Monday, July 6, 2026
Monday, July 6, 2026

ಚಿತ್ರದುರ್ಗದ ಚರಿತೆಯ ಹಾಡಿದ 'ನಾಗರಹಾವು'

ಒನಕೆ ಓಬವ್ವ ಮತ್ತು ಚಿತ್ರದುರ್ಗದ ಕಲ್ಲಿನ ಕೋಟೆಯ ಕಥೆಯನ್ನು ಕಥಾಪುಸ್ತಕದಲ್ಲಿ ಓದಿದ್ದರೂ, ಪಠ್ಯದಲ್ಲಿ ಕಲಿತಿದ್ದರೂ ಅದನ್ನು ರೋಮಾಂಚನವಾಗುವಂತೆ ತಲುಪಿಸಿದ್ದು ನಾಗರಹಾವು ಚಿತ್ರದ ಒಂದು ಹಾಡು. ಕನ್ನಡ ನಾಡಿನ ವೀರರಮಣಿಯ... ಎಂಬ ಗೀತೆ ಚಿತ್ರದುರ್ಗದ ಕೋಟೆಯ ಕಥೆಯನ್ನು, ಮದಕರಿ ನಾಯಕ ಮತ್ತು ಹೈದರಾಲಿ ಚರಿತೆಯನ್ನು, ಓಬವ್ವ ಹೈದರನ ಕಡೆಯ ನುಸುಳುಕೋರ ಸೈನಿಕರನ್ನು ಏಕಾಂಗಿಯಾಗಿ ಒನಕೆಯಿಂದ ಚಚ್ಚಿ ಕೊಂದದ್ದನ್ನು ಮೈನವಿರೇಳುವಂತೆ ತಿಳಿಸಿಕೊಡುತ್ತದೆ.

ಒಂದು ಜಾಗದ ಹೆಸರು ಹೇಳಿದ ಕೂಡಲೇ ಒಂದು ಸಿನಿಮಾ ನೆನಪಾಗಬೇಕು ಅಥವಾ ಒಂದು ಸಿನಿಮಾ ಹೆಸರು ಹೇಳಿದ ಕೂಡಲೇ ಒಂದು ಸ್ಥಳದ ಹೆಸರು ನೆನಪಾಗಬೇಕು. ಅಂಥ ಉದಾಹರಣೆ ಕೊಡಬಲ್ಲಿರಾ? ಬಹುಶಃ ನೂರಾರು ಕೊಡಬಲ್ಲಿರಿ. ಸ್ಥಳಗಳು ಮತ್ತು ಊರುಗಳು ಪ್ರವಾಸಿ ತಾಣವಾಗುವಲ್ಲಿ ಸಿನಿಮಾಗಳ ಪಾತ್ರ ಬಹಳ ದೊಡ್ಡದು.

ಇತಿಹಾಸ ಪ್ರಸಿದ್ಧವಾಗಿರುವ ಚಿತ್ರದುರ್ಗದ ಕೋಟೆ ಎಪ್ಪತ್ತರ ದಶಕಕ್ಕೂ ಮುನ್ನವೇ ಚಿರಪರಿಚಿತವಿತ್ತು. ನಿಜ. ತರಾಸು ಅವರ ಕಾದಂಬರಿಯಿಂದ ಮತ್ತಷ್ಟು ಹೆಸರಾಗಿದ್ದೂ ನಿಜ. ಆದರೆ ಅದನ್ನು ಪ್ರವಾಸಿ ತಾಣವಾಗಿಸಿದ್ದು ಮಾತ್ರ ಪುಟ್ಟಣ್ಣ ಕಣಗಾಲರ ನಾಗರಹಾವು ಎಂಬುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: ದೇಶಕ್ಕಾಗಿ ಬದುಕನ್ನೇ ಬಲಿದಾನ ಮಾಡಿದ ವೀರರ ಅನನ್ಯ ಗಾಥೆ

