Thursday, February 19, 2026
Thursday, February 19, 2026

ಈಜಿಪ್ಟ್‌ನಲ್ಲಿ ರಾಮಮಂದಿರವಿಲ್ಲ ರಾಮ್ ಸೆಸ್ ಮಂದಿರವಿದೆ!

ಇಂದು ಲಕ್ಸರ್ ದೇವಾಲಯವು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದ್ದು, ರಾತ್ರಿ ಬೆಳಕಿನಲ್ಲಿ ಕಾಣುವ ಅದರ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಲಕ್ಸರ್ ದೇವಾಲಯ ಕೇವಲ ಕಲ್ಲಿನ ನಿರ್ಮಾಣವಾದ ಕಟ್ಟಡವಲ್ಲ, ಅದು ಪ್ರಾಚೀನ ಈಜಿಪ್ಟ್‌ನ ಆತ್ಮ, ಶಕ್ತಿ ಮತ್ತು ಶಾಶ್ವತತೆಯ ಜೀವಂತ ಪ್ರತಿರೂಪವಾಗಿದೆ.

  • ರಂಗಸ್ವಾಮಿ ಮೂಕನಹಳ್ಳಿ

ಲಕ್ಸರ್ ನಗರದಲ್ಲಿ ಈಜಿಪ್ಟಿನ ಬೇರೆ ಪ್ರದೇಶಗಳಿಗಿಂತ ಹೆಚ್ಚಾಗಿ ಇತಿಹಾಸವಿದೆ. ಈ ಕಾರಣದಿಂದ ಈಜಿಪ್ಟ್ ಪ್ರವಾಸದಲ್ಲಿ ಲಕ್ಸರ್ ಭೇಟಿ ನೀಡದೆ ಇದ್ದಲ್ಲಿ ಅಪೂರ್ಣ. ನಾನು ಭಾರತ ದರ್ಶನ ಮಾಡಿಲ್ಲ. ವಿದೇಶ ಪ್ರಯಾಣ ಹೆಚ್ಚಾಗಿ ಮಾಡಿರುವ ನಾನು ಭಾರತದ ಅನೇಕ ಕ್ಷೇತ್ರಗಳನ್ನು ನೋಡಲಾಗಿಲ್ಲ. ಆದರೆ ನನ್ನ ಸಹಪಥಿಕ ನಾಗೇಂದ್ರ ಇದಕ್ಕೆ ಅಪವಾದ. ಅವರು ದೇಶದ ಉದ್ದಗಲಕ್ಕೂ ಓಡಾಡಿದ್ದಾರೆ. ಇಲ್ಲಿನ ಕಾರ್ನಾಕ್ ದೇವಾಲಯಕ್ಕೂ ನಮ್ಮ ಕೊನಾರ್ಕ್ ದೇವಾಲಯಕ್ಕೂ ಇರುವ ಸಾಮ್ಯತೆಗಳ ಬಗ್ಗೆ ಹೇಳಿ ನನ್ನಲ್ಲಿ ಕಾರ್ನಾಕ್ ದೇವಾಲಯವನ್ನು ನೋಡುವ ಕುತೂಹಲ ಹೆಚ್ಚಿಸಿಬಿಟ್ಟಿದ್ದರು. ಹೀಗಾಗಿ ಬೆಳಗ್ಗೆ ಬಹುಬೇಗ ಎದ್ದು ನಗರ ಪ್ರದಕ್ಷಿಣೆಗೆ ಹೊರಟೆವು.

