• ಅಂಜಲಿ ರಾಮಣ್ಣ

ಇತ್ತೀಚೆಗೆ ಭೂತಾನಿನ ಟೈಗರ್ ನೆಸ್ಟ್ ಪರ್ವತ ಚಾರಣಕ್ಕೆ ಹೋಗಿದ್ದಾಗ ಸಿಕ್ಕಿದ್ದು ಡಚ್ಚರಾದ 60 ವರ್ಷದ ಎಮಿಲಿ ಮತ್ತು ಆಕೆಯ ಸ್ನೇಹಿತೆ 54 ವರ್ಷದ ವೀಯೆನ್. ಒಬ್ಬಾಕೆ ಪೋಸ್ಟ್ ಆಫೀಸಿನಲ್ಲಿ, ಮತ್ತೊಬ್ಬಾಕೆ ಉಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದು ಇಬ್ಬರೂ ಸ್ವಯಂನಿವೃತ್ತಿ ತೆಗೆದುಕೊಂಡು ಚಾರಣವನ್ನು ಹವ್ಯಾಸವಾಗಿರಿಸಿಕೊಂಡಿದ್ದಾರೆ. ʼವಾಹ್‌ ರೆ ವಾಹ್, ಜೀವನಾಸಕ್ತಿ ಎಂದರೆ ಹೀಗಿರಬೇಕುʼ ಎಂದು ಅವರನ್ನು ಹೊಗಳುತ್ತಲೇ ಹಿಂದಿರುಗಿ ಬರುವಾಗ ಹೀಗೆ ಯೋಚಿಸುತ್ತಿದ್ದೆ. ನಮ್ಮ ಹಿಂದಿನವರು ನಿವೃತ್ತಿ ಎಂದರೆ ಅರವತ್ತನೆಯ ವಯಸ್ಸಿಗೆ ತೆರೆದುಕೊಳ್ಳುವ ಸ್ವಾತಂತ್ರ್ಯದ ಹೆಬ್ಬಾಗಿಲು ಎಂದುಕೊಂಡಿದ್ದಾಗ ನಮ್ಮ ತಲೆಮಾರು ಮುಂಚಿತ ನಿವೃತ್ತಿ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಿಕೊಂಡೆವು. ಮುಂದಿನವರು ಏನು ಮಾಡುತ್ತಿದ್ದಾರೆ?

ಇದನ್ನೂ ಓದಿ: ಸ್ತ್ರೀಯರಿಗೆ ತಟ್ಟೆ ಪುರುಷರಿಗೆ ಕಪ್‌! ವಿಂಬಲ್ಡನ್‌ನಲ್ಲಿ ಇದೆಂಥ ತಾರತಮ್ಯ?

ಬಹುಪಾಲು ಅಪ್ಪ ಅಮ್ಮಂದಿರು ನಿವೃತ್ತಿ ಹೊಂದುವುದನ್ನೇ ಗುರಿಸಾಧನೆ ಎಂದುಕೊಂಡು ಜವಾಬ್ದಾರಿ ನಿಭಾಯಿಸುತ್ತಿದ್ದರು. ಅದಕ್ಕೇ ಪ್ರವಾಸ ಅವರ ಕೊನೆಯ ಆದ್ಯತೆಯಾಗಿತ್ತು. ಮುಂಚಿತ ನಿವೃತ್ತಿ ತೆಗೆದುಕೊಳ್ಳುತ್ತಿರುವುದೇ ಪ್ರವಾಸವನ್ನೂ ತಮ್ಮ ಹವ್ಯಾಸಗಳ ಪಟ್ಟಿಗೆ ಸೇರಿಸಿಕೊಳ್ಳಲು ಎಂದೆವು ನಾವು. ಹಾಗಾಗಿ, ಕ್ಯಾಲೆಂಡರ್‌ನಲ್ಲಿ ಗುರುತು ಹಾಕಿಕೊಂಡು ವರ್ಷಕ್ಕೆ ಇಂತಿಷ್ಟು ಪ್ರವಾಸ ಎನ್ನುವ ಪ್ರಯಾಣ ಮಾಡುತ್ತಿದ್ದೇವೆ. Gen Z ಪ್ರವಾಸವನ್ನು ಹೇಗೆ ಸ್ವೀಕರಿಸಿದ್ದಾರೆ ಎನ್ನುವ ಕುತೂಹಲ ಹೆಚ್ಚಿತ್ತು.

