• ಪಾರ್ವತಿ ಶಂಭು

ʻನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ನನ್ನನ್ನು ಕಾಡಿದ ಪುಸ್ತಕ. ಕಿಚನ್‌ ಕವಿತೆಗಳು, ಈ ಪ್ರೀತಿ ಒಂಥರಾ, ಎಲ್ಲಿಂದಲೋ ಬಂದವರು, ಜಸ್ಟ್ ಮಾತ್ ಮಾತಲ್ಲಿ ಮುಂತಾದ ಸಂಕಲನಗಳ ಲೇಖಕಿಯ ಈ ಪುಸ್ತಕ ಕೈಗೆ ಸಿಕ್ಕಿದ ತಕ್ಷಣ ಎತ್ತಿಕೊಂಡು ಓದಲಾರಂಭಿಸಿದೆ. ಇದೊಂದು ಅತ್ಯಂತ ಸರಳವಾಗಿ ಓದಿಸಿಕೊಳ್ಳುವ, ಕುತೂಹಕಾರಿ ಪುಸ್ತಕ. ಪ್ರವಾಸವೆಂದರೆ ಇಷ್ಟಪಡುವ, ಬರವಣಿಗೆಯನ್ನು ಪ್ರೀತಿಸುವ ಯಾರನ್ನೂ ಸೆಳೆದುಬಿಡುವ ಕೃತಿ. ಪೂರ್ವ ತಯಾರಿಯಿಂದ ಪ್ರಾರಂಭವಾಗುವ ಇವರ ವಿವರಣೆ ನಾವೇ ಪ್ರವಾಸಕ್ಕೆ ತಯಾರಾಗುತ್ತಿದ್ದೇವೆ ಎಂಬ ಭಾವ ಮೂಡಿಸುತ್ತದೆ.

ಸಿನಿಮಾ ಪ್ರೀತಿಯ ಲೇಖಕಿ ಬರಹದುದ್ದಕ್ಕೂ ಸಿನಿಮಾ ಘಟನೆಗಳು, ಸಿನಿಮಾ ಹೆಸರು, ಹಾಡು ನಮ್ಮ ದೇಶಿಯ ಮಾತುಗಳನ್ನು ಬಳಸುತ್ತಾ ನಗೆಗಡಲಲ್ಲಿ ತೇಲಿಸುತ್ತಾರೆ. ʻಇದೊಂದು ಲೈಟ್ ಕಥನ ಕಣ್ರೀ. ಸುಮ್ಮನೆ ಓದುತ್ತಾ ಹೋಗಿʼ ಎಂಬ ಸೂಚನೆ ಕೊಡುತ್ತಿದ್ದಾರೆ ಅನಿಸುತ್ತದೆ. ಪೋಲೆಂಡ್‌ನ ಯಾವ ನಗರಗಳಲ್ಲೂ ಇಂಗ್ಲಿಷ್ ಬಳಕೆ ಇಲ್ಲ. ಅಲ್ಲಿಯ ಹೊಟೇಲ್ ರೂಮ್‌ಗಳಲ್ಲಿ ಪೇಚಾಡುತ್ತಾ ರಾತ್ರಿ ಕಳೆದದ್ದು, ಆಹಾರ, ಗೊಂದಲ, ಅನಾನುಕೂಲ, ಅನುಮಾನ ಹೀಗೆ ಏನೇನು ಅನುಭವಿಸಿದರೋ ಎಲ್ಲವನ್ನೂ ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ವಿಸ್ಮಯಗಳ ಮಾಯಾ ನಗರಿ ಪಟಿಯಾಲಾ ಪೆಗ್

ಆಯಾ ಸ್ಥಳಗಳ ಇತಿಹಾಸ, ಪ್ರಸ್ತುತ ವಾತಾವರಣ ಅಲ್ಲಿಯ ಪ್ರಕೃತಿ ಸೌಂದರ್ಯ ಎಲ್ಲವನ್ನು ನಮ್ಮ ಮುಂದಿಡುತ್ತಾ, ತಮ್ಮ ಪ್ರವಾಸದಲ್ಲಿ ಓದುಗರನ್ನು ಸೇರಿಸಿಕೊಳ್ಳುತ್ತಾ ಸಾಗುತ್ತಾರೆ. ಜ್ಯೂಗಳ ಕುರಿತ ಹಿಟ್ಲರ್‌ನ ದ್ವೇಷದ ಕುರಿತು ಲೇಖಕಿ ಇತಿಹಾಸದಿಂದ ಹೆಕ್ಕಿ ತೆಗೆದದ್ದು, ಅಲ್ಲಿ ಕಂಡದ್ದು ಎಲ್ಲದರ ಕುರಿತು ಓದುತ್ತಿರುವಾಗ ಆ ದೃಶ್ಯಗಳು ನಮ್ಮ ಕಣ್ಣಮುಂದೆ ಬಂದಂತಾಗುತ್ತದೆ.

