ಕತಾರ್ ಪುಟ್ಟ ದೇಶ. ಆ ದೇಶದ ಜನಸಂಖ್ಯೆ ಮೂವತ್ತು ಲಕ್ಷಕ್ಕಿಂತ ಹೆಚ್ಚಿಗೆ ಇರಲಾರದು. ಭೂವಿಸ್ತೀರ್ಣದಲ್ಲಿ ಜಗತ್ತಿನಲ್ಲಿ 158ನೇ ದೊಡ್ಡ ದೇಶ. ಆದರೂ ಗಲ್ಫ್ ದೇಶಗಳ ಪೈಕಿ ಪ್ರಮುಖವಾದ ದೇಶ ಎಂಬುದು ಗಮನಾರ್ಹ.

ಕತಾರಿನ ರಾಜಧಾನಿ ದೋಹಾ. ಆ ದೇಶದ ಶೇ.99 ರಷ್ಟು ಜನ ರಾಜಧಾನಿಯಲ್ಲೇ ವಾಸಿಸುತ್ತಾರೆ. ಅಂದರೆ ಆ ದೇಶವಿರುವುದೇ ರಾಜಧಾನಿಯಲ್ಲಿ. ಅದರಾಚೆ ಅಲ್ ರಯ್ಯನ್, ಅಲ್ ವಕ್ರಾ, ಅಲ್ ದಯೆನ್, ಅಲ್ ಖೋರ್, ಅಲ್ ರುವಾಯ್ಸ್, ದುಖಾನ್ ಮುಂತಾದ ಊರುಗಳಿವೆ. ಆದರೆ ಆ ಎಲ್ಲ ಊರುಗಳ ಜನಸಂಖ್ಯೆ ಸೇರಿಸಿದರೆ ಇಪ್ಪತ್ತು ಸಾವಿರ ದಾಟುವುದಿಲ್ಲ.

ಕತಾರ್ ಮೂಲತಃ ವಲಸಿಗರ ದೇಶ. ಮೂಲ ನಿವಾಸಿಗಳು ಹೆಚ್ಚೆಂದರೆ ಆ ದೇಶದ ಜನಸಂಖ್ಯೆಯ ಶೇ.ಹನ್ನೆರಡರಷ್ಟಿರಬಹುದು. ಉಳಿದವರೆಲ್ಲ ಬೇರೆ ಬೇರೆ ದೇಶಗಳಿಂದ ಬಂದು ನೆಲೆಸಿದವರೇ. ಏನಿಲ್ಲವೆಂದರೂ ವಿಶ್ವದ ಎಂಬತ್ತು ದೇಶಗಳಿಂದ ಬಂದವರು ಆ ದೇಶವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಕತಾರ್ ನಿಜ ಅರ್ಥದಲ್ಲಿ ಕಾಸ್ಮೋಪಾಲಿಟನ್.

ಇದನ್ನೂ ಓದಿ: ರೀಜನರೇಟಿವ್ ಟೂರಿಸಂ: ವೀಕ್ಷಕರಿಂದ ರಕ್ಷಕರಾಗುವ ಹೊಸ ಪರಿ

ಇನ್ನೊಂದು ಪ್ರಮುಖ ಸಂಗತಿಯೆಂದರೆ, ಕತಾರಿನಲ್ಲಿ ಹೆಂಗಸರಿಗಿಂತ ಗಂಡಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅನುಪಾತದ ಪ್ರಕಾರ, ಮೂವರು ಗಂಡಸರಿಗೆ ಒಬ್ಬ ಮಹಿಳೆ.

ಕತಾರ್ ಸಮತಟ್ಟಾದ ದೇಶ. ಅಲ್ಲಿನ ಭೂಮಿಯಲ್ಲಿ ಏರಿಳಿತಗಳು ಕಮ್ಮಿ. ಖ್ಯಾತ ಪತ್ರಕರ್ತ ಥಾಮಸ್ ಫ್ರೀಡ್‌ಮನ್ 'World Is Flat' ಎಂಬ ಪುಸ್ತಕ ಬರೆದಿದ್ದಾನೆ. ಜಗತ್ತು ಸಮತಟ್ಟಾ(Flat)ಗಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಜಗತ್ತಿನಲ್ಲಿಯೇ ಅದು ಎರಡನೇ ಸಮತಟ್ಟಾದ ದೇಶವೆಂಬುದಂತೂ ನಿಜ.

Untitled design (44)

ಹಾಗೆಯೇ ಕತಾರ್, ಮಹಿಳೆಯರಿಗೆ ಅಚ್ಚುಮೆಚ್ಚಾದ ದೇಶವೂ ಹೌದು. ಕಾರಣ ಅದು ಮುತ್ತು (ಪರ್ಲ್) ಗಳಿಗೆ ಪ್ರಸಿದ್ಧ.