ಪರಿಚಯ ಇರುವ ಪ್ರವಾಸ ಆಯೋಜಕರುಗಳನ್ನು, ಪ್ರವಾಸ ಪ್ರಿಯ ಸ್ನೇಹಿತರನ್ನು ಈ ವಿಷಯದ ಬಗ್ಗೆ ಮಾತಿಗೆಳೆದೆ. ಒಟ್ಟಾರೆ ಮಾಹಿತಿ ಸಿಕ್ಕಿದ್ದು ಇಂದಿನ Gen Z ನಿವೃತ್ತಿ, ಮುಂಚಿತ ನಿವೃತ್ತಿ ಯಾವುದನ್ನೂ ಒಪ್ಪುವುದಿಲ್ಲ. ಅವರಿಗೆ ಜೀವನವನ್ನು ಮುಂದಕ್ಕೆ ತಳ್ಳಿ ಕಾದಿರಿಸುವ ಬಗ್ಗೆ ನಂಬಿಕೆ ಇಲ್ಲ. ಅವರಿಗೆ ಎಲ್ಲವೂ ಬೇಕಿರುವುದು ಈಗಲೇ. ಅದಕ್ಕಾಗಿಯೇ ಅವರು ’ಪುಟಾಣಿ ನಿವೃತ್ತಿ’ (Mini Retirement) ತೆಗೆದುಕೊಳ್ಳುತ್ತಿದ್ದಾರೆ. ಹಾಗೆಂದರೆ ಶಾಶ್ವತವಾಗಿ ಕೆಲಸ ಬಿಡುವುದಲ್ಲ. ಎರಡು ವಾರದಿಂದ ಆರು ತಿಂಗಳವರೆಗೆ ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳುವ ವಿರಾಮ. ಲ್ಯಾಪ್‌ಟಾಪ್ ಮುಚ್ಚಿ, ಬ್ಯಾಗ್ ತುಂಬಿಸಿ, ಟಿಕೆಟ್ ಕೈಯಲ್ಲಿ ಹಿಡಿದು ಹೊರಡುವ ವಿರಾಮ. ಉದ್ದೇಶ ಒಂದೇ- ಪ್ರಪಂಚವನ್ನು ಉಸಿರಾಡುವುದು. ಈ ಪೀಳಿಗೆ ʼಮೊದಲು ಕೆಲಸ, ಆಮೇಲೆ ಜೀವನʼ ಎಂಬ ಹಳೆಯ ಒಪ್ಪಂದವನ್ನು ಮುರಿದು, ಕೆಲಸ ಮಾಡು, ಬದುಕು, ಮತ್ತೆ ಕೆಲಸ ಮಾಡು, ಮತ್ತೆ ಬದುಕು ಎನ್ನುವ ಕರಾರು ಮಾಡಿಕೊಂಡು ’ಪ್ರವಾಸ ಕ್ರಾಂತಿʼ ತಂದಿದ್ದಾರೆ.

Untitled design - 2026-07-28T114047.817

ನಮ್ಮ ಪೋಷಕರ ಕಾಲದಲ್ಲಿ ಪ್ರವಾಸ ಎಂದರೆ ವಾರ್ಷಿಕ ರಜೆ. ಮನಾಲಿ-ಶಿಮ್ಲಾ ಪ್ಯಾಕೇಜ್, ಊಟಿ-ಕೊಡೈ ಟೂರ್. ಅಲ್ಲಿಗೆ ಹೋಗುವುದು, ಫೊಟೋ ತೆಗೆಯುವುದು, ವಾಪಸ್ ಬರುವುದು. ನಮ್ಮ ಪೀಳಿಗೆಯು ಅದನ್ನು ಸ್ವಲ್ಪ ಬದಲಿಸಿಕೊಂಡು ಬರಹ, ವ್ಲಾಗಿಂಗ್, ರೀಲ್ಸ್ ರೂಪಕ್ಕೆ ತರಲಾರಂಭಿಸಿತು. ಆದರೆ Gen Z ಗೆ ಪ್ರವಾಸ ಎಂದರೆ ಇವು ಯಾವುದೂ ಅಲ್ಲ. 2026ರಲ್ಲಿ Airbnb ಭಾರತದ 11 ನಗರಗಳಲ್ಲಿ 2000ಕ್ಕೂ ಹೆಚ್ಚು Gen Z ಯುವಕರನ್ನು ಕೇಳಿದಾಗ 87% ಜನರು ʼನಾವು ಹೇಗೆ ಪ್ರವಾಸ ಮಾಡುತ್ತೇವೋ ಅದು ನಾವು ಯಾರು ಎಂಬುದನ್ನು ಹೇಳುತ್ತದೆʼ ಎಂದಿದ್ದಾರೆ. 92% ಜನರು ʼಪ್ರವಾಸಕ್ಕೆ ಜನಪ್ರಿಯ ಜಾಗವೇ ಆಗಬೇಕುʼ ಎನ್ನುತ್ತಿಲ್ಲ ಅವರಿಗೆ ಬೇಕಿರುವುದು ತಮಗೆ ಹೊಂದುವ ಜಾಗ.

