• ಡಾಕ್ಟರ್‌. ಡಿ.ವಿ. ಗುರುಪ್ರಸಾದ್‌

ಕೆಲವು ವರ್ಷಗಳ ಹಿಂದೆ ನಾನು ಆರೋಗ್ಯ ಸಂಸ್ಥೆಗಳನ್ನು ನಡೆಸುವ ಒಂದು ಸಂಸ್ಥೆಯ ಮುಖ್ಯಸ್ಥನಾಗಿದ್ದೆ. ಆಗೊಂದು ದಿನ ನಮ್ಮ ಅಲೋಪತಿ ಆಸ್ಪತ್ರೆಯ ಮುಖ್ಯಸ್ಥರು ವಿದೇಶಿ ಪ್ರಜೆಗಳಿಗೆ ಶುಶ್ರೂಷೆ ನೀಡುವ ಅಂತಾರಾಷ್ಟ್ರೀಯ ರೋಗಿಗಳ ವಿಭಾಗವನ್ನು ನಮ್ಮ ಆಸ್ಪತ್ರೆಯಲ್ಲಿ ಆರಂಭಿಸೋಣವೆಂದರು. ಅವರ ಜತೆಗಿದ್ದ ನಮ್ಮ ಆಯುರ್ವೇದ ಆಸ್ಪತ್ರೆಯ ವೈದ್ಯರು, ʼಕೇರಳ ರಾಜ್ಯ ಹೆಚ್ಚಿನ ವಿದೇಶಿ ಪ್ರವಾಸಿಗಳನ್ನು ಆಕರ್ಷಿಸುತ್ತಿರುವ ಮುಖ್ಯ ಕಾರಣವೇ ಆಯುರ್ವೇದದ ಚಿಕಿತ್ಸೆ. ಹಲವಾರು ದೇಶಗಳಲ್ಲಿ ಅಲೋಪತಿಕ್ ಚಿಕಿತ್ಸೆಗಿಂತ ಆಯುರ್ವೇದ, ಯುನಾನಿ ಮತ್ತು ಚೀನಾ ದೇಶದ ಚಿಕಿತ್ಸಾ ಪದ್ಧತಿಗಳು ಜನಪ್ರಿಯವಾಗುತ್ತಿವೆ. ನಾವು ಅಲೋಪತಿಕ್ ಚಿಕಿತ್ಸೆಯೊಡನೆ ಆಯುರ್ವೇದದ ಟ್ರೀಟ್‌ಮೆಂಟ್ ಕೊಟ್ಟು ಅದಕ್ಕೆ ಹೊಂದಿಕೊಂಡಂತೆ ಯೋಗ ಮತ್ತು ವೆಲ್‌ನೆಸ್ ಶಾಖೆಯನ್ನು ತೆರೆದರೆ ಅದು ನಮಗೂ ಹಾಗೂ ದೇಶಕ್ಕೂ ಲಾಭದಾಯಕʼ ಎಂದರು.

