ಪಶ್ಚಿಮ ಘಟ್ಟದಿಂದ ‘ಸೆವೆನ್ ಸಿಸ್ಟರ್ಸ್’ವರೆಗೆ ಪ್ರವಾಸೋದ್ಯಮ ಅಭಿವೃದ್ಧಿಯ ಧ್ಯೇಯವಿರಲಿ
ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನಜೀವನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಅಭಿವೃದ್ಧಿಯ ಮಾರ್ಗವಲ್ಲ. ಟನಲ್, ಎಲಿವೇಟೆಡ್ ಕಾರಿಡಾರ್, ವೈಜ್ಞಾನಿಕ ಬೈಪಾಸ್, ನಿಯಂತ್ರಿತ ಸಮಯದ ಸಂಚಾರ, ತಂತ್ರಜ್ಞಾನ ಆಧಾರಿತ ಎಚ್ಚರಿಕಾ ವ್ಯವಸ್ಥೆ — ಇವೆಲ್ಲವೂ ಅಧ್ಯಯನಕ್ಕೆ ಅರ್ಹ ಆಯ್ಕೆಗಳು. ಇವುಗಳ ಕುರಿತು ಚರ್ಚೆಗೂ ಹೆದರುವ ಆಡಳಿತ, ಅಭಿವೃದ್ಧಿಯ ಮಾತು ಹೇಳುವ ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ಪರಿಸರವೂ ಉಳಿಯಬೇಕು, ಬದುಕೂ ಸಾಗಬೇಕು — ಈ ಸಮತೋಲನವೇ ನಿಜವಾದ ಅಭಿವೃದ್ಧಿ.
- ಕೆ ರಾಧಾಕೃಷ್ಣ ಹೊಳ್ಳ
ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ)
--
ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ಉತ್ತರ ಪೂರ್ವ ಭಾರತದ Seven Sisters ರಾಜ್ಯಗಳು ಇಂದು ಒಂದೇ ಧ್ವನಿಯಲ್ಲಿ ಮಾತನಾಡುತ್ತಿವೆ. ಹಾಗೆ ಉತ್ತರದ Golden Triangle circuit ಪ್ರತ್ಯೇಕ ರಾಜ್ಯಗಳಾಗಿ ಅಲ್ಲ, ಒಕ್ಕೂಟದ ಶಕ್ತಿಯಾಗಿ ಪ್ರವಾಸೋದ್ಯಮವನ್ನು ರೂಪಿಸುವ ಮೂಲಕ, ಅವುಗಳು ಪರಿಸರ ಸಂರಕ್ಷಣೆ, ಸ್ಥಳೀಯ ಬದುಕು ಮತ್ತು ಆರ್ಥಿಕ ಬೆಳವಣಿಗೆಯನ್ನು ಸಮತೋಲನದಲ್ಲಿ ಸಾಗಿಸುವ ಮಾದರಿಯನ್ನು ನಿರ್ಮಿಸಿವೆ. ಈ ಮಾದರಿ ದಕ್ಷಿಣ ಭಾರತಕ್ಕೆ ಕೇವಲ ಉದಾಹರಣೆಯಲ್ಲ — ಪಾಠವೂ ಹೌದು.
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣವು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ಸಹಜವಾಗಿ ಬೆಸೆದುಕೊಂಡಿವೆ. ಪಶ್ಚಿಮ ಘಟ್ಟ, ಸಮುದ್ರತೀರ, ದೇವಾಲಯ, ಅರಣ್ಯ, ಸಾಂಸ್ಕೃತಿಕ ಪರಂಪರೆ — ಎಲ್ಲವೂ ರಾಜ್ಯ ಗಡಿಗಳನ್ನು ಮೀರಿ ಹರಡಿರುವ ಸಂಪತ್ತು. ಆದರೂ ಪ್ರವಾಸೋದ್ಯಮದ ವಿಷಯದಲ್ಲಿ ನಾವು ಇನ್ನೂ ಪ್ರತ್ಯೇಕ ರಾಜ್ಯಗಳ ಸೀಮಿತ ಚಿಂತನೆಗೆ ಸಿಲುಕಿಕೊಂಡಿದ್ದೇವೆ. ಈ ವಿಭಜಿತ ದೃಷ್ಟಿಕೋನವೇ ದಕ್ಷಿಣ ಭಾರತದ ಅತಿದೊಡ್ಡ ದೌರ್ಬಲ್ಯ.
