• ಬಡೆಕ್ಕಿಲ ಪ್ರದೀಪ

ನಾವೆಲ್ಲಾ ಒಂದೊಂದು ಆಸೆ ಇಟ್ಟುಕೊಂಡು ಪ್ರಯಾಣ ಬೆಳೆಸುತ್ತಿರುತ್ತೇವೆ. ಅದರಲ್ಲೂ ಸೋಲೋ ಟ್ರಿಪ್‌ನಲ್ಲಿ ಸಿಗುವ ಮಜಾ ಬೇರೆಲ್ಲೂ ಸಿಗೋದಿಲ್ಲ ಅನ್ನುವ ಅದೆಷ್ಟೋ ಮಂದಿ ಇದ್ದಾರೆ. ಇದಕ್ಕೆ ಕಾರಣ, ನಮ್ಮೊಳಗೆ ನಮ್ಮನ್ನು ಕಂಡುಕೊಳ್ಳುವ, ಏಕಾಂತದ ಭಾವ ಬೆಳೆಸಿಕೊಳ್ಳುವ ಅವಕಾಶ.

ಆದರೆ, ನೀವು ಆರಿಸಿದ ಜಾಗಗಳಲ್ಲೂ ನಿಮಗೆ ಈ ಏಕಾಂತದ ಅನುಭವ ಸಿಗದಿದ್ದರೆ? ಯಾಕಪ್ಪಾ ಈ ಸೋಲೋ ಟ್ರಿಪ್‌ ಪ್ಲಾನ್‌ ಮಾಡಿದೆ ಅನ್ನುವುದೋ ಅಥವಾ ಈ ಡೆಸ್ಟಿನೇಶನ್ನನ್ನು ನಮಗೆ ಒಳ್ಳೆ ಆಪ್ಶನ್‌ ಅಂತ ಹೇಳಿದ ಫ್ರೆಂಡ್‌ ಮೇಲೆ ಹಿಡಿಶಾಪ ಹಾಕುತ್ತಿರುತ್ತೇವೆ!

ಇದನ್ನೂ ಓದಿ: ಪ್ಲಾನ್‌ ಮಾಡಿ-ಟ್ರಾವೆಲ್‌ ಮಾಡಿ

ಇರಲಿ, ಏನೀ ಆವಾಂತರ, ಹೇಗೆ ಮಾಡೋದು ಸೋಲೋ ಟ್ರಿಪ್‌ ಪ್ಲಾನಿಂಗ್?‌ ಇವನ್ನೆಲ್ಲಾ ನೋಡುತ್ತಾ ಹೋಗೋಣ. ಪ್ಲಾನಿಂಗ್‌ ಮಾಡೋದು ಸುಲಭ, ಆದರೆ ಅದರಲ್ಲಿ ಎಡವಟ್ಟುಗಳಾದರೆ ಮಾತ್ರ ಅನುಭವಿಸೋದು ನಾವೇ ಅನ್ನುವುದೂ ಹೌದು. ನಾನು ಕಂಡ, ನನ್ನ ಗೆಳೆಯರು ಅನುಭವಿಸಿದ ಒಂದಿಷ್ಟು ಅನುಭವಗಳನ್ನು ಹೆಕ್ಕಿ ತರುವ ಪ್ರಯತ್ನ ಮಾಡುತ್ತೇನೆ ಬನ್ನಿ.

ಮನುಷ್ಯ ಸಂಘಜೀವಿ ಹೌದು, ಆದರೆ ಅವನೊಳಗೆ ಏಕಾಂತವನ್ನು ಬಯಸುವ ಭಾವವೊಂದಿರುತ್ತದೆ. ಅದಕ್ಕೆ ಈ ಸೋಲೋ ಟ್ರಿಪ್‌ಗಳು ಒಳ್ಳೆಯ ಅವಕಾಶ ನೀಡುತ್ತವೆ.

ಯಾವುದೋ ರೆಸಾರ್ಟ್‌ ತುಂಬಾ ಫ್ಯಾಮಿಲಿ-ಮಕ್ಕಳಿರುತ್ತಾರೆ ಅಂದುಕೊಳ್ಳಿ, ಅಲ್ಲಿ ನೀವು ಮಾತ್ರ ಕೈಯಲ್ಲಿ ಪುಸ್ತಕ ಹಿಡಿದು ಈ ಗಲಾಟೆಯ ಮಧ್ಯದಲ್ಲಿ ನಿಮ್ಮ ಟೈಮನ್ನು ಎಂಜಾಯ್‌ ಮಾಡೋದಕ್ಕೆ ಹೊರಡೋದು, ಅನ್ಯಗ್ರಹವೊಂದರಲ್ಲಿ ಇರುವುದೂ, ಎರಡೂ ಹೆಚ್ಚು ಕಮ್ಮಿ ಒಂದೇ ಬಿಡಿ.

