ಒಂದು ಸಿನಿಮಾವೇ ಟೂರಿಂಗ್ ಸ್ಪಾಟ್ ಆಗಬಹುದಾ? ಒಬ್ಬ ಸಿನಿಮಾ ಪ್ರೇಮಿ ಪ್ರವಾಸಕ್ಕೆಂದು ಆ ಊರಿಗೆ ಹೋದಾಗ ಆ ಸಿನಿಮಾ ನೋಡಿ ಬರದಿದ್ದರೆ ಅಪೂರ್ಣ ಅನಿಸಬಹುದಾ? ಆ ಊರು ಆ ಸಿನಿಮಾ ಅಂದ್ರೆ ನಾನು ಹೇಳುತ್ತಿರುವುದು ಯಾವ ಊರಿನ ಯಾವ ಸಿನಿಮಾ ಬಗ್ಗೆ?

ಪೀಠಿಕೆಯ ಅಗತ್ಯವೇ ಇಲ್ಲ. ಅದು ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ ಎಂಬ ಹಿಂದಿ ಸಿನಿಮಾ. ಕಳೆದ ಮೂವತ್ತೊಂದು ವರ್ಷಗಳಿಂದ ಮುಂಬಯಿಯ ಮರಾಠಾ ಮಂದಿರ ಎಂಬ ಚಿತ್ರಮಂದಿರದಲ್ಲಿ ನಿರಂತರ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಭಾರತದ ಅತಿ ದೀರ್ಘಕಾಲ ಓಡಿದ ಚಿತ್ರವೆಂಬ ಖ್ಯಾತಿ ಇದೆ. ಇದು ದಾಖಲೆಯೂ ಹೌದು. ಇಂದಿಗೂ ಮುಂಬಯಿಗೆ ಹೋದರೆ ಪ್ರತಿದಿನ ಬೆಳಗಿನ ಆಟ ಹನ್ನೊಂದೂವರೆಗೆ ಈ ಸಿನಿಮಾ ಪ್ರದರ್ಶನ ಇರುತ್ತದೆ. ಈ ಚಿತ್ರಕ್ಕೂ, ಚಿತ್ರಮಂದಿರಕ್ಕೂ ತನ್ನ ದಾಖಲೆಯಿಂದಾಗಿ, ಇದು ಕೊಡುತ್ತಿರುವ ನಾಸ್ಟಾಲ್ಜಿಕ್ ಭಾವಗಳಿಂದಾಗಿ ಪ್ರವಾಸಿ ಮಾನ್ಯತೆ ದಕ್ಕಿದಂತಾಗಿದೆ. ಮುಂಬಯಿಯ ಹಲವು ಪ್ರವಾಸಿ ತಾಣಗಳ ಜತೆಗೆ ಮರಾಠಾ ಮಂದಿರದ ಡಿಡಿಎಲ್‌ಜೆ ಸಿನಿಮಾವೂ ಪ್ರವಾಸಿ ತಾಣವಾಗಿ ಸೇರಿಹೋಗಿದೆ. ಈಗಾಗಲೇ ಹಲವು ಬಾರಿ ಸಿನಿಮಾ ನೋಡಿದ್ದರೂ, ಆ ಥಿಯೇಟರ್‌ಗೆ ಭೇಟಿ ನೀಡಿ ಕಡೆಯಪಕ್ಷ ಒಂದರ್ಧ ಗಂಟೆಯಾದರೂ ಆ ಸಿನಿಮಾ ನೋಡಿಬಂದರೆ ಸಿಗುವ ಖುಷಿಯೇ ಅವರ್ಣನೀಯ.