ಈ ನಗರವನ್ನು ನಾವು ಈಸ್ಟ್ ಬ್ಯಾಂಕ್ ಮತ್ತು ವೆಸ್ಟ್ ಬ್ಯಾಂಕ್ ಎಂದು ವಿಂಗಡಿಸಬಹುದು. ಈಸ್ಟ್ ಬ್ಯಾಂಕ್ ಎಂದರೆ ಅದು ನಗರ ಪ್ರದೇಶ. ಇಲ್ಲಿ ವಿಶ್ವ ಮಾನ್ಯತೆ ಪಡೆದಿರುವ ಕಾರ್ನಾಕ್ ದೇವಾಲಯ ಮತ್ತು ಲಕ್ಸರ್ ದೇವಾಲಯಗಳಿವೆ. ವೆಸ್ಟ್ ಬ್ಯಾಂಕಿನಲ್ಲಿ ಹ್ಯಾಟ್ಶೆಪ್ಸುಟ್ ದೇವಾಲಯ, ರಾಮಸೆಸ್ ii ದೇವಾಲಯಗಳಿವೆ. ವ್ಯಾಲಿ ಆಫ್ ದ ಕಿಂಗ್ಸ್ ಕೂಡ ಪಶ್ಚಿಮ ಭಾಗದಲ್ಲಿದೆ. ಈ ನಗರದಲ್ಲಿ ಇನ್ನೂ ಅನೇಕ ವಿಶೇಷತೆಗಳಿವೆ.

ಇದನ್ನೂ ಓದಿ: ಮರುಭೂಮಿಯ ಹೃದಯದಲ್ಲಿ ಮರೆಯಲಾಗದ ಪ್ರಯಾಣ!

ಈಜಿಪ್ಟ್ ದೇಶದ ಲಕ್ಸರ್ ನಗರದಲ್ಲಿ ಇರುವ ಕಾರ್ನಾಕ್ ದೇವಾಲಯ (Karnak Temple) ಪ್ರಾಚೀನ ಮಾನವ ನಾಗರೀಕತೆಯ ಶ್ರೇಷ್ಠ ಸ್ಮಾರಕಗಳಲ್ಲಿ ಒಂದು. ಇದು ಕೇವಲ ಒಂದು ದೇವಾಲಯವಲ್ಲ, ಸುಮಾರು 2,000 ವರ್ಷಗಳ ಕಾಲ ವಿವಿಧ ಫರೋಗಳು ಕಟ್ಟಿಸಿದ ಅನೇಕ ದೇವಾಲಯಗಳ, ಸ್ತಂಭಗಳ, ಸಭಾಮಂಟಪಗಳ ಮತ್ತು ಶಿಲ್ಪಕಲೆಯ ಸಮೂಹವಾಗಿದೆ. ಕಾರ್ನಾಕ್ ದೇವಾಲಯವು ಪ್ರಾಚೀನ ಈಜಿಪ್ಟ್‌ನ ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಯ ಪ್ರತೀಕವಾಗಿತ್ತು ಎನ್ನುವುದನ್ನು ಇಂದಿಗೂ ಸಾರುತ್ತಾ ನಿಂತಿವೆ.

Untitled design - 2026-02-19T181019.769

ಕಾರ್ನಾಕ್ ದೇವಾಲಯವನ್ನು ಮುಖ್ಯವಾಗಿ ಅಮುನ-ರಾ, ಮಟ್ ಮತ್ತು ಖೋನ್ಸು ದೇವತೆಗಳಿಗೆ ಅರ್ಪಿಸಲಾಗಿದೆ. ಅಮುನ-ರಾ ಈಜಿಪ್ಟ್‌ನ ಸೂರ್ಯದೇವನಾಗಿದ್ದು, ಫರೋಗಳು ತಮ್ಮ ಅಧಿಕಾರವನ್ನು ದೈವಿಕವಾಗಿ ಸ್ಥಾಪಿಸಲು ಈ ದೇವಾಲಯವನ್ನು ಬಳಸಿಕೊಂಡರು. ಪ್ರತಿಯೊಬ್ಬ ಫರೋ ತನ್ನ ಆಡಳಿತಕಾಲದಲ್ಲಿ ಹೊಸ ಸ್ತಂಭ, ಪ್ರವೇಶದ್ವಾರ ಅಥವಾ ಶಿಲ್ಪವನ್ನು ಸೇರಿಸುವ ಮೂಲಕ ತನ್ನ ಶಕ್ತಿ ಮತ್ತು ಭಕ್ತಿ ತೋರಿಸಲು ಪ್ರಯತ್ನಿಸಿದ್ದಾರೆ. ಕಾರ್ನಾಕ್ ದೇವಾಲಯದ ಅತ್ಯಂತ ಆಕರ್ಷಕ ಭಾಗವೆಂದರೆ ಗ್ರೇಟ್ ಹೈಪೋಸ್ಟೈಲ್ ಹಾಲ್. ಈ ಭವ್ಯ ಸಭಾಮಂಟಪದಲ್ಲಿ 134 ಬೃಹತ್ ಕಲ್ಲಿನ ಸ್ತಂಭಗಳಿದ್ದು, ಕೆಲವು ಸ್ತಂಭಗಳು ಸುಮಾರು 70 ಅಡಿ ಎತ್ತರ ಹೊಂದಿವೆ. ಈ ಸ್ತಂಭಗಳ ಮೇಲೆ ಕೆತ್ತಲಾದ ಹೈರೋಗ್ಲಿಫ್ ಲಿಪಿಗಳು ದೇವತೆಗಳ ಕಥೆಗಳು, ಯುದ್ಧ ವಿಜಯಗಳು ಮತ್ತು ಧಾರ್ಮಿಕ ಆಚರಣೆಗಳನ್ನು ವಿವರಿಸುತ್ತವೆ. ಇವುಗಳನ್ನು ನೋಡಿದಾಗ ಪ್ರಾಚೀನ ಈಜಿಪ್ಟ್ ಶಿಲ್ಪಿಗಳ ಕಲಾತ್ಮಕ ನೈಪುಣ್ಯ ಮತ್ತು ತಾಂತ್ರಿಕ ಜ್ಞಾನ ಎಷ್ಟು ಉನ್ನತವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.