New Project (26)

ಈ ಸೀನನ್ನು ಇಮ್ಯಾಜಿನ್‌ ಮಾಡಿ…

ಫ್ಯಾಮಿಲಿ ರೆಸಾರ್ಟ್‌ನಲ್ಲಿ ನೀವು ಒಂದು ಮೂಲೆಯಲ್ಲಿ ಕೂತು ಎಲ್ಲವನ್ನೂ ಗಮನಿಸುತ್ತಿರುತ್ತೀರಾ! ಯಾರು ಎಲ್ಲಿ ಕುಳಿತುಕೊಳ್ಳೋದು ಅನ್ನೋ ಬಗ್ಗೆ ಡಿಬೇಟ್‌ ನಡೀತಾ ಇರುವಾಗ ನೀವು ಮಾತ್ರ ಯಾವುದಕ್ಕೂ ತಾಕದೆ, ನೀವು ಇರುವಲ್ಲಿಂದಲೇ ಇದನ್ನೆಲ್ಲಾ ಸೈಲೆಂಟಾಗಿ ಗಮನಿಸುವುದೇ ಒಂದು ರೀತಿಯ ಸೋಷಿಯಲ್‌ ಎಕ್ಸ್‌ಪೆರಿಮೆಂಟ್‌ ಅನ್ನಬಹುದು. ಅಥವಾ, ಲೈವ್‌ ಡ್ರಾಮಾ ನೋಡಿದ ಅನುಭವ ಅನ್ನಬಹುದು. ಡ್ರಾಮಾ ಫುಲ್‌ ನೋಡಲೂಬಹುದು, ನೀವದರ ಭಾಗವೇ ಅಂದರೆ ಅದೂ ಹೌದು, ಆದರೆ ನಿಮ್ಮ ಪಾತ್ರ ಒಬ್ಬ ಮೂಕ ಪ್ರೇಕ್ಷಕನದು.

ಇನ್ನು, ನಿಜಕ್ಕೂ ನಿಮ್ಮದೇ ಸಮಯ ಬೇಕು ಅಂದರೆ ಈ ಒಂದಿಷ್ಟನ್ನು ನೀವು ಅನುಭವಿಸಿಯೂ, ನಿಮ್ಮ ಸಮಯವನ್ನು ಏಕಾಂತವನ್ನು ನೀವು ಪಡೆಯುವುದು ಸುಲಭ ಯಾವಾಗ ಗೊತ್ತಾ? ಈ ಫ್ಯಾಮಿಲಿ ಕ್ರೌಡ್‌ ಈ ರೀತಿಯ ಜಾಗಗಳನ್ನು ತುಂಬಿಕೊಳ್ಳುವ ಸಮಯ, ಇಂಥದ್ದೇ ಅಂತ ಇರುತ್ತದೆ. ಸುಮಾರು ಹತ್ತು ಗಂಟೆಯಾಗುವಾಗ ಸ್ವಿಮ್ಮಿಂಗ್‌ ಪೂಲ್‌ಗಳು ತುಂಬಿ ತುಳುಕುತ್ತವೆ, ರಾತ್ರಿ ಎಂಟು ಗಂಟೆಗೆ ಬಫೆ ಊಟದ ಸಾಲು ದೊಡ್ಡದಿರುತ್ತದೆ.‌