ಇದನ್ನೂ ಓದಿ: ಬೆಳ್ಳಿಪರದೆಯ ಮೇಲೆ ಅಮೆರಿಕಾದ ದರ್ಶನ

ಆದರೆ ಇಲ್ಲಿ ಹೇಳಲು ಹೊರಟಿರುವುದು ಮರಾಠಾ ಮಂದಿರವು ಡಿಡಿಎಲ್‌ಜೆ ಮೂಲಕ ಪ್ರವಾಸಿ ಸ್ಪಾಟ್ ಆಗಿರುವ ಬಗ್ಗೆ ಅಲ್ಲ. ಡಿಡಿಎಲ್‌ಜೆ ಎಂಬ ಅಪ್ಪಟ ಟ್ರಾವೆಲ್ ರೊಮ್ಯಾಂಟಿಕ್ ಲವ್ ಸ್ಟೋರಿಯ ಬಗ್ಗೆ. ಟ್ರಾವೆಲ್ ಮೂಲಕವೇ ಒಂದು ಚಿತ್ರದ ಕಥೆಯನ್ನು ಹೇಗೆಲ್ಲಾ ಹೆಣೆಯಬಹುದು. ಒಂದು ಪ್ರೇಮಕಥೆಗೆ ಹೇಗೆಲ್ಲ ದೇಶವಿದೇಶದ ಪ್ರವಾಸಿ ತಾಣಗಳನ್ನು ಬೆಸೆಯುತ್ತಾ ಹೋಗಬಹುದು ಎಂಬುದಕ್ಕೆ ಡಿಡಿಎಲ್‌ಜೆ ಒಂದು ಅಪ್ಪಟ ಉದಾಹರಣೆ. ಬಹುಶಃ ಇದು ಅಂಥ ಜಾನರ್‌ನ ಸಿನಿಮಾಗಳಲ್ಲಿ ಮೊತ್ತ ಮೊದಲನೆಯದು. ಇದನ್ನು ಸಿನಿಮ್ಯಾಟಿಕ್ ಟ್ರಾವೆಲಾಗ್ ಅಂದರೂ ತಪ್ಪಾಗಲಾರದು.

ಈ ಚಿತ್ರದಲ್ಲಿ ಶೂಟ್ ಮಾಡಿರುವ ಲೊಕೇಶನ್‌ಗಳೊಂದಿಗೆ ಪ್ರೇಕ್ಷಕರಿಗೆ ಒಂದು ಭಾವನಾತ್ಮಕ ಬೆಸುಗೆ ಸೃಷ್ಟಿಯಾಗಿ ಹೋಗಿದೆ.

ಶಾರೂಖ್ ಖಾನ್ ಮತ್ತು ಕಜೋಲ್ ಜೋಡಿಯ ಈ ಲವ್ ಸ್ಟೋರಿ ಒಂದಿಡೀ ಜನರೇಷನ್‌ಗೆ ಟ್ರಾವೆಲ್ ಬಗ್ಗೆ, ಯುರೋಪ್ ಬಗ್ಗೆ ಕನಸುಕಟ್ಟಿ ಕೊಡುವಲ್ಲಿ ಯಶಸ್ವಿಯಾಯಿತು. ಬಹುಶಃ ಬ್ಯಾಕ್‌ಪ್ಯಾಕ್ ಬಗೆಗಿನ ಕ್ರೇಜ್ ಮೊದಲು ಹುಟ್ಟಿದ್ದೇ ಶಾರೂಖ್‌ನ ಬೆನ್ನಲ್ಲಿ ಆ ಥರದ್ದೊಂದು ಬ್ಯಾಗ್ ನೋಡಿದಾಗ.

Untitled design (52)

ಇದು ಯಶ್ ಛೋಪ್ರಾ ಪುತ್ರ ಆದಿತ್ಯ ಛೋಪ್ರಾನ ಸಿನಿಮಾವೇ ಆದರೂ, ವಿದೇಶವನ್ನು ಮತ್ತು ರೊಮ್ಯಾನ್ಸನ್ನು ಗಾಢವಾಗಿ ತೋರಿಸುವಲ್ಲಿ ಅನುಭವಿ ಯಶ್ ಛೋಪ್ರಾರ ಕೈವಾಡ ಖಂಡಿತ ಇದ್ದಿರುತ್ತದೆ. ಚಿತ್ರ ಯುವಜನಾಂಗವನ್ನು ಎಷ್ಟರ ಮಟ್ಟಿಗೆ ಆಕರ್ಷಿಸಿ ಪ್ರಭಾವ ಬೀರಿತ್ತೆಂದರೆ, ರೈಲು ಜರ್ನಿ ಒಂದು ರೊಮ್ಯಾಂಟಿಕ್ ಜರ್ನಿ ಎಂಬ ವ್ಯಾಖ್ಯಾನ ಪಡೆದುಕೊಂಡಿತು. ರೈಲಲ್ಲಿ ನಮಗೂ ಒಬ್ಬ ಅಪರಿಚಿತ ಹುಡುಗ/ಹುಡುಗಿ ಸಿಕ್ಕುಬಿಡಬಹುದು, ಲವ್ವಾಗಿಬಿಡಬಹುದು, ಅದೊಂದು ಅದ್ಭುತ ಜರ್ನಿ ಆಗಬಹುದು ಎಂದೆಲ್ಲ ಕನಸು ಕಟ್ಟಿಕೊಡುವಂತಿತ್ತು ಚಿತ್ರದಲ್ಲಿನ ರೈಲು ಜರ್ನಿ ಮತ್ತು ಯುರೋಪ್ ಪ್ರಯಾಣ.