ಅದಕ್ಕಾಗಿಯೇ ಮುಂಬೈನ 24 ವರ್ಷದ ಹುಡುಗಿ ಮನಾಲಿಯ ಮೂರು ದಿನದ ಪ್ಯಾಕೇಜ್ ಟೂರ್ ಬಿಟ್ಟು ಅರುಣಾಚಲದ ಝಿರೋ ಕಣಿವೆಯಲ್ಲಿ ಒಂದು ತಿಂಗಳು ಇರಲು ಹೋಗುತ್ತಾಳೆ. ಅಲ್ಲಿ ನೇಯ್ಗೆ ಕಲಿಯುತ್ತಾಳೆ. ಬೆಂಗಳೂರಿನ ಮೂವರು ಸ್ನೇಹಿತರು ಫ್ಲೈಟ್‍ನಲ್ಲಿ ಗೋವಾಕ್ಕೆ ಹೋಗಲ್ಲ. ಕಾರಿನಲ್ಲಿ ಆರು ವಾರಗಳ ಕಾಲ ಭಾರತದ ಪಶ್ಚಿಮ ಕರಾವಳಿಯನ್ನು ಸಾವಧಾನದಿಂದ ಸುತ್ತುತ್ತಾರೆ. ರಣ್ ಆಫ್ ಕಚ್‌ನ ಬಿಳಿಮರುಭೂಮಿಯಿಂದ ಪ್ರಾರಂಭಿಸಿ ದಿಯುವಿನ ಸಮುದ್ರದಲ್ಲಿ ಮುಳುಗೇಳುವ ಪ್ರವಾಸ ಮಾಡುತ್ತಾರೆ. ದಾರಿಯಲ್ಲಿ ಎದುರಾಗುವ ದಾಭಾದಲ್ಲಿ ರೊಟ್ಟಿ ತಿಂದು ಸ್ಥಳೀಯರ ಮನೆಯಲ್ಲಿ ತಂಗುತ್ತಾರೆ. ಅವರಿಗೆ ವೇಳಾಪಟ್ಟಿಯ ಹಂಗಿಲ್ಲ.

64% Gen Z ತಮ್ಮ ಪ್ರವಾಸದಲ್ಲಿ ಉದ್ದೇಶಪೂರ್ವಕವಾಗಿ ’ಏನೂ ಮಾಡದ ದಿನಗಳು’ ಎನ್ನುವ ಗುರುತು ಹಾಕಿಕೊಳ್ಳುತ್ತಾರೆ. ಮೂವರಲ್ಲಿ ಇಬ್ಬರು ಹೇಳುತ್ತಾರೆ ʼಏನನ್ನೂ ಮಾಡದಿರುವುದಕ್ಕಾಗಿಯೇ ನಾವು ಪ್ರವಾಸ ಮಾಡುತ್ತೇವೆʼ ಎಂದು. ಮುನ್ನಾರ್‌ನ ಟೀ ಅಂಗಡಿಯಲ್ಲಿ ಕುಳಿತು ಮಳೆ ನೋಡುವುದು, ಹೃಷಿಕೇಶದಲ್ಲಿ ಗಂಗೆಯ ದಡದಲ್ಲಿ ಒಂದು ಮಧ್ಯಾಹ್ನ ಕಳೆಯುವುದು, ಐದಾರು ಜಾಗಗಳಲ್ಲಿ ’ಬಂದ ಪುಟ್ಟ ಹೋದ ಪುಟ್ಟ’ ಎನ್ನುವ ಹಾಗಲ್ಲದೆ ಒಂದು ಸ್ಥಳದಲ್ಲಿಯೇ ಗಾಢವಾಗಿ ಬದುಕುವುದು ಇವರುಗಳ ಶೈಲಿಯಾಗಿದೆ. ನಾಲ್ಕೈದು ದಿನಗಳ ರಜೆಯಲ್ಲಿ ಇದು ಸಾಧ್ಯವಿಲ್ಲ. ಅದಕ್ಕೇ ಅವರು ತೆಗೆದುಕೊಳ್ಳುತ್ತಿರುವುದು ʼಮಿನಿ ರಿಟೈರ್ಮೆಂಟ್ʼ.

