ಚಕ್ಕುಲಿ ಕೋಡಬಳೆ ಪ್ರವಾಸ!
ಎಲ್ಲೋ ದೂರದ ಊರಿನಲ್ಲಿ ಸುಂದರವಾದ ಸೂರ್ಯಾಸ್ತ ನೋಡುತ್ತಿರುವಾಗ ಹಠಾತ್ತನೆ ’ಅಯ್ಯೋ! ಅಡುಗೆ ಮನೆಯ ಗ್ಯಾಸ್ ಆಫ್ ಮಾಡಿದೀನಾ’ ’ಹಾಲಿನವನಿಗೆ ಬೇಡ ಅಂತ ಹೇಳೋಕೇ ಮರೆತಿದ್ದೆ’ ಬಾಲ್ಕನಿಯಲ್ಲಿರೋ ಹೂಗಿಡಗಳೆಲ್ಲ ಬಾಡಿ ಹೋಗ್ತವೋ ಏನೋ.. ಗೀಸರ್ ಸ್ವಿಚ್ ಆಫ್ ಮಾಡಿಲ್ಲ ಅನ್ಸತ್ತೆ... ಬೀಗ ಸರಿ ಹಾಕಿದ್ನೋ ಇಲ್ವೋ ಇಂಥ ಹತ್ತು ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಗೊಂದಲದ ನಡುವೆ ಪ್ರವಾಸ ಆಗದಿದ್ದರೆ ಅದು ಫ್ಯಾಮಿಲಿ ಟ್ರಿಪ್ ಆಗೋದಿಲ್ಲ ಬಿಡಿ.
ಪ್ರವಾಸ ಅಥವಾ ವಿಮಾನಯಾನ ಅಂತ ಬಂದಾಗ ಗಂಡಸರು ಲಗೇಜ್ ಕಾನ್ಶಿಯಸ್ ಆಗುತ್ತಾರೆ. ತಮ್ಮ ಸೂಟ್ ಕೇಸ್‌ನಲ್ಲಿ ಇನ್ನೂ ಮೂರು ಪಟ್ಟು ತುಂಬಿಸುವಷ್ಟು ಜಾಗ ಖಾಲಿ ಬಿಟ್ಟಿರುತ್ತಾರೆ. ಪುರುಷರಿಗೆ ಪ್ರವಾಸ ಅಂದರೆ ಅಲ್ಲಿನ ಸ್ಥಳ, ಹವಾಮಾನ ಮತ್ತು ಜನಜೀವನ ಗಮನಿಸಿ ಎಂಜಾಯ್ ಮಾಡುವುದು. ಹೆಚ್ಚೆಂದರೆ ಅಲ್ಲಿನ ಫುಡ್, ಮದ್ಯ ಮತ್ತು ನೈಟ್ ಲೈಫ್. ಆದರೆ ಹೆಂಗಸರಿಗೆ ಪ್ರವಾಸ ಅನ್ನುವುದು ಮದುವೆಮನೆಯಷ್ಟೇ ದೊಡ್ಡ ಸಂಭ್ರಮ. ಸಂಭ್ರಮವಿರಲಿ ಓಕೆ. ಆದರೆ ಅದು ಅವರ ಸಿಂಗಾರ ಮತ್ತು ಅಡುಗೆಮನೆ ವಿಚಾರಗಳಿಂದ ಹೊರಬರುವುದಿಲ್ಲ ಎಂಬುದೇ ವಿಪರ್ಯಾಸ. ಅವರ ಲಗೇಜ್ ನೋಡಿಬಿಟ್ಟರೆ ಶಾಶ್ವತವಾಗಿ ತವರುಮನೆಗೋ ಅಥವಾ ಊರಿಂದ ಊರಿಗೆ ಟ್ರಾನ್ಸ್‌ಫರ್ ಆಗಿ ಎಲ್ಲಿಗಾದರೂ ಹೋಗ್ತಿದ್ದಾರೋ ಎಂಬಂತಿರುತ್ತದೆ. ಎರಡು ದಿನದ ಪ್ರವಾಸಕ್ಕೆ ಹೊರಟ ಅವರ ಸೂಟ್ ಕೇಸ್ ಹತ್ತು ವರ್ಷ ಅಲ್ಲೇ ಸೆಟ್ಲ್ ಆಗಲು ಹೋಗ್ತಿರುವಂತೆ ಕಾಣುತ್ತದೆ. ಮಳೆ ಇದ್ದರೆ, ಚಳಿ ಇದ್ದರೆ, ಸೆಕೆ ಇದ್ದರೆ ಅಂತ ಅದಕ್ಕೆ ತಕ್ಕ ಬಟ್ಟೆಗಳು, ಆ ಜಾಗಕ್ಕೆ ಇಂಥದ್ದೇ ಡ್ರೆಸ್ ಬೇಕು ಅಂತ ಅದಕ್ಕೊಂದಿಷ್ಟು ಬಟ್ಟೆಗಳು, ಸೀರೆಗಳು, ಮ್ಯಾಚಿಂಗ್ ಬ್ಲೌಸುಗಳು, ಮೇಕಪ್ ಕಿಟ್ ಗಳು, ವಿಧವಿಧದ ಚಪ್ಪಲಿಗಳು, ಕೊನೆಗೆ ಸೂಟ್ ಕೇಸ್ ಜಿಪ್ ಹಾಕಲು ಅದರ ಮೇಲೆ ಕೂತು ಸರ್ಕಸ್ ಮಾಡುವ ತನಕ ಲಗೇಜ್ ತುಂಬಿಸುತ್ತಾರೆ. ಇನ್ನು ಪ್ರವಾಸದಲ್ಲಿ ಪ್ರಕೃತಿಯ ಸೌಂದರ್ಯ ಸವಿಯುವುದಕ್ಕಿಂತ ಹೆಚ್ಚಾಗಿ, ತಾವು ತೊಟ್ಟ ಬಟ್ಟೆ ಆ ಬೆಟ್ಟಕ್ಕೆ ಅಥವಾ ಸಮುದ್ರಕ್ಕೆ 'ಮ್ಯಾಚ್' ಆಗುತ್ತದೆಯೇ ಎಂದು ನೋಡುವುದೇ ದೊಡ್ಡ ಕೆಲಸ. ಕೆಂಪು ಕೋಟೆಯ ಮುಂದೆ ನಿಂತಾಗ ಕೆಂಪು ಸೀರೆ ಹಾಕಿದರೆ ಫೊಟೋದಲ್ಲಿ ಕಾಣಿಸುವುದಿಲ್ಲ ಎಂಬ ತರ್ಕದ ಮೇಲೆ ಅರ್ಧ ಗಂಟೆ ಚರ್ಚೆ ನಡೆಯುತ್ತದೆ. ಮ್ಯಾಚಿಂಗ್ ಇಯರ್ ರಿಂಗ್ ಸಿಗಲಿಲ್ಲವೆಂದು ಇಡೀ ಪ್ರವಾಸದ ಮೂಡ್ ಹಾಳು ಮಾಡಿಕೊಳ್ಳುವ ಕಲೆ ಇವರಿಗೆ ಸಿದ್ಧಿಸಿದೆ.
ಇದನ್ನೂ ಓದಿ: ಡೋಂಟ್ ಕೇರ್ ಎಂದು ಪುಟಿದೆದ್ದ ಪ್ರವಾಸೋದ್ಯಮ
ಇನ್ನೂ ತಮಾಷೆಯೆಂದರೆ ಪ್ರವಾಸ ಹೊರಡುವ ಮುನ್ನವೇ ಗಂಡನ ಕೈಗೆ ಮೊಬೈಲ್ ಕೊಟ್ಟು ’ನೋಡಿ, ನಾನು ಹೀಗೆ ತಿರುಗಿದಾಗ ಕ್ಯಾಂಡಿಡ್ ಫೊಟೋ ತೆಗೆಯಬೇಕು’ ಎಂಬ ಟ್ರೇನಿಂಗ್ ಶುರುವಾಗಿರುತ್ತದೆ. ಒಂದು ಗಿಡದ ಮುಂದೆ ಹತ್ತು ಪೋಸ್ ಕೊಟ್ಟರೂ ’ಇದು ಸರಿ ಬರಲಿಲ್ಲ, ಇನ್ನೊಂದು ಸಲ’ ಎಂಬ ಮಾತು ಕೇಳಿ ಗಂಡಸರ ಪ್ರವಾಸದ ಮೂಡೇ ಯಕ್ಕುಟ್ಟಿ ಹೋಗಿರುತ್ತದೆ. ಇಂಥ ಸಾವಿರ ಸೆಲ್ಫೀ ತುಂಬಿಸಿ ಪ್ರವಾಸ ಮುಗಿಯುವ ಹೊತ್ತಿಗೆ ಮೊಬೈಲ್‌ನಲ್ಲಿ ಜಾಗವಿರುವುದಿಲ್ಲ. ಅತ್ತ ಪ್ರಕೃತಿಯನ್ನು ಕಣ್ಣಾರೆ ನೋಡಿರುವ ನೆನಪೂ ಇರುವುದಿಲ್ಲ.

