• ನವೀನ್‌ ಸಾಗರ್‌

ಪ್ರವಾಸಿ ತಾಣಗಳಿಗೆ ಹೋಗುವವರನ್ನು ಮುಖ್ಯವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದು. ಮೊದಲನೆಯವರು ಆ ಸ್ಥಳದ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ, ಪ್ರಕೃತಿ ಸೌಂದರ್ಯ ಇತ್ಯಾದಿಗಳನ್ನು ಆಸ್ವಾದಿಸಲು ಹೋಗುವವರು. ಎರಡನೆಯವರು ಗೋಡೆ, ಬಂಡೆ, ಮರ, ಕೋಟೆ, ಗುಹೆ, ಸ್ಮಾರಕ, ದೇವಾಲಯದ ಕಂಬ – ಏನು ಸಿಕ್ಕಿದರೂ ಅದರ ಮೇಲೆ ತಮ್ಮ ಅಮರ ಪ್ರೇಮಕಥೆಯನ್ನು ಕೆತ್ತಲು ಹೋಗುವವರು.

ಇದನ್ನೂ ಓದಿ:ಬಾಟಲು ತೋರಿಸಿದ ಪರಿಪಾಟಲು!

ಇತಿಹಾಸಕಾರರು ಸಾವಿರಾರು ವರ್ಷಗಳ ಹಿಂದಿನ ನಾಗರೀಕತೆಯ ಗುರುತುಗಳನ್ನು ಹುಡುಕುತ್ತಾರೆ. ಆದರೆ ನಮ್ಮ ಪ್ರವಾಸಿಗರು ಮಾತ್ರ "ದರ್ಶನ್ ಲವ್ಸ್ ಪವಿತ್ರಾ", "ರವಿ + ಶಶಿ", "ಸಂಜು ಮತ್ತು ಗೀತಾ ", "ಗುಂಡ ಮತ್ತು ಗುಂಡಿ" ಅಂತೆಲ್ಲ ಬರೆದು ಅದಕ್ಕೊಂದು ಹಾರ್ಟ್ ಶೇಪ್ ಹಾಕಿ ಅದರಲ್ಲೊಂದು ಬಾಣ ಸಿಕ್ಕಿಸಿ ತಮ್ಮ ಕಲಾಕೌಶಲದ ಜತೆಗೆ ಮಹಾನ್ ಪ್ರೇಮವನ್ನೂ ಸಾರುತ್ತಾರೆ. ಕೋಟ್ಯಂತರ ರುಪಾಯಿ ಖರ್ಚು ಮಾಡಿ ಶಿಲ್ಪಿಗಳನ್ನು ಕರೆಸಿ, ಎಲ್ಲೆಲ್ಲಿಂದಲೋ ಕಲ್ಲು ತರಿಸಿ ದೇವಾಲಯ ಕಟ್ಟಿಸಿದ ರಾಜ ಕೂಡ ತನ್ನ ಲವ್ ಸ್ಟೋರಿಯ ಬಗ್ಗೆ ಕಲ್ಲಿನಲ್ಲಿ ಈ ಥರ ಕೆತ್ತಿಸಿರೋದಿಲ್ಲ. (ಆಗಿನ ಕಾಲದಲ್ಲಿ ರಾಜನಿಗೆ ಸುಮಾರು ಜನ ಪತ್ನಿಯರು ಇರ್ತಿದ್ರು ಅದ್ಕೇ ಆತ ಧೈರ್ಯ ಮಾಡ್ತಾ ಇರ್ಲಿಲ್ಲ ಅನ್ನಬೇಡಿ) ಇವ್ರು ಮಾತ್ರ ಎಗ್ಗುಸಿಗ್ಗಿಲ್ಲದೆ ಯಾರದ್ದೋ ಆಸ್ತಿ ಮೇಲೆ ತಮ್ಮ ಪ್ರೇಮಕಹಾನಿ ಕೆತ್ತಿಬಿಡುತ್ತಾರೆ. ಮುಂದ್ಯಾವತ್ತೋ ಸಾವಿರ ವರ್ಷಗಳ ಬಳಿಕ ಪುರಾತತ್ವ ಇಲಾಖೆ ಉತ್ಖನನ ನಡೆಸಿದರೆ, ಈ ಪ್ರದೇಶದಲ್ಲಿ ಕ್ರಿ.ಶ. 2026ರ ಸುಮಾರಿಗೆ ದರ್ಶನ್ ಮತ್ತು ಪವಿತ್ರಾ ಎಂಬ ಪ್ರೇಮಿಗಳಿದ್ದರು. ಅವರ ನೆನಪಿನಾರ್ಥ ಈ ದೇವಾಲಯ ಕಟ್ಟಲ್ಪಟ್ಟಿತ್ತು ಅಂತ ಪ್ರೂಫ್ ಸಮೇತ ಒಂದು ಸುಳ್ಳು ಇತಿಹಾಸ ಹುಟ್ಟಿದರೂ ಅಚ್ಚರಿ ಬೇಡ.

ಯಾವುದೇ ಪ್ರವಾಸಿ ತಾಣಕ್ಕೆ ಹೋಗಿ ನೋಡಿ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಿದ ಸ್ಮಾರಕದ ಸೌಂದರ್ಯಕ್ಕಿಂತಲೂ ದೊಡ್ಡದಾಗಿ ಲವ್ ಸ್ಟೋರಿಗಳೇ ಕಣ್ಣಿಗೆ ಬೀಳುತ್ತದೆ. ಕೆಲವರು ಚಾಕ್ ಪೀಸಲ್ಲೋ ಸುಣ್ಣದಲ್ಲೋ ಬರೆದಿರುತ್ತಾರೆ. ಇನ್ನು ಕೆಲವರು ಇದಕ್ಕೋಸ್ಕರಾನೇ ಉಳಿ ಸುತ್ತಿಗೆ ಕೊಂಡೊಯ್ದಿರುತ್ತಾರೆ! ಇವರ ಪ್ರೇಮದ ಆಳವನ್ನು ನೋಡಿ ಶಿಲೆಗಳೇ ನಾಚಬೇಕು.