ಕಾರ್ನಾಕ್ ದೇವಾಲಯವು ನೈಲ್ ನದಿಯೊಂದಿಗೆ ಆಳವಾದ ಸಂಬಂಧ ಹೊಂದಿತ್ತು. ವಾರ್ಷಿಕ ಉತ್ಸವಗಳ ಸಮಯದಲ್ಲಿ ಅಮುನ ದೇವರ ಮೂರ್ತಿಯನ್ನು ನೈಲ್ ನದಿಯ ಮೂಲಕ ಲಕ್ಸರ್ ದೇವಾಲಯಕ್ಕೆ ಸಾಗಿಸಲಾಗುತ್ತಿತ್ತು. ಇದನ್ನು ಒಪೆಟ್ ಉತ್ಸವ ಎಂದು ಕರೆಯಲಾಗುತ್ತಿತ್ತು. ಈ ಉತ್ಸವವು ದೇವತೆ, ರಾಜ ಮತ್ತು ಜನರ ನಡುವೆ ಇರುವ ಆತ್ಮೀಯ ಸಂಬಂಧವನ್ನು ಪ್ರತಿಬಿಂಬಿಸುತ್ತಿತ್ತು.

ಇಂದಿಗೂ ಕಾರ್ನಾಕ್ ದೇವಾಲಯವು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣವಾಗಿದೆ. ಯುನೆಸ್ಕೋ ವಿಶ್ವ ಪಾರಂಪರ್ಯ ತಾಣವಾಗಿ ಗುರುತಿಸಲ್ಪಟ್ಟಿರುವ ಈ ದೇವಾಲಯ, ಮಾನವ ಇತಿಹಾಸದ ವೈಭವವನ್ನು ಜೀವಂತವಾಗಿ ನೆನಪಿಸುತ್ತದೆ. ಕಾರ್ನಾಕ್ ದೇವಾಲಯವನ್ನು ನೋಡಿದಾಗ, ಶಿಲ್ಪಕಲೆ, ಧರ್ಮ ಮತ್ತು ರಾಜಕೀಯ ಒಂದಾಗಿ ಹೇಗೆ ಒಂದು ಮಹಾನ್ ನಾಗರೀಕತೆಯನ್ನು ರೂಪಿಸಿದ್ದವು ಎಂಬುದನ್ನು ನಾವು ಅರಿಯಬಹುದು. ಇದು ಕೇವಲ ಕಲ್ಲಿನ ಕಟ್ಟಡವಲ್ಲ. ಇದು ಸಾವಿರಾರು ವರ್ಷಗಳ ಮಾನವ ಚಿಂತನೆ ಮತ್ತು ನಂಬಿಕೆಯ ಜೀವಂತ ಸಾಕ್ಷಿ. ಈ ದೇವಾಲಯವನ್ನು ಒಂದು ದಿನದಲ್ಲಿ ಪೂರ್ಣ ನೋಡುವುದು ಅಸಾಧ್ಯ. ನಾನು ಮತ್ತ ನಾಗೇಂದ್ರ ಹತ್ತು ಕಿಲೋಮೀಟರ್ ನಡೆದಾಡಿದೆವು; ಅದು ಕೇವಲ ಮೂರೂವರೆ ತಾಸಿನಲ್ಲಿ!