ಅಂದಿಗೆ ಮಧ್ಯಮವರ್ಗಕ್ಕಾಗಲೀ ಭಾರತದ ಬಹುತೇಕ ಮಂದಿಗಾಗಲೀ ವಿದೇಶ ಅಂದರೆ ಅತಿ ದೂರ. ಯಾರೋ ಉದ್ಯೋಗಕ್ಕೆ, ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವುದು ಬಿಟ್ಟರೆ ಮಿಕ್ಕಂತೆ ಅದು ಕಲ್ಪನೆಗಷ್ಟೇ ಸೀಮಿತವಾಗಿದ್ದ ಪ್ರಪಂಚ. ಸಿರಿವಂತರ ಸ್ವತ್ತು. ಆದರೆ ಡಿಡಿಎಲ್‌ಜೆ ಮೂಲಕ ಮಧ್ಯಮವರ್ಗವೂ ಸ್ವಿಟ್ಜರ್‌ಲ್ಯಾಂಡ್, ಯುನೈಟೆಡ್ ಕಿಂಗ್‌ಡಮ್‌ಗಳಂಥ ಡ್ರೀಮ್ ಡೆಸ್ಟಿನೇಷನ್‌ಗಳನ್ನು ನೋಡುವಂತಾಯ್ತು. ಅಲ್ಲೇ ಹೋಗಿ ಜೀವಿಸಿದಷ್ಟು ಅದ್ಭುತವಾಗಿ ದೊಡ್ಡ ತೆರೆಮೇಲೆ ವಿದೇಶ ದರ್ಶನವಾಯ್ತು. ಬಡೇ ಬಡೇ ದೇಶೋ ಮೇ ಐಸಿ ಛೋಟಿ ಛೋಟಿ ಚೀಜೇ ಹೋತೀ ರೆಹ್ತೀ ಹೈ ಅನ್ನೋ ಮಾತು ನಾವೂ ಒಂದಿನ ವಿದೇಶಕ್ಕೆ ಹೋದಾಗ ಹೇಳಬೇಕೆಂದು ಪ್ರೇಕ್ಷಕ ಫ್ಯಾಂಟಸೈಸ್ ಮಾಡಿಕೊಂಡ.

ಸ್ವಿಟ್ಜರ್‌ಲ್ಯಾಂಡಿನ ಹಸಿರು ನೆಲ, ಬೆಟ್ಟ, ನೀಲಾಕಾಶ, ಆಲ್ಪ್‌ನ ಹಿಮಪರ್ವತ, ಸರೋವರಗಳು ಎಲ್ಲವೂ ಕೇವಲ ಜಾಗಗಳೆನಿಸಲಿಲ್ಲ. ರೊಮ್ಯಾಂಟಿಕ್ ಭಾವ ಹುಟ್ಟಿಸಿಕೊಟ್ಟವು. ಶಾರೂಖ್ ಮತ್ತು ಕಜೋಲ್ ಒಬ್ಬರನ್ನೊಬ್ಬರು ತಬ್ಬಿಕೊಂಡು ನಿಲ್ಲುವ ಆ ಹಳದಿ ಹೂವಿನ ತೋಟ, ಸ್ವಿಟ್ಜರ್‌ಲ್ಯಾಂಡ್‌ನ Gstaad ಮತ್ತು ಸ್ಯಾನೆನ್ ಪ್ರದೇಶಗಳು, ಎಲ್ಲವೂ ಸಿನಿಪ್ರೇಮಿಗಳ ಡ್ರೀಮ್ ಡೆಸ್ಟಿನೇಷನ್‌ಗಳಾಗಿ ಬಿಟ್ಟವು.

ಸ್ವಿಟ್ಜರ್‌ಲ್ಯಾಂಡ್ ಹೋಗುವ ಭಾರತೀಯರಿಗೆ ಇಂದಿಗೂ ಡಿಡಿಎಲ್‌ಜೆ ಲೊಕೇಷನ್‌ಗಳನ್ನು ಅವರ ಪ್ರವಾಸದ ಪಟ್ಟಿಯಲ್ಲಿ ಸೇರಿಸಿ ಕೊಟ್ಟಿರಲಾಗುತ್ತದೆ. ಆ ಲೊಕೇಷನ್‌ಗಳಲ್ಲಿ ಫೊಟೋ ತೆಗೆಸಿಕೊಳ್ಳುವುದು ಪ್ರವಾಸದ ಪ್ರಮುಖ ಅಂಶಗಳಲ್ಲೊಂದಾಗಿರುತ್ತದೆ.