ಯುರೋಪಿನಲ್ಲಿ ಪ್ರವಾಸಕ್ಕೆ ಬಹಳಷ್ಟು ಪ್ರಸಿದ್ಧ ದೇಶಗಳಿವೆ. ಅವುಗಳನ್ನು ಬಿಟ್ಟು ಪೋಲೆಂಡನ್ನೇ ಪ್ರವಾಸಕ್ಕೆ ಏಕೆ ಆಯ್ಕೆ ಮಾಡಿಕೊಂಡರು ಎಂಬುದಕ್ಕೆ ಲೇಖಕಿಯ ವಿವರಣೆ ಕೇಳಿ ಆಶ್ಚರ್ಯವಾಯಿತು. ʻಪೋಲೆಂಡ್ʼ ಆಯ್ಕೆಗೆ ಹಿಟ್ಲರ್ ಬಹು ಮುಖ್ಯ ಕಾರಣ. ಹಿಟ್ಲರ್‌ನ ಮಹತ್ವಾಕಾಂಕ್ಷೆಯ ರಿಯಾಸಾ ಕಾಂಪ್ಲೆಕ್ಸ್‌ಗೆ ಭೇಟಿನೀಡಿ, ಅಲ್ಲಿನ ವಿವರಣೆ ಓದುತ್ತಿದ್ದಂತೆ ಹಿಟ್ಲರ್‌ನ ʻಹುಚ್ಚು ಮನಸಿನ ಹತ್ತು ಮುಖʼಗಳ ಪರಿಚಯವಾಗುತ್ತದೆ. ಅವನ ಅಧಿಕಾರದ ಲಾಲಸೆ ಎಲ್ಲವನ್ನೂ ಇತಿಹಾಸದಲ್ಲಿ ಓದಿದವರಿಗೆ ಹಿಟ್ಲರ್‌ನ ಹಠ, ದುಷ್ಟ ಬುದ್ಧಿಗಳನ್ನು ಎತ್ತಿ ಹಿಡಿಯುವ ಅನೇಕ ಯೋಜನೆಗಳು, ಘಟನೆಗಳು ಎಲ್ಲದರ ಕುರುಹು ಪೋಲೆಂಡಿನಲ್ಲಿ ಕಾಣಿಸುತ್ತದೆ. ʻರಿಯಾಸಾ ಕಾಂಪ್ಲೆಕ್ಸ್ʼ ಎಂಬ ಯೋಜನೆ ಬಹುದೊಡ್ಡ ಯೋಜನೆಯಲ್ಲದೆ ಅತ್ಯಂತ ದುಬಾರಿಯದ್ದು, ಎಂದು ಯಾರು ಹೇಳಿದರೂ ಕೇಳದೆ, 1943ರಲ್ಲಿ ಹಿಟ್ಲರ್ ಇದರ ನಿರ್ಮಾಣ ಕಾರ್ಯ ಪ್ರಾರಂಭಿಸಿಬಿಟ್ಟ. ಇದಕ್ಕಾಗಿ ಸುಮಾರು ಮೂವತ್ತು ಸಾವಿರ ಜ್ಯೂಗಳು ಹಾಗೂ ಯುದ್ಧ ಕೈದಿಗಳನ್ನು ಕೆಲಸಕ್ಕಾಗಿ ಬಳಸಿಕೊಂಡ. ಕೊರೆಯುವ ಚಳಿಯಲ್ಲಿ ಅರೆ ಹೊಟ್ಟೆ ಉಂಡು ವಿಶ್ರಾಂತಿಯೂ ಇಲ್ಲದೆ ಅತ್ಯಂತ ಕಠಿಣವಾದ ಕೆಲಸವನ್ನು ಇವರು ಮಾಡಬೇಕಿತ್ತು. ರೋಗದಿಂದ, ಬಳಲಿಕೆಯಿಂದ ಸಾವಿರಾರು ಕಾರ್ಮಿಕರು ಸತ್ತರು. ಕೆಲವರನ್ನು ನಿರ್ಧಯವಾಗಿ ಕೊಲ್ಲಲಾಯಿತು. ಆದರೂ ಈ ಯೋಜನೆ ಪೂರ್ಣಗೊಳ್ಳದೆ ಪಳೆಯುಳಿಕೆಯಂತಾಗಿತ್ತು. ಇತ್ತೀಚೆಗೆ ಪೋಲೆಂಟ್ ಸರಕಾರ ಈ ಸ್ಥಳವನ್ನು ಪ್ರವಾಸಿಗರಿಗೆ ಪರಿಚಯಿಸುತ್ತಿರುವುದು ತಿಳಿದು ಸಂಕಟವಾಯಿತು. ಮುಂದೆ ಜಗತ್ತಿನ ಅತಿದೊಡ್ಡ ಸ್ಮಶಾನ ʻಆಶ್ವಿಟ್ಜ್ʼಗೆ ಭೇಟಿ .