Untitled design - 2026-02-19T181008.798

ಲಕ್ಸರ್ ದೇವಾಲಯ – ಪ್ರಾಚೀನ ಈಜಿಪ್ಟ್‌ನ ಆತ್ಮ ಸಾಕ್ಷಾತ್ಕಾರದ ಕೇಂದ್ರ. ಈಜಿಪ್ಟ್‌ನ ಲಕ್ಸರ್ ನಗರದಲ್ಲಿರುವ ಲಕ್ಸರ್ ದೇವಾಲಯ (Luxor Temple) ಪ್ರಾಚೀನ ಈಜಿಪ್ಟ್ ನಾಗರೀಕತೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಅತ್ಯಂತ ಮಹತ್ವದ ಸ್ಮಾರಕಗಳಲ್ಲಿ ಒಂದಾಗಿದೆ. ನೈಲ್ ನದಿಯ ಪೂರ್ವ ತೀರದಲ್ಲಿ ಸ್ಥಿತವಾಗಿರುವ ಈ ದೇವಾಲಯವನ್ನು ಮುಖ್ಯವಾಗಿ ದೇವರಾದ ಅಮುನ-ರಾ, ಅವರ ಪತ್ನಿ ಮಟ್ ಮತ್ತು ಪುತ್ರ ಖೋನ್ಸು ಇವರಿಗೆ ಸಮರ್ಪಿಸಲಾಗಿದೆ. ಕಾರ್ನಾಕ್ ದೇವಾಲಯದೊಂದಿಗೆ ಹೋಲಿಸಿದರೆ, ಲಕ್ಸರ್ ದೇವಾಲಯವು ದೇವರ ಪೂಜೆಯಷ್ಟೇ ಅಲ್ಲದೆ, ರಾಜಕೀಯ ಮತ್ತು ಆತ್ಮದ, ಪುನರ್ಜನ್ಮದ ಸಂಕೇತವಾಗಿಯೂ ಕಾರ್ಯನಿರ್ವಹಿಸಿತು.

ಲಕ್ಸರ್ ದೇವಾಲಯದ ನಿರ್ಮಾಣವನ್ನು ಫರೋ ಅಮೆನ್ಹೋಟೆಪ್ III ಆರಂಭಿಸಿದ್ದು, ನಂತರ ರಾಮ್ ಸೆಸ್ II ಇದನ್ನು ವಿಸ್ತರಿಸಿದರು. ಈ ದೇವಾಲಯವು ಇತರ ಈಜಿಪ್ಟ್ ದೇವಾಲಯಗಳಂತೆ ಮರಣಾನಂತರದ ಜೀವನಕ್ಕೆ ಮೀಸಲಾಗಿರದೆ, ಜೀವಂತ ಫರೋಗಳ ದೈವಿಕ ಅಧಿಕಾರವನ್ನು ಪುನಃ ದೃಢೀಕರಿಸುವ ಸ್ಥಳವಾಗಿತ್ತು ಎಂಬುದು ಇದರ ವಿಶಿಷ್ಟತೆ. ಇಲ್ಲಿ ನಡೆಯುತ್ತಿದ್ದ ವಿಧಿವಿಧಾನಗಳು ಫರೋನ ಶಕ್ತಿಯನ್ನು ದೇವರ ಆಶೀರ್ವಾದದೊಂದಿಗೆ ನವೀಕರಿಸುತ್ತಿದ್ದವು ಎನ್ನುವ ನಂಬಿಕೆಯಿತ್ತು.

