Saturday, October 17, 2026
Saturday, October 17, 2026

ಲೆನ್ಸ್ ಆಯ್ಕೆ: ಛಾಯಾಗ್ರಹಣದ ಪ್ರಮುಖ ನಿರ್ಧಾರ

ಕ್ರೀಡಾ ಛಾಯಾಗ್ರಹಣದಲ್ಲಿ ಆಟಗಾರರ ವೇಗವೇ ದೊಡ್ಡ ಸವಾಲು. ವೇಗವಾದ ಆಟೋಫೋಕಸ್ ಮತ್ತು ಹೆಚ್ಚಿನ ಶಟರ್ ಸ್ಪೀಡ್ ಇಲ್ಲಿ ಅತ್ಯಗತ್ಯ. ಒಳಾಂಗಣ ಕ್ರೀಡೆಗಳಿಗೆ 70-200mm, ಹೊರಾಂಗಣಕ್ಕೆ 100-500mmನಂಥ ಲೆನ್ಸ್‌ಗಳು ದೂರದಲ್ಲಿರುವ ಆಟಗಾರರನ್ನು ಹತ್ತಿರಕ್ಕೆ ಕಾಣ ಸಿಗಲು ಸಹಾಯಕ.

  • ಹರ್ಷದ್‌ ಉದಯ್‌ ಕಾಮತ್‌

ಛಾಯಾಗ್ರಹಣದಲ್ಲಿ ಕ್ಯಾಮೆರಾಗಿಂತಲೂ ‘ಲೆನ್ಸ್‌’ಗೆ ಹೆಚ್ಚಿನ ಬೆಲೆ ಹಾಗೂ ಪ್ರಾಮುಖ್ಯವಿದೆ ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಒಂದೇ ಕ್ಯಾಮೆರಾದಲ್ಲಿ ಬೇರೆ ಬೇರೆ ಲೆನ್ಸ್ ಬಳಸಿದಾಗ, ಒಂದೇ ದೃಶ್ಯವೂ ವಿಭಿನ್ನವಾಗಿ ಕಾಣಲು ಈ ಲೆನ್ಸ್‌ಗಳು ಸಹಾಯ ಮಾಡುತ್ತವೆ. ಪ್ರತಿ ವಿಭಾಗದಲ್ಲೂ ಆಯಾ ಲೆನ್ಸ್‌ಗಳನ್ನು ಯೋಜನೆಗೆ ತಕ್ಕಂತೆ ಬಳಸುವುದು ಛಾಯಾಗ್ರಾಹಕನ ಚಾಣಾಕ್ಷತೆ.

ಮದುವೆ ಸಮಾರಂಭವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಒಂದೇ ಲೆನ್ಸ್‌ನಿಂದ ಎಲ್ಲ ರೀತಿಯ ಚಿತ್ರಗಳನ್ನು ತೆಗೆಯಲು ಸಾಧ್ಯವಿಲ್ಲ. ವಧು-ವರರನ್ನು ಸೆರೆಹಿಡಿಯಲು 85mm ಅಥವಾ 70-200mm ಲೆನ್ಸ್ ಉಪಯುಕ್ತ. ಇದನ್ನು ವೇದಿಕೆಯ ಹತ್ತಿರ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿಯೂ ಬಳಸಬಹುದು. ಅಲ್ಲಿನ ಸಡಗರದ ಜತೆಗೆ ಅತಿಥಿಗಳ, ಶಾಸ್ತ್ರಗಳ ಚಿತ್ರ ತೆಗೆಯಲು 35mm, 50mm ಲೆನ್ಸ್‌ ಒಳ್ಳೆಯ ಆಯ್ಕೆ. ವೇದಿಕೆಯಲ್ಲಿನ ದೊಡ್ಡ ಗುಂಪಿನ ಫೊಟೋಗಳಿಗೆ 24–70mm, 18–55mm ಅಥವಾ 18–140mm ಅನುಕೂಲಕರ.

ಪ್ರೀ-ವೆಡ್ಡಿಂಗ್ ಛಾಯಾಗ್ರಹಣದಲ್ಲಿ, ಜೋಡಿಯ ಜತೆಗೆ ಅವರ ಸುತ್ತಲಿನ ವಾತಾವರಣವನ್ನೂ ಚಿತ್ರದಲ್ಲಿ ತೋರಿಸುವುದಾದರೆ 50mm ಇಸ್-ದಿ-ಬೆಸ್ಟ್. 85mm,105mm ಅಥವಾ 135mm ಲೆನ್ಸ್‌ಗಳು ಕ್ಲೋಸ್‌ಅಪ್ ಮತ್ತು ಭಾವನಾತ್ಮಕ ಚಿತ್ರಕ್ಕೆ ಸೂಕ್ತ. ಬೆಟ್ಟ, ಗುಡ್ಡ, ನಿಸರ್ಗವಿರುವ ಕಡೆ 24mm, 35mm ಉಪಯೋಗಿಸಿಕೊಂಡು ಉತ್ತಮವಾದ ಪ್ರೀ-ವೆಡ್ಡಿಂಗ್ ಕಥೆಯನ್ನು ಹೆಣೆಯಬಹುದು.

