ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳದಿರಿ!
ವಿದೇಶದಲ್ಲಿ ಕರ್ನಾಟಕವನ್ನು ಪರಿಚಯಿಸುವುದು ಫೈನ್. ಅದಕ್ಕಾಗಿ ರೋಡ್ ಶೋ ಹೆಚ್ಚು ಹೆಚ್ಚು ಮಾಡಲಿ. ಆದರೆ ನಾವು ಮಾಡಬೇಕಿರುವುದು, ಕರ್ನಾಟಕಕ್ಕೆ ಒಮ್ಮೆ ಬಂದ ಪ್ರವಾಸಿಗರು ಮತ್ತೆ ಮತ್ತೆ ಬರುವಂತೆ. ತಮ್ಮ ದೇಶದವರಿಗೆ ರೆಕಮೆಂಡ್ ಮಾಡಿ ಕರೆತರುವಂತೆ. ಆಗ ರೋಡ್ ಶೋಗಳು ಅರ್ಥಪೂರ್ಣ ಮತ್ತು ಸಾರ್ಥಕ ಎನಿಸಿಕೊಳ್ಳುತ್ತವೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಪ್ರಚಾರದ ಜತೆಗೆ ಸುರಕ್ಷತೆ, ಸೌಲಭ್ಯ, ಸಂಪರ್ಕ ಮತ್ತು ಆತಿಥ್ಯಕ್ಕೂ ಆದ್ಯತೆ ನೀಡುವಂತಾಗಲಿ.
ವಿದೇಶಿ ಪ್ರವಾಸಿಗರನ್ನು ಮತ್ತೆ ಕರ್ನಾಟಕದತ್ತ ಸೆಳೆಯಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬ್ರಿಟನ್ನಲ್ಲಿ ರೋಡ್ ಶೋಗಳನ್ನು ಆಯೋಜಿಸಿರುವುದು ಸ್ವಾಗತಾರ್ಹ. ನವೆಂಬರ್ 2ರಿಂದ 6ರವರೆಗೆ ನಡೆಯುತ್ತಿರುವ ಈ ಅಭಿಯಾನದಲ್ಲಿ ಮ್ಯಾಂಚೆಸ್ಟರ್, ಲಂಡನ್ ಮತ್ತು ಬರ್ಮಿಂಗ್ಹ್ಯಾಮ್ಗಳಲ್ಲಿ ಕರ್ನಾಟಕದ ಪ್ರವಾಸಿ ತಾಣಗಳನ್ನು ಪರಿಚಯಿಸಲಾಗುತ್ತಿದೆ. ಸುಮಾರು 180 ದೇಶಗಳು, 4,000ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುವ ವರ್ಲ್ಡ್ ಟ್ರಾವೆಲ್ ಮಾರ್ಕೆಟ್ ವೇದಿಕೆಯನ್ನೂ ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದ ಪ್ರವಾಸೋದ್ಯಮವನ್ನು ವಿದೇಶಗಳಲ್ಲಿ ಪ್ರಚಾರ ಮಾಡುವುದು ಒಳ್ಳೆಯ ಬೆಳವಣಿಗೆ. ನಮ್ಮ ರಾಜ್ಯದ ಹಂಪಿ, ಮೈಸೂರು, ಕೊಡಗು, ಚಿಕ್ಕಮಗಳೂರು, ಬಾದಾಮಿ, ಪಟ್ಟದಕಲ್ಲು, ಕರಾವಳಿ, ಪಶ್ಚಿಮ ಘಟ್ಟಗಳು ಸೇರಿದಂತೆ ಜಗತ್ತಿನ ಪ್ರವಾಸಿಗರನ್ನು ಆಕರ್ಷಿಸಬಲ್ಲ ನೂರಾರು ತಾಣಗಳಿವೆ. ಆದರೆ, ಕೇವಲ ರೋಡ್ ಶೋ ಒಂದರಿಂದಲೇ ವಿದೇಶಿ ಪ್ರವಾಸಿಗರು ದೌಡಾಯಿಸಿ ಬಂದುಬಿಡುತ್ತಾರಾ? ಈ ಪ್ರಶ್ನೆಗೆ ಉತ್ತರ ಹುಡುಕುವ ಅಗತ್ಯವಿದೆ.
