ಒಂದು ವಿಮಾನ ನಿಗದಿತ ಸಮಯಕ್ಕಿಂತ ತಡವಾಗಿ ಬಂದರೆ ಅಥವಾ ಕಾರಣಾಂತರಗಳಿಂದ ಬೋರ್ಡಿಂಗ್‌ ಗೇಟನ್ನು ಹೆಚ್ಚು ಸಮಯ ಬಳಸಿದರೆ, ಅದೇ ಗೇಟ್ ಬಳಸಬೇಕಿದ್ದ ಮುಂದಿನ ವಿಮಾನಕ್ಕೆ ಸಮಸ್ಯೆ ಉಂಟಾಗುತ್ತದೆ. ಹೀಗೆ ಒಂದು ವಿಳಂಬವು ಹಲವು ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ತರುತ್ತದೆ. ಹಾಗಾಗಿ ಇಂಥ ಗೋಜುಗಳನ್ನು ತಪ್ಪಿಸಲು ಅಧಿಕಾರಿಗಳು ಗೇಟ್‌ಗಳನ್ನು ತಕ್ಷಣವೇ ಬದಲಿಸುತ್ತಾರೆ.

Untitled design - 2026-09-10T181147.344

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಗೇಟ್ ಬಳಿ ಕಾಯುತ್ತಿರುವಾಗ, ಏಕಾಏಕಿ ಗೇಟ್ ಬದಲಾಗಿದೆ ಎಂಬ ಘೋಷಣೆ ಕೇಳಿಬರುತ್ತದೆ. ಇಂಥ ಸಂದರ್ಭಗಳಲ್ಲಿ ಅನೇಕರು ಗೊಂದಲಕ್ಕೆ ಈಡಾಗುತ್ತಾರೆ. ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಲಿರುವವರಂತೂ ಕಕ್ಕಾಬಿಕ್ಕಿ. ಹೀಗಾಗುವುದು ಸಹಜ. ಆದರೆ ಈ ಬದಲಾವಣೆಗಳು ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸುಗಮವಾಗಿಲೂ ಇರಬಹುದು. ಸುರಕ್ಷತೆ, ಸಮಯಪಾಲನೆ ಮತ್ತು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡೇ ಹೀಗೆ ಗೇಟ್‌ಗಳನ್ನು ಕೊನೆಯ ಕ್ಷಣದಲ್ಲೂ ಬದಲಾಯಿಸಲಾಗುತ್ತದೆ.

ಗೇಟ್ ಹಂಚಿಕೆ ಹೇಗೆ ನಡೆಯುತ್ತದೆ?

ನಿಲ್ದಾಣದಲ್ಲಿ ವಿಮಾನ ಇಳಿಯುವ ಪ್ರತಿಯೊಂದು ಗೇಟನ್ನು ಮೊದಲೇ ನಿಗದಿಪಡಿಸಲಾಗುತ್ತದೆ. ಆದರೆ ಅದೇ ಶಾಶ್ವತ ಯೋಜನೆ ಅಲ್ಲ. ಅದು ತಾತ್ಕಾಲಿಕ ಮಾತ್ರ. ಕಾರಣ, ವಿಮಾನ ಯಾವ ಸಮಯಕ್ಕೆ ನಿಲ್ದಾಣಕ್ಕೆ ಆಗಮಿಸುತ್ತದೆ, ಎಷ್ಟು ಸಮಯ ಗೇಟ್‌ನಲ್ಲಿ ಉಳಿಯುತ್ತದೆ, ಪ್ರಯಾಣಿಕರು ಇಳಿಯಲು ಎಷ್ಟು ಸಮಯ ಬೇಕಾಗಬಹುದು, ವಿಮಾನದ ಸ್ವಚ್ಛತಾ ಕೆಲಸ, ಇಂಧನ ಮರುಪೂರೈಕೆ ಹಾಗೂ ತಾಂತ್ರಿಕ ಪರಿಶೀಲನೆ ಹೀಗೆ ಹಲವು ಹಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ಇದಕ್ಕಾಗಿಯೇ ಒಂದು ಪರಿಣಿತ ತಂಡ ಕಾರ್ಯ ನಿರ್ವಹಿಸುತ್ತದೆ. ಈ ಅಂಶಗಳನ್ನು ಪರಿಗಣಿಸದೆ, ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆಯಾದರೆ ಮುಂದಿನ ವಿಮಾನಕ್ಕೆ ಬೇರೆ ಗೇಟ್ ನೀಡಲೇಬೇಕು.