ಸಡನ್ ಪ್ರವಾಸ, ಅಲ್ಲೆಲ್ಲೋ ಹಾಸ್ಟೆಲ್ಲಲ್ಲಿ ಉಳಿಯುವುದು, ಅಪರಿಚಿತ ಭಾರತೀಯರ ಪರಿಚಯ, ರೈಲು ಮಿಸ್ ಮಾಡಿಕೊಳ್ಳೋದು, ರೈಲಿನಲ್ಲಿ ಗಂಟೆಗಟ್ಟಲೆ ಸ್ವತಂತ್ರವಾಗಿ ಜೀವಿಸುವುದು, ಲವ್, ರೊಮ್ಯಾನ್ಸ್ ಇವೆಲ್ಲ ಕನಸು ಕಟ್ಟಿಕೊಟ್ಟಿದ್ದು ಡಿ ಡಿ ಎಲ್ ಜೆ.

ಈ ಸಿನಿಮಾದ ಅತಿ ಹೆಚ್ಚು ಭಾಗ ಲಂಡನ್‌ನಲ್ಲೇ ಶೂಟ್ ಆಗಿತ್ತು. ಆದರೆ ಕೇವಲ ಅದು ಲೊಕೇಷನ್‌ಗಳಿಗೆ ಸೀಮಿತವಾಗದೇ ಅಲ್ಲಿನ ರೀತಿ ರಿವಾಜುಗಳು, ಸಂಸ್ಕೃತಿಗಳನ್ನು ಪರಿಚಯಿಸಿಕೊಟ್ಟಿತ್ತು.

ಆದರೆ ಡಿಡಿಎಲ್‌ಜೆ ಕೇವಲ ವಿದೇಶ ತೋರಿಸಿದ ಸಿನಿಮಾವಾಗಿ ಉಳಿಯಲಿಲ್ಲ. ದ್ವಿತೀಯಾರ್ಧದಲ್ಲಿ ಪಂಜಾಬ್‌ನಲ್ಲಿ ತೆರೆದುಕೊಳ್ಳುವ ಸಿನಿಮಾ ನಮ್ಮ ದೇಶದ ಸಂಸ್ಕೃತಿ, ಆಚರಣೆಗಳು, ಕುಟುಂಬವ್ಯವಸ್ಥೆ, ಎಮೋಷನ್‌ಗಳು ಹೇಗಿರುತ್ತವೆ, ವಿದೇಶಕ್ಕೂ ಇಲ್ಲಿಗೂ ಎಷ್ಟು ಭಿನ್ನ ಎಂಬುದನ್ನು ಬಹಳ ಸರಳವಾಗಿ ಪ್ರೀಚೀ ಅಲ್ಲದಂತೆ ಹೇಳುತ್ತಾ ಹೋಗುತ್ತದೆ.

ನಮಗೇ ಅರಿವಿಲ್ಲದಂತೆ ಎರಡು ಸಂಸ್ಕೃತಿಗಳನ್ನು ತುಲನೆ ಮಾಡುತ್ತಾ ಹೋಗುತ್ತದೆ ಮನಸು. ಒಂದರ್ಥದಲ್ಲಿ ರೂರಲ್ ಟೂರಿಸಂ ಕೂಡ ಈ ಚಿತ್ರದಲ್ಲಿ ಪ್ರೊಮೋಟ್ ಆಗಿದೆ ಅನ್ನಬಹುದು. ಏಕೆಂದರೆ ಈ ಚಿತ್ರ ನೋಡಿದವರಿಗೊಮ್ಮೆ ಪಂಜಾಬ್‌ನ ಹಳ್ಳಿಗಳಿಗೆ, ಅಲ್ಲಿನ ಹೊಲಗದ್ದೆಗಳಿಗೆ ಹೋಗಬೇಕನಿಸದೆ ಇರದು. ಅಲ್ಲಿನ ಕಲ್ಚರ್ ಸವಿಯುತ್ತ, ಅವರ ಹಾಡು, ನೃತ್ಯ, ಹಬ್ಬ ಮತ್ತಿತರ ಸಂಪ್ರದಾಯಗಳನ್ನು ಸವಿಯಬೇಕು ಅನಿಸದೇ ಇರದು.

