• ಡಾ. ಡಿ. ವಿ. ಗುರುಪ್ರಸಾದ್

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಮಕ್ಕಳ ಶಾಲೆಗೆ ರಜೆ ಬಂದಾಗ ನಾನು ಕುಲು-ಮನಾಲಿಗೆ ಪ್ರವಾಸ ಹೋಗಲು ನಿರ್ಧರಿಸಿದೆ. ಬೆಂಗಳೂರಿನಿಂದ ವಿಮಾನದಲ್ಲಿ ಚಂಡಿಘಡಕ್ಕೆ ಹೋಗಿ ಅಲ್ಲಿಂದ ಟ್ಯಾಕ್ಸಿಯ ಮೂಲಕ ಕುಲುವಿಗೆ ಹೋಗಲು ಟಿಕೆಟ್ಟುಗಳನ್ನು ಮಾಡಿಸಿದೆ. ಪ್ರವಾಸಕ್ಕೆ ಹೋಗುವ ಒಂದು ವಾರದ ಮುಂಚೆ ನನ್ನ ಇಬ್ಬರೂ ಮಕ್ಕಳು ನಮ್ಮ ಮನೆಯಲ್ಲಿದ್ದ ಎರಡೂ ನಾಯಿಗಳನ್ನೂ ನಮ್ಮ ಜತೆಯಲ್ಲಿ ಕರೆದುಕೊಂಡು ಹೋಗೋಣ, ಅವೂ ನಮ್ಮ ಕುಟುಂಬದ ಸದಸ್ಯರಲ್ಲವೇ ಎಂದು ಹಟ ಹಿಡಿದರು. ವಿಮಾನದಲ್ಲಿ ನಾಯಿಗಳನ್ನು ತೆಗೆದುಕೊಂಡು ಹೋಗಲು ಬರುವುದಿಲ್ಲ, ಮತ್ತು ನಾವು ತಂಗುವ ಹೊಟೇಲ್‌ಗಳಲ್ಲಿ ನಮ್ಮೊಡನೆ ನಾಯಿಗಳನ್ನು ಇಟ್ಟುಕೊಳ್ಳಲು ಬಿಡುವುದಿಲ್ಲ ಎಂದು ಅವರಿಗೆ ಹೇಳಿ ಅವರನ್ನು ಹಾಗೂ ಹೀಗೂ ಸಮಾಧಾನ ಮಾಡಿದೆ. ನಮ್ಮ ಅನುಪಸ್ಥಿತಿಯಲ್ಲಿ ನಮ್ಮ ನೆಚ್ಚಿನ ಪ್ರಾಣಿಗಳನ್ನು ನೋಡಿಕೊಳ್ಳುವವರು ಯಾರು ಎಂಬ ಸಮಸ್ಯೆ ಎದುರಾಯಿತು. ನಮ್ಮ ಅದೃಷ್ಟಕ್ಕೆ ಬೆಂಗಳೂರಿನ ಪಶುವೈದ್ಯ ಕಾಲೇಜು ನಮ್ಮ ನಾಯಿಗಳನ್ನು ನೋಡಿಕೊಳ್ಳಲು ಒಪ್ಪಿತು. ಅವರೆಡನ್ನೂ ನಾವು ಕಾಲೇಜಿನವರ ಸುಪರ್ದಿಗೆ ಒಪ್ಪಿಸಿ ಪ್ರವಾಸಕ್ಕೆ ಹೋದೆವು. ಆದರೆ, ನಮ್ಮ ಇಡೀ ಪ್ರವಾಸದಲ್ಲಿ ನಾವು ನಮ್ಮ ನಾಯಿಗಳ ಚಿಂತೆಯನ್ನೇ ಮಾಡುತ್ತಿದ್ದೆವು. ನಮ್ಮ ನಾಯಿಗಳೂ ನಮ್ಮ ಜತೆಗಿದ್ದರೆ ಪ್ರವಾಸ ಇನ್ನಷ್ಟು ಚೆನ್ನಾಗಿರುತ್ತಿತ್ತು ಎಂದು ನಮಗೆ ಅನಿಸಿತ್ತು.

ಇದನ್ನೂ ಓದಿ: ನಿಜ, ಕೇವಲ ಐದು ಸೆಕೆಂಡಿನಲ್ಲಿ ಮೂರು ದೇಶಗಳನ್ನು ಸುತ್ತಬಹುದು !