ಒಂದರ ವಿಳಂಬ ಇನ್ನೊಂದರ ಮೇಲೂ ಪರಿಣಾಮ

ಒಂದು ವಿಮಾನ ನಿಗದಿತ ಸಮಯಕ್ಕಿಂತ ತಡವಾಗಿ ಬಂದರೆ ಅಥವಾ ಕಾರಣಾಂತರಗಳಿಂದ ಬೋರ್ಡಿಂಗ್‌ ಗೇಟನ್ನು ಹೆಚ್ಚು ಸಮಯ ಬಳಸಿದರೆ, ಅದೇ ಗೇಟ್ ಬಳಸಬೇಕಿದ್ದ ಮುಂದಿನ ವಿಮಾನಕ್ಕೆ ಸಮಸ್ಯೆ ಉಂಟಾಗುತ್ತದೆ. ಹೀಗೆ ಒಂದು ವಿಳಂಬವು ಹಲವು ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ತರುತ್ತದೆ. ಹಾಗಾಗಿ ಇಂಥ ಗೋಜುಗಳನ್ನು ತಪ್ಪಿಸಲು ಅಧಿಕಾರಿಗಳು ಗೇಟ್‌ಗಳನ್ನು ತಕ್ಷಣವೇ ಬದಲಿಸುತ್ತಾರೆ.

Untitled design - 2026-09-10T181419.412

ಈ ವಿಮಾನಕ್ಕೆ ಇಂಥದ್ದೇ ಗೇಟ್‌

ವಿಮಾನಗಳಲ್ಲೂ ಗಾತ್ರ ಮತ್ತು ವಿನ್ಯಾಸದ ಭಿನ್ನತೆಗಳಿವೆ. ಕೆಲವು ಗಾತ್ರದಲ್ಲಿ ದೊಡ್ಡವು, ಇನ್ನೂ ಕೆಲವು ಚಿಕ್ಕವು. ಹಾಗಾಗಿ ಎಲ್ಲಾ ಗೇಟ್‌ಗಳು ಎಲ್ಲಾ ವಿಮಾನಗಳಿಗೆ ಸೂಕ್ತವಾಗಿರುವುದಿಲ್ಲ. ದೊಡ್ಡ ವಿಮಾನಗಳಿಗೆ ಹೆಚ್ಚಿನ ಸ್ಥಳ, ವಿಶೇಷ ಜೆಟ್ ಬ್ರಿಡ್ಜ್ ಅಥವಾ ಬೇರೆ ರೀತಿಯ ವ್ಯವಸ್ಥೆ ಬೇಕಾಗಬಹುದು. ಹಾಗಾಗಿ ಅವುಗಳಿಗೆ ಹೊಂದಿಕೆಯಾಗುವ ಗೇಟ್‌ಗಳನ್ನು ಅವುಗಳಿಗೆ ನಿಗದಿ ಮಾಡಲಾಗುತ್ತದೆ.

ತಾಂತ್ರಿಕ ಮತ್ತು ನಿರ್ವಹಣಾ ಕಾರಣಗಳು

ಕೆಲವು ಸಂದರ್ಭಗಳಲ್ಲಿ ಗೇಟ್‌ಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳು ಎದುರಾಗಬಹುದು. ಜೆಟ್ ಬ್ರಿಡ್ಜ್‌ನಲ್ಲಿ ದೋಷ ಉಂಟಾಗುವುದು, ನಿರ್ವಹಣಾ ಕಾಮಗಾರಿ ನಡೆಯುವುದು ಅಥವಾ ಇತರ ಉಪಕರಣಗಳಲ್ಲಿ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆ ಗೇಟನ್ನು ತಾತ್ಕಾಲಿಕವಾಗಿ ಮುಚ್ಚಿ, ಬೇರೆ ಗೇಟ್‌ಗೆ ಬೋರ್ಡಿಂಗ್ ವ್ಯವಸ್ಥೆ ಮಾಡಲಾಗುತ್ತದೆ.

ಇದನ್ನು ಓದಿ : ಗಗನಸಖಿ ಪ್ರಾಣಸಖಿ

ಜನಸಂದಣಿ ನಿಯಂತ್ರಣ

ಒಂದೇ ಸಮಯದಲ್ಲಿ ಹಲವು ವಿಮಾನಗಳ ಬೋರ್ಡಿಂಗ್ ಪ್ರಕ್ರಿಯೆ ನಡೆದರೆ ಜನಸಂದಣಿ ಹೆಚ್ಚಾಗುತ್ತದೆ. ಇದರಿಂದ ಪ್ರಯಾಣಿಕರ ಸಂಚಾರ ಹಾಗೂ ಭದ್ರತಾ ತಪಾಸಣೆಗೆ ಅಡಚಣೆಯಾಗುತ್ತದೆ. ಇದನ್ನು ತಪ್ಪಿಸಲು ಮತ್ತು ಸುಲಭ ಸಂಚಾರ ಪ್ರಕ್ರಿಯೆಯನ್ನು ಕಾಯ್ದುಕೊಳ್ಳಲು ದೇಶ- ವಿದೇಶ ಪ್ರಯಾಣಿಕರನ್ನು ಪ್ರತ್ಯೇಕವಾಗಿ ನಿರ್ವಹಿಸಲು ಗೇಟ್ ಬದಲಾವಣೆ ಮಾಡಲಾಗುತ್ತದೆ. ಈ ಕ್ರಮದಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆ ಸುಗಮವಾಗುತ್ತದೆ.