ಅರಬ್ ರಾಷ್ಟ್ರಗಳ ಪೈಕಿ ಕತಾರ್‌ಗಿಂತ ಶ್ರೀಮಂತ ದೇಶಗಳಿವೆ. ಆದರೆ ಇಲ್ಲಿಯತನಕ ಬೇರೆ ಯಾವ ಅರಬ್ ದೇಶಕ್ಕೂ ಪ್ರತಿಷ್ಠಿತ ಫಿಫಾ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಸಂಘಟಿಸಲು ಸಾಧ್ಯವಾಗಿಲ್ಲ. ನಾಲ್ಕು ವರ್ಷಗಳ ಹಿಂದೆ ಕತಾರ್, ವಿಶ್ವವೇ ಬೆರಗಾಗುವಂತೆ, ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಿತು. ಫುಟ್ಬಾಲ್ ನೆಪದಲ್ಲಿ, ಹತ್ತು ವರ್ಷಗಳ ಅವಧಿಯಲ್ಲಿ, ಕತಾರ್ ಇಡೀ ದೇಶವನ್ನೇ ಹೊಸತಾಗಿ ಕಟ್ಟಿತು.

ಬಹಳ ಜನರಿಗೆ ಗೊತ್ತಿಲ್ಲ, ಕತಾರಿನಲ್ಲಿ ವಿಶ್ವದಲ್ಲಿಯೇ ಉದ್ದವಾದ ಸೈಕಲ್ ಮಾರ್ಗವಿದೆ. ಯುವಕರನ್ನು ಗಮನದಲ್ಲಿಟ್ಟುಕೊಂಡು ಆ ಕ್ರಮಕ್ಕೆ ಅಲ್ಲಿನ ಆಡಳಿತ ಮುಂದಾಗಿರುವುದು ವಿಶೇಷವೇ. ಇಡೀ ಕತಾರಿನಲ್ಲಿ ಸಣ್ಣ ಕಾಡು ಸಹ ಇಲ್ಲ. ವಿಶ್ವದಲ್ಲಿ ಕಡಿಮೆ ಮರಗಳಿರುವ ದೇಶವಿದ್ದರೆ ಅದು ಕತಾರ್. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೇಗಿರಬೇಕು ಎಂಬುದನ್ನು ಅಲ್ಲಿನ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೋಡಿ ತಿಳಿದುಕೊಳ್ಳಬಹುದು. ಅಲ್ಲಿನ ಬ್ಯುಸಿನೆಸ್ ಲೌಂಜ್ ಕೂಡ ವ್ಯಾಪ್ತಿ, ವಿಸ್ತಾರದಲ್ಲಿ ಅತ್ಯಂತ ದೊಡ್ಡದು. ಅತಿ ಹೆಚ್ಚು ಸಿಬ್ಬಂದಿ ಹೊಂದಿರುವ ವಿಮಾನಯಾನ ಸಂಸ್ಥೆ ಎಂಬ ಕೀರ್ತಿಗೆ ಕತಾರ್ ಏರ್‌ವೇಸ್ ಭಾಜನವಾಗಿದೆ.

ಜಗತ್ತಿನ ಮೂರನೆಯ ಅತ್ಯುತ್ತಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಅಗ್ಗಳಿಕೆಗೆ ಅದು ಪಾತ್ರವಾಗಿದೆ. ಹಾಗೆಯೇ ಆ ದೇಶದ 'ಕತಾರ್ ಏರ್‌ವೇಸ್' ಪ್ರಪಂಚದ ಸರ್ವೋತ್ತಮ ವಿಮಾನ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಅತ್ಯಂತ ಸುರಕ್ಷಿತ ದೇಶವಾಗಿರುವ ಕತಾರ್‌ನ್ನು 1868ರಿಂದ ಈಗ ಅಧಿಕಾರದಲ್ಲಿರುವ ಕುಟುಂಬವೇ ಆಳುತ್ತಿರುವುದು ಗಮನಾರ್ಹ.

**

ಲ್ಯಾಂಡ್ ಲಾಕ್ಡ್ ದೇಶ ಅಂದರೇನು?

ನೀವು landlock country (ಭೂ ಆವೃತ ಅಥವಾ ಭೂಭಾಗದಿಂದ ಸುತ್ತುವರಿದ ಅಥವಾ ದೇಶಗಳಿಂದ ಆವೃತವಾದ) ಎಂಬ ಪದಪುಂಜವನ್ನು ಕೇಳಿರಬಹುದು. ಯಾವ ದೇಶ ತನ್ನ ಗಡಿಭಾಗಗಳನ್ನೆಲ್ಲ ಬೇರೆ ದೇಶಗಳ ಗಡಿಗಳೊಂದಿಗೆ ಹಂಚಿಕೊಂಡರೆ, ಆ ದೇಶಕ್ಕೆ landlocked country ಎಂದು ಕರೆಯುತ್ತಾರೆ.