ರೈಲು ಕೂಡ ಈ ಚಿತ್ರದ ಪ್ರಮುಖ ಪಾತ್ರವೇ. ಚಿತ್ರದಲ್ಲಿ ಮೊತ್ತಮೊದಲ ಬಾರಿಯ ಭೇಟಿಯೂ ರೈಲಿನ ಬಾಗಿಲಲ್ಲಿ ಕಜೋಲ್‌ಳನ್ನು ಕೈ ಹಿಡಿದು ಹತ್ತಿಸಿಕೊಳ್ಳುವ ದೃಶ್ಯವೇ. ಅದೇ ರೀತಿ ಅವರಿಬ್ಬರ ಪ್ರೀತಿ ಒಪ್ಪಿಕೊಂಡು ತಂದೆ ಅಮರೀಶ್ ಪುರಿ ಕಜೋಲ್ ಳನ್ನು ಕಳಿಸಿಕೊಟ್ಟಾಗ, ಶಾರೂಖ್ ಕೈ ಚಾಚಿ ತನ್ನ ಪ್ರಿಯತಮೆಯನ್ನು ಕರೆಯುವುದೂ ರೈಲಿನ ದ್ವಾರದಲ್ಲೇ.

ಒಟ್ಟಾರೆಯಾಗಿ ಹೇಳೋದಾದರೆ, ಸಿನಿಮಾ ಟೂರಿಸಂಗೆ ಡಿಡಿಎಲ್‌ಜೆ ಚಿತ್ರದ ಕೊಡುಗೆ ತುಂಬ ದೊಡ್ಡದಿದೆ. ಈ ಚಿತ್ರದ ನಂತರ ವಿದೇಶ ಚಿತ್ರೀಕರಣ, ವಿದೇಶದಲ್ಲೇ ಲವ್ ಸ್ಟೋರಿ ಮತ್ತು ಹಾಡುಗಳ ಚಿತ್ರೀಕರಣ ವ್ಯಾಪಕವಾಗಿ ಹೆಚ್ಚಾಯಿತು. ಅದು ಬೇರೆ ಭಾಷೆಯ ಚಿತ್ರರಂಗಕ್ಕೂ ವ್ಯಾಪಿಸಿತು.

ಇತ್ತೀಚೆಗೆ ಈ ಚಿತ್ರದಲ್ಲಿ ನಟಿಸಿದ್ದ ಹಿರಿಯ ನಟ ಸ್ವಿಟ್ಜರ್‌ಲ್ಯಾಂಡ್‌ನ ಮೌಂಟ್ ಟಿಟ್ಲಿಸ್ ಮತ್ತು ಜಂಗ್ ಫ್ರೌ ರೈಲ್ವೇ ಸ್ಟೇಷನ್‌ಗಳಿಗೆ ಭೇಟಿ ಕೊಟ್ಟು ಡಿಡಿಎಲ್‌ಜೆ ಚಿತ್ರದ ಮೂರುದಶಕದ ಸಂಭ್ರಮ ಆಚರಿಸಿದ್ದರು. ಇಂದಿಗೆ ಅಲ್ಲಿನ ರೈಲನ್ನು ಯಶ್ ಛೋಪ್ರಾ ರೈಲು ಎನ್ನಲಾಗುತ್ತದೆ, ಸ್ಯಾನೆನ್‌ನ ಸೇತುವೆಯನ್ನು ಡಿಡಿಎಲ್‌ಜೆ ಬ್ರಿಜ್ ಎನ್ನಲಾಗುತ್ತದೆ. ಇದು ಚಿತ್ರವೊಂದು ತಾನು ಶೂಟ್ ಮಾಡಿದ ಸ್ಥಳಗಳನ್ನು ಐಕಾನಿಕ್ ಪ್ರವಾಸಿ ತಾಣವಾಗಿಸುವ ಬಗೆ ಅಥವಾ ಈಗಾಗಲೇ ಪ್ರವಾಸಿ ತಾಣವಾಗಿರುವ ಜಾಗದ ಖ್ಯಾತಿಗೆ ಮರುವ್ಯಾಖ್ಯಾನ ನೀಡುವ ಬಗೆ. ನೀವೊಮ್ಮೆ ಡಿಡಿಎಲ್‌ಜೆ ನೋಡಿ ಬನ್ನಿ. ನೋಡಿರುವವರು ಮತ್ತೆ ನೋಡಿ. ರೊಮ್ಯಾಂಟಿಕ್ ಟ್ರಾವೆಲಾಗ್‌sನ ಅನುಭವವಾಗದಿದ್ದರೆ ಹೇಳಿ.

ಚಿತ್ರ: ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ

ಮುಖ್ಯ ಪಾತ್ರವರ್ಗ: ಶಾರೂಖ್ ಖಾನ್, ಕಜೋಲ್, ಅಮರೀಶ್ ಪುರಿ, ಅನುಪಮ್ ಖೇರ್

ನಿರ್ದೇಶನ: ಆದಿತ್ಯ ಛೋಪ್ರಾ
ತೆರೆಕಂಡ ವರ್ಷ: 1995