ಹವಾಮಾನ ಮತ್ತು ಕಾರ್ಯಾಚರಣೆಯ ಪ್ರಭಾವ

ಮಳೆ, ಮಂಜು ಮುಸುಕಿದ ವಾತಾವರಣೆ, ಸ್ಕೈ ವೇಗಳಲ್ಲಿ ದಟ್ಟಣೆ ಮುಂತಾದ ಕಾರಣಗಳಿಂದ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಉಂಟಾಗಬಹುದು. ಹೀಗಾದಾಗ ವಿಮಾನಗಳ ಆಗಮನ ಅಥವಾ ನಿರ್ಗಮನದ ಸಮಯ ಬದಲಾಗುತ್ತದೆ. ಇದರಿಂದ ವಿಮಾನಗಳ ಬೋರ್ಡಿಂಗ್‌ ವೇಳಾಪಟ್ಟಿ ಹಾಳಗದಿರಲು ಗೇಟ್‌ಗಳ ಮರುಹಂಚಿಕೆ ಮಾಡಬೇಕಾಗುತ್ತದೆ.

Untitled design - 2026-09-10T181720.318

ಪ್ರಯಾಣಿಕರು ಏನು ಮಾಡಬೇಕು?

ಬೋರ್ಡಿಂಗ್ ಗೇಟ್ ನಿಗದಿಯಾಗಿದೆ ಎಂದು ಭಾವಿಸಿ ಒಂದೇ ಮಾಹಿತಿಯನ್ನು ನಂಬುವುದು ಸರಿಯಲ್ಲ. ವಿಮಾನ ನಿಲ್ದಾಣದಲ್ಲಿ ಹಲವು ಡಿಜಿಟಲ್ ಮಾಹಿತಿ ಫಲಕಗಳಿರುತ್ತವೆ. ಅವುಗಳನ್ನು ಆಗಾಗ ಗಮನಿಸುತ್ತಿರಬೇಕು. ಅನೌನ್ಸ್‌ಮೆಂಟ್‌ಗಳನ್ನು ಆಲಿಸುತ್ತಿರಬೇಕು. ವಿಮಾನಯಾನ ಸಂಸ್ಥೆಯ ಮೊಬೈಲ್ ಆಪ್ಗಳಲ್ಲೂ ಈ ಕುರಿತು ಮಾಹಿತಿ ನೀಡಲಾಗುತ್ತದೆ. ಅವುಗಳನ್ನೂ ಗಮನಿಸಬಹುದು. ವಿಮಾನದ ಬೋರ್ಡಿಂಗ್ ಆರಂಭವಾಗುವವರೆಗೆ ಗೇಟ್‌ನಿಂದ ತುಂಬಾ ದೂರ ಹೋಗದೇ ಇರುವುದು ಉತ್ತಮ.

ಇಂಥ ಅದೆಷ್ಟೋ ಕಾರಣಗಳಿಂದ ವಿಮಾನಗಳ ಬೋರ್ಡಿಂಗ್‌ ಗೇಟ್‌ಗಳು ಬದಲಾಗುತ್ತವೆ. ಇದು ವಿಮಾನ ನಿಲ್ದಾಣದ ಅವ್ಯವಸ್ಥೆಯಲ್ಲ. ಬದಲಿಗೆ, ಸಾವಿರಾರು ಪ್ರಯಾಣಿಕರು ಮತ್ತು ನೂರಾರು ವಿಮಾನಗಳ ಸಂಚಾರವನ್ನು ಸುರಕ್ಷಿತವಾಗಿ ಹಾಗೂ ಸಮಯಕ್ಕೆ ಸರಿಯಾಗಿ ನಿರ್ವಹಿಸಲು ಕೈಗೊಳ್ಳುವ ಕಾರ್ಯಾಚರಣೆ. ಇಂಥ ಬದಲಾವಣೆಗಳನ್ನು ಸಹಜ ಪ್ರಕ್ರಿಯೆಯೆಂದು ಅರ್ಥಮಾಡಿಕೊಂಡು, ಅಧಿಕೃತ ಪ್ರಕಟಣೆಗಳನ್ನು ಗಮನಿಸುತ್ತಿದ್ದರೆ ಅನಗತ್ಯ ಗೊಂದಲ ಮತ್ತು ಒತ್ತಡಗಳನ್ನು ತಪ್ಪಿಸಿಕೊಳ್ಳಬಹುದು.