ಜಗತ್ತಿನಲ್ಲಿ 44 ಈ ರೀತಿಯ 'ಲ್ಯಾಂಡ್ ಲಾಕ್ಡ್' ದೇಶಗಳಿವೆ. ನದಿ ಅಥವಾ ಸಮುದ್ರ ದಡಕ್ಕೆ ಹೊಂದಿಕೊಳ್ಳದ ದೇಶವನ್ನೂ ಹೀಗೆ ಹೇಳುವುದುಂಟು. ಕೆಲವು ಲ್ಯಾಂಡ್ ಲಾಕ್ಡ್ ದೇಶಗಳು ಒಂದು ಅಥವಾ ಒಂದಕ್ಕಿಂತ ಹೆಚ್ಚು ದೇಶಗಳನ್ನು ತನ್ನ ಗಡಿಯೊಂದಿಗೆ ಹಂಚಿಕೊಂಡಿರಬಹುದು. ಕೇವಲ ಒಂದು ದೇಶವನ್ನಷ್ಟೇ ಹಂಚಿಕೊಂಡಿರುವ ದೇಶಕ್ಕೆ enclave ಎಂದೂ ಕರೆಯುವುದುಂಟು.

ಆಫ್ರಿಕ, ಏಷ್ಯಾ, ಯುರೋಪ್ ಮತ್ತು ದಕ್ಷಿಣ ಅಮೆರಿಕ ಖಂಡಗಳಲ್ಲಿ ಮಾತ್ರ ಲ್ಯಾಂಡ್ ಲಾಕ್ಡ್ ದೇಶವನ್ನು ಕಾಣಬಹುದು. ಆಸ್ಟ್ರೇಲಿಯಾ, ಉತ್ತರ ಅಮೆರಿಕ ಮತ್ತು ಅಂಟಾರ್ಕ್ಟಿಕಾದಲ್ಲಿ ಭೂಭಾಗಗಳಿಂದ ಸುತ್ತುವರಿದ ದೇಶಗಳಿಲ್ಲ. ದಕ್ಷಿಣ ಅಮೆರಿಕದಲ್ಲಿ ಬೊಲಿವಿಯಾ ಮತ್ತು ಪೆರುಗ್ವೆ ಮಾತ್ರ ಲ್ಯಾಂಡ್ ಲಾಕ್ಡ್ ದೇಶಗಳಾಗಿವೆ. ಅತಿ ಹೆಚ್ಚು ಭೂ ಆವೃತವಾದ ದೇಶಗಳಿರುವುದು ಆಫ್ರಿಕ ಖಂಡದಲ್ಲಿ.

ರವಾಂಡ, ಲೆಸೋಥೋ, ನೈಜರ್, ಚಾಡ್, ಬುರ್ಕಿನೋ ಫಾಸೋ, ಜಾಂಬಿಯಾ, ಇಥಿಯೋಪಿಯಾ, ಬುರುಂಡಿ ಸೇರಿದಂತೆ ಹದಿನಾರು ದೇಶಗಳು ಒಂದಕ್ಕಿಂತ ಹೆಚ್ಚು ದೇಶಗಳ ಜತೆ ತಮ್ಮ ಗಡಿಯನ್ನು ಹಂಚಿಕೊಂಡಿವೆ. ಆಫ್ರಿಕ ಖಂಡದಲ್ಲಿ ಅತಿ ದೊಡ್ಡ ಭೂ ಆವೃತ ದೇಶವೆಂದರೆ ಚಾಡ್.

Untitled design (50)

ಏಷ್ಯಾದಲ್ಲಿ ಅತಿ ದೊಡ್ಡ ಲ್ಯಾಂಡ್ ಲಾಕ್ಡ್ ದೇಶವೆಂದರೆ ಕಝಖ್‌ಸ್ತಾನ್. ಅಮೆರಿಕದ ಟೆಕ್ಸಾಸ್ ರಾಜ್ಯಕ್ಕಿಂತ ನಾಲ್ಕು ಪಟ್ಟು ದೊಡ್ಡ ಮತ್ತು ಅರ್ಜೆಂಟೀನಾಗಿಂತ ತುಸು ಸಣ್ಣದಾದ ಕಝಖ್ಸ್ತಾನ್ ಸುತ್ತ ರಷ್ಯಾ, ಚೀನಾ, ಕಿರ್ಗಿಜಸ್ತಾನ್, ಉಜಬೆಕಿಸ್ತಾನ್, ಅರಲ್ ಸಮುದ್ರ, ತುರ್ಕಮೆನಿಸ್ತಾನ್, ಕ್ಯಾಸ್ಪಿಯನ್ ಸಮುದ್ರ ಆವರಿಸಿದೆ. ಅತಿ ಚಿಕ್ಕ ಲ್ಯಾಂಡ್ ಲಾಕ್ಡ್ ದೇಶಗಳೆಂದರೆ ವ್ಯಾಟಿಕನ್ ಸಿಟಿ, ಸ್ಯಾನ್ ಮರಿನೋ, ಅಂಡೋರಾ ಮತ್ತು ಲಕ್ಸೆಂಬರ್ಗ್.