ಈಗ ಇಂಥ ಸಮಸ್ಯೆ ಹೆಚ್ಚಾಗಿ ಉದ್ಭವಿಸುವುದಿಲ್ಲ. ಏಕೆಂದರೆ ವಿಶ್ವದೆಲ್ಲೆಡೆ ಸುಮಾರು 471 ದಶಲಕ್ಷ ನಾಯಿಗಳು ಹಾಗೂ 373 ದಶಲಕ್ಷ ಬೆಕ್ಕುಗಳನ್ನು ಪಾಲಿಸುತ್ತಿರುವ ಲಕ್ಷಾನುಗಟ್ಟಲೆ ಕುಟುಂಬಗಳು ತಮ್ಮೊಡನೆ ಪ್ರವಾಸಕ್ಕೆಂದು ಅವನ್ನೂ ಕರೆದೊಯ್ಯಲಾರಂಭಿಸಿವೆ. ಫ್ಯಾಮಿಲಿ ಪ್ರವಾಸವೆಂದರೆ ಕುಟುಂಬದ ಜತೆ ಕುಟುಂಬದ ಸದಸ್ಯರೆಂದೇ ಪರಿಗಣಿಸಲ್ಪಟ್ಟಿರುವ ಸಾಕುಪ್ರಾಣಿಗಳೂ ಇರಬೇಕು ಎನ್ನುವುದು ಬಹಳ ಪ್ರಾಣಿಪ್ರಿಯರ ಭಾವನೆಯಾಗಿದೆ. ಈ ಭಾವನೆ ಬೆಳೆಯಲು ಹಲವಾರು ಕಾರಣಗಳಿವೆ. ಮಾನವ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಹಿಂದಿಗಿಂತ ಹೆಚ್ಚು ಆಳವಾಗಿದೆ. ತಮ್ಮ ಮನೆಯಲ್ಲಿರುವ ಪ್ರಾಣಿಗಳನ್ನು ಒಬ್ಬಂಟಿಯಾಗಿ, ಇಲ್ಲವೇ ಬೇರೊಬ್ಬರ ಸುಪರ್ದಿಯಲ್ಲಿ ಬಿಟ್ಟು ತಾವಷ್ಟೇ ಪ್ರವಾಸದ ಮಜ ಅನುಭವಿಸುವುದು ಸೂಕ್ತವಲ್ಲ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತಾವು ತಮ್ಮ ಸಾಕುಪ್ರಾಣಿಗಳೊಂದಿಗೆ ಪ್ರವಾಸ ಮಾಡುತ್ತಿರುವ ಫೊಟೋಗಳನ್ನು ಪ್ರಾಣಿಪ್ರಿಯರು ಹಾಕಲಾರಂಭಿಸಿದ ನಂತರ ಇತರರೂ ಪ್ರಾಣಿಗಳ ಜತೆಗೆ ಪ್ರವಾಸವನ್ನು ಮಾಡಲು ಬಯಸುತ್ತಿದ್ದಾರೆ.