1972ರಲ್ಲಿ ತೆರೆಕಂಡ ನಾಗರಹಾವು, ತರಾಸು ಅವರ ಮೂರು ಕೃತಿಗಳನ್ನು ಆಧರಿಸಿ ಚಿತ್ರಕಥೆಯಾದದ್ದು. ಮೂರು ಕೃತಿಗಳನ್ನು ಸೇರಿಸಿ ಮೂಲಕ್ಕೆ ಅಪಚಾರವಾಗದಂತೆ ಸಿನಿಮಾಪ್ರಿಯರಿಗೂ ಕಾದಂಬರಿ ಓದುಗರಿಗೂ ತೃಪ್ತಿಯಾಗುವಂತೆ, ಕಾದಂಬರಿಕಾರರಿಗೂ ಸಮಾಧಾನವಾಗುವಂತೆ ಚಲನಚಿತ್ರವಾಗಿಸುವುದು ಹುಡುಗಾಟವಲ್ಲ. ಪುಟ್ಟಣ್ಣನಂಥ ಪುಟ್ಟಣ್ಣನವರಿಗೇ ಅದು ಸಾಧ್ಯವಾಗಲಿಲ್ಲ. ಚಿತ್ರಪ್ರಿಯರು ಮೆಚ್ಚಿದರು, ಕೃತಿಯನ್ನು ಓದಿದ್ದ ಮಂದಿಯೂ ದೃಶ್ಯರೂಪದಲ್ಲಿ ನೋಡಿ ಪುಳಕಿತರಾದರು. ಆದರೆ ತರಾಸು ಮಾತ್ರ ಇದು ನಾಗರಹಾವು ಅಲ್ಲ ಕೇರೆಹಾವು ಅಂದುಬಿಟ್ಟರು.

ಆದರೇನಂತೆ, ಈ ಚಿತ್ರವು, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಚಿತ್ರವಾಗಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದೆ. ವಿಷ್ಣುವರ್ಧನ್ ಪೂರ್ಣಪ್ರಮಾಣದ ನಾಯಕರಾಗಿ ಪದಾರ್ಪಣೆ ಮಾಡಿದ ಮೊದಲ ಚಿತ್ರ, ಅಂಬರೀಶ್ ಎಂಬ ರೆಬೆಲ್ ಸ್ಟಾರ್ ವಿಲನ್ ಆಗಿ ಚಿತ್ರರಂಗಕ್ಕೆ ಪರಿಚಯವಾದ ಚಿತ್ರ, ಹೀಗೆ ಹಲವು ಮೊದಲುಗಳನ್ನು ಒಳಗೊಂಡ ಚಿತ್ರವಾಗಿ ನಾಗರಹಾವು ಜನಮನ ಗೆದ್ದಿದೆ.

Untitled design (26)