ಇದನ್ನೂ ಓದಿ:ರೀಜನರೇಟಿವ್ ಟೂರಿಸಂ: ವೀಕ್ಷಕರಿಂದ ರಕ್ಷಕರಾಗುವ ಹೊಸ ಪರಿ

ಇದರ ಸಾಧಕ ಬಾಧಕಗಳೇನು? ಎಂದು ನಾನವರನ್ನು ಪ್ರಶ್ನಿಸಿದೆ. ʼಮುಖ್ಯವಾಗಿ ನಾವು ಅಮೂಲ್ಯವಾದ ವಿದೇಶಿ ವಿನಿಮಯವನ್ನು ಗಳಿಸಬಹುದು, ನಮ್ಮ ವೈದ್ಯರು ಮತ್ತು ಇತರ ಸಿಬ್ಬಂದಿಗಳ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ನಮ್ಮ ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸಬಹುದು. ವಿದೇಶೀಯರಿಗೆ ಕೊಡುವ ಶುಶ್ರೂಷೆಯಲ್ಲಿ ಎಡವಟ್ಟಾಗದಿದ್ದರೆ ಯಾವುದೇ ಗಂಭೀರ ಸಮಸ್ಯೆಗಳು ಬರುವುದಿಲ್ಲ. ಎಡವಟ್ಟಾದರೆ ಆ ರೋಗಿಗಳು ನಮ್ಮ ಮೇಲೆ ಕೇಸ್ ದಾಖಲಿಸಿ ಪರಿಹಾರವನ್ನು ಕೇಳಬಹುದು. ಇದಾಗದಂತೆ ನಾವು ಪ್ರಯತ್ನಿಸಬೇಕುʼ ಎಂದರು.

Untitled design (26)

ಮುಂದಿನ ಚರ್ಚೆಯಲ್ಲಿ ನಮ್ಮ ಸರಕಾರವೇ ಮೆಡಿಕಲ್ ಮತ್ತು ವೆಲ್‌ನೆಸ್ ಟೂರಿಸಂಗೆ ಪ್ರೋತ್ಸಾಹವನ್ನು ಕೊಡುತ್ತಿದೆ ಎಂದು ತಿಳಿಯಿತು. ಅಮೆರಿಕ ಮತ್ತು ಯುರೋಪ್‌ಗಳಲ್ಲಿ ವೈದ್ಯಕೀಯ ಚಿಕಿತ್ಸೆಯ ವೆಚ್ಚ ನಮ್ಮ ದೇಶಕ್ಕಿಂತ ಐದಾರು ಪಟ್ಟು ಹೆಚ್ಚು. ಆದರೂ ಆ ದೇಶಗಳಲ್ಲಿ ಬೇಗನೇ ಚಿಕಿತ್ಸೆ ಸಿಗುವುದಿಲ್ಲ. ಅಲ್ಲಿಯವರು ನಮ್ಮ ದೇಶದಲ್ಲಿ ಚಿಕಿತ್ಸೆ ಪಡೆದರೆ ಅವರಿಗೆ ಕಡಿಮೆ ಬೆಲೆಯಲ್ಲಿ, ಶೀಘ್ರವಾಗಿ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ. ಇದಲ್ಲದೇ ಚಿಕಿತ್ಸೆಯ ನಂತರ ರೋಗಿಗಳು ಮತ್ತವರ ಕುಟುಂಬ ನಮ್ಮ ದೇಶದ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಬಹುದು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಂತೆ ಎನ್ನುವುದು ಈ ಪ್ರೋತ್ಸಾಹಕ್ಕೆ ಕಾರಣಗಳು.