ರಷ್ಯಾ ಅತಿ ಹೆಚ್ಚು ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಅದು ಅಜರ್‌ಬೈಜಾನ್, ಬೆಲಾರಸ್, ಚೀನಾ, ಎಸ್ತೋನಿಯಾ, ಜಾರ್ಜಿಯಾ, ಕಝಖ್‌ಸ್ತಾನ, ಉತ್ತರ ಕೊರಿಯಾ, ಲಾಟ್ವಿಯಾ, ಮಂಗೋಲಿಯಾ, ಲಿಕ್ಸ್ಟನ್ ಸ್ಟೈನ್, ಲಿಥುವೇನಿಯಾ, ನಾರ್ವೆ, ಪೋಲೆಂಡ್, ಉಕ್ರೇನ್ ಸೇರಿ ಹದಿನಾಲ್ಕು ದೇಶಗಳ ಜತೆ ಗಡಿ ಹಂಚಿಕೊಂಡಿದೆ.

ಲಿಕ್ಸ್ಟನ್ ಸ್ಟೈನ್ ಮತ್ತು ಉಜಬೆಕಿಸ್ತಾನ್ ಗಳನ್ನು 'ಡಬಲ್ ಲ್ಯಾಂಡ್ ಲಾಕ್ಡ್' ದೇಶಗಳೆಂದು ಕರೆಯುತ್ತಾರೆ. ಅವು ಗಡಿಯನ್ನು ಹಂಚಿಕೊಂಡಿರುವ ದೇಶಗಳು ಸಹ ಲ್ಯಾಂಡ್ ಲಾಕ್ಡ್ ಆಗಿರುವುದರಿಂದ ಹಾಗೆ ಕರೆಯುತ್ತಾರೆ. ಉದಾಹರಣೆಗೆ, ಉಜಬೆಕಿಸ್ತಾನ್. ಈ ದೇಶವನ್ನು ಸುತ್ತುಗಟ್ಟಿರುವ ಅಫಘಾನಿಸ್ತಾನ, ಕಝಖ್‌ಸ್ತಾನ್, ಕಿರ್ಗಿಜಸ್ತಾನ್, ತಜಿಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸಹ ಲ್ಯಾಂಡ್ ಲಾಕ್ಡ್ ದೇಶಗಳಾಗಿವೆ. ಅಂದರೆ ಭೂ ಮಾರ್ಗವಾಗಿ ಉಜಬೆಕಿಸ್ತಾನಕ್ಕೆ ಹೋಗಬೇಕೆಂದರೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ದೇಶಗಳನ್ನು ದಾಟಿ ಹೋಗಬೇಕು. ಆಸ್ಟ್ರಿಯಾ, ಸೆರ್ಬಿಯಾ ಮತ್ತು ಜಾಂಬಿಯಾ ದೇಶಗಳು ಎಂಟು ದೇಶಗಳೊಂದಿಗೆ ತಮ್ಮ ಗಡಿಯನ್ನು ಹಂಚಿಕೊಂಡಿವೆ.

ಒಂದೇ ದೇಶ ಆವೃತ(enclave) ವಾಗಿರುವ ದೇಶಗಳೆಂದರೆ, ಸ್ಯಾನ್ ಮರಿನೋ, ಲೆಸೋಥೋ ಮತ್ತು ವ್ಯಾಟಿಕನ್ ಸಿಟಿ. ಯಾವುದೇ ದೇಶ ಲ್ಯಾಂಡ್ ಲಾಕ್ಡ್ ಆಗಿರುವುದರಿಂದ ಅನುಕೂಲವೂ ಇದೆ, ಅನಾನುಕೂಲವೂ ಇದೆ. ಮೊದಲನೆಯದಾಗಿ ಆ ದೇಶಗಳಿಗೆ ಸಮುದ್ರದ ಸಂಪರ್ಕ ಇರುವುದಿಲ್ಲ. ಇದರಿಂದ ಸರಕು-ಸಾಗಾಣಿಕೆಗೆ ದುಬಾರಿ. ಗಡಿ ಮತ್ತು ನೀರು ಹಂಚಿಕೆ ತಕರಾರು ಯಾವತ್ತೂ ಇದ್ದಿದ್ದೇ.

ಇನ್ನು ಅನುಕೂಲವೆಂದರೆ, ಸುಲಭವಾಗಿ ಪಕ್ಕದ ದೇಶಗಳ ಮಾರುಕಟ್ಟೆಯನ್ನು ತನ್ನದನ್ನಾಗಿಸಿಕೊಳ್ಳಬಹುದು. 44 ಲ್ಯಾಂಡ್ ಲಾಕ್ಡ್ ದೇಶಗಳ ಪೈಕಿ, 32 ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದು ವಿಶ್ವಸಂಸ್ಥೆಯೇ ಮಾನ್ಯ ಮಾಡಿದೆ.