Gen Zಗಳ ಈ ರೀತಿಯ ಪ್ರವಾಸ ಯೋಚನೆ ಭಾರತಕ್ಕೆ ಮಾತ್ರವಲ್ಲ, ಲಂಡನ್‌ನ 26 ವರ್ಷದ ಸೋಫಿ ಬಾರ್ಸಿಲೋನಾ ಬಿಟ್ಟು ಪೋರ್ಚುಗಲ್‌ನ ಮೀನುಗಾರ ಗ್ರಾಮದಲ್ಲಿ ಎರಡು ತಿಂಗಳು ಕಳೆಯುತ್ತಾಳೆ. ನ್ಯೂಯಾರ್ಕ್‌ನ ಜೇಕ್ ಯುರೋಪಿನ 10 ನಗರಗಳನ್ನು ನೋಡುವ ಬದಲು ಮೆಕ್ಸಿಕೋದ ಓಕ್ಸಾಕಾದಲ್ಲಿ ಸ್ಪ್ಯಾನಿಷ್ ಕಲಿಯುತ್ತಾನೆ. ಟೊರೊಂಟೋದ ಅಮೈರಾ ಎರಡು ತಿಂಗಳು ಬಾಲಿಯಲ್ಲಿ ಡಿಜಿಟಲ್ ನೊಮ್ಯಾಡ್ ಆಗಿ ಬದುಕುತ್ತಾಳೆ. ಪ್ರಪಂಚದಾದ್ಯಂತದ Gen Z ಒಂದೇ ಮಾತು ಹೇಳುತ್ತಿದ್ದಾರೆ ʼನಾವು ಸ್ಥಳಗಳಿಗೆ ಭೇಟಿ ಕೊಡುತ್ತಿಲ್ಲ, ನೆನಪುಗಳನ್ನು ಸಂಗ್ರಹಿಸುತ್ತಿದ್ದೇವೆʼ ಎಂದು.

ಪ್ರತಿಷ್ಠಿತ ಹೂಡಿಕೆದಾರ ಸಂಸ್ಥೆಯೊಂದು 2025ರಲ್ಲಿ ಮಾಡಿದ ಸಮೀಕ್ಷೆಯು ಹೇಳುತ್ತದೆ ಮಿನಿ ರಿಟೈರ್‌ಮೆಂಟ್ ಬಯಸುವ 67% Gen Z ಜನರು ಮುಂದಿನ ಒಂದು ವರ್ಷದಲ್ಲೇ ಕನಿಷ್ಠ ಎರಡು ವಿರಾಮಗಳನ್ನು ಯೋಜಿಸಿದ್ದಾರೆ. ಭಾರತದಲ್ಲಿ 48% ಯುವಕರು ʼನಾನು ಈ ವರ್ಷ ಒಂದಾದರೂ ತೆಗೆದುಕೊಳ್ಳುತ್ತೇನೆʼ ಎನ್ನುತ್ತಿದ್ದಾರೆ. ಅವರ ಮೊದಲ ಕಾರಣ ತುಂಬಾ ಸರಳ. ʼಯಾವುದೇ ನಿರ್ಬಂಧವಿಲ್ಲದೆ ಪ್ರವಾಸ ಮಾಡಬೇಕು.ʼ ಆ ವರದಿಯಲ್ಲಿ ನಮೂದಾದಂತೆ ಪುಣೆಯ 26 ವರ್ಷದ ಅನುಷ್ಕಾ 18 ತಿಂಗಳು ಹಣ ಉಳಿಸಿ ಮೂರು ತಿಂಗಳ ಮಿನಿ ರಿಟೈರ್‌ಮೆಂಟ್ ತೆಗೆದುಕೊಂಡು ಧರ್ಮಕೋಟ್‌ಗೆ ಹೋಗಿ ಬೆಳಗ್ಗೆ ಧ್ಯಾನ, ಮಧ್ಯಾಹ್ನ ಟ್ರೆಕ್, ಸಂಜೆ ಬೀದಿ ನಾಯಿಗಳ ಸೇವಾ ಕೇಂದ್ರದಲ್ಲಿ ಸ್ವಯಂಸೇವೆ ಸಲ್ಲಿಸಿದ್ದಾರೆ. ʼಐವತ್ತರಲ್ಲಿಯೂ ಮಾಡಬಹುದಿತ್ತು, ಆದರೆ ಈಗ ಕಾಲುಗಳಲ್ಲಿ ಶಕ್ತಿ ಇದೆ. ಈಗಲೇ ಹಿಮಾಲಯ ಹತ್ತಬೇಕು.ʼ ಎನ್ನುವುದಾಕೆಯ ಆಸೆ.