Untitled design - 2026-10-14T145323.316

ಈಗಾಗಲೇ ಹೇಳಿದಂತೆ ಪ್ರಾಣಿಗಳೊಡನೆ ಪ್ರವಾಸ ಮಾಡಲು ಬಯಸುತ್ತಿದ್ದವರಿಗೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು. ಪ್ರವಾಸಿಗರು ತಮ್ಮ ಸಾಕುಪ್ರಾಣಿಗಳನ್ನು ತಮ್ಮೊಡನೆ ತರಲು ಸರಕಾರಗಳು ಕಟ್ಟುನಿಟ್ಟಿನ ನಿಬಂಧನೆಗಳನ್ನು ಹಾಕಿದ್ದವು. ರೋಗಗಳ ಹರಡುವಿಕೆ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆಯೇ ಇದರ ಮುಖ್ಯ ಕಾರಣವಾಗಿತ್ತು. ಕೆಲವೊಮ್ಮೆ ಪ್ರಾಣಿಗಳನ್ನು ತರಲು ಒಪ್ಪಿಗೆ ಸಿಕ್ಕರೂ ಅವನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕಾಗಿತ್ತು. ಕ್ವಾರಂಟೈನ್ ಅವಧಿ ಮುಗಿಯುವ ವೇಳೆಗೆ ಪ್ರವಾಸದ ಅವಧಿಯೇ ಮುಗಿದುಹೋಗಿರುತ್ತಿತ್ತು. ಇದೇ ಅಲ್ಲದೆ ಅತಿಥಿಗಳು ತಮ್ಮ ಕೋಣೆಯಲ್ಲಿ ಪ್ರಾಣಿಗಳನ್ನಿಟ್ಟುಕೊಳ್ಳಲು ಹೊಟೇಲ್‌ಗಳು ಅನುಮತಿಯನ್ನು ನೀಡುತ್ತಿರಲಿಲ್ಲ. ಇತರ ಅತಿಥಿಗಳ ಆಕ್ಷೇಪಣೆ, ಪ್ರಾಣಿಗಳ ಮತ್ತು ಮಾನವರ ಆರೋಗ್ಯದ ಆತಂಕ ಮತ್ತು ಹೊಟೇಲ್ ಆವರಣದ ಶುಚಿತ್ವ ಇವಕ್ಕೆ ಮುಖ್ಯ ಕಾರಣಗಳಾಗಿದ್ದವು. ಪ್ರಾಣಿಪ್ರಿಯರಿಗೆ ಎದುರಾಗುತ್ತಿದ್ದ ಇನ್ನೊಂದು ಸಮಸ್ಯೆಯೆಂದರೆ ಕೆಲವು ದೇಶಗಳಲ್ಲಿ ವಿಮಾನಗಳು, ಬಸ್‌ಗಳು ಮತ್ತು ರೈಲುಗಳಲ್ಲಿಯೂ ಪ್ರಾಣಿಗಳನ್ನು ಕರೆದೊಯ್ಯಲು ಬಿಡುತ್ತಿರಲಿಲ್ಲ. ಹೀಗಾಗಿ ಪ್ರವಾಸಿಗರು ತಮ್ಮ ಸಾಕುಪ್ರಾಣಿಗಳನ್ನು ಇನ್ನೊಬ್ಬರ ಸುಪರ್ದಿಯಲ್ಲಿ ಬಿಟ್ಟು ಪ್ರವಾಸಕ್ಕೆ ಹೊಗಬೇಕಾಗಿತ್ತು.