**

ಅತ್ಯಂತ ನೀರಸ ತಾಣ

ನೀವು ಖ್ಯಾತ ಮಕ್ಕಳ ಪುಸ್ತಕಗಳ ಲೇಖಕ ಡಾ.ಸೆಯೂಸ್ ಬರೆದ Oh, the Places You Will Go ಪುಸ್ತಕವನ್ನು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ನಾನು ಈ ಪುಸ್ತಕವನ್ನು ಅನೇಕರಿಗೆ ಉಡುಗೊರೆಯಾಗಿ ನೀಡಿದ್ದೇನೆ. ನಾನೇನಾದರೂ ಈ ಪುಸ್ತಕವನ್ನು ನನಗೆ ಇಪ್ಪತ್ತು ವರ್ಷ ದಾಟುವ ಮುನ್ನ ಓದಿದ್ದರೆ, ಇಷ್ಟರೊಳಗೆ ಜಗತ್ತಿನ ಎಲ್ಲ ದೇಶಗಳ ನೆಲವನ್ನು ಮೆಟ್ಟಿ ಬಂದಿರುತ್ತಿದ್ದೆ. ಪ್ರತಿ ಪಯಣವೂ ಹೇಗೆ ಅವಿಸ್ಮರಣೀಯ ಮತ್ತು ನಾವು ಪ್ರತಿ ಪಯಣದಿಂದ ಅಂಥ ಅನುಭವದಿಂದ ಹೇಗೆ ವಂಚಿತರಾಗುತ್ತೇವೆ ಎಂಬುದನ್ನು ಡಾ.ಸೆಯೂಸ್ ಆ ಕೃತಿಯಲ್ಲಿ ವಿವರಿಸಿದ್ದಾರೆ.

Untitled design (51)

ಜಗತ್ತಿನಲ್ಲಿ Most Useless Place ಎಂಬುದಿದ್ದರೆ, The Waiting Place ಅಥವಾ The Waiting Room ಅಂತೆ.

ಡಾ.ಸೆಯೂಸ್ ಬರೆಯುತ್ತಾರೆ - 'ಭೂಮಿಯ ಮೇಲೆ ಅತ್ಯಂತ ನೀರಸವಾದ ತಾಣ ಅಂತಿದ್ರೆ ಅದು The Waiting Room. ಅಲ್ಲಿ ಯಾವ ಚಟುವಟಿಕೆಯೂ ನಡೆಯುವುದಿಲ್ಲ. ವಿಮಾನ ನಿಲ್ದಾಣದಲ್ಲಿರುವ The Waiting Room ನ್ನು ನೋಡಿ. ಅಲ್ಲಿ ಎಲ್ಲರೂ ಜೀವನೋತ್ಸಾಹ ಕಳೆದುಕೊಂಡವರಂತೆ ಇರುತ್ತಾರೆ. ನನಗೆ ಅಲ್ಲಿ ಕುಳಿತಿರುವವರನ್ನು ನೋಡಿದರೆ, ಅವರ ಮುಂದೆ ಯಾವುದೇ ಗುರಿಗಳೇ ಇಲ್ಲವೇನೋ ಎಂದೆನಿಸುತ್ತದೆ. ಆ ಜಾಗದಲ್ಲಿ ಎಷ್ಟು ಹೊತ್ತಾದರೂ ಕಳೆಯಲು ಸಿದ್ಧರಾಗಿರುತ್ತಾರೆ. ಆ ರೂಮಿನಲ್ಲಿರುವುದು ಅಲ್ಪ ಕಾಲವಾದರೂ, ನಿಧಾನವಾಗಿ ಅಲ್ಲಿನ ಪರಿಸರಕ್ಕೆ ಒಗ್ಗಿಕೊಂಡುಬಿಡುತ್ತಾರೆ.'

'ಒಂದು ಗಂಟೆ ಅಲ್ಲಿ ಕಳೆದ ಬಳಿಕ, ಇನ್ನೂ ಸ್ವಲ್ಪ ಹೊತ್ತು ಇದ್ದಿದ್ದರೆ ಒಳ್ಳೆಯದಿತ್ತು ಎಂದು ಅವರಿಗೆ ಅನಿಸಲಾರಂಭಿಸುತ್ತದೆ. ಅಲ್ಲಿಂದ ಒಲ್ಲದ ಮನಸ್ಸಿನಿಂದ ನಿರ್ಗಮಿಸುತ್ತಾರೆ. ನನ್ನ ಪಾಲಿಗೆ ಅದು ಅತ್ಯಂತ ಬೋರಿಂಗ್ ಆದ ತಾಣ. ನಮ್ಮ ಬದುಕಿನಲ್ಲೂ ಅಂಥ ರೂಮು ಇದ್ದರೆ, ಬಹುತೇಕ ಮಂದಿ ಅಲ್ಲಿ ಹೋಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ತಮ್ಮ ಬದುಕಿನಲ್ಲಿ ಏನೋ ಆಗಲೆಂದು ಅವರು ಆ ತಾಣಕ್ಕೆ ಹೋಗಿ ಕಾಯುತ್ತಾ ಕುಳಿತಿರುತ್ತಿದ್ದರು. ಸೋಮಾರಿಕಟ್ಟೆಯನ್ನಾದರೂ ಸಹಿಸಿಕೊಳ್ಳಬಹುದು. ಕಾರಣ ಅಲ್ಲಿ ಕುಳಿತವರು ಪರಸ್ಪರ ಸಂಭಾಷಣೆಯಲ್ಲಾದರೂ ತೊಡಗಿರುತ್ತಾರೆ.'