ದೆಹಲಿಯ ಇಬ್ಬರು 24 ವರ್ಷದ ಸ್ನೇಹಿತರು ಸ್ಟಾರ್ಟಪ್‌ನಿಂದ ಎರಡು ತಿಂಗಳು ರಜೆ ತೆಗೆದುಕೊಂಡು ವಾರಾಣಸಿಯಲ್ಲಿ ಬೆಳಗಿನ ಆರತಿ, ಮೇಘಾಲಯದಲ್ಲಿ ಜೀವಂತ ಬೇರಿನ ಸೇತುವೆ ಮೇಲಿನ ಓಡಾಟ, ಔರೋವಿಲ್ಲೆಯಲ್ಲಿ ಸಮುದಾಯ ಜೀವನ, ಗೋಕರ್ಣದಲ್ಲಿ ಬೀಚ್‌ನಲ್ಲಿ ವಾರಗಟ್ಟಲೆ ಇದ್ದು, ʼನಮ್ಮ ದೇಶವನ್ನು ಅರ್ಧದಷ್ಟೂ ನೋಡಿಲ್ಲ. ಮೊದಲು ಅದನ್ನು ನೋಡಬೇಕುʼ ಎಂದಿದ್ದಾರೆ. ಕೋವಿಡ್ ನಂತರ ಉದ್ಯೋಗಸ್ಥ ಜಗತ್ತು ಕಠಿಣವಾಗಿದೆ. ದಿನಕ್ಕೆ 12 ಗಂಟೆ ದುಡಿಮೆ, ವೀಕೆಂಡ್‌ನಲ್ಲಿಯೂ ಕೆಲಸ, ʼಎಲ್ಲಾ ಸಮಯದಲ್ಲೂ ಲಭ್ಯವಿರಬೇಕುʼ ಎಂಬ ಒತ್ತಡದಿಂದ ಮನಸಿಗೆ ಸುಸ್ತಾಗಿದೆ. ಅದಕ್ಕೆ ಪರಿಹಾರ ಮತ್ತೊಂದು ತರಬೇತಿ ಪಡೆದು ಸರ್ಟಿಫಿಕೇಟ್ ಪಡೆಯುವುದಲ್ಲ ಬದಲಿಗೆ ಪ್ರವಾಸಕ್ಕಾಗಿ ಟಿಕೆಟ್ ಪಡೆಯುವುದು ಎನ್ನುತ್ತಿದ್ದಾರೆ. ಬೆಂಗಳೂರಿನ 28 ವರ್ಷದ ರೋಹನ್ ಮೂರು ವರ್ಷಗಳ ಕೆಲಸದ ನಂತರ ನಾಲ್ಕು ತಿಂಗಳು ವಿರಾಮ ತೆಗೆದುಕೊಂಡು ಕಸೋಲಿಯಲ್ಲಿ ಅರೆಕಾಲಿಕ ರಿಮೋಟ್ ಕೆಲಸ, ಆಮೇಲೆ ಲಡಾಖ್‌ನಲ್ಲಿ ಮೊಬೈಲ್ ಇಲ್ಲದ ಟ್ರೆಕ್, ಕೊನೆಯಲ್ಲಿ ಪುದುಚೇರಿಯಲ್ಲಿ ಸರ್ಫಿಂಗ್ ಮುಗಿಸಿ ವಾಪಸ್ ಬಂದಾಗ ತನ್ನದೇ ಬ್ಯುಸಿನೆಸ್ ಆರಂಭಿಸಿದ್ದಾರೆ ʼಆ ವಿರಾಮ ನನ್ನ ವೃತ್ತಿಗೆ ಹಾನಿ ಮಾಡಲಿಲ್ಲ. ಅದರಿಂದಲೇ ಹೊಸ ಐಡಿಯಾ ಹುಟ್ಟಿತುʼ ಎನ್ನುತ್ತಾರೆ. Airbnb ಪ್ರಕಾರ 66% Gen Z ನಿರ್ಧಾರ ಮಾಡಿದ 48 ಗಂಟೆಯೊಳಗೆ ಟಿಕೆಟ್ ಬುಕ್ ಮಾಡುತ್ತಾರೆ. ಇದು ಯೋಜನೆಯಲ್ಲ, ಒತ್ತಡಕ್ಕೆ ತಕ್ಷಣದ ಉತ್ತರ.

