Sunday, July 20, 2025
Sunday, July 20, 2025

ಶಿವನನ್ನೂ ನೋಡಿ.. ಶಿವಾಜಿಯನ್ನೂ ನೋಡಿ..!

ತಾಯಿ ಭವಾನಿ ಶ್ರೀ ಶಿವಾಜಿ ಮಹಾರಾಜರ ಪ್ರಾರ್ಥನೆಯಿಂದ ಸಂತುಷ್ಟಳಾಗುತ್ತಾಳೆ. ಸನಾತನ ಧರ್ಮವನ್ನು ರಕ್ಷಿಸಲು ಶಿವಾಜಿ ಮಹಾರಾಜರಿಗೆ ವರದ ರೂಪದಲ್ಲಿ ಕತ್ತಿಯನ್ನು ನೀಡಿ ಆಶೀರ್ವದಿಸುತ್ತಾಳೆ. ಇದು ಸ್ಥಳೀಯರಿಂದ ತಿಳಿದುಬರುವ ವಿಷಯ. ಇದು ನಂಬಿಕೆಯೋ ಇತಿಹಾಸವೋ ಇತಿಹಾಸಕಾರರೇ ಹೇಳಬೇಕು.

- ಸುವರ್ಣ ಲಕ್ಷ್ಮೀ ಎಂ ಹೆಚ್

"ಶ್ರೀಶೈಲ ಶಿಖರಂ ದೃಷ್ಟ್ವಾ ಪುನರ್ಜನ್ಮ ನವಿಶ್ಯತಿ"

ಶ್ರೀಶೈಲಂನ ಶಿವ ದೇಗುಲದ ಶಿಖರವನ್ನು ದರ್ಶಿಸಿದರೆ ಪುನರ್ಜನ್ಮ ಇರುವುದಿಲ್ಲ ಎಂದು ನಾವೆಲ್ಲಾ ಶ್ರೀಶೈಲಕ್ಕೆ ಭೇಟಿ ನೀಡುತ್ತೇವೆ. ಆದರೆ ದೇವಾಲಯದಿಂದ ಅನತಿ ದೂರದಲ್ಲಿರುವ ಶಿವಾಜಿ ಮಹಾರಾಜರ ಸ್ಮಾರಕದ ಬಗ್ಗೆ ನಮಗೆ ಬಹಳ ಜನಕ್ಕೆ ತಿಳಿದಿಲ್ಲ. ಕಳೆದ ವರ್ಷದ ಫೇಸ್ ಬುಕ್ ಸ್ನೇಹಿತರ ಮಾಹಿತಿಯ ಮೇರೆಗೆ ನಾನು ಶ್ರೀಶೈಲದ ದೇಗುಲ ಹಾಗೂ ಶಿವಾಜಿ ಸ್ಮಾರಕಕ್ಕೆ ಭೇಟಿ ನೀಡಿದ್ದೆ. ರಾಜಕಳೆ ತುಂಬಿರುವ ಶಿವಾಜಿ ವಿಗ್ರಹ ನಿಜಕ್ಕೂ ಅದ್ಭುತವಾಗಿದೆ.

ಶ್ರೀಶೈಲಂಗೆ ಹೋಗಿ ನೀವು ಶಿವಾಜಿ ಮಹಾರಾಜರ ಸ್ಮಾರಕ ನೋಡದೇ ಬಂದರೆ ನಿಮ್ಮ ಪ್ರವಾಸ ಅಪೂರ್ಣ ಎಂದೇ ಅಂದುಕೊಳ್ಳಿ. ಚಿಕ್ಕದಾಗಿ ಈ ಸ್ಮಾರಕ ಸ್ಥಳದ ವಿವರಗಳನ್ನು ನೀಡಿಬಿಡುತ್ತೇನೆ.

srishaila

1677 ರಲ್ಲಿ ಶ್ರೀ ಶಿವಾಜಿ ಮಹಾರಾಜರು ತಮ್ಮ ದಕ್ಷಿಣದ ದಂಡಯಾತ್ರೆಯ ಸಮಯದಲ್ಲಿ ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಿ ಅನುಯಾಯಿಗಳು ತನಗಾಗಿ ನಿರ್ಮಿಸಿದ ಧ್ಯಾನ ಮಂದಿರದಲ್ಲಿ ತಾಯಿ ಭವಾನಿಯನ್ನು ಪ್ರಾರ್ಥಿಸುತ್ತಾರೆ. ಆಗ ತಾಯಿ ಭವಾನಿ ಶ್ರೀ ಶಿವಾಜಿ ಮಹಾರಾಜರ ಪ್ರಾರ್ಥನೆಯಿಂದ ಸಂತುಷ್ಟಳಾಗುತ್ತಾಳೆ. ಸನಾತನ ಧರ್ಮವನ್ನು ರಕ್ಷಿಸಲು ಶಿವಾಜಿ ಮಹಾರಾಜರಿಗೆ ವರದ ರೂಪದಲ್ಲಿ ಕತ್ತಿಯನ್ನು ನೀಡಿ ಆಶೀರ್ವದಿಸುತ್ತಾಳೆ. ಇದು ಸ್ಥಳೀಯರಿಂದ ತಿಳಿದುಬರುವ ವಿಷಯ. ಇದು ನಂಬಿಕೆಯೋ ಇತಿಹಾಸವೋ ಇತಿಹಾಸಕಾರರೇ ಹೇಳಬೇಕು.

