ಭಾಷೆ ಗೊತ್ತಿಲ್ಲ ಎನ್ನುವವರೂ ಸಹ ಮೆಚ್ಚಿಕೊಳ್ಳುವ ವಿಶೇಷ ಸಿನಿಮಾಗಳು ಮಾಲಿವುಡ್‌ನ ಹಿರಿಮೆ. ಮಾಂತ್ರಿಕ ಸಂಗೀತ, ದೊಡ್ಡ ತಿರುವುಗಳು, ವೇಗದ ಕಥಾನಕಗಳಿಗಿಂತ ಸರಳವಾದ ಮಾನವ ಸಂಬಂಧಗಳಿಗೆ ಹೆಚ್ಚು ಒತ್ತು ನೀಡುವ ಸಿನಿಮಾಗಳಿಗೆ ಮಲಯಾಳಂ ಇಂಡಸ್ಟ್ರಿಯಲ್ಲಿ ವಿಶೇಷ ಸ್ಥಾನವಿದೆ. ಅಂಥ ಚಿತ್ರಗಳ ಸಾಲಿಗೆ ಸೇರುವ ಸಿನಿಮಾ ‘ಚಿನ್ನ ಚಿನ್ನ ಆಸೈ’. ಇಂಡಸ್ಟ್ರಿಯಲ್ಲಿ ಹೊಸಬರಾಗಿ ಮಲಯಾಳಂ-ತಮಿಳು ದ್ವಿಭಾಷಾ ಚಲನಚಿತ್ರ ಇದಾಗಿದ್ದು, 2026ರ ಜೂನ್ 19ರಂದು ಚಿತ್ರ ತೆರೆಕಂಡಿತ್ತು. ಇಂದ್ರನ್ಸ್ ಮತ್ತು ಮಧುಬಾಲಾ ಅವರ ಅಭಿನಯದಲ್ಲಿ ಮೂಡಿಬಂದಿದ್ದು, ಕಥೆಯ ಬಹುತೇಕ ಭಾಗ ಭಾರತದ ಆಧ್ಯಾತ್ಮಿಕ ನಗರ ವಾರಾಣಸಿಯ ಹಿನ್ನೆಲೆಯಲ್ಲಿ ಸಾಗುತ್ತದೆ.

ಇದನ್ನೂ ಓದಿ: ಪ್ರವಾಸದಲ್ಲೊಂದು ಅವಘಡವಾದಾಗ…

ಈ ಚಿತ್ರದ ಪ್ರಮುಖ ಆಕರ್ಷಣೆ ಕಥೆಯಷ್ಟೇ ಅಂದುಕೊಂಡರೆ ಅದು ವೀಕ್ಷಕರ ತಪ್ಪು ಕಲ್ಪನೆ. ಯಾಕೆಂದರೆ ವಾರಾಣಸಿ ಎಂಬ ಭಾರತದ ಪ್ರಮುಖ ಆಧ್ಯಾತ್ಮಿಕ ಕೇಂದ್ರ ಇಲ್ಲಿ ಒಂದು ಮುಖ್ಯ ಪಾತ್ರದಂತೆ ಕಾಣಿಸಿಕೊಳ್ಳುತ್ತದೆ. ಗಂಗಾ ನದಿ, ಘಾಟ್‌ಗಳು, ಕಿರಿದಾದ ಓಣಿಗಳು, ದೇವಾಲಯಗಳು, ದೋಣಿ ಪ್ರಯಾಣ, ಹಾಗೂ ನಗರದ ಆಧ್ಯಾತ್ಮಿಕ ವಾತಾವರಣವನ್ನು ಚಿತ್ರ ಸುಂದರವಾಗಿ ಕಟ್ಟಿಕೊಡುತ್ತದೆ. ಸಾಮಾನ್ಯ ಪ್ರವಾಸಿಗನ ಕಣ್ಣಿನಲ್ಲಿ ಕಾಣುವ ಗಿಜಿಗುಡುವ ಕಾಶಿಗಿಂತ, ಅಲ್ಲಿನ ನಿಶ್ಶಬ್ದತೆ, ಜನಜೀವನ ಮತ್ತು ಭಾವನಾತ್ಮಕ ವಾತಾವರಣವನ್ನು ಸಿನಿಮಾ ಹೆಚ್ಚು ಹತ್ತಿರದಿಂದ ಪರಿಚಯಿಸುತ್ತದೆ.