ಬೆಳ್ಳಂಬೆಳಗ್ಗೆ, ಜನ ಕಮ್ಮಿ ಇರುವುದು ಯಾವಾಗ ಎನ್ನುವ ಹೊತ್ತನ್ನು ಆರಿಸಿಕೊಂಡು ಪೂಲಿಗೆ ಇಳಿಯಿರಿ. ಹಾಗೇ ಊಟದ ಸಮಯವನ್ನೂ ಯಾವಾಗ ಜನ ಕಮ್ಮಿಯೋ ಆಗ ಆಯ್ಕೆ ಮಾಡಿಕೊಳ್ಳಿ. ಯಾವುದು ನಮ್ಮ ಕಂಟ್ರೋಲಿನಲ್ಲಿ ಇಲ್ಲ, ಅದನ್ನು ನಮ್ಮ ಕಂಟ್ರೋಲಿಗೆ ತೆಗೆದುಕೊಳ್ಳೋದಕ್ಕೆ ಪ್ರಯತ್ನ ಪಡುವ ಬದಲು, ನಮ್ಮ ಪ್ಲಾನಿಂಗ್‌ ಮಾಡಿಕೊಂಡ್ರೆ ಸಾಕು. ಲೈಫು ಸಲೀಸು, ಟ್ರಿಪ್ಪು ಸಕ್ಸಸ್ಸು!

ಇನ್ನು, ಎಲ್ಲವೂ ನಿಮ್ಮನ್ನು ಡಿಸ್ಟ್ರ್ಯಾಕ್ಟ್‌ ಮಾಡುತ್ತಿದೆ ಎಂದಾದರೆ, ಅದರಿಂದ ದೂರವಾಗಿ, ನಿಮ್ಮೊಳಗೆ ನೀವು ಇರುವುದಕ್ಕೆ ಪ್ರಯತ್ನ ಪಡಿ. ನಿಮ್ಮ ಬ್ಯಾಗಲ್ಲಿ ನೀವು ಇಟ್ಟುಕೊಂಡಿರುವ ಬುಕ್ಕು ಅಥವಾ ಹೆಡ್‌ಫೋನ್‌ ನಿಮ್ಮ ಸಹಾಯಕ್ಕೆ ಬಂದೀತು, ನೋಡಿ.

ಅಂದ ಹಾಗೆ, ಸೋಲೋ ಟ್ರಿಪ್‌ ಅಂದರೆ ನಿಮ್ಮೊಳಗಿನ ನಿಮ್ಮನ್ನು ಕಂಡುಕೊಳ್ಳೋದು ಒಂದೆಡೆಯಾದರೆ, ನೀವು ಹೋದ ಹಾದಿಯಲ್ಲಿ ನಿಮಗೆ ಸಿಕ್ಕುವ ಎಲ್ಲವನ್ನೂ ಸ್ವೀಕರಿಸುತ್ತಾ ಸಾಗುವುದೂ ಅಷ್ಟೇ ಮುಖ್ಯ ಅನ್ನುವ ಸತ್ಯವನ್ನೂ ಅರಿತುಕೊಳ್ಳಿ. ನಿಮಗೆ ಸಿಕ್ಕ ಹೊಸಬರನ್ನು ಮಾತನಾಡಿಸುವ ಮೂಲಕ, ನೀವು ಹೊಸಬರ ಪರಿಚಯ ಮಾಡಿಕೊಂಡರೆ, ನಿಮಗೆ ಇಂದಾಗಲೀ ಮುಂದಾಗಲೀ ಅವರು ಸಹಾಯಕ್ಕೆ ಬರುತ್ತಾರೋ, ಅಥವಾ ಇಲ್ವೋ ಗೊತ್ತಿಲ್ಲ, ಆದರೆ ಅವರ ಜೊತೆಗೆ ಮಾಡಿದ ಸಂವಾದ ನಿಮ್ಮನ್ನು ಇನ್ನಷ್ಟು ಬೆಳಳೆಸುವುದಕ್ಕೆ ಕಾರಣವಾದೀತು ಅನ್ನುವುದೂ ಸತ್ಯವೇ ಬಿಡಿ.

ಸೋಲೋ ಟ್ರಿಪ್‌ ಮಾಡುವುದು ಅಂದರೆ ನೀವು ಏಕಾಂಗಿ ಅನ್ನುವ ಭಾವ ಅಲ್ಲ ಅನ್ನುವುದು ನಿಮಗೂ ಗೊತ್ತಿರಲಿ, ನಿಮ್ಮನ್ನು ಅಲ್ಲಿ ಭೇಟಿ ಮಾಡುವವರಿಗೂ ಗೊತ್ತಿರಲಿ. ನಿಮ್ಮೂರಿನಲ್ಲಿ ಸಿಗುವವರಿಂದ ತಿಳಿಯುವ, ಪಡೆಯುವುದಕ್ಕಿಂತ ಹೆಚ್ಚು ಹೊಸದೊಂದು ಜಾಗ ನಿಮಗೆ ತಂದುಕೊಡುವ ಜ್ಞಾನ ಬೇರೆಯದೇ ರೀತಿಯದು ಅನ್ನುವುದನ್ನು ನೀವು ಅರಿತಿರುವುದರ ಬಗ್ಗೆ ತಿಳಿವಿರಲಿ.