ಆದರೆ ವಿದೇಶೀಯರು ನಮ್ಮಲ್ಲಿ ಟ್ರೀಟ್‌ಮೆಂಟ್‌ಗೆ ಬರಬೇಕಾದರೆ ನಮ್ಮ ವಾರ್ಡ್‌ಗಳನ್ನು ಅಂತಾರಾಷ್ರೀಯ ಮಟ್ಟಕ್ಕೆ ಏರಿಸಬೇಕು. ನಮ್ಮಲ್ಲಿ ಕೊಡುವ ಸೇವೆಯ ಗುಣಮಟ್ಟ ಚೆನ್ನಾಗಿದೆಯೆಂದು ಜೆ.ಸಿ.ಐ ಎನ್ನುವ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಪ್ರಮಾಣಪತ್ರವನ್ನು ತೆಗೆದುಕೊಳ್ಳಬೇಕು ಎಂದು ನಮ್ಮ ವೈದ್ಯರು ತಿಳಿಸಿದಾಗ ಅದನ್ನು ಬೇಗನೆ ಪಡೆದು ನಮ್ಮ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮೆಡಿಕಲ್ ಹಾಗೂ ವೆಲ್‌ನೆಸ್ ವಿಭಾಗವನ್ನು ಪ್ರಾರಂಭಿಸಿದೆವು. ಹೊರದೇಶದ ರೋಗಿಗಳಿಗಾಗಿ ವಿಶೇಷ ವಾರ್ಡ್‌ಗಳನ್ನು ನಿರ್ಮಿಸಿ ರೋಗಿಗಳ ಜತೆ ಬರುವವರು ತಂಗಲು ವಿವಿಧ ಹೊಟೇಲ್‌ಗಳ ಜತೆ ಒಪ್ಪಂದವನ್ನು ಮಾಡಿಕೊಂಡೆವು. ಗುಣಹೊಂದಿದ ರೋಗಿಗಳು ಮತ್ತವರ ಕುಟುಂಬದವರಿಗೆ ನಮ್ಮ ರಾಜ್ಯದ ಹಾಗೂ ದೇಶದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಅನುಕೂಲವಾಗಲು ಟ್ರಾವೆಲ್ ಏಜೆನ್ಸಿಯೊಂದನ್ನು ನೇಮಿಸಿಕೊಂಡೆವು. ಇಂಗ್ಲಿಷ್ ಭಾಷೆ ಬರದಿರುವವರ ಜತೆ ಸಂವಹನಕ್ಕಾಗಿ ಭಾಷಾಂತರಕಾರರ ಸೇವೆಯನ್ನು ಪಡೆದೆವು. ಆಫ್ರಿಕಾ, ಮಧ್ಯಪ್ರಾಚ್ಯ, ಮತ್ತು ಆಗ್ನೇಯ ಏಷ್ಯಾದ ದೇಶಗಳ ಆಸ್ಪತ್ರೆಗಳನ್ನು ಸಂಪರ್ಕಿಸಿ ನಮ್ಮಲ್ಲಿನ ಹಿರಿಯ ವೈದ್ಯರನ್ನು ಅಲ್ಲಿಗೆ ಕಳುಹಿಸಿ ಆ ಆಸ್ಪತ್ರೆಗಳಲ್ಲಿ ಅವರ ಕ್ಲಿನಿಕ್‌ಗಳನ್ನು ಏರ್ಪಡಿಸಿದೆವು. ವಿದೇಶಿ ಇನ್ಶೂರೆನ್ಸ್ ಏಜೆನ್ಸಿಗಳನ್ನು ಸಂಪರ್ಕಿಸಿದೆವು. ಇವೆಲ್ಲವನ್ನೂ ಮಾಡಿದ ಆರು ತಿಂಗಳುಗಳ ನಂತರ ನಮ್ಮ ಆಸ್ಪತ್ರೆಗಳಿಗೆ ವಿದೇಶಿ ಪೇಷೆಂಟ್‌ಗಳು ಬರುವುದು ಆರಂಭವಾಯಿತು.

Untitled design (27)

ಈಗಂತೂ ನಮ್ಮ ದೇಶದ ಐದಾರು ನಗರಗಳಲ್ಲಿ 50ಕ್ಕೂ ಹೆಚ್ಚು ಅಲೋಪಥಿಕ್ ಮತ್ತು ಆಯುರ್ವೇದದ ಆಸ್ಪತ್ರೆಗಳಲ್ಲಿ ವಿದೇಶೀಯರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕರ್ನಾಟಕ, ಉತ್ತರಾಖಂಡ, ಕೇರಳವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ವೆಲ್‌ನೆಸ್ ಸೆಂಟರ್‌ಗಳಿಗೂ ಸಾವಿರಾರು ಸಂಖ್ಯೆಯಲ್ಲಿ ವಿದೇಶೀಯರು ಆಗಮಿಸುತ್ತಿದ್ದಾರೆ. 2025ರಲ್ಲಿ ಭಾರತಕ್ಕೆ ಐದು ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಮೆಡಿಕಲ್ ಟೂರಿಸಂನ ಉದ್ದೇಶಕ್ಕಾಗಿಯೇ ಬಂದಿದ್ದಾರೆ. ಇವರಲ್ಲಿ ಹೆಚ್ಚಿನವರು ಬಾಂಗ್ಲಾದೇಶ (3.25 ಲಕ್ಷ), ಇರಾಕ್ (31,000), ಉಜ್ಬೆಕಿಸ್ತಾನ (14,000), ತುರ್ಕಮೆನಿಸ್ಥಾನ, ಕೆನ್ಯಾ ಮತ್ತು ಓಮಾನ್ (ತಲಾ 10,000) ದಿಂದ ಬಂದವರು.