Untitled design (39)

ಇವರದ್ದು ಇಷ್ಟೊಂದು ಗ್ರೇಟ್ ಲವ್ ಆದರೆ, ಇವರ ಪ್ರೇಮ ಅಮರವೆಂದು ನಂಬಿಕೆ ಇದ್ದರೆ, ಅದನ್ನು ತಮ್ಮ ಮನೆಯ ಕಾಂಪೌಂಡ್ ಗೋಡೆಯ ಮೇಲೆ ಬರೆಯಬಹುದಲ್ಲವೇ? ಆಸ್ತಿಪತ್ರದಲ್ಲೋ ಬ್ಯಾಂಕ್ ಅಕೌಂಟಲ್ಲೋ ಈ ಪ್ರೀತಿಯನ್ನು ಜಾಹೀರು ಮಾಡಲಿ ಅಲ್ವೇ? ಉಹುಂ. ಇವ್ರ ಪ್ರೀತಿಗೆ ಪ್ರವಾಸಿ ತಾಣಗಳೇ ನೋಂದಣಿ ಕಚೇರಿ ಅಂದ್ಕೊಂಡಿದಾರೆ. ಬರೀ ಹೆಸರೇಕೆ ಜತೆಗೆ ಫೋಟೋನೂ ಹಾಕಿಬಿಡಲಿ.

ಇವರ ಆ ಕೆತ್ತನೆ ನೋಡೋಕೆ ಇವ್ರೇ ಇನ್ನೊಂದ್ ಸಲ ಬರೋದು ಡೌಟು. ಇನ್ನು ಒನ್ ವೇ ಲವ್ ಗಳಲ್ಲಂತೂ ಆ ಮತ್ತೊಬ್ಬರಿಗೆ ಈ ಕೆತ್ತನೆ ಬಗ್ಗೆ ಗೊತ್ತಿರೋದೂ ಅನುಮಾನವೇ. ಪುರುಷರ ಟಾಯ್ಲೆಟ್ಟಲ್ಲಿ ಪ್ರೇಯಸಿಗೆ ಐಲವ್ಯೂ ಕೆತ್ತುವವರನ್ನು ನೋಡಿದಾಗ ಅಚ್ಚರಿಯಾಗುವುದಿಲ್ವಾ? ಆ ಹುಡುಗಿಗೆ ಇದು ಗೊತ್ತಾಗೋದಾದ್ರೂ ಹೇಗೆ? ಕೆಲವರಿಗೆ ಇನ್ನೊಂದು ಚಾಳಿ. ಈ ಬಾರಿ ತಮ್ಮ ಹೆಸರೊಂದಿಗೆ ಒಂದು ಹುಡುಗಿಯ ಹೆಸರು ಬರೆದಿದ್ದರೆ, ಮುಂದಿನ ಬಾರಿ ಹೋದಾಗ ತಮ್ಮ ಹೊಸ ಲವರ್ ಹೆಸರಿನ ಜತೆ ತಮ್ಮ ಹೆಸರು ಬರೆಯೋ ಖಯಾಲಿ. ಕೆಲವೊಮ್ಮೆ ಹಳೆಯ ಹೆಸರನ್ನು ಅಳಿಸಿ ಈ ಹೆಸರು ಬರೆಯೋದು. ಇವರ ಚಟಕ್ಕೆ ಅಂದಗೆಟ್ಟು ಬಲಿಯಾಗೋದು ಪ್ರವಾಸಿ ತಾಣಗಳು. ಇದಕ್ಕೆ ಮದ್ದಾದರೂ ಏನು? ಪ್ರವಾಸೋದ್ಯಮ ಇಲಾಖೆಯು ಪ್ರತಿ ಪ್ರವಾಸಿ ತಾಣದಲ್ಲೂ ಒಂದು ಗೋಡೆ ನಿರ್ಮಾಣ ಮಾಡಬೇಕು. ನಿಮ್ಮ ಲವರ್ ಹೆಸರು ಬರೆದು ಹೋಗಿ. ಪ್ರತಿ ಪ್ರೇಮಿಗೆ ಒಮ್ಮೆ ಬರೆಯೋಕೆ ಇಂತಿಷ್ಟು ರುಪಾಯಿ ಅಂತ! ಇಲ್ಲಾಂದ್ರೆ ಈ ’ದರ್ಶನ್ ಲವ್ಸ್ ಪವಿತ್ರಾ" ಸ್ಟೋರಿಗಳು ದೇಶದ ಎಲ್ಲ ಪ್ರವಾಸಿ ತಾಣಗಳನ್ನು ಗಬ್ಬೆಬ್ಬಿಸಬಹುದು. ಅಂದಹಾಗೆ ಇಲ್ಲಿ ದರ್ಶನ್ ಮತ್ತು ಪವಿತ್ರಾ ಕಾಲ್ಪನಿಕ ಮತ್ತು ಸಾಂದರ್ಭಿಕ ಹೆಸರುಗಳಷ್ಟೆ. ನಿಜಜೀವನದ ವ್ಯಕ್ತಿಗಳಿಗೆ ಸಂಬಂಧವಿಲ್ಲ.