ಆದರೆ, ಈಗಿನ ಪರಿಸ್ಥಿತಿಯೇ ಬೇರೆಯಾಗಿದೆ. ಪ್ರಾಣಿಗಳೊಂದಿಗೆ ಪ್ರವಾಸ ಮಾಡಬಯಸುವವರ ಸಂಖ್ಯೆ ವಿಶ್ವದಲ್ಲಿ ಏರುತ್ತ ಬರುತ್ತಿದ್ದಂತೆ ಸರಕಾರಗಳೂ ತಮ್ಮ ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತಂದವು. ಟೂರಿಸಂ ಮತ್ತು ಹಾಸ್ಪಿಟಾಲಿಟಿ ಉದ್ಯಮವು ಪೆಟ್ ಫ್ರೆಂಡ್ಲಿ ಟೂರಿಸಂಗೆ (ಸಾಕುಪ್ರಾಣಿಗಳನ್ನೂ ಅಡಕಗೊಳಿಸುವ ಪ್ರವಾಸ)ಕ್ಕೆ ಮಹತ್ವವನ್ನು ಕೊಡತೊಡಗಿತು. ಏಕೆಂದರೆ ಇಂಥ ಪ್ರವಾಸದಿಂದ ಬರುವ ಆದಾಯ ಗಣನೀಯ ಪ್ರಮಾಣದ್ದೆಂದು ಅದು ಮನಗಂಡಿತು. ಈಗ ವಿಶ್ವದ ಹಲವಾರು ದೇಶಗಳಿಗೆ ಪ್ರವಾಸಿಗರು ತಮ್ಮೊಡನೆ ಸಾಕುಪ್ರಾಣಿಗಳನ್ನು ಒಯ್ಯಬಹುದು. ಬಹಳ ಪ್ರವಾಸಿ ತಾಣಗಳಲ್ಲಿ ‘ಪೆಟ್ ಫ್ರೆಂಡ್ಲಿ’ ಹೊಟೇಲ್‌ಗಳಿದ್ದು ಅಲ್ಲಿ ನಮ್ಮ ಮುದ್ದಿನ ಪ್ರಾಣಿಗಳನ್ನು ನಮ್ಮೊಡನೆ ಇಟ್ಟುಕೊಳ್ಳಬಹುದು. ಕೆಲವು ದೇಶಗಳಲ್ಲಿ ನಾವು ಸಾಕುಪ್ರಾಣಿಗಳನ್ನು ಮ್ಯೂಸಿಯಂಗಳು ಮತ್ತಿತರ ಪ್ರೇಕ್ಷಣೀಯ ಸ್ಥಳಗಳಿಗೂ ನಮ್ಮೊಂದಿಗೆ ಕರೆದೊಯ್ಯಬಹುದು. ಕೆಲವು ಕಡೆಗಳಲ್ಲಿ ಇಂಥ ಟೂರಿಸಂ ಎಷ್ಟು ಅಭಿವೃದ್ಧಿಗೊಂಡಿದೆಯೆಂದರೆ ನಾಯಿ ಬೆಕ್ಕುಗಳಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಕೊಡುವ ವಿಶೇಷ ಹೊಟೇಲ್‌ಗಳಿವೆ. ರೆಸ್ಟೊರೆಂಟ್‌ಗಳಲ್ಲಿ ‘ಪೆಟ್ಸ್ ಆರ್ ವೆಲ್‌ಕಮ್‌ʼಎನ್ನುವ ಬೋರ್ಡುಗಳು ಕಂಡುಬರುತ್ತಿವೆ. ಕೆಲವೆಡೆಗಳಲ್ಲಿ ಅವಕ್ಕೇ ವಿಶೇಷ ‘ಗೋರ್ಮೆ’(ಅತಿ ಹೆಚ್ಚಿನ ಗುಣಮಟ್ಟದ) ಊಟವೂ ಲಭ್ಯವಿದೆ. ಇದಲ್ಲದೆ ಅವಕ್ಕೆಂದೇ ಸಲೂನ್‌ಗಳೂ ಮತ್ತು ಗ್ರೂಮಿಂಗ್ ಪಾರ್ಲರ್‌ಗಳೂ ಇವೆ. ಕೆಲವು ದೇಶಗಳಲ್ಲಿ ನಾಯಿ ಬೆಕ್ಕುಗಳಿಗೇ ಮೀಸಲಾದ ಬೀಚ್‌ಗಳಿವೆ. ಹೀಗಾಗಿ ಪ್ರವಾಸಿ ತಾಣಗಳಲ್ಲಿ ನಾವು ಪ್ರವಾಸಿಗರೊಡನೆ ಅವರ ಸಾಕುಪ್ರಾಣಿಗಳೂ ಇರುವುದನ್ನು ಹೆಚ್ಚು ಹೆಚ್ಚಾಗಿ ಕಾಣುತ್ತಿದ್ದೇವೆ.