ಮೆಡಿಕಲ್ ಹಾಗೂ ವೆಲ್‌ನೆಸ್ ಟೂರಿಸಂಗಾಗಿ ನಮ್ಮ ದೇಶಕ್ಕೆ ಬಹಳ ಕಾಲದಿಂದ ವಿದೇಶೀಯರು ಬರುತ್ತಿದ್ದರೂ ಈ ಬಗ್ಗೆ ವಿಶೇಷ ನೀತಿ ನಿಯಮಗಳನ್ನು ರೂಪಿಸಿಲ್ಲ. 2022ರಲ್ಲಿ ಭಾರತ ಸರ್ಕಾರವು ಮೆಡಿಕಲ್ ವೆಲ್‌ನೆಸ್ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಭಾರತವು ಹೊಂದಿರಬೇಕಾದ ತಂತ್ರಗಾರಿಕೆ ಎನ್ನುವ ದಾಖಲೆಯನ್ನು ಬಿಡುಗಡೆ ಮಾಡಿತು. ಇದರನ್ವಯ ಮೆಡಿಕಲ್ ಟೂರಿಸಂ ಎಂದರೆ ದೇಹಕ್ಕೆ ಬಂದಿರುವ ಕಾಯಿಲೆಗಳಿಂದ ಗುಣಮುಖರಾಗಲು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು. ಇದನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದರಲ್ಲಿ ಹೃದಯದ ಸರ್ಜರಿ, ಮೆದುಳಿನ ಸರ್ಜರಿ, ಮೊಣಕಾಲು ಮತ್ತು ಹಿಪ್ ಬದಲಾವಣೆ, ಅಂಗಾಗಗಳ ಕಸಿ, ಕ್ಯಾನ್ಸರ್ ಚಿಕಿತ್ಸೆ ಮುಂತಾದವಿದ್ದರೆ ಎರಡನೆಯ ವಿಭಾಗದಲ್ಲಿ ಪ್ಲಾಸ್ಟಿಕ್ ಸರ್ಜರಿ, ಹಲ್ಲುಗಳ ಸಮಸ್ಯೆಗಳ ನಿವಾರಣೆ, ಕೃತಕ ಹಲ್ಲುಗಳ ಜೋಡಣೆ, ಬಂಜೆತನದ ಟ್ರೀಟ್‌ಮೆಂಟ್ ಮುಂತಾದವು ಸೇರಿದೆ. ಮೂರನೆಯ ವಿಭಾಗವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಯುನಾನಿ, ಸಿದ್ದ, ನ್ಯಾಚುರೋಪತಿ ಮುಂತಾದವುಗಳ ಮೂಲಕ ಟ್ರೀಟ್‌ಮೆಂಟ್ ಪಡೆಯುವುದು.