Untitled design - 2026-07-28T114305.657

Gen Zಗಳ ಈ ಕ್ರಾಂತಿಯು ಸಾಧ್ಯವಾಗುತ್ತಿರುವುದೂ ತಂತ್ರಜ್ಞಾನದಿಂದಲೇ. ಇಂದು ಕಂಪ್ಯೂಟರ‍್ನಲ್ಲಿ ಕೋಡ್ ಬರೆಯಲು ಕಚೇರಿಯಲ್ಲಿ ಇರಬೇಕಿಲ್ಲ. ವಾರ್ಕಲಾದ ಕೆಫೆಯಲ್ಲಿ ಕುಳಿತು, ಜೈಪುರದ ಹವೇಲಿಯಿಂದ, ಗೋವಾದ ಬೀಚ್‌ನಿಂದಲೂ ಕೆಲಸ ಮಾಡಬಹುದು. ಮೂರು ತಿಂಗಳ ಸಂಪಾದನೆಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುತ್ತಬಹುದು. ಯೂಟ್ಯೂಬ್, ಇನ್‌ಸ್ಟಾಗ್ರಾಮ್‌ ಹೀಗೆ ಇನ್ನಿತರೆ ಸೋಷಿಯಲ್ ಮೀಡಿಯಾಗಳಿಂದಲೂ ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಮುಂದಿನ ಪ್ರವಾಸಕ್ಕೆ ವಿನಿಯೋಗಿಸಿಕೊಳ್ಳಲು.

ಇದರಿಂದ ರೆಸ್ಯೂಮೆಯಲ್ಲಿ ಗ್ಯಾಪ್ ಆಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಅವರ ಉತ್ತರ ʼಪ್ರವಾಸವೇ ಅತಿದೊಡ್ಡ ಶಿಕ್ಷಣʼ. ಒಂದು ತಿಂಗಳು ಹೊಸ ಜಾಗದಲ್ಲಿ ಇರುವುದು ಬಜೆಟ್ ನಿಭಾಯಿಸುವುದು, ಅಪರಿಚಿತರೊಂದಿಗೆ ಮಾತುಕತೆ ಇವುಗಳು ಅನಿಶ್ಚಿತತೆಯನ್ನು ಎದುರಿಸುವುದು ಕಲಿಸುತ್ತದೆ. ವರದಿಯ ಪ್ರಕಾರ ಮಿನಿ ರಿಟೈರ್‌ಮೆಂಟ್ ತೆಗೆದುಕೊಂಡ 85% ಭಾರತೀಯ Gen Z ಜನರ ಜೀವನದ ಗುಣಮಟ್ಟ ಸುಧಾರಿಸಿದೆ. ಏಕೆಂದರೆ ಅವರು ಫೊಟೋಗಳಿಗಿಂತ ದೃಷ್ಟಿಕೋನಗಳನ್ನು ಸಂಗ್ರಹಿಸುತ್ತಾರೆ. ಖಂಡಿತವಾಗಿ ಸವಾಲುಗಳಿವೆ. ಹಣದ ಕೊರತೆ, ಕುಟುಂಬದ ಪ್ರಶ್ನೆಗಳು, ಎಲ್ಲಾ ಕೆಲಸದಲ್ಲೂ ಇಂಥ ಸ್ವಾತಂತ್ರ್ಯ ಇರುವುದಿಲ್ಲ. ಆದರೆ ಮನೋಭಾವ ಬದಲಾಗುತ್ತಿದೆ. Gen Zಗಳ ಪ್ರವಾಸ ಕ್ರಾಂತಿಯು ಸೋಮಾರಿತನದ ಉಪಉತ್ಪಾದನೆಯಲ್ಲ. ಉದ್ದೇಶಪೂರ್ವಕವಾಗಿ ಅವರೇ ರೂಪಿಸಿಕೊಂಡ ಜೀವನ ಕ್ರಾಂತಿ.