Untitled design - 2026-10-14T145317.574

ಭಾರತದ ಬಗ್ಗೆ ಹೇಳುವುದಾದರೆ ವಿದೇಶಿ ಪ್ರವಾಸಿಗರು ತಮ್ಮೊಡನೆ ಸಾಕುಪ್ರಾಣಿಗಳನ್ನು ತರಬಹುದು. ಅವರು ತಮ್ಮ ಪ್ರಾಣಿಗಳಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಿ ಆ ಸಂಬಂಧದ ಸರ್ಟಿಫಿಕೇಟನ್ನು ಹೊಂದಿರಬೇಕು. ಭಾರತದ ವಿದೇಶ ವ್ಯಾಪಾರದ ಕಚೇರಿ (ಡಿ.ಜಿ.ಎಫ್.ಟಿ) ಯಿಂದ ಪ್ರಯಾಣದ ಮೊದಲೇ ನಿರಾಪೇಕ್ಷಣಾ ಪತ್ರವನ್ನು ಪಡೆಯಬೇಕು. ಇಲ್ಲಿಗೆ ಬಂದ ನಂತರ ಪ್ರಾಣಿಗಳನ್ನು ಕ್ವಾರಂಟೈನ್‌ಗೂ ಒಳಪಡಿಸಬೇಕು. ಭಾರತದ ಡೊಮೆಸ್ಟಿಕ್ ವಿಮಾನಗಳಲ್ಲಿ ಮತ್ತು ರೈಲುಗಳಲ್ಲಿ ನಾಯಿ, ಬೆಕ್ಕು ಮತ್ತು ಪಕ್ಷಿಗಳನ್ನು ನಮ್ಮೊಡನೆ ಪ್ರವಾಸಕ್ಕೆ ಒಯ್ಯಬಹುದು. ಅವುಗಳನ್ನು ವಿಶೇಷ ಬಗೆಯ ಪೆಟ್ಟಿಗೆಗಳಲ್ಲಿಟ್ಟು ಒಯ್ಯಬೇಕು. ಅವುಗಳ ತೂಕದ ಮೇರೆಗೆ ಅವುಗಳನ್ನು ನಮ್ಮೊಡನೆ ಕ್ಯಾಬಿನ್‌ನಲ್ಲಿ ಒಯ್ಯಬಹುದೋ ಇಲ್ಲವೇ ಲಗೇಜ್ ಇಡುವ ಜಾಗದಲ್ಲಿ ಒಯ್ಯಬೇಕೋ ಎನ್ನುವುದು ನಿರ್ಧಾರವಾಗುತ್ತದೆ. ಕೆಲವು ವಿಮಾನ ಸಂಸ್ಥೆಗಳು ಪ್ರಾಣಿಗಳ ವಿಶೇಷ ಬಾಕ್ಸ್ಗಳನ್ನು ಕಾರ್ಗೋ ಇಡುವ ಜಾಗದಲ್ಲಿಯೇ ಇಡಬೇಕು ಎಂಬ ನಿಭಂದನೆಯನ್ನು ಹಾಕಿವೆ. ಇದೇ ಅಲ್ಲದೆ ಪ್ರಯಾಣ ಮಾಡುವ ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ಮಾಡಿಸಿರಬೇಕು ಮತ್ತು ಅವು ರೈಲು/ವಿಮಾನ ಪ್ರಯಾಣಕ್ಕೆ ಯೋಗ್ಯವೆಂದು ಪಶುವೈದ್ಯಾಧಿಕಾರಿಯಿಂದ ಸರ್ಟಿಫಿಕೇಟ್ ಪಡೆದಿರಬೇಕು.

ಭಾರತದ ರೈಲುಗಳಲ್ಲಿ ಸಾಕು ನಾಯಿ ಇಲ್ಲವೇ ಬೆಕ್ಕನ್ನು ನಮ್ಮೊಡನೆಯೇ ಒಯ್ಯಬೇಕಾದರೆ ನಾವು ಮೊದಲ ದರ್ಜೆ ಎ.ಸಿ ಇಲ್ಲವೇ ಮೊದಲ ದರ್ಜೆಯ ಟಿಕೆಟ್ಟುಗಳನ್ನು ಪಡೆಯಬೇಕು. ನಾಲ್ಕು ಪ್ರಯಾಣಿಕರು ಕೂಡುವಂಥ ಒಂದು ಇಡೀ ಕ್ಯಾಬಿನ್ ಟಿಕೆಟ್ ಹೊಂದಿರಬೇಕು. ಬೇರೆ ದರ್ಜೆಗಳಲ್ಲಿ ಪ್ರಯಾಣಿಸಬೇಕಾದರೆ ನಮ್ಮೊಡನೆ ಪ್ರಯಾಣಿಸುವ ಸಾಕು ಪ್ರಾಣಿಗಳನ್ನು ಒಂದು ವಿಶೇಷ ಡಬ್ಬದಲ್ಲಿಟ್ಟು ಅದನ್ನು ರೈಲಿನ ಲಗೇಜ್ ವ್ಯಾನಿನಲ್ಲಿ ಇಡಬೇಕಾಗುತ್ತದೆ.

ನಮ್ಮ ದೇಶದಲ್ಲಿ ಸುಮಾರು 500 ಹೊಟೇಲ್‌ಗಳು, ರಿಸಾರ್ಟ್‌ಗಳು ಮತ್ತು ಹೋಮ್‌ಸ್ಟೇಗಳಲ್ಲಿ ಪ್ರವಾಸಿಗರು ತಮ್ಮ ಸಾಕುಪ್ರಾಣಿಗಳನ್ನು ತರಲು ಅವಕಾಶವಿದೆ. ಕೆಲವೆಡೆ ಅವರಿರುವ ಕೋಣೆಯಲ್ಲಿ ಪ್ರಾಣಿಗಳನ್ನೂ ಇಟ್ಟುಕೊಳ್ಳಬಹುದು, ಕೆಲವೆಡೆ ಇಲ್ಲ. ಕೆಲವು ಜಾಗಗಳಲ್ಲಿ ಪ್ರಾಣಿಗಳನ್ನು ತರುವವರಿಗೆ ಹೆಚ್ಚಿನ ಬಾಡಿಗೆಯನ್ನು ವಿಧಿಸಲಾಗುತ್ತದೆ. ಭಾರತದ ಯಾವುದೇ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಪ್ರಾಣಿಗಳನ್ನು ತಮ್ಮೊಡನೆ ತರಲು ಬಿಡುವುದಿಲ್ಲ. ಅಂಥ ಸಮಯದಲ್ಲಿ ಅವರು ಅವನ್ನು ತಮ್ಮ ತಂಗುಸ್ಥಳಗಳಲ್ಲಿಯೇ ಬಿಡಬೇಕಾಗುತ್ತದೆ.