ಮಾಧವನ್‌ ಮಾಸ್ಟರ್‌ ಹಾಗೂ ಲೀಲಾಳ ಕತೆ

ಸಿನಿಮಾದಲ್ಲಿ ಇಂದ್ರನ್ಸ್ ಅವರು ಮಾಧವನ್ ಮಾಷ್ ಎಂಬ ನಿವೃತ್ತ ಶಾಲಾ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಮಧುಬಾಲಾ ಅವರು ತಂಜಾವೂರಿನಿಂದ ಬಂದ ಲೀಲಾ ಎಂಬ ಮಧ್ಯವಯಸ್ಕ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ಆಧ್ಯಾತ್ಮಿಕ ಪ್ರವಾಸಕ್ಕಾಗಿ ವಾರಾಣಸಿಗೆ ಬಂದಿರುವ ಲೀಲಾ ತನ್ನ ಪ್ರವಾಸಿ ತಂಡದಿಂದ ಬೇರ್ಪಡುತ್ತಾಳೆ. ಜತೆಗೆ ಪ್ರಯಾಣಕ್ಕಾಗಿ ತಂದ ಬ್ಯಾಗ್‌, ಮೊಬೈಲ್‌ ಫೋನ್‌ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ಒಬ್ಬಂಟಿಯಾಗಿಬಿಡುತ್ತಾಳೆ. ಈ ಸಂದರ್ಭದಲ್ಲಿ ಆಕೆಗೆ ಮಾಧವನ್ ಮಾಸ್ಟರ್ ನೆರವಾಗುತ್ತಾರೆ. ಅಪರಿಚಿತರಾದ ಇವರಿಬ್ಬರ ನಡುವಿನ ಪರಿಚಯ ನಿಧಾನವಾಗಿ ಸ್ನೇಹ, ಆತ್ಮೀಯತೆ ಮತ್ತು ಬದುಕಿನ ಬಗ್ಗೆ ಹೊಸ ಭರವಸೆಯಾಗಿ ಬೆಳೆಯುತ್ತದೆ

Untitled design (49)

ವಾರಾವಣಿಯ ಜನ ಜೀವನ

ಪ್ರವಾಸೋದ್ಯಮದ ದೃಷ್ಟಿಯಿಂದ ಸಿನಿಮಾ ವಿಶೇಷವಾಗುವುದು ಇಲ್ಲಿಯೇ. ಒಂದು ಸ್ಥಳವನ್ನು ಕೇವಲ ಅದರ ಪ್ರಸಿದ್ಧ ಪ್ರವಾಸಿ ತಾಣಗಳ ಮೂಲಕ ತೋರಿಸುವ ಬದಲು, ಅಲ್ಲಿನ ವಾತಾವರಣದೊಂದಿಗೆ ಮನುಷ್ಯರ ಬದುಕನ್ನು ಬೆಸೆದು ತೋರಿಸುತ್ತದೆ. ವಾರಾಣಸಿಯ ಘಾಟ್‌ಗಳಲ್ಲಿ ನಡೆಯುವ ಪಾತ್ರಗಳ ಪಯಣ, ಗಂಗೆಯ ತೀರದ ದೃಶ್ಯಗಳು ಮತ್ತು ಹಳೆಯ ನಗರದ ಓಣಿಗಳು ಪ್ರೇಕ್ಷಕರಿಗೆ ಪ್ರವಾಸದ ಅನುಭವವನ್ನೇ ನೀಡುತ್ತವೆ. ಈ ಸಿನಿಮಾ ನೋಡಿದ ನಂತರ ಕಾಶಿಗೆ ಒಮ್ಮೆ ತೆರಳಿ ಅಲ್ಲಿನ ಗಂಗಾ ಆರತಿ, ದೋಣಿ ವಿಹಾರ ಮತ್ತು ಹಳೆಯ ಬೀದಿಗಳನ್ನು ಸ್ವತಃ ಅನುಭವಿಸಬೇಕೆಂಬ ಆಸೆ ಮೂಡುವುದು ಸಹಜ. ನಿರ್ದೇಶಕಿ ವರ್ಷಾ ವಾಸುದೇವ್ ಸ್ವತಃ ವಾರಾಣಸಿಗೆ ಭೇಟಿ ನೀಡಿದ ಅನುಭವದಿಂದ ಈ ಕಥೆಯ ಕಲ್ಪನೆ ಮೂಡಿತು ಎಂದು ಹೇಳಿದ್ದಾರೆ. ನಗರದ ಸೌಂದರ್ಯವನ್ನು ಅತಿಯಾಗಿ ಅಲಂಕರಿಸುವ ಬದಲು, ಅದರ ನೈಜ ಸೊಬಗು ಮತ್ತು ಅಪೂರ್ಣತೆಗಳನ್ನೂ ಸಿನಿಮಾದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿರುವುದಾಗಿ ಅನೇಕ ಮಾಧ್ಯಮ ಸಂದರ್ಶನಗಳಲ್ಲಿ ಅವರು ಹೇಳಿಕೊಂಡಿರುಉವದುಂಟು.