ವೆಲ್‌ನೆಸ್ ಟೂರಿಸಂ ಎಂದರೆ ದೇಹದ ಆರೋಗ್ಯವನ್ನು ಉತ್ತಮಗೊಳಿಸುವ ಉದ್ದೇಶದಿಂದ ಮಾಡುವ ಪ್ರವಾಸ. ಒಬ್ಬ ವ್ಯಕ್ತಿಯ ವೈಯಕ್ತಿಕ ಉತ್ತಮ ದೇಹಸ್ಥಿತಿ ಮತ್ತು ಆರಾಮದ ಉದ್ದೇಶಕ್ಕಾಗಿಯೇ ಈ ಪ್ರವಾಸವನ್ನು ಮಾಡುವುದಾಗಿದೆ. ಬೊಜ್ಜನ್ನು ಕರಗಿಸುವುದು, ಬಿ.ಪಿ, ಶುಗರ್ ಮುಂತಾದವನ್ನು ಇಳಿಸಿಕೊಳ್ಳುವುದು, ದೇಹದ ತೂಕವನ್ನು ಇಳಿಸಿಕೊಳ್ಳುವುದು ಮತ್ತು ದೇಹಕ್ಕೆ ರೋಗ ನಿರೋಧ ತರುವ ಉದ್ದೇಶದಿಂದ ಯೋಗ, ನ್ಯಾಚುರೋಪತಿ ಮುಂತಾದವನ್ನು ಅನುಸರಿಸುವುದೂ ಇದರಲ್ಲಿ ಸೇರಿವೆ. ಇಂಥ ಪ್ರವಾಸದಿಂದ ದೈಹಿಕ, ಮಾನಸಿಕ ಇಲ್ಲವೇ ಆಧ್ಯಾತ್ಮಿಕ ಆರಾಮವು ದೊರೆಯುತ್ತದೆ.

Untitled design (25)

ವಿಶ್ವದಲ್ಲಿ ಮೆಡಿಕಲ್ ಪ್ರವಾಸಕ್ಕೆಂದೇ ಪ್ರತಿ ವರ್ಷವೂ ಒಂದೂವರೆ ಕೋಟಿ ಜನರು ಪ್ರವಾಸ ಮಾಡುತ್ತಿದ್ದಾರೆ. ಇದರಿಂದ ವಾರ್ಷಿಕವಾಗಿ ಸುಮಾರು ೨೦೦ ಬಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದೆ. ವಿಶ್ವದ 46 ಪ್ರಮುಖ ಮೆಡಿಕಲ್ ಟೂರಿಸಂ ತಾಣಗಳಲ್ಲಿ ಮುಖ್ಯವಾದವು ಅಮೆರಿಕ, ಮೆಕ್ಸಿಕೋ, ಥೈಲೆಂಡ್, ಸಿಂಗಪುರ, ಬ್ರೆಜಿಲ್, ತುರ್ಕಿ, ಟೈವಾನ್ ಮತ್ತು ಭಾರತ. ಇವುಗಳಲ್ಲಿ ಭಾರತದ ಸ್ಥಾನ 10ನೆಯದು.

ವೆಲ್‌ನೆಸ್ ಟೂರಿಸಂನ ಮಾರುಕಟ್ಟೆ ಮೆಡಿಕಲ್ ಟೂರಿಸಂ ಮಾರುಕಟ್ಟೆಗಿಂತ ಹಲವು ಪಟ್ಟು ದೊಡ್ಡದಾಗಿದ್ದು, ಇದು ವಾರ್ಷಿಕ ಸುಮಾರು 700 ಬಿಲಿಯನ್ ಡಾಲರ್ ವಹಿವಾಟನ್ನು ನಡೆಸುತ್ತದೆ. ಅಮೆರಿಕ, ಜರ್ಮನಿ, ಚೀನಾ, ಫ್ರಾನ್ಸ್, ಜಪಾನ್, ಆಸ್ಟ್ರಿಯ ಮತ್ತು ಭಾರತ ಈ ಬಗೆಯ ಪ್ರವಾಸಕ್ಕಾಗಿ ಹೆಸರುವಾಸಿಯಾಗಿದ್ದು ಭಾರತದ ಸ್ಥಾನ ವಿಶ್ವದಲ್ಲಿ 12ನೆಯದು.