ಆಶ್ವಿಟ್ಜ್ ಈಗ ಆ ಸ್ಥಳ ʻಹಾಲೋಕಾಸ್ಟ್ ಮ್ಯೂಸಿಯಂʼ ಆಗಿದ್ದು, ಪ್ರವಾಸಿ ತಾಣವಾಗಿದೆ. ಮಿಲಿಯನ್‌ಗಟ್ಟಲೆ ಜೀವಗಳು ಅಲ್ಲಿ ಕೊಲ್ಲಲ್ಪಟ್ಟವು. ಇಡೀ ಜ್ಯೂ ಜನಾಂಗದ ಮಾರಣಹೋಮ ಅಲ್ಲಿ ನಡೆಯಿತು. ʻಎಂದೋ ಆಗಿಹೋದದ್ದುʼ ಎಂದು ಮನಸು ಕೊಡವಿಕೊಳ್ಳಲು ಸಾಧ್ಯವೇ ಆಗದಂತ ಸ್ಥಳವಿದು. ಅಲ್ಲಿ ಕಂಡ ಜ್ಯೂಗಳ ಕೂದಲ ರಾಶಿ, ಚಪ್ಪಲಿಗಳು, ವಸ್ತುಗಳು ಎಲ್ಲವನ್ನು ನೋಡುತ್ತಾ ʻಎಂಥ ಕ್ರೌರ್ಯʼ ಎಂಬ ಉದ್ಗಾರ ನಮಗೆ ಅರಿವಿಲ್ಲದೆ ಹೊರಬರುತ್ತದೆ. ಇಂಥ ಒಂದು ಸ್ಥಳಕ್ಕೆ ಭೇಟಿ ನೀಡಲು ಧೈರ್ಯ ಬೇಕು. ಹಾಲೋಕಾಸ್ಟ್ ಎಂಬ ಘೋರ ನರಕದ ಕುರಿತು ಕಂಡದ್ದು ಕೇಳಿದ್ದನ್ನಲ್ಲದೆ ಆ ಕುರಿತು ಎಡಿತ್ ಪರ್ಲ್ ಳ ʻನಾಟ್‌ ಇವನ್‌ ಎ ನಂಬರ್‌ʼ, ಎಲಿವೀಜೆಲ್‌ನ ʻನೈಟ್ʼ ಮತ್ತು ಪಿಯೋಲೆವಿಯ ʻಇಫ್ ದಿಸ್ ಈಸ್ ಎ ಮ್ಯಾನ್ʼ ಎಂಬ ಮೂರು ಪುಸ್ತಕಗಳಲ್ಲಿನ ಆಯಾ ಲೇಖಕರ ಅನುಭವಗಳನ್ನೂ ಲೇಖಕಿ ಅಳುತ್ತಲೇ ವಿವರಿಸುವಾಗ ಓದುಗನೂ ಭಾವಜೀವಿಯಾಗುತ್ತಾನೆ.

ಮುಂದಿನ ಅವರ ಭೇಟಿ ʻವುಲ್ಫ್ಸ್ ಲೇರ್ʼಗೆ. ಅದು ಹಿಟ್ಲರ್‌ನ ಹತ್ಯೆಯ ಸಂಚು ನಡೆದ ಸ್ಥಳ. ಇಲ್ಲಿಯ ಭೇಟಿಯನ್ನೆಲ್ಲ ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರೂ ಎಂದು ವರ್ಣಿಸಲಾಗಿದೆ. ವುಲ್ಫ್ಸ್ ಲೇರ್ ಅನ್ನು ಸ್ವತಃ ಹಿಟ್ಲರ್ ʻತೋಳದ ಅಡಗು ತಾಣʼ ಎಂದು ಕರೆದಿದ್ದ. ಬದಲಾದ ರಾಜಕೀಯ ಪರಿಸ್ಥಿತಿ ಯುದ್ಧದ ದೆಸೆಯಿಂದ ಹಿಟ್ಲರ್ ಇಲ್ಲಿ ಇರಬೇಕಾಗಿ ಬಂತು. ಪುಸ್ತಕ ಮುಗಿದಾಗ ಅಬ್ಬಾ ಅಂತೂ ಒಂದು ದಿನ ರಕ್ತ ಪಿಪಾಸುವಿನ ಅಂತ್ಯವಾಯಿತಲ್ಲ ಎಂಬ ವಿಷಾದದ ಭಾವ ಮನದಲ್ಲೇಳುತ್ತದೆ. ಇದು ನಿಜಕ್ಕೂ ಓದುಗನನ್ನು ಹಿಡಿದಿಟ್ಟುಕೊಳ್ಳುವ ಪುಸ್ತಕ.