New Project (27)

ಫ್ಯಾಮಿಲಿ ಜತೆ ಸೋಲೋ ಟ್ರಿಪ್ಪು!

ಇನ್ನು ಗುಂಪಾಗಿ ಹೋಗುವಾಗ ನೀವು ಏಕಾಂಗಿಯಾಗಿ ಓಡಾಡುವ ಅನುಭವ ಪಡೆಯಬೇಕು ಅನ್ನುವ, ನಿಮ್ಮ ಫ್ಯಾಮಿಲಿ ಜತೆ ನೀವೂ ಟ್ರಾವೆಲ್‌ ಮಾಡುತ್ತಿದ್ದರೂ ನಿಮ್ಮದೇ ಝೋನ್‌ನಲ್ಲಿ ಇರಬೇಕು ಅನ್ನುವವರಾದರೆ, ಅದಕ್ಕೂ ದಾರಿಯಿದೆ.

ನೀವು ನಿಮ್ಮದೇ ರೂಲ್‌ಗಳನ್ನು ಮಾಡಿಕೊಳ್ಳಿ, ನಿಮ್ಮ ಮನೆಯವರ ಹತ್ತಿರ ಈ ಯೋಚನೆಯನ್ನು ಹೇಳಿಕೊಳ್ಳಿ. ನೀವು ಅವರೊಂದಿಗೆ ಟ್ರಾವೆಲ್‌ ಮಾಡುವುದಕ್ಕೆ ನಿಮ್ಮ ತಕರಾರಿಲ್ಲ, ಕೆಲವೊಂದು ಜಾಗಗಳಿಗೆ ಅನಿವಾರ್ಯವೆನಿಸಿದರೆ ಜತೆಗೇ ಹೋಗುವ, ಇನ್ನುಳಿದ ಸ್ಥಳಗಳಿಗೆ ಅಥವಾ ಹೋದ ಒಂದಿಷ್ಟು ದಿನಗಳಲ್ಲಿ ಕೆಲವನ್ನು ತನಗೆಂದೇ ಉಳಿಸಿಕೊಳ್ಳುವ ಇರಾದೆಯನ್ನು ಅವರ ಮುಂದಿಟ್ಟೇ ನಿಮ್ಮ ಸೋಲೋ ವಿತ್ ಫ್ಯಾಮಿಲಿ ಟ್ರಿಪ್ಪನ್ನು ಮಾಡಿಕೊಳ್ಳಿ. ಇದೂ ಇನ್ನೊಂದು ರೀತಿಯ ಅನುಭವವೇ ಸರಿ.

ಅಂದಹಾಗೆ, ಗುಂಪಿನಲ್ಲಿ ಹೋದರೆ ಅಬ್ಬರ, ಏಕಾಂತವೇ ಸುಂದರ ಅನ್ನುವುದು ನಿಮ್ಮ ಮನಸಿನ ಹಾದಿಯಾದರೆ, ಅದನ್ನು ಮಾಡುವ ಮೊದಲು ಸ್ವಲ್ಪ ಪ್ಲಾನ್‌ ಮಾಡಿಕೊಳ್ಳಿ, ಆದರೂ ಹೋದಾಗ ಬರುವ ಅನಿರೀಕ್ಷಿತ ಶಾಕ್‌ಗಳಿಗೆ ತಯಾರಾಗಿರಿ.

ಪಂಚ್‌-ರ್‌ ಶಾಪ್‌

ಫ್ಯಾಮಿಲಿ ಮಂದಿ ತುಂಬಿರೋ ಸೋಲೋ ಟ್ರಿಪ್‌ನ ಮಜಾ ಅಂದ್ರೆ ಗಂಡು-ಹೆಣ್ಣು, ಎರಡೂ ಕಡೆಯವರಲ್ಲದೇ ಹೋಗಿ ಮದುವೆ ಭೋಜನ ಎಂಜಾಯ್‌ ಮಾಡಿದ ಹಾಗೆ! ಗಲಾಟೆ ಮಾತ್ರ ಫ್ರೀ, ಎರಡೂ ಕಡೆ!