ಆರೋಗ್ಯದ ಉದ್ದೇಶದಿಂದ ಪ್ರವಾಸಕ್ಕೆ ಹೋಗುವವರು ಪರಿಗಣಿಸುವ ಪ್ರಮುಖ ಅಂಶಗಳೆಂದರೆ (1) ರೋಗಿಗಳು ಶೀಘ್ರದಲ್ಲಿ ಟ್ರೀಟ್‌ಮೆಂಟ್ ಪಡೆಯಬೇಕು, (2) ಅದು ಉತ್ತಮ ಗುಣಮಟ್ಟದ್ದಾಗಿರಬೇಕು, (3) ವಿದೇಶ ಪ್ರಯಾಣಿಕರು ಆಗಮಿಸುವ ನಗರಗಳಲ್ಲಿ ಇಲ್ಲವೇ ಅವುಗಳಿಗೆ ಹತ್ತಿರವಾಗಿ ಆಸ್ಪತ್ರೆಗಳು ಇರಬೇಕು (4) ಕೈಗೆಟುಕುವ ದರಗಳಲ್ಲಿ ಟ್ರೀಟ್‌ಮೆಂಟ್ ಸಿಗಬೇಕು ಹಾಗೂ (5) ಟ್ರೀಟ್‌ಮೆಂಟ್ ತೆಗೆದುಕೊಳ್ಳುವ ದೇಶಗಳಲ್ಲಿ ಆಸಕ್ತಿದಾಯಕ ಪ್ರೇಕ್ಷಣೀಯ ಸ್ಥಳಗಳು ಇರಬೇಕು.

ಭಾರತದಲ್ಲಿ ಮೆಡಿಕಲ್ ಮತ್ತು ವೆಲ್‌ನೆಸ್ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರವು ರೂಪಿಸಿರುವ ಮುಖ್ಯ ಕಾರ್ಯಕ್ರಮವೇ ‘ಹೀಲ್ ಇನ್ ಇಂಡಿಯಾ.’ ಇದರನ್ವಯ ಐದು ಪ್ರಾಂತೀಯ ಮೆಡಿಕಲ್ ವೆಲ್‌ನೆಸ್ ಟೂರಿಸಂ ಕೇಂದ್ರಗಳು ಸ್ಥಾಪನೆಗೊಳ್ಳಲಿವೆ. ಕ್ಯಾನ್ಸರ್ ಮತ್ತು ನರದೌರ್ಬಲ್ಯ ರೋಗಿಗಳಿಗಾಗಿ ರಾಷ್ಟ್ರೀಯ ರಾಜಧಾನಿ ವಲಯ, ಅಂಗಾಂಗಗಳ ಕಸಿ ಮತ್ತು ರೋಬೋಟಿಕ್ ಎಲುಬು ಸರ್ಜರಿಗಳಿಗಾಗಿ ದಕ್ಷಿಣ ವಲಯ, ಹೃದಯ ಸಂಬಂಧಿ ಮತ್ತು ಜಠರದ ರೋಗಗಳಿಗಾಗಿ ಪಶ್ಚಿಮ ವಲಯ, ಆಗ್ನೇಯ ಏಷ್ಯಾ ದೇಶಗಳು ಮತ್ತು ಬಾಂಗ್ಲಾದೇಶದ ರೋಗಿಗಳಿಗಾಗಿಯೇ ಪೂರ್ವ ವಲಯ ಹಾಗೂ ಕೇರಳ, ಉತ್ತರಾಖಂಡಗಳಲ್ಲಿ ವೆಲ್‌ನೆಸ್ ವಲಯ. ಪ್ರತಿಯೊಂದು ವಲಯದಲ್ಲಿಯೂ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಇರುತ್ತಿದ್ದು ರೋಗಿಗಳ ಆಯ್ಕೆ ವಿಶಾಲವಾಗಿರುತ್ತದೆ. ಇದಲ್ಲದೇ ಏಮ್ಸ್ ಮಾದರಿಯ ಆಯುಷ್ ಆಸ್ಪತ್ರೆಗಳೂ ಸ್ಥಾಪನೆಗೊಳ್ಳಲಿವೆ.

