• ಕೆ. ರಾಧಾಕೃಷ್ಣ ಹೊಳ್ಳ

ಕ್ರೀಡೆಗಳು ಇಂದು ಕೇವಲ ಮನೋರಂಜನೆಯ ಕ್ಷೇತ್ರಗಳಲ್ಲ; ಅವು ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ, ಅತಿಥ್ಯ ಮತ್ತು ಸೇವಾ ವಲಯಗಳಿಗೆ ಅಪಾರ ಆದಾಯ ತರುವ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ರೂಪಾಂತರಗೊಂಡಿವೆ. ಒಲಂಪಿಕ್ಸ್‌, ಕಾಮನ್‌ವೆಲ್ತ್ ಗೇಮ್ಸ್‌, ಏಷ್ಯನ್ ಗೇಮ್ಸ್‌, ಕ್ರಿಕೆಟ್‌ ವರ್ಲ್ಡ್‌ ಕಪ್‌ ಹಾಗೂ ಫಿಫಾ ವಿಶ್ವಕಪ್‌ (ಪುಟ್ಬಾಲ್‌) ಮುಂತಾದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಆಯೋಜಕ ರಾಷ್ಟ್ರಗಳಿಗೆ ಸಾವಿರಾರು ಕೋಟಿ ರುಪಾಯಿ ವಹಿವಾಟು ಮತ್ತು ಜಾಗತಿಕ ಗಮನ ಸೆಳೆಯುತ್ತವೆ. ಒಂದು ದೊಡ್ಡ ಕ್ರೀಡಾಕೂಟ ನಡೆಸಲು ಸರಕಾರಗಳು ತಮ್ಮ ಅಭಿವೃದ್ಧಿ ಯೋಜನೆಗಳಲ್ಲಿಯೇ ಭಾರಿ ಮೊತ್ತದ ಹೂಡಿಕೆ ಮಾಡಬೇಕಾಗುತ್ತದೆ. ಇದರಿಂದಲೇ `Sports Tourism’ ಎನ್ನುವುದು ಎಷ್ಟು ದೊಡ್ಡ ಆರ್ಥಿಕ ಶಕ್ತಿ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: ಕರ್ನಾಟಕಕ್ಕೂ ಬೇಕಾಗಿದೆ 'ಹಸಿರು ಸೇತುವೆ' ಮಾದರಿ

ಇದಕ್ಕೆ ಉದಾಹರಣೆಯಾಗಿ 2010ರಲ್ಲಿ ದೆಹಲಿಯಲ್ಲಿ ನಡೆದ 2010- ಕಾಮನ್‌ವೆಲ್ತ್‌ ಗೇಮ್ಸ್‌ ಅನ್ನು ಉಲ್ಲೇಖಿಸಬಹುದು. ಕಾಮನ್‌ವೆಲ್ತ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮೆಟ್ರೋ ವಿಸ್ತರಣೆ, ರಸ್ತೆಗಳ ಅಭಿವೃದ್ಧಿ, ಕ್ರೀಡಾಂಗಣಗಳ ನವೀಕರಣ, ಹೊಟೇಲ್‌, ಹೊಸ ವಿಮಾನಗಳು, ವಿಶೇಷ ಅತಿಥ್ಯಕ್ಕಾಗಿ ಐಷಾರಾಮಿ ಕಾರುಗಳು ಹಾಗೂ ನಗರ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರುಪಾಯಿ ಹೂಡಿಕೆ ಮಾಡಲಾಯಿತು. ಆ ಕ್ರೀಡಾಕೂಟದ ನಂತರವೂ ದೆಹಲಿ ನಗರಕ್ಕೆ ಪ್ರವಾಸೋದ್ಯಮ, ಸಾರಿಗೆ ಹಾಗೂ ಸೇವಾ ವಲಯಗಳಲ್ಲಿ ದೀರ್ಘಕಾಲದ ಲಾಭ ದೊರಕಿತು. ಇದೇ ರೀತಿ ಬೆಂಗಳೂರಿನ ಕೊರಮಂಗಲದಲ್ಲಿರುವ ʻAsian Games Villageʼ ಕೂಡ ಕ್ರೀಡೆಗಳ ಮೂಲಕ ನಗರಾಭಿವೃದ್ಧಿಗೆ ಉದಾಹರಣೆಯಾಗಿದೆ.

ಐಪಿಎಲ್‌ - 2026 ಫೈನಲ್‌ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್‌ಗೆ ಸ್ಥಳಾಂತರಿಸಿರುವ ಬೆಳವಣಿಗೆ ಕೂಡ ಕೇವಲ ಕ್ರಿಕೆಟ್‌ಗೆ ಸೀಮಿತವಾದ ವಿಷಯವಲ್ಲ; ಅದು ನಗರ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಸೇವಾ ವಲಯದ ಮೇಲಿನ ಪರಿಣಾಮದ ವಿಚಾರವಾಗಿದೆ.