Untitled design - 2026-10-17T190517.201

ವನ್ಯಜೀವಿ ಮತ್ತು ಪಕ್ಷಿ ಛಾಯಾಗ್ರಹಣದಲ್ಲಿ, ಪ್ರಾಣಿ-ಪಕ್ಷಿಗಳ ಹತ್ತಿರ ಹೋಗುವುದಕ್ಕಿಂತ ಸುರಕ್ಷಿತ ಅಂತರದಿಂದ ಅವುಗಳ ಸಹಜ ನಡವಳಿಕೆಯನ್ನು ದಾಖಲಿಸುವುದಾಗಿರುವುದರಿಂದ 100–500mm, 200–600mm ಅಥವಾ ಅದಕ್ಕಿಂತ ಮೇಲ್ಪಟ್ಟ ಟೆಲಿಫೊಟೋ ಲೆನ್ಸ್‌ಗಳನ್ನು ಬಳಸಬೇಕಾಗುತ್ತದೆ. ಇಲ್ಲಿ ಲೆನ್ಸಿನ ಇಮೇಜ್ ಸ್ಟೆಬಿಲೈಸೇಶನ್ ಪ್ರಾಮುಖ್ಯವಹಿಸುತ್ತದೆ.

ಕ್ರೀಡಾ ಛಾಯಾಗ್ರಹಣದಲ್ಲಿ ಆಟಗಾರರ ವೇಗವೇ ದೊಡ್ಡ ಸವಾಲು. ವೇಗವಾದ ಆಟೋಫೋಕಸ್ ಮತ್ತು ಹೆಚ್ಚಿನ ಶಟರ್ ಸ್ಪೀಡ್ ಇಲ್ಲಿ ಅತ್ಯಗತ್ಯ. ಒಳಾಂಗಣ ಕ್ರೀಡೆಗಳಿಗೆ 70-200mm, ಹೊರಾಂಗಣಕ್ಕೆ 100-500mmನಂಥ ಲೆನ್ಸ್‌ಗಳು ದೂರದಲ್ಲಿರುವ ಆಟಗಾರರನ್ನು ಹತ್ತಿರಕ್ಕೆ ಕಾಣ ಸಿಗಲು ಸಹಾಯಕ.

ಸ್ಟ್ರೀಟ್ ಛಾಯಾಗ್ರಹಣಕ್ಕೆ 28mm, 35mm, 50mm ಲೆನ್ಸ್‌ಗಳು ತುಸು ಜನಪ್ರಿಯ. ಸಣ್ಣ, ಹಗುರವಾದ ಲೆನ್ಸ್ ಇದಾಗಿರುವುದರಿಂದ, ಆರಾಮವಾಗಿ ಓಡಾಡುತ್ತಾ ಕ್ಷಣಗಳನ್ನು ಸೆರೆಹಿಡಿಯಬಹುದು.

ಹಿಂದಿನ ಲೇಖನದಲ್ಲಿ ತಿಳಿಸಿದಂತೆ, ಪ್ರವಾಸ ಛಾಯಾಗ್ರಹಣದಲ್ಲಿ 35mm ಲೆನ್ಸ್ ಉತ್ತಮ ಆಯ್ಕೆ. ಪರ್ವತ, ಸಮುದ್ರ, ವಿಶಾಲವಾದ ಆಕಾಶವನ್ನು ತೋರಿಸಲು ಇದು ಅನುಕೂಲಕರ. ಜೊತೆಗೆ 24–70mm, 24–120mm ಜೂಮ್ ಲೆನ್ಸ್‌ಗಳು ಬಳಸಿಕೊಂಡು ವಿಭಿನ್ನ ದೃಶ್ಯಗಳನ್ನು ಒಂದೇ ಲೆನ್ಸ್‌ನಲ್ಲಿ ಸೆರೆಹಿಡಿಯಬಹುದು. ಪ್ರಾಡಕ್ಟ್ ಛಾಯಾಗ್ರಹಣವು ಸರಕಿನ ನಿಜವಾದ ಆಕಾರ ಮತ್ತು ವಿವರಗಳನ್ನು ತೋರಿಸುವುದಾಗಿದೆ. ಇಲ್ಲಿ 50mm, 85mm ಅಥವಾ ಮ್ಯಾಕ್ರೋ ಲೆನ್ಸ್‌ಗಳು ಇದಕ್ಕೆ ಉಪಯುಕ್ತ. ವಿಶೇಷವಾಗಿ ಆಭರಣಗಳು, ಸಣ್ಣ ಉತ್ಪನ್ನಗಳು ಮತ್ತು ಅವುಗಳ ಸೂಕ್ಷ್ಮ ವಿವರಗಳನ್ನು ಸೆರೆಹಿಡಿಯಲು ಮ್ಯಾಕ್ರೋ ಲೆನ್ಸ್ ಆಯ್ಕೆ ಮಾಡಿಕೊಳ್ಳಬಹುದು.

ಹೀಗಾಗಿ ಪ್ರತಿಯೊಂದು ಛಾಯಾಗ್ರಹಣ ವಿಭಾಗಕ್ಕೂ ಒಂದೇ ನಿರ್ದಿಷ್ಟ ‘ಲೆನ್ಸ್’ ಎಂದು ಹೇಳಲು ಸಾಧ್ಯವಿಲ್ಲ. ಆಯಾ ಸಂದರ್ಭದಲ್ಲಿ ಅದಕ್ಕನುಸಾರವಾಗಿ, ಲೆನ್ಸ್‌ನ ಫಲಿತಾಂಶ ಮತ್ತು ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ನಮಗೆ ಯಾವ ರೀತಿಯ ಛಾಯಾಗ್ರಹಣದಲ್ಲಿ ಆಸಕ್ತಿ ಇದೆಯೆಂಬುವುದನ್ನು ಗುರುತಿಸಿ, ಬಜೆಟ್‌ಗೆ ಅನುಗುಣವಾಗಿ ತಕ್ಕ ವಿಭಾಗಕ್ಕೆ ಬೇಕಾದ ಲೆನ್ಸ್ ಖರೀದಿ ಮಾಡುವುದು ಲೇಸು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?