ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಅಂತ ಒಂದು ಅಘೋಷಿತ ಗಾದೆ ಇದೆ. ಕೇಳಿರುತ್ತೀರಿ. ಇದಕ್ಕೆ ತದ್ವಿರುದ್ಧ ಎಂಬಂತೆ ಪರಸ್ಥಳಕ್ಕೆ ಹೋದಾಗ ಅಲ್ಲಿನ ಆಹಾರಕ್ಕೆ ಒಗ್ಗಿಕೊಳ್ಳಬೇಕು ಎಂಬು ಉಪದೇಶವೂ ತೇಲಿ ಬರುತ್ತಿರುತ್ತದೆ. Be a Roman in Rome ಅನ್ನೋ ಮಾತು ಬೇರೆಲ್ಲದಕ್ಕೂ ಒಪ್ಪಿಕೊಳ್ಳಬಹುದೇನೋ, ಹೊಟ್ಟೆಗೆ ತಿನ್ನುವ ಆಹಾರದ ವಿಚಾರದಲ್ಲಿ ತುಸು ಕಷ್ಟವೇ! ತುಸು ಅಲ್ಲ ಬಹಳವೇ ಕಷ್ಟ. ಒಂದು ಊರನ್ನು ಅಥವಾ ಒಂದು ದೇಶವನ್ನು ಕಣ್ಣಿಂದ ನೋಡಿದರೆ ಸಂಪೂರ್ಣವಾಗುವುದಿಲ್ಲ, ಹೊಟ್ಟೆಯಿಂದ ನೋಡಬೇಕು ಎಂಬೊಂದು ಮಾತಿದೆ. ಅಂದರೆ ಅಲ್ಲಿನ ಆಹಾರಗಳನ್ನು ಸವಿದು ತಿಳಿದುಕೊಂಡರೇನೇ ಆ ದೇಶ ಅರ್ಥವಾದಂತೆ ಎನ್ನುತ್ತಾರೆ ಪ್ರವಾಸಿ ಗೈಡ್ ಗಳು. ಇದು ಒಂಥರ ದ್ವಂದ್ವದ ಸನ್ನಿವೇಶ. ಪರದೇಶಕ್ಕೆ ಹೋಗಿದ್ದೇವೆಂದ ಮಾತ್ರಕ್ಕೆ ಇಷ್ಟವಾಗದ ಆಹಾರ ತಿನ್ನುವುದಾದರೂ ಹೇಗೆ ಎಂಬ ಪ್ರಶ್ನೆ ಒಂದೆಡೆಯಾದರೆ, ಇದು ಬೇಡ ಅಂದರೆ ಬೇರೆ ಊಟವಿಲ್ಲ, ಉಪವಾಸವೇ ಗತಿ ಎಂಬಂಥ ಪರಿಸ್ಥಿತಿ ಬಂದಾಗ ಏನು ಮಾಡಬೇಕು ಎಂಬ ಪ್ರಶ್ನೆ ಇನ್ನೊಂದೆಡೆ. ಇದು ಕೇವಲ ವೆಜ್ ಮತ್ತು ನಾನ್ ವೆಜ್ ನಡುವಣ ಸಂಘರ್ಷವಲ್ಲ. ಎಷ್ಟೋ ಬಾರಿ ಸಸ್ಯಾಹಾರಿಗಳಿಗೆ ಆ ದೇಶದ/ಪ್ರದೇಶದ ಸಸ್ಯಾಹಾರ ರುಚಿಸುವುದಿಲ್ಲ. ಅದೇ ರೀತಿ ನಾನ್ ವೆಜಿಟೇರಿಯನ್ ಗಳಿಗೂ ಆಗುತ್ತದೆ.