ಸಾಕುಪ್ರಾಣಿಗಳನ್ನು ತಮ್ಮೊಡನೆ ಪ್ರವಾಸಕ್ಕೆ ಕರೆದುಕೊಂಡು ಹೋಗುವವರ ಸಂಖ್ಯೆ ಏರುತ್ತಿದ್ದಂತೆ ಅಂಥವರ ಅನುಕೂಲಕ್ಕಾಗಿಯೇ ಹಲವು ವೆಬ್‌ಸೈಟ್‌ಗಳು ರೂಪಿತಗೊಂಡಿವೆ. ‘ಬ್ರಿಂಗ್ ಫ್ರಿಡೋ ಡಾಟ್ ಕಾಂʼ ಎನ್ನುವ ಸೈಟಂತೂ ವಿಶ್ವದ ಯಾವ ದೇಶದಲ್ಲಿ ಯಾವ ಯಾವ ಹೊಟೇಲ್, ರೆಸಾರ್ಟ್, ಏರ್‌ಬಿಎನ್‌ಬಿ ಮನೆಗಳಲ್ಲಿ ನಾವು ನಮ್ಮೊಡನೆ ನಾಯಿಗಳನ್ನಿಟ್ಟುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಕೊಡುವುದಲ್ಲದೆ ನಾಯಿಗಳಿಗೆ ವಿಶೇಷ ಆಹಾರ ಎಲ್ಲಿ ಸಿಗುತ್ತದೆ, ಅವುಗಳಿಗೆ ಅಸ್ವಸ್ಥತೆ ಉಂಟಾದರೆ ಅವನ್ನು ಯಾವ ವೆಟರ್ನರಿ ವೈದ್ಯರ ಬಳಿಗೆ ಒಯ್ಯಬಹುದು, ಅವುಗಳಿಗೆ ಸಲೂನ್‌ಗಳು ಎಲ್ಲಿವೆ ಮುಂತಾದ ಮಾಹಿತಿಯನ್ನೂ ಕೊಡುತ್ತದೆ. ಹೀಗಾಗಿ ನಾವು ನಮ್ಮ ನೆಚ್ಚಿನ ಸಾಕುಪ್ರಾಣಿಗಳೊಂದಿಗೆ ಪ್ರವಾಸ ಮಾಡುವ ಮುನ್ನವೇ ಸೂಕ್ತ ಪ್ಲಾನಿಂಗ್ ಮಾಡಿ ನಮ್ಮ ಪ್ರವಾಸವು ಆರಾಮದಾಯಕವಾಗಿರುವಂತೆ ಮಾಡಬಹುದಾಗಿದೆ.