ಲಕ್ಸರ್ ದೇವಾಲಯದ ಪ್ರವೇಶದ್ವಾರದಲ್ಲಿ ರಾಮ್ ಸೆಸ್ II ಅವರ ಬೃಹತ್ ಪ್ರತಿಮೆಗಳು ಮತ್ತು ಎತ್ತರದ ಒಬೆಲಿಸ್ಕ್‌ಗಳು ಗಮನ ಸೆಳೆಯುತ್ತವೆ. ಒಂದು ಒಬೆಲಿಸ್ಕ್‌ ಈಗ ಪ್ಯಾರಿಸ್‌ನಲ್ಲಿದೆ. ಸಹೋದರ ನಾಗೇಂದ್ರ ಭಾರತದಲ್ಲಿರುವ ಸಾಮ್ಯಗಳನ್ನು ಹೇಳುತ್ತಿದ್ದರೆ, ಇವುಗಳ ಕುರುಹುಗಳು ವಿದೇಶದಲ್ಲಿ ಎಲ್ಲಿವೆ ಎನ್ನುವುದನ್ನು ನಾನು ಹೇಳುತ್ತಿದ್ದೆ. ಹೀಗಾಗಿ ನಮ್ಮ ಪಯಣದ ಹಾದಿ ಸವೆದಿದ್ದು ಗೊತ್ತಾಗುತ್ತಿರಲಿಲ್ಲ. ರಾತ್ರಿ ಕಾಲುಗಳು ಅಯ್ಯೋ ಎಂದಾಗ ಮೊಬೈಲ್ ಆಪ್ ತೆಗೆದು ನೋಡಿದಾಗ ಒಂದು ದಿನದಲ್ಲಿ ಹದಿನೈದು ಕಿಲೋಮೀಟರಿಗೂ ಹೆಚ್ಚು ನಡೆದಿದ್ದೇವೆ ಎನ್ನುವುದು ಗೊತ್ತಾಗುತ್ತಿತ್ತು. ದೇವಾಲಯದ ಒಳಭಾಗದಲ್ಲಿ ಸ್ತಂಭಗಳ ಸಾಲುಗಳು, ಶಿಲ್ಪಚಿತ್ರಗಳು ಮತ್ತು ಹೈರೋಗ್ಲಿಫ್ ಲಿಪಿಗಳ ಮೂಲಕ ದೇವತೆಗಳ ಕಥೆಗಳು, ಯುದ್ಧ ವಿಜಯಗಳು ಮತ್ತು ಧಾರ್ಮಿಕ ಆಚರಣೆಗಳನ್ನು ವಿವರಿಸಲಾಗಿದೆ. ಈ ಶಿಲ್ಪಕಲೆ ಪ್ರಾಚೀನ ಈಜಿಪ್ಟ್ ಕಲಾವಿದರ ಅದ್ಭುತ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.