ಚಿತ್ರದ ಮತ್ತೊಂದು ಗಮನಾರ್ಹ ಅಂಶವೆಂದರೆ ಇಂದ್ರನ್ಸ್ ಅವರ ಅಭಿನಯ. ಸಾಮಾನ್ಯವಾಗಿ ಹಾಸ್ಯ ಮತ್ತು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಅವರು ಈ ಸಿನಿಮಾದಲ್ಲಿ ಭಾವನಾತ್ಮಕ ಪಾತ್ರದಲ್ಲಿ ಕಾಣಿಸುತ್ತಾರೆ. ಮಾಧವನ್ ಮಾಸ್ಟರ್ ಅವರ ಮೌನ, ಸರಳತೆ ಮತ್ತು ಸಹಾನುಭೂತಿಯನ್ನು ಇಂದ್ರನ್ಸ್ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. ಇಂದ್ರನ್ಸ್ ಜತೆಗೆ ಮಧುಬಾಲಾ ಅವರ ಅಭಿನಯದ ಹೊಂದಾಣಿಕೆಯೂ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.

ಆದರೆ ಸಿನಿಮಾ ಎಲ್ಲರಿಗೂ ಒಂದೇ ರೀತಿಯಲ್ಲಿ ಇಷ್ಟವಾಗಬೇಕೆಂದಿಲ್ಲ. ಕಥೆಯ ವೇಗ ನಿಧಾನವಾಗಿದ್ದು, ದೊಡ್ಡ ತಿರುವುಗಳಿಗಿಂತ ಪಾತ್ರಗಳ ಮಾತುಕತೆ ಮತ್ತು ಭಾವನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದೇ ಕಾರಣಕ್ಕೆ ವೇಗದ ಮನರಂಜನೆ ಬಯಸುವವರಿಗೆ ಸಿನಿಮಾ ನಿಧಾನವೆನಿಸಬಹುದು. ಕೆಲವು ವಿಮರ್ಶಕರೂ ಚಿತ್ರದ ನಿಧಾನಗತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಪ್ರವಾಸ, ಸ್ಥಳದ ಅನುಭವ ಮತ್ತು ಮಾನವ ಸಂಬಂಧಗಳನ್ನು ನಿಧಾನವಾಗಿ ಆಸ್ವಾದಿಸುವವರಿಗೆ ‘ಚಿನ್ನ ಚಿನ್ನ ಆಸೈ’ ಒಂದು ಭಾವನಾತ್ಮಕ ಪ್ರವಾಸದ ಅನುಭವ ನೀಡುವ ಸಿನಿಮಾ.

Untitled design (50)

ವಾರಾಣಸಿಯನ್ನು ಕೇವಲ ಪ್ರವಾಸಿ ತಾಣವಾಗಿ ತೋರಿಸದೆ, ಪಾತ್ರಗಳ ಬದುಕಿನ ಅನುಭವದ ಭಾಗವಾಗಿ ಕಟ್ಟಿಕೊಟ್ಟಿರುವುದು ಚಿತ್ರದ ವಿಶೇಷ. ಸಿನಿಮಾ ನೋಡಿದ ಬಳಿಕ ಕಾಶಿಯ ಘಾಟ್‌ಗಳು, ಗಂಗಾ ತೀರ, ಹಳೆಯ ಬೀದಿಗಳು ಮತ್ತು ಅಲ್ಲಿನ ಆಧ್ಯಾತ್ಮಿಕ ವಾತಾವರಣವನ್ನು ನೇರವಾಗಿ ಅನುಭವಿಸಬೇಕೆಂಬ ಆಸೆ ಮೂಡಿದರೆ, ಅದೇ ಚಿತ್ರದ ಪ್ರವಾಸೋದ್ಯಮದ ಯಶಸ್ಸು ಎನ್ನಬಹುದು.

ಸಿನಿಮಾ ಮಾಹಿತಿ

ಸಿನಿಮಾ: ಚಿನ್ನ ಚಿನ್ನ ಆಸೈ

ನಿರ್ದೇಶನ: ವರ್ಷಾ ವಾಸುದೇವ್

ಮುಖ್ಯ ಪಾತ್ರಗಳು: ಇಂದ್ರನ್ಸ್, ಮಧುಬಾಲಾ, ಅಪರ್ಣಾ ಬಾಲಮುರಳಿ, ತಂಬಿ ರಾಮಯ್ಯ

ಸಂಗೀತ: ಗೋವಿಂದ ವಸಂತ

ಬಿಡುಗಡೆ ದಿನಾಂಕ: ಜೂನ್ 19, 2026