1737618892-Cover_Image

ಪೆಟ್ ಫ್ರೆಂಡ್ಲಿ ಟೂರಿಸಂನಿಂದ ಆಗುವ ಪ್ರಯೋಜನಗಳೇನು? ಪ್ರವಾಸಿಗರಿಗೆ ತಮ್ಮ ಸಾಕುಪ್ರಾಣಿಗಳನ್ನು ಯಾವುದಾದರೊಂದು ಆಶ್ರಯ ತಾಣದಲ್ಲಿಯೋ ಇಲ್ಲವೇ ತಮ್ಮ ಮನೆಯಲ್ಲಿಯೇ ಇನ್ನೊಬ್ಬರ ಸುಪರ್ದಿಯಲ್ಲಿ ಬಿಟ್ಟು ತಾವು ಮಜ ಮಾಡುತ್ತಿದ್ದೇವಲ್ಲ ಎನ್ನುವ ಅಳುಕು ಇರುವುದಿಲ್ಲ. ಪ್ರಾಣಿಗಳು ತಮ್ಮ ಜತೆ ಪ್ರವಾಸಕ್ಕೆ ಬಂದರೆ ತಮ್ಮ ಹಾಗೂ ಅವುಗಳ ನಡುವಿನ ಬಾಂಧವ್ಯ ಹೆಚ್ಚುತ್ತದೆ ಎಂದು ಅವರು ಭಾವಿಸುತ್ತಾರೆ. ಪ್ರವಾಸೋದ್ಯಮಕ್ಕಾದರೆ ಹೊಸ ರೀತಿಯ ಆದಾಯ ಮೂಲಗಳು ಹುಟ್ಟುವುದಲ್ಲದೆ ಗ್ರಾಹಕರು ಅವರ ಮೇಲಿಟ್ಟಿರುವ ವಿಶ್ವಾಸವು ವೃದ್ಧಿಯಾಗುತ್ತದೆ. ಪ್ರಾಣಿಗಳ ಜತೆ ಬರುವ ಪ್ರವಾಸಿಗರು ಇತರರಿಗಿಂತ ತುಸು ಹೆಚ್ಚು ಸಮಯ ಹೊಟೇಲ್‌ಗಳಲ್ಲಿ ತಂಗುವುದರಿಂದ ಅವುಗಳ ಆದಾಯವೂ ಹೆಚ್ಚಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಬೇರೆ ರೀತಿಯ ಪ್ರವಾಸಕ್ಕಿಂತ ಪೆಟ್ ಟೂರಿಂಸಗಾಗಿ ಗ್ರಾಹಕರು ಹೆಚ್ಚಿನ ಹಣವನ್ನು ವ್ಯಯಿಸಲು ತಯಾರಾಗಿರುತ್ತಾರೆ. ಹೀಗಾಗಿ ನಮ್ಮ ದೇಶದಲ್ಲಿಯೂ ಇಂಥ ಬಗೆಯ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದೆ.

ಇಲ್ಲಿ ಗಮನಿಸಬೇಕದ ಒಂದು ಅಂಶವೆಂದರೆ ಎಲ್ಲ ಪ್ರವಾಸಿ ತಾಣಗಳೂ ಪ್ರಾಣಿಗಳ ಪ್ರವಾಸಕ್ಕೆ ಯೋಗ್ಯವಾಗಿರುವುದಿಲ್ಲ. ಕೆಲವು ಜಾಗಗಳ ಭೌಗೋಳಿಕ ಲಕ್ಷಣಗಳು ಮತ್ತು ಹವಾಮಾನ ಸಾಕುಪ್ರಾಣಿಗಳ ಪ್ರವಾಸಕ್ಕೆ ಒಗ್ಗಿ ಬರುವುದಿಲ್ಲ. ಕೆಲವು ಪ್ರದೇಶಗಳ ಸ್ಥಳೀಯ ನಿಯಮಗಳೂ ಪ್ರಾಣಿಗಳ ಪ್ರವಾಸಕ್ಕೆ ಅಡ್ಡಿಬರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಣಿಗಳನ್ನು ತಮ್ಮೊಡನೆ ಕರೆದೊಯ್ಯುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಏಕೆಂದರೆ ತಾವು ಹೋಗುವ ಪ್ರವಾಸಿ ತಾಣಗಳಿಗೆ ಇತರ ಪ್ರವಾಸಿಗಳೂ ಬರುವುದರಿಂದ ಅವರಿಂದ ಯಾವುದೇ ಆಕ್ಷೇಪಣೆ ಬರದಂತೆ ಪ್ರಾಣಿಗಳ ಜತೆಗೆ ಪ್ರವಾಸಕ್ಕೆ ಹೋಗುವವರು ನಡೆದುಕೊಳ್ಳಬೇಕು. ಹೀಗಾದಾಗ ಮಾತ್ರ ವಿಶ್ವದಾದ್ಯಂತ ಬೆಳೆಯುತ್ತ ಬರುತ್ತಿರುವ ಪೆಟ್ ಫ್ರೆಂಡ್ಲಿ ಟೂರಿಸಂ ನಮ್ಮ ದೇಶದಲ್ಲಿಯೂ ಇನ್ನಷ್ಟು ಬೆಳೆಯುತ್ತದೆ.