Untitled design (28)

ಆರೋಗ್ಯದ ಉದ್ದೇಶದಿಂದ ಬರುವ ವಿದೇಶೀಯರಿಗಾಗಿ ಎಲೆಕ್ಟ್ರಾನಿಕ್ ಮೆಡಿಕಲ್ ವೀಸಾ, ಮೆಡಿಕಲ್ ಅಟೆಂಡೆಂಟ್‌ ವೀಸಾ, ಇ ಆಯುಷ್ ವೀಸಾ ಇವನ್ನು ಪರಿಚಯಿಸಲಾಗಿದೆ. ೧೬೦ ದೇಶಗಳ ನಾಗರಿಕರು ಈ ಸೌಲಭ್ಯವನ್ನು ಪಡೆಯಬಹುದು. ಇದರನ್ವಯ ಮೆಡಿಕಲ್ ಟ್ರೀಟ್‌ಮೆಂಟ್‌ಗಾಗಿ ಭಾರತಕ್ಕೆ 60 ದಿನಗಳ ಅವಧಿಗೆ ಬರಬಹುದು. ಮೂರು ಟ್ರಿಪ್ ಮಾಡಬಹುದು. ಅವರ ಮೆಡಿಕಲ್ ದಾಖಲೆಗಳನ್ನು ಒಂದೆಡೆಯಲ್ಲಿಡಲು ಅವರಿಗೆ ಡಿಜಿಟಲ್ ಹೆಲ್ತ್ ಪಾಸ್‌ಪೋರ್ಟ್ ಕೊಡಲಾಗುವುದು. ಇದರಲ್ಲಿ ಭಾರತದಲ್ಲಿ ಅವರಿಗೆ ನೀಡಿರುವ ಟ್ರೀಟ್‌ಮೆಂಟ್ ವಿವರಗಳು ಇರುತ್ತವೆ.

ಭಾರತದಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿಯನ್ನು ಕೊಡಲು ಕೆಲವು ಖಾಸಗಿ ಏಜೆನ್ಸಿಗಳೂ ಹುಟ್ಟಿಕೊಂಡಿವೆ. ಇವು ದೇಶದ ವಿವಿಧ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ಜತೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಏಜೆನ್ಸಿಯು ವೈದ್ಯರೊಂದಿಗೆ ಕನ್ಸಲ್ಟೇಷನ್, ಎರಡನೆಯ ಅಭಿಪ್ರಾಯ, ಟಿಕೆಟ್ ಮತ್ತು ವೀಸಾ ವ್ಯವಸ್ಥೆ, ವಸತಿ ಮತ್ತು ಸಾರಿಗೆ ಸೌಲಭ್ಯ ಮುಂತಾದವುಗಳ ಬಗ್ಗೆ ಸಹಾಯವನ್ನು ಮಾಡುತ್ತವೆ.

ಸರಕಾರ ಮತ್ತು ಖಾಸಗಿ ವಲಯಗಳು ಕೈಜೋಡಿಸಿ ವಿದೇಶೀಯರಿಗೆ ಭಾರತದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯವನ್ನು ಒದಗಿಸುವುದರಿಂದ ನಮ್ಮ ದೇಶದ ಪ್ರವಾಸೋದ್ಯಮ ಮತ್ತು ಆರೋಗ್ಯ ಸೇವೆಗಳ ಅಭಿವೃದ್ಧ್ದಿ ಗಣನೀಯ ಪ್ರಮಾಣದಲ್ಲಿ ಉಂಟಾಗಿದೆ. ಸರಕಾದ ಪ್ರೋತ್ಸಾಹದಿಂದ ಇದು ಇನ್ನಷ್ಟು ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.