸಿಗರು, ಧಾರ್ಮಿಕ ಪ್ರವಾಸಿಗರು ಮತ್ತು ಅನುಭವಾಧಾರಿತ ಪ್ರವಾಸಗಳನ್ನು ಹುಡುಕುವ ಯುವಜನರನ್ನು ಗುರಿಯಾಗಿಸಿಕೊಂಡು ಹೊಸ ಆಫರ್ ಗಳನ್ನು ರೂಪಿಸಲಾಗುತ್ತಿದೆ. ಹೋಮ್ ಸ್ಟೇಗಳು, ಬೊಟಿಕ್ ಹೊಟೇಲ್‌ಗಳು, ಸ್ಥಳೀಯ ಸಂಸ್ಕೃತಿ ಮತ್ತು ಆಹಾರವನ್ನು ಪ್ರತಿಬಿಂಬಿಸುವ ವಸತಿ ವ್ಯವಸ್ಥೆಗಳು ವೇಗವಾಗಿ ಬೆಳೆಯುತ್ತಿವೆ.

ನಿಜ, ಡಿಮ್ಯಾಂಡ್ ಗೆ ತಕ್ಕಂತೆ ಹೊಟೇಲ್ ಕೊಠಡಿಗಳ ದರಗಳೂ ಏರಿಕೆಯಾಗಿವೆ. ಆದರೆ ಬೇಡಿಕೆಗೆ ತಕ್ಕಂತೆ ಆಗಿರುವ ಪ್ರತಿಕ್ರಿಯೆ. ಇಲ್ಲಿ ನಾವು ಯೋಚಿಸಬೇಕಾಗಿರುವ ಅಂಶವೇನೆಂದರೆ, ಒಂದು ವೇಳೆ ಅಧಿಕೃತವಾಗಿ ಟೂರ್ ಇನ್ ಇಂಡಿಯಾ ಘೋಷಣೆ ಜಾರಿಯಾದರೆ ಭಾರತ ಗಂಭೀರವಾಗ ಆಂತರಿಕ ಪ್ರವಾಸೋದ್ಯಮದಲ್ಲಿ ದೊಡ್ಡ ಎತ್ತರ ಏರಲು ಸಾಧ್ಯವಿದೆಯಲ್ಲವೇ? ಪ್ರಧಾನಿಗಳು ಆ ಘೋಷಣೆ ಮಾಡಬಹುದಲ್ಲವೇ ಎಂದು. ಆದರೆ ಅದಕ್ಕೆ ತೊಡಕಾಗಿರುವುದು ತಯಾರಿಯ ಕೊರತೆ ಮತ್ತು ವ್ಯವಸ್ಥೆ. ದೇಶೀಯ ಪ್ರವಾಸೋದ್ಯಮ ಬೂಮ್ ಆಗಬೇಕು ಎಂದಿದ್ದಲ್ಲಿ ಮೊದಲು ಆಗಬೇಕಿರೋದು ಮೂಲಸೌಕರ್ಯಗಳ ಅಭಿವೃದ್ಧಿ. ಸ್ವಚ್ಛತೆ, ಪರಿಸರ ಸಂರಕ್ಷಣೆ, ಸೇವಾ ಗುಣಮಟ್ಟದ ಏರಿಕೆ, ಆತಿಥ್ಯ ಗುಣಮಟ್ಟದ ಅಭಿವೃದ್ಧಿ. ನಮ್ಮ ದೇಶದ ಪ್ರವಾಸಿಗೆ ಹೊರದೇಶಕ್ಕೆ ಹೋದಾಗ ಕಾಣುವ ಸ್ವಚ್ಛತೆ, ಶಿಸ್ತು, ಆತಿಥ್ಯ, ಅನುಕೂಲತೆ ಎಲ್ಲವೂ ಇಲ್ಲಿಯೂ ಸಿಗುವಂತಾದರೆ ಮಾತ್ರ ಟೂರ್ ಇನ್ ಇಂಡಿಯಾ ಯಶಸ್ವಿಯಾಗಲು ಸಾಧ್ಯ. ಪ್ರವಾಸಿಗರಿಗೆ ಗುಣಮಟ್ಟದ ಅನುಭವ ನೀಡುವ ಪರಿಸರವನ್ನು ನಿರ್ಮಿಸಬೇಕು. ಹಾಗೆ ಮಾಡಿದಲ್ಲಿ ಮಾತ್ರ ಡೊಮಸ್ಟಿಕ್ ಟೂರಿಸಂ ಗೆಲ್ಲುತ್ತದೆ. ಆ ಮೂಲಕ ಭಾರತದ ಪ್ರವಾಸಿಗರ ಹಣ ಭಾರತದಲ್ಲೇ ಉಳಿಯುತ್ತದೆ, ಭಾರತದಲ್ಲೇ ವೃದ್ಧಿಯಾಗುತ್ತದೆ, ಭಾರತದ ಎಕಾನಮಿಗೆ ಪ್ರವಾಸೋದ್ಯಮ ಹೆಚ್ಚು ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಸರ್ವಸನ್ನದ್ಧವಾಗಿ ಟೂರ್ ಇನ್ ಇಂಡಿಯಾ ಜಾರಿಗೆ ಬರಲಿ ಎಂಬುದು ಪ್ರವಾಸವನ್ನು ನಂಬಿಕೊಂಡಿರುವ ಎಲ್ಲ ಉದ್ಯಮಗಳ ಒಕ್ಕೊರಲಿನ ಆಶಯವಾಗಿದೆ.

Naveen Sagar

Naveen Sagar

Travel blogger and adventurer passionate about exploring new cultures and sharing travel experiences.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!