ಇದರ ನಡುವೆ ಇನ್ನೊಂದು ಅವತಾರ! ಎಲ್ಲೋ ದೂರದ ಊರಿನಲ್ಲಿ ಸುಂದರವಾದ ಸೂರ್ಯಾಸ್ತ ನೋಡುತ್ತಿರುವಾಗ ಹಠಾತ್ತನೆ ’ಅಯ್ಯೋ! ಅಡುಗೆ ಮನೆಯ ಗ್ಯಾಸ್ ಆಫ್ ಮಾಡಿದೀನಾ’ ’ಹಾಲಿನವನಿಗೆ ಬೇಡ ಅಂತ ಹೇಳೋಕೇ ಮರೆತಿದ್ದೆ’ ಬಾಲ್ಕನಿಯಲ್ಲಿರೋ ಹೂಗಿಡಗಳೆಲ್ಲ ಬಾಡಿ ಹೋಗ್ತವೋ ಏನೋ.. ಗೀಸರ್ ಸ್ವಿಚ್ ಆಫ್ ಮಾಡಿಲ್ಲ ಅನ್ಸತ್ತೆ... ಬೀಗ ಸರಿ ಹಾಕಿದ್ನೋ ಇಲ್ವೋ ಇಂಥ ಹತ್ತು ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಗೊಂದಲದ ನಡುವೆ ಪ್ರವಾಸ ಆಗದಿದ್ದರೆ ಅದು ಫ್ಯಾಮಿಲಿ ಟ್ರಿಪ್ ಆಗೋದಿಲ್ಲ ಬಿಡಿ.
ಸಾಲದು ಅಂತ ಇವರ ಊರಲ್ಲಿಲ್ಲದ ಡಯಟ್ ಶುರುವಾಗಿಬಿಡುತ್ತದೆ. ಅಲ್ಲಿನ ಸ್ಥಳೀಯ ಖಾದ್ಯಗಳನ್ನು ಸವಿಯುವ ಬದಲು, ’ಛೇ.. ಇದು ತುಂಬಾ ಆಯಿಲಿ’, ’ಇದರಲ್ಲಿ ಕ್ಯಾಲರಿ ಜಾಸ್ತಿ ಎಂದು ಗೊಣಗುತ್ತಲೇ ಪಕ್ಕದವರ ತಟ್ಟೆಯಲ್ಲಿರುವ ಒಂದು ತುತ್ತು ಸವಿಯುವ ಆಸೆ. ಕೊನೆಗೆ ಹೊಟ್ಟೆ ಹಸಿದಾಗ ’ನನಗೆ ಮೊದಲೇ ಗೊತ್ತಿತ್ತು ಇಲ್ಲಿ ಏನೂ ಸಿಗಲ್ಲ ಅಂತ’ ಎಂದು ಬಯ್ಯುತ್ತಾ ಬ್ಯಾಗ್‌ನ ಮೂಲೆಯಿಂದ ಮನೆಯ ಚಕ್ಕುಲಿ-ಕೋಡುಬಳೆ ತೆಗೆಯುತ್ತಾರೆ. ಆದರೂ ಮನೆಯ ಹೆಣ್ಮಕ್ಕಳಿಲ್ಲದಿದ್ದರೆ ಆ ಕೌಟುಂಬಿಕ ಪ್ರವಾಸ ಸಪ್ಪೆ ಸಪ್ಪೆ. ಇವೆಲ್ಲ ಇದ್ದರೇನೇ ಸೊಗಸು.