ಆದರೆ ವಿಮಾನ ನಿಲ್ದಾಣಗಳ The Waiting Roomನಲ್ಲಿ ಕುಳಿತಿರುವವರು ಗೋಡೆಯ ಮುಂದೆ ಕುಳಿತವರಂತೆ ಇರುತ್ತಾರೆ. ಒಂದು ವೇಳೆ ಗೋಡೆಯನ್ನೇ ದಿಟ್ಟಿಸುತ್ತಾ ಅಲ್ಲಿ ಕುಳಿತುಕೊಳ್ಳಬೇಕಾದ ಪ್ರಸಂಗ ಬಂದರೂ ಸರಿಯೇ, ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ಡಾ.ಸೆಯೂಸ್ ಹೇಳುತ್ತಾರೆ.

ಬದುಕಿನಲ್ಲಿ ಬಸ್ಸಿಗೆ, ರೈಲಿಗೆ, ವಿಮಾನಕ್ಕೆ, ಜನರಿಗೆ ಕಾಯುವುದು ಅನಿವಾರ್ಯ. ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳಬಾರದು. ಕಾಯುವುದು ಅಂದ್ರೆ ಕಾಯುವುದೊಂದೇ ಅಲ್ಲ. ಆ ವೇಳೆಯಲ್ಲೂ ಬೇರೆ ಕೆಲಸವನ್ನು ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅಲ್ಲಿ ಕಳೆಯುವ ಸಮಯವನ್ನು ಸಾರ್ಥಕಪಡಿಸಿಕೊಳ್ಳಲು ಯೋಚಿಸಬೇಕು. 'ನಾನು ಅತಿ ಹೆಚ್ಚು ಪುಸ್ತಕಗಳನ್ನು ಓದಿದ್ದರೆ, ವಿಮಾನ ನಿಲ್ದಾಣಗಳ The Waiting Room ನಲ್ಲಿ' ಎಂದು ಡಾ.ಸೆಯೂಸ್ ಬರೆದಿದ್ದಾರೆ.

ಒಂದು ಮಾತಿದೆ. ಅದನ್ನು ಹೇಳಿದವನು ಯಾರೋ ಗೊತ್ತಿಲ್ಲ. The opposite of talking isn't listening. The opposite of talking is waiting ಮತ್ತು The opposite of thinking is also waiting ಅಂತ.

ಇನ್ನು ಮುಂದೆ, The Waiting Room ಕಂಡರೆ, ಅಲ್ಲಿ ಅಡಿಯಿಡುವ ಮುನ್ನ ಯೋಚಿಸಿ. ನಿಮ್ಮ ಸಮಯವನ್ನು ಅರ್ಥಹೀನವಾಗಿ ಕಳೆಯಬೇಕು ಎಂದು ಅನಿಸಿದರೆ ಮಾತ್ರ ಒಳಕ್ಕೆ ಹೋಗಿ.

**

ಪ್ರವಾಸಿ ಬರಹಗಾರನ ಸವಾಲುಗಳು

ನೀವು ಪಿಕೋ ಇಯೆರ್ ಹೆಸರನ್ನು ಕೇಳಿರಬಹುದು. ಇವರ ಮೂಲ ಹೆಸರು ಸಿದ್ದಾರ್ಥ ಪಿಕೋ ರಾಘವನ್ ಇಯೆರ್. ಚುಟುಕಾಗಿ ಪಿಕೋ ಇಯೆರ್ ಆಗಿದ್ದಾರೆ. ಇವರು ಮೂಲತಃ ಬ್ರಿಟಿಷ್ ಪ್ರಜೆ. ಅವರ ತಂದೆ ಭಾರತೀಯರು. ಇವರು ಕಾದಂಬರಿಕಾರರಾದರೂ, ಜನಪ್ರಿಯರಾಗಿರುವುದು ಪ್ರವಾಸಿ ಬರಹಗಾರರಾಗಿ.

ಬ್ರಿಟನ್, ಅಮೆರಿಕನ್ ಮತ್ತು ಭಾರತೀಯ ಸೆಲೆಗಳನ್ನು ಇವರ ಬರಹಗಳಲ್ಲಿ ಗುರುತಿಸಬಹುದು. ನಾನು ಓದಿದ ಇವರ ಮೊದಲ ಕೃತಿ Falling off the map : Some lonely places of the world. ಈ ಕೃತಿಯಲ್ಲಿ ಇಯೆರ್, ಐಸ್ ಲ್ಯಾಂಡ್ ಬಗ್ಗೆ ಬರೆದಿರುವುದು ನನ್ನಲ್ಲಿ ಪ್ರವಾಸಿ ಲೇಖನಗಳ ಹೊಸ ಸಾಧ್ಯತೆಯನ್ನು ತೋರಿಸಿತು. ನಾನೂ ಆ ದೇಶಕ್ಕೆ ಭೇಟಿ ಕೊಟ್ಟಿದ್ದೆ. ಅವರು ಭೇಟಿಯಿತ್ತ ಜಾಗಗಳಿಗೆ ನಾನೂ ಹೋಗಿದ್ದೆ. ಆದರೆ ಇಯೆರ್, ನನಗೆ ಕಾಣಿಸದ ಬೇರೆಯ ಐಸ್ ಲ್ಯಾಂಡನ್ನು ತೋರಿಸಿದ್ದರು.