ಇದನ್ನೂ ಓದಿ: ಸರಕಾರದ ಸಹಕಾರವಿದೆ. ಕಾಶಿಗೆ ಹೋಗಿಬನ್ನಿ

ನಾನ್ ವೆಜ್ ಅಂದ ಮಾತ್ರಕ್ಕೆ ಕೊಟ್ಟ ಪ್ರಾಣಿಗಳನ್ನೆಲ್ಲ ತಿನ್ನಲಾಗುವುದಿಲ್ಲ. ಇಲ್ಲಿ ಒತ್ತಾಯ ಮಾಡುವುದಾಗಲೀ ಒತ್ತಡ ಹೇರುವುದಾಗಲೀ ಸರಿಯೂ ಅಲ್ಲ. ಹಾಗಂತ ತಿಂದರೆ ತಿನ್ನಲಿ ಇಲ್ಲದಿದ್ದರೆ ಉಪವಾಸವಿರಲಿ ಎಂದು ಬಿಡಲೂ ಆಗುವುದಿಲ್ಲ. ಊಟತಿಂಡಿಯ ವಿಚಾರದಲ್ಲಿ ನಾನ್ ವೆಜಿಟೇರಿಯನ್ ಗಳಿಂದ ವೆಜ್ಜೀಗಳ ಮೇಲೆ ಸದಾ ಒಂದು ದಬ್ಬಾಳಿಕೆ, ಟ್ರೋಲ್ ನಡೀತಾನೇ ಇರುತ್ತೆ. ಮಾಂಸಾಹಾರಿಗಳಿಗೆ ಒಂದು ಅನಗತ್ಯ ಸುಪೀರಿಯಾರಿಟಿ ಕಾಂಪ್ಲೆಕ್ಸ್ ಬಂದುಬಿಟ್ಟಿರುತ್ತದೆ. ಜತೆಗೆ ಸಸ್ಯಾಹಾರಿಯ ವ್ರತ ಮುರಿಸಿ ಆತನಿಗೆ ಮಾಂಸ ತಿನ್ನಿಸಬೇಕೆಂಬ ಕೆಟ್ಟ ಹಟವೊಂದು ಸದಾ ಜಾಗೃತವಾಗಿರುತ್ತದೆ. ಅದೇನು ತರಕಾರಿ ಸೊಪ್ಪು ತಿಂತೀರೋ, ನಿಮ್ಮ ಆಹಾರದಲ್ಲಿ ಒಂದು ಥ್ರಿಲ್ಲೇ ಇಲ್ಲ ಅಂತೆಲ್ಲ ಹೇಳ್ತಿರ್ತಾರೆ. ನೂರಾರು ತರಕಾರಿಗಳ ಆಹಾರ ತಿನ್ನುವ ಸಸ್ಯಾಹಾರಿಗಳಿಗೆ ಮೂರೋ ನಾಲ್ಕೋ ಥರದ ಪ್ರಾಣಿಗಳ ಮಾಂಸ ತಿನ್ನುವವರು ಹೇಳಬಹುದಾದ ಮಾತಾ ಇದು? ಒಂದು ಪೀಸ್ ತಿನ್ನು ಅಂತ ಒತ್ತಾಯಿಸುವುದು, ಪೀಸ್ ಬೇಡ ಗ್ರೇವಿ ತಗೋ ಎಂದು ಹೇಳಿ ಸಸ್ಯಾಹಾರಿಗೆ ಉಪಚರಿಸೋದು ಇವೆಲ್ಲ ಕಾಮನ್ ದೃಶ್ಯಗಳು. ಪ್ರವಾಸ ಹೋದಾಗ ಅಥವಾ ಆತಿಥ್ಯಕೂಟದಲ್ಲಿ ಸೇರಿದಾಗ ಇತರರ ಆಹಾರ ಪದ್ಧತಿಯನ್ನು ಗೌರವಿಸುವುದನ್ನು ಕಲಿಯಬೇಕಿರೋದು ಪ್ರವಾಸಿಗನ ಬೇಸಿಕ್ ಅಗತ್ಯ. ಪ್ರವಾಸಿಗನದ್ದು ಮಾತ್ರವಲ್ಲ ಪ್ರತಿ ಮನುಷ್ಯನದ್ದೂ. ಪ್ರವಾಸಕ್ಕೆ ಹೋದಾಗ ಅಲ್ಲಿನ ಆಹಾರವನ್ನು ಸೇವಿಸಲೇಬೇಕೆಂಬುದು ಕಡ್ಡಾಯವೇನೂ ಅಲ್ಲ. ತಿನ್ನದೆಯೂ ಅಲ್ಲಿನ ಆಹಾರಪದ್ಧತಿ ಮತ್ತು ಅವುಗಳ ರುಚಿ-ತಯಾರಿಕೆ ಬಗ್ಗೆ ಅರಿತುಕೊಳ್ಳಬಹುದು. ಕೆಲವೆಡೆ ಹೊಂದಿಕೊಳ್ಳುವುದು-ಕೆಲವೆಡೆ ನಮ್ಮತನ ಉಳಿಸಿಕೊಳ್ಳುವುದು ಕಲಿತವನು ಪ್ರವಾಸಗಳಲ್ಲಿ ಬಾಳಿಯಾನು.