ಕರ್ನಾಟಕಕ್ಕೆ ಬರುತ್ತಿದ್ದ ಅನಿವಾಸಿ ಭಾರತೀಯ ಪ್ರವಾಸಿಗರ ಸಂಖ್ಯೆ ಕೋವಿಡ್ ನಂತರದಲ್ಲಿ ಶೇ.50ಕ್ಕೂ ಹೆಚ್ಚು ಇಳಿಕೆಯಾಗಿದೆ ಎಂಬುದು ಇಲಾಖೆಯ ಅಧಿಕಾರಿಗಳಿಂದಲೇ ಬಂದಿರುವ ಹೇಳಿಕೆ. ಇದು ನಿಜಕ್ಕೂ ಚಿಂತಿಸಬೇಕಿರುವ ವಿಚಾರ. ಬಾಲಿ, ಮಾಲ್ಡೀವ್ಸ್, ಅಬುಧಾಬಿಯಂಥ ತಾಣಗಳತ್ತ ಪ್ರವಾಸಿಗರು ಮುಖ ಮಾಡುತ್ತಿರುವಂತೆ ಕರ್ನಾಟಕದತ್ತ ಏಕೆ ನೋಡುತ್ತಿಲ್ಲ? ರೋಡ್ ಶೋಗಳ ಪರಿಣಾಮ ಎಷ್ಟು ಎಂಬ ಪ್ರಶ್ನೆ ಹುಟ್ಟುವುದೇ ಇಲ್ಲಿ. ಕೇವಲ ಎಲ್ಇಡಿ ಪರದೆಯ ಮೇಲೆ ಹಂಪಿಯ ಚಿತ್ರ ತೋರಿಸಿದರೆ ಪ್ರವಾಸಿಗರು ಹಂಪಿಗೆ ಬರುವುದಿಲ್ಲ. ಆ ಚಿತ್ರವನ್ನು ನೋಡಿದ ನಂತರ ಪ್ರವಾಸಕ್ಕೆ ನಿರ್ಧರಿಸುವಂತೆ ಮಾಡುವ ವ್ಯವಸ್ಥೆ ನಮ್ಮಲ್ಲಿರಬೇಕು.
ಇದನ್ನೂ ಓದಿ: ರಾಜ್ಯ ಪ್ರವಾಸೋದ್ಯಮವನ್ನು ರಿಚಾರ್ಜ್ ಮಾಡಿದ ಜಾರ್ಜ್
ಮೊದಲನೆಯದಾಗಿ, ವಿದೇಶಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರವಾಸಿ ತಾಣಗಳಲ್ಲಿ ಕಿರುಕುಳ, ವಂಚನೆ, ಅನಗತ್ಯ ಹಣ ವಸೂಲಿ, ಮಾರ್ಗದರ್ಶಕರ ಹೆಸರಿನಲ್ಲಿ ನಡೆಯುವ ಮೋಸಗಳಿಗೆ ಕಡಿವಾಣ ಹಾಕಬೇಕು. ಸ್ವಚ್ಛ ಶೌಚಾಲಯ, ಉತ್ತಮ ರಸ್ತೆಗಳು, ಸಾರಿಗೆ, ವಿಶ್ವಾಸಾರ್ಹ ವಸತಿ ಮತ್ತು ಸ್ಪಷ್ಟ ಮಾಹಿತಿ ವ್ಯವಸ್ಥೆ ಇರಬೇಕು.
ಎರಡನೆಯದಾಗಿ, ವಿದೇಶಿ ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ವಿಶೇಷ ಪ್ರವಾಸ ಪ್ಯಾಕೇಜ್ಗಳನ್ನು ರೂಪಿಸಬೇಕು. ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು ಪಾರಂಪರಿಕ ಪ್ರವಾಸ, ಕೊಡಗು-ಚಿಕ್ಕಮಗಳೂರು ಪ್ರಕೃತಿ ಪ್ರವಾಸ, ಕರಾವಳಿಯ ಕಡಲತೀರ ಮತ್ತು ಆಹಾರ ಸಂಸ್ಕೃತಿಯ ಪ್ರವಾಸ, ಯೋಗ-ಆಯುರ್ವೇದ ಕ್ಷೇಮ ಪ್ರವಾಸ ಹೀಗೆ ವಿಭಿನ್ನ ಅನುಭವಗಳನ್ನು ಒಟ್ಟುಗೂಡಿಸಬೇಕು.