ಇದು ಒಬ್ಬ ಲೇಖಕನ ತಾಕತ್ತು. ಅದಾದ ಬಳಿಕ ಅವರ Video night in Kathmandu, The lady and the monk, Sun after dark : flights into the foreign ನನಗೆ ಇಷ್ಟವಾದ ಕೃತಿಗಳು. ಯಾವುದೇ ಮ್ಯಾಗಜಿನ್ಗಳಲ್ಲಿ ಇಯೆರ್ ಅವರ ಬರಹ ಅಥವಾ ಸಂದರ್ಶನಗಳಿದ್ದರೆ ನಾನು ತಪ್ಪದೇ ಓದುತ್ತೇನೆ. ಇತ್ತೀಚೆಗೆ 'ಕಾಂಡೆ ನಾಸ್ಟ್ ಟ್ರಾವೆಲರ್' ಮ್ಯಾಗಜಿನ್‌ನಲ್ಲಿ ಇಯೆರ್ ಸಂದರ್ಶನವನ್ನು ಓದಿದೆ.

ಇಯೆರ್‌ಗೆ ಸಂದರ್ಶಕಿ ಒಂದು ಪ್ರಶ್ನೆ ಕೇಳಿದ್ದಾಳೆ - 'ನೀವು ಗಮನಿಸಿದಂತೆ ಇತ್ತೀಚಿನ ವರ್ಷಗಳಲ್ಲಿ ಟ್ರಾವೆಲ್ ರೈಟಿಂಗ್ ಬದಲಾಗಿದೆಯಾ?'

ಅದಕ್ಕೆ ಇಯೆರ್ ಹೀಗೆ ಹೇಳಿದ್ದಾರೆ - 'ಎಪ್ಪತ್ತರ ದಶಕದ ಕೊನೆಯಲ್ಲಿ ನಾನು ಕ್ಯೂಬಾ, ಟಿಬೆಟ್ ಮತ್ತು ಇನ್ನೂ ಕೆಲವು ದೇಶಗಳ ಬಗ್ಗೆ ಬರೆಯಲಾರಂಭಿಸಿದಾಗ, ನನ್ನ ಸ್ನೇಹಿತರು ಅಥವಾ ಅವನ್ನು ಓದಿದವರು ಆ ಸ್ಥಳಗಳಿಗೆ ಖುದ್ದಾಗಿ ಹೋಗಿ ನೋಡಿ ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಆ ದಿನಗಳಲ್ಲಿ ನಾವು ದೇಶಗಳನ್ನು ಕೇವಲ ನಕಾಶೆಯ ಮೇಲೆ ಮತ್ತು ಭೂಗೋಳ ಪುಸ್ತಕಗಳಲ್ಲಿ ಮಾತ್ರ ನೋಡಬಹುದಾಗಿತ್ತು. ಕೆಲವು ದೇಶಗಳ ಹೆಸರುಗಳನ್ನು ಹೇಳಿದರೆ, ಅವು ನಕಾಶೆಯಲ್ಲಿ ಎಲ್ಲಿದೆ ಎಂಬುದನ್ನು ಹುಡುಕುವುದು ಸಹ ಕಷ್ಟವಾಗುತ್ತಿತ್ತು.

ಆಗ ಟಿವಿ ಇರಲಿಲ್ಲ. ಇಂಟರ್‌ನೆಟ್‌ ಅಂದ್ರೆ ಏನೆಂದೂ ಗೊತ್ತಿರಲಿಲ್ಲ. ಖಂಡದಿಂದ ಖಂಡಕ್ಕೆ, ದೇಶದಿಂದ ದೇಶಕ್ಕೆ ವಿಮಾನ ಸಂಪರ್ಕವೂ ಇರಲಿಲ್ಲ. ಜಗತ್ತಿನ ಕೆಲವು ದೇಶಗಳ ರಾಜಧಾನಿಗಳಿಗೆ ತಿಂಗಳಿಗೆ ಒಂದೋ, ಎರಡೋ ವಿಮಾನಗಳು ಹಾರುತ್ತಿದ್ದವು. ಆಫ್ರಿಕದ ಎಲ್ಲ ದೇಶಗಳಿಗೆ ವೈಮಾನಿಕ ಸಂಪರ್ಕ ಇರಲಿಲ್ಲ. ಒಂದು ದೇಶಕ್ಕೆ ಹೋಗಿ ಅಲ್ಲಿಂದ ಬೇರೆ ದೇಶಗಳಿಗೆ ರಸ್ತೆ ಅಥವಾ ಹಡಗಿನ ಮೂಲಕ ಹೋಗಬೇಕಾಗುತ್ತಿತ್ತು.