ಒನಕೆ ಓಬವ್ವ ಮತ್ತು ಚಿತ್ರದುರ್ಗದ ಕಲ್ಲಿನ ಕೋಟೆಯ ಕಥೆಯನ್ನು ಕಥಾಪುಸ್ತಕದಲ್ಲಿ ಓದಿದ್ದರೂ, ಪಠ್ಯದಲ್ಲಿ ಕಲಿತಿದ್ದರೂ ಅದನ್ನು ರೋಮಾಂಚನವಾಗುವಂತೆ ತಲುಪಿಸಿದ್ದು ನಾಗರಹಾವು ಚಿತ್ರದ ಒಂದು ಹಾಡು. ಕನ್ನಡ ನಾಡಿನ ವೀರರಮಣಿಯ... ಎಂಬ ಗೀತೆ ಚಿತ್ರದುರ್ಗದ ಕೋಟೆಯ ಕಥೆಯನ್ನು, ಮದಕರಿ ನಾಯಕ ಮತ್ತು ಹೈದರಾಲಿ ಚರಿತೆಯನ್ನು, ಓಬವ್ವ ಹೈದರನ ಕಡೆಯ ನುಸುಳುಕೋರ ಸೈನಿಕರನ್ನು ಏಕಾಂಗಿಯಾಗಿ ಒನಕೆಯಿಂದ ಚಚ್ಚಿ ಕೊಂದದ್ದನ್ನು ಮೈನವಿರೇಳುವಂತೆ ತಿಳಿಸಿಕೊಡುತ್ತದೆ. ಇಂದಿಗೆ ಒನಕೆ ಓಬವ್ವ ಅಂದರೆ ಕಣ್ಮುಂದೆ ಬರುವುದು ಜಯಂತಿಯ ಮುಖವೇ. ಅದು ಇತಿಹಾಸ ತಿಳಿಸಿಕೊಡುವ ಒಂದು ಭಾಗವಷ್ಟೆ. ಅದರ ಹೊರತಾಗಿ ಇಡೀ ಚಿತ್ರದ ಮುಕ್ಕಾಲು ಭಾಗ ಕೋಟೆಯ ಬಂಡೆಕಲ್ಲುಗಳ ಸುತ್ತವೇ ಸುತ್ತುತ್ತದೆ. ನಾಯಕ ರಾಮಾಚಾರಿಗೆ ಈ ಕೋಟೆಯೇ ಮನೆ, ಅಡ್ಡಾ ಎಲ್ಲವೂ. ಆತನಿಗೆ ಖುಷಿಯಾದರೂ ದುಃಖವಾದರೂ ಸಿಟ್ಟು ಬಂದರೂ ಅವನ ಜತೆಗಿರುತ್ತಿದ್ದುದು ಕೋಟೆಯ ಬಂಡೆಗಳೇ. ಆತನ ಪ್ರೇಮಕ್ಕೆ, ಪ್ರೇಮವೈಫಲ್ಯಕ್ಕೆ, ತ್ಯಾಗಕ್ಕೆ, ಗುರುಭಕ್ತಿಗೆ ಪ್ರತಿಯೊಂದಕ್ಕೂ ಸಾಕ್ಷಿಯಾಗಿ ನಿಲ್ಲುವುದು ಚಿತ್ರದುರ್ಗದ ಕೋಟೆಯ ಆ ಕಲ್ಲುಗಳೇ. ಚಿತ್ರದಲ್ಲಿ ಕೋಟೆಯದ್ದೂ ಒಂದು ಪಾತ್ರ, ಕಲ್ಲುಬಂಡೆಗಳದ್ದೂ ಪಾತ್ರವೇ. ಚಾಮಯ್ಯ ಮೇಷ್ಟರು ಚಪ್ಪಲಿ ಕೈಲಿ ಹಿಡಿದು ನಡೆದು ಬರುವ ದೃಶ್ಯಗಳು, ಕೋಟೆ ಹತ್ತುವಾಗಿನ ಆಯಾಸವೇನು ಎಂಬುದನ್ನು ನೋಡುಗರಿಗೆ ಅನುಭವಕ್ಕೆ ಬರುವಷ್ಟು ಸಹಜವಾಗಿ ಚಿತ್ರಿತವಾಗಿದೆ. ಐವತ್ತು ವರ್ಷಗಳನಂತರ ಇಂದು ಚಿತ್ರದುರ್ಗದ ಕೋಟೆಗೆ ಹೋದರೂ ಚಾಮಯ್ಯ ಮೇಷ್ಟ್ರು, ಅಲಮೇಲು, ಮಾರ್ಗರೆಟ್, ರಾಮಾಚಾರಿ ಎಲ್ಲರನ್ನೂ ನೆನಪಿಸುತ್ತದೆ. ಈ ಕಲ್ಲುಗಳ ಮೇಲೆ ಕೂತಿದ್ದರೇನೋ, ಇಲ್ಲಿಂದ ಹಾರಿ ಬಿದ್ದರೇನೋ, ಚಾಮಯ್ಯ ಮೇಷ್ಟರು ಇಲ್ಲಿ ಉರುಳಿ ಹೋದರೇನೋ ಅಂತ ಟ್ಯಾಲಿ ಮಾಡಿಕೊಳ್ಳುವಂತೆ ಮಾಡುತ್ತದೆ.