ಇದನ್ನೂ ಓದಿ: ಕಾಲ್ತುಳಿತಕ್ಕೆ ಪರಿಹಾರ ಐಪಿಎಲ್‌ಗೆ ನಿರ್ಬಂಧವಲ್ಲ, ವ್ಯವಸ್ಥೆಗೆ ಶಿಸ್ತು ಬೇಕು
ಈ ದೌರ್ಬಲ್ಯವನ್ನು ಇತ್ತೀಚಿನ ಬೆಳವಣಿಗೆ ಮತ್ತಷ್ಟು ತೀವ್ರಗೊಳಿಸಿದೆ. ಕರ್ನಾಟಕದಲ್ಲಿ ಪ್ರಾಣಿಗಳ ದಾಳಿ ಭೀತಿಯಿಂದ ಅರಣ್ಯ ಮತ್ತು ವನ್ಯಜೀವಿ ಪ್ರವಾಸೋದ್ಯಮವನ್ನು ಸ್ಥಗಿತಗೊಳಿಸಿರುವ ನಿರ್ಧಾರ, ಮಾನವ ಜೀವದ ರಕ್ಷಣೆ ಮುಖ್ಯ ಎಂಬ ಸತ್ಯವನ್ನು ಒಪ್ಪಿಕೊಂಡರೂ, ದೀರ್ಘಕಾಲೀನ ಪರಿಹಾರವಿಲ್ಲದ ತಾತ್ಕಾಲಿಕ ಕ್ರಮವಾಗಿ ಕಾಣುತ್ತಿದೆ. ವನ್ಯಜೀವಿ ಸಮಸ್ಯೆ ಒಂದು ರಾಜ್ಯಕ್ಕೆ ಸೀಮಿತವಲ್ಲ. ಪಶ್ಚಿಮ ಘಟ್ಟದಾದ್ಯಂತ ಇದು ಹಂಚಿಕೊಂಡಿರುವ ಸವಾಲು. ಆದರೆ ಪರಿಹಾರಗಳು ಇನ್ನೂ ಪ್ರತ್ಯೇಕ ಆಡಳಿತದ ಗಡಿಯಲ್ಲೇ ಸಿಲುಕಿವೆ.

ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನಜೀವನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಅಭಿವೃದ್ಧಿಯ ಮಾರ್ಗವಲ್ಲ. ಟನಲ್, ಎಲಿವೇಟೆಡ್ ಕಾರಿಡಾರ್, ವೈಜ್ಞಾನಿಕ ಬೈಪಾಸ್, ನಿಯಂತ್ರಿತ ಸಮಯದ ಸಂಚಾರ, ತಂತ್ರಜ್ಞಾನ ಆಧಾರಿತ ಎಚ್ಚರಿಕಾ ವ್ಯವಸ್ಥೆ — ಇವೆಲ್ಲವೂ ಅಧ್ಯಯನಕ್ಕೆ ಅರ್ಹ ಆಯ್ಕೆಗಳು. ಇವುಗಳ ಕುರಿತು ಚರ್ಚೆಗೂ ಹೆದರುವ ಆಡಳಿತ, ಅಭಿವೃದ್ಧಿಯ ಮಾತು ಹೇಳುವ ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ಪರಿಸರವೂ ಉಳಿಯಬೇಕು, ಬದುಕೂ ಸಾಗಬೇಕು — ಈ ಸಮತೋಲನವೇ ನಿಜವಾದ ಅಭಿವೃದ್ಧಿ.
ಇಂಥ ಸಂದರ್ಭದಲ್ಲೇ ಉತ್ತರ ಪೂರ್ವದ Seven Sisters ರಾಜ್ಯಗಳ ಮಾದರಿ ಗಮನಸೆಳೆಯುತ್ತದೆ. ಅವುಗಳು ಪ್ರವಾಸೋದ್ಯಮವನ್ನು ಒಂದು ಸಂಯುಕ್ತ ಬ್ರಾಂಡ್, ಒಂದು ಸಾಮಾನ್ಯ ನೀತಿ ಚೌಕಟ್ಟು, ಮತ್ತು ರಾಜ್ಯಗಳ ನಡುವಿನ ನಿರಂತರ ಸಂಯೋಜನೆಯ ಮೂಲಕ ಮುನ್ನಡೆಸುತ್ತಿವೆ. ಅರಣ್ಯ, ಸಾಹಸ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಸ್ಥಳೀಯ ಉದ್ಯಮ — ಎಲ್ಲವನ್ನೂ ಒಂದೇ ಚಿಂತನೆಗೆ ತರಲಾಗಿದೆ. ದಕ್ಷಿಣ ಭಾರತಕ್ಕೂ ಇದೇ ರೀತಿಯ Southern Tourism Vision ಅಗತ್ಯವಾಗಿದೆ.