ಆ ದಿನಗಳಲ್ಲಿ ನಾನು ವಿದೇಶಗಳಿಗೆ ಹೋಗಿ ಅಲ್ಲಿ ಕಂಡ, ಕೇಳಿದ, ಆಘ್ರಾಣಿಸಿದ ವೈಶಿಷ್ಟ್ಯಗಳನ್ನೆಲ್ಲ ಅಕ್ಷರಗಳಲ್ಲಿ ಕಟ್ಟಿ ಕೊಡುತ್ತಿದ್ದೆ. ಓದುಗರೂ ಅಕ್ಷರಗಳಿಂದಲೇ ಆ ಜಗತ್ತನ್ನು ನೋಡುತ್ತಿದ್ದರು. ನಂತರ ಟಿವಿ ಬಂತು. ಸಿನಿಮಾಗಳೂ ದೇಶ ತೋರಿಸುವ ಕೆಲಸವನ್ನು ಮಾಡಿದವು. ಇಂಟರ್‌ನೆಟ್ ಬಂದ ನಂತರ ಯಾವ ದೇಶದ ಮಾಹಿತಿಯನ್ನಾದರೂ ಸುಲಭವಾಗಿ ಪಡೆಯುವುದು ಸಾಧ್ಯವಾಯಿತು.

ಆದರೆ ಈಗ ಕಾಲ ಇನ್ನೂ ಸುಧಾರಿಸಿದೆ. ಸ್ಮಾರ್ಟ್ ಫೋನ್ ಬಂದ ಬಳಿಕ, ಅಂಗೈಯಲ್ಲೇ ವಿಶ್ವವನ್ನು ನೋಡುವುದು ಸುಲಭವಾಗಿದೆ. ನನ್ನ ಪುಸ್ತಕಗಳನ್ನು ಓದಿ ತಿಳಿಯುವುದಕ್ಕಿಂತ ಇದು ಸುಲಭ. ಅನಕ್ಷರಸ್ಥನೂ ಮನೆಯಲ್ಲೇ ಕುಳಿತು ಪ್ರಪಂಚ ಪರ್ಯಟನೆ ಮಾಡಬಹುದು. ಇದರಿಂದ ಟ್ರಾವೆಲ್ ಬರಹಗಾರನ ಸವಾಲು ಹೆಚ್ಚಾಗಿದೆ. ಆತ ಎಲ್ಲವನ್ನೂ ನೋಡಿರುವ, ನೋಡಬಹುದಾದ, ಗೊತ್ತಿರುವ ಓದುಗನಿಗೆ ವಿಷಯವನ್ನು ತಿಳಿಸಿಕೊಡಬೇಕಾಗಿದೆ.'

**

ತಮಾಷೆಯ ಫಲಕ

ನಾನು ಕೆಲ ವರ್ಷಗಳ ಹಿಂದೆ ಫಿನ್‌ಲೆಂಡಿಗೆ ಹೋದಾಗ ಅದರ ಪಕ್ಕದ ಎಸ್ತೋನಿಯಾ ರಾಜಧಾನಿ ಟ್ಯಾಲಿನ್‌ಗೆ ಹೋಗಿದ್ದೆ. ಎಸ್ತೋನಿಯನ್ನರು ತಮ್ಮ ಗಾಂಭೀರ್ಯದ ನಡುವೆಯೇ ಸೂಕ್ಷ್ಮ ಹಾಸ್ಯವನ್ನು (Deadpan humor) ಇಷ್ಟಪಡುವವರು. ನಾನು ಉಳಿದುಕೊಂಡ ಸರ್ವೀಸ್ ಅಪಾರ್ಟ್‌ಮೆಂಟ್ ಹೊರವಲಯದಲ್ಲಿತ್ತು. ಹೊಟೇಲ್ ಸನಿಹದಲ್ಲಿದ್ದ ಒಂದು ಫಲಕದಲ್ಲಿ ಹೇಗೆ ಬರೆಯಲಾಗಿತ್ತು - 'ಇಲ್ಲಿ ಶಬ್ದ ಮಾಡಬೇಡಿ, ಮರಗಳು ನಿದ್ರಿಸುತ್ತಿವೆ'. ಎಸ್ತೋನಿಯನ್‌ರ ಪ್ರಕೃತಿ ಪ್ರೇಮ ಮತ್ತು ಹಾಸ್ಯಪ್ರಜ್ಞೆ ನೋಡಿ ತಮಾಷೆಯೆನಿಸಿತು.

ಹಾಗೆ ಅಲ್ಲಿನ ಒಂದು ಕೆಫೆಯ ಬಾಗಿಲಲ್ಲಿ 'ಸಂಕೋಚ ಪಡುವವರಿಗಾಗಿ ಪ್ರತ್ಯೇಕ ಕಿಟಕಿ' ಎಂದು ಬರೆಯಲಾಗಿತ್ತು. ಅಂದರೆ, ನೀವು ಯಾರೊಂದಿಗೂ ಮಾತನಾಡದೇ, ಕಣ್ಣಿಗೆ ಕಣ್ಣಿಡದೇ ನಿಮ್ಮ ಕಾಫಿಯನ್ನು ಕುಡಿದು ಸುಮ್ಮನೆ ಎದ್ದು ಹೋಗುವವರಿಗಾಗಿ ಆ ಜಾಗ ಮೀಸಲು ಎಂದರ್ಥ.