Untitled design (14)

ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯ ಅವರ ಹೇಳಿಕೆಯ ಪ್ರಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಐಪಿಎಲ್‌ ಫೈನಲ್‌ಗಾಗಿ ಸುಮಾರು 10,000 ವಿಐಪಿ ಟಿಕೆಟ್‌ಗಳ ಬೇಡಿಕೆ ಇಟ್ಟಿತ್ತು ಎಂಬ ದ್ವನಿ ಎಲ್ಲೆಡೆ ಹರಡಿತು. ಜತೆಗೆ ಶಾಸಕರು, ವಿವಿಧ ಇಲಾಖೆಗಳು, ಮಾಜಿ ಪದಾಧಿಕಾರಿಗಳು ಹಾಗೂ ಸದಸ್ಯರಿಗಾಗಿ ಉಚಿತ ಟಿಕೆಟ್‌ಗಳ ಮನವಿಯೂ ಸಲ್ಲಿಕೆಯಾಗಿತ್ತು. ಐಪಿಎಲ್‌ ನಿಯಮಾವಳಿಗಳ ಮಿತಿಯನ್ನು ಮೀರಿ ಟಿಕೆಟ್‌ ಹಂಚಿಕೆ ಸಾಧ್ಯವಿಲ್ಲವೆಂದು ಬಿಸಿಸಿಐ ಸ್ಪಷ್ಟಪಡಿಸಿದ ಬಳಿಕ, ಪಂದ್ಯವನ್ನು ನರೇಂದ್ರ ಮೋದಿ ಸ್ಟೇಡಿಯಂ ಇರುವ ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ. ಈ ಬೆಳವಣಿಗೆ ʻಅತಿಯಾದ ವಿಶೇಷ ಸೌಲಭ್ಯಗಳ ನಿರೀಕ್ಷೆ ಕೊನೆಯಲ್ಲಿ ಅವಕಾಶವನ್ನೇ ಕಳೆಸಬಹುದುʼ ಎನ್ನುವ ವಾಸ್ತವವನ್ನು ನೆನಪಿಸುತ್ತದೆ.

ಇಂದು ಐಪಿಎಲ್‌ ಎನ್ನುವುದು ಕೇವಲ ಕ್ರಿಕೆಟ್ ಪಂದ್ಯಗಳ ಸರಣಿ ಅಲ್ಲ; ಅದು ಮನೋರಂಜನೆ, ವ್ಯಾಪಾರ ಮತ್ತು ಕ್ರೀಡಾ ಪ್ರವಾಸೋದ್ಯಮ ಆಧಾರಿತ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದೆ. ಬೆಂಗಳೂರು ಪಂದ್ಯಾವಳಿಗಳಿಗೆ ಆತಿಥ್ಯ ವಹಿಸಿದಾಗ ಹೊಟೇಲ್‌, ರೆಸ್ಟೋರೆಂಟ್‌, ಟ್ಯಾಕ್ಸಿ, ಕಾರ್‌ ರೆಂಟಲ್‌, ಪ್ರವಾಸೋದ್ಯಮ, ಏರ್‌ಕಂಡೀಷನ್‌ ಬಸ್‌ ಸೇವೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಾರ ಚಟುವಟಿಕೆ ಹೆಚ್ಚಾಗುತ್ತಿತ್ತು. ಸ್ಪೋರ್ಟ್ಸ್‌ ಉಡುಪು, ಸರಕು ಹಾಗೂ ಸಂಬಂಧಿತ ವ್ಯಾಪಾರಗಳಿಗೂ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿತ್ತು.

ಪ್ರಾಯೋಜಕ ಸಂಸ್ಥೆಗಳು ವಿಶೇಷ ಟಿಕೆಟ್‌ಗಳನ್ನು ತಮ್ಮ ವಿತರಕರು, ಹೋಲ್‌ಸೇಲ್‌ ಡೀಲರ್‌ಗಳು ಮತ್ತು ಪ್ರಮುಖ ಗ್ರಾಹಕರಿಗೆ ನೀಡುವ ಮೂಲಕ ವ್ಯಾಪಾರಿಕ ಸಂಪರ್ಕಗಳನ್ನು ಬಲಪಡಿಸುತ್ತಿದ್ದವು. ಪಂದ್ಯಾವಳಿ ದಿನಗಳಲ್ಲಿ ಸಾವಿರಾರು ಜನರ ಸಂಚಾರದಿಂದ ನಗರ ಆರ್ಥಿಕತೆಗೆ ಚೈತನ್ಯ ಸಿಗುತ್ತಿತ್ತು. ಜಿಎಸ್‌ಟಿ ಸೇರಿದಂತೆ ನೇರ ಹಾಗೂ ಪರೋಕ್ಷ ತೆರಿಗೆ ರೂಪದಲ್ಲಿಯೂ ಸರಕಾರಕ್ಕೆ ಆದಾಯ ಹರಿದು ಬರುತ್ತಿತ್ತು.

ಈಗ ಪಂದ್ಯಗಳು ಬೇರೆ ರಾಜ್ಯಕ್ಕೆ ಸ್ಥಳಾಂತರವಾಗಿರುವ ಹಿನ್ನೆಲೆಯಲ್ಲಿ, ಆರ್ಥಿಕ ಚಟುವಟಿಕೆಗಳ ಒಂದು ಭಾಗವೂ ಅಲ್ಲಿಗೆ ವರ್ಗವಾಗುವ ಸಾಧ್ಯತೆ ಇದೆ. ಐಪಿಎಲ್‌ ಮಾದರಿಯ ಕ್ರೀಡಾಕೂಟಗಳು ಕೇವಲ ಮನೋರಂಜನೆಗೆ ಸೀಮಿತವಾಗದೇ; ನಗರಗಳ ಸೇವಾ ವಲಯ, ಪ್ರವಾಸೋದ್ಯಮ ಹಾಗೂ ಸ್ಥಳೀಯ ಆರ್ಥಿಕ ವ್ಯವಸ್ಥೆಗೆ ಪೂರಕವಾಗಿವೆ ಎಂಬುದನ್ನು ಈ ಬೆಳವಣಿಗೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.