ಲಕ್ಸರ್ ದೇವಾಲಯವು ಕಾರ್ನಾಕ್ ದೇವಾಲಯದೊಂದಿಗೆ ಸಂಪರ್ಕ ಹೊಂದಿರುವ ಪವಿತ್ರ ಮಾರ್ಗದ (Avenue of Sphinxes) ಮೂಲಕ ಇನ್ನಷ್ಟು ಮಹತ್ವ ಪಡೆದಿದೆ. ಈ ಮಾರ್ಗದ ಮೂಲಕ ಪ್ರತಿವರ್ಷ ನಡೆಯುತ್ತಿದ್ದ ಒಪೆಟ್ ಉತ್ಸವದಲ್ಲಿ ಅಮುನ ದೇವರ ಮೂರ್ತಿಯನ್ನು ಕಾರ್ನಾಕ್‌ನಿಂದ ಲಕ್ಸರ್‌ಗೆ ತರಲಾಗುತ್ತಿತ್ತು. ಈ ಉತ್ಸವವು ದೇವತೆ, ರಾಜ ಮತ್ತು ಜನರ ನಡುವಿನ ಆತ್ಮೀಯ ಸಂಬಂಧವನ್ನು ಬಲಪಡಿಸುತ್ತಿತ್ತು. ಈ ರಸ್ತೆಯಲ್ಲಿ ನಾವು ನಡೆದೆವು. ವಿಡಿಯೋ ಮಾಡಿಕೊಂಡೆವು. ಅವತ್ತಿನ ದಿನದಲ್ಲಿ ಅಲ್ಲಿ ನಡೆದಿರಬಹುದಾದ ಆಚರಣೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಭ್ರಾಮಕ ಲೋಕದಲ್ಲಿ ತೇಲಿ ಹೋದೆವು. ಪ್ರಮಾಣ ಮಾಡಿ ಹೇಳುತ್ತೇನೆ, ಅದೊಂದು ಅದ್ಬುತ ಅನುಭವ. ಪ್ರಯಾಣ ಎನ್ನುವುದು ಮೈಯಲ್ಲಿ ಕಸುವಿದ್ದಾಗ ಮಾಡಿಬಿಡಬೇಕು. ಹಣವಿದ್ದಾಗ ಪ್ರಯಾಣ ಮಾಡುವುದಕ್ಕಿಂತ ಮೈಯಲ್ಲಿ ಶಕ್ತಿಯಿದ್ದಾಗ ಪ್ರವಾಸ ಮಾಡಬೇಕು. ಏಕೆಂದರೆ ಇಂಥ ಸ್ಥಳಗಳಲ್ಲಿ ಹತ್ತಾರು ಕಿಲೋಮೀಟರ್ ನಡೆಯಬೇಕು. ಇಲ್ಲವಾದಲ್ಲಿ ಅದು ನೀಡಬಹುದಾದ ಅನುಭವಗಳಿಂದ ವಂಚಿತರಾಗುತ್ತೇವೆ.
ಇಸ್ಲಾಮಿಕ ಯುಗದಲ್ಲಿಯೂ ಲಕ್ಸರ್ ದೇವಾಲಯ ತನ್ನ ಮಹತ್ವವನ್ನು ಕಳೆದುಕೊಳ್ಳಲಿಲ್ಲ. ದೇವಾಲಯದ ಒಳಭಾಗದಲ್ಲಿಯೇ ಅಬು ಅಲ್-ಹಜ್ಜಾಜ್ ಮಸೀದಿ ನಿರ್ಮಿಸಲ್ಪಟ್ಟಿದ್ದು, ವಿಭಿನ್ನ ಧರ್ಮಗಳು ಒಂದೇ ಸ್ಥಳದಲ್ಲಿ ಸಹಬಾಳ್ವೆ ನಡೆಸಿದ ಅಪೂರ್ವ ಉದಾಹರಣೆಯಾಗಿದೆ.

Untitled design - 2026-02-19T180957.415

ಇಂದು ಲಕ್ಸರ್ ದೇವಾಲಯವು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದ್ದು, ರಾತ್ರಿ ಬೆಳಕಿನಲ್ಲಿ ಕಾಣುವ ಅದರ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಲಕ್ಸರ್ ದೇವಾಲಯ ಕೇವಲ ಕಲ್ಲಿನ ನಿರ್ಮಾಣವಾದ ಕಟ್ಟಡವಲ್ಲ, ಅದು ಪ್ರಾಚೀನ ಈಜಿಪ್ಟ್‌ನ ಆತ್ಮ, ಶಕ್ತಿ ಮತ್ತು ಶಾಶ್ವತತೆಯ ಜೀವಂತ ಪ್ರತಿರೂಪವಾಗಿದೆ.