ಮೂರನೆಯದಾಗಿ, ಅಂತಾರಾಷ್ಟ್ರೀಯ ಪ್ರವಾಸಿ ಸಂಸ್ಥೆಗಳು, ವಿಮಾನಯಾನ ಕಂಪನಿಗಳು ಮತ್ತು ವಿದೇಶಿ ಟ್ರಾವೆಲ್ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ವಿದೇಶಿ ಭಾಷೆ ಬಲ್ಲ ತರಬೇತುದಾರ ಮಾರ್ಗದರ್ಶಿಗಳನ್ನು ಸಿದ್ಧಪಡಿಸಬೇಕು. ಕರ್ನಾಟಕದ ಪ್ರಮುಖ ಉತ್ಸವಗಳು, ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವಾರ್ಷಿಕ ಕ್ಯಾಲೆಂಡರ್ ಅನ್ನು ಮುಂಚಿತವಾಗಿಯೇ ಜಗತ್ತಿಗೆ ಪರಿಚಯಿಸಬೇಕು.
ಇದರ ಜತೆಗೆ ಡಿಜಿಟಲ್ ಪ್ರಚಾರಕ್ಕೂ ಹೊಸ ಆಯಾಮ ನೀಡಬೇಕು. ವಿದೇಶಿ ಪ್ರವಾಸಿಗರ ಅನುಭವಗಳು, ನೈಜ ಪ್ರವಾಸ ಕಥನಗಳು, ಗುಣಮಟ್ಟದ ವಿಡಿಯೊಗಳು ಮತ್ತು ಸುಲಭವಾಗಿ ಪ್ಯಾಕೇಜ್ ಬುಕ್ ಮಾಡುವ ವ್ಯವಸ್ಥೆ ರೂಪಿಸಬೇಕು. ಯಾವ ದೇಶದಿಂದ ಎಷ್ಟು ಪ್ರವಾಸಿಗರು ಬರುತ್ತಿದ್ದಾರೆ, ಏಕೆ ಬರುತ್ತಿಲ್ಲ, ಬಂದವರು ಏನನ್ನು ನಿರೀಕ್ಷಿಸುತ್ತಾರೆ ಎಂಬುದರ ಅಧ್ಯಯನವೂ ನಡೆಯಬೇಕು.
ವಿದೇಶದಲ್ಲಿ ಕರ್ನಾಟಕವನ್ನು ಪರಿಚಯಿಸುವುದು ಫೈನ್. ಅದಕ್ಕಾಗಿ ರೋಡ್ ಶೋ ಹೆಚ್ಚು ಹೆಚ್ಚು ಮಾಡಲಿ. ಆದರೆ ನಾವು ಮಾಡಬೇಕಿರುವುದು, ಕರ್ನಾಟಕಕ್ಕೆ ಒಮ್ಮೆ ಬಂದ ಪ್ರವಾಸಿಗರು ಮತ್ತೆ ಮತ್ತೆ ಬರುವಂತೆ. ತಮ್ಮ ದೇಶದವರಿಗೆ ರೆಕಮೆಂಡ್ ಮಾಡಿ ಕರೆತರುವಂತೆ. ಆಗ ರೋಡ್ ಶೋಗಳು ಅರ್ಥಪೂರ್ಣ ಮತ್ತು ಸಾರ್ಥಕ ಎನಿಸಿಕೊಳ್ಳುತ್ತವೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಪ್ರಚಾರದ ಜತೆಗೆ ಸುರಕ್ಷತೆ, ಸೌಲಭ್ಯ, ಸಂಪರ್ಕ ಮತ್ತು ಆತಿಥ್ಯಕ್ಕೂ ಆದ್ಯತೆ ನೀಡುವಂತಾಗಲಿ.
’ರೋಡ್ ಶೋನಲ್ಲಿ ಕರ್ನಾಟಕವನ್ನು ತೋರಿಸೋಣ. ಆದರೆ ಕರ್ನಾಟಕಕ್ಕೆ ಬಂದಾಗ ಪ್ರವಾಸಿಗರಿಗೆ ನಿರಾಶೆಯಾಗದಂತೆ ನೋಡಿಕೊಳ್ಳೋಣ’ ಎಂಬುದು ನಮ್ಮ ಪ್ರವಾಸೋದ್ಯಮದ ಮನಸ್ಥಿತಿಯಾಗಬೇಕು. ಇಲ್ಲವಾದಲ್ಲಿ ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಂಡಂತಾಗುತ್ತದೆ.