ಇನ್ನು, 1974 ರಲ್ಲಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ತ್ರಿಶತಮಾನೋತ್ಸವವನ್ನು “ಛತ್ರಪತಿ ದಿನ” ಎಂದು ದೇಶಾದ್ಯಂತ ಆಚರಿಸಲಾಯಿತು. ಈ ಸಮಯದಲ್ಲಿ ಹಿರಿಯ ಸಮಾಜ ಸೇವಕ, ಇತಿಹಾಸಕಾರ ಮತ್ತು ಹಿರಿಯ ಆರೆಸ್ಸೆಸ್ ನಾಯಕ, ಮೋರೇಶ್ವರ ನೀಲಕಂಠ ಪಿಂಗಳೆ ಅವರು ಮೋರೋಪಂತ್ ಜಿ ಎಂದೇ ಜನಪ್ರಿಯರಾದ ವಿ. ಮೋಹನ್ ರಾವ್ ಅವರು ಜಾಗೃತಿ, ತೆಲುಗು ವಾರಪತ್ರಿಕೆಯ ಸಂಪಾದಕರಾದ ರಾಮು ಅವರು ಶಿವಾಜಿ ತಪಸ್ಸು ಮಾಡಿದ ಧ್ಯಾನ ಮಂದಿರಕ್ಕೆ ಭೇಟಿ ನೀಡಿದರು. ಧ್ಯಾನ ಮಂದಿರವು ಶಿಥಿಲಾವಸ್ಥೆಯಲ್ಲಿದ್ದು, ತುರ್ತು ನವೀಕರಣದ ಅಗತ್ಯವಿತ್ತು. ಆ ಸ್ಥಳದಲ್ಲಿ ಶಿವಾಜಿ ಮಹಾರಾಜರ ತಪಸ್ಸನ್ನು ಸ್ಮರಿಸಲು ಸೂಕ್ತವಾದ ಸ್ಮಾರಕವನ್ನು ನಿರ್ಮಿಸಲು ಅವರು ನಿರ್ಧರಿಸಿದರು. ಇದು ಸ್ಮಾರಕ ನಿರ್ಮಾಣದ ಹಿಂದಿನ ಕಥೆ. ಸ್ಮಾರಕವು ಶಿವಾಜಿ ಮಹಾರಾಜರ ಚೈತನ್ಯದ ಸ್ಫೂರ್ತಿಯ ಕೇಂದ್ರವಾಗಿದ್ದು, ಇದನ್ನು "ಶ್ರೀ ಶಿವಾಜಿ ಸ್ಫೂರ್ತಿ ಕೇಂದ್ರ" ಎಂದು ಕರೆಯಲಾಗುತ್ತದೆ.

ಕನ್ಯಾಕುಮಾರಿಯಲ್ಲಿರುವ "ವಿವೇಕಾನಂದ ರಾಕ್ ಮೆಮೋರಿಯಲ್" ಮಾದರಿಯಲ್ಲಿ ಸ್ಮಾರಕವನ್ನು ಕಲ್ಪಿಸಲಾಗಿದೆ. ಮಹಾಬಲಿಪುರದ (ತಮಿಳುನಾಡು) ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣಪತಿ ಅವರು ಇದನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ಕಂಚಿ ಕಾಮಕೋಟಿ ಪೀಠದ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳ ಆಶೀರ್ವಾದದಿಂದ ಪ್ರಾರಂಭವಾಯಿತು.

shrishailam shivaji

ಎಪಿ ದತ್ತಿ ಇಲಾಖೆಯು 10,233 ಚ. ಅಡಿ ಭೂಮಿಯನ್ನು ಶ್ರೀ ಶಿವಾಜಿ ಸ್ಮಾರಕ ಸಮಿತಿಗೆ 99 ವರ್ಷಗಳ ಭೋಗ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 1983 ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ವಸಂತ ದಾದಾ ಪಾಟೀಲ್ ಅವರಿಂದ ಭೂಮಿಪೂಜೆಯಾದ ಈ ಸ್ಮಾರಕವು 7500 ಚದರ ವಿಸ್ತೀರ್ಣದ ಸಭಾಂಗಣವನ್ನು ಒಳಗೊಂಡಿದೆ. ನೆಲ ಮಹಡಿಯಲ್ಲಿ "ಸಮರ್ಥ ಮಂಟಪ" ಇದ್ದರೆ, ಮೊದಲ ಮಹಡಿಯಲ್ಲಿ 10,000 ಚದರ ಅಡಿ ವಿಸ್ತೀರ್ಣದ 'ದರ್ಬಾರ್ ಹಾಲ್" ಇದೆ.

ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆಯನ್ನು ಸಭಾಂಗಣದಲ್ಲಿ 4 ಅಡಿ ಪೀಠದ ಮೇಲೆ ಸ್ಥಾಪಿಸಲಾಗಿದೆ. ಸುತ್ತಲಿನ ಗೋಡೆಗಳ ಮೇಲೆ ಶಿವಾಜಿಯವರ ಜೀವನದ ಘಟ್ಟಗಳನ್ನು ಕಂಚಿನ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಇಡೀ ಸ್ಮಾರಕ ಮನಮೋಹಕವಾಗಿದ್ದು, ಶಿವಾಜಿ ಪ್ರತಿಮೆಯಂತೂ ಜೀವ ಬಂದು ಕುಳಿತಂತಿದೆ.

ಇಷ್ಟೆಲ್ಲ ವಿಶೇಷಗಳಿರೋ ಶಿವಾಜಿ ಸ್ಮಾರಕವನ್ನು ಪ್ರವಾಸಿ ಪ್ರಿಯರು ಮತ್ತು ಇತಿಹಾಸ ಓದುಗರು ನೋಡಲೇಬೇಕು. ಶ್ರೀಶೈಲಂ ಪ್ರವಾಸಕ್ಕೆ ಹೋದವರಿಗೆ ಇದೊಂದು ಬೋನಸ್ ಪ್ರವಾಸಿಸ್ಥಳ ಎಂದರೂ ತಪ್ಪಿಲ್ಲ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