ಲಕ್ಸರ್ ನಗರದಲ್ಲಿ ಕನಿಷ್ಠ ನಾಲ್ಕೈದು ದಿನ ಠಿಕಾಣಿ ಹೂಡಬೇಕು. ಇಲ್ಲಿನ ಪ್ರತಿಯೊಂದು ದೇವಾಲಯಗಳೂ ಹೇಳುವ ಕಥೆಗಳನ್ನು ಕೇಳಲು ಐದು ದಿನ ಕೂಡ ಕಡಿಮೆ. ಈ ಕಾರಣಕ್ಕೆ ಕನಿಷ್ಠ ಎಂದದ್ದು. ನಾವು ಕೇವಲ ಎರಡು ದಿನದಲ್ಲಿ ಇಲ್ಲಿನ ದೇವಾಲಯಗಳನ್ನು ನೋಡಿದೆವು. ದಿನದ ಬಹುಪ್ರಮಾಣ ವೇಳೆಯನ್ನು ನಾವು ಸರಿಯಾಗಿ ದುಡಿಸಿಕೊಂಡೆವು. ಹೀಗಿದ್ದೂ ನಮಗೆ ದೈಹಿಕವಾಗಿ ಆಯಾಸ ಎನ್ನುವುದು ಅರಿವಿಗೆ ಬರಲಿಲ್ಲ. ಅಲ್ಲಿನ ಕಲ್ಲುಗಳು ಹೇಳುವ ಕಥೆಯ ಮುಂದೆ ನಮ್ಮ ಸಣ್ಣಪುಟ್ಟ ದೈಹಿಕ ನೋವುಗಳು ಗೌಣವಾಗಿದ್ದವು. ಈ ನಗರದ ಈಸ್ಟ್ ಬ್ಯಾಂಕ್ ನವೀನತೆಯಿಂದ ಕಂಗೊಳಿಸುತ್ತಿದೆ. ಯಾವುದೇ ಯುರೋಪಿಯನ್ ನಗರಕ್ಕೂ ಕಡಿಮೆಯಿಲ್ಲ ಎನ್ನುವಂತಿದೆ. ಅದೇ ಸಮಯದಲ್ಲಿ ವೆಸ್ಟ್ ಬ್ಯಾಂಕ್ ನಮ್ಮನ್ನು ಹದಿನಾರನೇ ಶತಮಾನಕ್ಕೆ ಕರೆದೊಯ್ಯುತ್ತದೆ. ವೆಸ್ಟ್ ಬ್ಯಾಂಕಿನಲ್ಲಿ ನೀವು ಕತ್ತೆಯನ್ನು ಬಂಡಿಗೆ ಕಟ್ಟಿ ಸಾಗಾಣಿಕೆಗೆ ಬಳಸುವುದನ್ನು ಕಾಣಬಹುದು. ಕಳೆದವಾರದ ಬರಹದಲ್ಲೂ ಎಚ್ಚರಿಸಿದ್ದೆ, ಮತ್ತೆ ಹೇಳುತ್ತಿದ್ದೇನೆ, ಇಲ್ಲಿ ಮನೆ, ಹೊಟೇಲ್ ರೂಮ್ ಬುಕ್ ಮಾಡುವಾಗ ಎಚ್ಚರ! ವೆಸ್ಟ್ ಬ್ಯಾಂಕಿನಲ್ಲಿ ಬಹಳಷ್ಟು ಪಾರಂಪರಿಕ ತಾಣಗಳಿವೆ. ಅವೆಲ್ಲವೂ ಬಹಳ ಹತ್ತಿರಲ್ಲಿವೆ ಎನ್ನುವ ಕಾರಣಕ್ಕೆ ವೆಸ್ಟ್ ಬ್ಯಾಂಕಿನಲ್ಲಿ ರೂಮ್ ಬುಕ್ ಮಾಡಿದರೆ ಆಮೇಲೆ ಬೇಜಾರು ಮಾಡಿಕೊಳ್ಳುವುದು ಪಕ್ಕಾ! ನಗರದ ಜೀವನಕ್ಕೆ ಹೊಂದಿಕೊಂಡ ನಮ್ಮಂಥವರಿಗೆ ಒಂದಷ್ಟು ಆಶ್ಚರ್ಯವಾಗುವುದು ಕೂಡ ಸಹಜ. ಹಳ್ಳಿಯ ಸೊಗಡು ಸವಿಯುತ್ತೇವೆ ಎನ್ನುವವರಿಗೆ ಅಡ್ಡಿಯಿಲ್ಲ. ಮುಂದಿನ ವಾರ ಹಾಟ್ ಏರ್ ಬಲೂನ್ ಮತ್ತು ವೆಸ್ಟ್ ಬ್ಯಾಂಕ್ ದೇವಾಲಯಗಳ ಭೇಟಿಯ ಅನುಭವದೊಂದಿಗೆ ಸಿಗುವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?