ಆ ಕಲ್ಲಿನ ಮೇಲೆ ನಡೆಯುತ್ತ ಸುಮ್ಮಸುಮ್ಮನೆ ಒಮ್ಮೆ ಹುಸಿಆಕ್ರೋಶ ತಂದುಕೊಂಡು ಹಾವಿನ ದ್ವೇಷ ಹನ್ನೆರಡು ವರುಷ ಎಂದು ಹಾಡಿ ನಟಿಸುವಂತೆ ಮಾಡುತ್ತದೆ ದುರ್ಗದ ಕೋಟೆ.

ಸಿನಿಮಾದ ಕಥೆ ಹೇಳುವ ಅಗತ್ಯವೇ ಇಲ್ಲ. ಈ ಸಿನಿಮಾ ನೋಡದ ಕನ್ನಡಿಗರೇ ಇರಲಿಕ್ಕಿಲ್ಲ. ಇಂದಿನ ಜನರೇಶನ್ ಕೂಡ ನೋಡಿ ಮೆಚ್ಚುವಂಥ ಕಥೆ ಹೊಂದಿರುವ ಈ ಚಿತ್ರವನ್ನು ಜೆನ್ -ಜೀ ನೋಡಿದರೆ ಅವರಲ್ಲಿಯೂ ಚಿತ್ರದುರ್ಗದ ಮೇಲೊಂದು ಅಬ್ಸೆಷನ್ ಶುರುವಾಗುವುದು ಖಚಿತ.

ಸ್ಲೋ ಮೋಷನ್ ನಲ್ಲಿ ಚಿತ್ರಿಸಿದ ಮೊದಲ ಕನ್ನಡ ಗೀತೆ ಎಂಬ ದಾಖಲೆ ಈ ಚಿತ್ರದ ಬಾರೇ ಬಾರೇ.. ಚಂದದ ಚೆಲುವಿನ ತಾರೆ ಗೀತೆಗೆ ದಕ್ಕಿದೆ. ಚಿತ್ರದ ಹಾಡುಗಳು, ಅಭಿನಯ, ಕಥನ ಶೈಲಿ ಎಲ್ಲವೂ ನಮ್ಮನ್ನು ಸೆಳೆಯುವ ಜೊತೆಗೆ ಚಿತ್ರದುರ್ಗವೂ ಗುಪ್ತಗಾಮಿನಿಯಂತೆ ನಮ್ಮೊಳಗೆ ಹರಿದು ಸೇರಿಕೊಂಡುಬಿಡುತ್ತದೆ. ನಾಗರಹಾವು ನೋಡಿದ ಮೇಲೆ ಚಿತ್ರದುರ್ಗ ಕೋಟೆಗೆ ಹೋಗುವುದು ಒಂದು ಸಿನಿಮಾ ಟೂರ್ ಅನಿಸುತ್ತದೆ. ಚಿತ್ರದುರ್ಗಕ್ಕೆ ಟ್ರಿಪ್ ಹೋಗುವವರು ಒಮ್ಮೆ ಫಾಸ್ಟ್ ಫಾರ್ವರ್ಡ್ ಮೋಡ್ ನಲ್ಲಿಯಾದರೂ ನಾಗರಹಾವು ಚಿತ್ರವನ್ನು ನೋಡಿಕೊಂಡು ಹೋಗಬೇಕು. ಆಗ ಅಲ್ಲಿನ ಕಲ್ಲುಬಂಡೆಗಳು, ಬಿಸಿಯ ನೆಲ ಹೆಚ್ಚು ಹೆಚ್ಚು ಆಪ್ತವೆನಿಸುತ್ತವೆ.

ಚಿತ್ರ: ನಾಗರಹಾವು

ತೆರೆಕಂಡ ವರ್ಷ: 1972

ತಾರಾಗಣ: ವಿಷ್ಣುವರ್ಧನ್, ಆರತಿ, ಅಶ್ವಥ್, ಲೀಲಾವತಿ

ನಿರ್ದೇಶನ: ಪುಟ್ಟಣ್ಣ ಕಣಗಾಲ್

Naveen Sagar

Naveen Sagar

Travel blogger and adventurer passionate about exploring new cultures and sharing travel experiences.

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?