ಪಶ್ಚಿಮ ಘಟ್ಟ ಕೇವಲ ಕರ್ನಾಟಕದ ವಿಷಯವಲ್ಲ. ಅದು ಕೇರಳ, ತಮಿಳುನಾಡು ಹಾಗೂ ಗೋವಾವರೆಗೆ ಹರಡಿರುವ ಜೀವಂತ ಪರಿಸರ ವ್ಯವಸ್ಥೆ. ಬೆಂಗಳೂರು–ಮೈಸೂರು–ಬಂಡೀಪುರ–ವಯನಾಡು ರಸ್ತೆ ಮಾರ್ಗದ ದುಸ್ಥಿತಿ, ನಿಲಂಬೂರು–ನಂಜನಗೂಡು ರೈಲ್ವೆ ಯೋಜನೆಯ ನಿರ್ಲಕ್ಷ್ಯ, ಬಂಡೀಪುರ ಅರಣ್ಯ ಪ್ರದೇಶದ ರಾತ್ರಿ ಸಂಚಾರ ನಿರ್ಬಂಧ — ಇವೆಲ್ಲವೂ ಒಂದೇ ರಾಜ್ಯದ ಸಮಸ್ಯೆಗಳಲ್ಲ. ಇವು ಎರಡು ರಾಜ್ಯಗಳ ಆಡಳಿತಾತ್ಮಕ ಅಸಂಯೋಜನೆಯ ಸ್ಪಷ್ಟ ಪ್ರತಿಫಲಗಳು.
ಈ ಹಿನ್ನೆಲೆಯಲ್ಲಿ, ಉದ್ಯಮ–ವಾಣಿಜ್ಯ ವಲಯದ ಶೃಂಗ ಸಂಸ್ಥೆಯಾಗಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಇನ್ನು ಮೌನ ವೀಕ್ಷಕನಾಗಿರಬಾರದು. ಇತ್ತೀಚೆಗೆ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರಾಗಿ ಶ್ರೀ ವೀರೇಂದ್ರ ಕಾಮತ್ ಅವರು ಜವಾಬ್ದಾರಿ ವಹಿಸಿಕೊಂಡಿರುವುದು, ಪ್ರವಾಸೋದ್ಯಮವನ್ನು ಕೇವಲ ಮನರಂಜನೆಯ ವಲಯವಲ್ಲದೆ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಯಾಗಿ ನೋಡುವ ಹೊಸ ದಿಕ್ಕಿನ ಸೂಚನೆ. ಪರಿಸರ ಪ್ರವಾಸೋದ್ಯಮಕ್ಕೆ ನನ್ನನ್ನು ಮತ್ತು ಹೆರಿಟೇಜ್ ಪ್ರವಾಸೋದ್ಯಮಕ್ಕೆ ಡಾ. ಬಾಲಾಜಿ ಅವರನ್ನು ನೇಮಕ ಮಾಡಿರುವುದು, ಈ ಸಮಿತಿಯಿಂದ ನಿರ್ಣಾಯಕ ಪಾತ್ರ ನಿರೀಕ್ಷಿಸಲು ಕಾರಣವಾಗಬಹುದು ಎನ್ನುವ ಆಕಾಂಕ್ಷೆ.
ವಯನಾಡು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷರಾದ ಶ್ರೀ ಜೊನ್ ಪಾಠಾಣಿ ಅವರ ಮೂಲಕ, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘವು ಈ ಎಲ್ಲ ಬೇಡಿಕೆಗಳನ್ನು FKCCI ಅಧ್ಯಕ್ಷೆ ಶ್ರೀಮತಿ ಉಮಾ ರೆಡ್ಡಿ ಅವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿರುವುದು ಕೇವಲ ಮನವಿಯಲ್ಲ — ಅದು ಒಂದು ಅಂತರಾಳದ ದೃಢ ನಂಬಿಕೆಯ ಮನವಿ. ಗಡಿ ಜಿಲ್ಲೆಗಳ ಜನತೆಗೆ ಬೇಕಾಗಿರುವುದು ಭರವಸೆ ಅಲ್ಲ ಉತ್ತಮ ಸಂಬಂಧಗಳು.
ಇದೀಗ ಪ್ರಶ್ನೆ ಸ್ಪಷ್ಟವಾಗಿದೆ: ಉತ್ತರ ಪೂರ್ವದ Seven Sisters ಒಟ್ಟಾಗಿ ನಡೆದು ಸಾಧಿಸಿದರೆ, ದಕ್ಷಿಣ ಭಾರತ ಒಟ್ಟಾಗಿ ಅಭಿವೃದ್ಧಿಯ ಮಂತ್ರವನ್ನು ಯೋಚಿಸಲು ಹಿಂಜರಿಯುತ್ತಿರುವುದು ಯಾಕೆ ?